ಗುರುವಾರ, ಡಿಸೆಂಬರ್ 10, 2009

ನನ್ನನ್ನು ಇತ್ತೀಚೆಗೆ ಕಾಡುತ್ತಿರುವುದು ಪತ್ರಿಕೋದ್ಯಮ ಮತ್ತು ಸಂಬಂಧಗಳು. ಸಂಬಂಧಗಳ ಬಗ್ಗೆ ಬೇರೆಯೇ ಬರೆಯುತ್ತೇನೆ. ಈಗ ಪತ್ರಿಕೋದ್ಯಮ ಅದರಲ್ಲೂ ಯೆಲ್ಲೋ ಜರ್ನಲಿಸಂ ಬಗ್ಗೆ ಸ್ವಲ್ಪ ಭಾವನೆಗಳನ್ನು ಹಂಚಿಕೊಳ್ಳಬೇಕು ಅನ್ನಿಸುತ್ತಿದೆ.
ಪತ್ರಿಕೆ ಎಂದರೆ ನನ್ನ ಮಟ್ಟಿಗೆ 2000ನೇ ಇಸ್ವಿಯವರೆಗೂ ಜನರ ಧ್ವನಿಯೆಂದು ಭಾವಿಸಿದ್ದೆ. ಅದರಲ್ಲೂ ಟ್ಯಾಬ್ಲಾಯ್ಡ್ ಗಳು ಮೋಸ ಹೋದವರಿಗೆ, ವಂಚನೆ ಮಾಡುವವರಿಗೆ ಸಿಂಹ ಸ್ವಪ್ನವೆಂದು ತಿಳಿದಿದ್ದೆ. ಹಾಗಾಗಿ ಅದೊಂದು ದಿನ ಸಾಯಂಕಾಲ ಸಾಕಷ್ಟು ಫೋನುಗಳ ಪ್ರಯತ್ನ ಹಾಗೂ ಕಾಯುವಿಕೆಯ ನಂತರ ಟ್ಯಾಬ್ಲಾಯ್ಡ್ ಒಂದರ ಸಂಪಾದಕರನ್ನು ಭೇಟಿಯಾಗಿದ್ದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಕೊನೆಯ ವರ್ಷದ ಪ್ರಾಜೆಕ್ಟ್ ಗೋಸ್ಕರ ಖಾಸಗಿ ಕಂಪೆನಿಗೆ ಕೊಟ್ಟ ಹಣ ಪ್ರಾಜೆಕ್ಟೂ ಕೊಡದೆ ಕಳೆದುಕೊಂಡ ದುಃಖ ನನ್ನನ್ನು ಕಾಡುತ್ತಿತ್ತು. ಆ ಮೊತ್ತದ ಹಣ ಅಂದಿಗೆ ನನ್ನ ಪರಿಸ್ಥಿತಿಗೆ ಅತ್ಯಂತ ಅಗತ್ಯದ್ದಾಗಿತ್ತು.

ಆದರೆ ಸಂಪಾದಕರು ನನ್ನ ಕಥೆಯನ್ನು ಕೇಳಿದ್ದೇ ಅದೆಲ್ಲಿಂದ ಮರುಕ ಬಂದು ಬಿಡುತ್ತೋ , ಪ್ರೀತಿ ಉಕ್ಕಿ ಹರಿಯಿತೋ ನನ್ನ ಮುಂದಿನ ಶಿಕ್ಷಣವನ್ನು ತಾವೇ ನೋಡಿಕೊಳ್ಳುತ್ತೇವೆ ಎಂದರು. ಕೇವಲ ೧೮ ವರೆ ವರ್ಷದ ನಾನು ಅದನ್ನೆಲ್ಲ ನಂಬಿದೆ. ಅದರಂತೆ ನನ್ನ ಅಡ್ಮಿಷನ್ ಆಯಿತು. ಮುಳುಗುತ್ತಿರುವ ಬಡವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಬಂಡವಾಳ ಬಯಲಾಯಿತು.ನನ್ನನ್ನು ಪ್ರೀತಿಸುತ್ತೇನೆಂದು ಹೇಳುತ್ತಲೇ ಆಫೀಸಿನ ಉಳಿದ ಹುಡುಗಿಯರೊಂದಿಗೆ ಚಕ್ಕಂದವಾಡುತ್ತಿದ್ದ ಸಂಪಾದಕನ ಮೇಲೆ ಸಿಟ್ಟು ಬರುತ್ತಿತ್ತು. ಆದರೆ ನನ್ನ ಪರಿಸ್ಥಿತಿ ನನ್ನನ್ನು ಕಟ್ಟಿಹಾಕಿತ್ತು. ನಾನೂ ಒಳಸುಳಿಗೆ ಸಿಕ್ಕಿಕೊಂಡಾಗಿತ್ತು. ಬೇರೆ ಕಡೆ ಕೆಲಸ ಹುಡುಕಿಕೊಂಡು ಹೋಗಲು ಬೆಂಗಳೂರಿನ (ಎಲ್ಲರೂ ಅಲ್ಲ) ಸೋಗಲಾಡಿಗಳ ಬಗ್ಗೆ ಭಯ. ಇದರ ಮಧ್ಯದಲ್ಲಿ ಪರೀಕ್ಷೆಯ ಹಿಂದಿನ ದಿನ ನನ್ನನ್ನು ಹಾಸ್ಟೆಲಿಂದ ಹೊರಹಾಕಲಾಯಿತು. ನನ್ನ ಶಿಕ್ಷಣ ಅರ್ಧದಲ್ಲಿಯೇ ನಿಂತಿತು. ಅಂದೇ ನಿರ್ಧರಿಸಿದೆ, ನಾನು ಮುಂದೆ ಓದಿಯೇ ಓದುತ್ತೇನೆ. ನನ್ನನ್ನು, ನನ್ನ ಹಣವನ್ನು ಕಾಪಾಡಿಕೊಳ್ಳುತ್ತೇನೆ ಎಂದು. ಅಲ್ಲಿಂದ ಮುಂದೆ ನಾನು ತಿರುಗಿನೋಡಿದ್ದೇ ಇಲ್ಲ. ಯಾವ ಅನುಭವವೂ ಇಲ್ಲದ ನಾನು ಬುದ್ಧಿವಂತಿಕೆಯಿಂದ ಕೆಲಸ ಗಿಟ್ಟಿಸಿದೆ. ಐ.ಎ.ಎಸ್ ಓದಬೇಕೆಂದಿದ್ದವಳಿಗೆ ಪತ್ರಿಕೋದ್ಯಮವೇ ಬಾಗಿಲು ತೆರೆದು ಕೂತಿತ್ತು. ಬದುಕಿನ ಲೀಲೆ ಎಂದರೆ ಇದೇ....

ಇದೆಲ್ಲ ಯಾಕೆ ನೆನಪಾಯಿತೆಂದರೆ , ಮೊನ್ನೆ ಕನ್ನಡವಾಹಿನಿಯೊಂದಕ್ಕೆ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಒಬ್ಬ ಕ್ರೈ ರಿಪೋರ್ಟರ್ ಅಗತ್ಯವಿತ್ತು. ಅಂತಹ ಕಾರ್ಯಕ್ರಮಕ್ಕೆ ಕೇವಲ ಯೆಲ್ಲೋ ಜರ್ನಲಿಸ್ಟ್ ಒಬ್ಬನೇ ಪ್ರಕರಣ ತರಬಲ್ಲ ಎಂಬುದನ್ನು ನಾನು ಕಂಡುಕೊಂಡೆ. ಹಾಗೆ ಹುಡುಕಾಟದಲ್ಲಿದ್ದಾಗ ನಾನು ಸುವರ್ಣಕ್ಕೆ ಕೆಲಸ ಮಾಡುತ್ತೇನೆ , ನಿಮಗೂ ಕೇಸು ತರುತ್ತೇನೆ ಎಂಬ ಬೇಡಿಕೆಯೊಂದು ಅದೊಂದು ಭಾನುವಾರ ಬಂತು. ಆ ಯೆಲ್ಲೋ ಜರ್ನಲಿಸ್ಟ್ ನ್ನು ಕರೆತಂದಾಯಿತು. ಕಾರ್ಯಕ್ರಮವೂ ಚೆನ್ನಾಗಿ ಆಯಿತು. ಆದರೆ ಮತ್ತೆ ನನ್ನ ಮುಗ್ದತನ ಕೈಕೊಟ್ಟಿತು.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಬಾರ್ ಆದ ಆ ಪತ್ರಿಕೆ ಮತ್ತೆ ಹೊಸ ಹೆಸರಿನೊಂದಿಗೆ ಆರಂಭವಾಯಿತು. ಅದರಲ್ಲಿ ನೋಡಿದರೆ ನನಗೆ ಬೇಕಾದವರ ಬಗ್ಗೆ ಬೇಕಾಬಿಟ್ಟಿಯಾಗಿ ಬರೆಯಲಾಯಿತು. ಯೆಲ್ಲೋ ಪತ್ರಿಕೆ ಸಂಪಾದಕ ಕೈಯಲ್ಲಿ ಕಾಸಿಲ್ಲದೇ ದಿಕ್ಕಿಲ್ಲದೇ ಇದ್ದವ, ನೀರಿನಿಂದೆದ್ದ ಮೇಲೆ ಹೇಗೆ ನನ್ನದೇ ಒಂದು ಮಾಹಿತಿಯನ್ನು ಹೇಗೆಲ್ಲ ಬಳಸಿಕೊಳ್ಳಬಲ್ಲ ಎಂದು ಖೇದವಾಯಿತು. ಆದರೆ ಈ ಎರಡೂ ಘಟನೆಗಳಿಂದ ಹೊಸದೊಂದು ಪಾಠ ಕಲಿತೆ. ಇಂದು ಪತ್ರಿಕೋದ್ಯಮ ತನ್ನ ಅರ್ಥವನ್ನು ಕಳೆದುಕೊಂಡಿದೆ. ಒಂದು ಸಾಮಾನ್ಯ ವ್ಯಾಪಾರದಲ್ಲಿ ಇರಬಹುದಾದ ಆದರ್ಶವೂ ಕೂಡ ಈ ಉದ್ಯಮದಲ್ಲಿ ಮಾಯವಾಗುತ್ತಿದೆ.

ಈ ಬಗ್ಗೆ ನನ್ನಂತಹ ಯುವ ಪೀಳಿಗೆಯ ಪತ್ರಕರ್ತರು ಯೋಚಿಸಿ, ಹೊಸದೊಂದು ಸುಂದರ ಆಯಾಮವನ್ನು ಆರಂಭಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ: