ಶುಕ್ರವಾರ, ಜುಲೈ 17, 2015

ರೈತರ ಆತ್ಮಹತ್ಯೆ, ಎಡವಿದ್ದೆಲ್ಲಿ?

ಇತ್ತೀಚೆಗೆ ಪ್ರತಿದಿನ ರೈತರ ಸಾವಿನ ಸಂಖ್ಯೆಯನ್ನು ಓದುವುದರಿಂದ ಬೆಳಗಾಗುತ್ತಿದೆ. ಪ್ರತಿನಿತ್ಯ ನನ್ನ ಕಣ್ಣೆದುರು ನಾ ಕಂಡ ಹಲವು ಸತ್ಯಗಳ ನಿಜಜೀವನದ ಸಿನೇಮಾ ರೀಲು ಮನಃಪಟಲದ ಮೇಲೆ ಒಮ್ಮೆ ಸುತ್ತಿ ಹೋಗುತ್ತದೆ.
ಅದು ಹೆಚ್ಚು ಕಡಿಮೆ 1991 ದಶಕ. ನನ್ನ ತಂದೆಯವರ ಪಾಲಿಗೆ 3 ಎಕರೆ ಚಿಲ್ಲರೆ ಭೂಮಿ ಬಂದಿತ್ತು. ಅದರಲ್ಲಿ ಅರ್ಧ ಅಡಿಕೆ ತೋಟದ ಜಾಗ, ಇನ್ನುಳಿದಿದ್ದು ಭತ್ತ, ಧಾನ್ಯಗಳನ್ನು ಬೆಳೆಯಬಹುದಾದ ಫಲವತ್ತಾದ ಗದ್ದೆ. ನಮ್ಮ ಮನೆಯಲ್ಲಿ ತಂದೆ ಸ್ವಂತ ಹೂಟಿ, ನಾಟಿ ದೇಖರೈಖಿ ನೋಡಿಕೊಳ್ಳುತ್ತಿದ್ದರು. ಧಾನ್ಯ ಕೀಳುವುದು, ಕಳೆ ಕೀಳುವಂತಹ ಕೆಲಸಗಳಲ್ಲಿ ನಾನು, ಅಮ್ಮ ಜೊತೆಗೆ ಕೆಲಸ ಮಾಡುತ್ತಿದ್ದೆವು. ಹಾಗಾಗಿ ಊಟಕ್ಕೆ ಅಕ್ಕಿ, ಬೆಲ್ಲ, ತರಕಾರಿ, ಖರ್ಚಿಗೆ ಅಡಿಕೆ ಬೆಳೆ, ಸಣ್ಣಪ್ರಮಾಣದಲ್ಲಿ ತೆಂಗು ಹೀಗೆ ಯಾವುದಕ್ಕೂ ಬೇರೆಯವರನ್ನು ಅವಲಂಬಿಸದ ಸ್ವಾವಲಂಬಿ, ಪರಿಶ್ರಮದ ಬದುಕು. ನಮ್ಮ ದುಡಿಮೆಯ ಬಗ್ಗೆ ನಮಗೆ ಪಶ್ಚಾತ್ತಾಪವಿರಲಿಲ್ಲ. ಸ್ವಾನುಕಂಪವಿರಲಿಲ್ಲ. ಬದಲಿಗೆ ನನ್ನ ತಾಯಿಗೆ ತನ್ನ ಗಂಡ ದುಡಿದು ಬರುತ್ತಾನೆಂಬ ಹೆಮ್ಮೆ. ಆತನಿಗೆ ಬಿಸಿನೀರು ಕಾಯಿಸಿ, ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ರುಚಿ ರುಚಿಯಾದ, ಪೌಷ್ಟಿಕವಾದ ಅಡುಗೆಯನ್ನು ಮಾಡಿ ಹಾಕಿ ಖುಷಿ ಪಡುತ್ತಿದ್ದ ಅಮ್ಮ, ಅಮ್ಮನ ಕಣ್ಣಲ್ಲಿ ತನ್ನ ಮೇಲಿನ ಪ್ರೀತಿ, ಆದರವನ್ನು ಕಂಡು ಕರಗಿ ಹೋಗುತ್ತಿದ್ದ ಅಪ್ಪ... ಎಂತಹ ಸುಂದರ ದೃಶ್ಯ.... ಧಾನ್ಯ ಕೀಳುವುದು ಸರಿಯಾಗಿ ಬಿಸಿಲೇರುವ ಕಾಲಕ್ಕೆ ಇರುತ್ತಿತ್ತು. ನನಗೆ ಶಾಲೆಗೆ ರಜ ಇರುತ್ತಿದ್ದ ದಿನಗಳಾದ್ದರಿಂದ ನಾವು ಆಳುಗಳನ್ನು ತೆಗೆದುಕೊಳ್ಳದೇ ಮೂವರೂ ಸೇರಿ ದಿನವೂ ಅಷ್ಟಷ್ಟಾಗಿ ಕೀಳುತ್ತಿದ್ದೆವು. ನನಗಿನ್ನೂ 10-12 ವಯಸ್ಸು. ಆದರೆ ಶಾಲೆಗೆ ಹೋಗುವ ಮಗು ಹೊಲದಲ್ಲಿ ಅದೂ ಬಿಸಿಲಲ್ಲಿ ದುಡಿಯಬಾರದು ಎಂಬ ಉತ್ಪ್ರೇಕ್ಷೆಯ ಪ್ರೀತಿ ಇರಲಿಲ್ಲ. ಬದಲಿಗೆ ಹಕ್ಕಿಯೊಂದು ಮರಿಗೆ ಕಾಳು ಹೆಕ್ಕುವುದನ್ನು ಹೇಳಿಕೊಡುವ ರೀತಿಯಲ್ಲಿ ಆ ಕೆಲಸ ನನ್ನದಾಗಿತ್ತು. ನಾನಂತೂ ಬಹಳ ಖುಷಿಯಿಂದ ಎಲ್ಲ ಕೆಲಸ ಮಾಡುತ್ತಿದ್ದೆ. ಆ ಶುಭ್ರವಾದ ಆಕಾಶ, ತುಂಬಿ ನಿಂತ ಫಸಲು, ಅದಕ್ಕಾಗಿ ಬರುವ ಹಕ್ಕಿಗಳ ದಂಡು, ಚಿಟ್ಟೆಗಳು, ಬಗೆಬಗೆಯ ಜೀವರಾಶಿಗಳೊಂದಿಗೆ ಮುಖಮುಖಿಯಾಗುತ್ತಿದ್ದೆ ನಾನು. ಆಗಷ್ಟೆ ಜಗತ್ತಿನೆಡೆಗೆ ಕಣ್ಣು ಬಿಡುತ್ತಿದ್ದ ಮಗುವಿಗೆ ಇಂತಹ ಸುಂದರ ದೃಶ್ಯ ವರವೇ ಸರಿ.
ಆದರೆ, ಬಾಲ್ಯದಿಂದಲೂ ಕಷ್ಟವನ್ನೇ ಕಂಡ, ಹೆಚ್ಚು ಓದು ಬರಹ ಬಾರದ ನನ್ನ ತಂದೆಗೆ ಸ್ವಾನುಕಂಪ ಜಾಸ್ತಿ ಅಥವಾ ತನ್ನ ತನಗೆ ನಂಬಿಕೆ ಕಡಿಮೆ ಎಂದು ಹೇಳಬಹುದು. ಮನೆ ಬಿಟ್ಟು ಹೊರಗೆ ಹೋಗಲಿಕ್ಕಿಲ್ಲ, ಎಲ್ಲರೂ ನಿಮ್ಮ ಮನೆಯಲ್ಲಿ ಎಷ್ಟೆಕರೆ ಅಡಿಕೆ ತೋಟ ಇದ್ದು? ಅಡಿಕೆ ಎಷ್ಟಾಕ್ತು? ಅಯ್ಯೋ ನಿಂಗಳೇ ದುಡಕತ್ತಿ? ಪಾಪ! ನಿಂಗಾದ್ರೂ ಎಂತಾ ಸ್ಥಿತಿ ಬಂತೋ ಮಾರಾಯ!? ಈ ವಯಸ್ಸಲ್ಲಿ ದುಡಿಯಂಗಾಗೋಯ್ತಲ್ಲೋ? ಒಂದೇ ಮಗಳಲ್ದನ ನಿನ್ನ ಹೆಂಡ್ತಿ? ಏನಾದ್ರೂ ಮಾಡ್ಲಾಗಿತ್ತೋ ನಿನ್ನ ಮಾವನ ಮನೆಯವರು ಹೀಗೆ ಹೇಳಿ ಹೇಳಿ ಅಪ್ಪನಿಗೆ ಸ್ವಾನುಕಂಪ ಇನ್ನೂ ಜಾಸ್ತಿಯಾಗತೊಡಗಿತು. ಇನ್ನೊಂದೆಡೆ ಒಂದು ಮಳೆಗಾಲದಲ್ಲಿ ಭತ್ತ ಬೆಳೆಯಲು ನೀರು ಕೊಡಬಾರದೆಂದು ಮೇಲ್ಗದ್ದೆಯ ಮಾಲೀಕ ನನ್ನ ದೊಡ್ಡಪ್ಪ. ಅಸೂಯೆಗೆ ಮತ್ತೊಂದು ಹೆಸರೇ ಆತ. ತನ್ನ ಗದ್ದೆ ಕೊಳೆತರೂ ತೊಂದರೆಯಿಲ್ಲ, ಇವ ಭತ್ತ ಬೆಳೆಯಬಾರದೆಂದು ಒಡ್ಡು ಹಾಕಿ ನಿಲ್ಲಿಸಿಬಿಟ್ಟ. ಪರಿಣಾಮ ಭತ್ತದ ಫಸಲು ಆ ಸಲ ಕಡಿಮೆ ಆಯಿತಾದರೂ ಹಾನಿಯೇನಾಗಿರಲಿಲ್ಲ. ಇದು ಅಪ್ಪನಿಗೆ ಭರಿಸಲಾಗಲಿಲ್ಲ. ಅಣ್ಣನೆದುರು ಜಿದ್ದಿಗೆ ಬಿದ್ದ ಈ ತಮ್ಮ ಅವನಂತೆಯೇ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಗದ್ದೆ ಸೀಳಿಸಿ, ಅಡಿಕೆ ತೋಟದ ಜಾಗ ಮಾಡಿಯೇ ಬಿಟ್ಟ. ಗೆದ್ದಿದ್ದು ಅಪ್ಪನಾಗಿರಲಿಲ್ಲ, ಬದಲಿಗೆ ಅವನ ಅಣ್ಣನಾಗಿದ್ದ. ನಮ್ಮ ಸ್ವಾವಲಂಬಿ ಸುಖೀ ಕುಟುಂಬದ ಸುಂದರ ದೃಶ್ಯಗಳು ಒಮ್ಮೆಗೇ ಛಿದ್ರವಾದವು. ಊಟಕ್ಕೂ ಬರವಾಗುವಂತಾಯಿತು. ಸಾಲದ ಬಡ್ಡಿ ತುಂಬಲು ಸಾಲ ಎಂದು ಹುಲಿ ಹುಣ್ಣಾಯಿತು. ಅಂಗಡಿ, ಅಡಿಕೆ ತೋಟ, ಆಳು ಕಾಳುಗಳ ನೆಚ್ಚಿಕೆ, ಮೈಮುರಿದು ದುಡಿಯುವುದು ಎಂದರೆ ಅವಮಾನ ಎಂದು ತಿಳಿದ ಸಮಾಜ, ಸರಿಕರು, ಅವರ ಹಂಗಿಸುವಿಕೆ, ಕೀಳಾಗಿ ಕಾಣುವಿಕೆ ಇಡೀ ಜೀವನವನ್ನು, ಅದರೆಡೆಗಿನ ದೃಷ್ಟಿಕೋನವನ್ನು ಯಾವ ರೀತಿ ಬದಲಾಯಿಸಿತೆಂದರೆ 2001ರ ಹೊತ್ತಿಗೆ ಬ್ಯಾಂಕ್ ಜಮೀನಿನ ಲಿಲಾವು ನೋಟಿಸು ಮನೆಗೆ ಕಳಿಸಿತ್ತು! ಮನೆಯಲ್ಲಿ ಎಲ್ಲ ಅನುಕೂಲವೂ ಇತ್ತು! ಆದರೆ ಮೈತುಂಬ ಸಾಲದ ಹುಣ್ಣಿರುವಾಗ ಯಾವ ಅನುಕೂಲ ಏನು ಸುಖ ತಂದೀತು!? ಮುಂದೆ ನಾವೆಲ್ಲ ಸೇರಿ ಅಪ್ಪನನ್ನೂ, ಜಮೀನನ್ನೂ, ಕುಟುಂಬವನ್ನೂ ಉಳಿಸಿಕೊಂಡೆವು ಅದು ಬೇರೆ ಮಾತು. ಆದರೆ ಎಷ್ಟು ಮನೆಯಲ್ಲಿ ಅದು ಸಾಧ್ಯ? ಹೆಚ್ಚಿನ ಮನೆಯಲ್ಲಿ ಅಪ್ಪ, ಅಮ್ಮ ನಮ್ಮನ್ನು ನೋಡಿಕೊಳ್ಳುವುದು, ನಮ್ಮೆಡೆಗೆ ಅವರು ಮಾಡಬೇಕಾದ ಕರ್ತವ್ಯದ ಅರಿವು ಮಕ್ಕಳಿಗಿದೆಯೇ ಹೊರತು ಅವರೆಡೆಗೆ ತಮ್ಮ ಕರ್ತವ್ಯ ಏನು ಎಂಬುದು ಗೊತ್ತಿಲ್ಲ. ಮಕ್ಕಳಿಗೆ ತಮ್ಮದೇ ಲೋಕ. ಅದರ ಬಗ್ಗೆ ಇನ್ನೆಂದಾದರೂ ಚರ್ಚಿಸುತ್ತೇನೆ.

ಇದು ಕೇವಲ ನಮ್ಮ ಮನೆಯ ಕಥೆಯಲ್ಲ ಎನ್ನುವುದು ನನಗೆ ಪತ್ರಿಕೋದ್ಯಮಕ್ಕೆ ಬಂದಾಗ ತಿಳಿಯಿತು. ನಮ್ಮ ರಾಜ್ಯವಿರಲಿ, ಬೇರೆ ರಾಜ್ಯವಿರಲಿ ರೈತರ ಆತ್ಮಹತ್ಯೆಗೆ ನಿಜವಾದ ಕಾರಣಗಳನ್ನು ನಾನು ಹೇಳುತ್ತೇನೆ.
1. ಸಮಾಜ, ಸರೀಕರು ಸ್ವಂತ ದುಡಿಮೆ ಮಾಡುವ ಜನರನ್ನು ಕೀಳಾಗಿ ಕಾಣುವುದು.
2. ಆಳುಗಳನ್ನಿಟ್ಟು ದುಡಿಸಿದರೇ ಆ ವ್ಯಕ್ತಿಗೊಂದು ಕಿಮ್ಮತ್ತು.
3. ಹೊರಗೆ ಬೆವರು ಸುರಿಸಿ ದುಡಿದು ಒಳಗೆ ಶ್ರೀಮಂತನಾದ ರೈತನಿಗಿಂತಲೂ, ಹೊರಗೆ ಶುಭ್ರವಾದ ಗರಿಗರಿ ಬಟ್ಟೆ ತೊಟ್ಟು, ಒಳಗೆ ಬರಿದಾದ ವ್ಯಕ್ತಿ ಹೆಚ್ಚು ಆಕರ್ಷಣೀಯವಾಗತೊಡಗಿದ್ದು.
4. ಇವತ್ತು ಭೂಮಿಯೆಂದರೆ ದೇವರಲ್ಲ, ಬದಲಿಗೆ ಹಗಲಿರುಳೂ ನಿರ್ವಹಿಸಬೇಕಾದ ಶಾಪ! ಅದಕ್ಕಾಗಿ ಹೇಗಾದರೂ ಸರಿ, ಬೆಳೆ ತೆಗೆದುಬಿಡುವ ತವಕದಲ್ಲಿ ದಡ್ಡಿಗೊಬ್ಬರದ ಬದಲು, ರಸಗೊಬ್ಬರಗಳ ಮಿತಿಮೀರಿದ ಬಳಕೆ. ಹಿಂದೆ ರಸಗೊಬ್ಬರಗಳನ್ನೂ ಬಳಸುತ್ತಿದ್ದರು. ಆದರೆ ದಡ್ಡಿಗೊಬ್ಬರ 4 ಲೋಡ್ ಹಾಕಿದ್ರೆ, 1 ಚೀಲದಷ್ಟು ಯೂರಿಯಾ ಹಾಕಬಹುದಿತ್ತು. ಅದೂ ತೀರ ಅಗತ್ಯ ಎನಿಸಿದಾಗ. ಇವತ್ತು ಹಾಗಿಲ್ಲ. ದಡ್ಡಿಗೊಬ್ಬರ ಮಾಡಲು ಹಸುಗಳನ್ನೇ ಸಾಕುವವರಿಲ್ಲ. ಅದರ ಕಾಲ್ತುಳಿತಕ್ಕೆ ಸೊಪ್ಪು, ಸದೆ ಹಾಕಿ, ಅದನ್ನು ಒಟ್ಟು ಸೇರಿಸಿ ದಡ್ಡಿಗೊಬ್ಬರ ಮಾಡುವವರು ಕಡಿಮೆಯಾಗಿದ್ದಾರೆ. ಹಾಗಾಗಿ ಈಗ ಸಾವಯವ ಕೃಷಿ ಮಾಡುತ್ತೇನೆಂದರೆ ಎರೆಹುಳುಗೊಬ್ಬರ, ಕುರಿಗೊಬ್ಬರಗಳನ್ನು ನೆಚ್ಚಿಕೊಳ್ಳಬೇಕೇ ಹೊರತು ಮೊದಲಿನ ದಡ್ಡಿಗೊಬ್ಬರ ಸಿಗುತ್ತಿಲ್ಲ. ಸಿಕ್ಕರೂ ಅದು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳುತ್ತಿದೆ. ಅದನ್ನು ಕೊಂಡುಕೊಳ್ಳುವವರಿಲ್ಲ!
5. ವೈಜ್ಞಾನಿಕ, ಯೋಜಿತ ಕಾರ್ಯತಂತ್ರ ಎಂದರೇನು? ಎಂಬುದು ಸಣ್ಣ ಮಟ್ಟದ, ಸಾಕಷ್ಟು ವಿದ್ಯಾವಂತರು, ಬುದ್ದಿವಂತರಲ್ಲದ ರೈತರಿಗೆ ಗೊತ್ತಿಲ್ಲ. ಪಕ್ಕದ ಮನೆಯಲ್ಲಿ ವೆನಿಲ್ಲಾ ಬೆಳೆದರಂತೆ ಹಣ ಬಂತಂತೆ, ನಾನೂ ಬೆಳೆಯುತ್ತೇನೆ. ಪಕ್ಕದ ರೈತ ಏನು ಮಾಡಿದನೋ ಅದು ತನ್ನ ಭೂಮಿಯಲ್ಲೂ ಬೆಳೆಯಬಹುದು ಎಂಬ ನಂಬಿಕೆ. ಅದಕ್ಕೆ ತನ್ನ ಜಮೀನಿನ ಇತಿಮಿತಿಗಳ ಅರಿವಾಗಲೀ, ಎಲ್ಲರೂ ಒಂದೇ ಬೆಳೆಯನ್ನು ಅಷ್ಟು ಪ್ರಮಾಣದಲ್ಲಿ ಬೆಳೆದರೆ ದರದ ಗತಿ ಏನಾಗಬಹುದು? ದೊಡ್ಡ ಪ್ರಮಾಣದಲ್ಲಿ ಬೆಳೆ ಇದ್ದಾಗ ರೈತರೆಲ್ಲ ಒಟ್ಟಾಗಿ ಬೆಳೆಯ ವೈಜ್ಞಾನಿಕ ಮಾರಾಟಕ್ಕೆ ಪ್ರಯತ್ನಿಸಬಹುದೆಂಬ ಅರಿವಾಗಲೀ, ಇನ್ನೊಬ್ಬ ರೈತ ಎದುರಾಳಿಯಾಗದೆ, ಸ್ನೇಹಿತನಂತೆ ಪರಿಗಣಿಸುವುದಾಗಲೀ ಕಡಿಮೆ.
6. ಬ್ಯಾಂಕುಗಳು, ಹಣ ಕೊಡುವವರು. ಇವರು ನಿಜವಾಗಿ ರೈತರ ಪರವೋ, ಅಭಿವೃದ್ಧಿಯ ಪರವೋ ಇಲ್ಲ. ಸ್ವಲ್ಪ ದುಡ್ಡಿದ್ದರೂ ಬಡ್ಡಿ ವ್ಯವಹಾರ ಮಾಡುವವರು ಬಹಳ ಜನ. ಹಾಗೆಂದು ಅವರ ಬಳಿಯೂ ಒಂದು ದಿನ ಬಡ್ಡಿ ಬಂದಿಲ್ಲ ಎಂದರೆ ಬದುಕುವ ತಾಕತ್ತೇನೂ ಇರುವುದಿಲ್ಲ, ಕೂತು ಉಂಡರೆ ಕುಡಿಕೆ ಹೊನ್ನು ಎಷ್ಟು ದಿನ? ಹಾಗಾಗಿ ಅವರು ದಿನ ಬಂದು ಸಾಲ ತೆಗೆದುಕೊಂಡವರನ್ನು ಕಾಡಿಸುತ್ತಾರೆ. ನಮ್ಮ ಉತ್ತರಕನ್ನಡದಲ್ಲಿ ಇದು ಅಷ್ಟಾಗಿ ಇಲ್ಲ. ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ, ದಕ್ಷಿಣದ ಹಳ್ಳಿಗಳಲ್ಲಿ ಇದು ವ್ಯಾಪಕವಾಗಿದೆ. ಬ್ಯಾಂಕುಗಳು ಸಾಲ ಕೊಡುವಾಗ ರೈತ ಸುಲಭವಾಗಿ ತೀರಿಸುವ ಸಾಧ್ಯತೆಗಳು ಅಂದರೆ ಬೆಳೆಯ ರೀತಿ, ಪ್ರಮಾಣ, ಅದರ ಮಾರುಕಟ್ಟೆ ಇವುಗಳನ್ನು ನೋಡಿ ಸಾಲ ಕೊಡುವುದಿಲ್ಲ. ಬದಲಾಗಿ ಜಮೀನು, ಅದರ ಅಳತೆ, ಅಲ್ಲಿ ಸಾಮಾನ್ಯವಾಗಿ ಏನು ಬೆಳೆ ಬೆಳಯುತ್ತಾರೆ ಎಂದು ನೋಡಿಕೊಂಡು, (ಆಗಲೇ ಜಮೀನಿನ ಮೇಲೆ ಕಣ್ಣಿಟ್ಟಂತೆ) ಅವರಿಗೆ ಬಡ್ಡಿ ಕಟ್ಟಲು ಮಿಕವೊಂದು ಬಲೆಗೆ ಬಿದ್ದ ರೀತಿಯಲ್ಲಿ ಅಷ್ಟು ವಿದ್ಯಾವಂತನಲ್ಲದ ರೈತನನ್ನು ನಡೆಸಿಕೊಳ್ಳುತ್ತವೆ. ಸಾಲದ ಕಾಗದಪತ್ರ ಮಾಡಿಸುವಲ್ಲಿಂದ ಹಿಡಿದು ಸಾಲ ಮಂಜೂರಾತಿ ಬರುವವರೆಗೆ ರೈತನಿಂದ ಪೀಕುತ್ತವೆ. ನಂತರ ಸರ್ಕಾರದ ಸಬ್ಸಿಡಿ ಬಂದಾಗ ರೈತನಿಗೆ ಹೇಳುವುದಿಲ್ಲ. ಅಂತೂ ಇಂತು ಯಾರದ್ದೊ ಮುಖಾಂತರ ಗೊತ್ತಾದರೂ ಕಾಗದಪತ್ರ ಸ್ವಂತವಾಗಿ ಮಾಡಲಾಗದ ರೈತ ಕೆಲವೊಮ್ಮೆ ಕೈಚೆಲ್ಲಿಬಿಡುತ್ತಾನೆ. ಇನ್ನೂ ಕೆಲವೊಮ್ಮೆ ಕಾಗದಪತ್ರ ಮಾಡಿಸಿಕೊಟ್ಟರೂ ಬ್ಯಾಂಕಿನ ಸಿಬ್ಬಂದಿ ಸಕಾಲದಲ್ಲಿ ಸಬ್ಸಿಡಿಗೆ ಅರ್ಜಿ ಸಲ್ಲಿಸದೇ ರೈತನಿಗೆ ಆ ಬಗ್ಗೆ ಮಾಹಿತಿಯನ್ನೂ ನೀಡದೆ ಕತ್ತಲೆಯಲ್ಲಿಡುತ್ತವೆ. ಅಲ್ಲಿಗೆ ಕಾಗದಪತ್ರಕ್ಕಾಗಿ ಮಾಡಿದ ಕೈಸಾಲ, ಬ್ಯಾಂಕಿನ ಅಧಿಕೃತ ಸಾಲ, ಸಬ್ಸಿಡಿ ಸಿಗದೆ ಇದ್ದಾಗ ಚಕ್ರಬಡ್ಡಿಯ ಹೆಚ್ಚಳ ಹೀಗೆ ರೈತ ಚಕ್ರವ್ಯೂಹದಲ್ಲಿ ಸಿಕ್ಕ ಅಭಿಮನ್ಯುವಾಗುತ್ತಾನೆ.
7. ನೀರಾವರಿ ಕೊರತೆ- ಸಮಸ್ಯೆಯ ಮೂಲದ ಮೊದಲನೆ ಪಟ್ಟಿ ಇದಾಗಬೇಕಿತ್ತು. ಮೊದಲು ಹರಿಯುವ ನೀರು, ಸುರಿಯುವ ಮಳೆಯನ್ನೇ ನಂಬಿದ್ದಾಗ ಇದು ಪ್ರಮುಖ ವಿಷಯವಾಗಿತ್ತು. ಇಂದು ಹಾಗಿಲ್ಲ. ಪಂಪ್ಸೆಟ್, ಕೊಳವೆಬಾವಿಗಳಿವೆ. ಸಾಕಷ್ಟಲ್ಲದಿದ್ದರೂ ಮಳೆ ಸುರಿಯುತ್ತಿದೆ. ಸರ್ಕಾರ ಸಾಕಷ್ಟು ನಾಲೆಗಳು, ಅಣೆಕಟ್ಟುಗಳು ಎಂದು ವ್ಯವಸ್ಥೆ ಮಾಡುತ್ತಿದೆ. ಆದರೂ ನೀರಾವರಿಯ ಸಮಸ್ಯೆ ಇದೆ ಎಂದರೆ ರೈತರ ಅಜ್ಞಾನ ಮತ್ತು ಅಸಹಾಯಕತೆಯೇ ಕಾರಣ ಎಂದು ನನ್ನ ಅನಿಸಿಕೆ. ಕಾಡುಗಳಲ್ಲಿ ಉರುವಲು ಸಿಕ್ಕುತ್ತದೆ ಎಂದು ಸಿಕ್ಕಾಪಟ್ಟೆ ಕಡಿದು ಹಾಕುವುದು, ಅಡ್ಡಕಸುಬು ದೊಡ್ಡ ದುಡ್ಡು ತರುತ್ತದೆ ಎಂದು ನಾಟಾ ಕಳ್ಳಸಾಗಣಿಕೆ ಮಾಡುವುದು, ತಮಗೆ ತಿನ್ನಲು ಆಹಾರವಿಲ್ಲವೆಂದ ಕಾಡಂಚಿಗೆ ಬರುವ ಬೆಳೆ ರಕ್ಷಕ ಪ್ರಾಣಿಗಳನ್ನು ಇವರೇ ಹೊಡೆದುಕೊಂಡು ತಿನ್ನುವುದು, ಮಳೆಯ ನೀರು ಇಂಗಿಸುವ ಯಾವುದೇ ಸಾಂಪ್ರದಾಯಿಕ ಚಟುವಟಿಕೆಗೆ ತಿಲಾಂಜಲಿ ಇತ್ತಿರುವುದು, ಕೃಷಿ ಇಲಾಖೆ ಹೇಳುತ್ತಿರುವ ನೀರು ಇಂಗಿಸಿ, ಅಂತರಜಲ ಹೆಚ್ಚಿಸುವ ಆಧುನಿಕ ಉಪಾಯಗಳನ್ನು ಕಡೆಗಣಿಸಿರುವುದು ಇವೆಲ್ಲ ನೆಲಮೂಲದ ಜಲದ ಬತ್ತುವಿಕೆಗೆ ಕಾರಣವಾಗಿವೆ. ಇದು ಸ್ವಯಂಕೃತ ಅಪರಾಧ ಎನ್ನುವುದನ್ನು ರೈತರಷ್ಟೇ ಅಲ್ಲ ಉಳಿದವರೂ ಅರಿತುಕೊಳ್ಳಬೇಕು.
8. ವೈಜ್ಞಾನಿಕ ಮಾರುಕಟ್ಟೆಯ ಕೊರತೆ. ಬೆಳೆಗೆ ವೈಜ್ಞಾನಿಕ ಬೆಲೆ ಎಂಬುದಿಲ್ಲ. ಇದನ್ನು ರೈತರು, ಮಾಧ್ಯಮಗಳು, ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ ವೈಜ್ಞಾನಿಕ ಮಾರುಕಟ್ಟೆ ಎನ್ನುವುದಿದೆ, ಇರಬೇಕು. ಯಾವುದೇ ಉತ್ಪನ್ನಕ್ಕೆ ಉತ್ಪಾದನೆ, ಸಾಗಾಣಿಕೆ ವೆಚ್ಚದ ಜೊತೆಗೆ ಲಾಭದ ಅಂಶವೂ ಸೇರಿ ಮಾರುವ ಬೆಲೆ ನಿರ್ಧಾರವಾಗುತ್ತದೆ. ನಮ್ಮ ರೈತರು ಅದನ್ನು ಮಾಡುತ್ತಿದ್ದಾರೆ. ಆದರೆ ಒಂದೇ ಬೇಳೆಯನ್ನು ಹೆಚ್ಚು ಪ್ರಮಾಣದಲ್ಲಿ ಸಣ್ಣ ರೈತರು ಬೆಳೆದಾಗ ಅದನ್ನು ಸೂಕ್ತ ರೀತಿಯಲ್ಲಿ ಮಾರುವ ಅವಕಾಶ ಕಲ್ಪಿಸಬೇಕು. ಸಕ್ಕರೆಯ ವಿಷಯಕ್ಕೆ ಬಂದಾಗ ಕಾರ್ಖಾನೆಗಳು ನಿಗದಿತ ಮೊತ್ತವನ್ನು ರೈತ ಬೆಳೆ ತಂದು ಕೊಟ್ಟ ತಕ್ಷಣ ಪಾವತಿಸುವಂತೆ ಮಾಡಬೇಕು. ಪದೇ ಪದೇ ಬೆಳೆ ವೈಫಲ್ಯ ಕಾಣುವ ರೈತನಿದ್ದರೆ ಅವನ ವೈಫಲ್ಯಕ್ಕೆ ಕಾರಣಗಳೇನು ಎಂದು ತಾಲೂಕು ಮಟ್ಟದಲ್ಲಿ/ ಪಂಚಾಯಿತಿ ಮಟ್ಟದಲ್ಲಿ ಗುರುತಿಸಿ ಆತನಿಗೆ ತನ್ನ ವೈಫಲ್ಯ ಸರಿಮಾಡಿಕೊಳ್ಳುವ / ಪರ್ಯಾಯ ಬೆಳೆಗಳ ಸೂಕ್ತ ಅವಕಾಶಗಳ ಹಾದಿ ತೋರಿಸಬೇಕು. ಇದ್ಯಾವುದೂ ಆಗುತ್ತಿಲ್ಲ. ಬದಲಿಗೆ ಸಾವಿರಾರು ಟನ್ ಗಟ್ಟಲೆ ಬೆಳೆ ಬಂದಾಗ ಸರ್ಕಾರ ಬೆಲೆ ನಿಗದಿ ಮಾಡಿ, ಕೊಂಡುಕೊಳ್ಳಬೇಕು ಎಂಬುದು ನನಗೇಕೋ ಸರಿಕಾಣುತ್ತಿಲ್ಲ. ಎಲ್ಲವನ್ನೂ ಸರ್ಕಾರವೇ ಮಾಡುವುದಾದರೆ ರೈತರು ಸ್ಪರ್ಧೆ, ವ್ಯವಹಾರ ಎಲ್ಲ ಕಲಿಯುವುದು ಯಾವಾಗ? ಸ್ಪೂನ್ ಫೀಡಿಂಗ್ ಎಷ್ಟು ದಿನ ಮಾಡುತ್ತೀರಿ?
ರೈತರ ಆತ್ಮಹತ್ಯೆಗೆ ಮೇಲ್ನೋಟದ ಕಾರಣಗಳಿಷ್ಟಾದರೂ, ಉಳಿದಂತೆ ಅದ್ದೂರಿಯಲ್ಲದಿದ್ದರೂ ಸರಿಕರ ಮುಂದೆ ಸೈ ಎನಿಸಿಕೊಳ್ಳಲೇ ಬೇಕಾದ ಸಾಂಪ್ರದಾಯಿಕ ಮದುವೆ, ವರದಕ್ಷಿಣೆ, ಎಲ್ಲರಂತೆ ಬದುಕುವ ಹುಕಿಯಲ್ಲಿ ಮನೆಯವರೆಲ್ಲರ ಕೈಲಿ ಮೊಬೈಲು, ಗಾಡಿ, ಟಿ.ವಿ, ಆರ್.ಸಿ.ಸಿ ಮನೆ, ಹೋಟೆಲ್ ಊಟ, ಸಿನಿಮಾ, ಚಿಂತೆ ಹಾಗೂ ದೈಹಿಕ ದುಡಿಮೆ ಕಡಿಮೆ/ಅತಿಹೆಚ್ಚು ಆದಾಗ ಬರುವ ಕಾಯಿಲೆಗಳ ಖರ್ಚು ಇವೆಲ್ಲ ಆತನಿಗೆ ಭುಜದ ಮೇಲಿನ ಭಾರ ಹೆಚ್ಚು ಮಾಡುತ್ತವೆ. ಸಂಸಾರದಲ್ಲಿ ಒಬ್ಬನೇ ದುಡಿಯುವುದು, ನಾಲ್ಕು ಮಂದಿ ಖರ್ಚು ಮಾಡುವುದು ಎಂದಾದಾಗ ಅವನ ಮಾನಸಿಕ ಭಾರವೂ ಹೆಚ್ಚಾಗತೊಡಗುತ್ತದೆ. ಸರಿಯಾದ ಸಾಂತ್ವಾನ, ಸಹಕಾರ ಸಿಗದೇ ಮನೆಯವರೂ ಅಸಡ್ಡೆ ಮಾಡಿದರೆ, ಅವನೊಂದಿಗೆ ತಾವೂ ಕಂಗಾಲಾಗಿ ಬಿಟ್ಟರೆ ರೈತನೆಂದು ಅಲ್ಲ, ಉದ್ಯೋಗ ಕಳೆದುಕೊಂಡ ಬಿಳಿಕಾಲರ್ ಉದ್ಯೋಗಿ, ವ್ಯಾಪಾರದಲ್ಲಿ ನಷ್ಟವಾದ ವ್ಯಾಪಾರಿ ಹೀಗೆ ಸೋತ ಯಾರೇ ಆದರೂ ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದ್ದರಿಂದ ರೈತರಾದರೆ ಆತ್ಮಹತ್ಯೆಯೇ ಗ್ಯಾರಂಟಿ ಎನ್ನುವಂತೆ ಹೊಸ ಬ್ಯಾನರ್ ನ್ನು ರೈತಾಪಿ ಕಸುಬಿಗೆ ಅಂಟಿಸುವುದು ಬೇಡ.

ಕೊನೆಯ ಮಾತು : ಆಮೇಲೆ ಮುಗ್ಧ, ಅಜ್ಞಾನಿ ಹೆಣ್ಣುಮಕ್ಕಳು ಅಪ್ಪ, ಅಮ್ಮನ ಅಸಹಾಯಕತೆಗೆ ರೈತ ಮಗನನ್ನು ಮದುವೆಯಾದರೂ, ಆತನನ್ನು ಜರಿದು, ಕುಗ್ಗಿಸಿ ಇನ್ನೊಂದು ಅನಾಹುತಕ್ಕೆ ಕಾರಣವಾಗುತ್ತದೆ. ನನಗಂತೂ ನಾನೊಬ್ಬ ರೈತನ ಮಗಳೆಂದು ಹೇಳಿಕೊಳ್ಳಲು ಇಂದಿಗೂ ಹೆಮ್ಮೆಯಿದೆ. ಪ್ರೀತಿಯಾಗದಿದ್ದರೆ ಖಂಡಿತವಾಗಿಯೂ ರೈತನನ್ನೇ ಮದುವೆಯೂ ಆಗುತ್ತಿದ್ದೆ. ರೈತರಿಗೆ ಹೇಳೋಣ ನಾವೆಲ್ಲ ನಿಮ್ಮನ್ನು ಗೌರವಿಸುತ್ತೇವೆ. ನಿಮ್ಮ ಕೆಲಸ ನಮ್ಮೆಲ್ಲರ ಕೆಲಸದಷ್ಟೇ ಮೇಲ್ಮಟ್ಟದ್ದು. ಸಾಲ ಮಾಡಬೇಡಿ, ಹಾಸಿಗೆ ಇದ್ದಷ್ಟು ಕಾಲು ಚಾಚುತ್ತ ಬೆಳೆಯಿರಿ. ನಿಮಗೆ ಯಾವ ರೀತಿಯ ಸಹಾಯ ಬೇಕು, ನಮ್ಮನ್ನು ಕೇಳಿ. ಸಾಧ್ಯವಿದ್ದರೆ ಸಹಾಯ ಮಾಡುತ್ತೇವೆ. ಆಗದಿದ್ದರೆ ಸುಮ್ಮನಿರುತ್ತೇವೆ. ನಿಮ್ಮನ್ನು ಕೀಳಾಗೆಂತೂ ಕಾಣುವುದಿಲ್ಲ... ನಿಮ್ಮ ಕೊಳಕು ಬಟ್ಟೆ, ಬೆವರಿದ ದೇಹ, ಬರಿಗಾಲು, ಕೆದರಿದ ಕೂದಲು, ಎಂಜಾಯ್ ಮಾಡುವ ಎಲೆಅಡಿಕೆ, ಕೈಯಲ್ಲಿ ಮೊಬೈಲ್ ಇರಲಿ, ಇಲ್ಲದಿರಲಿ ನಿಮ್ಮ ಹೃದಯದಲ್ಲಿರುವ ಸಂವಹನ, ಸಹೃದಯತೆ, ಆತ್ಮಾಭಿಮಾನದಿಂದ, ಆತ್ಮವಿಶ್ವಾಸದಿಂದ ಹೊಳೆಯುವ ಕಣ್ಣುಗಳು ನಮಗಿಷ್ಟ.

2 ಕಾಮೆಂಟ್‌ಗಳು:

prathibha nandakumar ಹೇಳಿದರು...

ತುಂಬಾ ಚೆನ್ನಾಗಿ ಬರೆದಿದ್ದೀರಾ... ಥ್ಯಾಂಕ್ಸ್..
ಪ್ರತಿಭಾ ನಂದಕುಮಾರ್

Sheila Bhat ಹೇಳಿದರು...

ಪ್ರತಿಭಾ ಮೇಡಂ ಬಹಳ ಖುಷಿಯಾಯ್ತು ನಿಮ್ಮೀ ಮಾತಿಗೆ. ನಾಡಿನ ಉತ್ತಮ ಬರಹಗಾರ್ತಿಯರಲ್ಲೊಬ್ಬರೂ, ಜೀವನದ ಅಗಾಧ ಅನುಭವ ಹೊಂದಿದವರೂ ಆದ ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.