ಸೋಮವಾರ, ಏಪ್ರಿಲ್ 6, 2015

ನಾನೇಕೆ ನಟಿಯೋ, ನಿರೂಪಕಿಯೋ ಆಗಲಿಲ್ಲ?

                ಇದು ಫೇಸ್ಬುಕ್ ನ ನನ್ನ ಫೋಟೊ ನೋಡಿ ಕೆಲವರಿಗಾದರೂ ಉದ್ಭವವಾಗಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದು 10 ವರ್ಷಗಳ ಹಿಂದೆ. ಅಂದು ಮಾಧ್ಯಮಕ್ಕೆ ಬರುವಾಗ ಒಂದು ಫೋಟೊ ಹಿಡಿದುಕೊಂಡು ಸುಧಕ್ಕನ ಬಳಿ ಹೋಗಿದ್ದೆ. ಈ ಟಿ.ವಿಯಲ್ಲಿ ಆ್ಯಂಕರ್ ಆಗುವುದಕ್ಕೆ. ಆ ಫೋಟೊ ಇವತ್ತಿಲ್ಲ. ಅದನ್ನು ನೋಡಿ ಬಿಟ್ಟರೆ ಸಾಕು, ಯಾರೂ ನನ್ನನ್ನು ಆ್ಯಂಕರ್ ಮಾಡಲು ಸಾಧ್ಯವಿರಲಿಲ್ಲ. ಅಷ್ಟು ಕೆಟ್ಟದಾದ ಫೋಟೊ. ಯಾಕೆಂದರೆ ಶುದ್ಧ ಹಳ್ಳಿಯಿಂದ, ಅತೀ ಬಡತನ, ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಿನ್ನೆಲೆಯಿಂದ ಬಂದ ನನಗೆ ಆ್ಯಂಕರ್ ಆಗಬೇಕೆಂಬ ಹುಚ್ಚು ಬಂದಿದ್ದಾದರೂ ಹೇಗೆ? ಹುಚ್ಚೇನಲ್ಲ, ಅನಿವಾರ್ಯತೆ. ಆ ಹೊತ್ತಿಗೆ ನನಗೆ ಹೆಚ್ಚು ಸಂಬಳ ತರುವ ಕೆಲಸವೊಂದು ಬೇಕಿತ್ತು. ಬಿ.ಪಿ.ಓನಲ್ಲಿ ಅರ್ಧ ಸಂಬಳ ಕೊಟ್ಟು ಮೋಸ ಮಾಡಿದ್ದರು. ನನ್ನ ಜವಾಬ್ದಾರಿಗೆ ಅದು ಸಾಲುತ್ತಿರಲಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಎಸ್.ಎಸ್.ಎಲ್.ಸಿ ಮೇಲೆ ಪಿಯುಸಿ ಮಾಡಿ, ಆ ನಂತರ ಡಿಪ್ಲೋಮಾ ಓದಿದ್ದರೆ ಮಾತ್ರ ಎಂದು ಕೆಲಸಕ್ಕೆ ಸೇರುವ ದಿನ ಹೇಳಿದ್ದರು. ವಿವಿಧ ಜವಾಬ್ದಾರಿಗಳು, ನಿರೀಕ್ಷೆಗಳ ಭಾರದ ನಡುವೆ ಐಟಿಪಿಎಲ್ ನ ಹೊರ ಅಂಗಳದಲ್ಲಿ ನಿರಾಸೆಯಿಂದ ಬಂದು ನಿಂತಾಗ ಮೊಟ್ಟಮೊದಲ ಬಾರಿಗೆ ಸ್ವಪ್ರಯತ್ನದ ಬದಲು ಒಮ್ಮೆ ದೇವರ ಕೈಯಲ್ಲಿ ಕೆಲಸದ ಜವಾಬ್ದಾರಿ ಕೊಟ್ಟು ನೋಡಬೇಕು ಅನಿಸಿತು. ಹಾಗೆ ನಾನು ಪ್ರತಿ ಸಾಧ್ಯತೆಯೆಡೆ ಯೋಚಿಸಿ ದೇವರ ಮೇಲೆ ಭಾರ ಹಾಕಿ ಕೆಲಸದ ಹುಡುಕಾಟ ಆರಂಭಿಸಿದ್ದೆ. ನಿಜವಾಗಿಯೂ ನಾನು ಎಂದೆಂದಿಗೂ ನೆನೆಯುವ ವ್ಯಕ್ತಿ ಸುಧಕ್ಕ, ಶಬ್ಧಗಳನ್ನು ಮೀರಿದ ಕೃತಜ್ಞತೆ ಸುಧಕ್ಕಂಗೆ. ಅವಳು ಅಂದು ಹೀಗೆ ಈ ಟಿ.ವಿದೇನೋ ನಂಗೊತ್ತಿಲ್ಲ. ಅಲ್ಲಿ ನೀನು ನಿರೀಕ್ಷಿಸುವ ಸಂಬಳ ಇದ್ದಂತಿಲ್ಲ ಎಂದು ಹೇಳಿ, ಯೋಚಿಸಿ, ಹೀಗೊಬ್ಬರು ನನ್ನತ್ರ ಅಸಿಸ್ಟೆಂಟ್ ಬೇಕು ಹೇಳ್ತಿದ್ರು ಎಂದು ಶಶಿಧರ್ ಭಟ್ಟರ ನಂಬರ್ ಕೊಟ್ಟು, ಅವರಿಗೊಂದು ಫೋನ್ ಮಾಡಿ ನೋಡಿ, ಹೀಗೊಬ್ಬರನ್ನು ಕಳಿಸುತ್ತಿದ್ದೇನೆ. ನಿಮಗೆ ಸೂಕ್ತವಾಗಿದ್ದರೆ ಕೆಲಸಕ್ಕೆ ತೆಗೆದುಕೊಳ್ಳಬಹುದೆಂದಿದ್ದರು. ಅದಾದ ಮೇಲೆ ನಾನು ಮಾಧ್ಯಮಕ್ಕೆ ಬಂದೆ. ಅಲ್ಲಿಯೇ ನನಗೆ ಮಾಧ್ಯಮದ ಎ, ಬಿ, ಸಿ, ಡಿ ತಿಳಿಯಿತು. ಮಾಧ್ಯಮ ಕ್ಷೇತ್ರ ನನ್ನದಾಯಿತು.
ನಂತರ ಆ್ಯಂಕರ್ ಆಗುವ ಆಲೋಚನೆ ಇರಲಿಲ್ಲ. ಅದರ ಅವಶ್ಯಕತೆಯೂ ನನಗಿರಲಿಲ್ಲ. ಹಾಗಾಗಿ ಅಲ್ಲಿಗೇ ಬಿಟ್ಟೆ. 2009ರಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವಾಗ ಶ್ರೀ ಹೇಳಿಕೆಯ ಮೇಲೆ ಆ್ಯಂಕರಿಂಗ್ ಮಾಡಿದ್ದೆ. ಅದೂ ಇದೇ ಪ್ರೊಫೈಲ್ ಸೀರೆಯ ಮೇಲೆ, ದಿನವೆಲ್ಲ ಸುತ್ತಾಡಿ ಆ ಸಂಚಿಕೆಯ ಶೂಟಿಂಗ್ ಮಾಡಿದಾಗ ಬಸವಳಿದು, ಬಾಡಿ ಹೋಗಿದ್ದೆ. ಆದ್ರೂ ಕೆಲಸ ಮಾಡುವವನಿಗೆ ಯಾವುದಾದರೇನು ಎಂದು ಇದ್ದ ಬದ್ದ ಶಕ್ತಿ ಹಾಕಿ, ಒಲ್ಲದ ಮನಸ್ಸಿನಿಂದ ಆ್ಯಂಕರಿಂಗ್ ಮಾಡಿದ್ದೆ. ಮುಂದೊಮ್ಮೆ ನಾನೂ ಆ್ಯಂಕರಿಂಗ್ ಮಾಡುತ್ತೇನೆ ಎಂದಾಗ ನಿನಗೆ ಟಿ.ಆರ್.ಪಿ ಇಲ್ಲವೆಂಬ ಮಾತು ಕೇಳಿಬಂದಿತ್ತು.
            ಇದೇ ವೇಳೆ `ಸಮಯ' ವಾಹಿನಿಯಲ್ಲಿ ಸೇರಲು ಸಂದರ್ಶನಕ್ಕೆ ಹೋಗಿದ್ದೆ. ಆಗ ಪ್ರಕಾಶ್ ಬೆಳವಾಡಿ ಇದ್ದರು. ಅವರು ನೀನು ಪ್ರೊಡಕ್ಷನ್ ಗಿಂತಲೂ ಆ್ಯಂಕರಿಂಗ್ ಗೆ ಸೂಟ್ ಆಗುತ್ತಿ. ನಿನ್ನ ಭಾಷೆ, ಆಂಗಿಕ ಭಾಷೆ ಮತ್ತು ಮುಖ ಚಲನೆ ಅದಕ್ಕೆ ಸೂಕ್ತವಾಗಿದೆ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ನನ್ನನ್ನು ಕೆಲಸಕ್ಕೆ ಕರೆಯುವ ಮೊದಲೇ ಅವರು ಕೆಲಸ ಬಿಟ್ಟಾಗಿತ್ತು!
             ಇನ್ನು ಧ್ವನಿ ನೀಡುವ ಅವಕಾಶ `ಭಾನಾಮತಿ'ಯಲ್ಲಿ ಬಂದಿತ್ತು. ಆಗ ನಾನದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನಾನು ಆಸಕ್ತಿ ತೋರಿದಾಗ ಸಂಬಂಧಿಸಿದ ಜನರಿಗೆ ನನ್ನ ಧ್ವನಿ ಇಷ್ಟವಾಗಲಿಲ್ಲ. `ಇದು ಯಾರು ಬರೆದ ಕಥೆಯೋ' ಮುಗಿದ ಮೇಲೆ ಖಿನ್ನತೆಯಿಂದ ಬಳಲುತ್ತಿದ್ದಾಗ ಜನರಲ್ಲಿ ಬೆರೆತು ಸರಿಯಾಗಬಹುದೆಂದು ಸಂಬಂಧಪಟ್ಟವರನ್ನು ರಿಪೋರ್ಟಿಂಗ್ ಗೆ ಕಳಿಸಲು ಕೋರಿಕೊಂಡೆ. ಯಥಾಪ್ರಕಾರ `ಇಲ್ಲ' ಎನ್ನುವ ಉತ್ತರ ಬಂತು. ಹಾಗೇ ಒಂದೆಡೆ ಕೂತು ಕೆಲಸ ಮಾಡಲು ಸಾಧ್ಯವೇ ಇಲ್ಲದಾಗ ಎಲ್ಲಾದರೂ ಧಾರಾವಾಹಿಗೆ ನಟಿಸೋಣ ಎಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ.
             ಹೈಸ್ಕೂಲಿನಲ್ಲಿ ಚಂದ್ರಶೇಖರ್ ಕಂಬಾರರ ನಾಟಕ `ಬೆಪ್ಪು ತಕ್ಕಡಿ ಬೋಳೇ ಶಂಕರ' ಆಡಿದ್ದೆವು. ಅದರಲ್ಲಿ ಅಂತಹ ಮುಖ್ಯ ಸ್ತ್ರೀ ಪಾತ್ರವಿರದಿದ್ದರಿಂದಲೂ, ಹಿನ್ನೆಲೆ ಸಂಗೀತಕ್ಕೆ ಅವಶ್ಯಕತೆ ಇದ್ದಿದ್ದರಿಂದಲೂ ನಾನು ಪಾತ್ರ ವಹಿಸದೆ ಹಿನ್ನೆಲೆ ಹೇಳಿದೆ. ಶಿರಸಿ ತಾಲೂಕು ಗೋಳಿ ನಾಟಕ ಮಂದಿರದ ಉದ್ಘಾಟನೆ ನನ್ನ ನೃತ್ಯದೊಂದಿಗೇ ಆಗಿತ್ತು. ಆದರೆ ಅದರ ಒಂದು ನಾಟಕದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು.
           ಬಹುಷಃ ನನ್ನ ಆಧ್ಯಾತ್ಮಿಕ ಜೀವನಕ್ಕೆ, ನಾನು ಇಟ್ಟುಕೊಂಡ ಮೌಲ್ಯ, ಆದರ್ಶಗಳಿಗೆ ಚ್ಯುತಿ ಬಂದುಬಿಡಬಹುದೆಂಬ ಕಾಳಜಿ ನನ್ನ ತಾಯಿ, ತಂದೆ ಎರಡೂ ಆಗಿರುವ ದೇವರಿಗೆ. ಆದ್ದರಿಂದಲೇ ನನಗೆ ಆ ಬಗ್ಗೆ ಗಂಭೀರ ಆಸಕ್ತಿ ಮೂಡಿಲ್ಲ ಎಂದುಕೊಳ್ಳುತ್ತೇನೆ. ಗಂಭೀರ ಆಸಕ್ತಿ ಇದ್ದರೆ ಮಾತ್ರ ಪ್ರೊಫೈಲ್ ಶೂಟ್ ಮಾಡಿ, ಹೇಗೆ ಅಭಿವ್ಯಕ್ತಿಸಬೇಕೆಂಬ ಎಲ್ಲ ಆಲೋಚನೆ ಬರಲು ಸಾಧ್ಯ. ಇಷ್ಟಕ್ಕೂ ನಾನು ಇಷ್ಟಪಡದ ವೃತ್ತಿಯೇನಾದರೂ ಇದ್ದರೆ ಅದು ನಟನೆ ಮತ್ತು ರಾಜಕೀಯವೇ ಸರಿ. ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತ, ಒಪ್ಪಿಕೊಳ್ಳೂತ್ತ, ನಮ್ಮತನವನ್ನೇ ಕಳಚಿಕೊಳ್ಳುತ್ತ ಹೋಗಬೇಕಾದ ವೃತ್ತಿ ಅವು. ಅವಕ್ಕೂ ನನಗೂ ಎಣ್ಣೆ, ಸೀಗೆಕಾಯಿ ಸಂಬಂಧವಾಗುತ್ತದೆಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಗ ಅವಕಾಶ ಸಿಕ್ಕರೂ ನನ್ನ ಕೆಲಸ ಮುಗಿದ ಹೊರತು ಸಾಧ್ಯವೇ ಇಲ್ಲ. ಇಷ್ಟಕ್ಕೂ ಊಟಕ್ಕಿಲ್ಲದ ಉಪ್ಪಿನಕಾಯಿ ಆಮೇಲೆ ಬಂದರೆ ಏನು ಪ್ರಯೋಜನ?

ಕಾಮೆಂಟ್‌ಗಳಿಲ್ಲ: