ಮಂಗಳವಾರ, ಜೂನ್ 17, 2014

ಅಧೋಗತಿಯಲ್ಲಿ ಬ್ರಾಹ್ಮಣರು - ಹೀಗೊಂದು ವಿಶ್ಲೇಷಣೆ

ಪೌರೋಹಿತ್ಯ ಅಥವಾ ಪುರದ ಹಿತವನ್ನು ಕಾಯುವ, ಪುರದ / ರಾಜ್ಯದ/ ಕುಲದ ಮಾರ್ಗದರ್ಶನ ಮಾಡುವ ಪೌರೋಹಿತ್ಯ ಎಂಬ ಶಬ್ದಕ್ಕೇ ಒಂದು ಘನತೆ ಇದೆ. ಈ ಪೌರೋಹಿತ್ಯ ಮಾಡುವ ಜನರು ಸಾಮಾನ್ಯರಿಗಿಂತಲೂ ಹೆಚ್ಚು ತಿಳುವಳಿಕೆ ಉಳ್ಳವರೂ, ವೇದ, ಶಾಸ್ತ್ರ, ಆಗಮ, ಉಪನಿಷತ್ತುಗಳನ್ನು ಓದಿಕೊಂಡವರೂ, ಜೀವನಾನುಭವವನ್ನು ಧನಾತ್ಮಕವಾಗಿ ಸಮಾಜದ ಒಳಿತಿಗೆ ಹಂಚಬಲ್ಲವರೂ ಆಗಿರಬೇಕು. ಈ ಎಲ್ಲ ಗುಣಗಳು ಸಾಮಾಜಿಕವಾಗಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿವೆ ಎಂಬ ನಂಬಿಕೆ ಕಾಲಕ್ರಮದಲ್ಲಿ ಬೆಳೆದುಬಂತು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಯಾರೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುತ್ತಾರೆ ಎಂದಾಗ ಅತಿ ಆತ್ಮವಿಶ್ವಾಸ ಮತ್ತು ದರ್ಪ ಬಂದೇ ಬರುತ್ತದೆ. ಹೀಗೆ ತನಗೆ ಎಲ್ಲರಿಗಿಂತ ಹೆಚ್ಚು ಬುದ್ದಿ, ತಿಳುವಳಿಕೆ, ಜ್ಞಾನ ಇದೆ ಎಂಬ ಅಹಂಕಾರ ಒಂದು ವರ್ಗಕ್ಕೆ ಹೆಚ್ಚುತ್ತಾ ಹೋಯಿತು. ಮತ್ತು ಅದೇ ಕಾಲಕ್ರಮೇಣ (ಅವರದೇ ಭಾಷೆಯಲ್ಲಿ ಹೇಳಲು ಹೋದರೆ) ಅರಿಷಡ್ವೈರಿಗಳ ದಾಳಿಗೆ ಕಾರಣವಾಗುತ್ತದೆ. ಇಂತಹ ಒಂದು ಅವನತಿಯತ್ತ ಇಂದಿನ ಸಮಾಜದ ಒಂದು ವರ್ಗ ಬಂದು ನಿಂತಿದೆ.
ನಾನು ಪೌರೋಹಿತ್ಯದ ಔನ್ನತ್ಯಕ್ಕೆ ಸಾಕ್ಷಿಗಳನ್ನು ಇತಿಹಾಸದಲ್ಲಿ ಓದಿದ್ದೇನೆಯೇ ಹೊರತು, ಪ್ರತ್ಯಕ್ಷವಾಗಿ ಕಂಡಿದ್ದು ಅಪರೂಪ. ಅವನತಿಯ ಹಾದಿಯನ್ನು ಹಿಡಿದಿದ್ದಕ್ಕೆ ಸಾಕ್ಷಿಯಾಗಿದ್ದೇನೆ ಎಂಬುದು ವಾಸ್ತವ.
ಮೂಲತಃ ಈ ಅವನತಿಯ ಪಥದಲ್ಲಿರುವ ಸಮುದಾಯಕ್ಕೇ ಸೇರಿದವಳಾದ ನಾನು ಪುರೋಹಿತರನ್ನು ಹತ್ತಿರದಿಂದ ನೋಡಿದ್ದೇನೆ. ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ ನನ್ನಜ್ಜಿಯ ಮನೆ ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿ ಹಬ್ಬ, ಹರಿದಿನಗಳು ಜೋರಾಗಿ ನಡೆಯುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಮನೆಗೆ ಪುರೋಹಿತರ ಬದಲು ಅರ್ಚಕರು ಬರುವುದು ವಾಡಿಕೆಯಾಗಿತ್ತು. ಕುಲಪುರೋಹಿತರು ಮದುವೆ, ಮುಂಜಿ, ಶ್ರಾದ್ಧಗಳಿಗೆ ಮಾತ್ರ ಬರುತ್ತಿದ್ದರು. ಹಾಗೆ ಪುರೋಹಿತರು, ಅರ್ಚಕರು ಯಾರೇ ಬರಲಿ ಸಂಸ್ಕೃತದಲ್ಲಿ ಪೂಜೆ ಮುಗಿಸಿ ಹೋಗುವುದು ಸಾಮಾನ್ಯವಾಗಿತ್ತು. ಹೆಂಗಸರು ಮಡಿಯಲ್ಲಿ ನೈವೇದ್ಯ ತಯಾರಿಸುವುದು, ಹೆಣ್ಣುಮಕ್ಕಳು ಹಾಡು, ಹಸೆ, ಆರತಿ ತಟ್ಟೆ, ಹೂವಿನ ಮಾಲೆ ಮಾಡುವುದು ಇವುಗಳಿಗೆ ಸೀಮಿತವಾಗಿದ್ದರೆ, ಮಡಿ ಉಟ್ಟ ಯಜಮಾನ ಅರ್ಚಕರು/ಭಟ್ಟರು/ಪುರೋಹಿತರು/ಸ್ವಾಮಿಗಳು/ ಹೀಗೆ ಯಾವುದೇ ಹೆಸರಿನಿಂದ ಕರೆಯಲ್ಪಡುತ್ತಿದ್ದವರ ಮಾರ್ಗದರ್ಶನದಲ್ಲಿ ಕೈಕರಣ ಮಾಡುತ್ತಿದ್ದರು. ಪೂಜೆಯ ಕೊನೆಯಲ್ಲಿ ಮಂಗಳಾರತಿಗೆ ಎಲ್ಲರೂ ಸೇರುವುದು ಸಂಪ್ರದಾಯ. ಯಾರೂ ಕೂಡ ಮಾಡುವ ಕೈಕರಣ, ಸಂಸ್ಕೃತದಲ್ಲಿರುವ ಮಂತ್ರಗಳ ಭಾವ, ಭಾವನೆ, ಪ್ರತ್ಯೇಕ ಪೂಜೆಗಳ ಮಹತ್ವವನ್ನು ಪ್ರಶ್ನಿಸಿದ್ದಾಗಲಿ/ ದೊಡ್ಡವರು ತಿಳಿಸಿಕೊಟ್ಟಿದ್ದಾಗಲಿ ಕಂಡಿಲ್ಲ. ಪರಿಣಾಮ ಒಂದು ಆಧ್ಯಾತ್ಮಿಕ ಆಚರಣೆ ಪೀಳಿಗೆಯಿಂದ ಪೀಳಿಗೆಗೆ ಮಹತ್ವ ಕಳೆದುಕೊಳ್ಳುತ್ತ ಕೇವಲ ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯವಾಗಿ ಮುಂದುವರೆಯಿತು.
            ಇನ್ನು ಈ ಅರ್ಚಕರು/ಪುರೋಹಿತರು ಎಂದರೆ ಅತಿ ಗೌರವದಿಂದ ನೋಡುತ್ತಿದ್ದ ಜನ ಅವರಲ್ಲಿ ವಿಶ್ವಾಸ, ಗೌರವ ಕಳೆದುಕೊಳ್ಳಲೂ ಕಾರಣವಿದೆ. ಹಗಲಲ್ಲಿ ಪೂಜೆ ಮಾಡಿಸಿ ಸಂಜೆಯಾದ ಕೂಡಲೇ ಸಾರಾಯಿ ಅಂಗಡಿಗೋ, ವೇಶ್ಯೆಯರ ಮನೆಗಳಿಗೋ ಇವರುಗಳು ಹೋಗಿಬರತೊಡಗಿದರು. ದಕ್ಷಿಣೆ ಪೀಕುವುದು, ಅಕ್ಕಿ, ಕಾಯಿ, ದುಡ್ಡು ಹೀಗೆ ಪ್ರತಿಯೊಂದರಲ್ಲೂ ಹೆಚ್ಚಿಗೆ ಕೊಡಿ ಎಂಬ ಲೋಭಕ್ಕೆ ಬಿದ್ದರು. ವೈಯಕ್ತಿಕ ಸ್ವಚ್ಛತೆ, ಮಾತು, ನಡೆ, ನುಡಿ ಹೀಗೆ ಪ್ರತಿಯೊಂದರಲ್ಲೂ ತಮ್ಮ ಘನತೆ, ಸ್ಥಾನವನ್ನು ಮರೆತರು. ತಾವು ಏನು ಮಾಡಿದರೂ ಜನರು ತಮ್ಮ ಕಾಲಿಗೆ ಬೀಳುತ್ತಾರೆ ಎಂದುಕೊಂಡರು. ಇಲ್ಲೇ ಇವರು ಎಡವಿದ್ದು.
           ಅದೇ ರೀತಿ  ಗಾಯತ್ರಿ ಮಂತ್ರೋಪದೇಶವೆಂತೂ ಬ್ರಾಹ್ಮಣನಾಗಿ ಹುಟ್ಟಿದ ತಪ್ಪಿಗೆ, ಸರಿಕರಲ್ಲಿ ಘನತೆ ಉಳಿಸಿಕೊಳ್ಳಲು ತೆಗೆದುಕೊಳ್ಳುವ ಒಂದು ಕರ್ಮದಂತೆ ಭಾಸವಾಗತೊಡಗಿತ್ತು. ಬಹುಶಃ ಇಂದು ನನ್ನ ಸಮುದಾಯದಲ್ಲಿ ಶೇ.95 ರಷ್ಟು ಜನರು ಗಾಯತ್ರಿ ಮಾಡುತ್ತಿಲ್ಲ. ಉಳಿದ 5ರಲ್ಲಿ ಶೇ.3ರಷ್ಟು ಜನರು ಅನಿವಾರ್ಯವಾಗಿಯೂ, ಶೇ.1ರಷ್ಟು ಯಾಂತ್ರಿಕವಾಗಿಯೂ ಮತ್ತು ಶೇ. 1ರಷ್ಟು ಜನ ಮಾತ್ರ ಶ್ರದ್ಧಾಪೂರ್ವಕವಾಗಿ ಮಾಡುತ್ತಿದ್ದಾರೆ! ಪೌೆರೋಹಿತ್ಯವು ಕುಲಕಸುಬಾಗಿದ್ದಾಗ ತೆಗೆದುಕೊಂಡ ದಾನವನ್ನು ದಕ್ಕತ್ತು ಮಾಡಿಕೊಳ್ಳಲು ಪ್ರತಿದಿನ ಇಂತಿಷ್ಟು ಗಾಯತ್ರಿ ಮಂತ್ರ ಜಪ ಮಾಡುವುದು ಕಡ್ಡಾಯವಾಗಿತ್ತು. ಕ್ರಮೇಣ ಇದು ಕುಲಕಸುಬಿನ ಬದಲು ಅನಿವಾರ್ಯ ಕರ್ಮವಾದಾಗ ತೆಗೆದುಕೊಂಡ ದಾನಕ್ಕೆ ಪ್ರತಿ ಜಪ ಮಾಡುವುದು ನಿಂತುಹೋಯಿತು. ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರೇ ಅರ್ಚಕರನ್ನು ಗೇಲಿ ಮಾಡುವ ಪರಿಸ್ಥಿತಿ ಬಂದಿದೆ.
            ನಾನು ಮನೆ ಶಿಫ್ಟ್ ಮಾಡುವ ಸಂದರ್ಭ. ಶಿರಸಿಯಿಂದ ಮೈಸೂರಿಗೆ ಬರುವಾಗ ಒಬ್ಬ ಮುಸಲ್ಮಾನನ ಗಾಡಿಯಲ್ಲಿ ಬಂದೆವು. ಆಗ ಆತ ತಪ್ಪದೇ ಮಧ್ಯಾಹ್ನ ಮತ್ತು ಸಂಜೆ ನಮಾಜ್ ಮಾಡಿದ. ನಾನು ಕಾಲೇಜಿನ ಹಾಸ್ಟೆಲ್ ನಲ್ಲಿರುವಾಗ ಇದ್ದೊಬ್ಬ ಮುಸ್ಲಿಂ ಹುಡುಗಿ ಪ್ರತಿನಿತ್ಯ ತಪ್ಪದೇ ನಮಾಜ್ ಮಾಡುತ್ತಿದ್ದಳು, ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದಳು. ಇದನ್ನೆಲ್ಲ ನೋಡಿದಾಗ ನಾವ್ಯಾಕೆ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ ಎಂದೆನಿಸದೇ ಇರಲಿಲ್ಲ.
            ಎಂತಹ ಸ್ಥಿತಿ ಬಂದಿದೆ ಎಂದರೆ ಪೂಜೆ ಎಂದರೆ ಧಾರ್ಮಿಕ ಆಚರಣೆ ಮಾತ್ರ ಎಂಬ ಭಾವನೆ ಬಹುತೇಕರಲ್ಲಿದೆ. ಎಡಪಂಥೀಯ ವಿಚಾರಧಾರೆಗಳು ಮತ್ತು ಬಲಪಂಥೀಯ ವಿಚಾರಧಾರೆಗಳು ಎಂಬ ಭೇದ ಬಹಳ ಕ್ಲಿಷ್ಟವಾಗಿದೆ. ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಮೂಢನಂಬಿಕೆ, ಆಚರಣೆ, ಸಂಪ್ರದಾಯ, ಅಧ್ಯಾತ್ಮ, ಜ್ಯೋತಿಷ್ಯ ಇವುಗಳನ್ನೆಲ್ಲ ವಿರೋಧಿಸುವ ಎಷ್ಟೋ ಜನರು ವೈಯಕ್ತಿಕವಾಗಿ ತೀರ ಖಾಸಗಿಯಾಗಿ ಜ್ಯೋತಿಷಿಗಳನ್ನು ಆಸ್ಥಾನಿಕರನ್ನಾಗಿಟ್ಟುಕೊಂಡಿರುವುದನ್ನು ನೋಡಿದ್ದೇನೆ. ಕದ್ದು ಮುಚ್ಚಿ ಪೂಜೆ, ಬಲಿಯಂತಹ ಆಚರಣೆಗಳನ್ನು ಮಾಡುವುದೂ ಗೊತ್ತು. ಹೀಗೆ ಒಳಗೊಂದು ಹೊರಗೊಂದರ ನಡುವೆ ಸತ್ಯ ಕಳೆದುಹೋಗಿದೆ. ಇದಕ್ಕೆಲ್ಲ ಇನ್ನೊಂದು ಸೇರಿದಂತೆ ಸ್ವತಃ ಮುಖ್ಯಮಂತ್ರಿಯಾದವರೇ ಬ್ರಾಹ್ಮಣ ವಿರೋಧಿಯಾಗಿರುವುದು.
           ದೇವಸ್ಥಾನಗಳೆಂದರೆ ಹಿಂದೆಲ್ಲ ಉಂಬಳಿ ಇರುತ್ತಿತ್ತು. ದೇವಸ್ಥಾನದ ಪೂಜೆಗಾಗಿ, ಅರ್ಚಕ ಕುಟುಂಬದ ಉದರಂಭರಣಕ್ಕಾಗಿ ಸ್ವತಃ ರಾಜಾಶ್ರಯವಿರುತ್ತಿತ್ತು. ಹಳ್ಳಿಗಳಲ್ಲಿ ದೇವಸ್ಥಾನ ಊರಿನದ್ದಾದರೂ ದಿನಕ್ಕೆ ಒಂದು ಪೂಜೆ ಮತ್ತು ಸಾಯಂಕಾಲ ಸಣ್ಣದೊಂದು ಹಾಲು ನೈವೇದ್ಯ ಬಿಟ್ಟರೆ ಅರ್ಚಕರಿಗೆ ಬೇರೆ ಕೆಲಸವಿರುತ್ತಿರಲಿಲ್ಲ. ಹಾಗಾಗಿ ಅವರು ಕೃಷಿಯಲ್ಲಿ, ಪೌರೋಹಿತ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು/ಇದ್ದಾರೆ. ಆದರೆ ಈಗ ದೇವಸ್ಥಾನಗಳು ಧಾರ್ಮಿಕ ಪ್ರವಾಸಿ ಕೇಂದ್ರಗಳಾಗಿವೆ. ಭಕ್ತರು ಎಷ್ಟೊತ್ತಿಗೆ ಬಂದರೂ ದೇವರಿಗೆ ಆರತಿ ಎತ್ತಿಕೊಡಬೇಕಾದ, ಅರ್ಚನೆ ಮಾಡಬೇಕಾದ ಸ್ಥಿತಿ ಇದೆ. ದೇವಾಲಯಕ್ಕೆ ಹೋಗುವ ಜನರು ಅರ್ಚಕರ ಆಯಾಸ, ಆರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಅವರಿಗೇನು ತಟ್ಟೆ ಕಾಸು, ದಾನ ಎಂದು ಚೆನ್ನಾಗಿ ದುಡ್ಡು ಮಾಡ್ತಾರೆ ಎಂದು ಮೂದಲಿಸುತ್ತಾರೆ. ದೇವಸ್ಥಾನ ಮಾಡಿ ಒಬ್ಬ ಅರ್ಚಕರನ್ನಿಟ್ಟು, ಮನ ಬಂದಂತೆ ದುಡಿಸಿ,  ಆಯಾ ಟ್ರಸ್ಟ್ ಗಳ ಹೆಸರಿನಲ್ಲಿ ಆಸ್ತಿ ಮಾಡುವುದೂ ಒಂದು ದೊಡ್ಡ ಉದ್ಯಮವಾಗಿದೆ. ಅರ್ಚಕರ ಕಷ್ಟ ಏನು ಎಂದು ಮುಖ್ಯಮಂತ್ರಿಗಳಿಗೂ ಅರಿವಿದ್ದಂತಿಲ್ಲ. ಈ ಕೆಲಸವನ್ನು ಅವರ ಆಪ್ತವಲಯದಲ್ಲಿರುವ ಬ್ರಾಹ್ಮಣರು ಮಾಡಬೇಕಿದೆ.
           ಜೊತೆಗೆ ಅಳಿದುಳಿದ ಅರ್ಚಕ ವೃತ್ತಿಯಲ್ಲಿರುವ ಬ್ರಾಹ್ಮಣರು ಪುರೋಹಿತರ ಗುಣಗಳನ್ನು ಪುನರ್ ಅಳವಡಿಸಿಕೊಂಡು ಇಡೀ ಸಮುದಾಯದ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ.  ಸಂಸ್ಕೃತ ಮಂತ್ರಗಳನ್ನು ಕನ್ನಡೀಕರಣಗೊಳಿಸುವ ಮತ್ತು ದೇವರನ್ನು ಸಾಮಾನ್ಯ ಜನರ ಬಳಿಯೂ ತರುವ ಅಭಿಯಾನ ಆಗಬೇಕಿದೆ. ಟಿ.ವಿಯಲ್ಲಿ ಹೇಳುವ ಅಂಧ ಆಚರಣೆಗಳ ಬದಲಿಗೆ ದೇವರ ಜೊತೆಗೆ ನಿಜ ಸಂಧಾನ ಮಾಡಿಸುವ ಭಕ್ತಿಯ ಹೊಸ ಅಧ್ಯಾಯ ಶುರುವಾಗಬೇಕಿದೆ. ಸಾಮಾನ್ಯ ಜನರನ್ನು ಲಾಭ, ನಷ್ಟಗಳ ವ್ಯಾಪಾರ ಬುದ್ಧಿಯಿಂದ ನಿಜಕರ್ಮ, ಕರ್ತವ್ಯ, ಜವಾಬ್ದಾರಿ ಮತ್ತು ಸಮರ್ಪಣೆಯಂತಹ ಉನ್ನತ ಭಾವನೆಗಳೆಡೆ ಕರೆದೊಯ್ಯಬೇಕಿದೆ. ಅಂದಾಗ ಮಾತ್ರ ಸನಾತನ ಹಿಂದೂ ಧರ್ಮದ ಬೇರುಗಳು ಮತ್ತೆ ಚಿಗಿತುಕೊಳ್ಳುತ್ತವೆ. ಭಾರತ ಮತ್ತೊಮ್ಮೆ ಆಧ್ಯಾತ್ಮಿಕ ಶಕ್ತಿಯಾಗುತ್ತದೆ.