ಸೋಮವಾರ, ಸೆಪ್ಟೆಂಬರ್ 23, 2019

ಬಲಪಂಥೀಯ ವಿಚಾರ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಜನ ಮಾನಸ


ಇಂದು ಬಲಪಂಥೀಯ ವಿಚಾರದವರಿಗೆ ಸಂತಸವೂ ಎಡಪಂಥೀಯರಿಗೆ ಸಾವಿರ ಕೊಂಕುಗಳು ಕಾಣುವ ಅಸಹನೆಯೂ ಉಂಟಾಗಿದೆ. ಏನೇ ಇರಲಿ, ಭಾರತದ ಪ್ರಧಾನಿಯೊಬ್ಬರಿಗೆ ವಿದೇಶದ ನೆಲದಲ್ಲಿ ಸ್ವದೇಶೀ ವಲಸಿಗರಿಂದ ಈ ಪರಿ ಅಭೂತ ಉಪಚಾರ ಸಿಕ್ಕಿರುವುದು ಹೆಮ್ಮೆಯ ವಿಷಯವೇ ಸರಿ. ಆದಾಗ್ಯೂ ಇಂದು ಎಡಪಂಥೀಯ ಎಂಬ ನೆಲೆಗಿಂತ ಸಾಮಾನ್ಯ, ನಿರ್ಲಿಪ್ತ ಸ್ಥಾನದಲ್ಲಿ ನಿಂತು ನೋಡಿದಾಗ ಇಡೀ ಜಗತ್ತು ಬಲಪಂಥೀಯ ವಿಚಾರಗಳಲ್ಲಿ ಸಾಮ್ಯತೆಯನ್ನು ಸಾಧಿಸುತ್ತಿದೆ ಎಂದೆನಿಸುತ್ತದೆ. ಅದು ಹಿಂದೂವಿರಲಿ, ಮುಸಲ್ಮಾನ, ಕ್ರೈಸ್ತ, ಜೈನ ಯಾವುದೇ ಆದರೂ ಈ ಆಸ್ತಿಕ ಸಮುದಾಯ ಮೊದಲಿನಿಂದಲೂ ಪ್ರಬಲವಾಗಿತ್ತು. ಈಗ ನಾಯಕತ್ವವೂ ಸಹ ಬಲಪಂಥೀಯವಾದ ಮೇಲೆ ಇಡೀ ಬಲಪಂಥೀಯ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದು ಸಹಜ.
ನಾಯಕತ್ವ ಮಧ್ಯಮದಲ್ಲಿದ್ದಾಗ ಅಷ್ಟೇನೂ ಸಮಸ್ಯೆಯಾಗದು. ಆದರೆ ಬಹುಪಾಲು ಸಮಯ ಬಲಪಂಥೀಯ ವಿಚಾರಧಾರೆಯ ನಾಯಕತ್ವವೇ ವಿಶ್ವದಲ್ಲಿ ಕಾಣುವುದು ಹೇಗೆ? ಹೇಗೆಂದರೆ ಬಹುತೇಕ ಎಲ್ಲ ಸಾಮಾನ್ಯ ಜನರೂ  ಬಲಪಂಥೀಯ ವಿಚಾರಧಾರೆಯ ಪ್ರವಾಹದಲ್ಲಿ ತೇಲಿಹೋಗುವುದು. ಹೀಗೆ ಒಮ್ಮೆ ಈ ವಿಚಾರಧಾರೆಯ ಪ್ರವಾಹದಲ್ಲಿ ಬಿದ್ದೆವೆಂದರೆ ಅದರಿಂದ ಹೊರಗೆ ಬರುವುದು ಬಹಳ ಕಷ್ಟ. ಇಂತಹ ವಿಚಾರಧಾರೆಯ ಪ್ರವಾಹವನ್ನು ನಮ್ಮ ದೇಶದಲ್ಲಿ ವ್ಯವಸ್ಥಿತವಾಗಿ ಮಾಡುತ್ತಿರುವುದು ಮಾಧ್ಯಮಗಳು, ಜ್ಯೋತಿಷಿಗಳು ಮತ್ತು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯ ಮುಸುಕಲ್ಲಿ  ಯುವಜನರನ್ನು ಮರಳು ಮಾಡುತ್ತಿರುವ ಸಂಘಟನೆಗಳು.
ಈ ವಿಚಾರಧಾರೆಯ ಪ್ರವಾಹಕ್ಕೆ ಸಿಕ್ಕಾಗ ನೈಸರ್ಗಿಕ ಪ್ರವಾಹ ಬಂದು ದೇಹ ಕೊಚ್ಚಿ ಹೋದರೂ ಆತ್ಮಕ್ಕೆ, ಮನಸ್ಸಿಗೆ ಅಂಟಿರುವ ಬಲಪಂಥ ಅಥವಾ ಆಸ್ತಿಕತೆ ನಾಶವಾಗುವುದಿಲ್ಲ. ದೇವರನ್ನು ನಂಬದಿದ್ದರೂ, ವ್ಯಕ್ತಿಯೊಬ್ಬನನ್ನಾದರೂ ಆರಾಧಿಸಲೇಬೇಕೆಂಬ ಈ ಮನಸ್ಥಿತಿ ಸಾಮಾನ್ಯ ಜನರಿಗೆ ಬದುಕುವ ಭರವಸೆ ಕೊಡುತ್ತದೆ. ಈ ಭರವಸೆ ಎಷ್ಟರಮಟ್ಟಿಗೆ ಎಂದರೆ ಪ್ರವಾಹ ಬಂದು ಕೊಚ್ಚಿ ಹೋಗುತ್ತಿದ್ದರೂ ಎಲ್ಲೋ ಇರುವ ಇವರ ಆರಾಧ್ಯ ಇವರಲ್ಲಿಗೆ ಬಂದು ಕಾಪಾಡುತ್ತಾನೆ ಎನ್ನುವ ಮಟ್ಟಿಗೆ.
ಹಾಗೆ ಒಂದು ವ್ಯಕ್ತಿಯ ವೈಯಕ್ತಿಕ ಮಟ್ಟದಲ್ಲಿರುವ ಭರವಸೆ, ನಂಬಿಕೆ ಅತಿಯಾಗಿ ಸಾಮುದಾಯಕವಾಗಿ ನಾಯಕತ್ವದೆಡೆಗೂ ವಿಸ್ತರಿಸಿದಾಗ ಅದು ಅಪಾಯಕಾರಿ. ಅಲ್ಲಿ ಪ್ರಜಾಪ್ರಭುತ್ವ ಸಾಯುತ್ತದೆ. ಜನರು ಒಪ್ಪಿತ ಗುಲಾಮರಾಗುತ್ತಾರೆ. ಪ್ರಶ್ನೆ ಕೇಳುವ , ಅಭಿಪ್ರಾಯ ವ್ಯಕ್ತಪಡಿಸುವ ಯಾವ ಅವಕಾಶವೂ ಇರುವುದಿಲ್ಲ. ಕೇಳುವವರೇ ಇಲ್ಲವೆಂದ ಮೇಲೆ ಹೇಳುವವರಿಗೆ ಏನು ಬೆಲೆ? ನಾಯಕತ್ವ ಕೊಟ್ಟಾಗ ಉಂಡು, ಹಾಸಿದಾಗ ಮಲಗಿ ಅವಕಾಶ ಸಿಕ್ಕರೆ ಯಾರಿಗಾದರೂ ಮೈಥುನ ಮಾಡಿ ಬಂದರೆ ಸಾಕೆಂಬ ಮನಸ್ಥಿತಿಗೆ ಜನಸಮುದಾಯ ಬಂದು ತಲುಪುತ್ತದೆ. ಯಾರು ಎಷ್ಟರ ಮಟ್ಟಿಗೆ ನಾಯಕತ್ವಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ, ಬಹುಪರಾಕು ಹಾಕುತ್ತಿದ್ದಾರೆ ಎಂಬುದರ ಮೇಲೆ ಎಲ್ಲ ಅಪರಾಧಗಳ ಶಿಕ್ಷೆಗಳು ನಿರ್ಧಾರವಾಗುತ್ತವೆ.
ಹೀಗೆ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಹೋಗುತ್ತಿರುವ ನಮ್ಮ ವಿಶ್ವ ಸಮುದಾಯದಲ್ಲಿ ನಿಜ ಆಧ್ಯಾತ್ಮ, ನಿಜ ಭಕ್ತಿ, ನಿಜ ಪ್ರೇಮ ಎಲ್ಲವೂ ಇನ್ನು ಇತಿಹಾಸ. ಇನ್ನು ಕೇವಲ ಎಡಪಂಥದ ಮುಖವಾಡದಡಿ, ಬಲಪಂಥದ ಗುರಾಣಿಯಡಿ ನಾಯಕತ್ವದ ಓಲೈಕೆ ಮಾತ್ರ. ಇದು ಇಡೀ ಮಾನವ ಸಮುದಾಯದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ, ಸೈದ್ಧಾಂತಿಕ ಸೇರಿದಂತೆ ಎಲ್ಲಾ ಆಯಾಮಗಳ ಬೆಳವಣಿಗೆಗೆ ಮಾರಕ.
ಇದೊಂದು ಪರ್ವ ಕಾಲವೂ ಹೌದು. ಮಾಡಬೇಡ ಎಂದರೂ ಮಾಡುವ ಹಠಮಾರಿ ಮಗುವಿನಂತೆ ಮನುಜ ತನಗಲ್ಲದುದನ್ನು ಮಾಡಿದಾಗ ತನಗೆ ತಾನೇ ಪಾಠ ಕಲಿಯುತ್ತಾನೆ. ಇಂತಹದೊಂದು ಪರಿಸ್ಥಿತಿ ಸೃಷ್ಟಿಸಿದ ತಾನೇ ತನ್ನ ಕಾಲು ಎಡವಿದ್ದು ಅರಿವಾದಾಗ ಎದ್ದು ಬರುವ ಉಪಾಯವನ್ನು ಕಂಡುಹಿಡಿಯುತ್ತಾನೆ. ಈ ಅಮಲಿನಿಂದ ಮನುಜ ಹೊರಬರಲು ಎಷ್ಟು ಅವಧಿ ತೆಗೆದುಕೊಳ್ಳುತ್ತಾನೆ ಎಂಬುದು ಮಾತ್ರ ಆತನ ಸೋಲೊಪ್ಪಿಕೊಳ್ಳುವ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ನಾನೆಂತೂ ನನ್ನ ನಿರ್ಲಿಪ್ತ ಕಣ್ಣಿನಿಂದ ವಾರ್ತಾ ವಾಹಿನಿಗಳನ್ನು ನೋಡುತ್ತಿದ್ದೇನೆ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಕೇಳುತ್ತಿದ್ದೇನೆ. ಒಂದಲ್ಲ ಒಂದು ದಿನ ಭಾರತವೂ ಸೇರಿದಂತೆ ಎಲ್ಲ ದೇಶಗಳ ಜನಸಮುದಾಯ ಆವರಿಸಿರುವ ನಾಯಕತ್ವದ ಬಗೆಗಿನ ಬಲಪಂಥೀಯ ವಾದವು ವಸ್ತುಸ್ಥಿತಿಗೆ ಮರಳುತ್ತದೆ ಎಂಬ ಆಶಾವಾದದಲ್ಲಿ ನಿಟ್ಟುಸಿರುಬಿಡುತ್ತೇನೆ. ಎಲ್ಲ ವಿಚಾರಧಾರೆಗಳೂ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿ, ಸಾಮುದಾಯಿಕ ಮಟ್ಟದಲ್ಲಿ ಕೇವಲ ಮಾನವೀಯತೆ ಮತ್ತು ಸೌರ್ಹಾರ್ದತೆ ನೆಲೆಸಿದ, ಎಲ್ಲರಿಗೂ ಸಮನಾದ ನ್ಯಾಯವಿರುವ ಭವ್ಯಭಾರತದ ಕನಸೊಂದನ್ನು ಸೃಷ್ಟಿಸಿಕೊಳ್ಳುತ್ತ ಸುಮ್ಮನೆ ಕಣ್ಣುಮುಚ್ಚಿ ಬದುಕನ್ನು ಸಹನೀಯಗೊಳಿಸುತ್ತೇನೆ.


ಕಾಮೆಂಟ್‌ಗಳಿಲ್ಲ: