ಸೋಮವಾರ, ಏಪ್ರಿಲ್ 6, 2015

ನಾನೇಕೆ ನಟಿಯೋ, ನಿರೂಪಕಿಯೋ ಆಗಲಿಲ್ಲ?

                ಇದು ಫೇಸ್ಬುಕ್ ನ ನನ್ನ ಫೋಟೊ ನೋಡಿ ಕೆಲವರಿಗಾದರೂ ಉದ್ಭವವಾಗಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದು 10 ವರ್ಷಗಳ ಹಿಂದೆ. ಅಂದು ಮಾಧ್ಯಮಕ್ಕೆ ಬರುವಾಗ ಒಂದು ಫೋಟೊ ಹಿಡಿದುಕೊಂಡು ಸುಧಕ್ಕನ ಬಳಿ ಹೋಗಿದ್ದೆ. ಈ ಟಿ.ವಿಯಲ್ಲಿ ಆ್ಯಂಕರ್ ಆಗುವುದಕ್ಕೆ. ಆ ಫೋಟೊ ಇವತ್ತಿಲ್ಲ. ಅದನ್ನು ನೋಡಿ ಬಿಟ್ಟರೆ ಸಾಕು, ಯಾರೂ ನನ್ನನ್ನು ಆ್ಯಂಕರ್ ಮಾಡಲು ಸಾಧ್ಯವಿರಲಿಲ್ಲ. ಅಷ್ಟು ಕೆಟ್ಟದಾದ ಫೋಟೊ. ಯಾಕೆಂದರೆ ಶುದ್ಧ ಹಳ್ಳಿಯಿಂದ, ಅತೀ ಬಡತನ, ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಿನ್ನೆಲೆಯಿಂದ ಬಂದ ನನಗೆ ಆ್ಯಂಕರ್ ಆಗಬೇಕೆಂಬ ಹುಚ್ಚು ಬಂದಿದ್ದಾದರೂ ಹೇಗೆ? ಹುಚ್ಚೇನಲ್ಲ, ಅನಿವಾರ್ಯತೆ. ಆ ಹೊತ್ತಿಗೆ ನನಗೆ ಹೆಚ್ಚು ಸಂಬಳ ತರುವ ಕೆಲಸವೊಂದು ಬೇಕಿತ್ತು. ಬಿ.ಪಿ.ಓನಲ್ಲಿ ಅರ್ಧ ಸಂಬಳ ಕೊಟ್ಟು ಮೋಸ ಮಾಡಿದ್ದರು. ನನ್ನ ಜವಾಬ್ದಾರಿಗೆ ಅದು ಸಾಲುತ್ತಿರಲಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಎಸ್.ಎಸ್.ಎಲ್.ಸಿ ಮೇಲೆ ಪಿಯುಸಿ ಮಾಡಿ, ಆ ನಂತರ ಡಿಪ್ಲೋಮಾ ಓದಿದ್ದರೆ ಮಾತ್ರ ಎಂದು ಕೆಲಸಕ್ಕೆ ಸೇರುವ ದಿನ ಹೇಳಿದ್ದರು. ವಿವಿಧ ಜವಾಬ್ದಾರಿಗಳು, ನಿರೀಕ್ಷೆಗಳ ಭಾರದ ನಡುವೆ ಐಟಿಪಿಎಲ್ ನ ಹೊರ ಅಂಗಳದಲ್ಲಿ ನಿರಾಸೆಯಿಂದ ಬಂದು ನಿಂತಾಗ ಮೊಟ್ಟಮೊದಲ ಬಾರಿಗೆ ಸ್ವಪ್ರಯತ್ನದ ಬದಲು ಒಮ್ಮೆ ದೇವರ ಕೈಯಲ್ಲಿ ಕೆಲಸದ ಜವಾಬ್ದಾರಿ ಕೊಟ್ಟು ನೋಡಬೇಕು ಅನಿಸಿತು. ಹಾಗೆ ನಾನು ಪ್ರತಿ ಸಾಧ್ಯತೆಯೆಡೆ ಯೋಚಿಸಿ ದೇವರ ಮೇಲೆ ಭಾರ ಹಾಕಿ ಕೆಲಸದ ಹುಡುಕಾಟ ಆರಂಭಿಸಿದ್ದೆ. ನಿಜವಾಗಿಯೂ ನಾನು ಎಂದೆಂದಿಗೂ ನೆನೆಯುವ ವ್ಯಕ್ತಿ ಸುಧಕ್ಕ, ಶಬ್ಧಗಳನ್ನು ಮೀರಿದ ಕೃತಜ್ಞತೆ ಸುಧಕ್ಕಂಗೆ. ಅವಳು ಅಂದು ಹೀಗೆ ಈ ಟಿ.ವಿದೇನೋ ನಂಗೊತ್ತಿಲ್ಲ. ಅಲ್ಲಿ ನೀನು ನಿರೀಕ್ಷಿಸುವ ಸಂಬಳ ಇದ್ದಂತಿಲ್ಲ ಎಂದು ಹೇಳಿ, ಯೋಚಿಸಿ, ಹೀಗೊಬ್ಬರು ನನ್ನತ್ರ ಅಸಿಸ್ಟೆಂಟ್ ಬೇಕು ಹೇಳ್ತಿದ್ರು ಎಂದು ಶಶಿಧರ್ ಭಟ್ಟರ ನಂಬರ್ ಕೊಟ್ಟು, ಅವರಿಗೊಂದು ಫೋನ್ ಮಾಡಿ ನೋಡಿ, ಹೀಗೊಬ್ಬರನ್ನು ಕಳಿಸುತ್ತಿದ್ದೇನೆ. ನಿಮಗೆ ಸೂಕ್ತವಾಗಿದ್ದರೆ ಕೆಲಸಕ್ಕೆ ತೆಗೆದುಕೊಳ್ಳಬಹುದೆಂದಿದ್ದರು. ಅದಾದ ಮೇಲೆ ನಾನು ಮಾಧ್ಯಮಕ್ಕೆ ಬಂದೆ. ಅಲ್ಲಿಯೇ ನನಗೆ ಮಾಧ್ಯಮದ ಎ, ಬಿ, ಸಿ, ಡಿ ತಿಳಿಯಿತು. ಮಾಧ್ಯಮ ಕ್ಷೇತ್ರ ನನ್ನದಾಯಿತು.
ನಂತರ ಆ್ಯಂಕರ್ ಆಗುವ ಆಲೋಚನೆ ಇರಲಿಲ್ಲ. ಅದರ ಅವಶ್ಯಕತೆಯೂ ನನಗಿರಲಿಲ್ಲ. ಹಾಗಾಗಿ ಅಲ್ಲಿಗೇ ಬಿಟ್ಟೆ. 2009ರಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವಾಗ ಶ್ರೀ ಹೇಳಿಕೆಯ ಮೇಲೆ ಆ್ಯಂಕರಿಂಗ್ ಮಾಡಿದ್ದೆ. ಅದೂ ಇದೇ ಪ್ರೊಫೈಲ್ ಸೀರೆಯ ಮೇಲೆ, ದಿನವೆಲ್ಲ ಸುತ್ತಾಡಿ ಆ ಸಂಚಿಕೆಯ ಶೂಟಿಂಗ್ ಮಾಡಿದಾಗ ಬಸವಳಿದು, ಬಾಡಿ ಹೋಗಿದ್ದೆ. ಆದ್ರೂ ಕೆಲಸ ಮಾಡುವವನಿಗೆ ಯಾವುದಾದರೇನು ಎಂದು ಇದ್ದ ಬದ್ದ ಶಕ್ತಿ ಹಾಕಿ, ಒಲ್ಲದ ಮನಸ್ಸಿನಿಂದ ಆ್ಯಂಕರಿಂಗ್ ಮಾಡಿದ್ದೆ. ಮುಂದೊಮ್ಮೆ ನಾನೂ ಆ್ಯಂಕರಿಂಗ್ ಮಾಡುತ್ತೇನೆ ಎಂದಾಗ ನಿನಗೆ ಟಿ.ಆರ್.ಪಿ ಇಲ್ಲವೆಂಬ ಮಾತು ಕೇಳಿಬಂದಿತ್ತು.
            ಇದೇ ವೇಳೆ `ಸಮಯ' ವಾಹಿನಿಯಲ್ಲಿ ಸೇರಲು ಸಂದರ್ಶನಕ್ಕೆ ಹೋಗಿದ್ದೆ. ಆಗ ಪ್ರಕಾಶ್ ಬೆಳವಾಡಿ ಇದ್ದರು. ಅವರು ನೀನು ಪ್ರೊಡಕ್ಷನ್ ಗಿಂತಲೂ ಆ್ಯಂಕರಿಂಗ್ ಗೆ ಸೂಟ್ ಆಗುತ್ತಿ. ನಿನ್ನ ಭಾಷೆ, ಆಂಗಿಕ ಭಾಷೆ ಮತ್ತು ಮುಖ ಚಲನೆ ಅದಕ್ಕೆ ಸೂಕ್ತವಾಗಿದೆ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ನನ್ನನ್ನು ಕೆಲಸಕ್ಕೆ ಕರೆಯುವ ಮೊದಲೇ ಅವರು ಕೆಲಸ ಬಿಟ್ಟಾಗಿತ್ತು!
             ಇನ್ನು ಧ್ವನಿ ನೀಡುವ ಅವಕಾಶ `ಭಾನಾಮತಿ'ಯಲ್ಲಿ ಬಂದಿತ್ತು. ಆಗ ನಾನದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನಾನು ಆಸಕ್ತಿ ತೋರಿದಾಗ ಸಂಬಂಧಿಸಿದ ಜನರಿಗೆ ನನ್ನ ಧ್ವನಿ ಇಷ್ಟವಾಗಲಿಲ್ಲ. `ಇದು ಯಾರು ಬರೆದ ಕಥೆಯೋ' ಮುಗಿದ ಮೇಲೆ ಖಿನ್ನತೆಯಿಂದ ಬಳಲುತ್ತಿದ್ದಾಗ ಜನರಲ್ಲಿ ಬೆರೆತು ಸರಿಯಾಗಬಹುದೆಂದು ಸಂಬಂಧಪಟ್ಟವರನ್ನು ರಿಪೋರ್ಟಿಂಗ್ ಗೆ ಕಳಿಸಲು ಕೋರಿಕೊಂಡೆ. ಯಥಾಪ್ರಕಾರ `ಇಲ್ಲ' ಎನ್ನುವ ಉತ್ತರ ಬಂತು. ಹಾಗೇ ಒಂದೆಡೆ ಕೂತು ಕೆಲಸ ಮಾಡಲು ಸಾಧ್ಯವೇ ಇಲ್ಲದಾಗ ಎಲ್ಲಾದರೂ ಧಾರಾವಾಹಿಗೆ ನಟಿಸೋಣ ಎಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ.
             ಹೈಸ್ಕೂಲಿನಲ್ಲಿ ಚಂದ್ರಶೇಖರ್ ಕಂಬಾರರ ನಾಟಕ `ಬೆಪ್ಪು ತಕ್ಕಡಿ ಬೋಳೇ ಶಂಕರ' ಆಡಿದ್ದೆವು. ಅದರಲ್ಲಿ ಅಂತಹ ಮುಖ್ಯ ಸ್ತ್ರೀ ಪಾತ್ರವಿರದಿದ್ದರಿಂದಲೂ, ಹಿನ್ನೆಲೆ ಸಂಗೀತಕ್ಕೆ ಅವಶ್ಯಕತೆ ಇದ್ದಿದ್ದರಿಂದಲೂ ನಾನು ಪಾತ್ರ ವಹಿಸದೆ ಹಿನ್ನೆಲೆ ಹೇಳಿದೆ. ಶಿರಸಿ ತಾಲೂಕು ಗೋಳಿ ನಾಟಕ ಮಂದಿರದ ಉದ್ಘಾಟನೆ ನನ್ನ ನೃತ್ಯದೊಂದಿಗೇ ಆಗಿತ್ತು. ಆದರೆ ಅದರ ಒಂದು ನಾಟಕದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು.
           ಬಹುಷಃ ನನ್ನ ಆಧ್ಯಾತ್ಮಿಕ ಜೀವನಕ್ಕೆ, ನಾನು ಇಟ್ಟುಕೊಂಡ ಮೌಲ್ಯ, ಆದರ್ಶಗಳಿಗೆ ಚ್ಯುತಿ ಬಂದುಬಿಡಬಹುದೆಂಬ ಕಾಳಜಿ ನನ್ನ ತಾಯಿ, ತಂದೆ ಎರಡೂ ಆಗಿರುವ ದೇವರಿಗೆ. ಆದ್ದರಿಂದಲೇ ನನಗೆ ಆ ಬಗ್ಗೆ ಗಂಭೀರ ಆಸಕ್ತಿ ಮೂಡಿಲ್ಲ ಎಂದುಕೊಳ್ಳುತ್ತೇನೆ. ಗಂಭೀರ ಆಸಕ್ತಿ ಇದ್ದರೆ ಮಾತ್ರ ಪ್ರೊಫೈಲ್ ಶೂಟ್ ಮಾಡಿ, ಹೇಗೆ ಅಭಿವ್ಯಕ್ತಿಸಬೇಕೆಂಬ ಎಲ್ಲ ಆಲೋಚನೆ ಬರಲು ಸಾಧ್ಯ. ಇಷ್ಟಕ್ಕೂ ನಾನು ಇಷ್ಟಪಡದ ವೃತ್ತಿಯೇನಾದರೂ ಇದ್ದರೆ ಅದು ನಟನೆ ಮತ್ತು ರಾಜಕೀಯವೇ ಸರಿ. ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತ, ಒಪ್ಪಿಕೊಳ್ಳೂತ್ತ, ನಮ್ಮತನವನ್ನೇ ಕಳಚಿಕೊಳ್ಳುತ್ತ ಹೋಗಬೇಕಾದ ವೃತ್ತಿ ಅವು. ಅವಕ್ಕೂ ನನಗೂ ಎಣ್ಣೆ, ಸೀಗೆಕಾಯಿ ಸಂಬಂಧವಾಗುತ್ತದೆಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಗ ಅವಕಾಶ ಸಿಕ್ಕರೂ ನನ್ನ ಕೆಲಸ ಮುಗಿದ ಹೊರತು ಸಾಧ್ಯವೇ ಇಲ್ಲ. ಇಷ್ಟಕ್ಕೂ ಊಟಕ್ಕಿಲ್ಲದ ಉಪ್ಪಿನಕಾಯಿ ಆಮೇಲೆ ಬಂದರೆ ಏನು ಪ್ರಯೋಜನ?

ಬುಧವಾರ, ಮಾರ್ಚ್ 25, 2015

ಮಾನಸಿಕ ಆರೋಗ್ಯ, ಆತ್ಮಹತ್ಯೆ ಮತ್ತು ಅಧ್ಯಾತ್ಮಿಕ ಪರಿಹಾರ

           ಬಹುಷಃ ಈ ವಿಷಯದಲ್ಲಿ ನನ್ನಷ್ಟು ಅಥೆಂಟಿಕ್ ಆಗಿ ಹೇಳಬಲ್ಲವರು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡುತ್ತ, ಅಧ್ಯಾತ್ಮಿಕ ಸಾಧನೆ ಮಾಡುತ್ತಿದ್ದ ನನಗೆ ಆತ್ಮಹತ್ಯೆಯ ಒಳ ಸುಳಿವು ಅರ್ಥವಾಗಿದ್ದು ಆಕಸ್ಮಿಕವೇ ಸರಿ. ಆದಾಗ್ಯೂ ನನ್ನದೇ ಅನುಭವ ಮತ್ತು ನಾನು ಕಂಡು ಕೊಂಡ ಕೆಲವು ಸತ್ಯಗಳು (ಅದು ನನ್ನ ಮಟ್ಟಿಗೆ ಮಾತ್ರ ನಿಜವೂ ಆಗಿರಬಹುದು, ಗೊತ್ತಿಲ್ಲ) ಸದ್ಯದಲ್ಲೇ ಪುಸ್ತಕ ರೂಪದಲ್ಲಿ ಬರಲಿವೆ.
ದಕ್ಷ ಅಧಿಕಾರಿ ಡಿ.ಕೆ.ರವಿ ಸಾವಿನ ಸುತ್ತ ಸುತ್ತುತ್ತಿದ್ದ ಮನಸ್ಸು 2009ಕ್ಕೆ ಹೋಗಿ ನಿಂತಿತು. ಅಂದಿಗೆ ನಾನು ನನ್ನದೇ ರೀತಿಯಲ್ಲಿ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡಲು ಆರಂಭಿಸಿ 7 ವರ್ಷ, ಅಧ್ಯಾತ್ಮಿಕ ಜೀವನದಲ್ಲಿ ಪ್ರಯೋಗಗಳನ್ನು ಮಾಡಲು ತೊಡಗಿ 15+ ವರ್ಷಗಳೇ ಆಗಿತ್ತು. ಆದರೆ ಅದೊಂದು ದಿನ ನಾನೂ ವಿಷ ಕುಡಿದೆ. ನನಗೆ ಸಾಯಲು ಬಲವಾದ ಕಾರಣ ನನ್ನ ಮಟ್ಟಿಗೆ ಇತ್ತು. ನನಗೆ ನನ್ನ ಸುತ್ತಲಿನವರ ಒತ್ತಡದಿಂದ ಬಿಡುಗಡೆ ಬೇಕಿತ್ತು. ನನ್ನ ಆತ್ಮಸಾಕ್ಷಿಯಂತೆ, ಕೊಟ್ಟ ಮಾತಿಗೆ ತಪ್ಪದೇ ಇರಬೇಕಾಗಿತ್ತು. ಅದು ಸಾಧ್ಯವಿಲ್ಲದೇ ಹೋದರೆ ಸಾವೇ ಮೇಲೆಂದು ನಂಬಿದವಳು ನಾನು. ಅತ್ಯಂತ ಸ್ವಚ್ಛಂದವಾಗಿ ಹಾರಾಡುತ್ತಿರುವ ಹಕ್ಕಿಗೆ ಇದ್ದಕ್ಕಿದ್ದಂತೆ ಉರುಳು ಹಾಕಿ ಎಳೆದರೆ ಯಾವ ಸ್ಥಿತಿಯೋ ಅದೇ ನನ್ನ ಸ್ಥಿತಿಯಾಗಿತ್ತು. ಆದರೆ ಆ ಹೊತ್ತಿಗೆ ನನ್ನ ಆಧ್ಯಾತ್ಮಿಕ ಅನುಭವವೊಂದು ನನ್ನ ಸಾವಿನ ಕಾಲ ಬಂದಿಲ್ಲವೆಂಬುದನ್ನು ತಿಳಿಸಿತು. ಹಾಗಾಗಿ ಒಂದು ದೃಢವಾದ ನಿರ್ಧಾರದೊಂದಿಗೆ ನಾನೇ ಆಸ್ಪತ್ರೆಗೆ ತಲುಪಿ ಕಚೇರಿಗೆ ವಿಷಯ ತಿಳಿಸಿ ಅಡ್ಮಿಟ್ ಆದೆ. ಅಂದು ನನಗೆ ಗೊತ್ತಾಯಿತು, ಜೀವನದ ಮೌಲ್ಯವೆಷ್ಟು, ಒಂದು ಯಕಶ್ಚಿತ್ ಉಸಿರಿಗಾಗಿ ನಾವು ಎಷ್ಟು ಹೋರಾಡುತ್ತೇವೆ, ಅದು ಹೊರಟುಹೋದರೆ ಏನಿದೆ? ಸುಮ್ಮನೆ ಈ ಯುದ್ಧ, ಸಂಘರ್ಷ, ಸ್ಪರ್ಧೆ ಎಲ್ಲ ಎನ್ನುವುದು ನನ್ನೊಳಗೆ ಮತ್ತಷ್ಟು ದೃಢವಾಯಿತು.

            ಈ ಹೊತ್ತಿನಲ್ಲಿ ಮಾನಸಿಕ ಆರೋಗ್ಯಕ್ಕೆ ನಾನು ವೈದ್ಯಕೀಯ ಚಿಕಿತ್ಸೆಯೊಂದೇ ಎಂದು ನಂಬಿಕೊಂಡ ಕಾಲವದು. ಯಾಕೆಂದರೆ ವಯಸ್ಸು ಸಣ್ಣದು, ಅನುಭವ ಸಣ್ಣದು, ಬಿರುಗಾಳಿಗೆ ಎದೆಯೊಡ್ಡಬಲ್ಲೆ, ಇವರೆಲ್ಲ ಎಷ್ಟು ದುರ್ಬಲರು ಎಂದು ತಿಳಿದು ಮೆರೆಯುವ ಉಡಾಪೆ ಕಾಲವದು. ಹಾಗಾಗಿಯೇ ಭಾನಾಮತಿಯ ಶೂಟಿಂಗ್ ಗೆ ಗಾಣಗಾಪುರಕ್ಕೆ ಹೋದಾಗ ಅಲ್ಲಿಯ ಹೆಂಗಸರನ್ನು, ಜೋತಾಡುವ ದೆವ್ವಗಳನ್ನು ನೋಡಿ ಶರಪಂಜರದ ಉದಾಹರಣೆ ಕೊಟ್ಟು ದೊಡ್ಡ ಭಾಷಣವನ್ನೇ ಬಿಗಿದಿದ್ದೆ. ಮನೆಯ ಕಷ್ಟಗಳನ್ನು ಇಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ನಕ್ಕಿದ್ದೆ. ಇನ್ನು ಗಾಳಿ ಬಂದಿದೆ ಅದು ಇದು ಎಂದು ಬೆಟ್ಟ, ಗುಡ್ಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತಲೆ ಕುಣಿಸುತ್ತ ಕೂಗುವವರನ್ನು ನೋಡಿಯಂತೂ ನಕ್ಕೂ ನಕ್ಕೂ ಸುಸ್ತಾಗಿದ್ದೆ. ಇನ್ನೂ ನೆನಪಿದೆ, ಅದು ಭಾನಾಮತಿಯ ಶೂಟಿಂಗ್. ಗದಗ ಹತ್ತಿರದ ಯಾವುದೋ ಆಂಜನೇಯ ಹಾಗೂ ನರಸಿಂಹ ದೇವಸ್ಥಾನಗಳಲ್ಲಿದ್ದೆವು. ಅಂದು ಅಲ್ಲಿ ಜನರು ತಮ್ಮ ತಲೆ ಆಡಿಸುವ ರೀತಿಯನ್ನು ನೋಡಿ ನಗಲು ಆರಂಭಿಸಿದವಳು ಬಹುಷಃ ಪ್ಯಾಕಪ್ ಅಂದಾಗ ಸುಮ್ಮನಾಗಿದ್ದೆ. ನನಗೆ ಅದೊಂದು ಸಮೂಹ ಸನ್ನಿಯಂತೆ, ದುರ್ಬಲ ಮನಸ್ಸಿನಂತೆ ಅನ್ನಿಸಿತ್ತು.
              ಈ ಮಧ್ಯೆ ದೇವರ ಮೇಲಿನ ಪ್ರೀತಿ, ನನ್ನ ಅಧ್ಯಾತ್ಮಿಕ ಸಾಧನೆ  ದಿನಗಳೆದಂತೆ ಹೆಚ್ಚಾಗುತ್ತ ಹೋಯಿತು. ನನಗೆ ವಿಚಿತ್ರ ಅನುಭವಗಳೂ ಆಗತೊಡಗಿದವು. ಅಷ್ಟೇ ಅಲ್ಲ, ಯಾವು ಯಾವುದನ್ನು ನಾನು ಅಲ್ಲಗಳೆದಿದ್ದೆನೋ ಮತ್ತು ನನಗೆ ಸತ್ಯ ಗೊತ್ತಾಗಬೇಕು ಎಂದು ಪ್ರಾರ್ಥಿಸುತ್ತಿದ್ದೆನೋ ಅವೆಲ್ಲ ನನಗೆ ಸತ್ಯವಾಗಿ ತೋರತೊಡಗಿದವು. ಒಂದು ಸಮಸ್ಯೆ ಬಿಡಿಸಲು ವರ್ಷಗಟ್ಟಲೆ ಹೆಣಗಾಡಿದ್ದ ನನಗೆ ಪರಿಹಾರಗಳು ನಿಮಿಷಗಳಲ್ಲಿ ದೊರಕತೊಡಗಿದವು. ಒಬ್ಬ ವ್ಯಕ್ತಿಯ ಸಾಮರ್ಥ್ಯದ ಬದಲು ಹತ್ತಿಪ್ಪತ್ತು ಜನರಿಗಾಗುವಷ್ಟು ಶಕ್ತಿ ನನ್ನಲ್ಲಿ ಪ್ರವಹಿಸತೊಡಗಿತು. ಈ ಶಕ್ತಿಯನ್ನು ಭರಿಸಲಾಗದೇ ನನ್ನ ದೇಹ ದಿನದಿಂದ ದಿನಕ್ಕೆ ದುರ್ಬಲವಾಗತೊಡಗಿತು. ಆದರೂ ನನ್ನೊಳಗಿನ ಸಂಶಯ, ವಿಮರ್ಶಾತ್ಮಕ ಬುದ್ದಿ ಕಡಿಮೆಯಾಗಲಿಲ್ಲ. ಸತ್ಯವೆಂದು ಹೃದಯ ಹೇಳಿದರೂ ಬುದ್ಧಿಯ ಮೂಲೆಯಲ್ಲಿದ್ದ ಸಂಶಯ ಒಪ್ಪಲು ಸಿದ್ಧವಿರಲಿಲ್ಲ. ಈ ಶಕ್ತಿಯ ಸಂಚಲನಕ್ಕೆ ಹಗಲು, ರಾತ್ರಿ ಕೆಲಸ ಮಾಡಬಲ್ಲವಳಾದೆ. ಕೊನೆ ಕೊನೆಗೆ ನನಗೆ ಏನಾಗಿದೆ ಎಂದು ಚಿವುಟಿ ನೋಡಿಕೊಳ್ಳುವಷ್ಟು ಆನಂದ. ಈ ಜಗತ್ತಿನಲ್ಲಿ ಯಾರೂ ನನಗಿಂತ ಮೇಲಿಲ್ಲ, ಇದ್ದರೆ ದೇವರೊಬ್ಬನೆ. ಅವನಿಗೆ ಕೇರ್ ಮಾಡಿದರೆ ಸಾಕು, ಇವರಿಗೆಲ್ಲ ಅಲ್ಲ ಎನ್ನುವ ಮನಃಸ್ಥಿತಿ. ಯಾರನ್ನು ನೋಡಿದರೂ ಕಣ್ಣೀರು ಉಕ್ಕಿ ಹರಿಯುತ್ತಿತ್ತು. ತಡೆಯಲಾಗದ ಕಣ್ಣೀರು. ಯಾಕೆ, ಏನು ಗೊತ್ತಿಲ್ಲ. ದುಃಖದ್ದೂ ಅಲ್ಲ, ಖುಷಿದೂ ಅಲ್ಲ. ದೇವರ ಹೆಸರು ಹೇಳಿದರೇ ಸಾಕು ಆನಂದದ ಮೈಮರೆತ. ಹೀಗೆ ತಿಂಗಳಾನುಗಟ್ಟಲೆ ಕಳೆದವು. ಇವುಗಳ ಮಧ್ಯದಲ್ಲೇ ನನ್ನ ಕೆಲಸ, ಮನೆಯ ಜವಾಬ್ದಾರಿ, ಒತ್ತಡಗಳನ್ನು ನಿಭಾಯಿಸುತ್ತಿದ್ದೆ. ಹೀಗೆ ಕೊನೆಗೊಮ್ಮೆ ಮನೋವೈದ್ಯರನ್ನು ಸಂಪರ್ಕಿಸಿ ಅಲೋಪತಿ ಮಾತ್ರೆಗಳನ್ನು ನುಂಗತೊಡಗಿದೆ. ಪರಿಣಾಮವಾಗಿ ಅತಿನಿದ್ದೆ, ಜಡತ್ವ, ತೂಕ ಹೆಚ್ಚಳದಂತಹ ಅಡ್ಡಪರಿಣಾಮಗಳು ಕಾಣಿಸಿಕೊಂಡವು. ಈ ಮಾತ್ರೆಗಳನ್ನು ನುಂಗದೇ ಇದ್ದರೆ ಚೆನ್ನಾಗಿತ್ತೇನೋ ಎಂದು ಈಗ ಅನ್ನಿಸುವುದಿದೆ. ಯಾಕೆಂದರೆ ನನಗೆ ನಿಜವಾಗಿಯೂ ಖಿನ್ನತೆಯಾಗಿರಲಿಲ್ಲ. ಬದಲಿಗೆ ನಾನು ನನ್ನ ಅಧ್ಯಾತ್ಮಿಕ ಸಾಧನೆಯ ಫಲಶೃತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿತ್ತು. ಅಧ್ಯಾತ್ಮಿಕ ಗುರುವಿನ ಪ್ರತ್ಯಕ್ಷ ಪ್ರಮಾಣ ಬೇಕಿತ್ತು. ಯಾಕೆಂದರೆ ಇಲ್ಲದ್ದನ್ನು ನಂಬುವವಳಲ್ಲ ನಾನು ಎನ್ನುವ ಹಟ! ಈ ಆಧುನಿಕ ಮನಸ್ಥಿತಿ, ವಿಮರ್ಶಾತ್ಮಕ ಬುದ್ಧಿ ಎಷ್ಟೊಂದು ಆಳವಾಗಿದೆಯೆಂದರೆ ನನ್ನನ್ನೆ ಅಲ್ಲಗಳೆಯಲೂ ಅವು ಹಿಂದು ಮುಂದು ನೋಡುವುದಿಲ್ಲ!
                ಸರಿ; ಮಾತ್ರೆ ತೆಗೆದುಕೊಂಡ ತಿಂಗಳಿಗೆ ನಿದ್ದೆ ಸರಿಯಾಯಿತು ಓಕೆ ಎಂದು ಖುಷಿ ಪಟ್ಟೆ. ಆದರೆ ಮುಂದಿನ ಒಂದು ವಾರದಲ್ಲಿ ನಿದ್ದೆ ಮತ್ತೆ ಹದಗೆಟ್ಟು ಈಗ ನಿಜವಾಗಿಯೂ ಖಿನ್ನತೆ ಆವರಿಸಿತು. ಪರಿಣಾಮ ಆತ್ಮಹತ್ಯೆಯ ಪ್ರಯತ್ನ.
ಇಷ್ಟಾದರೂ ನನ್ನ ಅಜ್ಞಾನ ಕಡಿಮಯಾಗಲಿಲ್ಲ. ಬದಲಿಗೆ ಇನ್ನೂ ಹೆಚ್ಚೇ ಆಯಿತು. ಮತ್ತೆ ಮಾತ್ರೆಗಳ ಮೊರೆಹೋದೆ.
ಆದರೆ ಈ ನಡುವೆ ನಾನು ದೇವರನ್ನು, ಅವನಿಗೆ ಶರಣಾಗುವುದನ್ನು ಮಾತ್ರ ಬಿಡಲಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚು ಭಕ್ತಿಯ ದಾರಿ ಹಿಡಿದೆ. ಜ್ಞಾನ, ಕರ್ಮ, ಯೋಗ ಎಲ್ಲವೂ ನನ್ನ ಪಾಲಿಗೆ ಎಟುಕದ ಕುಸುಮವಾದಾಗ ಭಕ್ತಿಯೊಂದೇ ಉಳಿದಿತ್ತು ಪುಣ್ಯಕ್ಕೆ. ಅದರ ಫಲವಾಗಿ ಯಾರೋ ಹೇಳಿದ ದೇವಸ್ಥಾನಗಳಿಗೆ ಹೋದೆ. ಜಾಗೃತವಾಗಿವೆಯೆಂಬ ದೇವಸ್ಥಾನಗಳು ನಿಜವಾಗಿಯೂ ನನ್ನ ಮಟ್ಟಿಗೆ ಆಸ್ಪತ್ರೆಯಂತೆ ಕೆಲಸ ಮಾಡತೊಡಗಿದವು. ದಿನದಿಂದ ದಿನಕ್ಕೆ ನನ್ನ ಖಿನ್ನತೆ ನೀಗುತ್ತ ಬಂತು. ನಿದ್ದೆಯೂ ಸರಿಯಾಗುತ್ತ ಬಂತು. ಜೊತೆಗೆ ಹಿಂದೆ ನನಗೆ ಒತ್ತಡ ನೀಡುತ್ತಿದ್ದ ವಾಸ್ತವ ಜಡಕುಗಳೆಲ್ಲ ಬಿಡುಗಡೆಯಾಗುತ್ತ ಬಂದವು. ಆದರೆ ಆತ್ಮಹತ್ಯೆಯ ಯೋಚನೆ ಮಾತ್ರ 2012ರ ಕೊನೆಯ ತನಕ ಮನದಾಳದಲ್ಲಿ ಎಲ್ಲೋ ಇತ್ತು. ಬಹುಷಃ ನಾನು ದೇವರ ದಾರಿಯನ್ನು ಬಿಟ್ಟು ಪ್ರಾಪಂಚಿಕಳಾಗಿ ಮಾತ್ರೆಗಳನ್ನೇ ಅವಲಂಬಿಸಿದ್ದರೆ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿ ಸಫಲಳಾಗುತ್ತಿದ್ದೆನೋ ಏನೊ! ಆದರೆ ಸುದೈವವಶಾತ್ ಭಕ್ತಿಯ ಮಾರ್ಗ ನನ್ನನ್ನು ಕೈಬಿಡಲಿಲ್ಲ. ಬದಲಿಗೆ ಒಬ್ಬ ಖ್ಯಾತ ಆಯುರ್ವೇದ ವೈದ್ಯರ ಬಳಿಗೆ ಕೊಂಡೊಯ್ಯಿತು. ಅವರು ಅಲೊಪತಿಯ ಜೊತೆಗೆ ತಮ್ಮ ಮಾತ್ರೆಯನ್ನೂ ತೆಗೆದುಕೊಳ್ಳಿ ಎಂದರು. ಆದರೆ ನನಗೆ ಅಲೊಪತಿ ಬಿಟ್ಟರೆ ಸಾಕಾಗಿತ್ತು. ಆಗಲೆ 3 ವರ್ಷ ಮಾತ್ರೆ ನುಂಗಿ ಮಾತ್ರೆಗಳನ್ನು ಕಂಡರೆ ಸಿಟ್ಟು ಬರುವ ಹಂತಕ್ಕೆ ಹೋಗಿದ್ದೆ. ಇರಲಿ ಇದೊಂದು ನೋಡೋಣ ಎನ್ನುತ್ತಲೇ ದೇವರು ತೋರಿಸಿದ ದಾರಿ ಎಂದು ನಂಬಿಕೊಂಡು ಆ ಮಾತ್ರೆಗಳನ್ನು ನುಂಗುತ್ತ ಬಂದೆ. ನಂಬಿ, ಬಿಡಿ ಕೇವಲ 1-2 ವಾರಗಳಲ್ಲಿ ನನ್ನ ಆಂತರ್ಯದಲ್ಲಿದ್ದ ಸಾಯುವ ಭಾವನೆ ಹೊರಟುಹೋಯಿತು!
                 ಆ ನಂತರ ಸಣ್ಣಪುಟ್ಟ ಕಾಯಿಲೆಗಳು ಬಂದವು. ಅವುಗಳಿಗೆ ಚಿಕಿತ್ಸೆ ಮಾಡುವಾಗ ರಕ್ತಹೀನತೆ ಇರುವುದು ಕಂಡುಬಂತು. ಅದಕ್ಕೂ ಔಷಧಿ ಮಾಡಿದಾಗ ನನಗೆ ಅಕ್ಷರಶಃ ಮಾತ್ರೆಗಳಿಂದ ಮುಕ್ತಿ ಸಿಕ್ಕಿತು. ಯಾವ ಅಲೋಪತಿಯ ವೈದ್ಯರು ಸಾವಿರ ಸಾವಿರ ಬುದ್ಧಿ ಹೇಳಿ, ಕ್ವಿಂಟಾಲ್ ಗಟ್ಟಲೆ ಮಾತ್ರೆ ಕೊಟ್ಟು ಏನಿಲ್ಲ ಅಂದ್ರೂ 4-6 ವರ್ಷ ಬಿಡದೇ ಮಾತ್ರೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರೋ, ಅಂತಹ ಕಾಯಿಲೆಯೊಂದು ಆಧ್ಯಾತ್ಮಿಕ ಪರಿಹಾರಗಳು, ಆಯುರ್ವೇದದಿಂದ ಕೇವಲ 1-2 ವರ್ಷಗಳಲ್ಲಿ ಸಂಪೂರ್ಣ ಗುಣವಾಯಿತು. ಇಂದು ಒಂದೇ ಒಂದು ಮಾತ್ರೆ ಸಹ ತೆಗೆದುಕೊಳ್ಳುವುದಿಲ್ಲ ಎಂದರೆ ನಂಬುತ್ತೀರಾ?
                ಅಲ್ಲದೇ ನನಗೆ ಅಂಟಿಕೊಂಡಿತ್ತಲ್ಲ ದೊಡ್ಡ ರೋಗ - ಅದೇ ಸಂಶಯ ಪ್ರವೃತ್ತಿ ಅದೂ ನಿವಾರಣೆಯಾಯಿತು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನು ಮಾಡಿದ್ದ ಟ್ರಸ್ಟ್ ರೋಗಿಗಳಿಗೆ ಉಚಿತ ಔಷಧಿ ನೀಡುವ ಹುಚ್ಚು ಗುರಿಯನ್ನು ಹೊಂದಿತ್ತು. ಯಾಕೆಂದರೆ ಅಲೋಪತಿಯ ಔಷಧಿಗಾಗಿ ಪ್ರತಿ ತಿಂಗಳು ಏನಿಲ್ಲವೆಂದರೂ ಸಾವಿರ ರೂ. ಇಡಬೇಕಾಗಿತ್ತು. ನನ್ನಂತೆ ಬೇರೆಯವರಿಗೆ ಆಗದಿರಲಿ ಎಂದೇ ಈ ಟ್ರಸ್ಟ್ ಮೂಲಕ ಸಹಾಯ ಮಾಡುವ ಇರಾದೆ ನನ್ನದಾಗಿತ್ತು.
ಆದರೆ ಈಗ ನನ್ನ ಟ್ರಸ್ಟ್ ನ ಬೈಲಾಗೆ ಇನ್ನಷ್ಟು ಸೇರಿಸಿ ಮತ್ತೊಮ್ಮೆ ನೋಂದಾಯಿಸುತ್ತಿದ್ದೇನೆ. ಅದೇನೆಂದರೆ ಮಾನಸಿಕ ರೋಗಿಗಳಿಗೆ, ಆತ್ಮಹತ್ಯೆಯ ಕುರಿತು ಯೋಚಿಸುವವರಿಗೆ ಉಚಿತವಾಗಿ ಆಧ್ಯಾತ್ಮಿಕ ಪರಿಹಾರ ಸೂಚಿಸುವುದು ಮತ್ತು ಮಕ್ಕಳಲ್ಲಿ ಕೆಲಸ, ಭಕ್ತಿ, ಶ್ರದ್ಧೆ, ಪ್ರೀತಿಸುವ ಗುಣವನ್ನು ಬೆಳೆಸುವುದು ಮುಖ್ಯವಾಗಿವೆ. ಯಾಕೆಂದರೆ ಈ ಗುಣಗಳನ್ನು ನಾನು ಹೊಂದಿದ್ದರಿಂದಲೇ ನನಗೆ ಈ ಕೆಟ್ಟ ಕಾಯಿಲೆಯಿಂದ ಹೊರಬರಲು ಸಾಧ್ಯವಾಯಿತು ಮತ್ತು ದೇವರಿದ್ದಾನೆ, ಅವನು ಎಲ್ಲೆಲ್ಲೂ ಇದ್ದಾನೆ, ಎಲ್ಲರಲ್ಲೂ, ಎಲ್ಲದರಲ್ಲೂ ಇದ್ದಾನೆ ಎಂಬ ನನ್ನದು ಕೇವಲ ನಂಬಿಕೆಯಲ್ಲ, ಸತ್ಯವೆಂಬುದು ನನಗೇ ಅರಿವಾಯಿತು.  ಈ ಅರಿವು ಬಂದ ನಂತರ ಕಷ್ಟ, ನೋವು, ದುಃಖಗಳನ್ನೆಲ್ಲ ಈ ಪ್ರಪಂಚಕ್ಕೆ ನಮ್ಮನ್ನು ಹಿಡಿದಿಟ್ಟುಕೊಳ್ಳಲು ನಾವೇ ಸೃಷ್ಟಿಸಿಕೊಳ್ಳಬೇಕಾದ ನಾಟಕಗಳೇ ಹೊರತು, ಅಸಲು ನಮಗೆ ದುಃಖವೇ ಇಲ್ಲ ಎಂಬುದು ಗೊತ್ತಾಗುತ್ತದೆ. ನಾವೆಲ್ಲ ಆನಂದಮಯರೆಂದು ಗೊತ್ತಾಗುತ್ತದೆ.
                 ಆದ್ದರಿಂದ ದಯವಿಟ್ಟು ಯಾರೇ ಆದರೂ ಮಾನಸಿಕ ತೊಂದರೆ, ದುಃಖ, ವಿಷಾದ, ನೋವು, ಜಿಗುಪ್ಸೆ, ಸೋಲು, ಆತ್ಮಹತ್ಯೆಯ ಯೋಚನೆ ನಿಮಗೆ ಕಾಡುತ್ತಿದ್ದರೆ ದಯವಿಟ್ಟು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ ದಯವಿಟ್ಟು ಆಧ್ಯಾತ್ಮಿಕ ಪರಿಹಾರಗಳಿಗೆ ಆದ್ಯತೆ ಕೊಡಿ. ಅಲೋಪತಿಯ ಔಷಧಿಗಳ ಜೊತೆಗೆ ಪರ್ಯಾಯ ಆಧ್ಯಾತ್ಮಿಕ ಚಿಕಿತ್ಸೆಗಳಿಗೂ ಒಳಪಡಿ. ಅದಕ್ಕಿಂತ ಹೆಚ್ಚು ದೇವರಲ್ಲಿ ಹೆಚ್ಚು ಭಕ್ತಿಯನ್ನು ಬೆಳೆಸಿಕೊಳ್ಳಿ, ಪ್ರೀತಿ ಬೆಳೆಸಿಕೊಳ್ಳಿ. ದೇವರೆಂದರೆ ಭಯ ಬೇಡ, ಬದಲಿಗೆ ನಿಮ್ಮ ಅತ್ಯಂತ ಆಪ್ತಸಖ ಅವನೇ ಎಂಬುದನ್ನು ಮರೆಯಬೇಡಿ.

ಶನಿವಾರ, ಫೆಬ್ರವರಿ 21, 2015

ನಿಜವಾದ ಪತ್ರಕರ್ತರು ಕಾಣೆಯಾಗಿದ್ದಾರೆಯೆ?

ಹೀಗೊಂದು ಅನುಮಾನ ಇತ್ತೀಚೆಗೆ ನನ್ನನ್ನು ಕಾಡುತ್ತಿದೆ. ಕಾರಣ ಇಷ್ಟೆ. ಕಳೆದ ವಾರ ಹೀಗೊಂದು ಮಠದಲ್ಲಿದ್ದೆ. ಅದು ಬೇರೆ ಕೋಮಿನ ಮಠ. ಆದರೂ ಅಲ್ಲಿಯೂ ಹವ್ಯಕ ಸಮುದಾಯದ ಸನ್ಯಾಸಿಗಳಿದ್ದಾರೆ. ಅವರು ಹೇಳಿದರು, ಪಾಪ, ನಮ್ಮ ಸ್ವಾಮಿಗಳಿಗೆ ಹೀಗಾಗಬಾರದಿತ್ತು ಎಂದು. ನನಗೆ ಉರಿದುಹೋಯಿತು. ಅವರಿಗೆ ವಿವರಿಸಿದ್ದನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕರ್ನಾಟಕದ ಇತ್ತೀಚಿನ ಇತಿಹಾಸದಲ್ಲಿ ಸೇರಿರುವ ಪ್ರಮುಖ ಆರೋಪಗಳು ಎರಡು. ಒಂದು ಬಿಡದಿಯ ನಿತ್ಯಾನಂದ ಸ್ವಾಮಿ ಪ್ರಕರಣ ಹಾಗೂ ಇನ್ನೊಂದು ರಾಘವೇಶ್ವರ ಭಾರತಿ ಪ್ರಕರಣ. ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಮಾಧ್ಯಮಗಳ ನಡೆಯನ್ನು ಅವಲೋಕಿಸುತ್ತ ಬಂದಿದ್ದೇನೆ.
ಯಾವ ನಿತ್ಯಾನಂದ ಸ್ವಾಮೀಜಿ ವಿರುದ್ದ ಸಾಕ್ಷಿಗಳನ್ನು ತಂದು ಅವುಗಳನ್ನು ಹಗಲು ರಾತ್ರಿ ವಾರಗಟ್ಟಲೆ ತೋರಿಸಿ ಆ ಸ್ವಾಮೀಜಿ ದೂರುದಾರರು ಇಲ್ಲದ ದೂರಿನ ಮೇಲೆ ವಿಚಾರಣೆಯಿಲ್ಲದೆ ಜೈಲಿಗೆ ಹೋಗಿ ಬರುವಂತೆ ಮಾಡುತ್ತಾರೆ. ಇನ್ನೊಂದೆಡೆ ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ದೂರುದಾರರು, ಸಾಕ್ಷಿ , ಆ ಸಾಕ್ಷಿ ಮೇಲ್ನೋಟಕ್ಕೇ ಸಾಬೀತಾಗಿದ್ದರೂ ಅದರ ಸತ್ಯಾಸತ್ಯತೆಯನ್ನು ಇನ್ನಷ್ಟು ಪರೀಕ್ಷಿಸಲು ಸಮಯ ತೆಗೆದುಕೊಂಡು ಬಂಧನವಿರಲಿ, ಚಾರ್ಜ್ ಶೀಟ್ ಹಾಕಲೂ ಹಿಂದೆ ಮುಂದೆ ನೋಡುವಂತಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಎರಡೂ ಪ್ರಕರಣಗಳ ಹಿಂದೆ ಒಂದೇ ಪತ್ರಕರ್ತರ ಗುಂಪಿನ ಕೈವಾಡ! ಇದು ಜಗಜ್ಜಾಹೀರು ವಿಷಯವೇ ಆಗಿದ್ದರೂ ಉಳಿದ ಪತ್ರಕರ್ತರಿಗೆ ಸತ್ಯ ಹೇಳಲು ಅದನೋ ಹೆದರಿಕೆ!
ಇದೊಂದೇ ಪ್ರಕರಣವಲ್ಲ. ಇಂತಹ ಸಾಕಷ್ಟು ಪ್ರಕರಣಗಳು, ಉದಾಹರಣೆಗಳು ನನ್ನಲ್ಲಿವೆ.
ನನಗೆ ಪತ್ರಕರ್ತರು, ಬರಹಗಾರರು, ಕವಿಗಳು, ಸಾಮಾಜಿಕ ಕಾರ್ಯಕರ್ತರು, ಆಧ್ಯಾತ್ಮಿಕ ವ್ಯಕ್ತಿಗಳು ಇವರ ಬಗ್ಗೆ ಎಲ್ಲರಂತೆ ಅಥವಾ ಎಲ್ಲರಿಗಿಂತ ಹೆಚ್ಚು ಅದೇನೋ ಗೌರವ. ಈ ಎಲ್ಲರೂ ಯಾವ ಜಾತಿ, ಪಕ್ಷ, ಬಡವ, ಬಲ್ಲಿದ, ಸ್ವರತಿ, ಸ್ವಾರ್ಥಗಳನ್ನು ಮೀರಿರುತ್ತಾರೆ ಎಂಬುದು ನನ್ನ ನಂಬಿಕೆ. ಈ ನಂಬಿಕೆಯ ಬುನಾದಿ, ಗೋಡೆ ಎಲ್ಲವೂ ಇಂದು ಶಿಥಿಲವಾಗಿದ್ದು ನನ್ನ ದುರಾದೃಷ್ಟ. ಇವತ್ತಿನ ಬಹುತೇಕ ಪತ್ರಕರ್ತರು ಸಮಾಜಕ್ಕಿಂತಲೂ ಸ್ವಹಿತಾಸಕ್ತಿಗೆ ಹೆಚ್ಚು ಒತ್ತುಕೊಡುತ್ತಿರುವುದು ನನಗೆ ಆದ ಮೊದಲ ಆಘಾತ. ನಂತರ ಸತ್ಯವಲ್ಲದೆ ಉಳಿದಿದ್ದನ್ನೆಲ್ಲ ಸುದ್ದಿಯೆಂದು ಸಾರುತ್ತಿರುವುದು ಎರಡನೆಯ ಆಘಾತ. ಮೂರನೆಯದು ದಿನವಿಡೀ ಅಪರಾಧ ಸುದ್ದಿಗಳು, ಪೇಜ್ 3 ವಿಷಯಗಳನ್ನು ಬರೆದು, ಹೇಳಿ ಇಡೀ ಸಮಾಜದ ವೈಚಾರಿಕತೆಯನ್ನೇ ಕೊಂದು ಹಾಕುತ್ತಿರುವುದು, ನಂಬಿಕೆ ಎಂದರೆ ಮನುಷ್ಯರನ್ನು ನಂಬಬೇಡ, ಯಾವುದಾದರೂ ಜ್ಯೋತಿಷಿಯನ್ನು ನಂಬು, ಪ್ರೀತಿಸಲೇಬೇಡ, ಪ್ರೀತಿಸಿದರೆ ಕೊಲೆಯಾಗುತ್ತೀಯ, ಇಲ್ಲವೆ ಕೊಲೆ ಮಾಡಿಸುತ್ತೀಯ ಎನ್ನುವಂತಹ ಸಂದೇಶಗಳನ್ನು ದಿನವಿಡೀ ಬಿತ್ತರಿಸಿ ಬಿತ್ತರಿಸಿ ಜನಸಾಮಾನ್ಯರು ನಿಜಕ್ಕೂ ದಿಕ್ಕು ತಪ್ಪಿಹೋಗಿರುವುದು.
ಒಂದೆಡೆ ಎಲ್ಲಿಂದಲೋ ಆಸೆಯಿಂದ, ಪ್ಯಾಷನ್ ಆಗಿ ವೃತ್ತಿ ಮಾಡಲು ಬಂದು ತಿಂಗಳ ಸಂಬಳವೂ ಇಲ್ಲದೆ, ರೂಮಿನ ಬಾಡಿಗೆಯನ್ನೂ ಕೊಡಲಾಗದೆ ಒದ್ದಾಡುತ್ತಿರುವ ಹೊಸ ಪೀಳಿಗೆ. ಆಗಲೇ ವೃತ್ತಿಯ ಅನಿಶ್ಚಿತತೆಯನ್ನು ಮನಗಂಡು ಸೈಡ್ ಬಿಸಿನೆಸ್ ಗೆ ಕೈಯಲ್ಲಿರುವ ಪೆನ್ನೋ, ಮೈಕೋ, ಕ್ಯಾಮರಾವನ್ನೋ ಬಳಸಿಕೊಳ್ಳುತ್ತಿರುವ ಏಣಿ ಮಧ್ಯದವರು, ಏಣಿಯ ತುದಿಯಲ್ಲಿರುವ ಕೆಲವೇ ಕೆಲ ಮಂದಿಯಲ್ಲಿ ಬಹುತೇಕರು ಈ ಮಧ್ಯದ ಗುಂಪಿನಿಂದಲೇ ಎದ್ದು ಬಂದವರು. ಇಂತಹ ಸಂದರ್ಭದಲ್ಲಿ ಪತ್ರಕರ್ತ ತನ್ನ ಹೊಟ್ಟೆಪಾಡು ನೋಡಿಕೊಳ್ಳಬೇಕೇ ಅಥವಾ ಸಮುದಾಯದ ಹಿತಾಸಕ್ತಿ ಕಾಪಾಡಬೇಕೆ ಎನ್ನುವುದು ಮಹತ್ವದ್ದೆನಿಸುತ್ತದೆ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ, ಜನರ ಹೊರನೋಟದಿಂದ ಗುರುತಿಸುವ, ಆಡಂಬರದ ಓಲೈಕೆಯ ಸ್ವಭಾವ, ಎಲ್ಲರಂತೆ ನಾವೂ ಆಗುವ ಹೆಬ್ಬಯಕೆ ಇವುಗಳ ನಡುವೆ ಪತ್ರಕರ್ತ ಕಾಣೆಯಾಗಿದ್ದಾನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಇಂದು ಭೂಗಳ್ಳರು, ರಾಜಕಾರಣಿಗಳು, ರೌಡಿಗಳು, ಮೌಲ್ಯವಿಲ್ಲದ ವ್ಯಾಪಾರಿಗಳು ಹಾಕುವ ತುಂಡು ಬಿಸ್ಕತ್ತಿನ ಆಸೆಗೆ ಜೊಲ್ಲು ಸುರಿಸುತ್ತ ನಡೆದಂತೆ ನನಗೆ ಭಾಸವಾಗುತ್ತದೆ. ಸಮಾಜದ ಕನ್ನಡಿಯಂತಹ ಪತ್ರಿಕಾ ಮನೆಗಳಲ್ಲಿ ಎಲ್ಲವೂ ವ್ಯಾಪಾರವಾಗಿದೆ. ಹೆಣ್ಣು, ಹೊನ್ನು, ಮಣ್ಣು ಈ ಮೂರರ ಆಸೆಗೆ ಬಿದ್ದ ಪತ್ರಕರ್ತನೇ ದೊಡ್ಡ ಮನುಷ್ಯನೆಂದು ಸಮಾಜ ಗುರುತಿಸತೊಡಗಿದಾಗ ನನ್ನಂತಹವರ ನಂಬಿಕೆಯ ಬುಡ ಅಲ್ಲಾಡತೊಡಗುತ್ತದೆ. ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎಂಬ ಮಾತು ಇಲ್ಲಿಯೂ ಸತ್ಯವೆಂದು ಅರಿವಾದಾಗ ಯಾವ ಚಾನೆಲ್ಲು, ಯಾವ ಪತ್ರಿಕೆಯೂ ನಂಬಿಕೆಗೆ ಅರ್ಹವಲ್ಲ ಎಂಬಂತಾಗುತ್ತದೆ. ಒಂದು ದಿನ ಪತ್ರಕರ್ತರು ಯಾರು ಎಂದು ನನ್ನ ಮುಂದಿನ ಅತ್ಯಂತ ಕಿರಿಯ ಜನಾಂಗ ನನ್ನನ್ನು ಕೇಳಿದರೆ,  ನಾನು ಏನು ಉತ್ತರ ಕೊಡಬಲ್ಲೆ? ಪತ್ರಕರ್ತರೆಂದರೆ ಅದೇ ಸುದ್ದಿ ವಾಹಿನಿಗಳಲ್ಲಿ ದಿನವೆಲ್ಲ ಸುದ್ದಿಯನ್ನು ನೀಡುತ್ತಾರಲ್ಲ, ಪತ್ರಿಕೆಗಳಲ್ಲಿ ಪ್ರತಿದಿನ ಸುದ್ದಿ ಬರುವಂತೆ ನೋಡಿಕೊಳ್ಳುತ್ತಾರಲ್ಲ ಅವರೆಂದೇ? ಹಾಗೆಂದರೆ ಯಾವುದಾದರೂ ಬುದ್ಧಿವಂತ ಮಗು ನಿಜವಾಗಿ ಯಾರು ಪತ್ರಕರ್ತ ಎಂದು ತಿಳಿದುಕೊಂಡು ನೀನು ಹೇಳುವುದೆಲ್ಲ ಡೋಂಗಿ ಎಂದರೆ ನಾನೂ ಕೂಡ.....!?

ಗುರುವಾರ, ನವೆಂಬರ್ 20, 2014

ಹೀಗೊಂದು ಭಾವಬಿಂದು

           ಆಗಲೇ 1/3 ಜೀವನ ಕಳೆದುಹೋಯ್ತು. ಹಿಂತಿರುಗಿ ನೋಡಿದರೆ ಸಾವಿರ ಹೆಜ್ಜೆಗಳು. ಬೇಕಿದ್ದವು, ಬೇಕಿಲ್ಲದವು. ಆದರೆ ಹೆಜ್ಜೆಗೆ ಜೊತೆಯಾದವರು? ಅವರಿಗೊಂದು ಕೃತಜ್ಞತೆ ಹೇಳಲೇಬೇಕು. ಈ ಬರಹ ಹೀಗೆ ಹೆಜ್ಜೆಗಳೊಂದಿಗೆ ಹೆಜ್ಜೆಯಾದ ಸಾವಿರ ಸಾವಿರ ಜನರಿಗೆ ಸಲ್ಲುತ್ತದೆ.
            ಮೊದಲಿಗೆ ನನ್ನನ್ನು  ಹುಟ್ಟಿಸಿದ ಅಪ್ಪನಿಗೆ, ಹೊತ್ತು, ಹೆತ್ತ ಅಮ್ಮನಿಗೆ, ಬೆಳೆಸಿದ ಆಯಿಗೆ, ಬಹಳ ಶಿಸ್ತಿನಿಂದ ಬೆಳೆಸಿದ ಅಮ್ಮ ಹಾಗೂ ಅಪ್ಪ ಸೇರಿದಂತೆ ಎಲ್ಲ ದೊಡ್ಡವರಿಗೆ, ನನ್ನ ಬೇಕು ಬೇಡಗಳ ನಿಗಾ ಇಟ್ಟ ನನ್ನ ಅಜ್ಜ ಹಾಗೂ ಮಾವಂದಿರಿಗೆ ನನ್ನ ಅನಂತ ಪ್ರಣಾಮಗಳು. ನನ್ನ ಪ್ರೇಮದ ಗೆಳೆಯ, ಪ್ರೀತಿಯ ತಂಗಿ, ತಮ್ಮ , ಮನೆಯವರು ಮತ್ತು ಮೈದುನ ಇವರೆಲ್ಲ  ನನ್ನ ಬದುಕಿಗೆ ಬಂದು ಜೀವನಕ್ಕೊಂದು ಅರ್ಥ ಕೊಟ್ಟಿದ್ದಾರೆ.
            ಬಾಲ್ಯದಲ್ಲಿಯೇ ಸತ್ಯ ಹಾಗೂ ಪ್ರಾಮಾಣಿಕತೆಯ ಬಗ್ಗೆ, ನನ್ನಲ್ಲಿ ಅದನ್ನು ಗುರುತಿಸಿ ಗಾಢವಾಗಿ ಬೇರೂರಲು ಕಾರಣರಾದ ವಿ.ಡಿ.ನಾಯಕ್ ಮಾಸ್ತರರಿಗೆ, ಅಂಗನವಾಡಿಯ ಗೌರಕ್ಕೋರಿಂದ ಹಿಡಿದು ಹೈಸ್ಕೂಲಿನ ಆರ್.ಜಿ.ಹೆಗಡೆಯವರವರೆಗೆ, ಕಾಲೇಜಿನ ನಾಗರಾಜ್ ಸರ್, ರಾಮಲಿಂಗಂ ಸರ್ ವರೆಗೆ ಎಲ್ಲ ನನ್ನ ಗುರುವೃಂದಕ್ಕೆ ಹೃತ್ಪೂರ್ವಕ ನಮನಗಳು.
             ಕೆಲಸಕ್ಕೆ ಸೇರಿದಾಗ ಕಾನ್ಫಿಡೆನ್ಸ್ ತುಂಬಿದ ಪರ್ಸನಲ್ ನೆಟ್ ವರ್ಕ್ ನ ಪ್ರಭು ಸರ್, ಫಾರ್ಚೂನ್ ನ ಸಂಜಯ್ ಮತ್ತು ಅವರ ಪತ್ನಿ, ಸೌತ್ ಇಂಡಿಯಾ ಟೆಲಿವಿಷನ್ ನೆಟ್ ವರ್ಕ್ ನ ಶಶಿಧರ್ ಭಟ್ ಸರ್, ಭೂಮಿಕಾ ಸಂಸ್ಥೆಯ ಟಿ.ಎನ್.ಸೀತಾರಾಂ ಸರ್,  ಕಸ್ತೂರಿಯ ಕೆಎಂ ಮಂಜುನಾಥ್ ಮತ್ತು ರಾಜಶೇಖರ್ ಅಬ್ಬೂರ್ ಸರ್, ಜನಮಾಧ್ಯಮ ಪತ್ರಿಕೆಯ ಸುಬ್ರಾಯ ಬಕ್ಕಳ ಸರ್ , ಆಂದೋಲನ ಪತ್ರಿಕೆಯ ರಾಜಶೇಖರ್ ಕೋಟಿ ಸರ್ , ರಾಜಹನ್ಸ್ ಪಬ್ಲಿಕೇಷನ್ಸ್ ನ ಬಾಲಚಂದ್ರ ಸರ್ ಮತ್ತು ಟಿ.ಟಿ. ಕಸ್ತೂರಿ ಸರ್ ಮತ್ತು ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ಮಧು ಶರ್ಮಾ ಮೇಡಂ, ಹೀಗೆ ಪ್ರತಿ ಹಂತದಲ್ಲಿ ನನ್ನ ವೃತ್ತಿಪರ ಬದುಕಿಗೆ ಯಾವ ಶಿಫಾರಸ್ಸು, ವಶೀಲಿಯ ಹಂಗಿಲ್ಲದೆ ಕೆಲಸ ಕೊಟ್ಟು, ಬೆಳೆಸಿದ ಇವರೆಲ್ಲರಿಗೆ ನನ್ನ ಅನಂತಾನಂತ ಕೃತಜ್ಞತೆಗಳು.
           ಇನ್ನು ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಮಡಿಲಿಗೆ ಹಾಕಿಕೊಂಡು ಜಗತ್ತು ತೋರಿಸಿದ ನನ್ನ ದೊಡ್ಡಮ್ಮ ಎಂತಲೇ ಪರಿಗಣಿಸುವ ನನ್ನ ಜಯತ್ತೆ, ನನಗೆ ಬೇಕಾದಾಗೆಲ್ಲ ಬಿಸಿಬಿಸಿ ದೋಸೆ ಮಾಡಿ ಬಡಿಸುತ್ತಿದ್ದ, ಸದಾ ನನ್ನ ಕಷ್ಟಕ್ಕೆ ಆಗುತ್ತಿದ್ದ ಗಂಗತ್ತೆ, ಕೈಯಲ್ಲಿ ಹಿಡಿದುಕೊಳ್ಳಲಾಗದ ಕೂದಲನ್ನು ಕಾಲ ಕಾಲಕ್ಕೆ ಬಾಚಿ, ಹೇನು ತೆಗೆದು ಒಪ್ಪ ಓರಣ ಮಾಡುತ್ತಿದ್ದ, ನನಗೆ ಚೆಂದಗೆ ರಂಗೋಲಿ ಹಾಕುವುದನ್ನು ಹೇಳಿಕೊಟ್ಟ ದೊಡ್ಡತ್ತೆ, ಓದಿನ ಹಸಿವೆಗೆ ಉಣಬಡಿಸಿದ ಪಕ್ಕದಮನೆಯ ಶಾರದಜ್ಜಿ, ಕೃಷ್ಣ ಹೆಗಡೆ ಮನೆ, ಶಿರಸಿಯ ದತ್ತಾತ್ರೇಯ ಬುಕ್ ಸ್ಟಾಲ್ ಇವರೆಲ್ಲರ ಋಣ ದೊಡ್ಡದು.
         ಹೈಸ್ಕೂಲಿಗೆ ಹೋಗುವಾಗ ಪ್ರತಿನಿತ್ಯ ನನಗೆ ಹೂವು ತಂದುಕೊಟ್ಟ ನನ್ನ ಪ್ರೀತಿಯ ಭಾರತಕ್ಕ ಮತ್ತು ಸಹಪಾಠಿ ವಿನುತ, ನನ್ನನ್ನು ಪ್ರೀತಿಯಿಂದ ಸದಾ ಕಾಯುತ್ತಿದ್ದ ನನ್ನ ರಾಜು ನಾಯಿ, ಏನೂ ಅಲ್ಲದಿದ್ದರೂ ಓದುವ ಪುಟ್ಟ ತಂಗಿಯಂತೆ ಕಂಡು ಮಧ್ಯಾಹ್ನದ ಊಟದ ದುಡ್ಡಿಗೆ ಸಂಜೆಗೂ ಬಾಕ್ಸ್ ತುಂಬಿ ಕೊಡುತ್ತಿದ್ದ ಎಸ್.ಜೆ.ಪಿ ಕ್ಯಾಂಟೀನಿನ ಅಣ್ಣಂದಿರು, ಕಾಲೇಜು ಮುಗಿದ ಮೇಲೆ ಕೆಲ ದಿನ ನನ್ನನ್ನು ಇಟ್ಟುಕೊಂಡು ಬೆಂಗಳೂರಿನಲ್ಲೊಂದು ನೆಲೆಕೊಟ್ಟ ಗೀತಕ್ಕ, ಕೇಶವ ದೊಡ್ಡಪ್ಪ, ವಿದ್ಯಕ್ಕ, ಉಮೇಶಣ್ಣ, ನನಗೆ ಮನೆ/ವಸತಿ ಕೊಟ್ಟು ವಿಶ್ವಾಸದಿಂದ ಕಂಡ ಹಾಸ್ಟೆಲ್ ನ ಸರೋಜ ಆಂಟಿ, ಇಂದಕ್ಕ ಮತ್ತು ಮನೆ ಕೊಟ್ಟ ಓನರ್ ಗಳಿಗೆ ನನ್ನ ಯಾವತ್ತೂ ನಮಸ್ಕಾರಗಳು. ಇವೆಲ್ಲ ಕೇವಲ ಬಾಯಿಮಾತಾಗದೆ ಹೃದಯದಿಂದ ಹಾರೈಸುವ ನುಡಿಮುತ್ತುಗಳು. ಮಾತಿದೆಯಲ್ಲ, `ಉಂಡವ ಹರಸುವುದು ಬೇಡ, ನೊಂದವ ಬೈಯುವುದು ಬೇಡ'. ಹಾಗೆ ನನ್ನ ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿರುವ ಎಲ್ಲ ಸಹೃದಯ ಬಂಧುಗಳಿಗೂ ನನ್ನ ಅನಂತ ಶುಭಹಾರೈಕೆಗಳು.
         ಅಧ್ಯಾತ್ಮದ ಹಂಬಲಕ್ಕೆ ಮಂತ್ರದೀಕ್ಷೆಯ ದಾರಿತೋರಿಸಿ ಹರಸಿ ಹಾರೈಸಿದ ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಂನ
ಶ್ರೀಸ್ವಾತ್ಮಾರಮಾನಂದ ಸ್ವಾಮೀಜಿ, ನನ್ನ ಗುರುಗಳಾದ ಶ್ರೀಸ್ಮರಣಾನಂದ ಸ್ವಾಮೀಜಿ ಮತ್ತು ನನ್ನನ್ನು ಸತ್ಯದೆಡೆಗೆ ಪ್ರತಿನಿತ್ಯ ಕರೆದೊಯ್ಯುತ್ತಿರುವ ಗುರುವಿನ ಗುರು ಶ್ರೀ ರಾಮಕೃಷ್ಣರಿಗೆ ನನ್ನ ಚಿರಸಾಷ್ಟಾಂಗ ಪ್ರಣಾಮಗಳು. ಬಾರಿ ಬಾರಿಯ ಭವದ ಹೊಡೆತದಿಂದ ಪಾರು ಮಾಡುವ ತಾಯಿ ಕಾಳಿ ಮತ್ತು ತಂದೆ ಮಲ್ಲಿಕಾರ್ಜುನನಿಗೆ ಅಣುವೊಂದು ಸಲ್ಲಿಸುವ ಅನಂತಾನಂತ ಕೃತಜ್ಞತೆಗಳು.
       




ಗುರುವಾರ, ಅಕ್ಟೋಬರ್ 30, 2014

ದೈಹಿಕ ಆಸೆ ಹಣ ತರುವ ವಿಧಾನಗಳಲ್ಲೊಂದಾದಾಗ....

ನನ್ನ ದೃಷ್ಟಿಯಲ್ಲಿ ದೈಹಿಕ ಕಾಮನೆ ಬಹಳ ಉನ್ನತವಾದದ್ದು. ಇದರ ಬಗ್ಗೆ ಸ್ವಲ್ಪ ಹೆಚ್ಚಿನ ಗೌರವವನ್ನೇ ಇಟ್ಟುಕೊಂಡಿದ್ದೇನೆ. (ನನ್ನನ್ನು ಮಡಿವಂತೆ ಎಂದು ಹೀಗಳೆಯುವ ಮಂದಿಯೂ ಇದ್ದಾರೆ, ಅದರಿಂದ ನನಗೇನೂ ತೊಂದರೆಯಿಲ್ಲ, ಆ ವಿಷಯ ಬೇರೆ) ಆದ್ದರಿಂದ ನನಗೆ ಈ ತಲೆಬರಹ ಯಾವಾಗಲೂ ಹೆಚ್ಚು ಕಾಡುತ್ತದೆ.

ದೈಹಿಕ ಕಾಮನೆಗಳು ಮಾರಾಟಕ್ಕೂ ಇರುತ್ತವೆ ಎಂದು ನನಗೆ ಅರಿವಾದಾಗ ೧೯ ವರ್ಷ. ಆ ನಂತರ ಹೆಚ್ಚು ಹೆಚ್ಚು ಜಗತ್ತನ್ನು ನೋಡಿದಂತೆಲ್ಲ ನನಗೆ ಈ ವಿಷಯ ಹೆಚ್ಚು ಹೆಚ್ಚು ಅರ್ಥವಾಗುತ್ತ ಮತ್ತು ಸದಾ ಮನುಷ್ಯರ ಬಗ್ಗೆ ಒಂದು ರೀತಿಯ ಅನುಮಾನ ಕಾಡತೊಡಗಿತು. ಈ ವಿಷಯದಲ್ಲಿ ಮನು ಹೇಳುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ, ಹೆಣ್ಣಿಗೆ ಬಾಲ್ಯದಲ್ಲಿ ತಂದೆಯೂ, ವಯಸ್ಸಿನಲ್ಲಿ ಗಂಡನೂ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳೂ ರಕ್ಷಣೆಗೆ ಇರಬೇಕು. ಆದರೆ ಇಂದು ಇದು ದೈಹಿಕ ಯಾ ಸಾಮಾಜಿಕ ರಕ್ಷಣೆಯಲ್ಲ, ಬದಲಿಗೆ ಹಣದ ಬಲ. ಯಾವ ಹೆಣ್ಣುಮಕ್ಕಳ ತಂದೆ/ಗಂಡ/ಮಗ ಇವರಲ್ಲಿ ಹಣವಿರುವುದಿಲ್ಲವೋ ಅವರು ಅಕ್ಷರಶಃ ಬೀದಿಗೆ ಬಂದು ಬಿಡುತ್ತಾರೆ. ಈ ಪುರುಷರು ಯಾವ ಮಟ್ಟದ ಜೀವನವನ್ನು ನಡೆಸುತ್ತಾರೆ ಎನ್ನುವುದನ್ನು ಈ ದಂಧೆ ಅವಲಂಬಿಸಿರುತ್ತದೆ. ಬಡ ತಂದೆಯ ಮಗಳಾದರೆ ರಾಜಾರೋಷವಾಗಿ ಮಾರಾಟವಾಗುತ್ತಾಳೆ. ಮಧ್ಯಮ ವರ್ಗದ ತಂದೆ/ಪತಿಯಾಗಿದ್ದರೆ ಅವ ತನ್ನದೇ ರೀತಿಯಲ್ಲಿ ಈ ವಿಷಯವನ್ನು ನಿಭಾಯಿಸುತ್ತಾನೆ. ಮಗನಾದರೂ ಉದ್ದೇಶ ಪೂರ್ವಕವಾಗಲ್ಲದಿದ್ದರೂ ಬೇಜವಾಬ್ದಾರಿಯಾದಾಗ ಅವನೂ ತಾಯಿಯ ಮಾರಾಟಕ್ಕೆ ಕಾರಣವಾಗುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಪುರುಷರು ಉದ್ದೇಶಪೂರ್ವಕವಾಗಿ ಮಾರಾಟ ಮಾಡುವುದಿಲ್ಲ, ಬದಲಿಗೆ ತಮ್ಮ ಮೇಲಿನ ಜವಾಬ್ದಾರಿಯ ಒತ್ತಡವನ್ನು ಹೀಗೂ ಇಳಿಸಿಕೊಳ್ಳುತ್ತಾರೆ ಎನ್ನಬಹುದು. ಒಟ್ಟಿನಲ್ಲಿ ಇಲ್ಲಿ ಮಾರಾಟ ಮಾಡುವ ಮತ್ತು ಕೊಳ್ಳುವ ಇಬ್ಬರೂ ಪುರುಷರೇ ಆಗಿರುತ್ತಾರೆ. ಇಲ್ಲಿ ಮಾರಾಟ ಮಾಡುವವ ಅತಿ ಆಸೆ ಉಳ್ಳ, ಆದರೆ ಏನೂ ಮಾಡಲು ಅಸಹಾಯಕನಾಗಿರುವ ಬಡ ರೈತ, ವ್ಯಾಪಾರಿ, ಮೇಷ್ಟ್ರು ಹೀಗೆ ಯಾರೂ ಆಗಬಹುದು. ಹಾಗೆಯೇ ಇಲ್ಲಿ ಕೊಂಡುಕೊಳ್ಳುವವರು ಧನಿಕರು, ಪ್ರಭಾವಿಗಳು, ಜನಬೆಂಬಲ ಇರುವವರೂ ಆಗಿರುತ್ತಾರೆ. ಯಾರದ್ದು ತಪ್ಪು, ಯಾರದ್ದು ಸರಿ? ನಿರ್ಧಾರ ನಿಮಗೆ ಬಿಟ್ಟದ್ದು.

ಇನ್ನೊಂದೆಡೆ ದೈಹಿಕ ಹಂಬಲವನ್ನು ಮಾರಾಟ ಮಾಡಿ ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಈ ಮಾರಾಟ ಯಾವ ಬಗೆಯಲ್ಲೇ ಇರಲಿ, ಇದು ನಮ್ಮದೇ ಆತ್ಮಕ್ಕೆ ಮಾಡಿಕೊಳ್ಳುವ ಆಘಾತ.  ಅಂತರ್ ವಿದ್ಯೆಯ ಶ್ರೇಷ್ಠ ಅಧ್ಯಯನಕಾರ ಮತ್ತು ಗುರು ಮಾಸ್ಟರ್ ಚಾ ಕೊ ಕ್ಸಿ ಒಂದೆಡೆ ಬರೆಯುತ್ತಾರೆ, ಸಂಭೋಗ ಎನ್ನುವುದು ಕೇವಲ ದೈಹಿಕ ಆಸೆಯಲ್ಲ, ಅದು ಆತ್ಮೋದ್ಧಾರದ ಸಾಧನವೂ ಹೌದು. ಎಲ್ಲಿಯವರೆಗೆ? ಇದು ಮುಖ್ಯವಾದ ಪ್ರಶ್ನೆ. ಎಲ್ಲಿಯವರೆಗೆ ಎಂದರೆ ಎರಡು ಸಂಪೂರ್ಣ ಒಪ್ಪಿತ ದೇಹಗಳು ಒಂದಾಗುವುದು ಮಾತ್ರವಲ್ಲ, ಎರಡು ಪರಿಶುದ್ಧ ಆತ್ಮಗಳ ಪ್ರಭಾವಲಯಗಳ ವರ್ಗಾವಣೆಯೂ ಈ ಕ್ರಿಯೆಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿ ನಮ್ಮ ವ್ಯಕ್ತಿತ್ವದ ಪರಿಶುದ್ಧತೆಯ ಜೊತೆಗೆ ಒಂದಾಗುವ ವ್ಯಕ್ತಿತ್ವದ ಪರಿಶುದ್ಧತೆಯೂ ಮುಖ್ಯ. ಆತ/ಆಕೆ ಕಳ್ಳ, ಸುಳ್ಳ, ಅಪ್ರಮಾಣಿಕ, ದುಷ್ಟಬುದ್ಧಿಯುಳ್ಳವ, ಕೇಡು ಬಗೆಯುವ, ಈರ್ಷ್ಯೆ ಪಡುವವ ಹೀಗೆ ಯಾವುದೇ ಬಗೆಯ ಅಶುದ್ಧತೆಯಿದ್ದರೂ ಅದು ಇಬ್ಬರನ್ನೂ ನಾಶಮಾಡುತ್ತದೆ. ಅದಕ್ಕಾಗಿಯೇ ದೇಹದ ಆಸೆಯನ್ನು ಹಂಚಿಕೊಳ್ಳುವ ಮುನ್ನ ಎರಡೂ ಕಡೆಯಿಂದ ಒಪ್ಪಿಗೆಗಿಂತಲೂ ಪರಸ್ಪರ ಪ್ರೀತಿ, ಪ್ರೇಮ, ಗೌರವಗಳು ಮೂಡಬೇಕು. ಹಾಗೆ ಒಳ್ಳೆಯ ಭಾವನೆಗಳು ಪರಸ್ಪರರೆಡೆಗೆ ಮೂಡುವ ವ್ಯಕ್ತಿತ್ವಗಳು ಒಂದಾದರೆ ಅದು ಪೂಜೆಯಾಗುತ್ತದೆ. ಇಲ್ಲದಿದ್ದರೆ ಅಧಃಪತನ ನಿಶ್ಚಿತ.

ಆದರೆ ಇಂದು ತಾಂತ್ರಿಕ ಸೆಕ್ಸ್ ಹೆಸರಲ್ಲಿ, ನಾನು ಹಣ ಕೊಡುತ್ತೇನೆ, ನಿನ್ನನ್ನು ಯಶಸ್ವಿ ಮಾಡುತ್ತೇನೆ, ಹೀಗೆ ಹತ್ತು ಹಲವು ಆಮಿಷಗಳಿಂದ, ಆಸೆಗಳಿಂದ, ದುರಾಸೆಯಿಂದ ನಡೆಯುವ, ಹೆಂಡತಿ/ಗಂಡ ಪರಿಶುದ್ಧರಾಗಿಲ್ಲದಿದ್ದರೆ/ಒಳ್ಳೆಯವರಲ್ಲದಿದ್ದರೆ ನಡೆಯುವ ಭೋಗ ನಿಜವಾಗಿಯೂ ಮನುಷ್ಯನಿಗೆ ಶಾಪ.  ಈ ಬಗ್ಗೆ ಪ್ರತಿ ತಂದೆ-ತಾಯಿ, ಗಂಡ - ಹೆಂಡತಿ ಅರಿಯಬೇಕು. ಮದುವೆಯಾಗುವ ಹುಡುಗ, ಹುಡುಗಿಯರು ಅರಿಯಬೇಕು. ಎಲ್ಲಕ್ಕಿಂತಲೂ ಹೆಚ್ಚು ಎಲ್ಲರೂ ದೈಹಿಕ ಕಾಮನೆಯೆಂಬುದು ಹಣ ಕೊಡಿಸುವ ದಂಧೆಯಲ್ಲ, ಸ್ಥಾನ ಕೊಡಿಸುವ, ಆಸೆ ತೀರಿಸುವ ಒಂದು ಸಾಧನವಲ್ಲ ಎನ್ನುವುದನ್ನು ತಿಳಿಯಬೇಕು. ಹೀಗೆ ಅರಿಯುವ ಆಸೆ ಮೂಡಬೇಕಿದ್ದರೆ ಅದಮ್ಯ ಜೀವನಪ್ರೀತಿ ಮತ್ತು ಸ್ವಲ್ಪ ಪಾರಮಾರ್ಥಿಕತೆ ಬೇಕು. ಎಲ್ಲದಕ್ಕೂ ಮೊದಲು `ಹೆಜ್ಜೆ ಹೆಜ್ಜೆಗೂ ಹೊನ್ನೆ ಸುರಿಯಲಿ., ಗೆಜ್ಜೆಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು' ಎನ್ನುವ ಹಠ ಪ್ರತಿ ಹೆಣ್ಣಿಗೆ ಹುಟ್ಟಬೇಕು. ಇದು ಎಲ್ಲಿಯವರೆಗೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಈ ದೈಹಿಕ ವ್ಯಾಪಾರಕ್ಕೆ ಕೊನೆಯಿಲ್ಲ...... ಕಾಮಿಣೀ, ಕಾಮರೂಪಿಣಿಯಾದ ಶ್ರೀರಾಜರಾಜೇಶ್ವರಿ ಎಲ್ಲ ಹೆಣ್ಣುಮಕ್ಕಳಿಗೂ ಈ ಬಗೆಯ ಹಠ ನೀಡಲಿ, ಎಲ್ಲರೂ ದೌರ್ಜನ್ಯಗಳಿಂದ ಮುಕ್ತರಾಗಲಿ, ಎಲ್ಲ ಹೆಣ್ಣುಮಕ್ಕಳ ಮುಖದಲ್ಲೂ ನಿಜಸಂತೋಷ ಅರಳಲಿ.. 

ಶನಿವಾರ, ಅಕ್ಟೋಬರ್ 4, 2014

ಐ ಡೋಂಟ್ ಲೈಕ ದ ಪೀಪಲ್ ಹು ನೀಡ್ ಸರ್ವೆಂಟ್ I don't like the people who need servent


ಅಂದು ಸಂಜೆ ಬಹಳ ಸುಸ್ತಾಗಿತ್ತು. ಬೆಂಗಳೂರಿನ ಟ್ರಾಫಿಕ್ ನಲ್ಲಿ ತಿರುಗಿ, ಕಚೇರಿಗೆ ಹೋಗಿ ಬರೆದು, ಕೆಲಸ ಮಾಡಿ ಮನೆಗೆ ಬಂದಾಗ ಹಾಸಿಗೆ ಕಂಡರೆ ಸಾಕು ಎನ್ನುವಂತಾಗಿತ್ತು. ಆದರೆ ಮನೆಕೆಲಸ ಬಿಡಬೇಕಲ್ಲ. ಬೆಳಿಗ್ಗೆ ಅರ್ಜೆಂಟಾಗಿ ಹೊರಟವಳಿಗೆ ನೆಲ ಒರೆಸಲು ಆಗಿರಲಿಲ್ಲ. ಇನ್ನು ಅಡುಗೆ ಮಾಡಿಕೊಳ್ಳುವುದು ಬಾಕಿ ಇತ್ತು. ಅಡುಗೆ ಎಂದರೆ ಒಂದು ಸಾರು, ಅನ್ನ ಅಲ್ಲ. ನನಗೆ ಒಬ್ಬಳಿದ್ದರೂ, ನಾಲ್ಕು ಜನವಿದ್ದರೂ ಕನಿಷ್ಠ ಪಕ್ಷ ಮೂರು ವೆರೈಟಿ ಇರಬೇಕು. ಅಂತೂ ಆಗಿಲ್ಲವೆಂದರೆ ಸಾರಿನ ಜೊತೆಗೆ ಪಲ್ಯವಾದರೂ ಇರಬೇಕು, ಮೊಸರು ಬಿಟ್ಟು. ಹಾಗಾಗಿ ಇಷ್ಟೂ ಕೆಲಸ ಅನಿವಾರ್ಯವಾಗಿ ಮಾಡಲೇಬೇಕಾದಾಗ ದಣಿವಾಗುತ್ತದೆ ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ. ಇನ್ನೊಮ್ಮೆ ಕಸಗುಡಿಸಿ, ನೆಲ ಒರೆಸಿ, ಅಡುಗೆ ಮಾಡುವಷ್ಟರಲ್ಲಿ ನನ್ನ ದಣಿವು ಮಂಗ ಮಾಯವಾಗಿತ್ತು.
ಇದು ನನಗೆ ಹೊಸ ಅನುಭವವೇನಲ್ಲ. ನನಗೆ ಮಾನಸಿಕವಾಗಿ ಬಹಳ ಸುಸ್ತಾದಾಗ ಎದ್ದು ದೈಹಿಕವಾಗಿ ಸ್ವಲ್ಪ ಚಟುವಟಿಕೆಯಿಂದ ಕೆಲಸ ಮಾಡಿದರೆ ಸಾಕು. ನಂತರ ಬರುವ ಗಾಢ ನಿದ್ದೆ ಎಲ್ಲವನ್ನು ಸರಿ ಮಾಡಿರುತ್ತದೆ. ಕೆಲಸಕ್ಕಾಗಿ ಕೆಲಸ. ಅದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ತಪಸ್ಸು ಎನ್ನುವುದು ನನ್ನ ಭಾವನೆ. ಅಧ್ಯಾತ್ಮದ ಮೊಟ್ಟ ಮೊದಲ ಮೆಟ್ಟಿಲು ಆರಂಭವಾಗುವುದೇ ದೈಹಿಕ ದಂಡನೆಯ ಮೂಲಕ. ಯಾರು ಆಲಸಿಗಳೋ ಅವರಿಗೆ ಅಧ್ಯಾತ್ಮವೆನ್ನುವುದು ಮರೀಚಿಕೆ. ಆದ್ದರಿಂದ ನನಗೆ ಯಾರಾದರೂ ಒಂದು ಕಡ್ಡಿ ಎತ್ತಿ ಆ ಕಡೆ ಇಡಲೂ ಜನ ಬೇಕೆಂದು ಹೇಳಿದರೆ ಕೆಂಡಾಮಂಡಲ ಸಿಟ್ಟು ಬರುತ್ತದೆ. ಆರಂಭದಲ್ಲಿ ಸ್ವಲ್ಪ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕೆಲಸ, ಅದರಿಂದ ಸಿಗುವ ಖುಷಿಯನ್ನು ಕಂಡೂ ಅವರು ಬದಲಾಗದಿದ್ದರೆ ಸುಮ್ಮನೆ ಅವರನ್ನು ತಿರಸ್ಕರಿಸಿಬಿಡುತ್ತೇನೆ. ಕಾರಣ ಇಷ್ಟೆ, ಜೀವಿಯ ಮೂಲ ಧರ್ಮ ಕ್ರಿಯೆ. ಈ ಕ್ರಿಯೆ/ಕೆಲಸ ಎನ್ನುವುದು ಶ್ರದ್ಧೆಯಿಂದ ಮಾಡಿದಾಗ ಪೂಜೆಯಾಗುತ್ತದೆ. ಯಾವಾಗ ವ್ಯಕ್ತಿ ತನ್ನ ಕೆಲಸ ತಾನು ಮಾಡಿಕೊಳ್ಳಲೂ ಅಯ್ಯೋ, ಅಮ್ಮಾ ಎನ್ನುತ್ತಾನೋ ಅಲ್ಲಿಗೆ ಅವ ಬದುಕಿಲ್ಲ ಎಂತಲೇ ನನ್ನ ಲೆಕ್ಕ.

ಇಂತಿಪ್ಪ ನಾನು ಬೆಂಗಳೂರಿಗೆ ಬಂದಾಗ ನನಗೆ ಇಲ್ಲಿ ನನ್ನ ಸುತ್ತಲಿನ ಸಾವಿರದಷ್ಟು ಜನ ಬದುಕಿಲ್ಲವೆಂದೇ ಎನಿಸಿತು. ಪುಟ್ಟ ಮಕ್ಕಳು ಬೆಳಿಗ್ಗೆ 5 ಗಂಟೆಗೆ ಟ್ಯೂಷನ್ಗೆ ಓಡುತ್ತಾರೆ. ಅವರ ತಿಂಡಿ, ಊಟ ತಯಾರಿಯಲ್ಲಿ ಅಮ್ಮನ ಬೆಳಗಾಗುತ್ತದೆ. ಅಪ್ಪ ಮಕ್ಕಳಿಗೆ ಸ್ನಾನ ಮಾಡಿಸಿ, ಬಟ್ಟೆ ಹಾಕಿಸುವಲ್ಲಿ ನೆರವಾದರೆ/ ಕುಳಿತಲ್ಲೆ ಕುಳಿತು ಆರ್ಡರ್ ಮಾಡಿದ ಕಾಫಿ ಕುಡಿದು ಪೇಪರ್ ಓದುತ್ತಾನೆ. ಒಮ್ಮೆ ಮಕ್ಕಳು ಶಾಲೆಗೆ ಹೋದವೆಂದರೆ ಮನೆಯಲ್ಲಿ ಉಳಿದವರಿಗೆ ನೆಮ್ಮದಿ. ಅಪ್ಪ ಸ್ನಾನಕ್ಕೆ ಗೀಜರ್ ಹಾಕಿಕೊಂಡು ಅಂತೂ ಇಂತು ತಂಗಳನ್ನದ ಚಿತ್ರಾನ್ನ ತಿಂದು ಹೊರಟನೆಂದರೆ ರಾತ್ರಿಯೇ ಬರುವುದು. ಅಪ್ಪ ಕಚೇರಿಗೆ ಹೋದ ನಂತರ ಅಮ್ಮ ನಿರಾಳ. ಸಂಜೆ ಮಕ್ಕಳು ಬರುವ ತನಕ ಅವಳದ್ದೇ ರಾಜ್ಯ.ಆ ಹೊತ್ತಿನಲ್ಲೇ ಕೆಲಸದವಳು ಬಂದು ಪಾತ್ರೆ, ಬಟ್ಟೆ, ಗುಡಿಸಿ, ಒರೆಸುವುದು ಮಾಡಿ ಹೋಗುತ್ತಾಳೆ. ಮಧ್ಯಾಹ್ನದ ತನಕ ಕೆದರಿದ ತಲೆ, ಹಳೇ ಮಾಸಲು ನೈಟಿಯಲ್ಲಿ ಊರೆಲ್ಲ ಸುದ್ದಿ ಹೇಳಿ ಮನೆಗೆ ಬಂದು, ರಾತ್ರಿ ಮಾಡಿದ್ದು, ಬೆಳಿಗ್ಗೆ ಮಾಡಿದ್ದರಲ್ಲಿ ಉಳಿದಿದ್ದನ್ನು ತಿಂದು ಅಮ್ಮಾ ಅಂತ ಟಿ.ವಿ ನೋಡುತ್ತಾರೆ. ಮಕ್ಕಳು ಬಂದ ನಂತರ ಅಂಗಡಿಯಿಂದಲೋ/ಹೋಟೆಲ್ಲಿಂದಲೋ ತಿಂಡಿ ತಂದು ಕೊಡುತ್ತಾರೆ. ಮತ್ತೆ ಟ್ಯೂಷನ್, ಹೋಂ ವರ್ಕ ಆರಂಭವಾಗುತ್ತದೆ. ಒಂದೆಡೆ ಮಕ್ಕಳಿಗೆ ಓದಲು ಕೂಡಿಸುತ್ತಲೇ ಅಮ್ಮ ರಾತ್ರಿಯ ಅಡುಗೆಗೆ, ಟಿ.ವಿ ನೋಡುತ್ತ ತಯಾರಿ ನಡೆಸುತ್ತಾಳೆ. ರಾತ್ರಿ ಹತ್ತು ಹತ್ತೂವರೆಗೆ ಒಂದು ಸಾರು, ಅನ್ನ ಮಾಡಿ ಅಯ್ಯಮ್ಮಾ ಎಂದು ಉಸಿರು ಬಿಡುತ್ತಾಳೆ. ಅಪ್ಪ ದಿನದ ಎಲ್ಲ ಆಯಾಸ ತಂದು ಮನೆಯ ಸದಸ್ಯರ ಮೇಲೆ ಹಾಕುತ್ತಾನೆ. ಹೆಂಡತಿಗೆ ಸ್ವಲ್ಪ ಹೆದರುವವನಾದರೆ ಹೀಗೆ ಹೋಗಿ ಹಾಗೆ ಒಂದು ಗುಟುಕು ಕುಡಿದು ಬಂದು ತೆಪ್ಪಗೆ ಅಡುಗೆಯಾಗುವ ತನಕ ಟಿ.ವಿ ನೋಡುತ್ತ ಸೋಪಾಕ್ಕೆ ತಗಲುಹಾಕಿಕೊಳ್ಳುತ್ತಾನೆ. ನನಗೆ ಇಡೀ ಬದುಕು ಎಷ್ಟು ಯಾಂತ್ರಿಕವಪ್ಪ ಎನಿಸುತ್ತದೆ.

ಇನ್ನು ಹಾಸ್ಟೆಲ್ ಗಳಿಗೆ ಬಂದರೆ ಹೆಣ್ಣುಮಕ್ಕಳು ರಾತ್ರಿಯೆಲ್ಲ ಕಥೆ ಹೇಳಿ ಬೆಳಿಗ್ಗೆ ಏಳುವುದು ಲೇಟು. ಅಂತೂ ಇಂತು ಎದ್ದು ಶೃಂಗಾರ ಮಾಡಿ ಹೊರಟರೆ ಮತ್ತೆ ಬರುವುದು ರಾತ್ರಿಯೇ. ಇರುವ ಚಿಕ್ಕ ಕೋಣೆಯಲ್ಲೇ ಎಲ್ಲ ಆಗಬೇಕು. ಕುಳಿತರೆ, ನಿಲ್ಲಲಾಗದು, ನಿಂತರೆ ಕುಳಿತುಕೊಳ್ಳಲಾಗದು. ಇದ್ದಿದ್ದರಲ್ಲಿ ಇವರು ಸ್ವಲ್ಪ ವಾಸಿ. ತೀರ ಸೋಂಬೇರಿಗಳ ಹೊರತಾಗಿ ಬಹುತೇಕರು ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತಾರೆ. ಸ್ವಲ್ಪ ಬ್ಯೂಟಿಪಾರ್ಲರ್, ಗೆಳೆಯ/ಗೆಳತಿಯರ ಕ್ರಿಯಾತ್ಮಕ ಒಡನಾಟ, ಕೋಣೆಯ ಸ್ವಚ್ಛತೆ ಇವುಗಳ ಕಡೆ ಗಮನ ಕೊಡುತ್ತಾರೆ. ಆದರೆ ಇಲ್ಲೂ ಆಲಸ್ಯದ ಎಂತಹ ಪರಮಾವಧಿಯೆಂದರೆ ಕೆಲವರ ಸೋಂಬೇರಿತನಕ್ಕೆ ತಿಗಣೆಯಾದರೆ ಇಡೀ ಹಾಸ್ಟೆಲ್ಲು ಅನುಭವಿಸಬೇಕಾಗುತ್ತದೆ. ಗಂಡುಮಕ್ಕಳ ಹಾಸ್ಟೆಲ್ಲು ಇದಕ್ಕಿಂತಲೂ ಹೊರತಾಗೇನಿರುವುದಿಲ್ಲ ಎನ್ನುವುದು ನನ್ನ ತಮ್ಮನ ಹಾಸ್ಟೆಲ್ಲು ನೋಡಿ ತಿಳಿದಿದ್ದೇನೆ. ಅವರಲ್ಲಿ ಕೆಲವರು ವಾರಗಟ್ಟಲೆ, ತಿಂಗಳುಗಟ್ಟಲೆ ಸ್ನಾನವನ್ನೇ ಮಾಡುವುದಿಲ್ಲ ಎನ್ನುವುದನ್ನು ತಿಳಿದು, ಗಡ್ಡ ಮಾಡದಿದ್ದರೂ ಅಸಹ್ಯ ಹುಟ್ಟಿಸುವ ಹುಡುಗರು ನನ್ನ ಮಟ್ಟಿಗೆ ಸಹ್ಯರಾಗಿದ್ದು ಹಳೇ ಸುದ್ದಿ!

ಇಂತಿಪ್ಪ ಯುವ ಭಾರತದಲ್ಲಿ ಮೊನ್ನೆ ಪ್ರಧಾನಮಂತ್ರಿ ಮೋದಿಯವರು ಅಮೆರಿಕದಲ್ಲಿ ಭಾಷಣ ಮಾಡುತ್ತಿದ್ದಾಗ ನನಗೆ ನಗುವೋ ನಗು. ವಿಷಾದ ಮೂಡಲಿಲ್ಲ, ಯಾಕೆಂದರೆ ಯುವ ಭಾರತವನ್ನು ನೋಡಿ ನೋಡಿ ವಿಷಣ್ಣ ಮನಸ್ಸು ಸಣ್ಣವಾಗಿ ನಗು ದೊಡ್ಡದಾಗಿದೆ :) ತಮ್ಮ ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳಲಾಗದ, ತಮ್ಮ ಬಾಯಿ, ದೇಹ, ತಲೆಯಂತಹ ಬಾಹ್ಯ ಜಗತ್ತಿಗೆ ಕಾಣುವ ಅಂಗಾಂಗಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಲಾಗದ, ಯಾರಿದ್ದಾರೆ ಇಲ್ಲ ಎನ್ನದೆ ಆಯ ಕಟ್ಟಿನ ಜಾಗದಲ್ಲಿ ಪರಪರ ಕೆರದುಕೊಳ್ಳುವ ಜನರು ಇಂದು ನೂರಕ್ಕೆ ಎಂಭತ್ತರಷ್ಟಿದ್ದಾರೆ. ಆ ಎಂಭತ್ತರಲ್ಲಿ ನಲವತ್ತರಷ್ಟು ಯುವ ಜನಾಂಗ ಮೋದಿಜೀ ಹೇಳಿದ 35ರ ಒಳಗಿದ್ದಾರೆ ಎನ್ನುವುದು ಇನ್ನೊಂದು ದುರಂತ.

ಇವರು ಸಂಘಟನೆ ಕೇಳಿ ಮುಂದು, ಭಾಷಣ ಕೇಳಿ ಮುಂದು, ಓದು, ವೃತ್ತಿ ದುಡಿಮೆ ಕೇಳಿ ಮುಂದು. ಆದರೆ ತಮ್ಮದೇ ಮನೆ, ತಮ್ಮದೇ ಪರಿಸರ, ತಮ್ಮದೇ ದೇಹ, ತಮ್ಮದೇ ವಸ್ತುಗಳು ಇವುಗಳಿಗೆ ಬಂದು ಬಿಟ್ಟರೆ ದೇವರಿಗೇ ಪ್ರೀತಿ. ಮನೆಯ ಕಸಗುಡಿಸಿ, ನೆಲ ಒರೆಸಲು ಇವರಿಗೆ ಆಳು ಬೇಕು. ಅಡುಗೆ ಮಾಡುವುದೆಂದರೆ ಬೇಜಾರು. ಹೊರಗೆ ಹೋಗಿ ಏನಾದರೂ ತಿಂದು ಬಂದು ಮಲಗಿದರೆ ಆಯ್ತು. ಇವರನ್ನು ಬೆಳೆಸಿದ ಆ ಅಮ್ಮ ಇನ್ನೊಂದು ಗೋಳು. ಎರಡು ದಿನದ ಹಿಂದೆ ಮಾಡಿದ್ದ ಒಂದು ಸಾರನ್ನೇ ಮನೆಯಲ್ಲಿ ತಿಂದಿಲ್ಲ, ಇನ್ನು ಎರಡು, ಮೂರು ಬಗೆ ಪದಾರ್ಥ ಎಂದು ದಬಾಯಿಸಲೇ ಬರಬಹುದು. 45 ದಾಟಿದ ಅಮ್ಮನಿಗೆ ಅತ್ತ ಮಕ್ಕಳು, ಗಂಡ ಯಾರೂ ಕೈಗೆ ಸಿಗದ ಅಬ್ಬೆಪಾರಿಯಾದ ಮನಃಸ್ಥಿತಿ. ಗಂಡನಿಗೆ ದಬಾಯಿಸಿ ಪಕ್ಕದ ಮನೆಯ ಆಂಟಿ ಅಡುಗೆ ಚೆನ್ನಾಗಿ ಮಾಡುತ್ತಾರೆ ಎಂದು ಹೇಳುವಂತಿಲ್ಲ, ಯಾಕೆಂದರೆ ಬಹುತೇಕ ಆಕೆಯೂ ಹಾಗೆಯೇ. ಇನ್ನು ಇಡೀ ಕಾಲನಿಯಲ್ಲಿ ಎಲ್ಲೊ ಒಬ್ಬ ಇಬ್ಬ ರುಚಿಕಟ್ಟಾಗಿ ಅಡುಗೆ ಮಾಡಿ, ಮನೆಯನ್ನು ಅಂದಚೆಂದವಾಗಿಟ್ಟುಕೊಂಡು, ತನ್ನದೂ ಎಂತ ಒಂದು ಬದುಕೂ ಇಟ್ಟುಕೊಂಡು, ಗಂಡ-ಮಕ್ಕಳೊಂದಿಗೆ ಖುಷಿಯಾಗಿದ್ದರೆಂತೂ ಆಕೆಯ ಪಾಡು ಯಾರಿಗೂ ಬೇಡ. ಅವಳೊಬ್ಬ ದೊಡ್ಡ ವಿಲನ್. ಅವಳ ಬಗ್ಗೆ ಕಾಲನಿಯ ಗಂಡಸರಿಗೆಲ್ಲ ಗೌರವ, ಸಿಕ್ಕರೆ ಒಂದು ಛಾನ್ಸ್ ನೋಡುವ ಆಸೆ. ತಮ್ಮ ಗಂಡನ ಕಣ್ಣಿನಲ್ಲಿ ಅವಳೆಡೆಗೊಂದು ಮೆಚ್ಚುಗೆಯ ನೋಟ ಕಂಡ ಹೆಣ್ಣುಮಕ್ಕಳಿಗೆಲ್ಲ ಅವಳನ್ನು ಕಂಡರೆ ಆಗುವುದಿಲ್ಲ.

ಇನ್ನು ಗಂಡ ಬೆಳಿಗ್ಗೆ ಆದ ಕೂಡಲೇ ಉಸ್ಸು ಉಸ್ಸು ಎನ್ನುತ್ತ ವಾಕಿಂಗ್ ಮಾಡುತ್ತಾನೆ. ಹೋಗುವಾಗ ನಾಯಿ ಇದ್ದರೆ ಅದನ್ನೂ ಕರೆದುಕೊಂಡು ಹೋಗಿ (ಅದು ರಸ್ತೆಯಲ್ಲೇ ಕಕ್ಕ ಮಾಡುತ್ತದೆ.) ಇವನು ತನ್ನ ಪಾಡಿಗೆ ತಾನು ವಾರ್ಮಅಪ್ ಮಾಡುತ್ತಾನೆ. ಇವನಿಗೆ ಮನೆಯಲ್ಲಿ ಸ್ವಲ್ಪ ಸ್ನಾನಕ್ಕೆ ನೀರು ಹಾಕು, ಸ್ವಿಚ್ಚು ಹಾಕು ಎಂದರೆ ಸಿಟ್ಟು ಬರುತ್ತದೆ. ಕಾಫಿ ಆಗಿದೆ ಬಂದು ತೆಗೆದುಕೊಂಡು ಕುಡಿದು ಹೋಗು ಎಂದರೆ ಸಿಡಿಮಿಡಿ. ತೊಳೆಯಲು ಬರ್ತಾರಲ್ಲ ಅವರಿಗೆ ನಿನ್ನ ತೊಳೆಯುವ ಬಟ್ಟೆ ಯಾವುದು, ನೋಡಿ ಹಾಕು ಎಂದರೆ ಮತ್ತೇನೋ ತರಲೆ. ಇವನೋ ಹೀಗೆ. ಇವನ ಮಕ್ಕಳು ಅಮ್ಮಾ ಶೂ ಕಾಣ್ತಿಲ್ಲ, ಇವತ್ತಿನ ಯುನಿಫಾರ್ಮ ಎಲ್ಲಿಟ್ಟಿದ್ದೀಯ, ಜಡೆ ಹಾಕು, ಹೀಗೆ ಸಾವಿರ ಕಿರಿಕಿರಿ. ಇವರೆಂತೂ ಶಾಲೆಗೆ ಹೋಗುವುದು, ಪಾಠ ಓದುವುದು, ಮನೆಯಲ್ಲಿ ಕೊಟ್ಟ ಊಟ ಹಿಡಿಸಿದರೆ ಮಾಡುವುದು, ಇಲ್ಲವಾದರೆ ಅಂಗಡಿ ತಿಂಡಿ ತಿನ್ನುವುದು, ಟ್ಯೂಷನ್, ಫ್ರೆಂಡ್ಸ್, ಆ ಕ್ಲಾಸು, ಈ ಕ್ಲಾಸು ಎಂದು ಓಡಾಡುವುದು ಇದರ ಮಧ್ಯೆ ಅಪ್ಪ, ಅಮ್ಮ ಇದ್ದಾರಾ, ಸತ್ತಿದ್ದಾರಾ ಎನ್ನುವ ಸ್ಪಂದನೆಯೂ ಇರುವುದಿಲ್ಲ. ತಿಂಡಿ ತಿಂದು ಎಸೆಯುವ ವ್ರ್ಯಾಪರ್ ಗಳನ್ನು ಅವರವರೇ ನಿಭಾಯಿಸುವುದನ್ನು ಕಲಿತಿದ್ದರಾದರೂ ಈ ದೇಶ ಇನ್ನಷ್ಟು ಸ್ವಚ್ಛವಾಗಿರುತ್ತಿತ್ತು. ಆದರೆ ಶಾಲೆಯಲ್ಲಿ ಪರಿಸರ ಪಠ್ಯಕ್ಕೆ 100ಕ್ಕೆ 100 ಅಂಕ ತೆಗೆಯುವ ಇವರು ಮಾಡುವ ಕಸವೇ (ಒಣತ್ಯಾಜ್ಯ) ದೇಶದಲ್ಲಿ ಉತ್ಪಾದನೆಯಾಗುವ ಕಾಲು ಭಾಗದಷ್ಟಿದೆಯೇನೋ.

ಇನ್ನು ಅಮ್ಮಂದಿರೆಂತೂ ಕೇಳುವುದೇ ಬೇಡ. ಬೊಜ್ಜು, ಬೊಜ್ಜು ಎನ್ನುತ್ತ ಕಂಡ ಕಂಡ ಟ್ರೀಟ್ ಮೆಂಟ್, ಯೋಗ ತರಗತಿ, ಆ ಜ್ಯೂಸು, ಈ ವಿಟಮಿನ್ ತಿಂದು ತಿಂದೂ ಏನಾಗುತ್ತಾರೋ ನಾನರಿಯೆ. ಇವರಿಗೆ ತಮ್ಮ ಮನೆ ಕೆಲಸಕ್ಕೆ ಜನ ಇಲ್ಲವೆಂದರೆ ಪ್ರೆಸ್ಟೀಜ್ ಪ್ರಶ್ನೆ. ನಿಮ್ಮ ಮನೆಯಲ್ಲಿ ಕೆಲಸದವರು ಇಲ್ವಾ? ಎಂದು ಅವರು ಕೇಳುವುದನ್ನು ನೋಡುವುದೇ ನನಗೀಗ ಚೆಂದ. ಮೊದಮೊದಲು ಅವರ ವ್ಯಂಗ್ಯ, ಕುಹಕಕ್ಕೆ ಬೇಜಾರಾಗ್ತಾ ಇತ್ತು. ಈಗ ಎಂಜಾಯ್ ಮಾಡ್ತೇನೆ. ಅಂತೂ ತಿಂಡಿಯಾಯ್ತು ಎನ್ನುವಾಗ ಮಧ್ಯಾಹ್ನ 12 ಆಗಿರುತ್ತದೆ. ಅಂತೂ ಊಟವಾಯ್ತು ಎಂದಾಗ ಸಂಜೆ 4-5 ಗಂಟೆಯಾಗಿರುತ್ತದೆ. ಏನು ಮಾಡಿದ್ದೀರಿ ಎಂದರೆ ಬೆಳಿಗ್ಗೆ ಬಾತ್ ಮಾಡಿದ್ದೆ. ಅದೇ ಉಳಿದಿತ್ತು ತಿಂದೆ ಎನ್ನುತ್ತಾರೆ. ಒಂದು ಅನ್ನ, ಸಾರು ಮಾಡಲು ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ ಎರಡೂ ಅಲ್ಲದ 1-2 ಗಂಟೆ ಒಳಗೆ ತಿಂಡಿ, ಊಟ ಎರಡೂ ``ತಿನ್ನು''ವವರನ್ನು ಪ್ರತಿನಿತ್ಯ ಕಾಣುತ್ತೇನೆ. ಇಂತಹ ದಿನಚರಿಯಲ್ಲಿ ವಿವೇಕಾನಂದರ ದೈಹಿಕ ಗಟ್ಟಿತನ ಎಲ್ಲಿಂದ ಬರಬೇಕು?

ಊಟದ ಸಂಸ್ಕಾರವಿಲ್ಲ, ಮಾತು, ನಡತೆಯ ಸಂಸ್ಕಾರವಿಲ್ಲ, ಧಾರ್ಮಿಕತೆಯ ಸಂಸ್ಕಾರವಿಲ್ಲ, ನಂಬುಗೆಯ ದಾರಿಯಿಲ್ಲ, ಕೆಲಸ, ವೈಯಕ್ತಿಕ ಸ್ವಚ್ಛತೆ, ಪರಿಸರದ ಓರಣ, ಇನ್ನೊಬ್ಬರ ಮನಃಸ್ಥಿತಿ, ಪರಿಸ್ಥಿತಿಯನ್ನು ಅರಿತು ಸಹಾನುಭೂತಿ, ಸಹಾಯ ಒದಗಿಸುವಿಕೆ ಇವೆಲ್ಲ ದೂರದ ಮಾತಾಗಿವೆ. ಬಹುಷಃ ಇದನ್ನು ಓದಿದವರು ನನ್ನನ್ನು 80 ವರ್ಷದ ಮುದುಕಿ ಎಂದುಕೊಂಡರೂ ಆಶ್ಚರ್ಯವಿಲ್ಲ. ಆದರೆ ಇವೆಲ್ಲ ಸತ್ಯ . ಈಗೇನಿದ್ದರೂ ಬರೇ ಓದು, ಓದು, ಓದು. ಕಾರು ಕೊಳ್ಳು, ವಿದೇಶ ತಿರುಗು, ಸರ್ಕಾರಿ/ಖಾಸಗಿ ಯಾವುದಾದರೂ ಸರಿ, ಒಂದು ಕೆಲಸ ಮಾಡಿ (ಲಂಚ ತೆಗೆದುಕೊಂಡಾದರೂ ಸರಿ, ಹೆದರಿಸಿ, ಕೊಳ್ಳೆಹೊಡೆದು, ಕೊನೆಗೆ ನಿನ್ನನ್ನೇ ಮಾರಿಯಾದರೂ ಸರಿ), ಮೊದಲು ದುಡ್ಡು ಮಾಡು ಎನ್ನುದನ್ನು ಮಾತ್ರ ಮುಂದಿನ ಪೀಳಿಗೆಗೆ ತಪ್ಪದೆ ತಲುಪಿಸಲಾಗುತ್ತಿದೆ. ಬೇರೆಯವರ ಕೆಲಸಕ್ಕೂ ತಾನೇ ಕ್ರೆಡಿಟ್ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು, ತಪ್ಪು ಹುಡುಕಿ ಜರಿಯುವುದನ್ನು, ತನ್ನ ತಪ್ಪಿಗೆ ಇನ್ಯಾರೋ ಕಾರಣ ಎನ್ನುವ ಪಲಾಯನವಾದವನ್ನು ಮಕ್ಕಳು ಮನೆಯಲ್ಲೇ ಕಲಿಯುತ್ತಿವೆ. ಪಾಪ, ಮೋದೀಜೀಗೆ ಇವುಗಳ ಅರಿವಿದ್ದಂತಿಲ್ಲ.

ಅಪ್ಪ, ಅಮ್ಮನಿಗೇ ಯಾರಾದರೂ ಪೂಜೆ, ಪ್ರಾರ್ಥನೆ, ಭಜನೆ, ಬಾಯಿಪಾಠದಂತಹ ಸಂಸ್ಕಾರದ ಪಾಠ ಯಾರಾದರೂ ಮಾಡಲೇಬೇಕಾದ ತುರ್ತು ಅನಿವಾರ್ಯತೆ ಇದೆ. ಹೀಗಿರುವಾಗ ಯುವಪೀಳಿಗೆಗೆ ಯಾರು, ಏನು ಹೇಳಿಕೊಟ್ಟಾರು? ಸೋಮಾರಿ (ಜಡಭರತ ಎನ್ನುವುದಿಲ್ಲ, ಆ ಲೇವಲ್ಲಿನ ಜಡತೆ ಇದಲ್ಲ) ಜಡ್ಡು ಗಟ್ಟಿದ ಜನರು ಅದೇನು ಸ್ವಚ್ಛ ಭಾರತ ಮಾಡುತ್ತಾರೋ ನನಗೆಂತೂ ಅನುಮಾನ. ಮೋದಿ ಅದೇನು ಕಂಡು ಇಡೀ ಜಗತ್ತಿಗೆಲ್ಲ ಇಲ್ಲಿನ ಯುವ ಜನರ ಬಗ್ಗೆ ಭರವಸೆ ನೀಡಿದರೋ ಗೊತ್ತಾಗ್ತಾ ಇಲ್ಲ. ಯಾಕೆಂದರೆ ಅತ್ಯಂತ ಆಶಾವಾದಿಯಾದ ನನಗೂ ಈ ವಿಷಯದಲ್ಲಿ ನಿರಾಶೆಯಿದೆ. ಬಹುಷಃ ಅವರು ಮಹಾ ಆಶಾವಾದಿಯಾಗಿರಬೇಕು!!

ಹಾಂ. ಇಷ್ಟೆಲ್ಲದರ ನಡುವೆ ಅಲ್ಲಲ್ಲಿ ಕೆಲವು ಅಮ್ಮಂದಿರು ಗಂಡ, ಮಕ್ಕಳನ್ನು ಹೋಟೆಲ್ಲಿಗೆ ಅಡಿಕ್ಟ್ ಮಾಡದೆ, ಶುಚಿ, ರುಚಿಯಾಗಿ ಮಾಡಿಹಾಕುತ್ತಿದ್ದಾರೆ. ತಮ್ಮ ಧಾರ್ಮಿಕತೆ, ಅಧ್ಯಾತ್ಮಿಕತೆಯಲ್ಲಿ ಮಕ್ಕಳನ್ನೂ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವು ಮಕ್ಕಳು ಮನೆಯಲ್ಲಿ ವಾತಾವಾರಣ ಸರಿ ಇಲ್ಲದಿದ್ದರೂ ಓದಿ, ತಿಳಿದು ಸಕಾರಾತ್ಮಕವಾಗಿ ಬೆಳೆಯುತ್ತಿದ್ದಾರೆ, ಗಂಡ ತನ್ನ ಉಸಿರು ನಿಲ್ಲುತ್ತದೆ ಎಂದು ತಿಳಿದಂದಿನಿಂದ ಹೆಂಡತಿ ಗುಡಿಸಿ, ಒರೆಸದಿದ್ದರೂ ತಾನು ವ್ಯಾಕ್ಯೂಮ್ ಕ್ಲೀನರ್ ಹಾಕಿ ಮನೆ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾನೆ....ಇಂತಹ ಎಲ್ಲ ಸಕಾರಾತ್ಮಕ, ಬದುಕಿನ ಬಗ್ಗೆ ತುಸು ಶ್ರದ್ಧೆಯಿರುವ ಮನಸ್ಸುಗಳಿಗೆ, ವ್ಯಕ್ತಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. 

ಮಂಗಳವಾರ, ಜೂನ್ 17, 2014

ಅಧೋಗತಿಯಲ್ಲಿ ಬ್ರಾಹ್ಮಣರು - ಹೀಗೊಂದು ವಿಶ್ಲೇಷಣೆ

ಪೌರೋಹಿತ್ಯ ಅಥವಾ ಪುರದ ಹಿತವನ್ನು ಕಾಯುವ, ಪುರದ / ರಾಜ್ಯದ/ ಕುಲದ ಮಾರ್ಗದರ್ಶನ ಮಾಡುವ ಪೌರೋಹಿತ್ಯ ಎಂಬ ಶಬ್ದಕ್ಕೇ ಒಂದು ಘನತೆ ಇದೆ. ಈ ಪೌರೋಹಿತ್ಯ ಮಾಡುವ ಜನರು ಸಾಮಾನ್ಯರಿಗಿಂತಲೂ ಹೆಚ್ಚು ತಿಳುವಳಿಕೆ ಉಳ್ಳವರೂ, ವೇದ, ಶಾಸ್ತ್ರ, ಆಗಮ, ಉಪನಿಷತ್ತುಗಳನ್ನು ಓದಿಕೊಂಡವರೂ, ಜೀವನಾನುಭವವನ್ನು ಧನಾತ್ಮಕವಾಗಿ ಸಮಾಜದ ಒಳಿತಿಗೆ ಹಂಚಬಲ್ಲವರೂ ಆಗಿರಬೇಕು. ಈ ಎಲ್ಲ ಗುಣಗಳು ಸಾಮಾಜಿಕವಾಗಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿವೆ ಎಂಬ ನಂಬಿಕೆ ಕಾಲಕ್ರಮದಲ್ಲಿ ಬೆಳೆದುಬಂತು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಯಾರೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುತ್ತಾರೆ ಎಂದಾಗ ಅತಿ ಆತ್ಮವಿಶ್ವಾಸ ಮತ್ತು ದರ್ಪ ಬಂದೇ ಬರುತ್ತದೆ. ಹೀಗೆ ತನಗೆ ಎಲ್ಲರಿಗಿಂತ ಹೆಚ್ಚು ಬುದ್ದಿ, ತಿಳುವಳಿಕೆ, ಜ್ಞಾನ ಇದೆ ಎಂಬ ಅಹಂಕಾರ ಒಂದು ವರ್ಗಕ್ಕೆ ಹೆಚ್ಚುತ್ತಾ ಹೋಯಿತು. ಮತ್ತು ಅದೇ ಕಾಲಕ್ರಮೇಣ (ಅವರದೇ ಭಾಷೆಯಲ್ಲಿ ಹೇಳಲು ಹೋದರೆ) ಅರಿಷಡ್ವೈರಿಗಳ ದಾಳಿಗೆ ಕಾರಣವಾಗುತ್ತದೆ. ಇಂತಹ ಒಂದು ಅವನತಿಯತ್ತ ಇಂದಿನ ಸಮಾಜದ ಒಂದು ವರ್ಗ ಬಂದು ನಿಂತಿದೆ.
ನಾನು ಪೌರೋಹಿತ್ಯದ ಔನ್ನತ್ಯಕ್ಕೆ ಸಾಕ್ಷಿಗಳನ್ನು ಇತಿಹಾಸದಲ್ಲಿ ಓದಿದ್ದೇನೆಯೇ ಹೊರತು, ಪ್ರತ್ಯಕ್ಷವಾಗಿ ಕಂಡಿದ್ದು ಅಪರೂಪ. ಅವನತಿಯ ಹಾದಿಯನ್ನು ಹಿಡಿದಿದ್ದಕ್ಕೆ ಸಾಕ್ಷಿಯಾಗಿದ್ದೇನೆ ಎಂಬುದು ವಾಸ್ತವ.
ಮೂಲತಃ ಈ ಅವನತಿಯ ಪಥದಲ್ಲಿರುವ ಸಮುದಾಯಕ್ಕೇ ಸೇರಿದವಳಾದ ನಾನು ಪುರೋಹಿತರನ್ನು ಹತ್ತಿರದಿಂದ ನೋಡಿದ್ದೇನೆ. ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ ನನ್ನಜ್ಜಿಯ ಮನೆ ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿ ಹಬ್ಬ, ಹರಿದಿನಗಳು ಜೋರಾಗಿ ನಡೆಯುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಮನೆಗೆ ಪುರೋಹಿತರ ಬದಲು ಅರ್ಚಕರು ಬರುವುದು ವಾಡಿಕೆಯಾಗಿತ್ತು. ಕುಲಪುರೋಹಿತರು ಮದುವೆ, ಮುಂಜಿ, ಶ್ರಾದ್ಧಗಳಿಗೆ ಮಾತ್ರ ಬರುತ್ತಿದ್ದರು. ಹಾಗೆ ಪುರೋಹಿತರು, ಅರ್ಚಕರು ಯಾರೇ ಬರಲಿ ಸಂಸ್ಕೃತದಲ್ಲಿ ಪೂಜೆ ಮುಗಿಸಿ ಹೋಗುವುದು ಸಾಮಾನ್ಯವಾಗಿತ್ತು. ಹೆಂಗಸರು ಮಡಿಯಲ್ಲಿ ನೈವೇದ್ಯ ತಯಾರಿಸುವುದು, ಹೆಣ್ಣುಮಕ್ಕಳು ಹಾಡು, ಹಸೆ, ಆರತಿ ತಟ್ಟೆ, ಹೂವಿನ ಮಾಲೆ ಮಾಡುವುದು ಇವುಗಳಿಗೆ ಸೀಮಿತವಾಗಿದ್ದರೆ, ಮಡಿ ಉಟ್ಟ ಯಜಮಾನ ಅರ್ಚಕರು/ಭಟ್ಟರು/ಪುರೋಹಿತರು/ಸ್ವಾಮಿಗಳು/ ಹೀಗೆ ಯಾವುದೇ ಹೆಸರಿನಿಂದ ಕರೆಯಲ್ಪಡುತ್ತಿದ್ದವರ ಮಾರ್ಗದರ್ಶನದಲ್ಲಿ ಕೈಕರಣ ಮಾಡುತ್ತಿದ್ದರು. ಪೂಜೆಯ ಕೊನೆಯಲ್ಲಿ ಮಂಗಳಾರತಿಗೆ ಎಲ್ಲರೂ ಸೇರುವುದು ಸಂಪ್ರದಾಯ. ಯಾರೂ ಕೂಡ ಮಾಡುವ ಕೈಕರಣ, ಸಂಸ್ಕೃತದಲ್ಲಿರುವ ಮಂತ್ರಗಳ ಭಾವ, ಭಾವನೆ, ಪ್ರತ್ಯೇಕ ಪೂಜೆಗಳ ಮಹತ್ವವನ್ನು ಪ್ರಶ್ನಿಸಿದ್ದಾಗಲಿ/ ದೊಡ್ಡವರು ತಿಳಿಸಿಕೊಟ್ಟಿದ್ದಾಗಲಿ ಕಂಡಿಲ್ಲ. ಪರಿಣಾಮ ಒಂದು ಆಧ್ಯಾತ್ಮಿಕ ಆಚರಣೆ ಪೀಳಿಗೆಯಿಂದ ಪೀಳಿಗೆಗೆ ಮಹತ್ವ ಕಳೆದುಕೊಳ್ಳುತ್ತ ಕೇವಲ ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯವಾಗಿ ಮುಂದುವರೆಯಿತು.
            ಇನ್ನು ಈ ಅರ್ಚಕರು/ಪುರೋಹಿತರು ಎಂದರೆ ಅತಿ ಗೌರವದಿಂದ ನೋಡುತ್ತಿದ್ದ ಜನ ಅವರಲ್ಲಿ ವಿಶ್ವಾಸ, ಗೌರವ ಕಳೆದುಕೊಳ್ಳಲೂ ಕಾರಣವಿದೆ. ಹಗಲಲ್ಲಿ ಪೂಜೆ ಮಾಡಿಸಿ ಸಂಜೆಯಾದ ಕೂಡಲೇ ಸಾರಾಯಿ ಅಂಗಡಿಗೋ, ವೇಶ್ಯೆಯರ ಮನೆಗಳಿಗೋ ಇವರುಗಳು ಹೋಗಿಬರತೊಡಗಿದರು. ದಕ್ಷಿಣೆ ಪೀಕುವುದು, ಅಕ್ಕಿ, ಕಾಯಿ, ದುಡ್ಡು ಹೀಗೆ ಪ್ರತಿಯೊಂದರಲ್ಲೂ ಹೆಚ್ಚಿಗೆ ಕೊಡಿ ಎಂಬ ಲೋಭಕ್ಕೆ ಬಿದ್ದರು. ವೈಯಕ್ತಿಕ ಸ್ವಚ್ಛತೆ, ಮಾತು, ನಡೆ, ನುಡಿ ಹೀಗೆ ಪ್ರತಿಯೊಂದರಲ್ಲೂ ತಮ್ಮ ಘನತೆ, ಸ್ಥಾನವನ್ನು ಮರೆತರು. ತಾವು ಏನು ಮಾಡಿದರೂ ಜನರು ತಮ್ಮ ಕಾಲಿಗೆ ಬೀಳುತ್ತಾರೆ ಎಂದುಕೊಂಡರು. ಇಲ್ಲೇ ಇವರು ಎಡವಿದ್ದು.
           ಅದೇ ರೀತಿ  ಗಾಯತ್ರಿ ಮಂತ್ರೋಪದೇಶವೆಂತೂ ಬ್ರಾಹ್ಮಣನಾಗಿ ಹುಟ್ಟಿದ ತಪ್ಪಿಗೆ, ಸರಿಕರಲ್ಲಿ ಘನತೆ ಉಳಿಸಿಕೊಳ್ಳಲು ತೆಗೆದುಕೊಳ್ಳುವ ಒಂದು ಕರ್ಮದಂತೆ ಭಾಸವಾಗತೊಡಗಿತ್ತು. ಬಹುಶಃ ಇಂದು ನನ್ನ ಸಮುದಾಯದಲ್ಲಿ ಶೇ.95 ರಷ್ಟು ಜನರು ಗಾಯತ್ರಿ ಮಾಡುತ್ತಿಲ್ಲ. ಉಳಿದ 5ರಲ್ಲಿ ಶೇ.3ರಷ್ಟು ಜನರು ಅನಿವಾರ್ಯವಾಗಿಯೂ, ಶೇ.1ರಷ್ಟು ಯಾಂತ್ರಿಕವಾಗಿಯೂ ಮತ್ತು ಶೇ. 1ರಷ್ಟು ಜನ ಮಾತ್ರ ಶ್ರದ್ಧಾಪೂರ್ವಕವಾಗಿ ಮಾಡುತ್ತಿದ್ದಾರೆ! ಪೌೆರೋಹಿತ್ಯವು ಕುಲಕಸುಬಾಗಿದ್ದಾಗ ತೆಗೆದುಕೊಂಡ ದಾನವನ್ನು ದಕ್ಕತ್ತು ಮಾಡಿಕೊಳ್ಳಲು ಪ್ರತಿದಿನ ಇಂತಿಷ್ಟು ಗಾಯತ್ರಿ ಮಂತ್ರ ಜಪ ಮಾಡುವುದು ಕಡ್ಡಾಯವಾಗಿತ್ತು. ಕ್ರಮೇಣ ಇದು ಕುಲಕಸುಬಿನ ಬದಲು ಅನಿವಾರ್ಯ ಕರ್ಮವಾದಾಗ ತೆಗೆದುಕೊಂಡ ದಾನಕ್ಕೆ ಪ್ರತಿ ಜಪ ಮಾಡುವುದು ನಿಂತುಹೋಯಿತು. ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರೇ ಅರ್ಚಕರನ್ನು ಗೇಲಿ ಮಾಡುವ ಪರಿಸ್ಥಿತಿ ಬಂದಿದೆ.
            ನಾನು ಮನೆ ಶಿಫ್ಟ್ ಮಾಡುವ ಸಂದರ್ಭ. ಶಿರಸಿಯಿಂದ ಮೈಸೂರಿಗೆ ಬರುವಾಗ ಒಬ್ಬ ಮುಸಲ್ಮಾನನ ಗಾಡಿಯಲ್ಲಿ ಬಂದೆವು. ಆಗ ಆತ ತಪ್ಪದೇ ಮಧ್ಯಾಹ್ನ ಮತ್ತು ಸಂಜೆ ನಮಾಜ್ ಮಾಡಿದ. ನಾನು ಕಾಲೇಜಿನ ಹಾಸ್ಟೆಲ್ ನಲ್ಲಿರುವಾಗ ಇದ್ದೊಬ್ಬ ಮುಸ್ಲಿಂ ಹುಡುಗಿ ಪ್ರತಿನಿತ್ಯ ತಪ್ಪದೇ ನಮಾಜ್ ಮಾಡುತ್ತಿದ್ದಳು, ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದಳು. ಇದನ್ನೆಲ್ಲ ನೋಡಿದಾಗ ನಾವ್ಯಾಕೆ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ ಎಂದೆನಿಸದೇ ಇರಲಿಲ್ಲ.
            ಎಂತಹ ಸ್ಥಿತಿ ಬಂದಿದೆ ಎಂದರೆ ಪೂಜೆ ಎಂದರೆ ಧಾರ್ಮಿಕ ಆಚರಣೆ ಮಾತ್ರ ಎಂಬ ಭಾವನೆ ಬಹುತೇಕರಲ್ಲಿದೆ. ಎಡಪಂಥೀಯ ವಿಚಾರಧಾರೆಗಳು ಮತ್ತು ಬಲಪಂಥೀಯ ವಿಚಾರಧಾರೆಗಳು ಎಂಬ ಭೇದ ಬಹಳ ಕ್ಲಿಷ್ಟವಾಗಿದೆ. ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಮೂಢನಂಬಿಕೆ, ಆಚರಣೆ, ಸಂಪ್ರದಾಯ, ಅಧ್ಯಾತ್ಮ, ಜ್ಯೋತಿಷ್ಯ ಇವುಗಳನ್ನೆಲ್ಲ ವಿರೋಧಿಸುವ ಎಷ್ಟೋ ಜನರು ವೈಯಕ್ತಿಕವಾಗಿ ತೀರ ಖಾಸಗಿಯಾಗಿ ಜ್ಯೋತಿಷಿಗಳನ್ನು ಆಸ್ಥಾನಿಕರನ್ನಾಗಿಟ್ಟುಕೊಂಡಿರುವುದನ್ನು ನೋಡಿದ್ದೇನೆ. ಕದ್ದು ಮುಚ್ಚಿ ಪೂಜೆ, ಬಲಿಯಂತಹ ಆಚರಣೆಗಳನ್ನು ಮಾಡುವುದೂ ಗೊತ್ತು. ಹೀಗೆ ಒಳಗೊಂದು ಹೊರಗೊಂದರ ನಡುವೆ ಸತ್ಯ ಕಳೆದುಹೋಗಿದೆ. ಇದಕ್ಕೆಲ್ಲ ಇನ್ನೊಂದು ಸೇರಿದಂತೆ ಸ್ವತಃ ಮುಖ್ಯಮಂತ್ರಿಯಾದವರೇ ಬ್ರಾಹ್ಮಣ ವಿರೋಧಿಯಾಗಿರುವುದು.
           ದೇವಸ್ಥಾನಗಳೆಂದರೆ ಹಿಂದೆಲ್ಲ ಉಂಬಳಿ ಇರುತ್ತಿತ್ತು. ದೇವಸ್ಥಾನದ ಪೂಜೆಗಾಗಿ, ಅರ್ಚಕ ಕುಟುಂಬದ ಉದರಂಭರಣಕ್ಕಾಗಿ ಸ್ವತಃ ರಾಜಾಶ್ರಯವಿರುತ್ತಿತ್ತು. ಹಳ್ಳಿಗಳಲ್ಲಿ ದೇವಸ್ಥಾನ ಊರಿನದ್ದಾದರೂ ದಿನಕ್ಕೆ ಒಂದು ಪೂಜೆ ಮತ್ತು ಸಾಯಂಕಾಲ ಸಣ್ಣದೊಂದು ಹಾಲು ನೈವೇದ್ಯ ಬಿಟ್ಟರೆ ಅರ್ಚಕರಿಗೆ ಬೇರೆ ಕೆಲಸವಿರುತ್ತಿರಲಿಲ್ಲ. ಹಾಗಾಗಿ ಅವರು ಕೃಷಿಯಲ್ಲಿ, ಪೌರೋಹಿತ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು/ಇದ್ದಾರೆ. ಆದರೆ ಈಗ ದೇವಸ್ಥಾನಗಳು ಧಾರ್ಮಿಕ ಪ್ರವಾಸಿ ಕೇಂದ್ರಗಳಾಗಿವೆ. ಭಕ್ತರು ಎಷ್ಟೊತ್ತಿಗೆ ಬಂದರೂ ದೇವರಿಗೆ ಆರತಿ ಎತ್ತಿಕೊಡಬೇಕಾದ, ಅರ್ಚನೆ ಮಾಡಬೇಕಾದ ಸ್ಥಿತಿ ಇದೆ. ದೇವಾಲಯಕ್ಕೆ ಹೋಗುವ ಜನರು ಅರ್ಚಕರ ಆಯಾಸ, ಆರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಅವರಿಗೇನು ತಟ್ಟೆ ಕಾಸು, ದಾನ ಎಂದು ಚೆನ್ನಾಗಿ ದುಡ್ಡು ಮಾಡ್ತಾರೆ ಎಂದು ಮೂದಲಿಸುತ್ತಾರೆ. ದೇವಸ್ಥಾನ ಮಾಡಿ ಒಬ್ಬ ಅರ್ಚಕರನ್ನಿಟ್ಟು, ಮನ ಬಂದಂತೆ ದುಡಿಸಿ,  ಆಯಾ ಟ್ರಸ್ಟ್ ಗಳ ಹೆಸರಿನಲ್ಲಿ ಆಸ್ತಿ ಮಾಡುವುದೂ ಒಂದು ದೊಡ್ಡ ಉದ್ಯಮವಾಗಿದೆ. ಅರ್ಚಕರ ಕಷ್ಟ ಏನು ಎಂದು ಮುಖ್ಯಮಂತ್ರಿಗಳಿಗೂ ಅರಿವಿದ್ದಂತಿಲ್ಲ. ಈ ಕೆಲಸವನ್ನು ಅವರ ಆಪ್ತವಲಯದಲ್ಲಿರುವ ಬ್ರಾಹ್ಮಣರು ಮಾಡಬೇಕಿದೆ.
           ಜೊತೆಗೆ ಅಳಿದುಳಿದ ಅರ್ಚಕ ವೃತ್ತಿಯಲ್ಲಿರುವ ಬ್ರಾಹ್ಮಣರು ಪುರೋಹಿತರ ಗುಣಗಳನ್ನು ಪುನರ್ ಅಳವಡಿಸಿಕೊಂಡು ಇಡೀ ಸಮುದಾಯದ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ.  ಸಂಸ್ಕೃತ ಮಂತ್ರಗಳನ್ನು ಕನ್ನಡೀಕರಣಗೊಳಿಸುವ ಮತ್ತು ದೇವರನ್ನು ಸಾಮಾನ್ಯ ಜನರ ಬಳಿಯೂ ತರುವ ಅಭಿಯಾನ ಆಗಬೇಕಿದೆ. ಟಿ.ವಿಯಲ್ಲಿ ಹೇಳುವ ಅಂಧ ಆಚರಣೆಗಳ ಬದಲಿಗೆ ದೇವರ ಜೊತೆಗೆ ನಿಜ ಸಂಧಾನ ಮಾಡಿಸುವ ಭಕ್ತಿಯ ಹೊಸ ಅಧ್ಯಾಯ ಶುರುವಾಗಬೇಕಿದೆ. ಸಾಮಾನ್ಯ ಜನರನ್ನು ಲಾಭ, ನಷ್ಟಗಳ ವ್ಯಾಪಾರ ಬುದ್ಧಿಯಿಂದ ನಿಜಕರ್ಮ, ಕರ್ತವ್ಯ, ಜವಾಬ್ದಾರಿ ಮತ್ತು ಸಮರ್ಪಣೆಯಂತಹ ಉನ್ನತ ಭಾವನೆಗಳೆಡೆ ಕರೆದೊಯ್ಯಬೇಕಿದೆ. ಅಂದಾಗ ಮಾತ್ರ ಸನಾತನ ಹಿಂದೂ ಧರ್ಮದ ಬೇರುಗಳು ಮತ್ತೆ ಚಿಗಿತುಕೊಳ್ಳುತ್ತವೆ. ಭಾರತ ಮತ್ತೊಮ್ಮೆ ಆಧ್ಯಾತ್ಮಿಕ ಶಕ್ತಿಯಾಗುತ್ತದೆ.