ಶನಿವಾರ, ಆಗಸ್ಟ್ 29, 2015

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ?

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ? ಇಂತದೊಂದು ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ಸಿಕ್ಕ ಅಂಶಗಳನ್ನು ಇಲ್ಲಿ ಚರ್ಚಿಸಬಯಸುತ್ತೇನೆ. ಕಳೆದ ವರ್ಷ ರಾಘವೇಶ್ವರ ಶ್ರೀಗಳ ಮೇಲೆ ಮೊದಲ ಪ್ರಕರಣ ದಾಖಲಾದಾಗಲೂ ಈ ಪ್ರಶ್ನೆ ಎದ್ದಿತ್ತು. ಈಗಲೂ ಎದ್ದಿದೆ. ಇಂತಹ ಸಾಕಷ್ಟು ಪ್ರಕರಣಗಳು ಹೊರಗೆ ಬರದೇ ಬೂದಿಮುಚ್ಚಿಕೊಂಡು ಕುಳಿತಿವೆ ಎಂಬುದನ್ನೂ ಕೇಳಿದ್ದೇನೆ. ಆಗೆಲ್ಲ ನನಗೆ ಒಂದೇ ಪ್ರಶ್ನೆ - ಹವ್ಯಕ ಹೆಣ್ಣುಮಕ್ಕಳು ಕುರಿಗಳೆ? ಒಮ್ಮೆ ಏನೋ ದೌರ್ಜನ್ಯ ನಡೆಯಿತು ತಿಳಿದೋ, ತಿಳಿಯದೆಯೋ. ನಂತರವೂ!? ವರ್ಷಾನುಗಟ್ಟಲೆ!?
ಈ ಸಮಾಜದಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ಹ್ಞೂಂ ಎನ್ನುತ್ತಾರೆ ಎಂದು ಅನಿಸಿದರೆ ದೇವಮಾನವನಿರಲಿ, ಈ ಲೋಕವನ್ನೆಲ್ಲ ಉದ್ಧಾರ ಮಾಡುವ ಪತ್ರಕರ್ತರಿರಲಿ ಎಲ್ಲರೂ ಒಂದು ಕೈ ನೋಡಲು ಸಿದ್ಧರೇ. ಇನ್ನು ಹುಲುಮಾನವರನ್ನೆಂತೂ ಕೇಳಲೇಬೇಡಿ. ಇದು ನಮ್ಮ ಹೆಣ್ಣುಮಕ್ಕಳಿಗೆ ಗೊತ್ತಾಗುತ್ತಿಲ್ಲವೆ? ಗೊತ್ತಾದರೂ ಪೋಷಕರ ಹತ್ತಿರ ಹೇಳಿಕೊಳ್ಳಲು ಆಗುತ್ತಿಲ್ಲವೆ? ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ, ನಮ್ಮನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಯದಷ್ಟು ಅಬೋಧತೆಯೆ? ನಾನು ಗಮನಿಸಿರುವ ಹಾಗೆ ಈ ಪ್ರಕರಣಕ್ಕೆ ತೇಪೇ ಹಚ್ಚುತ್ತಿರುವ ಬಹುತೇಕರು ಮಠದಿಂದ ಪ್ರತ್ಯಕ್ಷ/ ಅಪ್ರತ್ಯಕ್ಷ ಸಹಾಯ ಪಡೆದವರು ಹಾಗೂ ಪಡೆಯುತ್ತಿರುವವರು. ಇನ್ನು ಕೆಲವರಲ್ಲಿ ಕುರುಡು ಭಕ್ತರೂ ಇದ್ದಾರೆ, ಅವರ ಸಂಖ್ಯೆ ನಗಣ್ಯ. ಲೆಕ್ಕಾಚಾರವಿಲ್ಲದೆ ಒಪ್ಪಿಕೊಳ್ಳುವವರು ಯಾರಿಗೂ ಅಪಾಯವಲ್ಲ.
                ಕನ್ಯಾಸಂಸ್ಕಾರ ಮಾಡಿಸುವುದು ಎಂಬುದನ್ನೇ ನಾನು ಒಪ್ಪುವುದಿಲ್ಲ. ಅಪ್ಪ, ಅಮ್ಮ ಸಂಸ್ಕಾರವಂತರಾಗಿದ್ದರೆ ಮಗಳಿಗೇನು ವಿಶೇಷ ಸಂಸ್ಕಾರ? ಮಂತ್ರದೀಕ್ಷೆ ಕೊಡಿಸುವ ಆಲೋಚನೆಯಿದ್ದರೆ ಮಂತ್ರದೃಷ್ಟಾರರು, ಕುಲಪುರೋಹಿತರು ಇರುವುದಿಲ್ಲವೆ? ಜಾತಕ ನೋಡಿ, ಸ್ವಭಾವ, ಗುಣಗಳನ್ನು ತಿಳಿದು ಮಂತ್ರ ಕೊಡುತ್ತಾರೆ. ಅದೂ ಸಾಕಾಗದೆ  ಮುಂದುವರಿದು ಏಕಾಂತ ಸೇವೆಗೆ ಕಳಿಸುವ ತಂದೆ ತಾಯಿಗಳೆಂತೂ ನಿಜವಾಗಿಯೂ ಶತದಡ್ಡರೂ, ಮೂರ್ಖರೂ ಆಗಿರುತ್ತಾರೆ ಎಂದು ಹೇಳಲು ನನಗೆ ಹೆದರಿಕೆಯೇನಿಲ್ಲ.
                 ನಮ್ಮಲ್ಲಿ ಎಂತಹ ತಂದೆ ತಾಯಿ ಇರುತ್ತಾರೆ ಎಂದರೆ, ಕೆಲವು ತಿಂಗಳುಗಳ ಹಿಂದೆ ಒಬ್ಬರ ಮನೆಗೆ ಹೋಗುವ ಸಂದರ್ಭ ಬಂತು. ಅವರ ಮಗಳಿನ್ನೂ ೩-೪ ವರ್ಷದವಳು.  ನಾನು ಭೇಟಿ ಮುಗಿಸಿ ಹೊರಗೆ ಬಂದಾಗ ಪಕ್ಕದ ಮನೆಯ ಅಂಕಲ್ ಒಬ್ಬರು ಆ ಮಗುವಿನ ತಲೆಗೂದಲನ್ನು ಎಳೆದು, “ಏನೇ ನನ್ನತ್ರ ಬರೊಲ್ವ, ಮುದ್ದು ಮಾಡಿಸಿಕೊಳಲ್ವಾ? ”ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಅಲ್ಲಿ ಕಂಡ ತಕ್ಷಣ ಹೇಳಿದೆ, “ನೀವು ಈ ರೀತಿ ತಲೆಗೂದಲು ಎಳೆದು ಹಿಂಸೆ ಮಾಡಿದರೆ ಯಾರು ನಿಮ್ಮತ್ರ ಬರುತ್ತಾರೆ, ಅಲ್ವಾ ಮರಿ?” ಎಂದು ಸಮಾಧಾನ ಮಾಡಿದೆ. ಅಲ್ಲೇ ಆಕೆಯ ತಾಯಿಯೂ ನಿಂತಿದ್ದಳು. ಮಗುವಿನ ಕಪ್ಪಿಟ್ಟ ಮುಖ , ಆ ಅಂಕಲ್ ಎಂದರೆ ನನಗೆ ಭಯ ಎಂದು ಹೇಳುತ್ತಿದ್ದರೆ, ಕೂದಲೆಳೆದ ಅಂಕಲ್ ನಡೆ ತನ್ನನ್ನು ಒಪ್ಪಿಕೊಳ್ಳದ, ಮುಂದುವರಿಯಲಾಗದ ಅಸಹಾಯಕತೆಯನ್ನು ಪ್ರದರ್ಶಿಸಿತ್ತು. ನನಗೆ ಒಳಗೊಳಗೇ ಅಪಾಯದ ಗಂಟೆ ಬಾರಿಸಿದ ಹಾಗಾಯಿತಾದರೂ ಅವಳ ತಾಯಿಗೆ ಏನೂ ಹೇಳಹೋಗಿಲ್ಲ. ಯಾಕೆ ಬೇಕು ಉಸಾಬರಿ?
                 ಹಾಗೇ ನನ್ನ ಬಾಲ್ಯದ ಅನುಭವಕ್ಕೆ ಬಂದಾಗ ನನ್ನ ಗೆಳತಿಯೊಬ್ಬಳು ಪಕ್ಕದ ಮನೆಗೆ ದಿನಾಲೂ ಹೋಗಬೇಕಾದ ಸಂದರ್ಭ ಇರುತ್ತಿತ್ತು. ಹಾಗೆ ಹೋದಾಗ ಒಮ್ಮೆ ಅವಳ ಸ್ಕರ್ಟನ್ನು ತನ್ನ ಹೆಂಡತಿಯೆದುರಿಗೇ ಮಾಮಾ ಕೆಳಗೆ ಎಳೆದು ನಕ್ಕಿದ್ದರು. ಅವಳು ಮನೆಗೆ ಬಂದು ಅಮ್ಮ, ಮಾಮಾ ಸರಿಯಿಲ್ಲ, ನಾನು ಅವರ ಮನೆಗೆ ಹೋಗುವುದಿಲ್ಲ, ಅವರು ಹೀಗೆಲ್ಲ ಮಾಡಿದರು ಎಂದು ಘಟನೆಯನ್ನು ವಿವರಿಸಿದರೆ, ಅವಳಮ್ಮ “ಇಲ್ಲ, ಮರಿ. ಮಾಮ ಅಲ್ವ, ಜೋಕು ಮಾಡುತ್ತಾರೆ. ನೀನೇನು ಹಾಗೆಲ್ಲ ಯೋಚಿಸಬೇಡ” ಎಂದು ಬಿಡುವುದೆ? ಕೊನೆಗೊಂದು ದಿನ ಅಮ್ಮನ ಮೇಲೆ ಅವ ನಿದ್ದೆ ಮಾತ್ರೆ ಹಾಕಿ ಅತ್ಯಾಚಾರ ನಡೆಸಿದಾಗ ನನ್ನ ಗೆಳತಿ ಮೂಕವಾಗಿ ಅತ್ತಿದ್ದು ನನ್ನ ಮನಃಪಟಲದ ಮೇಲೆ ಇನ್ನೂ ಹಸಿರಾಗಿದೆ.
                ಇದು ಮಕ್ಕಳಿದ್ದಾಗಿನ ಹೆಣ್ಣುಮಗುವಿನ ಸ್ಥಿತಿಯಾದರೆ, ಅಬೋಧ ವಯಸ್ಸಿಗೆ ಪ್ರೀತಿಯ ಬಲೆ ಹೆಣೆಯಲಾಗುತ್ತದೆ. ಪ್ರೀತಿಸುತ್ತೇನೆ ಎನ್ನುತ್ತಲೇ ಅತ್ಯಾಚಾರ ನಡೆಯುತ್ತಿರುತ್ತದೆ. ಈಗಿನ ಪ್ರಕರಣ ನೋಡಿದರೆ ಈ ಎರಡೂ ಅಸಹಾಯಕತೆಯನ್ನು, ಅಬೋಧತೆಯನ್ನು ಬಳಸಿಕೊಂಡಂತೆ ಕಾಣುತ್ತದೆ.
                ಇಂಥ ಸಮಸ್ಯೆಗೆ ನಾವು ಹೇಗೆ ಸ್ಪಂದಿಸಬೇಕು ಎನ್ನುವುದು ನಮ್ಮ ಸಮಸ್ಯೆ. ಹೆಣ್ಣುಮಗುವೊಂದು ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಾಗ ಮೊದಲು ಸುಮ್ಮನಿರಿಸುವವಳೇ ತಾಯಿ! ಮಗಳನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಬಗ್ಗೆ ಗಂಡ ತನ್ನನ್ನು ಜರಿದರೆ! ಸಮಾಜ ನಾಳೆ ಇವಳಿಗೆ ಮದುವೆಯಾಗದೇ ಹೋಗುವಂತೆ ಮಾಡಿದರೆ!? ಅವರು ಹಾಗೆಲ್ಲ ಅಲ್ಲ, ನಿನ್ನದೇ ತಪ್ಪು ಕಲ್ಪನೆ!? ಇನ್ನೊಮ್ಮೆ ಅಂತಹುದಕ್ಕೆ ಅವಕಾಶ ಕೊಡಬೇಡಾ, ನಾನು ನೋಡು ನಿಮ್ಮ ತಂದೆಗೆ ಎಷ್ಟು ನಿಷ್ಠಳಾಗಿದ್ದೇನೆ!? ಇಂತಹ ಉತ್ತರಗಳನ್ನು ತಾಯಿ ಎನಿಸಿಕೊಂಡವಳಿಂದಲೇ ಪಡೆದಾಗ ಮುಜುಗರ, ದುಃಖ, ಹತಾಶೆ, ನೋವು, ಅವಮಾನ, ಆತ್ಮಗೌರವವನ್ನೇ ಕಳೆದುಕೊಂಡ ಹೀನಭಾವ ಇವುಗಳಿಂದ ಕುಗ್ಗಿಹೋದ ಮಗಳು ಮುಂದೆ ಯಾರಲ್ಲಿ ಏನನ್ನು ಹೇಳಿಕೊಳ್ಳಬೇಕು?
                 ಇನ್ನು ಸಮಾಜ! ಸಮಾಜದಲ್ಲಿ ದೊಡ್ಡವ್ಯಕ್ತಿಗಳು ಎನಿಸಿಕೊಂಡವರ ವಿರುದ್ಧ ದೂರು ಕೊಟ್ಟಾಗ ಮೊದಲು ಬರುವ ಪ್ರಶ್ನೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಈಗ ದುಡ್ಡೆಳೆಯುವ ಹುನ್ನಾರ, ಹೆಸರು ಕೆಡಿಸುವ ಷಡ್ಯಂತ್ರ ಎಂಬ ಮಾತು ಧಾರಾಳವಾಗಿ ಬಂದೇ ಬರುತ್ತದೆ. ಅದರಲ್ಲೂ ಪೋಷಕರು ಅಸಹಾಯಕರಾಗಿ ವ್ಯಕ್ತಿ/ವ್ಯವಸ್ಥೆಯಿಂದ ಹಣಕಾಸು ಅಥವಾ ಇನ್ನಾವುದೇ ಲಾಭವನ್ನು ಪಡೆದುಕೊಂಡರೆ ಅದಕ್ಕಿಂತ ಬಲವಾದ  ಪುರಾವೆ ಪ್ರಕರಣ ಬಿದ್ದು ಹೋಗಲು ಬೇರೆ ಸಿಗದು. ಹಾಗಾದರೆ ಪ್ರತಿಭಟಿಸುವ ದಾರಿ ಯಾವುದು?
                   ಒಂದು ಯಾರ್ಯಾರಿಗೆ ಅನ್ಯಾಯವಾಗಿದೆಯೋ ಅವರೆಲ್ಲ ಒಟ್ಟಾಗಿ/ಒಬ್ಬೊಬ್ಬರಾಗಿ ಬಂದು ದೂರು ದಾಖಲಿಸುವುದು, ಕಾನೂನಾತ್ಮಕ ಹೋರಾಟಕ್ಕೆ ಸೂಕ್ತ ದಾಖಲೆಗಳೊಂದಿಗೆ ಇಳಿಯುವುದು, ಸೂಕ್ತ ಮಾರ್ಗದರ್ಶನ ಹಾಗೂ ಮನಃಸ್ಥಿತಿಯ ಹೇಳಿಕೆಗಾಗಿ ಮನೋವೈದ್ಯರು, ಮನೋಚಿಂತಕರ ಬೆಂಬಲ ಪಡೆಯುವುದು ಆಗಬೇಕು. ಇನ್ನು ಮಾನ, ಮರ್ಯಾದೆಗಾಗಿ ಇಲ್ಲಿಯವರೆಗೆ ಸುಮ್ಮನೆ ಕುಳಿತಿದ್ದರೆ ಮತ್ತೆ ಯಾಕೆ ಅದೇ ಸ್ಥಳಕ್ಕೆ, ಅದೇ ವರ್ತುಲಕ್ಕೆ ಹೋಗಬೇಕು? ಇಂಥ ಒಂದು ಘಟನೆ ಒಮ್ಮೆ ನಡೆದಾಗ ಅಲ್ಲಿಗೆ ಮತ್ತೊಮ್ಮೆ ಹೋಗುವುದೇ ತಪ್ಪು. ಹಾಗಿದ್ದೂ ಪೋಷಕರ ಒತ್ತಾಯ, ಭಾವನಾತ್ಮಕ ಸಂಬಂಧ, ಮಠದ ಮೇಲಿನ ಭಕ್ತಿ, ಬೇರೆ ಯಾರದ್ದೋ ಒತ್ತಾಯ ಅಥವಾ ಬೆದರಿಕೆ ಇವುಗಳಿಂದ ಹೋಗಬೇಕಾಗಿ ಬರಬಹುದು. ಆಗೆಲ್ಲ ಒಂದೇ ದಾರಿ ‘ಉಪಾಯ’.
                  ನಮಗೆ ಒಗ್ಗದ್ದನ್ನು ಅಲ್ಲಗಳೆಯಲು ಸಾವಿರ ದಾರಿಗಳಿರುತ್ತವೆ. ಹಾಗೆ ಬಿಡಿಯಕ್ಕೆ ಬಸಿರಾಗದೆ, ನಯವಾಗಿ ಎದ್ದುಬರುವ ದಾರಿಯನ್ನು ಹೆಣ್ಣುಮಕ್ಕಳು ಕಂಡುಕೊಳ್ಳಬೇಕು. ಯಾವ ಸೂತ್ರ ನಮ್ಮನ್ನು ಕೂಪಕ್ಕೆ ಮತ್ತೆ ಮತ್ತೆ ತಳ್ಳುತ್ತಿದೆಯೋ ಆ ಸೂತ್ರ ಯಾವುದು ಎಂಬುದನ್ನು ಕಂಡುಹಿಡಿದು ಅದರ ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕು. ನಮ್ಮ ದೌರ್ಬಲ್ಯವನ್ನೇ ಶಕ್ತಿಯಾಗಿ ಉಪಯೋಗಿಸಬೇಕು. ಇಂತಹ ಗಟ್ಟಿತನ  ಈ ರೀತಿ ಮಠ, ಮಾನ್ಯರುಗಳ ದೌರ್ಜನ್ಯಕ್ಕೆ ಒಳಗಾದ ಪ್ರತಿ ಹೆಣ್ಣುಮಗಳೂ ರೂಡಿಸಿಕೊಳ್ಳಬೇಕು. ನಾವು ಶಾಂತಗೌರಿಯರು ಹೇಗೋ, ಕಾಳಿಯ ಅವತಾರವೂ ಹೌದಲ್ಲವೆ?
                 ಇನ್ನು ಸಮುದಾಯದ ಭಕ್ತರು! ಇದು ಶಿರಸಿಯ ಪಾದುಕಾಶ್ರಮದಂತೆ ಕೆಲವು ವರ್ಷಗಳ ಬಂಧವಲ್ಲ. ತಲೆತಲಾಂತರದಿಂದ ಬಂದ ಬಂಧ. ಗುರು ಶಿಷ್ಯನ ಬಂಧ ತಾಯಿ, ಮಗುವಿನಷ್ಟೇ ಗಾಢವಾಗಿರುತ್ತದೆ. ಪ್ರಶ್ನಿಸದೇ, ಯೋಚಿಸದೇ ಒಪ್ಪಿಕೊಳ್ಳುವ ಜನರೆಂತೂ ಈ ಬಂಧಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಅಮ್ಮ ಎನ್ನುವ ಶಬ್ಧ ಎಷ್ಟು ಜನಪ್ರಿಯವೋ , ಗುರು ಎನ್ನುವ ಶಬ್ಧವೂ ಅಷ್ಟೇ ಜನಪ್ರಿಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂದು ನಂಬಿದವರು ನಾವು. ಸನಾತನ ಹಿಂದೂ ಸಮುದಾಯದಲ್ಲಿ ಗುರುವಿಗಿರುವ ಸ್ಥಾನ ಕೆಲವೊಮ್ಮೆ ತಾಯಿಗೂ ಇರಲಾರದು. ಹಾಗಾಗಿ ಕೆಟ್ಟ ಶಿಷ್ಯ ಇರಬಹುದು, ಆದರೆ ಕೆಟ್ಟ ಗುರು ಎಂದೂ ಇರಲಾರ ಎಂಬುದು ನಮ್ಮ ನಂಬಿಕೆ. ಇಂತಹ ಸಂದರ್ಭದಲ್ಲಿ ನೆರವಾಗುವುದು ಗುರುವಿನ ಗುರುಗಳೆನಿಸಿಕೊಂಡ ಗುರುಚರಿತ್ರೆ ಮೊದಲಾದ ಶಾಸ್ತ್ರಗ್ರಂಥಗಳು. ಅದರಲ್ಲಿ ಹೇಳುವಂತೆ ಕಲಿಯುಗದಲ್ಲಿ ಸಂನ್ಯಾಸಿಗಳನ್ನು ಜನರು ನಂಬುವುದಿಲ್ಲ. ಸ್ತ್ರೀ ಕಾಮದಿಂದ ಹಾಳಾದರೆ, ಸಂನ್ಯಾಸಿ ಸುಖಭೋಗಗಳಿಂದ ಹಾಳಾಗುತ್ತಾನೆ, ಹೀಗೆ ಹತ್ತು ಹಲವು ಮಾರ್ಗಗಳು ಇಂಥ ಸಂದರ್ಭಗಳಲ್ಲಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ತೋರಿಸುತ್ತವೆ. ಶ್ರೀರಾಮಕೃಷ್ಣರಂತೂ ಪರೀಕ್ಷೆ ಮಾಡದೆ ಒಪ್ಪಿಕೊಳ್ಳಬೇಡ, ದೊಡ್ಡ ಹಾವಾಗಿದ್ದರೆ ನಿನ್ನ ಕಾಮ, ಕಾಮನೆಗಳನ್ನು ನುಂಗಿ ಆತ್ಮವೆತ್ತರಿಸುತ್ತದೆ. ಇಲ್ಲದಿದ್ದರೆ ನಿನ್ನ ಕಾಮ, ಕಾಮನೆಗಳನ್ನು ಹೆಚ್ಚಿಸಿ ನೀನೂ ಸುಖದ ಸಾವು ಸಾಯದಂತೆ, ತಾನೂ ಸುಲಭವಾಗಿ ದಕ್ಕಿಸಿಕೊಳ್ಳಲಾಗದಂತೆ ಒದ್ದಾಟವಾಗುತ್ತದೆ. ಹುಷಾರಿ! ಎಂದಿದ್ದಾರೆ.
ಇದನ್ನೆಲ್ಲ ಪರಿಗಣಿಸಿ ಸಮುದಾಯದ ಭಕ್ತರು ಇನ್ನಾದರೂ ಮೌಢ್ಯದಿಂದ ಹೊರಬರಲಾರರೆ?