ಬುಧವಾರ, ಜುಲೈ 27, 2011

ಆಡಳಿತವರ್ಗವೆಂಬ ಭೂಗತ ಜಗತ್ತಿನಲ್ಲಿ ಸಿಕ್ಕಿಬಿದ್ದ ಭಟ್ಟರು......

ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನೇಮಾ ಹಾಗೂ ಹಿಂದಿಯ ಕೆಲವು ಸಿನೇಮಾಗಳಲ್ಲಿ ಭೂಗತ ಜಗತ್ತಿನ ಡಾನ್ ಗಳನ್ನು ಉಳಿಸಲು ಅವರ ಕೆಳಗೆ ಅಮಾಯಕನೊಬ್ಬನನ್ನು ತಮ್ಮ ಕಾರ್ಯಾಚರಣೆಯ ಮುಖ್ಯಸ್ಥನೆಂದು ಘೋಷಿಸುತ್ತಿದ್ದರು. ಒಂದು ವೇಳೆ ಪೊಲೀಸರು ಅವರನ್ನು ಹಿಡಿದರೆ ಈ ಅಮಾಯಕ ಬಾಸ್ ಸಿಕ್ಕಿಬೀಳುತ್ತಾನೆ. ಉಳಿದವರು ಪಾರಾಗುತ್ತಾರೆ.

ಈಗ ಮಾಧ್ಯಮದಲ್ಲಿ ಶಶಿಧರ್ ಭಟ್ ಅವರ ಪರಿಸ್ಥಿತಿಯೂ ಅಷ್ಟೆ. ಕಾವೇರಿ, ಸುವರ್ಣ ಈಗ ಸಮಯ ಎಲ್ಲ ಚಾನೆಲ್ ಗಳಲ್ಲೂ ಇವರೇ ಮುಖ್ಯಸ್ಥರು, ಭೂಗತಜಗತ್ತಿನ ಅಮಾಯಕ ಬಾಸ್ ನಂತೆ. ಪ್ರತಿಯೊಂದು ಪ್ರಮುಖ ನ್ಯೂಸನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಮ್ಯಾನೇಜ್ ಮೆಂಟ್ ನವರು ತಮ್ಮ ತಪ್ಪುಗಳಿಗೆ ಹೊಣೆಗಾರರನ್ನಾಗಿ ಮಾಡಲು ಭಟ್ಟರನ್ನು ಬಳಸಿಕೊಳ್ಳುತ್ತಾರೆ. ಆಡಳಿತವರ್ಗಕ್ಕೆ ಭಟ್ಟರನ್ನು ಸೇರಿಸಿಕೊಳ್ಳುವುದೇಕೆಂದರೆ ಅವರು ಯಾವತ್ತೂ ಕೆಲಸಗಾರರ ಪರ. ನಿಜವಾದ ಸುದ್ದಿಯ ಪರ. ಕಳ್ಳರ ಕೈಯಲ್ಲೇ ಬೀಗ ಕೊಟ್ಟಂತೆ ಮುಂದೆ ಪ್ರಶ್ನೆ ಮಾಡಬಹುದಾದ ಭಟ್ಟರನ್ನು ಆಡಳಿತವರ್ಗದ ಪ್ರತಿನಿಧಿಯನ್ನಾಗಿ ಮಾಡಿಬಿಟ್ಟರೆ ತಾವು ಸೇಫ್ ಎಂದೇ ಚಾನೆಲ್ ನವರು ಯೋಚಿಸುವುದು.

ಕಾವೇರಿ ಚಾನೆಲ್ಲನ್ನೇ ತೆಗೆದುಕೊಳ್ಳಿ. ಅಂದು ಏಷಿಯಾನೆಟ್ ಮತ್ತು ಝೀ ಸಂಸ್ಥೆಯವರು ಚಾನೆಲ್ ಆರಂಭಿಸಿದಾಗ ಅಲ್ಲಿ ಸರಿಯಾದ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳಲು ಭಟ್ಟರಿಗೆ ಅವಕಾಶವಿರಲಿಲ್ಲ. ಚಾನೆಲ್ ಡಿಸ್ಟ್ರಿಬ್ಯೂಷನ್, ಮಾರ್ಕೆಟಿಂಗ್ ಎಲ್ಲಾ ಸೊನ್ನೆಯಾಗಿತ್ತು. ಅದರ ನಿರ್ವಹಣೆಯನ್ನು ಮ್ಯಾನೇಜ್ ಮೆಂಟಿನವರೇ ಮಾಡುತ್ತಿದ್ದರು. ಭಟ್ಟರು ಇರುವ ನಾಲ್ಕು ಮೂರು ಜನರಿಂದ ಕೆಲಸ ತೆಗೆದುಕೊಳ್ಳಬೇಕಾದ ಅನಿವಾರ್ಯತೆ. ಪರಿಣಾಮ- ಚಾನೆಲ್ ಮುಚ್ಚಿಕೊಂಡಿತು.

ಹಾಗೆಯೇ ಸುವರ್ಣ ವಾಹಿನಿ ಆರಂಭಿಸಿದಾಗ ಇರುವ ಸ್ವಲ್ಪವೇ ಸಂಪನ್ಮೂಲವನ್ನು ಬಳಸಿಕೊಂಡು ಹತ್ತು ಜನ ಬೇಕಾದ ಕೆಲಸವನ್ನು ನಾಲ್ಕು ಜನರಿಂದ ಮಾಡಿಸಿಕೊಳ್ಳಬೇಕಾಗಿತ್ತು. ಒಮ್ಮೊಮ್ಮೆ ಅವರೇ ಉಪಸಂಪಾದಕರ ಕೆಲ್ಸವನ್ನೂ ಮಾಡಬೇಕಾಗಿತ್ತು. ಸರಿಯಾದ ಕೆಲಸಗಾರರನ್ನು ತೆಗೆದುಕೊಂಡರೆ ಅವರು ಭಟ್ಟರ ಪರವಾಗಿರುವವರು , ಗುಂಪುಕಟ್ಟುತ್ತಾರೆಂಬ ಅಪವಾದ ಕಟ್ಟಿಟ್ಟಬುತ್ತಿ. ಚಾನೆಲ್ ರಾಜ್ಯದಲ್ಲಿ ಎಲ್ಲ ಕಡೆ ಬರುತ್ತಿಲ್ಲ, ಸರಿ ಮಾಡಿಸಿ ಎಂದರೆ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಆಡಳಿತವರ್ಗ. ಸಂಬಳ ಜಾಸ್ತಿ ಮಾಡಿ, ಚೆನ್ನಾಗಿರುವ ಸೆಟ್ ಹಾಕಿಸಿ, ನಿರೂಪಕರ ಬಟ್ಟೆ ಹರಿದುಹೋಗಿದೆ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಫಂಡ್ ಸ್ಯಾಂಕ್ಷನ್ ಮಾಡಿ ಎಂದರೆ ಎಲ್ಲದಕ್ಕೂ ನೋ ಎಂದಿತು ಸುವರ್ಣ ನ್ಯೂಸ್ ಆಡಳಿತವರ್ಗ. ಒಂದು ಮೂಲಭೂತ ವ್ಯವಸ್ಥೆಯನ್ನು ಒದಗಿಸಲು ಹೆಣಗಾಡಿದ ಆಡಳಿತವರ್ಗಕ್ಕೆ ಟಿಆರ್ ಪಿ ಮಾತ್ರ ಬೇಕಾಗಿತ್ತು. ಟಿ ಆರ್ ಪಿ ಬರದಿದ್ದಾಗ ಭಟ್ಟರನ್ನು ಹೊಣೆಮಾಡಿ ಹೊರಹಾಕಲಾಯಿತು.

ಅಲ್ಲಿಗೆ ರಂಗನಾಥ್ ಅವರನ್ನು ಕರೆದುಕೊಂಡು ಬಂದು ಎಲ್ಲ ವ್ಯವಸ್ಥೆಯನ್ನು ಅಂದರೆ ಸುಂದರವಾದ ಸೆಟ್, ಸಂಬಳ ಹೈಕಿಂಗ್, ಸರಿಯಾದ ಡಿಸ್ಟ್ರಿಬ್ಯೂಷನ್ , ಒಳ್ಳೆ ಪ್ರಚಾರ ಎಲ್ಲ ಮಾಡಿತು! ಟಿಆರ್ ಪಿ ಸಹಜವಾಗೇ ಮೇಲೇರಿತು.

ನಂತರ ಸಮಯ ವಾಹಿನಿಗೆ ಭಟ್ಟರನ್ನು ಕರೆತರಲಾಯಿತು. ಝಾರಕಿಹೊಳಿ ಕಂಪನಿ ಸಮಯ ವಾಹಿನಿ ವ್ಯಾಪಾರ ಮಾಡಿಸುವುದನ್ನು ಭಟ್ಟರಿಗೆ ವಹಿಸಿತು.ನಂತರ ವ್ಯಾಪಾರವಾದ ಮೇಲೆ ಭಟ್ಟರನ್ನು ಮರೆತುಬಿಟ್ಟಿತು. ಈಗಿನ ಹೊಸ ಆಡಳಿತ ಮತ್ತೆ ಸುವರ್ಣ ನ್ಯೂಸ್ ಆಡಳಿತವರ್ಗ ಮಾಡಿದ ತಪ್ಪನ್ನೇ ಮಾಡುತ್ತಿದೆ. ಕಷ್ಟದ ಕೆಲಸವೆಲ್ಲದಕ್ಕೂ ಭಟ್ಟರನ್ನು ಬಳಸಿಕೊಳ್ಳುವ ಜನ ತಮ್ಮ ವೈಫಲ್ಯಕ್ಕೆ ಭಟ್ಟರನ್ನು ಹೊಣೆಗಾರರನ್ನಾಗಿ ಮಾಡುವುದು ಅವರ ಹೇಡಿತನವನ್ನು ತೋರಿಸುತ್ತದೆ. ಯಾಕೆ ಭಟ್ಟರನ್ನು ಬಳಸಿಕೊಳ್ಳುತ್ತಾರೆ? ತಮಗೆ ಬೇಕಾದವರನ್ನು ತಂದು ವಾಹಿನಿಯ ಮುಖ್ಯಸ್ಥರನ್ನಾಗಿ ಮಾಡಬೇಕೆಂದರೆ ಅದನ್ನು ನೇರವಾಗಿ ಅವರಿಗೇ ಹೇಳಬಹುದು. ಆದರೆ ಹಾಗೆ ಮಾಡದೇ ಅವರೇ ವಿಫಲರಾಗಿದ್ದಾರೆಂದು ಜನರಲ್ಲಿ ತಪ್ಪುಗ್ರಹಿಕೆ ಮೂಡಿಸಿ ಹೊರಹೋಗುವಂತೆ ಮಾಡುವುದು ಆಡಳಿತವರ್ಗದ ಹಿಂಬದಿಯ ಚೂರಿ ನೀತಿ ಅಲ್ಲದೇ ಮತ್ತೇನು?

ಭಟ್ಟರನ್ನು ನಾನು ಭಾನಾಮತಿಯ ಕಾಲದಿಂದ ನೋಡುತ್ತಿದ್ದೇನೆ. ಅವರದು ಒಂದು ನಿರಂಕುಶ ವ್ಯಕ್ತಿತ್ವ. ಪ್ರಜಾಪ್ರಭುತ್ವವಾದಿಯಾದರೂ ಅವರು ತಮ್ಮ ದಾರಿಯಲ್ಲೇ ನಡೆಯುವ ಆನೆ. ಅವರ ಕ್ರಿಯಾಶೀಲತೆ, ಸೃಜನಶೀಲತೆ ಎಲ್ಲರೂ ಮೆಚ್ಚುವಂತಹುದು. ಆದರೆ ಅವರು ಯಾರನ್ನೂ ನಂಬುವುದಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಎಲ್ಲರಂತೆ ದೊಡ್ದವರೆಂದೆನಿಸಿಕೊಂಡವರ ಬಾಲ ಬಡಿಯುವುದಿಲ್ಲ. ವಿಪರೀತ ಸ್ವಾಭಿಮಾನಿ. ಕೆಲವೊಮ್ಮೆ ಅದು ಸೊಕ್ಕೆನಿಸುತ್ತದೆ. ತಾವಾಯಿತು ತಮ್ಮ ಕೆಲಸವಾಯಿತು ಎಂಬ ನಿಷ್ಠೆ. ಅಗತ್ಯಕ್ಕಿಂತ ಹೆಚ್ಚಿಗೆ ಸಂಬಂಧ ಬೆಳೆಸುವವರಲ್ಲ.

ನಾನು ಭಾನಾಮತಿ ಸೇರಿದಾಗ ಅಲ್ಲಿ ಒಂದು ಹತ್ತು ಜನರ ಪಟಾಲಮ್ಮೇ ಕೆಲಸ ಮಾಡುತ್ತಿತ್ತು. ಭಟ್ಟರು ಯಾರನ್ನೂ ಕೆಲಸದಿಂದ ತೆಗೆಯುತ್ತಿರಲಿಲ್ಲ. ಆದರೆ ಯಾರು ಚೆನ್ನಾಗಿ ಕೆಲಸ ಮಾಡುತ್ತಿದ್ದರೋ ಅವರಿಗೆ ಹೆಚ್ಚು ಸ್ಕೋಪ್ ನೀಡುತ್ತಿದ್ದರು. ಅದು ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಿತ್ತು. ಬಹುಷಃ ಅದೇ ಸಮಸ್ಯೆ ಇವತ್ತು ವಾಹಿನಿಯ ಮಟ್ಟದಲ್ಲಿ ನಡೆದಿದೆ. ಅವರು ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಸ್ಕೋಪ್ ಕೊಡುತ್ತಿದ್ದಾರೆ. ಉಳಿದವರು ಗುಂಪು ಮಾಡಿಕೊಂಡು ಭಟ್ಟರ ವಿರುದ್ಧ ಕೆಲಸ ಮಾಡುತ್ತಿದ್ದಾರೆ.

ಇನ್ನು ಆಡಳಿತವರ್ಗಕ್ಕೆ ಅವರ ನಿರಂಕುಶ ಕೆಲಸ , ಸ್ವತಂತ್ರ ನಿರ್ಧಾರಗಳು, ಯಾವ ಕೆಲಸ ಕೊಟ್ಟರೂ ಸಮರ್ಥವಾಗಿ ತೋರಿಸಿ ಸೈ ಎನಿಸಿಕೊಳ್ಳುವ ವ್ಯಕ್ತಿತ್ವ ಈರ್ಷೆಗೆ ಕಾರಣವಾಗಿರಬಹುದು. ತಮ್ಮ ವ್ಯಕ್ತಿತ್ವದ ಟೊಳ್ಳುಗಳನ್ನು ಮುಚ್ಚಿಕೊಳ್ಳಲು ಭಟ್ಟರ ವಿರುದ್ಧ ಕತ್ತಿ ಮಸೆಯುವುದು ಎಷ್ಟರಮಟ್ಟಿಗೆ ಸರಿ?

ಇನ್ನು ಭಟ್ಟರು ಸಮಯ ವಾಹಿನಿಯಲ್ಲೂ ಬಹಳ ದಿನ ಉಳಿಯಲಿಕ್ಕಿಲ್ಲ. ಆಗಲೇ ಆಡಳಿತವರ್ಗದವರು ಪ್ರತಿಯೊಂದರಲ್ಲೂ ಅಸಹಕಾರ ನೀಡತೊಡಗಿದ್ದಾರೆ. ಭಟ್ಟರು ಈಗಲೂ ಪ್ರಶ್ನಿಸುವುದಿಲ್ಲ. ಅವರು ಸದ್ದಿಲ್ಲದೇ ಹೊರಗೆ ನಡೆಯುತ್ತಾರೆ. ಭಟ್ಟರು ಯಾಕೆ ಪ್ರಶ್ನಿಸುವುದಿಲ್ಲ? ಅವರದ್ದೆ ತಪ್ಪಿರಬಹುದು ಎಂದು ಉಳಿದವರು ಮಾತನಾಡಿಕೊಳ್ಳುತ್ತಾರೆ.

ಅವರೇ ಹೇಳಿಕೊಳ್ಳುವ ಹಾಗೆ ಅವರದು ಜಂಗಮ ಬದುಕು. ಅನಿಕೇತನ ಜೀವನ. ಹಾಗಿದ್ದರೆ ಹೊಟ್ಟೆಪಾಡಿಗಾಗಿ ಯಾಕೆ ಜೀವನ ಮಾಡಬೇಕು ಎಂದು ನಾನು ಕೇಳುತ್ತೇನೆ. ಭಟ್ಟರು ತಮಗಿರುವ ಅಗಾಧ ಅನುಭವವನ್ನು ಈಗಿನ ತಲೆಮಾರಿನವರಿಗೆ ಧಾರೆಯೆರೆಯ ಹೊರಟರೆ ಅವರೇ ಒಂದು ಸಂಸ್ಥೆಯಾಗಿ ಬೆಳೆಯಬಲ್ಲವರು. ಆದರೂ ಅವರ ಸಾತ್ವಿಕ ಜೀವನ ಕೆಲವೊಮ್ಮೆ ಬಿ.ಆರ್.ಲಕ್ಷ್ಮಣ್ ರಾವ್ ಅವರ ಕವನವನ್ನು ನೆ

ನಪಿಸುತ್ತದೆ, ರಾಜಸಕ್ಕೆ ಫಲವ ಕೊಟ್ಟೆ, ತಾಮಸಕ್ಕೆ ಬಲವ ಕೊಟ್ಟೆ, ಸತ್ವಕೆ ಷಂಡತ್ವ ಕೊಟ್ಟೆ ತತ್ತ್ವ ಒಣಗಲು , ಸತ್ವಕೆ ಷಂಡತ್ವ ಕೊಟ್ಟೆ ತತ್ತ್ವ ಒಣಗಲು.

ಗಾಣದೆತ್ತಿನಂತೆ ದುಡಿದು ಕೆಟ್ಟ ಹೆಸರು ಹೊತ್ತು ಹೊರಬಂದಾಗಲೂ ಭಟ್ಟರೇ ನೀವ್ಯಾಕೆ ಸುಮ್ಮನಿರುತ್ತೀರಿ ಎಂದು ಪ್ರಶ್ನಿಸಬೇಕೆನಿಸುತ್ತದೆ.

ಅದೇನೇ ಇರಲಿ. ಅವರ ನಿಜವಾದ ಯಶಸ್ಸು ಅವರ ಪ್ರಾಮಾಣಿಕತೆ. ಅವರ ಸಾತ್ವಿಕ ಸಿಟ್ಟು. ಉತ್ತರಕನ್ನಡದ ಹಳ್ಳಿಯೊಂದರಲ್ಲಿ ಕೇವಲ ಬಿಕಾಂ ಓದಿ ಬಂದ ಹುಡುಗನೊಬ್ಬ ಇಂದು ಯಾರ ಶಿಫಾರಸ್ಸಿಲ್ಲದೇ ಈ ಮಟ್ಟಕ್ಕೆ ಬೆಳೆದಿದ್ದು ಅವರ ಸಾಧನೆಯೇ ಸರಿ. ಆದರೂ ಈ ಸಾಧನೆಗೇ ಅವರು ತೃಪ್ತರಾಗಬಾರದು. ಮುಂದೆ ಅವರನ್ನು ತಪ್ಪಲ್ಲದ ತಪ್ಪಿಗೆ ಹೊಣೆಮಾಡಿದವರಿಗೆ ಒಂದು ಉತ್ತರ ಹೇಳಬೇಕು. ಅಂದಾಗ ಮಾತ್ರ ಪತ್ರಿಕೋದ್ಯಮವೆಂಬ ಇಂದಿನ ಹಿಪಾಕ್ರಸಿ ಜಗತ್ತಿನಲ್ಲಿ ಕೂಡ ಸತ್ಯ ಬದುಕಿದೆ ಎಂದು ತೋರಿಸಿಕೊಟ್ಟಂತಾಗುತ್ತದೆ.