ಶನಿವಾರ, ಅಕ್ಟೋಬರ್ 4, 2014

ಐ ಡೋಂಟ್ ಲೈಕ ದ ಪೀಪಲ್ ಹು ನೀಡ್ ಸರ್ವೆಂಟ್ I don't like the people who need servent


ಅಂದು ಸಂಜೆ ಬಹಳ ಸುಸ್ತಾಗಿತ್ತು. ಬೆಂಗಳೂರಿನ ಟ್ರಾಫಿಕ್ ನಲ್ಲಿ ತಿರುಗಿ, ಕಚೇರಿಗೆ ಹೋಗಿ ಬರೆದು, ಕೆಲಸ ಮಾಡಿ ಮನೆಗೆ ಬಂದಾಗ ಹಾಸಿಗೆ ಕಂಡರೆ ಸಾಕು ಎನ್ನುವಂತಾಗಿತ್ತು. ಆದರೆ ಮನೆಕೆಲಸ ಬಿಡಬೇಕಲ್ಲ. ಬೆಳಿಗ್ಗೆ ಅರ್ಜೆಂಟಾಗಿ ಹೊರಟವಳಿಗೆ ನೆಲ ಒರೆಸಲು ಆಗಿರಲಿಲ್ಲ. ಇನ್ನು ಅಡುಗೆ ಮಾಡಿಕೊಳ್ಳುವುದು ಬಾಕಿ ಇತ್ತು. ಅಡುಗೆ ಎಂದರೆ ಒಂದು ಸಾರು, ಅನ್ನ ಅಲ್ಲ. ನನಗೆ ಒಬ್ಬಳಿದ್ದರೂ, ನಾಲ್ಕು ಜನವಿದ್ದರೂ ಕನಿಷ್ಠ ಪಕ್ಷ ಮೂರು ವೆರೈಟಿ ಇರಬೇಕು. ಅಂತೂ ಆಗಿಲ್ಲವೆಂದರೆ ಸಾರಿನ ಜೊತೆಗೆ ಪಲ್ಯವಾದರೂ ಇರಬೇಕು, ಮೊಸರು ಬಿಟ್ಟು. ಹಾಗಾಗಿ ಇಷ್ಟೂ ಕೆಲಸ ಅನಿವಾರ್ಯವಾಗಿ ಮಾಡಲೇಬೇಕಾದಾಗ ದಣಿವಾಗುತ್ತದೆ ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ. ಇನ್ನೊಮ್ಮೆ ಕಸಗುಡಿಸಿ, ನೆಲ ಒರೆಸಿ, ಅಡುಗೆ ಮಾಡುವಷ್ಟರಲ್ಲಿ ನನ್ನ ದಣಿವು ಮಂಗ ಮಾಯವಾಗಿತ್ತು.
ಇದು ನನಗೆ ಹೊಸ ಅನುಭವವೇನಲ್ಲ. ನನಗೆ ಮಾನಸಿಕವಾಗಿ ಬಹಳ ಸುಸ್ತಾದಾಗ ಎದ್ದು ದೈಹಿಕವಾಗಿ ಸ್ವಲ್ಪ ಚಟುವಟಿಕೆಯಿಂದ ಕೆಲಸ ಮಾಡಿದರೆ ಸಾಕು. ನಂತರ ಬರುವ ಗಾಢ ನಿದ್ದೆ ಎಲ್ಲವನ್ನು ಸರಿ ಮಾಡಿರುತ್ತದೆ. ಕೆಲಸಕ್ಕಾಗಿ ಕೆಲಸ. ಅದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ತಪಸ್ಸು ಎನ್ನುವುದು ನನ್ನ ಭಾವನೆ. ಅಧ್ಯಾತ್ಮದ ಮೊಟ್ಟ ಮೊದಲ ಮೆಟ್ಟಿಲು ಆರಂಭವಾಗುವುದೇ ದೈಹಿಕ ದಂಡನೆಯ ಮೂಲಕ. ಯಾರು ಆಲಸಿಗಳೋ ಅವರಿಗೆ ಅಧ್ಯಾತ್ಮವೆನ್ನುವುದು ಮರೀಚಿಕೆ. ಆದ್ದರಿಂದ ನನಗೆ ಯಾರಾದರೂ ಒಂದು ಕಡ್ಡಿ ಎತ್ತಿ ಆ ಕಡೆ ಇಡಲೂ ಜನ ಬೇಕೆಂದು ಹೇಳಿದರೆ ಕೆಂಡಾಮಂಡಲ ಸಿಟ್ಟು ಬರುತ್ತದೆ. ಆರಂಭದಲ್ಲಿ ಸ್ವಲ್ಪ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕೆಲಸ, ಅದರಿಂದ ಸಿಗುವ ಖುಷಿಯನ್ನು ಕಂಡೂ ಅವರು ಬದಲಾಗದಿದ್ದರೆ ಸುಮ್ಮನೆ ಅವರನ್ನು ತಿರಸ್ಕರಿಸಿಬಿಡುತ್ತೇನೆ. ಕಾರಣ ಇಷ್ಟೆ, ಜೀವಿಯ ಮೂಲ ಧರ್ಮ ಕ್ರಿಯೆ. ಈ ಕ್ರಿಯೆ/ಕೆಲಸ ಎನ್ನುವುದು ಶ್ರದ್ಧೆಯಿಂದ ಮಾಡಿದಾಗ ಪೂಜೆಯಾಗುತ್ತದೆ. ಯಾವಾಗ ವ್ಯಕ್ತಿ ತನ್ನ ಕೆಲಸ ತಾನು ಮಾಡಿಕೊಳ್ಳಲೂ ಅಯ್ಯೋ, ಅಮ್ಮಾ ಎನ್ನುತ್ತಾನೋ ಅಲ್ಲಿಗೆ ಅವ ಬದುಕಿಲ್ಲ ಎಂತಲೇ ನನ್ನ ಲೆಕ್ಕ.

ಇಂತಿಪ್ಪ ನಾನು ಬೆಂಗಳೂರಿಗೆ ಬಂದಾಗ ನನಗೆ ಇಲ್ಲಿ ನನ್ನ ಸುತ್ತಲಿನ ಸಾವಿರದಷ್ಟು ಜನ ಬದುಕಿಲ್ಲವೆಂದೇ ಎನಿಸಿತು. ಪುಟ್ಟ ಮಕ್ಕಳು ಬೆಳಿಗ್ಗೆ 5 ಗಂಟೆಗೆ ಟ್ಯೂಷನ್ಗೆ ಓಡುತ್ತಾರೆ. ಅವರ ತಿಂಡಿ, ಊಟ ತಯಾರಿಯಲ್ಲಿ ಅಮ್ಮನ ಬೆಳಗಾಗುತ್ತದೆ. ಅಪ್ಪ ಮಕ್ಕಳಿಗೆ ಸ್ನಾನ ಮಾಡಿಸಿ, ಬಟ್ಟೆ ಹಾಕಿಸುವಲ್ಲಿ ನೆರವಾದರೆ/ ಕುಳಿತಲ್ಲೆ ಕುಳಿತು ಆರ್ಡರ್ ಮಾಡಿದ ಕಾಫಿ ಕುಡಿದು ಪೇಪರ್ ಓದುತ್ತಾನೆ. ಒಮ್ಮೆ ಮಕ್ಕಳು ಶಾಲೆಗೆ ಹೋದವೆಂದರೆ ಮನೆಯಲ್ಲಿ ಉಳಿದವರಿಗೆ ನೆಮ್ಮದಿ. ಅಪ್ಪ ಸ್ನಾನಕ್ಕೆ ಗೀಜರ್ ಹಾಕಿಕೊಂಡು ಅಂತೂ ಇಂತು ತಂಗಳನ್ನದ ಚಿತ್ರಾನ್ನ ತಿಂದು ಹೊರಟನೆಂದರೆ ರಾತ್ರಿಯೇ ಬರುವುದು. ಅಪ್ಪ ಕಚೇರಿಗೆ ಹೋದ ನಂತರ ಅಮ್ಮ ನಿರಾಳ. ಸಂಜೆ ಮಕ್ಕಳು ಬರುವ ತನಕ ಅವಳದ್ದೇ ರಾಜ್ಯ.ಆ ಹೊತ್ತಿನಲ್ಲೇ ಕೆಲಸದವಳು ಬಂದು ಪಾತ್ರೆ, ಬಟ್ಟೆ, ಗುಡಿಸಿ, ಒರೆಸುವುದು ಮಾಡಿ ಹೋಗುತ್ತಾಳೆ. ಮಧ್ಯಾಹ್ನದ ತನಕ ಕೆದರಿದ ತಲೆ, ಹಳೇ ಮಾಸಲು ನೈಟಿಯಲ್ಲಿ ಊರೆಲ್ಲ ಸುದ್ದಿ ಹೇಳಿ ಮನೆಗೆ ಬಂದು, ರಾತ್ರಿ ಮಾಡಿದ್ದು, ಬೆಳಿಗ್ಗೆ ಮಾಡಿದ್ದರಲ್ಲಿ ಉಳಿದಿದ್ದನ್ನು ತಿಂದು ಅಮ್ಮಾ ಅಂತ ಟಿ.ವಿ ನೋಡುತ್ತಾರೆ. ಮಕ್ಕಳು ಬಂದ ನಂತರ ಅಂಗಡಿಯಿಂದಲೋ/ಹೋಟೆಲ್ಲಿಂದಲೋ ತಿಂಡಿ ತಂದು ಕೊಡುತ್ತಾರೆ. ಮತ್ತೆ ಟ್ಯೂಷನ್, ಹೋಂ ವರ್ಕ ಆರಂಭವಾಗುತ್ತದೆ. ಒಂದೆಡೆ ಮಕ್ಕಳಿಗೆ ಓದಲು ಕೂಡಿಸುತ್ತಲೇ ಅಮ್ಮ ರಾತ್ರಿಯ ಅಡುಗೆಗೆ, ಟಿ.ವಿ ನೋಡುತ್ತ ತಯಾರಿ ನಡೆಸುತ್ತಾಳೆ. ರಾತ್ರಿ ಹತ್ತು ಹತ್ತೂವರೆಗೆ ಒಂದು ಸಾರು, ಅನ್ನ ಮಾಡಿ ಅಯ್ಯಮ್ಮಾ ಎಂದು ಉಸಿರು ಬಿಡುತ್ತಾಳೆ. ಅಪ್ಪ ದಿನದ ಎಲ್ಲ ಆಯಾಸ ತಂದು ಮನೆಯ ಸದಸ್ಯರ ಮೇಲೆ ಹಾಕುತ್ತಾನೆ. ಹೆಂಡತಿಗೆ ಸ್ವಲ್ಪ ಹೆದರುವವನಾದರೆ ಹೀಗೆ ಹೋಗಿ ಹಾಗೆ ಒಂದು ಗುಟುಕು ಕುಡಿದು ಬಂದು ತೆಪ್ಪಗೆ ಅಡುಗೆಯಾಗುವ ತನಕ ಟಿ.ವಿ ನೋಡುತ್ತ ಸೋಪಾಕ್ಕೆ ತಗಲುಹಾಕಿಕೊಳ್ಳುತ್ತಾನೆ. ನನಗೆ ಇಡೀ ಬದುಕು ಎಷ್ಟು ಯಾಂತ್ರಿಕವಪ್ಪ ಎನಿಸುತ್ತದೆ.

ಇನ್ನು ಹಾಸ್ಟೆಲ್ ಗಳಿಗೆ ಬಂದರೆ ಹೆಣ್ಣುಮಕ್ಕಳು ರಾತ್ರಿಯೆಲ್ಲ ಕಥೆ ಹೇಳಿ ಬೆಳಿಗ್ಗೆ ಏಳುವುದು ಲೇಟು. ಅಂತೂ ಇಂತು ಎದ್ದು ಶೃಂಗಾರ ಮಾಡಿ ಹೊರಟರೆ ಮತ್ತೆ ಬರುವುದು ರಾತ್ರಿಯೇ. ಇರುವ ಚಿಕ್ಕ ಕೋಣೆಯಲ್ಲೇ ಎಲ್ಲ ಆಗಬೇಕು. ಕುಳಿತರೆ, ನಿಲ್ಲಲಾಗದು, ನಿಂತರೆ ಕುಳಿತುಕೊಳ್ಳಲಾಗದು. ಇದ್ದಿದ್ದರಲ್ಲಿ ಇವರು ಸ್ವಲ್ಪ ವಾಸಿ. ತೀರ ಸೋಂಬೇರಿಗಳ ಹೊರತಾಗಿ ಬಹುತೇಕರು ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತಾರೆ. ಸ್ವಲ್ಪ ಬ್ಯೂಟಿಪಾರ್ಲರ್, ಗೆಳೆಯ/ಗೆಳತಿಯರ ಕ್ರಿಯಾತ್ಮಕ ಒಡನಾಟ, ಕೋಣೆಯ ಸ್ವಚ್ಛತೆ ಇವುಗಳ ಕಡೆ ಗಮನ ಕೊಡುತ್ತಾರೆ. ಆದರೆ ಇಲ್ಲೂ ಆಲಸ್ಯದ ಎಂತಹ ಪರಮಾವಧಿಯೆಂದರೆ ಕೆಲವರ ಸೋಂಬೇರಿತನಕ್ಕೆ ತಿಗಣೆಯಾದರೆ ಇಡೀ ಹಾಸ್ಟೆಲ್ಲು ಅನುಭವಿಸಬೇಕಾಗುತ್ತದೆ. ಗಂಡುಮಕ್ಕಳ ಹಾಸ್ಟೆಲ್ಲು ಇದಕ್ಕಿಂತಲೂ ಹೊರತಾಗೇನಿರುವುದಿಲ್ಲ ಎನ್ನುವುದು ನನ್ನ ತಮ್ಮನ ಹಾಸ್ಟೆಲ್ಲು ನೋಡಿ ತಿಳಿದಿದ್ದೇನೆ. ಅವರಲ್ಲಿ ಕೆಲವರು ವಾರಗಟ್ಟಲೆ, ತಿಂಗಳುಗಟ್ಟಲೆ ಸ್ನಾನವನ್ನೇ ಮಾಡುವುದಿಲ್ಲ ಎನ್ನುವುದನ್ನು ತಿಳಿದು, ಗಡ್ಡ ಮಾಡದಿದ್ದರೂ ಅಸಹ್ಯ ಹುಟ್ಟಿಸುವ ಹುಡುಗರು ನನ್ನ ಮಟ್ಟಿಗೆ ಸಹ್ಯರಾಗಿದ್ದು ಹಳೇ ಸುದ್ದಿ!

ಇಂತಿಪ್ಪ ಯುವ ಭಾರತದಲ್ಲಿ ಮೊನ್ನೆ ಪ್ರಧಾನಮಂತ್ರಿ ಮೋದಿಯವರು ಅಮೆರಿಕದಲ್ಲಿ ಭಾಷಣ ಮಾಡುತ್ತಿದ್ದಾಗ ನನಗೆ ನಗುವೋ ನಗು. ವಿಷಾದ ಮೂಡಲಿಲ್ಲ, ಯಾಕೆಂದರೆ ಯುವ ಭಾರತವನ್ನು ನೋಡಿ ನೋಡಿ ವಿಷಣ್ಣ ಮನಸ್ಸು ಸಣ್ಣವಾಗಿ ನಗು ದೊಡ್ಡದಾಗಿದೆ :) ತಮ್ಮ ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳಲಾಗದ, ತಮ್ಮ ಬಾಯಿ, ದೇಹ, ತಲೆಯಂತಹ ಬಾಹ್ಯ ಜಗತ್ತಿಗೆ ಕಾಣುವ ಅಂಗಾಂಗಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಲಾಗದ, ಯಾರಿದ್ದಾರೆ ಇಲ್ಲ ಎನ್ನದೆ ಆಯ ಕಟ್ಟಿನ ಜಾಗದಲ್ಲಿ ಪರಪರ ಕೆರದುಕೊಳ್ಳುವ ಜನರು ಇಂದು ನೂರಕ್ಕೆ ಎಂಭತ್ತರಷ್ಟಿದ್ದಾರೆ. ಆ ಎಂಭತ್ತರಲ್ಲಿ ನಲವತ್ತರಷ್ಟು ಯುವ ಜನಾಂಗ ಮೋದಿಜೀ ಹೇಳಿದ 35ರ ಒಳಗಿದ್ದಾರೆ ಎನ್ನುವುದು ಇನ್ನೊಂದು ದುರಂತ.

ಇವರು ಸಂಘಟನೆ ಕೇಳಿ ಮುಂದು, ಭಾಷಣ ಕೇಳಿ ಮುಂದು, ಓದು, ವೃತ್ತಿ ದುಡಿಮೆ ಕೇಳಿ ಮುಂದು. ಆದರೆ ತಮ್ಮದೇ ಮನೆ, ತಮ್ಮದೇ ಪರಿಸರ, ತಮ್ಮದೇ ದೇಹ, ತಮ್ಮದೇ ವಸ್ತುಗಳು ಇವುಗಳಿಗೆ ಬಂದು ಬಿಟ್ಟರೆ ದೇವರಿಗೇ ಪ್ರೀತಿ. ಮನೆಯ ಕಸಗುಡಿಸಿ, ನೆಲ ಒರೆಸಲು ಇವರಿಗೆ ಆಳು ಬೇಕು. ಅಡುಗೆ ಮಾಡುವುದೆಂದರೆ ಬೇಜಾರು. ಹೊರಗೆ ಹೋಗಿ ಏನಾದರೂ ತಿಂದು ಬಂದು ಮಲಗಿದರೆ ಆಯ್ತು. ಇವರನ್ನು ಬೆಳೆಸಿದ ಆ ಅಮ್ಮ ಇನ್ನೊಂದು ಗೋಳು. ಎರಡು ದಿನದ ಹಿಂದೆ ಮಾಡಿದ್ದ ಒಂದು ಸಾರನ್ನೇ ಮನೆಯಲ್ಲಿ ತಿಂದಿಲ್ಲ, ಇನ್ನು ಎರಡು, ಮೂರು ಬಗೆ ಪದಾರ್ಥ ಎಂದು ದಬಾಯಿಸಲೇ ಬರಬಹುದು. 45 ದಾಟಿದ ಅಮ್ಮನಿಗೆ ಅತ್ತ ಮಕ್ಕಳು, ಗಂಡ ಯಾರೂ ಕೈಗೆ ಸಿಗದ ಅಬ್ಬೆಪಾರಿಯಾದ ಮನಃಸ್ಥಿತಿ. ಗಂಡನಿಗೆ ದಬಾಯಿಸಿ ಪಕ್ಕದ ಮನೆಯ ಆಂಟಿ ಅಡುಗೆ ಚೆನ್ನಾಗಿ ಮಾಡುತ್ತಾರೆ ಎಂದು ಹೇಳುವಂತಿಲ್ಲ, ಯಾಕೆಂದರೆ ಬಹುತೇಕ ಆಕೆಯೂ ಹಾಗೆಯೇ. ಇನ್ನು ಇಡೀ ಕಾಲನಿಯಲ್ಲಿ ಎಲ್ಲೊ ಒಬ್ಬ ಇಬ್ಬ ರುಚಿಕಟ್ಟಾಗಿ ಅಡುಗೆ ಮಾಡಿ, ಮನೆಯನ್ನು ಅಂದಚೆಂದವಾಗಿಟ್ಟುಕೊಂಡು, ತನ್ನದೂ ಎಂತ ಒಂದು ಬದುಕೂ ಇಟ್ಟುಕೊಂಡು, ಗಂಡ-ಮಕ್ಕಳೊಂದಿಗೆ ಖುಷಿಯಾಗಿದ್ದರೆಂತೂ ಆಕೆಯ ಪಾಡು ಯಾರಿಗೂ ಬೇಡ. ಅವಳೊಬ್ಬ ದೊಡ್ಡ ವಿಲನ್. ಅವಳ ಬಗ್ಗೆ ಕಾಲನಿಯ ಗಂಡಸರಿಗೆಲ್ಲ ಗೌರವ, ಸಿಕ್ಕರೆ ಒಂದು ಛಾನ್ಸ್ ನೋಡುವ ಆಸೆ. ತಮ್ಮ ಗಂಡನ ಕಣ್ಣಿನಲ್ಲಿ ಅವಳೆಡೆಗೊಂದು ಮೆಚ್ಚುಗೆಯ ನೋಟ ಕಂಡ ಹೆಣ್ಣುಮಕ್ಕಳಿಗೆಲ್ಲ ಅವಳನ್ನು ಕಂಡರೆ ಆಗುವುದಿಲ್ಲ.

ಇನ್ನು ಗಂಡ ಬೆಳಿಗ್ಗೆ ಆದ ಕೂಡಲೇ ಉಸ್ಸು ಉಸ್ಸು ಎನ್ನುತ್ತ ವಾಕಿಂಗ್ ಮಾಡುತ್ತಾನೆ. ಹೋಗುವಾಗ ನಾಯಿ ಇದ್ದರೆ ಅದನ್ನೂ ಕರೆದುಕೊಂಡು ಹೋಗಿ (ಅದು ರಸ್ತೆಯಲ್ಲೇ ಕಕ್ಕ ಮಾಡುತ್ತದೆ.) ಇವನು ತನ್ನ ಪಾಡಿಗೆ ತಾನು ವಾರ್ಮಅಪ್ ಮಾಡುತ್ತಾನೆ. ಇವನಿಗೆ ಮನೆಯಲ್ಲಿ ಸ್ವಲ್ಪ ಸ್ನಾನಕ್ಕೆ ನೀರು ಹಾಕು, ಸ್ವಿಚ್ಚು ಹಾಕು ಎಂದರೆ ಸಿಟ್ಟು ಬರುತ್ತದೆ. ಕಾಫಿ ಆಗಿದೆ ಬಂದು ತೆಗೆದುಕೊಂಡು ಕುಡಿದು ಹೋಗು ಎಂದರೆ ಸಿಡಿಮಿಡಿ. ತೊಳೆಯಲು ಬರ್ತಾರಲ್ಲ ಅವರಿಗೆ ನಿನ್ನ ತೊಳೆಯುವ ಬಟ್ಟೆ ಯಾವುದು, ನೋಡಿ ಹಾಕು ಎಂದರೆ ಮತ್ತೇನೋ ತರಲೆ. ಇವನೋ ಹೀಗೆ. ಇವನ ಮಕ್ಕಳು ಅಮ್ಮಾ ಶೂ ಕಾಣ್ತಿಲ್ಲ, ಇವತ್ತಿನ ಯುನಿಫಾರ್ಮ ಎಲ್ಲಿಟ್ಟಿದ್ದೀಯ, ಜಡೆ ಹಾಕು, ಹೀಗೆ ಸಾವಿರ ಕಿರಿಕಿರಿ. ಇವರೆಂತೂ ಶಾಲೆಗೆ ಹೋಗುವುದು, ಪಾಠ ಓದುವುದು, ಮನೆಯಲ್ಲಿ ಕೊಟ್ಟ ಊಟ ಹಿಡಿಸಿದರೆ ಮಾಡುವುದು, ಇಲ್ಲವಾದರೆ ಅಂಗಡಿ ತಿಂಡಿ ತಿನ್ನುವುದು, ಟ್ಯೂಷನ್, ಫ್ರೆಂಡ್ಸ್, ಆ ಕ್ಲಾಸು, ಈ ಕ್ಲಾಸು ಎಂದು ಓಡಾಡುವುದು ಇದರ ಮಧ್ಯೆ ಅಪ್ಪ, ಅಮ್ಮ ಇದ್ದಾರಾ, ಸತ್ತಿದ್ದಾರಾ ಎನ್ನುವ ಸ್ಪಂದನೆಯೂ ಇರುವುದಿಲ್ಲ. ತಿಂಡಿ ತಿಂದು ಎಸೆಯುವ ವ್ರ್ಯಾಪರ್ ಗಳನ್ನು ಅವರವರೇ ನಿಭಾಯಿಸುವುದನ್ನು ಕಲಿತಿದ್ದರಾದರೂ ಈ ದೇಶ ಇನ್ನಷ್ಟು ಸ್ವಚ್ಛವಾಗಿರುತ್ತಿತ್ತು. ಆದರೆ ಶಾಲೆಯಲ್ಲಿ ಪರಿಸರ ಪಠ್ಯಕ್ಕೆ 100ಕ್ಕೆ 100 ಅಂಕ ತೆಗೆಯುವ ಇವರು ಮಾಡುವ ಕಸವೇ (ಒಣತ್ಯಾಜ್ಯ) ದೇಶದಲ್ಲಿ ಉತ್ಪಾದನೆಯಾಗುವ ಕಾಲು ಭಾಗದಷ್ಟಿದೆಯೇನೋ.

ಇನ್ನು ಅಮ್ಮಂದಿರೆಂತೂ ಕೇಳುವುದೇ ಬೇಡ. ಬೊಜ್ಜು, ಬೊಜ್ಜು ಎನ್ನುತ್ತ ಕಂಡ ಕಂಡ ಟ್ರೀಟ್ ಮೆಂಟ್, ಯೋಗ ತರಗತಿ, ಆ ಜ್ಯೂಸು, ಈ ವಿಟಮಿನ್ ತಿಂದು ತಿಂದೂ ಏನಾಗುತ್ತಾರೋ ನಾನರಿಯೆ. ಇವರಿಗೆ ತಮ್ಮ ಮನೆ ಕೆಲಸಕ್ಕೆ ಜನ ಇಲ್ಲವೆಂದರೆ ಪ್ರೆಸ್ಟೀಜ್ ಪ್ರಶ್ನೆ. ನಿಮ್ಮ ಮನೆಯಲ್ಲಿ ಕೆಲಸದವರು ಇಲ್ವಾ? ಎಂದು ಅವರು ಕೇಳುವುದನ್ನು ನೋಡುವುದೇ ನನಗೀಗ ಚೆಂದ. ಮೊದಮೊದಲು ಅವರ ವ್ಯಂಗ್ಯ, ಕುಹಕಕ್ಕೆ ಬೇಜಾರಾಗ್ತಾ ಇತ್ತು. ಈಗ ಎಂಜಾಯ್ ಮಾಡ್ತೇನೆ. ಅಂತೂ ತಿಂಡಿಯಾಯ್ತು ಎನ್ನುವಾಗ ಮಧ್ಯಾಹ್ನ 12 ಆಗಿರುತ್ತದೆ. ಅಂತೂ ಊಟವಾಯ್ತು ಎಂದಾಗ ಸಂಜೆ 4-5 ಗಂಟೆಯಾಗಿರುತ್ತದೆ. ಏನು ಮಾಡಿದ್ದೀರಿ ಎಂದರೆ ಬೆಳಿಗ್ಗೆ ಬಾತ್ ಮಾಡಿದ್ದೆ. ಅದೇ ಉಳಿದಿತ್ತು ತಿಂದೆ ಎನ್ನುತ್ತಾರೆ. ಒಂದು ಅನ್ನ, ಸಾರು ಮಾಡಲು ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ ಎರಡೂ ಅಲ್ಲದ 1-2 ಗಂಟೆ ಒಳಗೆ ತಿಂಡಿ, ಊಟ ಎರಡೂ ``ತಿನ್ನು''ವವರನ್ನು ಪ್ರತಿನಿತ್ಯ ಕಾಣುತ್ತೇನೆ. ಇಂತಹ ದಿನಚರಿಯಲ್ಲಿ ವಿವೇಕಾನಂದರ ದೈಹಿಕ ಗಟ್ಟಿತನ ಎಲ್ಲಿಂದ ಬರಬೇಕು?

ಊಟದ ಸಂಸ್ಕಾರವಿಲ್ಲ, ಮಾತು, ನಡತೆಯ ಸಂಸ್ಕಾರವಿಲ್ಲ, ಧಾರ್ಮಿಕತೆಯ ಸಂಸ್ಕಾರವಿಲ್ಲ, ನಂಬುಗೆಯ ದಾರಿಯಿಲ್ಲ, ಕೆಲಸ, ವೈಯಕ್ತಿಕ ಸ್ವಚ್ಛತೆ, ಪರಿಸರದ ಓರಣ, ಇನ್ನೊಬ್ಬರ ಮನಃಸ್ಥಿತಿ, ಪರಿಸ್ಥಿತಿಯನ್ನು ಅರಿತು ಸಹಾನುಭೂತಿ, ಸಹಾಯ ಒದಗಿಸುವಿಕೆ ಇವೆಲ್ಲ ದೂರದ ಮಾತಾಗಿವೆ. ಬಹುಷಃ ಇದನ್ನು ಓದಿದವರು ನನ್ನನ್ನು 80 ವರ್ಷದ ಮುದುಕಿ ಎಂದುಕೊಂಡರೂ ಆಶ್ಚರ್ಯವಿಲ್ಲ. ಆದರೆ ಇವೆಲ್ಲ ಸತ್ಯ . ಈಗೇನಿದ್ದರೂ ಬರೇ ಓದು, ಓದು, ಓದು. ಕಾರು ಕೊಳ್ಳು, ವಿದೇಶ ತಿರುಗು, ಸರ್ಕಾರಿ/ಖಾಸಗಿ ಯಾವುದಾದರೂ ಸರಿ, ಒಂದು ಕೆಲಸ ಮಾಡಿ (ಲಂಚ ತೆಗೆದುಕೊಂಡಾದರೂ ಸರಿ, ಹೆದರಿಸಿ, ಕೊಳ್ಳೆಹೊಡೆದು, ಕೊನೆಗೆ ನಿನ್ನನ್ನೇ ಮಾರಿಯಾದರೂ ಸರಿ), ಮೊದಲು ದುಡ್ಡು ಮಾಡು ಎನ್ನುದನ್ನು ಮಾತ್ರ ಮುಂದಿನ ಪೀಳಿಗೆಗೆ ತಪ್ಪದೆ ತಲುಪಿಸಲಾಗುತ್ತಿದೆ. ಬೇರೆಯವರ ಕೆಲಸಕ್ಕೂ ತಾನೇ ಕ್ರೆಡಿಟ್ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು, ತಪ್ಪು ಹುಡುಕಿ ಜರಿಯುವುದನ್ನು, ತನ್ನ ತಪ್ಪಿಗೆ ಇನ್ಯಾರೋ ಕಾರಣ ಎನ್ನುವ ಪಲಾಯನವಾದವನ್ನು ಮಕ್ಕಳು ಮನೆಯಲ್ಲೇ ಕಲಿಯುತ್ತಿವೆ. ಪಾಪ, ಮೋದೀಜೀಗೆ ಇವುಗಳ ಅರಿವಿದ್ದಂತಿಲ್ಲ.

ಅಪ್ಪ, ಅಮ್ಮನಿಗೇ ಯಾರಾದರೂ ಪೂಜೆ, ಪ್ರಾರ್ಥನೆ, ಭಜನೆ, ಬಾಯಿಪಾಠದಂತಹ ಸಂಸ್ಕಾರದ ಪಾಠ ಯಾರಾದರೂ ಮಾಡಲೇಬೇಕಾದ ತುರ್ತು ಅನಿವಾರ್ಯತೆ ಇದೆ. ಹೀಗಿರುವಾಗ ಯುವಪೀಳಿಗೆಗೆ ಯಾರು, ಏನು ಹೇಳಿಕೊಟ್ಟಾರು? ಸೋಮಾರಿ (ಜಡಭರತ ಎನ್ನುವುದಿಲ್ಲ, ಆ ಲೇವಲ್ಲಿನ ಜಡತೆ ಇದಲ್ಲ) ಜಡ್ಡು ಗಟ್ಟಿದ ಜನರು ಅದೇನು ಸ್ವಚ್ಛ ಭಾರತ ಮಾಡುತ್ತಾರೋ ನನಗೆಂತೂ ಅನುಮಾನ. ಮೋದಿ ಅದೇನು ಕಂಡು ಇಡೀ ಜಗತ್ತಿಗೆಲ್ಲ ಇಲ್ಲಿನ ಯುವ ಜನರ ಬಗ್ಗೆ ಭರವಸೆ ನೀಡಿದರೋ ಗೊತ್ತಾಗ್ತಾ ಇಲ್ಲ. ಯಾಕೆಂದರೆ ಅತ್ಯಂತ ಆಶಾವಾದಿಯಾದ ನನಗೂ ಈ ವಿಷಯದಲ್ಲಿ ನಿರಾಶೆಯಿದೆ. ಬಹುಷಃ ಅವರು ಮಹಾ ಆಶಾವಾದಿಯಾಗಿರಬೇಕು!!

ಹಾಂ. ಇಷ್ಟೆಲ್ಲದರ ನಡುವೆ ಅಲ್ಲಲ್ಲಿ ಕೆಲವು ಅಮ್ಮಂದಿರು ಗಂಡ, ಮಕ್ಕಳನ್ನು ಹೋಟೆಲ್ಲಿಗೆ ಅಡಿಕ್ಟ್ ಮಾಡದೆ, ಶುಚಿ, ರುಚಿಯಾಗಿ ಮಾಡಿಹಾಕುತ್ತಿದ್ದಾರೆ. ತಮ್ಮ ಧಾರ್ಮಿಕತೆ, ಅಧ್ಯಾತ್ಮಿಕತೆಯಲ್ಲಿ ಮಕ್ಕಳನ್ನೂ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವು ಮಕ್ಕಳು ಮನೆಯಲ್ಲಿ ವಾತಾವಾರಣ ಸರಿ ಇಲ್ಲದಿದ್ದರೂ ಓದಿ, ತಿಳಿದು ಸಕಾರಾತ್ಮಕವಾಗಿ ಬೆಳೆಯುತ್ತಿದ್ದಾರೆ, ಗಂಡ ತನ್ನ ಉಸಿರು ನಿಲ್ಲುತ್ತದೆ ಎಂದು ತಿಳಿದಂದಿನಿಂದ ಹೆಂಡತಿ ಗುಡಿಸಿ, ಒರೆಸದಿದ್ದರೂ ತಾನು ವ್ಯಾಕ್ಯೂಮ್ ಕ್ಲೀನರ್ ಹಾಕಿ ಮನೆ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾನೆ....ಇಂತಹ ಎಲ್ಲ ಸಕಾರಾತ್ಮಕ, ಬದುಕಿನ ಬಗ್ಗೆ ತುಸು ಶ್ರದ್ಧೆಯಿರುವ ಮನಸ್ಸುಗಳಿಗೆ, ವ್ಯಕ್ತಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. 

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಬಹಳ ಒಳ್ಳೆಯ ಒಪ್ಪತಕ್ಕಂತಹ ವಿಚಾರಗಳನ್ನು ಬರೆದಿದ್ದೀರಿ. ನನಗೂ ಇದೇ ಮನಃಸ್ಥಿತಿ ಇರುವುದರಿಂದ ಬರಹ ಇಷ್ಟವಾಯಿತು.

Sheila Bhat ಹೇಳಿದರು...

Thank You V.R.H