ಗುರುವಾರ, ಅಕ್ಟೋಬರ್ 28, 2021

ಮತಾಂತರ ತಪ್ಪಿಸಲು ಏನು ಮಾಡಬೇಕು?

 ಮತಾಂತರ ತಪ್ಪಿಸಲು ಏನು ಮಾಡಬೇಕು?


    ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ಧರ್ಮದ ಉಳಿವಿನ ಹೋರಾಟ ಮುಂಚೂಣಿಗೆ ಬಂದಿದೆ. ಆಡಳಿತಾರೂಢ ಬಿಜೆಪಿ ಮತ್ತು ಸಂಘ ಪರಿವಾರದಂತಹ ಸಂಘಟನೆಗಳು ಈ ಕುರಿತು ತಮ್ಮದೇ ಕಾರ್ಯತಂತ್ರ ರೂಪಿಸಿವೆ. ಪ್ರತ್ಯೇಕ ಐಟಿ ಸೆಲ್ ಮೂಲಕ ಪ್ರತಿನಿತ್ಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಒಳಹುಳುಕುಗಳನ್ನು ಎತ್ತಿತೋರಿಸುವ ಪೋಸ್ಟಗಳು, ಆ ಧರ್ಮದವರು ಎಸಗಿದ್ದಾರೆ ಎನ್ನುವ ಅಪರಾಧಗಳ ವಿಡಿಯೊಗಳು, ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ. ಇವುಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಸುಳ್ಳು ಮಾಹಿತಿ ಅಥವಾ ತಿರುಚಲಾದ ಮಾಹಿತಿ ಎಂದು ಹಲವು ಫ್ಯಾಕ್ಟ ಚೆಕ್ಫ಼್ ಸಂಸ್ಥೆಗಳು ಸಾಬೀತು ಮಾಡಿವೆ. ಇತ್ತೀಚೆಗೆ ಫೇಸ್ಬುಕ್ ಸಹ ಇದನ್ನು ದೃಢಪಡಿಸಿದೆ. ಆದ್ದರಿಂದ ಮತಾಂತರದ ಬಗ್ಗೆ ಸೂಕ್ಷ್ಮ ಮತ್ತು ಸ್ಥೂಲ ಅವಲೋಕನ ಇವತ್ತಿನ ಅವಶ್ಯಕತೆಯಾಗಿದೆ.

    ವಿಶ್ವದ ಸನಾತನ ಧರ್ಮ ಎಂದು ಹೇಳಲಾಗುವ ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ. ಅದೊಂದು ಬದುಕುವ ವಿಧಾನ ಎಂದೂ ಹೇಳಲಾಗುತ್ತದೆ. ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ಹೇಳುತ್ತಾ ಒಳಗೊಳ್ಳುವಿಕೆ ಮತ್ತು ಜೀವನ್ಮುಖಿ ಬದುಕುವ ವಿಧಾನವೇ ಅದರ ಮೂಲ ತಿರುಳು ಎಂದು ಪ್ರತಿಪಾದಿಸುತ್ತಾರೆ. ಹಾಗೆ ಅವರೊಮ್ಮೆ ಹೇಳುತ್ತಾರೆ, ಹಸಿದವನ ಮುಂದೆ ಭಗವದ್ಗೀತೆ ಹೇಳಬಾರದು ಎಂದು. ಈ ಎರಡು ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಕು. ಹಿಂದೂಧರ್ಮವನ್ನು ಯಾರು ಯಾರಿಂದ ಉಳಿಸಬೇಕು ಎನ್ನುವುದು ಅರಿವಾಗುತ್ತದೆ.

    ಕೊವಿಡ್ ನಂತರದ ಕಾಲದಲ್ಲಿ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿದೆ. ಭಾರತ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಿಂದ ಮುಂದಕ್ಕೆ ಹೋಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಮೂವತ್ತು ವರ್ಷಗಳಷ್ಟು ಹಿಂದೆ ಬಿದ್ದಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕೆಲವು ಅನ್ಯಧರ್ಮದ ಅಡ್ಡಕಸುಬಿಗಳು ಮತಾಂತರ ಕಾರ್ಯಕ್ಕೆ ಇಳಿದಿದ್ದರೆ ಆಶ್ಚರ್ಯವಿಲ್ಲ. ಇವರನ್ನು ಅಡ್ಡಕಸುಬಿಗಳು ಎಂದು ಯಾಕೆ ಹೇಳುತ್ತೇನೆಂದರೆ ಮತಾಂತರ ತಡೆಯುತ್ತೇವೆ ಎಂದು ಇಲ್ಲಸಲ್ಲದ ಪೋಸ್ಟ್ ಹಾಕಿ ಜನರ ದಾರಿ ತಪ್ಪಿಸುವವರು ಮತ್ತು ಸಂದರ್ಭ ಉಪಯೋಗಿಸಿಕೊಂಡು ಮತಾಂತರ ಮಾಡುತ್ತಿರುವವರು ಇಬ್ಬರಿಗೂ ಅವರವರ ಧರ್ಮಗಳ ಸಾರ ಗೊತ್ತಿಲ್ಲ. ನಿಜವಾದ ಧಾರ್ಮಿಕರು ಯಾವತ್ತೂ ಈ ಎರಡೂ ಕೆಲಸ ಮಾಡಲಾರರು. ನಿಜ ಧಾರ್ಮಿಕರು ಅವರವರ ಧರ್ಮ, ನಂಬಿಕೆಗಳನ್ನು ಅವರವರ ಆಯ್ಕೆಗೇ ಬಿಡುತ್ತಾರೆ. ಕೈಲಾಗದ ಅಸಹಾಯಕರ ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರ ಮಾಡುವುದಿಲ್ಲ. ಜೊತೆಗೆ ಯಾರು ಮತಾಂತರ ಮಾಡುತ್ತಿದ್ದಾರೆ, ಇಲ್ಲ ಎಂಬುದು ಸರಿಯಾಗಿ ತಿಳಿದುಕೊಳ್ಳದೆ ಮುಗ್ಧಮನಸ್ಸುಗಳಲ್ಲಿ ಅನ್ಯರ ಬಗ್ಗೆ ಅಸಹ್ಯ, ಅಸಹನೆ ತುಂಬುವುದಿಲ್ಲ. ಬದಲಿಗೆ ಬೇರೆವರ ಕಷ್ಟಗಳಿಗೆ ವಿನಾಕಾರಣ, ನಿರೀಕ್ಷೆಗಳಿಲ್ಲದೆ ಸಹಾಯಕ್ಕೆ ನಿಲ್ಲುತ್ತಾರೆ. 

    ಹಾಗೊಂದುವೇಳೆ ಮತಾಂತರ ನಡೆಯುತ್ತಿದ್ದರೆ ಜನ ಯಾಕಾಗಿ ಮತಾಂತರಗೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಎರಡು ಕಾರಣ ಸಾಮಾನ್ಯ. ಒಂದು ತಾವು ಇರುವ ಧರ್ಮದ ಬಗ್ಗೆ ಅಸಮಾಧಾನ ಇರಬೇಕು. ಅದರ ರೀತಿ, ನೀತಿಗಳು ಆ ವ್ಯಕ್ತಿಗೆ ಅರಿವಿಲ್ಲದೇ ಇರಬಹುದು. ೨. ಯಾವುದಾದರೂ ಆರ್ಥಿಕ, ಸಾಮಾಜಿಕ ಒತ್ತಡ ಇರಬಹುದು. 

   ಇಲ್ಲಿ ಮೊದಲ ಕಾರಣವನ್ನೇ ತೆಗೆದುಕೊಂಡಾಗ ಹಿಂದೂ ಧರ್ಮದ ಆಚರಣೆಗಳು, ಬದುಕಿನ ವಿಧಾನ , ಇವೆಲ್ಲ ಎಷ್ಟು ಜನರಿಗೆ ಗೊತ್ತಿವೆ. ಸುಮ್ಮನೆ ಆಡಂಬರಕ್ಕೆ ಆಚರಣೆಗಳಾದಾಗ ಅವುಗಳ ಒಳತಿರುಳು ಟೊಳ್ಳಾಗುತ್ತವೆ. ನಗರೀಕರಣ ಹೆಚ್ಚಾದಂತೆಲ್ಲ ಈ ಡಾಂಭಿಕತೆ ಇನ್ನಷ್ಟು ಡಾಳಾಗುತ್ತದೆ. ಇದು ಸಹಜವಾಗಿಯೇ ಪಾಶ್ಚಿಮಾತ್ಯ ಸಂಸ್ಕೃತಿಯ ಶಿಕ್ಷಣ ಪಡೆದ ಯುವಕರಲ್ಲಿ ಅಸಮಾಧಾನ ಮೂಡಿಸುತ್ತದೆ. ಇಲ್ಲಿಯ ಆಚಾರ, ವಿಚಾರಗಳಲ್ಲಿ ಜೀವನ್ಮುಖಿ ಕ್ಷಣಗಳು ಮರೆಯಾಗತೊಡಗಿದಾಗ ಜನರು ಅನ್ಯಧರ್ಮಗಳತ್ತ ದೃಷ್ಟಿ ನೆಡುತ್ತಾರೆ. ಹಾಗೆಯೇ ಬದುಕಿಗೆ ಅನ್ನವೇ ಮುಖ್ಯವಾದಾಗ ಅದು ಯಾರು ಯಾವ ಷರತ್ತಿನ ಮೇಲೆ ಕೊಟ್ಟರು ಎನ್ನುವುದು ಮುಖ್ಯವಾಗುವುದಿಲ್ಲ. ಹಸಿವು ಇಂಗಿದ್ದಷ್ಟೇ ಸತ್ಯ. ಇನ್ನು ಯಾವ ಧರ್ಮವಾದರೇನು, ದೇವರಾದರೇನು? ಹಾಗೆ ನೋಡಿದರೆ ಈ ಹಂತದಲ್ಲಿರುವವರಿಗೇ ದೇವರು ಮತ್ತು ಧರ್ಮ ಹೆಚ್ಚು ಗೊತ್ತು ಎನಿಸುತ್ತದೆ. 

   ಯಾರಿಗೆ ದೇವರು ಗೊತ್ತೊ, ತಮ್ಮ ಧರ್ಮ ಗೊತ್ತೊ ಅವನಿಗೆ ಎಲ್ಲಾ ಧರ್ಮಗಳ ಸಾರ ಒಂದೇ, ಎಲ್ಲಾ ದೇವರೂ ಒಂದೇ ಎಂದು ಗೊತ್ತಿರುತ್ತದೆ. ಅದಕ್ಕಾಗಿಯೇ ಶ್ರೀರಾಮಕೃಷ್ಣ ಪರಮಹಂಸರು ಕಾಳಿ, ಸೀತೆ, ರಾಮ, ರಾಮಲಾಲ ಇವರ ಜೊತೆಗೆ ಪೈಗಂಬರ್, ಏಸುಕ್ರಿಸ್ತರನ್ನೂ ಸಾಕ್ಷಾತ್ಕರಿಸಿಕೊಂಡಿದ್ದು. ದೇವರು ಅವರಿಗೆ ಬೇರೆ, ನಮಗೆ ಬೇರೆ ಇರುತ್ತಾನೊ ಅಥವಾ ಒಬ್ಬನೇಯೊ ಎಂದು ಪರೀಕ್ಷಿಸಿ ದೃಷ್ಟಾಂತ ಕೊಟ್ಟಿದ್ದು. 

  ಆದ್ದರಿಂದ ಮತಾಂತರ ತಡೆಯುವ ಹುಸಿ ಕೆಲಸಗಳನ್ನು ಬಿಟ್ಟು ಜನರು ಸ್ವಧರ್ಮ ಪರಿಪಾಲನೆ ಮಾಡಿದರೆ ಸಾಕು ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಕೈಯಲ್ಲೇ ಅಧಿಕಾರ, ಜನಬೆಂಬಲ ಇಟ್ಟುಕೊಂಡಿರುವಾಗ ಜನರ ಹಸಿವಿನ ಸಮಸ್ಯೆಗೆ ಪರಿಹಾರ ಕೊಡುವ ಮನಸ್ಸು ಮಾಡಬೇಕು. ಆಗ ಈ ಮತಾಂತರ ಮತ್ತು ಅದನ್ನು ತಡೆಯುವ ಪ್ರಹಸನಗಳನ್ನು ತಡೆಯಬಹುದು.



ಶನಿವಾರ, ಜುಲೈ 17, 2021

She came up with a new lesson

 ಅವಳು ಬಂದಳು ಹೊಸ ಪಾಠದೊಂದಿಗೆ 


           ಅವಳು ಅದಾಗ್ಲೇ ಬದುಕಿಗೆ ಬರುವವಳಿದ್ದಳು. ನನಗೆ ಆಗ್ಲೇ ಅನಿಸಿತ್ತು. ಆದ್ರೆ ಸಮಯ ಬಂದಿರಲಿಲ್ಲ. ಅಕ್ಕಪಕ್ಕದ ಮನೆಗೆ ಬರುತ್ತಿದ್ದಳು. ನಾನು ಮಗುವಿನೆತ್ತಿಕೊಂಡು ಮನೆಗೆ ಬಂದಾಗ ಹೆರಿಗೆಯಾಗಿ ಒಂದೂವರೆ ತಿಂಗಳು. ತವರುಮನೆ ಬೆಂಗಳೂರಿನಲ್ಲಿ ಚಿಕ್ಕದಾಗಿತ್ತು. ತಂಗಿಯೂ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ನಾನು ಇನ್ನು ತವರುಮನೆಯಲ್ಲೇ ಇದ್ದಾರೆ ಆ ಚಿಕ್ಕ ಕೊನೆಯಲ್ಲಿ ಇಬ್ಬರು ಬಾಣಂತಿಯರು, ಇಬ್ಬರು ಮಕ್ಕಳು ಅಮ್ಮ ಎಲ್ಲ ಮಲಗುವುದು ದುಃಸಾಧ್ಯ ಎನಿಸಿತ್ತು. ಜೊತೆಗೆ ಇವ್ನು ಸರಿಯಾಗಿ ಊಟವಿಲ್ಲದೆ, ಪ್ರತಿದಿನ ನನ್ನ ಭೇಟಿಯಿಲ್ಲದೆ ಸೊರಗಿಹೋಗಿದ್ದ. ಮನೆಯಲ್ಲಿ ಗಲಾಟೆಗೋ ಏನೋ ಮಗುವೂ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ನನಗೆ ದುಃಖವಾಗಿತ್ತು. ಅದಾಗಲೇ ವಯಸ್ಸು ಮೀರಿದ್ದರಿಂದ ಈ ಜನ್ಮದಲ್ಲಿ ಮಕ್ಕಳ ಆಸೆಯನ್ನೇ ಬಿಟ್ಟಿದ್ದೆ. ಆದ್ರೆ ಎಲ್ಲೋ ಒಂದೆಡೆ ಮನಸ್ಸು ಹೇಳುತ್ತಿತ್ತು. ನನಗೂ ಮಗುವಾಗುತ್ತದೆ ಎಂದು. ಹಾಗಾಗಿ ಪ್ರತಿದಿನ ಅಶ್ವತ್ಥ ಪ್ರದಕ್ಷಿಣೆ, ಆಂಜನೇಯನ ಪ್ರದಕ್ಷಿಣೆ ಮಾಡುತ್ತಿದ್ದೆ. ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳುತ್ತಿದ್ದೆ. ಯಾವತ್ತೋ ಒಂದು ದಿನ ಮಗುವಾಗುತ್ತದೆ ಎಂದು ಮನಸ್ಸು ಕೂಗಿ ಕೂಗಿ ಹೇಳುತ್ತಿತ್ತು. 

           ಹಾಗೆಯೆ ಮಗುವಾಗಿ ಮನೆಗೆ ಬರಬೇಕು ಎಂದು ನಿರ್ಧಾರ ಮಾಡಿದೆ. ಮನೆ ಬಹಳ ಗಲೀಜಾಗಿತ್ತು. ಒಂದೂವರೆ ತಿಂಗಳ ಬಾಣಂತಿ ನಾನು ಮಗುವನ್ನು ಮನೆಯಲ್ಲಿ ಬಿಟ್ಟು ಆಟೋ ಹಿಡಿದು ಮನೆಗೆ ಬಂದೆ. ಅಲ್ಲಿ ಅವಳು ಪಕ್ಕದ ಮನೆಗೆ ತಾಯಿಯೊಂದಿಗೆ ಕೆಲ್ಸಕ್ಕೆ ಬಂದಿದ್ದಳು. ಅವಳ ಹತ್ತಿರ ಮನೆ ಸ್ವಚ್ಛ ಮಾಡಿಸಿಕೊಂಡೆ. ಒಂದೆರೆಡು ದಿನಗಳಲ್ಲಿ ನಾನು ಆಯಿಯೊಂದಿಗೆ ಮನೆಗೆ ಬಂದೆ. ಬಂದವಳೇ ಮನೆಯಲ್ಲಿ ಅಡುಗೆಗೆ ನಿಂತೆ. ಆಯಿ ಮಗುವನ್ನು ಸ್ನಾನ ಮಾಡಿಸಲು, ಅಡುಗೆಗೆ ಸಹಾಯ ಮಾಡುತ್ತಿದ್ದಳು. ಅವಳನ್ನು ಮನೆಕೆಲಸಕ್ಕೆ ಬರಲು ಹೇಳಿದೆ. ಹಾಗೆ ದಿನ ಸಾಗುತ್ತಿತ್ತು. ನಾಲ್ಕು ದಿನ ಕಳೆಯುವಷ್ಟರಲ್ಲಿ ತಂಗಿ ತವರಿಗೆ ಬಂದಿದ್ದಳು. ಅಲ್ಲಿ ಅವಳಿಗೆ ಯಾಕೋ ಉಸಿರುಗಟ್ಟಿಸಿದಂತಿತ್ತು. ಅಮ್ಮ, ತಂಗಿ ಇಬ್ಬರೂ ತಮ್ಮ ದುಃಖ ಹೇಳಿಕೊಂಡರು. ನಾನು ಸರಿ ನನಗೂ ಒಬ್ಬಳೇ ಇಲ್ಲಿ ಬೇಸರ. ಜೊತೆಗೆ ನನಗೂ ಸಹಾಯವಾಗುತ್ತದೆ. ಹೇಗೋ ನೋಡೋಣ , ಬನ್ನಿ ಎಂದೆ. ಅವರೂ ಬಂದರು. ಈಗ ಮನೆಯಲ್ಲಿ ಮಕ್ಕಳ ಕಲರವ. ಆದರೆ ನನಗೆ ನಿದ್ದೆ ಮರೀಚಿಕೆಯಾಗಿತ್ತು. ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರುತ್ತಿರಲಿಲ್ಲ. ಮಗುವಿಗೆ ಡಯಾಪರ್ ಹಾಕಬೇಡಿ ಎಂದಿದ್ದರು ವೈದ್ಯರು. ನಾನೂ ಹೌದೆಂದು ಪ್ರಯತ್ನ ಮಾಡಿದೆ. ಅದರ ಜೊತೆಗೆ ಮನೆಯ ಖರ್ಚು ಜಾಸ್ತಿಯಾಗುತ್ತಿತ್ತಲ್ಲ. ಅದನ್ನು ಉಳಿಸಿದಹಾಗೆಯೂ  ಆಯಿತೆಂದುಕೊಂಡೆ. ಆದ್ರೆ ರಾತ್ರಿ ಮಗು ಪದೇ ಪದೇ ಉಚ್ಛೆ ಹೊಯ್ದುಕೊಂಡು ಇಬ್ಬರಿಗೂ ನಿದ್ದೆ ಇಲ್ಲದಾಯಿತು. ಸರಿ ಎಂದು ರಾತ್ರಿ ಮಾತ್ರ ಡಯಾಪರ್ ಹಾಕತೊಡಗಿದೆ. 

            ಮಕ್ಕಳ ಉಚ್ಛೆಬಟ್ಟೆ, ಬಾತ್ರೂಮ್ ಎಲ್ಲ ಅಮ್ಮ ತೊಳೆಯುತ್ತಿದ್ದಳು. ಆಡುಗೆ ನಾನು ಮಾಡುತ್ತಿದ್ದೆ. ಅಷ್ಟಕ್ಕೇ ಬಹಳ ಸುಸ್ತಾಗುತ್ತಿತ್ತು. ಮಧ್ಯಾಹ್ನ ಮಲಗೋಣವೆಂದರೆ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ತಂಗಿಯ ಪುಟ್ಟಮಗು ರಾತ್ರಿಯೆಲ್ಲಾ ಏಳುತ್ತಿದ್ದರಿಂದ ಅದಕ್ಕೆ ಹಾಲು ಕುಡಿಸಿ ಮಲಗಿಸಲು ಅವರೆಲ್ಲ ಎದ್ದಿರುತ್ತಿದ್ದರು. ಹಾಗಾಗಿ ಅವರು ಮಧ್ಯಾಹ್ನ ವಿಶ್ರಾಮ್ತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ನಾನು ಎಂದಿನಂತೆ ಸುಸ್ತಾಗಿ ಮಗುವಿಗೆ ಹಾಲು ಕುಡಿಸುವುದಕ್ಕೂ ಬಹಳ ಕಷ್ಟಪಡುತ್ತಿದ್ದೆ. ಯಾರಿಗೂ ಹೇಳಿಕೊಳ್ಳಲಿಲ್ಲ. ನನಗೆ ಮೊದಲಿನಿಂದಲೂ ಹಾಗೆಯೇ . ನನ್ನ ಜೊತೆಗೆ ಬದುಕುವವರು ನನ್ನ ಕಷ್ಟಗಳನ್ನೂ ಹೇಳದೆ ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ಅದು ಸಾಧ್ಯವೇ ಇಲ್ಲ ಎಂಬುದು ಈಗ ಅರ್ಥವಾಗಿದೆ. 



ಮುಂದುವರಿಯುವುದು 


ಸೋಮವಾರ, ಸೆಪ್ಟೆಂಬರ್ 23, 2019

ಬಲಪಂಥೀಯ ವಿಚಾರ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಜನ ಮಾನಸ


ಇಂದು ಬಲಪಂಥೀಯ ವಿಚಾರದವರಿಗೆ ಸಂತಸವೂ ಎಡಪಂಥೀಯರಿಗೆ ಸಾವಿರ ಕೊಂಕುಗಳು ಕಾಣುವ ಅಸಹನೆಯೂ ಉಂಟಾಗಿದೆ. ಏನೇ ಇರಲಿ, ಭಾರತದ ಪ್ರಧಾನಿಯೊಬ್ಬರಿಗೆ ವಿದೇಶದ ನೆಲದಲ್ಲಿ ಸ್ವದೇಶೀ ವಲಸಿಗರಿಂದ ಈ ಪರಿ ಅಭೂತ ಉಪಚಾರ ಸಿಕ್ಕಿರುವುದು ಹೆಮ್ಮೆಯ ವಿಷಯವೇ ಸರಿ. ಆದಾಗ್ಯೂ ಇಂದು ಎಡಪಂಥೀಯ ಎಂಬ ನೆಲೆಗಿಂತ ಸಾಮಾನ್ಯ, ನಿರ್ಲಿಪ್ತ ಸ್ಥಾನದಲ್ಲಿ ನಿಂತು ನೋಡಿದಾಗ ಇಡೀ ಜಗತ್ತು ಬಲಪಂಥೀಯ ವಿಚಾರಗಳಲ್ಲಿ ಸಾಮ್ಯತೆಯನ್ನು ಸಾಧಿಸುತ್ತಿದೆ ಎಂದೆನಿಸುತ್ತದೆ. ಅದು ಹಿಂದೂವಿರಲಿ, ಮುಸಲ್ಮಾನ, ಕ್ರೈಸ್ತ, ಜೈನ ಯಾವುದೇ ಆದರೂ ಈ ಆಸ್ತಿಕ ಸಮುದಾಯ ಮೊದಲಿನಿಂದಲೂ ಪ್ರಬಲವಾಗಿತ್ತು. ಈಗ ನಾಯಕತ್ವವೂ ಸಹ ಬಲಪಂಥೀಯವಾದ ಮೇಲೆ ಇಡೀ ಬಲಪಂಥೀಯ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದು ಸಹಜ.
ನಾಯಕತ್ವ ಮಧ್ಯಮದಲ್ಲಿದ್ದಾಗ ಅಷ್ಟೇನೂ ಸಮಸ್ಯೆಯಾಗದು. ಆದರೆ ಬಹುಪಾಲು ಸಮಯ ಬಲಪಂಥೀಯ ವಿಚಾರಧಾರೆಯ ನಾಯಕತ್ವವೇ ವಿಶ್ವದಲ್ಲಿ ಕಾಣುವುದು ಹೇಗೆ? ಹೇಗೆಂದರೆ ಬಹುತೇಕ ಎಲ್ಲ ಸಾಮಾನ್ಯ ಜನರೂ  ಬಲಪಂಥೀಯ ವಿಚಾರಧಾರೆಯ ಪ್ರವಾಹದಲ್ಲಿ ತೇಲಿಹೋಗುವುದು. ಹೀಗೆ ಒಮ್ಮೆ ಈ ವಿಚಾರಧಾರೆಯ ಪ್ರವಾಹದಲ್ಲಿ ಬಿದ್ದೆವೆಂದರೆ ಅದರಿಂದ ಹೊರಗೆ ಬರುವುದು ಬಹಳ ಕಷ್ಟ. ಇಂತಹ ವಿಚಾರಧಾರೆಯ ಪ್ರವಾಹವನ್ನು ನಮ್ಮ ದೇಶದಲ್ಲಿ ವ್ಯವಸ್ಥಿತವಾಗಿ ಮಾಡುತ್ತಿರುವುದು ಮಾಧ್ಯಮಗಳು, ಜ್ಯೋತಿಷಿಗಳು ಮತ್ತು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯ ಮುಸುಕಲ್ಲಿ  ಯುವಜನರನ್ನು ಮರಳು ಮಾಡುತ್ತಿರುವ ಸಂಘಟನೆಗಳು.
ಈ ವಿಚಾರಧಾರೆಯ ಪ್ರವಾಹಕ್ಕೆ ಸಿಕ್ಕಾಗ ನೈಸರ್ಗಿಕ ಪ್ರವಾಹ ಬಂದು ದೇಹ ಕೊಚ್ಚಿ ಹೋದರೂ ಆತ್ಮಕ್ಕೆ, ಮನಸ್ಸಿಗೆ ಅಂಟಿರುವ ಬಲಪಂಥ ಅಥವಾ ಆಸ್ತಿಕತೆ ನಾಶವಾಗುವುದಿಲ್ಲ. ದೇವರನ್ನು ನಂಬದಿದ್ದರೂ, ವ್ಯಕ್ತಿಯೊಬ್ಬನನ್ನಾದರೂ ಆರಾಧಿಸಲೇಬೇಕೆಂಬ ಈ ಮನಸ್ಥಿತಿ ಸಾಮಾನ್ಯ ಜನರಿಗೆ ಬದುಕುವ ಭರವಸೆ ಕೊಡುತ್ತದೆ. ಈ ಭರವಸೆ ಎಷ್ಟರಮಟ್ಟಿಗೆ ಎಂದರೆ ಪ್ರವಾಹ ಬಂದು ಕೊಚ್ಚಿ ಹೋಗುತ್ತಿದ್ದರೂ ಎಲ್ಲೋ ಇರುವ ಇವರ ಆರಾಧ್ಯ ಇವರಲ್ಲಿಗೆ ಬಂದು ಕಾಪಾಡುತ್ತಾನೆ ಎನ್ನುವ ಮಟ್ಟಿಗೆ.
ಹಾಗೆ ಒಂದು ವ್ಯಕ್ತಿಯ ವೈಯಕ್ತಿಕ ಮಟ್ಟದಲ್ಲಿರುವ ಭರವಸೆ, ನಂಬಿಕೆ ಅತಿಯಾಗಿ ಸಾಮುದಾಯಕವಾಗಿ ನಾಯಕತ್ವದೆಡೆಗೂ ವಿಸ್ತರಿಸಿದಾಗ ಅದು ಅಪಾಯಕಾರಿ. ಅಲ್ಲಿ ಪ್ರಜಾಪ್ರಭುತ್ವ ಸಾಯುತ್ತದೆ. ಜನರು ಒಪ್ಪಿತ ಗುಲಾಮರಾಗುತ್ತಾರೆ. ಪ್ರಶ್ನೆ ಕೇಳುವ , ಅಭಿಪ್ರಾಯ ವ್ಯಕ್ತಪಡಿಸುವ ಯಾವ ಅವಕಾಶವೂ ಇರುವುದಿಲ್ಲ. ಕೇಳುವವರೇ ಇಲ್ಲವೆಂದ ಮೇಲೆ ಹೇಳುವವರಿಗೆ ಏನು ಬೆಲೆ? ನಾಯಕತ್ವ ಕೊಟ್ಟಾಗ ಉಂಡು, ಹಾಸಿದಾಗ ಮಲಗಿ ಅವಕಾಶ ಸಿಕ್ಕರೆ ಯಾರಿಗಾದರೂ ಮೈಥುನ ಮಾಡಿ ಬಂದರೆ ಸಾಕೆಂಬ ಮನಸ್ಥಿತಿಗೆ ಜನಸಮುದಾಯ ಬಂದು ತಲುಪುತ್ತದೆ. ಯಾರು ಎಷ್ಟರ ಮಟ್ಟಿಗೆ ನಾಯಕತ್ವಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ, ಬಹುಪರಾಕು ಹಾಕುತ್ತಿದ್ದಾರೆ ಎಂಬುದರ ಮೇಲೆ ಎಲ್ಲ ಅಪರಾಧಗಳ ಶಿಕ್ಷೆಗಳು ನಿರ್ಧಾರವಾಗುತ್ತವೆ.
ಹೀಗೆ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಹೋಗುತ್ತಿರುವ ನಮ್ಮ ವಿಶ್ವ ಸಮುದಾಯದಲ್ಲಿ ನಿಜ ಆಧ್ಯಾತ್ಮ, ನಿಜ ಭಕ್ತಿ, ನಿಜ ಪ್ರೇಮ ಎಲ್ಲವೂ ಇನ್ನು ಇತಿಹಾಸ. ಇನ್ನು ಕೇವಲ ಎಡಪಂಥದ ಮುಖವಾಡದಡಿ, ಬಲಪಂಥದ ಗುರಾಣಿಯಡಿ ನಾಯಕತ್ವದ ಓಲೈಕೆ ಮಾತ್ರ. ಇದು ಇಡೀ ಮಾನವ ಸಮುದಾಯದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ, ಸೈದ್ಧಾಂತಿಕ ಸೇರಿದಂತೆ ಎಲ್ಲಾ ಆಯಾಮಗಳ ಬೆಳವಣಿಗೆಗೆ ಮಾರಕ.
ಇದೊಂದು ಪರ್ವ ಕಾಲವೂ ಹೌದು. ಮಾಡಬೇಡ ಎಂದರೂ ಮಾಡುವ ಹಠಮಾರಿ ಮಗುವಿನಂತೆ ಮನುಜ ತನಗಲ್ಲದುದನ್ನು ಮಾಡಿದಾಗ ತನಗೆ ತಾನೇ ಪಾಠ ಕಲಿಯುತ್ತಾನೆ. ಇಂತಹದೊಂದು ಪರಿಸ್ಥಿತಿ ಸೃಷ್ಟಿಸಿದ ತಾನೇ ತನ್ನ ಕಾಲು ಎಡವಿದ್ದು ಅರಿವಾದಾಗ ಎದ್ದು ಬರುವ ಉಪಾಯವನ್ನು ಕಂಡುಹಿಡಿಯುತ್ತಾನೆ. ಈ ಅಮಲಿನಿಂದ ಮನುಜ ಹೊರಬರಲು ಎಷ್ಟು ಅವಧಿ ತೆಗೆದುಕೊಳ್ಳುತ್ತಾನೆ ಎಂಬುದು ಮಾತ್ರ ಆತನ ಸೋಲೊಪ್ಪಿಕೊಳ್ಳುವ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ನಾನೆಂತೂ ನನ್ನ ನಿರ್ಲಿಪ್ತ ಕಣ್ಣಿನಿಂದ ವಾರ್ತಾ ವಾಹಿನಿಗಳನ್ನು ನೋಡುತ್ತಿದ್ದೇನೆ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಕೇಳುತ್ತಿದ್ದೇನೆ. ಒಂದಲ್ಲ ಒಂದು ದಿನ ಭಾರತವೂ ಸೇರಿದಂತೆ ಎಲ್ಲ ದೇಶಗಳ ಜನಸಮುದಾಯ ಆವರಿಸಿರುವ ನಾಯಕತ್ವದ ಬಗೆಗಿನ ಬಲಪಂಥೀಯ ವಾದವು ವಸ್ತುಸ್ಥಿತಿಗೆ ಮರಳುತ್ತದೆ ಎಂಬ ಆಶಾವಾದದಲ್ಲಿ ನಿಟ್ಟುಸಿರುಬಿಡುತ್ತೇನೆ. ಎಲ್ಲ ವಿಚಾರಧಾರೆಗಳೂ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿ, ಸಾಮುದಾಯಿಕ ಮಟ್ಟದಲ್ಲಿ ಕೇವಲ ಮಾನವೀಯತೆ ಮತ್ತು ಸೌರ್ಹಾರ್ದತೆ ನೆಲೆಸಿದ, ಎಲ್ಲರಿಗೂ ಸಮನಾದ ನ್ಯಾಯವಿರುವ ಭವ್ಯಭಾರತದ ಕನಸೊಂದನ್ನು ಸೃಷ್ಟಿಸಿಕೊಳ್ಳುತ್ತ ಸುಮ್ಮನೆ ಕಣ್ಣುಮುಚ್ಚಿ ಬದುಕನ್ನು ಸಹನೀಯಗೊಳಿಸುತ್ತೇನೆ.


ಬುಧವಾರ, ಆಗಸ್ಟ್ 7, 2019

ಸೋರುತಿಹುದು ಮನೆಯ ಮಾಳಿಗೆ


ಸೋರುತಿಹುದು ಮನೆಯ ಮಾಳಿಗೆ
ಸಂತ ಶಿಶುನಾಳ ಶರೀಫರ ಈ ಹಾಡಿನ ಅನುಭಾವ ಏನೇ ಇರಲಿ. ನನಗೆ ಮಾತ್ರ ಈ ಹಾಡು ಕೇಳಿದಾಗ ಕಾಣಿಸುವುದೇ ಸೋರುತ್ತಿದ್ದ ನಮ್ಮ ಊರಿನ ಮನೆ. ಅಲ್ಲಿಯ ನಮ್ಮ ಮನೆ ಹೆಂಚಿನದು. ಮೊದಲೆರಡು ವರ್ಷಗಳು ಹುಲ್ಲಿನ ಮಾಡು. ಆಗ ಅಷ್ಟೊಂದು ಸೋರುತ್ತಿರಲಿಲ್ಲ. ಹುಲ್ಲು ಗೌರವ ತರುವುದಿಲ್ಲ. ಹೆಂಚು ಹಾಕಬೇಕು ಎಂದುಕೊಂಡರು ಅಪ್ಪ. ಹೇಗೋ ಹೆಂಚು ಹೊಂದಿಸಿ, ಬಿದಿರಿನ ರೀಪು, ಗಳ ಹಾಕಿ ಮಾಡು ಮಾಡಿದರು. ಅದು ಮಳೆ ಬಂತೆಂದರೆ ಸಾಕು ಸೋರಿದ್ದೇ ಸೋರಿದ್ದು. ಅಮ್ಮ, ನಾನು ನೀರು ಬೀಳುವಲ್ಲೆಲ್ಲ ಪಾತ್ರೆಗಳನ್ನು ಇಡುತ್ತಿದ್ದೆವು. ಬೇಸಿಗೆಯಲ್ಲೇ ಕಟ್ಟಿಗೆಗೆ ಪರದಾಡುತ್ತಿದ್ದ ನಾವು ಮಳೆಗಾಲದಲ್ಲಿ ಒದ್ದೆ ಚಕ್ಕೆಯ ಹೊಗೆಯಲ್ಲಿ ಉಸಿರುಗಟ್ಟಿಕೊಳ್ಳುತ್ತಿದ್ದೆವು. ಮನೆಯಲ್ಲಿ ರೇಷ್ಮೆ ಬೆಳೆ ಮಾಡುತ್ತಿದ್ದರಿಂದ ಅದರ ಕಟ್ಟಿಗೆಯನ್ನು ಅಮ್ಮ ಕಾಯ್ದುಕೊಂಡಿರುತ್ತಿದ್ದಳು. ಮಳೆಗಾಲಕ್ಕಾಗಿ ಚಾಲಿ ಸಿಪ್ಪೆ, ರೇಷ್ಮೆ ಕಟ್ಟಿಗೆ, ತೆಂಗಿನ ಚಿಪ್ಪು ಮತ್ತು ಸೀಮೆಎಣ್ಣೆ ಒಟ್ಟುಮಾಡಿಟ್ಟುಕೊಳ್ಳುವುದು ನಮ್ಮ ಬೇಸಿಗೆಯ ಆದ್ಯ ಕೆಲಸವಾಗಿತ್ತು. ಆದಾಗ್ಯೂ ಅದೆಷ್ಟು ಮಳೆ ಬರುತ್ತಿತ್ತೆಂದರೆ ಇವತ್ತಿನ ಪ್ರವಾಹ ಬರಿಸುತ್ತಿರುವ 15-20 ಸೆಂ.ಮೀ ಮಳೆ ಅಂದಿನ ನಿತ್ಯದ ಸಂಗತಿಯಾಗಿತ್ತು. ಮಧ್ಯಾಹ್ನ ಪ್ರದೇಶ ಸಮಾಚಾರದ ಕೊನೆಯಲ್ಲಿ ಹೇಳುವ ಹವಾಮಾನ ವರದಿ ನಮಗೆ ಮಾರ್ಗದರ್ಶಿಯಾಗಿತ್ತು.
ಮಲೆನಾಡಿನ ಮಳೆಗಾಲದ ಒಡನಾಟ ಒಮ್ಮೆ ಆದರೆ ಜೀವನದಲ್ಲಿ ಯಾವ ರೀತಿಯ ಮಳೆಗೂ ಜೀವ ಹೆದರುವುದಿಲ್ಲ. ಒಣಗದ ಕಂಬಳಿ ಕೊಪ್ಪೆ, ಒಳ ಉಡುಪುಗಳು, ಮೇಲ್ಹೊದಿಕೆಗಳು, ಉಂಬಳ ಕಚ್ಚಿ ಕೆರೆತ ತರುವ ಕಾಲುಗಳು, ಏಡಿ ಹಿಡಿದು ಸಂತಸಗೊಂಡ ಮನದಲ್ಲೇ ಅವುಗಳಿಂದ ಕಚ್ಚಿಸಿಕೊಂಡ ಉರಿಯುವ ಕೈಗಳು…..ಇವೆಲ್ಲ ಎಂದಿಗೂ ನೆನಪಿನಲ್ಲಿರುವ ಮಳೆಗಾಲದ ಅನುಭವಗಳು. ಗದ್ದೆ ಹಾಳೆಯ ಮೇಲೆ, ಕಾಲು ಸಂಕಗಳ ಮೇಲೆ ಸರ್ಕಸ್ ಮಾಡುತ್ತ ಶಾಲಾ ಕಾಲೇಜುಗಳಿಗೆ ಹೋಗಿ ಬಂದ ಮಕ್ಕಳನ್ನು ಬೆಂಗಳೂರಿರಲಿ, ವಿಶ್ವದ ಯಾವ ರಣ ಬಿಸಿಲು, ಜಡಿಮಳೆ, ಕೊರೆಯುವ ಚಳಿ ಏನೂ ಮಾಡುವುದಿಲ್ಲ ಎಂಬುದು ಸತ್ಯ. ಬದುಕು ಗಟ್ಟಿಗೊಳಿಸುವ ಸಮೃದ್ಧ ಬಾಲ್ಯ ಮಲೆನಾಡಿನ ಮಕ್ಕಳದ್ದು. ತಾಯಂದಿರೆಂತೂ ನಿಜಕ್ಕೂ ದೊಡ್ಡವರು. ಗಂಡ ಜವಾಬ್ದಾರಿಯಿಂದ ಬೆಚ್ಚಗಿನ ಮನೆ, ಗೋಬರ್ ಗ್ಯಾಸ್, ಕಟ್ಟಿಗೆ, ಸೀಮೆಎಣ್ಣೆ, ವಿದ್ಯುತ್, ಅಕ್ಕಿ, ದಿನಸಿಗಳ ವ್ಯವಸ್ಥೆ ಮಾಡಿದರೆ ದೊಡ್ಡ ಪುಣ್ಯವಂತರು. ಹೊರಗಡೆ ಡೇರೆ ಹೂ, ನಾಗದಾಳಿ ಹೂ ಬೆಳೆಸಿಕೊಂಡು, ಅಲ್ಪ ಸ್ವಲ್ಪ ತರಕಾರಿ ಮಾಡಿಕೊಂಡು ಮನೆ ಊಟ, ಕೊಟ್ಟಿಗೆ, ಮಕ್ಕಳ ಕೆಲಸ ಮಾಡಿಕೊಂಡರೆ ಸಾಕು.
ಏನಾದರೂ ಗಂಡ ಬೇಜವಾಬ್ದಾರಿಯಾದರೆ ಅವರ ಹಾಗೂ ಅವರ ಮಕ್ಕಳ ಪಾಡು ದೇವರಿಗೇ ಪ್ರೀತಿ. ಸುರಿಯುವ ಮಳೆ, ಸೋರುವ ಮನೆ, ಉರಿಯದ ಕಟ್ಟಿಗೆ, ಅಳುವ ಮಕ್ಕಳು, ಜ್ವರದಿಂದ ನಡುಗುವ ಕೈಬಿಡದ ಕೂಸು, ಕೊಟ್ಟಿಗೆಯಿಂದ ಹಸಿಹುಲ್ಲಿಗಾಗಿ ಗೋಗರೆಯುವ ಹಸು, ಉಕ್ಕಿ ಹರಿಯವ ಹೊಳೆ, ಹೊಳೆ ದಾಟಿಯೇ ಹೋಗಬೇಕಾದ ಗದ್ದೆ, ತೋಟ, ಅವೋ ನೀರಿನಿಂದ ತುಂಬಿ ದೊಡ್ಡ ಕೆರೆಯಂತಾಗಿರುತ್ತವೆ, ಒಂದೇ ಎರಡೆ.ಅಂತೂ ಮಳೆ ನಿಲ್ಲುವುದನ್ನೇ ನೋಡಿಕೊಂಡು ಹೊಳೆ ದಾಟಿ ಹೋಗಿ ಹುಲ್ಲು ಕೊಯ್ದರೆ ತರಲು ಕಾಲು ಸಂಕವೂ ಸರಿ ಇರದು. ಹೇಗೋ ತಂದು ಹಾಕಿ, ಹಾಲು ಕರೆದು ಒಳಗೆ ಬಂದರೆ ವಿದ್ಯುತ್ ಇಲ್ಲದ ಬರೀ ಕತ್ತಲು. ಸೀಮೆಎಣ್ಣೆ ಇಲ್ಲದೆ ಒಂದೇ ಚಿಮಣಿ ದೀಪದಲ್ಲಿ ರಾತ್ರಿ ಊಟ ಸಿದ್ಧಪಡಿಸಬೇಕು. ಇವುಗಳ ಜೊತೆಗೆ ಶಾಲೆಗೆ ಹೋಗುವ ಮಕ್ಕಳನ್ನು ಹೊತ್ತಿಗೆ ತಯಾರು ಮಾಡಿ ಕಳಿಸಬೇಕು. ಅವರ ಇರುವ ಒಂದೆರಡು ಯೂನಿಫಾರಂನ್ನು ಒಣಗಿಸಿಡಬೇಕು. ಮಳೆಯಲ್ಲಿ ನೆನದು, ಹಸಿದು ಬರುವ ಮಕ್ಕಳಿಗೆ ತಿಂಡಿ ರೆಡಿ ಮಾಡಬೇಕು. ನಿಜವಾಗಿಯೂ ಮಲೆನಾಡಿನ ತಾಯಿ ಮಳೆಗಾಲದಲ್ಲಿ ಸಾಕ್ಷಾತ್ ಭೂಮಾತೆಯೇ ಆಗಿರುತ್ತಾಳೆ.  ಇಂತಹ 21 ಮಳೆಗಾಲಕ್ಕೆ ಸಾಕ್ಷಿಯಾದ ನನಗೆ ಇವತ್ತು ಪ್ರವಾಹದಿಂದ ನರಳುತ್ತಿರುವ ನೆರೆಪೀಡಿತರ ದುಃಖ ಅರ್ಥವಾಗುತ್ತದೆ.
ಇವತ್ತು ನಾನು ಬೆಂಗಳೂರಿನಲ್ಲಿ ಕುಳಿತು ಕಥೆಯಂತೆ ವಿದ್ಯುತ್ ಹಾಗೂ ಇಂಟರ್ನೆಟ್ ಸೌಲಭ್ಯ ಬಳಸುತ್ತ ಅನುಭವ ದಾಖಲಿಸುತ್ತೇನೆಂದಾದರೆ ಅದರಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ನನ್ನ ಬದುಕು ನನ್ನ ಸುತ್ತಲಿನವರ ಬದುಕು ಇಲ್ಲಿಯವರೆಗೆ ಬಂದಿದೆಯೆಂದರೆ ಅದಕ್ಕೆ 60 ವರ್ಷಗಳ ಕಾಂಗ್ರೆಸ್ ಕೊಡುಗೆಯಿದೆ. ಈಗ ನೆರೆ ಬಂದಿದೆ. ನಿಮ್ಮ ಅಗತ್ಯ ಇದೆ ಎಂದು ಆಳುವ ಬಿಜೆಪಿಯವರಿಗೆ ಹೇಳಿದರೆ ಇದಕ್ಕೂ 60 ವರ್ಷಗಳ ಪಾಲಿಸಿ ಕೊರತೆಯೇ ಕಾರಣ ಎಂದು ಕೈತೊಳೆದುಕೊಂಡರೆ ಆಶ್ಚರ್ಯವಿಲ್ಲ. ಮಳೆಗಾಲ ಶುರುವಾದಾಗಿನಿಂದ ಆಳುವ ಸರ್ಕಾರ ಮತ್ತು ಬೀಳಿಸುವ ಸರ್ಕಾರಗಳ ಗುದ್ದಾಟವೇ ಆಗಿದ್ದು ಬಿಟ್ಟರೆ ಮತ್ತೇನನ್ನೂ ನಾನು ನೋಡಿಲ್ಲ, ಕೇಳಿಲ್ಲ. ಕಳೆದ ವರ್ಷ ಕೊಡಗು ಕಲಿಸಿದ ಪಾಠ ತಲೆಗೆ ಹೋಗಿಲ್ಲ. ಹೇಗೆ ಹೋಗುತ್ತದೆ? ಕೈಯಲ್ಲಿ ದುಡ್ಡಿದೆ, ತಲೆ ಮೇಲೊಂದು ಬೆಚ್ಚನೆಯ ಸೂರಿದೆ, ಉಣ್ಣಲು, ತಿನ್ನಲು, ತಿರುಗಾಡಲು ಕೊರತೆಯಿಲ್ಲ. ಎಲ್ಲೋ ನರಳುವ ಜೀವಗಳ ಪರಿತಾಪ, ಬವಣೆಗಳ ಅರಿವಾಗುವುದು ಎಂತು? ಅರಿವಾದರೂ ದೂರುವುದು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿದೆ ಈ ನರದೌರ್ಬಲ್ಯವಿರುವ ರಾಜಕಾರಣಿಗಳಿಂದ. ಅನುಮಾನವಿದೆ.
ಈಗ ನೋಡಿ, ಪ್ರತಿಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಭೇಟಿಕೊಟ್ಟು ರಕ್ಷಣೆಗೆ, ಪರಿಹಾರಕ್ಕೆ, ಸೌಲಭ್ಯ ಕಲ್ಪಿಸುವುದಕ್ಕೆ ಮುಂದಾದ ಯಾವ ವರದಿಯೂ ಕಾಣುತ್ತಿಲ್ಲ. ಬದಲಿಗೆ ಯಡಿಯೂರಪ್ಪ ಎಲ್ಲಿ ಹೋದ್ಯಪ್ಪ? ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ನಿಂಬಾಳ್ಕರ್ ಒಬ್ಬ ಮಹಿಳೆ ಅದೂ ಅವರಿಗೆ ಸಂಬಂಧಿಸಿದ ಮನೆಯ ಕೆಳಮಹಡಿಯಲ್ಲಿ ನೀರು ತುಂಬಿದ ನಂತರ ಹೇಳಿಕೆ ನೀಡಿದ್ದು ಬಿಟ್ಟರೆ ಯಾವೊಬ್ಬರೂ ಪತ್ತೆ ಇಲ್ಲ. ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರವಾಹ ಪರಿಹಾರ ಧನ ಕೇಳಿದ್ದು ಬಿಟ್ಟರೆ ಮತ್ತೇನೂ ಕಾರ್ಯ ಕಾಣುತ್ತಿಲ್ಲ. ದೆಹಲಿಯ ವರಿಷ್ಠರೊಂದಿಗೆ ಅವರದ್ದೇ ವೈಯಕ್ತಿಕ ಹೋರಾಟದಲ್ಲಿ ಮುಳುಗಿಹೋಗಿದ್ದಾರೆ. ಮಂತ್ರಿಗಳು ಹುಲಿ ಹಿಡೀಲಿ, ಆಡಳಿತವೇ ಕುಸಿದು ಹಕ್ಕಲೆದ್ದು ಹೋಗಿದೆ.
ಅಲ್ಲೆಲ್ಲೋ ಋತುಮತಿಯಾದ ಮಹಿಳೆ ಪ್ಯಾಡ್ ಇಲ್ಲದೆ ಒದ್ದಾಡುತ್ತಿರಬಹುದು. ನೀರಿನಲ್ಲಿ ಮುಳುಗಿ ಹೋಗುತ್ತಿರುವವರಿಗೆ ರಕ್ಷಣೆ ಮಾಡುವವರು ಬೇಕು. ಹಸಿದ ಮಕ್ಕಳಿಗೆ ಹೊಟ್ಟೆಗೆ ಬೇಕು. ಬಾಣಂತಿಯರಿಗೆ ಸಾವು ಬದುಕಿಗಿಂತಲೂ ಅಪ್ಯಾಯಮಾನವಾಗಿ ಕಂಡರೆ ಆಶ್ಚರ್ಯವಿಲ್ಲ. ದವಸ, ಧಾನ್ಯಗಳೆಲ್ಲ ಒದ್ದೆಯಾಗಿ ನೀರುಪಾಲಾಗಿವೆ, ಮನೆ ಇಲ್ಲ, ಮಠವೂ ನೀರಿನಲ್ಲಿ ಮುಳುಗಿದೆ. ಸಾಲ, ಸೋಲ ಮಾಡಿ ಗದ್ದೆ ನಾಟಿಗೆ ತಯಾರು ಮಾಡಿದ್ದರೆ, ಮನೆ ಕಟ್ಟಿಸಿದ್ದರೆ ಆ ಯಜಮಾನನ ಕತೆ ಏನು? ಏಲ್ಲಿಗೆ ಹೋಗಲಿ ಎನ್ನುವ ಅಂತರಂಗದ ಆರ್ತನಾದ ಕೇಳುವವರಿಲ್ಲ. ಇಂತಹ ಸೌಭಾಗ್ಯಕ್ಕೆ ನಮಗೆ ಸರ್ಕಾರಗಳು ಬೇಕು. ಜನಪ್ರತಿನಿಧಿಗಳು ಬೇಕು, ಉಳ್ಳವರು ಕೈಲಾಗುವ ಜನರು ಬೇಕು. ಒಮ್ಮೊಮ್ಮೆ ನನಗೆ ನನ್ನ ಮೇಲೂ ಸಿಟ್ಟು ಬರುತ್ತದೆ. ಇಂತಹ ಪರಿಸ್ಥಿತಿಗೆ ಯಾರೂ ಹೊಣೆಯಲ್ಲ. ಬದುಕಿನಲ್ಲಿ ಇವೆಲ್ಲ ಅನಿವಾರ್ಯ. ಇಂತಹ ಅನಿವಾರ್ಯತೆಗಳು ಯಾರಿಗೂ ಬರಬಹುದು. ಆಗೆಲ್ಲ ಉಳಿದುಕೊಳ್ಳುವ ಪ್ರಶ್ನೆ ``ಮಾನವೀಯತೆ ಉಳಿದಿದೆಯಾ? ‘’ಎಂಬುದು ಮಾತ್ರ.



ಶುಕ್ರವಾರ, ಜುಲೈ 5, 2019

ಪ್ರಾಣಿಪ್ರಪಂಚದ ನೆನಪುಗಳು


ಪ್ರಾಣಿಪ್ರಪಂಚದ ನೆನಪುಗಳು
ಇವತ್ತು ಮಧ್ಯಾಹ್ನದ ಗಾಢನಿದ್ದೆಯ ನಂತರ ಎದ್ದಾಗ ಏನೂ ಸದ್ದಿರಲಿಲ್ಲ. ಮುಖ ತೊಳೆದು ಕೂದಲು ಬಾಚಿ ಹಾಗೆ ಮತ್ತೊಂದು ರೂಮಿಗೆ ಕಾಲಿಡುತ್ತೇನೆ, ಬೆಕ್ಕಿನ ಮರಿಯೊಂದು ಬೆವರು ಆರಲೆಂದು ಮಂಚದ ಮೇಲೆ ಹರವಿಟ್ಟ ನನ್ನ ಚೂಡಿದಾರದ ಮೇಲೆ ಹಾಯಾಗಿ ಮಲಗಿದೆ. ಅದರಮ್ಮ ಮಂಚದ ಕೆಳಗೆ. ಬಹುಷಃ ಹೊರಗೆ ಮಳೆ. ಚಳಿಯಾಗಿರಬೇಕು. ಯಾರೂ ಹೇಳಿ ಕೇಳಿ ಮಾಡುವುದಿಲ್ಲ ಎಂತಲೋ ಬಂದು ಹಾಯಾಗಿ ಕುಳಿತಿವೆ. ಇವತ್ತು ಮಾತ್ರವಲ್ಲ, ಈ ಮರಿ ಹಾಕಿದ್ದೂ ನಮ್ಮ ಮನೆಯ ಕಿಟಕಿ ಸಜ್ಜಾದ ಮೇಲೆಯೆ. ನಾವು ಮಲಗುವುದನ್ನೇ ಕಾದು ಮನೆಯೊಳಗೆ ದಾಳಿ ಇಡುತ್ತವೆ. ಮರಿಗೆ ಹಾಲು ಹಾಕಿದರೆ ಕುಡಿಯಲು ತಿಳಿಯದು, ಅದರಮ್ಮ ಕುಡಿದು ಓಡಿಹೋಗುತ್ತದೆ. ಬೆಚ್ಚಗೆ ಮಲಗಿ ಅಂತ ನನ್ನ ಹಳೆಯ ಕಾಟನ್ ಬಟ್ಟೆಯೊಂದನ್ನು ಹಾಸಿಕೊಟ್ಟರೆ ಮಲಗಲು ಅವಕ್ಕೆ ಭಯ. ಮಂಚದ ಮೇಲೆ ಸಾಕಷ್ಟು ಬಟ್ಟೆಗಳು ಬಿದ್ದು ಹೊರಳಾಡುತ್ತಿದ್ದರೂ ನನ್ನ ಹೊಸ ಬಟ್ಟೆಯೇ ಆಗಬೇಕು ಮರಿಬೆಕ್ಕಿಗೆ.
ಇವಕ್ಕೆ ಮಾತ್ರವಲ್ಲ. ನನ್ನ ಜೊತೆಗೆ ಮನೆ ಕಾಯಲು ನಾಯಿಯೊಂದಿತ್ತು. ಅದರ ಹೆಸರು ಟಿಪ್ಪು. ಹೈಸ್ಕೂಲಿಗೆ ಹೋಗುವಾಗ ಅದು ಬೆಳಿಗ್ಗೆ ಮೊದಲು ತಿಂಡಿ ತಿನ್ನುತ್ತಿರಲಿಲ್ಲ. ನನ್ನನ್ನು 2 ಕಿ.ಮೀ ದೂರದಲ್ಲಿನ ಹೈಸ್ಕೂಲ್ ವರೆಗೆ ಗದ್ದೆ, ಕಾಡು, ರಸ್ತೆ ಹೀಗೆ ಯಾವ ದಾರಿಯಲ್ಲಿ ಹೋದರೂ ಜೊತೆಗೆ ಬರುತ್ತಿತ್ತು. ಒಂದೊಮ್ಮೆ ನನಗಿಂತ ಸ್ವಭಾವ ಸಹಜ ಮುಂದೆ ಓಡಿ ಹೋಗಿಬಿಟ್ಟಿದ್ದರೆ ನಾನು ಬರುವವರೆಗೆ ನಿಂತು ಕರೆದುಕೊಂಡು ಹೋಗುತ್ತಿತ್ತು. ಹೈಸ್ಕೂಲಿಗೆ ಹೋಗಿ ಪ್ರಾರ್ಥನೆ ಮುಗಿಯುವವರೆಗೆ ಕಾದು, ಕ್ಲಾಸಿಗೆ ಹೋಗಿ ಕುಳಿತೆನೋ ಎಂದು ನೋಡಿಕೊಂಡು ಮನೆಗೆ ಹೋಗಿ ತಿಂಡಿ ತಿನ್ನುತ್ತಿತ್ತು. ಅಮ್ಮನಿಲ್ಲದಾಗ ನಾನು ಹೈಸ್ಕೂಲಿಗೆ ಹೊರಡುವ ಮೊದಲು ಹಾಕುತ್ತಿದ್ದೆ. ಆಗೆಲ್ಲ ತನ್ನ ಊಟವನ್ನು ಹಾಗೆಯೇ ಬಿಟ್ಟು ನನ್ನನ್ನು ಬಿಟ್ಟೇ ಅದು ಮರಳಿ ಹೋಗಿ ತಿನ್ನುತ್ತಿತ್ತು. ನಾನು ಮನೆಯಲ್ಲಿರುವಾಗ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ನಮ್ಮ ಮನೆಯ ಅಂಗಳಕ್ಕೆ ನಾಗರಹಾವು ಬರುತ್ತಿತ್ತು. ಅದು ಮತ್ತು ಈ ಟಿಪ್ಪು ಆಡುತ್ತಿದ್ದವೋ, ಜಗಳ ಮಾಡುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ. ಇದು ಬೌಬೌ ಎಂದು ಕೂಗುತ್ತ ಅತ್ತ ಇತ್ತ ಓಡುತ್ತಿದ್ದರೆ, ಹಾವು ತಲೆ ತೂಗುತ್ತ ಬುಸ್ ಬುಸ್ ಗುಡುತ್ತ ಅಂಗಳ ತುಂಬ ಗದ್ದಲವೆಬ್ಬಿಸುತ್ತಿದ್ದವು. ಟಿಪ್ಪುವಿಗೂ ನನ್ನ ಚಪ್ಪಲಿಗಳೆಂದರೆ ಬಹಳ ಇಷ್ಟ. ನನ್ನ ಚಪ್ಪಲಿ ಹುಡುಕಿಕೊಂಡು ಕತ್ತರಿಸಿಹಾಕುತ್ತಿತ್ತು. ಅದು ಬಿಟ್ಟರೆ ಒಂದೆರಡು ಸಲ ಅಪ್ಪನ ಚಪ್ಪಲಿ ಕತ್ತರಿಸಿತ್ತು. ಅಪ್ಪ ಸರಿಯಾಗಿ ಬಾರಿಸಿದ ಮೇಲೆ ಅಪ್ಪನ ಚಪ್ಪಲಿ ಬಿಟ್ಟು ಸದಾ ನನ್ನ ಚಪ್ಪಲಿಯನ್ನೇ ತಿನ್ನುತ್ತಿತ್ತು. ಅಪ್ಪ ನನ್ನ ಚಪ್ಪಲಿಯಲ್ಲೂ ಅದಕ್ಕೆ ಒಮ್ಮೆ ಹೊಡೆದು ನೋಡಿದ. ಆದರೆ ಅದು ಮಾತ್ರ ನನ್ನ ಚಪ್ಪಲಿ ಕತ್ತರಿಸಿದರೇ ಸಮಾಧಾನ ಎನ್ನುವಂತಿತ್ತು. ನನಗಾದರೋ ಬರಗಾಲದಲ್ಲಿ ಮಗ ಉಣ್ಣುವುದನ್ನು ಕಲಿತಂತೆ, ಬರಿಗಾಲಿನಲ್ಲಿ ಗದ್ದೆ, ಕಾಡು ದಾಟಿ ಶಾಲೆಗೆ ಹೋಗುವುದ ಹೇಗೆ? ಒಂದು ಹಳೆ ಚಪ್ಪಲಿ, ಮತ್ತೊಂದು ಕಾಲಿಗೆ ಇನ್ನೊಂದು ಚಪ್ಪಲಿ ಇಜ್ಜೋಡಿ ಹಾಕಿಕೊಂಡು ಶಾಲೆಗೆ ಹೋದ ದಿನಗಳು ಇನ್ನೂ ಮರೆತಿಲ್ಲ.
ಮನೆಯಲ್ಲಿ ಹಸುವೊಂದಿತ್ತು. ಬಹುಷಃ ಅದಿಲ್ಲದಿದ್ದರೆ ನಾನು ಹಾಲು ಕರೆಯುವುದನ್ನು ಕಲಿಯುತ್ತಿರಲಿಲ್ಲ. ಎಂತಹ ಅಪರೂಪದ ಹಸುವೆಂದರೆ ಒಮ್ಮೆ ಕರು ಹಾಕಿದ್ದು ಸರಿ ಸುಮಾರು 5 ವರ್ಷ ಹಾಲು ಕೊಡುತ್ತಿತ್ತು. ಅದರ ಕೆಳಗೆ ಮಲಗಿಕೊಂಡು ಹಾಲು ಕರೆದರೂ ಕೊಡುತ್ತಿತ್ತು. ಹಾಗಾಗಿ ಅಪ್ಪ, ಅಮ್ಮ ಇಲ್ಲದಾಗ ಹಾಲು ಕರೆಯುವುದು ನನ್ನ ಪಾಲಾಗಿತ್ತು. ನಾನು ಬೆಂಗಳೂರಿಗೆ ಬಂದ ನಂತರವೂ ಮನೆಗೆ ಹೋದಾಗ ಅದು ಅದರ ಮಕ್ಕಳು ತೋರುತ್ತಿದ್ದ ಪ್ರೀತಿಗೆ ಯಾವ ಮನುಷ್ಯರ ಪ್ರೀತಿಯೂ ಸಾಟಿಯಾಗದು.
ಇನ್ನು ಬೆಂಗಳೂರಿನ ನಾಯಿಗಳದ್ದು ಒಂದು ಕಥೆ. 2002ರಲ್ಲಿ ಎಂ.ಎನ್.ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಶಿಫ್ಟ್ ಕೆಲಸ. ಬೆಳಗಿನ ಪಾಳಿಯಿತ್ತು. ಚಾಮರಾಜಪೇಟೆಯ ಕೋತಿ ಪಾರ್ಕ್ ನ ಹತ್ತಿರ ನನ್ನ ಮನೆಯಿತ್ತು. ಮೈಸೂರು ಸರ್ಕಲ್ ಗೆ ಬೆಳಿಗ್ಗೆ 5 ಗಂಟೆಗೆ ನನ್ನ ಕ್ಯಾಬ್ ಬರುತ್ತಿತ್ತು. ನಾನು 4.45ಕ್ಕೆಲ್ಲ ಹೊರಡುತ್ತಿದ್ದೆ. ಸಾಮಾನ್ಯವಾಗಿ ನಿರ್ಜನವಾಗಿರುತ್ತಿತ್ತು. ಒಮ್ಮೆ ಇಡೀ ರಸ್ತೆಯ ತುಂಬ ನಾಯಿಗಳು. ನಾನು 2ನೇ ಮಹಡಿಯಿಂದ ಕೆಳಗೆ ಬರುವುದನ್ನೇ ಕಾಯುತ್ತಿದ್ದವೋ ಎನ್ನುವಂತೆ ಒಂದು ಹತ್ತೆನ್ನರಡು ನಾಯಿಗಳು ಬೆನ್ನಟ್ಟಿಬಿಟ್ಟವು. ನಾನು ಹೆದರದೆ ಸುಮ್ಮನೆ ಹೋಗುವುದೊಂದನ್ನೇ ಮಾಡಿದೆ. ಆಗ ಹಿಂದಿನಿಂದ ಒಂದು ದುಪಟ್ಟಾ ಎಳೆಯಿತು. ಪಕ್ಕಕ್ಕೆ ಇನ್ನೊಂದು ಬಂದು ಬ್ಯಾಗ ಕಸಿಯಲು ಬಂತು. ವಿಚಿತ್ರವೆಂದರೆ ಒಂದೂ ನನ್ನ ಮೇಲೆ ದಾಳಿ ಮಾಡಲಿಲ್ಲ. ನಾನು ಆ ಕ್ಷಣಕ್ಕೆ ಏನನ್ನಿಸಿತೋ ಏನೋ. ಇದ್ದಕ್ಕಿದ್ದಂತೆ ದೊಡ್ಡ ದನಿಯಲ್ಲಿ ಏ ಹೋಗ್ರೋ. ಬಿಡಿ ನನ್ನ ಬ್ಯಾಗು, ದುಪಟ್ಟಾ. ಹೋಗಿ ಅಂದು ಕೂಗು ಹಾಕಿದೆ. ಅದೇನಾಯಿತೋ. ಅಷ್ಟೂ ನಾಯಿಗಳೂ ಹಿಂದಕ್ಕೆ ಸರಿದು ಸುಮ್ಮನೆ ಹೋಗಿಬಿಟ್ಟವು. ಯೋಚಿಸಿ, ಅವುಗಳ ಜಾಗದಲ್ಲಿ ಮನುಷ್ಯರಿದ್ದರೆ ನನ್ನನ್ನು ಬಿಡುತ್ತಿದ್ದರಾ? ನಿಜವಾಗಿಯೂ ಈ ಪ್ರಾಣಿಗಳಿಗೆ ನನ್ನ ಮೇಲೆ ಅದೇಕೆ ಅಷ್ಟು ಪ್ರೀತಿ? ಗೊತ್ತಿಲ್ಲ.
ಹಾಗೆ ನಾನು ಮದುವೆಯಾಗಿ ಗೂಡೊಂದು ಆದಾಗ ನಮ್ಮ ಮನೆಯ ಬಾಲ್ಕನಿಯಲ್ಲಿ ಪಾರಿವಾಳಗಳ ಪ್ರೀತಿಯ ಜಾತ್ರೆ. ಮಗು ಮಾಡಿಕೊಂಡು ಬೆಳೆಸಿಯೇ ತೀರುವ ಹಠ. ಕೋತಿಗಳಿಗೆ ನಮ್ಮ ಮನೆಯ ಸೌತೆಕಾಯೇ ಆಗಬೇಕು. ನಾನು ಪಕ್ಕದ ಮನೆಯವರೊಂದಿಗೆ ದೂರು ಹೇಳಿಕೊಳ್ಳುತ್ತಿದ್ದೆ. “ನೋಡಿ ನಿಮ್ಮ ಮನೆಯಲ್ಲಿ ಸ್ವಲ್ಪವೂ ದಾಂಧಲೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ನಿತ್ಯ ಇವುಗಳ ಗಲೀಜು ಸ್ವಚ್ಛ ಮಾಡುವುದೇ ಆಗಿದೆ.” ಅದಕ್ಕೆ ಅವರು ಹೇಳುತ್ತಿದ್ದರು, “ನಮ್ಮ ಮನೆಯಲ್ಲೂ ಬಂದ ಶುರುವಿನಲ್ಲಿ ಮೊಟ್ಟೆ ಇಟ್ಟಿತ್ತು. ನಾನು ಗೂಡಿನ ಸಮೇತ ಎಸೆದು ಬಿಟ್ಟಿದ್ದೆ. ಅಷ್ಟರ ನಂತರ ಬರಲಿಲ್ಲ.” ಇರಬಹುದು. ನಾವು ಆ ಮನೆ ಬಿಟ್ಟು ಮತ್ತೊಂದು ಮನೆಗೆ ಬಂದಾಗ ಒಂದಿಡೀ ಬಾಲ್ಕನಿಯನ್ನು ಪಾರಿವಾಳಗಳ ಸಂಸಾರಕ್ಕೇ ಬಿಟ್ಟುಕೊಟ್ಟಿದ್ದೆವು. ಅವುಗಳ ಗಲೀಜಿನಿಂದ ಹುಳುಗಳು ಮನೆಯೊಳಗೆ ಬರತೊಡಗಿದಾಗ ವರ್ಷದ ಮಗನಿದ್ದಾನೆಂದು ಸ್ವಚ್ಛ ಮಾಡಿಸಿ ಜಾಲರಿ ಹಾಕಿಕೊಂಡೆವು. ಅಲ್ಲಿ ತನಕ 25ಕ್ಕೂ ಹೆಚ್ಚು ಪಾರಿವಾಳಗಳು ಹುಟ್ಟಿ ಬೆಳೆದು ಹಾರಿ ಹೋದವು. ಹುಟ್ಟಿ ಬೆಳೆದ ಮನೆಯನ್ನು ಮರೆಯಲು ಸಾಧ್ಯವಿಲ್ಲವೆಂಬಂತೆ ಬಾಗಿಲು ತೆಗೆದರೆ ಸಾಕು ಮನೆಯೊಳಗೆ ಬಂದು ಹೊರಹೋಗಲು ದಾರಿ ಕಾಣದೆ, ನನ್ನ ಮಗನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಸದರ ಬೆಳೆಯಲು ಕಾರಣವಾದವು. ಈಗ ಅವನಿಗೆ ಪಾರಿವಾಳ, ನಾಯಿ, ಬೆಕ್ಕು, ಹಾವು ಯಾವುದರ ಭಯವೂ ಇದ್ದಂತಿಲ್ಲ.
ನಿನ್ನೆಯಾದರೂ ಅಷ್ಟೆ. ಬೆಕ್ಕು ನನಗೆ ಹೊಸತು. ಅದೂ ಅಮ್ಮ ಬೆಕ್ಕು ಭಾರೀ ಇದೆ. ತನ್ನ ಮಗನೋ, ಮಗಳೋ ಬಗ್ಗೆ ವಿಪರೀತ ರಕ್ಷಣಾತ್ಮಕವಾಗಿದೆ. ಅದನ್ನು ನೋಡಿ ನನಗೆ ಹೆದರಿಕೆ. ನನ್ನ ಮಗ ಅಮ್ಮ ಬೆಕ್ಕು ಜೊತೆ ಆಡಲು ಬಂದಿದೆ ಎಂದು ತೊದಲು ನುಡಿಯುತ್ತಿದ್ದರೆ ನನಗೆ ಸೋಜಿಗ! ಕೊನೆಯಲ್ಲೊಂದು ಭಾರೀ ನೆನಪು.
ಹೈಸ್ಕೂಲಿಗೆ ಹೋಗುವಾಗ ದಿನ ಸಂಜೆ ಹಂಡೆಗೆ, ಎಲ್ಲ ಕಡೆ ಬಾವಿಯಿಂದ ನೀರು ಸೇದಿ ತುಂಬಿಸಬೇಕಿತ್ತು. ಹದ ಮೂರು ಸಂಜೆಯ ಹೊತ್ತು. ನಾನು ಎಂದಿನಂತೆ ಹೇ ಪಾಂಡುರಂಗಾ ಪ್ರಭೋ ವಿಠಲ ಎನ್ನುತ್ತ ಭಾರಿ ಜೋಶ್ ನಲ್ಲಿ ಭಕ್ತಿ ಪರವಶಳಾಗಿ ನೀರು ಸೇದುತ್ತಿದ್ದೆ. ಕೊಡಪಾನ ಮೇಲೆ ಬಂತು. ಹಾಡುತ್ತ ಕೊಡಕ್ಕೆ ಕೈಹಾಕಿದೆ. ತಣ್ಣಗಾಯಿತು. ನೋಡಿದರೆ ಸಣ್ಣ ಹಾವು ಕಂಠಕ್ಕೆ ಸುತ್ತಿಕೊಂಡು ತಲೆಯೆತ್ತಿ ನಿಂತಿದೆ. ಅಮ್ಮಾ ಅಂದಿದ್ದಷ್ಟೆ. ಹಗ್ಗ ಕೈಬಿಟ್ಟಿತ್ತು, ಕೊಡ ಬಾವಿ ತಳ ಸೇರಿತ್ತು. ಅಮ್ಮ ಬಂದು , ಕೊಡ ಎತ್ತಿ, ಕೋಲಲ್ಲಿ ಈಚೆಗೆ ಎಳೆದು ಕಟ್ಟೆಯ ಮೇಲಿಟ್ಟಳು. ಹಾವು ಹರಿಯುತ್ತ ಹೋಯಿತು. ಹೊರಗೆ ಬಂದ ಮೇಲೆ ಅದೊಂದು ವಿಷದ ಹಾವೆಂದು ತೋರಿದಾಗ ಮಕ್ಕಳು , ಮರಿ ಇದಾವೆ ಎಂದು ಅಮ್ಮ ಹೊಡೆದು ಸಾಯಿಸಿದರು. ಹಾಗೆ ನಮ್ಮ ಮನೆಯಲ್ಲಿ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತಿನ ಬದುಕಿನ ಪಾಠ ದೊರೆತಿದ್ದು ಇಂದು ಯಾವುದಕ್ಕೂ , ಯಾರಿಗೂ ಹೆದರದ ಧೈರ್ಯ ಕೊಟ್ಟಿದೆಯಾ?


ಸೋಮವಾರ, ಜನವರಿ 2, 2017

ಭಾರತೀಯ ಪ್ರಜೆ- ಅತ್ತ ದರಿ ಇತ್ತ ಪುಲಿ !?

ಕಳೆದೆರಡು ತಿಂಗಳ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಿತು. ಆಗ ಅಲ್ಲಿಯ ಪ್ರಜೆಗಳ ಮುಂದೆ ಎರಡು ಆಯ್ಕೆ ಇತ್ತು. ಒಂದು ಶಿಷ್ಟಾಚಾರದ ಭಾಷೆ ಗೊತ್ತಿಲ್ಲದ, ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವ, ತೆರಿಗೆ ಬಾಕಿ ಉಳಿಸಿಕೊಂಡ, ಮೂಲಭೂತವಾದಿ ಎನಿಸುವ ಡೊನಾಲ್ಡ್ ಟ್ರಂಪ್ ಒಂದೆಡೆಯಾದರೆ, ಭಯೋತ್ಪಾದನೆಗೆ ಪರೋಕ್ಷ ಸಹಾಯ ಮಾಡಿದ ಆರೋಪ ಹೊತ್ತ ಹಿಲರಿ ಕ್ಲಿಂಟನ್ ಇನ್ನೊಂದೆಡೆ. ಇಬ್ಬರನ್ನು ಆಯ್ಕೆ ಮಾಡಿದ ಪಕ್ಷಗಳಲ್ಲಿ ಸಹ ಇವರಿಬ್ಬರ ಹೊರತಾಗಿ ಬೇರೆ ಉತ್ತಮ ಆಯ್ಕೆಗಳು ಇರಲಿಲ್ಲ ಎಂಬುದು ಮೊದಲನೆ ಅಚ್ಚರಿಯ ವಿಷಯ. ಇವರಿಬ್ಬರಲ್ಲಿ ಒಬ್ಬರನ್ನು ಆರಿಸಲೇಬೇಕಾದ ಅನಿವಾರ್ಯತೆ ಜಗತ್ತಿನ ದೊಡ್ಡಣ್ಣ ಹಾಗೂ ಜಗತ್ತಿಗೆ ಮಾದರಿ ಎನಿಸಿದ ಅಮೆರಿಕನ್ನರದಾಗಿತ್ತು ಎಂಬುದು ಎರಡನೆಯ ಅಚ್ಚರಿಯ ವಿಷಯ.
ಈಗ ನನ್ನನ್ನು ಕಾಡುತ್ತಿರುವುದು ಭಾರತದ ಭವಿಷ್ಯದಲ್ಲಿರುವ ಇಂತಹುದೇ ಪರಿಸ್ಥಿತಿಯ ಕಲ್ಪನೆ. ಕಳೆದ ಲೋಕಸಭಾ ಚುನಾವಣೆ ಇದಕ್ಕಿಂತ ಹೊರತಾಗಿಯೇನೂ ಇರಲಿಲ್ಲ. ಅದು ನೇರವಾಗಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯ ನಡುವಿನ ಸಮರವಾಗಿತ್ತು. ಆದರೆ ನಾವು ದಕ್ಷತೆ, ಜನಪ್ರಿಯತೆ, ಕಾರ್ಯಕ್ಷಮತೆ, ದೇಶಭಕ್ತಿ, ಬ್ರಹ್ಮಚರ್ಯ, ಕುಟುಂಬದ ಹೊರತಾದ ರಾಜಕಾರಣ, ಬಡತನದ ಹಿನ್ನೆಲೆ ಹೀಗೆ ಸಾಕಷ್ಟು ವಿಷಯದಲ್ಲಿ ಸೈ ಎನಿಸಿಕೊಂಡ ಅಭ್ಯರ್ಥಿಯಾಗಿ ಮೋದಿಯವರನ್ನು ಆಯ್ಕೆ ಮಾಡಿದೆವು. ಆ ನಂತರದ್ ಈ ಎರಡು ವರ್ಷಗಳಲ್ಲಿ ಮೋದಿಯವರ ಇನ್ನೊಂದು ಮುಖ ಕೂಡ ಬಹಿರಂಗಗೊಂಡಿದೆ. ಅವೆಂದರೆ ಜನಪ್ರಿಯತೆಯ ದಾಹ, ಸರ್ವಾಧಿಕಾರದ ಮನೋಭಾವ, ದೂರದರ್ಶಿತ್ವ ಇಲ್ಲದ ಅಥವಾ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬೇಕಾದ ಹಲವು ಗೇಮ್ ಪ್ಲಾನ್ ,  ಅದೂ ಸಾಮಾನ್ಯ ಜನರ ಜೀವನದ ಬೆಲೆ ತೆತ್ತು! , ಸ್ವಜನಪಕ್ಷಪಾತ ....ನಿಜವಾಗಿಯೂ ಭ್ರಮನಿರಸನ.
ಇನ್ನು ರಾಹುಲ್ ಗಾಂಧಿ!? ಅಮ್ಮನ ಸೆರಗಿಂದ ಅಪ್ಪ, ಅಜ್ಜಿ, ಮುತ್ತಜ್ಜನ ನೆರಳಿಂದ ಹೊರಬಂದು ಆಗಷ್ಟೆ ಅಂಬೆಗಾಲಿಡುತ್ತಿರುವ ಹಸುಳೆಯಂತಹ ವ್ಯಕ್ತಿತ್ವ. ಒಂದೆಡೆ ಶಿಸ್ತಿನ ಗರಡಿಯಲ್ಲಿ ಪಳಗಿ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಭಾರತೀಯ ಜನತಾ ಪಕ್ಷದ ಧುರೀಣರು, ಇನ್ನೊಂದೆಡೆ ಅಶಿಸ್ತಿನ ಪರಮಾವಧಿ, ಅಸಂಘಟಿತ ಮನೋಭಾವದ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ಎದುರಾಳಿಗಳು. ಸ್ವತಃ ಶಿಸ್ತು, ಯೋಜನೆ, ಮುಂದಾಲೋಚನೆ, ಮಹತ್ವಾಕಾಂಕ್ಷೆ ಯಾವುದೂ ಇಲ್ಲದ ರಾಹುಲ್ ಗಾಂಧಿ ಈ ಅಶಿಸ್ತಿನ ಹಿಂಬಾಲಕರನ್ನು ತರಬೇತಿ ನೀಡುವ ಆಲೋಚನೆಯನ್ನೂ ಮಾಡಿರಲಿಕ್ಕಿಲ್ಲ. ಆದ್ದರಿಂದ ಇನ್ನು ಕೆಲವು ದಶಕಗಳ ಕಾಲ ಭಾರತೀಯ ಜನತಾ ಪಕ್ಷವೇ ದೇಶದ ಜನತೆಗೆ ಅನಿವಾರ್ಯ ಎನ್ನುವುದು ಅಸಹಾಯಕತೆಯೂ ಹೌದು.
ಈ ಮಧ್ಯೆ ಪ್ರಾದೇಶಿಕ ಪಕ್ಷಗಳು, ಆಮ್ ಆದ್ಮಿ ಪಾರ್ಟಿ ಎಲ್ಲವೂ ಸ್ವಲ್ಪ ನಿರೀಕ್ಷೆ ಹುಟ್ಟಿಸಿದ್ದು ನಿಜ. ಆದರೆ ಅವೂ ಕೂಡ ಯಾವುದೇ ಶಿಸ್ತು, ಯೋಜನೆ ಇಲ್ಲದೆ, ನಾಯಕರನ್ನು, ನಾಯಕತ್ವವನ್ನು ಬೆಳೆಸದೆ ಬರೀ ಹಗಲುಗನಸು ಕಾಣುವ ಪಕ್ಷಗಳಾಗಿವೆ. ಇದೂ ಸಹ ಮುಂದೆ ಭಾರತೀಯ ಜನತಾ ಪಕ್ಷದ ಸರ್ವಾಧಿಕಾರದ ಮುನ್ಸೂಚನೆಯಾಗಿದೆ.
ಸರ್ವಾಧಿಕಾರವೆಂದು ಯಾಕೆ ಹೇಳುತ್ತಿದ್ದೇನೆಂದರೆ, ಈ ಪಕ್ಷದ ಮುಖ್ಯ ಭೂಮಿಕೆಯಲ್ಲಿರುವವರು ಮೇಲ್ಜಾತಿಯ ಜನ. ಈಗ ಮೋದಿಯವರಲ್ಲಿ ಕಾಣುತ್ತಿರುವ ದೌರ್ಬಲ್ಯಗಳು ಈ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಉಳಿದ ನಾಯಕರಲ್ಲೂ ಇರುವ ಸಾಮಾನ್ಯ ಮನೋಭಾವ. ಇದರಿಂದ ದೇಶಭಕ್ತಿ ಎಂಬುದು ಚುನಾವಣೆಯ ಸರಕಷ್ಟೆ. ಬದಲಾಗಿ ಬರೆದಿಟ್ಟುಕೊಳ್ಳಿ, ಇನ್ನು ಮುಂದೆ ನಾವೆಲ್ಲ ಎಲ್ಲೆಲ್ಲೂ ಸ್ವಜನಪಕ್ಷಪಾತ, ದುರ್ಬಲರ ಮೇಲೆ ಮಿತಿಯಿಲ್ಲದ ದೌರ್ಜನ್ಯ, ಅಧಿಕಾರದ ಆಟಾಟೋಪವನ್ನು ಕಾಣಬಹುದು.
ನೋಟು ಅಮಾನ್ಯೀಕರಣದ ವಿಷಯವನ್ನೇ ತೆಗೆದುಕೊಂಡಾಗ ಈಗಾಗಲೇ ಜನರ ದಿಕ್ಕು ತಪ್ಪಿಸುವ ರೀತಿ ನೋಡಿ ದಂಗಾಗಿದ್ದೇವೆ. ಜನಸಾಮಾನ್ಯರ, ದುರ್ಬಲರ ತುಳಿತ ಆರಂಭವಾಗಿದೆ. ಜಿಎಸ್ ಟಿ, ಕ್ಯಾಶ್ ಲೆಸ್ ಎಕಾನಮಿ ತಂದು ಇಡೀ ದೇಶದ ಆರ್ಥಿಕತೆಯನ್ನು ದೂರದಲ್ಲಿರುವ ಉಪಗ್ರಹಗಳ ನಿಯಂತ್ರಣಕ್ಕೆ ಒಪ್ಪಿಸುತ್ತಿದ್ದೇವೆ. ಒಂದು ದಿನ ಜಿಹಾದಿಗಳು, ಐ ಎಸ್ ಉಗ್ರಗಾಮಿಗಳಂತಹವರು ಒಂದು ಸಣ್ಣ ಹೊಡೆತದಲ್ಲಿ ಇಡೀ ದೇಶದ ಆರ್ಥಿಕತೆಯ ನಿಯಂತ್ರಣ ಪಡೆಯಬಹುದಾಗಿದೆ. ಇವತ್ತಿನ ಸುದ್ದಿಯಂತೆ ಭಾರತದ ಸೈನ್ಯಕ್ಕೆ ಸಂಬಂಧಿಸಿದ ವೆಬ್ ಸೈಟ್ ಹ್ಯಾಕ್ ಆಗಿದ್ದು, ಅದರಲ್ಲಿ ಪ್ರಧಾನಿ ವಿರುದ್ಧ ಕೀಳಾಗಿ ಬರೆಯಲಾಗಿದೆ ಎಂಬುದನ್ನು ಎಷ್ಟು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಗೊತ್ತಿಲ್ಲ. ಆದಾಗ್ಯೂ ನೋಟ್ ಪ್ರಿಂಟ್ ಮಾಡಲಾಗದ ಅಸಹಾಯಕತೆ ಮುಚ್ಚಿಕೊಳ್ಳಲು ಸಾಮಾನ್ಯ ಜನರನ್ನು ಕ್ಯಾಶ್ ಲೆಸ್ ಗೆ ತಂದು ಹಾಕಿ, ಇಡೀ ದೇಶದ ವ್ಯಾಪಾರವನ್ನು ಒಂದೇ ಚಿಟಿಕೆಯಲ್ಲಿ ನಿಯಂತ್ರಿಸಲು ಹೋಗಲಾಗುತ್ತಿದೆ. ಇದು ಭವಿಷ್ಯದಲ್ಲಿ ಇನ್ನೇನು ಗಂಡಾಂತರ ಸೃಷ್ಟಿಸಲಿದೆಯೋ!!
ಏನಾದರೂ ನಾವೀಗ ಭಾರತೀಯ ಪ್ರಾಮಾಣಿಕ, ಸಹನಾಶೀಲ, ತ್ಯಾಗಿ ಪ್ರಜೆಗಳು. ಆ ಬಿರುದನ್ನು ಉಳಿಸಿಕೊಳ್ಳಲಾದರೂ ಮುಂದಿನ ಚುನಾವಣೆಗಳಲ್ಲಿ ಓಟು ಹಾಕಬೇಕು. ಅದೂ ಅನಿವಾರ್ಯವಾಗಿ ಯಾರಿಗೆ?

ಮಂಗಳವಾರ, ಜನವರಿ 19, 2016

ಮುರಿದ ಎದೆಯಲ್ಲಿ ಕಟ್ಟಬಹುದೆ ಗೂಡು?

               ೫ ವರ್ಷಗಳ ಹಿಂದಿನ ಮಾತು. ನನ್ನಲ್ಲೊಂದು ಪ್ರಕರಣ ಬಂದಿತ್ತು. ಮಧ್ಯವಯಸ್ಸಿನ ಗಂಡಸು ಆತ. ಮೂರು ಮಕ್ಕಳ ತಂದೆ. ಹೀಗಿದ್ದೂ ಯಾವುದೋ ಘಳಿಗೆಯಲ್ಲಿ ಹೊಸ ಸಂಬಂಧವೊಂದು ಬೆಳೆದಿತ್ತು. ವಾರಕ್ಕೊಮ್ಮೆ ಕೆಲಸ ಎಂದು ಹೋಗಿ ರಾತ್ರಿ ಉಳಿದು ಬೆಳಿಗ್ಗೆ ಬಂದು ಹೆಂಡತಿಯೊಂದಿಗೆ ಖುಷಿಯಿಂದ ಇರುವ ಜೀವನ!  ದೊಡ್ಡ ಮಗನಿಗೆ ಇದೆಲ್ಲ ಗೊತ್ತಾಗಿ ಖುದ್ದು ತಂದೆಯನ್ನು ಆಕೆಯೊಂದಿಗೆ ಮದುವೆ ಮಾಡಿಸಲು ಹೊರಟಿದ್ದ. ಅದಕ್ಕಾಗಿ ಆಕೆಯೊಂದಿಗೆ ಮಾತು ಕತೆಯೂ ಆಗಿತ್ತು. ಸೋ಼ಷಿಯಲ್ ಆದ ಸ್ಫುರದ್ರೂಪಿ ತಂದೆಗೂ ಆಕೆಗೂ ಹೇಳಿ ಮಾಡಿಸಿದ ಜೋಡಿ, ಗುಗ್ಗು, ಭಾವನಾ ಶೂನ್ಯ ತಾಯಿಯೊಂದಿಗೆ ಎಷ್ಟು ದಿನ ಹೆಣಗ್ಯಾಡ್ಯಾನು ಎಂದುಕೊಂಡು ತಂದೆಯ ಮದುವೆಯ ಮಾತು ಆಡಿದ್ದ. ಅದೊಂದು ದಿನ ವೃತ್ತಿಯ ಸೋಲು ಕಂಗೆಡಿಸಿ ಈ ಮಧ್ಯವಯಸ್ಸಿನ ತಂದೆ ಹಾಸಿಗೆ ಹಿಡಿದ. ದೊಡ್ಡ ಮಗ ತಂದೆಯನ್ನು ಹೇಗೋ ಬದುಕಿಸಿಕೊಂಡ. ಆದರೆ ಆಕೆಯ ನಡೆ ಇವನ ಮನಸ್ಸು ನೋಯಿಸಿತ್ತು. ಮದುವೆಗಾಗಿ ಮಾತನಾಡಿದ ಆಕೆ, ತಂದೆ ಮಲಗಿದ್ದಾನೆಂದು ಗೊತ್ತಾದ ಮೇಲೆ ಒಮ್ಮೆಯಾದರೂ ಕೊನೇಪಕ್ಷ ಕರೆ ಮಾಡಿ ಹೇಗಿದ್ದಾನೆ ಎಂದು ವಿಚಾರಿಸಿರಲಿಲ್ಲ. ಹೋಗಲಿ, ನೀವು ಹೇಗೆ ತಂದೆಯನ್ನು ನೋಡಿಕೊಳ್ಳುತ್ತೀರಿ, ನಗರದ ಆಸ್ಪತ್ರೆಯಲ್ಲಿ ಅಲ್ಲಿಯ ಜನಜೀವನ ಗೊತ್ತಿರುವ ನಾನು ಏನಾದರೂ ಸಹಾಯ ಮಾಡಲೆ? ಕೇಳಲಿಲ್ಲ. ಇವ ನನ್ನ ಬಳಿಗೆ ಬಂದ. ನಾನು ಹೇಳಿದೆ. ನೋಡು, ನಿನ್ನ ತಾಯಿ ಹಳ್ಳಿ ಗುಗ್ಗೇ ಇರಬಹುದು. ಆದರೆ ಆಕೆಗೆ ಬದ್ಧತೆ ಇದೆ. ಒಂದು ವೇಳೆ ಆಕೆ ಇಲ್ಲದಿದ್ದರೂ ನೀವು ಮಕ್ಕಳಿರುತ್ತೀರಿ. ಸಮಾಜ ಇರುತ್ತದೆ. ಒಂದು ವೇಳೆ ಆಕೆಯನ್ನು ನಂಬಿ ನೀನು ಅವಳೊಂದಿಗೆ ತಂದೆಯನ್ನು ಕಳಿಸಿಕೊಟ್ಟರೆ ಇಲ್ಲಿ ನಿನ್ನ ತಾಯಿ, ನಿಮ್ಮ ಬದುಕು ಬೀದಿಗೆ ಬರುತ್ತದೆ. ಅಲ್ಲಿ ಆಕೆ ಇವನನ್ನು ಜತನ ಮಾಡುತ್ತಾಳೆಂದು ಯಾವ ನಂಬಿಕೆ ಇದೆ? ಎಂದೆ. ಹೌದೆಂದ ಆತ ತಂದೆಯಿಂದ ಆಕೆಯನ್ನು ದೂರ ಮಾಡಿದ. ಇದಕ್ಕಾಗಿ ತಂದೆ ಈಗಲೂ ಈತನನ್ನು ಕಂಡರೆ ದ್ವೇಷ ಸಾಧಿಸುತ್ತಾನೆಂಬ ವಿಷಯ ಇತ್ತೀಚೆಗೆ ತಿಳಿಯಿತು. ಜೊತೆಗೆ ತಂದೆ ತಾಯಿಯ ಸಂಬಂಧ ಬಲವಂತದ ಮಾಘಸ್ನಾನ ಆಗಿದೆ ಎಂಬ ಸುದ್ದಿಯೂ ಬಂತು....
                ಹಾಗೇ ಸುಮಾರು ೧೩ ವರ್ಷಗಳ ಹಿಂದಿನ ಮಾತು. ಆತ ಬೆಳಿಗ್ಗೆ ಹೋದರೆ ರಾತ್ರಿ ಬರುವ ಕೆಲಸದಲ್ಲಿದ್ದ. ಬಹಳ ಜವಾಬ್ದಾರಿಯ ಕೆಲಸ. ಆತ ಹೆಚ್ಚೂ ಕಡಿಮೆ ವರ್ಕೊ ಹಾಲಿಕ್. ಮನೆಗೊಬ್ಬ ಕೈಯಲ್ಲಿ ಕೆಲಸವಿಲ್ಲದ ಗೆಳೆಯ ಬಂದ. ಆತ ಈತನ ಹೆಂಡತಿಯನ್ನು ಅಕ್ಕ ಅಕ್ಕ ಎಂದು ಸುತ್ತಿ ಕೆಲಸ ಮಾಡಿಕೊಟ್ಟು ಮನಗೆದ್ದು ಬಿಟ್ಟ. ಹೆಂಡತಿ ಸದಾ ಆತನ ಜಪ ಮಾಡತೊಡಗಿದಳು. ವಿಚಾರಿಸಿದರೆ ನಮ್ಮದು ತಾಯಿ, ಮಗನಂತ ಸಂಬಂಧ, ನನ್ನ ಮೇಲೇ ಅನುಮಾನ ಪಡುತ್ತೀಯಾ? ಎಂದಳು. ಈತನಿಗೆ ನುಂಗಲಾರದ ತುತ್ತಾದಾಗ ಬಾರುಗಳಿಗೆ ಅಲೆದಾಡತೊಡಗಿದ. ಕೊನೆಗೊಂದು ದಿನ ಗೆಳೆಯ ಬೇರೆ ಮದುವೆಯಾಗಿ ಹೋದ. ಈತ ಖುಷಿಯಾಗಿ ಹೆಂಡತಿಯ ಬಳಿಗೆ ಹೋದ. ಕತ್ತೆಯಂತಹ ನಿನಗೆ ಮೂರು ಹೊತ್ತು ಅದೇ ಧ್ಯಾನ ಎಂದು ದೂರವಿಡುವ ಪ್ರಯತ್ನ ಮೊದಲಾಯಿತು. ಆ ನಂತರ ಈತನೂ ಹೊರಗೆ ಕಾಲಿಟ್ಟ. ಆದರೂ ಇಬ್ಬರಲ್ಲಿ ಯಾರೂ ಎದ್ದು ಹೋಗಲಿಲ್ಲ. ಒಂದೇ ಸೂರಿನಡಿ ಸಾರವಿಲ್ಲದ ಸಂಸಾರ! ಇಬ್ಬರಲ್ಲಿ ಯಾರೂ ಎದ್ದು ಹೋಗದೇ ಒಬ್ಬರಿಗೊಬ್ಬರ ಖುಷಿಗೆ ಸ್ಪರ್ಧಿಗಳಂತೆ ವಿಘ್ನ ಸಂತೋಷಿಗಳಾಗಿ ಬದುಕುವುದು ನೋಡಿದಾಗ ನನಗೆ ‘ಅಯ್ಯೊ ಪಾಪ’ ಎನಿಸುತ್ತದೆ.
                 ಇವೆರಡು ಉದಾಹರಣೆಗಳು ಮಾತ್ರ. ಕಸ್ತೂರಿ ವಾಹಿನಿಯಲ್ಲಿ  ‘ಇದು ಯಾರು ಬರೆದ ಕಥೆಯೋ’ ಮಾಡುವಾಗ ಇಂಥ ಸಾಕಷ್ಟು ಪ್ರಕರಣಗಳನ್ನು ನೋಡಿದ್ದ ನನಗೆ ಅರ್ಥವಾಗಿದ್ದಿಷ್ಟು. ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್, ಅಧಿಕೃತ, ಅನಧಿಕೃತ  ಯಾವುದೇ ಇರಲಿ, ಪ್ರೀತಿ ಇಲ್ಲದ ಮೇಲೆ ಯಾವ ಕಾನೂನು, ಸಮಾಜ, ಚಾನೆಲ್ಲು ಸಹ ಹೃದಯಗಳನ್ನು ಬೆಸೆಯಲಾರವು. ಬದಲಿಗೆ ವ್ಯಕ್ತಿಗೆ, ಆ ಮೂಲಕ ಸಮಾಜಕ್ಕೆ ಹೊಸ ಭಾರವನ್ನು ಮಾತ್ರ ಹುಟ್ಟುಹಾಕಬಲ್ಲವು.
                ಇಂತಹ ಸಮಸ್ಯೆ ಹುಟ್ಟಲು ಮೊದಲನೆಯ ಕಾರಣ ಸಂಗಾತಿಯ ತಪ್ಪು ಆಯ್ಕೆ. ತಾವೇನು, ತಮ್ಮ ಅಗತ್ಯತೆ ಏನು ಎಂಬ ಸ್ಪಷ್ಟ ಕಲ್ಪನೆ ಇಲ್ಲದೆ, ಎದುರಿನ ವ್ಯಕ್ತಿಯ ಸೌಂದರ್ಯ, ಸ್ಟೇಟಸ್, ತನ್ನಂತೆಯೇ ಆತ/ಆಕೆ ಎಂಬ ಸೆಲ್ಫ್ ಅಸ್ಯೂಮ್ಡ್ ಸಾಮ್ಯತೆ, ದೌರ್ಬಲ್ಯಗಳನ್ನು ಪರಿಗಣಿಸದೆ ಕೇವಲ ಗುಣಗಳನ್ನು ನೋಡಿ ತೆಗೆದುಕೊಳ್ಳುವ ತೀರ್ಮಾನಗಳು ಮುಂದೆ ಎರಡನೆಯ ಆಯ್ಕೆಗೆ ಮೊದಲ ಅಡಿಗಲ್ಲಾಗುತ್ತವೆ. ಮದುವೆಯಾದ ನಂತರ ಈ ಎಲ್ಲ ಭ್ರಮೆಗಳು ಕಳಚಿ ಬಿದ್ದರೆ ದೌರ್ಬಲ್ಯಗಳು ದೊಡ್ಡದಾಗಿ ಕಾಣಿಸುತ್ತವೆ. ಜೊತೆಗೆ ಬದುಕುವುದು ಅಸಾಧ್ಯವಾದಾಗ ಮನಸ್ಸು ಹೊಸ ಕನಸೊಂದನ್ನು ಕಾಣುವ ಆಸೆ ವ್ಯಕ್ತಪಡಿಸುತ್ತದೆ. ಈ ಹುಡುಕಾಟದಲ್ಲಿ ದೊಡ್ಡ ಸಮಸ್ಯೆಯೆಂದರೆ ಅದಾಗಲೆ ಸೆಕೆಂಡ್ ಹ್ಯಾಂಡ್ (ಈ ಶಬ್ದ ಯಾಕೆ ಬಳಸುತ್ತೇನೆ ಎಂದರೆ ನಮಗೆಲ್ಲ ನಾವು ಹೇಗೇ ಇರಲಿ, ಮೊದಲನೆಯ ಮದುವೆಯಾಗಬೇಕು, ಹುಡುಗ/ಹುಡುಗಿಗೆ ಮಕ್ಕಳಿರಬಾರದು, ನಮ್ಮ ವಯಸ್ಸಿನ ಆಸುಪಾಸು ಇರಬೇಕು, ಸುಂದರವಾಗಿರಬೇಕು, ವಿದ್ಯೆ, ರೂಪ, ಐಶ್ವರ್ಯಗಳಲ್ಲಿ ನಮಗಿಂತ ಮೇಲ್ಮಟ್ಟದಲ್ಲಿರಬೇಕು ಹೀಗೆ ಹತ್ತಾರು ಮನುಷ್ಯ ಸಹಜ ನಿರೀಕ್ಷೆಗಳು ಹಾಗೂ ಅದಕ್ಕೆ ನಾನು ತಕ್ಕವ ಎಂಬ ಸುಳ್ಳು ಅಹಮಿಕೆಯೂ ಇರುತ್ತದೆ.)

ಆಗಿರುವ, ಸಮಾಜದ ಭದ್ರಕೋಟೆಯಿಂದ ಎದ್ದು ಬರುತ್ತಾನೋ/ ಇಲ್ಲವೋ ಎಂಬ ಅನುಮಾನದಿಂದಾಗಿ ಮೂರನೆಯ ವ್ಯಕ್ತಿಯ ಪ್ರೀತಿಯೂ ಅರ್ಧಸತ್ಯವೇ ಆಗಿಬಿಡುತ್ತದೆ. ಈ ಅರ್ಧಸತ್ಯದ ಬದುಕು ಕೊನೆಯಾದಾಗ ವ್ಯಕ್ತಿ ಮೊದಲ ಸಂಗಾತಿಯ ಹತ್ತಿರವೇ ಹೋಗುವುದು ಅನಿವಾರ್ಯವಾಗುತ್ತದೆ. ಹಾಗೆ ಹೋದಾಗ ಬಹುತೇಕ ಸಂದರ್ಭಗಳಲ್ಲಿ ಈ ವ್ಯಕ್ತಿಗೆ ಪ್ರೀತಿಯಲ್ಲಿ ಕಳೆದ ನೆನಪುಗಳು ಪ್ಯಾಚ್ ಅಪ್ ಮಾಡಿಕೊಳ್ಳಲು ಬಿಡಲಾರವು. ಅದೇ ವೇಳೆ ಬೇರೆ ಎದೆ ಗೂಡಿನಿಂದ ಹಾರಿ ಬಂದ ಹಕ್ಕಿಯನ್ನು ಒಳಸೇರಿಸಲು ಅದಾಗಲೇ ಇರುವ ಹಕ್ಕಿಯ ಮನಸ್ಸೊಪ್ಪದು.
             ಪ್ರಾಮಾಣಿಕ, ಉತ್ಕಟ, ನಿರಪೇಕ್ಷ ಪ್ರೀತಿ ಇಲ್ಲದಿದ್ದರೆ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವ ಶಕ್ತಿ ಇರುವುದಿಲ್ಲ. ಯಾಕೆಂದರೆ ಅಲ್ಲೊಂದು ಲೆಕ್ಕಾಚಾರ ಇರುತ್ತದೆ. ಇಬ್ಬರಿಗೂ ಸ್ವ ರಕ್ಷಣೆಯ ಪ್ರಜ್ಞೆ ಇರುತ್ತದೆ.  ತಪ್ಪಿಲ್ಲದ ನಾನು ಏಕೆ ಎದ್ದು ಬರಬೇಕು? ಮದುವೆ ಕೊಟ್ಟ ನನ್ನ ಹಕ್ಕನ್ನು ನಾನು ಚಲಾಯಿಸಿಯಾದರೂ ಆತ/ಆಕೆಯನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳುತ್ತೇನೆ, ಸಂಸಾರ ಉಳಿಸಿಕೊಳ್ಳುತ್ತೇನೆ ಎಂದು ಒಬ್ಬರು ಒದ್ದಾಡುತ್ತಾರೆ. ಇನ್ನೊಬ್ಬರು ಮೂರನೆಯ ವ್ಯಕ್ತಿ ಕೈಕೊಟ್ಟರೆ ಇದೆಂತೂ ಇದ್ದೇ ಇರುತ್ತದೆಯಲ್ಲ ಎಂಬುದು, ತನಗೇ ಸರಿಯಾಗಿ ಗೊತ್ತಿಲ್ಲ, ತಾನು ಮೂರನೆಯ ವ್ಯಕ್ತಿಯನ್ನು ಪ್ರೀತಿಸುತ್ತೇನೋ/ಆಕರ್ಷಣೆಯಲ್ಲಿದ್ದೇನೋ ಎಂಬುದು, ಸಮಾಜ, ಮಕ್ಕಳು, ದೊಡ್ಡವರು ಏನಂತಾರೆ ಗೊತ್ತಾದರೆ?,  ತಾವೇ ಕಟ್ಟಿಕೊಂಡ ಪ್ರತಿಷ್ಠೆ ಹಾಳಾಗುತ್ತದೆ ಎಂಬ ಮನೋಭಾವ ಹೀಗೆ ಸಾಕಷ್ಟು ಕಾರಣಗಳಿಂದ ಬೇಡದ ಮದುವೆಯಿಂದ ಎದ್ದು ಬರಲಾರರು. ಇಂತಹ ಹೇತಲಾಂಡಿಗಳು ಗಂಡ/ಹೆಂಡತಿಯನ್ನು ಟ್ರಂಪ್ ಕಾರ್ಡ್ ನಂತೆ ಉಪಯೋಗಿಸುವುದು ಹೊಸ ಟ್ರೆಂಡೇನಲ್ಲ. ನನ್ನ ಹೆಂಡತಿಗೆ ಹುಷಾರಿಲ್ಲ, ಅವಳೇನೋ ಒಳ್ಳೆಯವಳೇ, ಆದರೆ ಪಾಪ ಹಳ್ಳಿ ಗುಗ್ಗು, ಅವಳು ಸರಿಯಿಲ್ಲ, ನನಗೆ ಸ್ಪಂದಿಸುವುದಿಲ್ಲ ಹೀಗೆ ಹತ್ತಾರು ಕತೆಗಳನ್ನು ಪುರುಷರು, ಅವನು ನನಗೆ ತಕ್ಕವನಲ್ಲ, ಬೇಜವಾಬ್ದಾರಿ, ಸಮಯ ಕೊಡುವುದಿಲ್ಲ, ಅರಸಿಕ, ವಯಸ್ಸಾದವ, ನೋಡಲು ಚೆನ್ನಾಗಿಲ್ಲ ಎಂಬಿತ್ಯಾದಿಗಳಿಂದ ಮಹಿಳೆಯರು ಕಥೆ ಕಟ್ಟುತ್ತಲೇ ಮೂರನೆಯವರಿಗೆ ಗಾಳ ಹಾಕುತ್ತಾರೆ. ಬಿದ್ದರೆ ಅರ್ಧಸತ್ಯದ ಬದುಕು ಸತ್ಯವೆಂಬಂತೆ ಬದುಕುತ್ತಾರೆ. ಅರ್ಧಸತ್ಯ ಪೂರ್ತಿಯಾಗುವುದಿಲ್ಲ ಎಂಬ ಅರಿವಾದಾಗ ಟ್ರಂಪ್ ಕಾರ್ಡ್ ಬಳಸಿ ಸ್ವಲ್ಪ ವಿಶ್ರಾಂತಿ....ಹಾಗೆ ಮತ್ತೆ ಗಾಳ ಹಾಕುವುದು ಶುರು.
              ನಿಯತ್ತಿಲ್ಲದ, ವಿಶ್ವಾಸವಿಲ್ಲದ, ದೃಢನಿರ್ಧಾರ, ಯಾತರ ಮೇಲೂ ನಂಬಿಕೆಯಿಲ್ಲದ ಇಂತಹ ಮಂದಿ ಹೆಚ್ಚಾಗುತ್ತಿರುವುದು ಇಂದಿನ ಸಾಮಾಜಿಕ ದುರಂತವೆಂದು ನಾನು ಭಾವಿಸುತ್ತೇನೆ. ೧೪ ವರ್ಷಗಳ ಹಿಂದೆ ಇಂತಹ ಸುಳಿಯೊಳಗೆ ನಾನು ಸಿಕ್ಕಿಕೊಂಡಾಗ ನನ್ನನ್ನು ಉಳಿಸಿದ್ದು ನನ್ನ ಉತ್ಕಟ ಮತ್ತು ಪ್ರಾಮಾಣಿಕ, ನಿಸ್ವಾರ್ಥ ಪ್ರೀತಿ. ಇಂದೂ ಸಹ ಸತ್ಯದ ಮೇಲೆ ಕಟ್ಟಿಕೊಂಡ ನನ್ನ ಖಾಸಗಿ ಬದುಕು ಅದರ ಆಧಾರದ ಮೇಲೇ ನಿಂತಿದೆ. ನನ್ನವನ ಮತ್ತೆ, ನನ್ನ ನಡುವಿನ ಅಲಿಖಿತ ಒಪ್ಪಂದಗಳಲ್ಲಿ ಪ್ರೀತಿಯ ಪ್ರಾಮಾಣಿಕತೆಯೂ ಒಂದು. ಅವನಿಗಾಗಲಿ, ನನಗಾಗಲಿ ಪರಸ್ಪರರಿಗಿಂತ ಬೇರೆಯವರ ಮೇಲೆ ಹೆಚ್ಚು ಪ್ರೀತಿ ಉಂಟಾದರೆ ಪ್ರಾಮಾಣಿಕವಾಗಿ ಹೇಳುವ ಸ್ವಾತಂತ್ರ್ಯ ಮತ್ತು ಬಿಡುಗಡೆಗೆ ಮುಕ್ತ ಅವಕಾಶವಿದೆ. ಅಂತಹದೊಂದು ಸಂದರ್ಭ ಬಂದು ಆತನ ಕಣ್ಣಿನಲ್ಲಿ ನನ್ನ ಬಿಂಬ ಕಾಣಿಸದಿದ್ದರೆ ನಾನು ಸದ್ದಿಲ್ಲದೆ ಎದ್ದು ಹೋಗುವವಳು ಎಂಬುದೂ ಆತನಿಗೆ ಅರಿವಿದೆ. ನನ್ನ ಹೊರತು ಇನ್ಯಾವ ಹೆಣ್ಣೂ ನನ್ನವನ ಪ್ರೀತಿ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬ ವಿಶ್ವಾಸ ನನ್ನ ದೇವರು ನನಗಾಗಿ ಮಾಡಿದ ಆಯ್ಕೆಯ ಮೇಲಿದೆ. ಅದೊಂದು ಆತ್ಮಬಲದಿಂದ ನಾನು ವಿನಂತಿಸುತ್ತೇನೆ, ಸುಂದರ ಬದುಕಿಗಾಗಿ ನೀವು ಹಂಬಲಿಸುತ್ತಿದ್ದರೆ ಪ್ರಾಮಾಣಿಕರಾಗಿರಿ, ಕೊನೇಪಕ್ಷ ನಿಮ್ಮ ಹೃದಯಕ್ಕಾದರೂ. ಏನನ್ನೋ ಕಳೆದುಕೊಳ್ಳುವ ಭೀತಿಯಿಂದ ಅಪ್ರಮಾಣಿಕರಾಗುತ್ತ ಹೋದಂತೆ ನಿಮ್ಮ ಬದುಕು, ಮನಃಶಾಂತಿಯೊಂದೇ ಅಲ್ಲ, ಉಳಿದ ಎರಡು ಜೀವಗಳ ಬದುಕು, ಮನಃಶಾಂತಿಯನ್ನು ಸಹ ನಾಶ ಮಾಡುತ್ತೀರಿ. ನೆನಪಿರಲಿ.