ಸೋಮವಾರ, ಸೆಪ್ಟೆಂಬರ್ 23, 2019

ಬಲಪಂಥೀಯ ವಿಚಾರ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಜನ ಮಾನಸ


ಇಂದು ಬಲಪಂಥೀಯ ವಿಚಾರದವರಿಗೆ ಸಂತಸವೂ ಎಡಪಂಥೀಯರಿಗೆ ಸಾವಿರ ಕೊಂಕುಗಳು ಕಾಣುವ ಅಸಹನೆಯೂ ಉಂಟಾಗಿದೆ. ಏನೇ ಇರಲಿ, ಭಾರತದ ಪ್ರಧಾನಿಯೊಬ್ಬರಿಗೆ ವಿದೇಶದ ನೆಲದಲ್ಲಿ ಸ್ವದೇಶೀ ವಲಸಿಗರಿಂದ ಈ ಪರಿ ಅಭೂತ ಉಪಚಾರ ಸಿಕ್ಕಿರುವುದು ಹೆಮ್ಮೆಯ ವಿಷಯವೇ ಸರಿ. ಆದಾಗ್ಯೂ ಇಂದು ಎಡಪಂಥೀಯ ಎಂಬ ನೆಲೆಗಿಂತ ಸಾಮಾನ್ಯ, ನಿರ್ಲಿಪ್ತ ಸ್ಥಾನದಲ್ಲಿ ನಿಂತು ನೋಡಿದಾಗ ಇಡೀ ಜಗತ್ತು ಬಲಪಂಥೀಯ ವಿಚಾರಗಳಲ್ಲಿ ಸಾಮ್ಯತೆಯನ್ನು ಸಾಧಿಸುತ್ತಿದೆ ಎಂದೆನಿಸುತ್ತದೆ. ಅದು ಹಿಂದೂವಿರಲಿ, ಮುಸಲ್ಮಾನ, ಕ್ರೈಸ್ತ, ಜೈನ ಯಾವುದೇ ಆದರೂ ಈ ಆಸ್ತಿಕ ಸಮುದಾಯ ಮೊದಲಿನಿಂದಲೂ ಪ್ರಬಲವಾಗಿತ್ತು. ಈಗ ನಾಯಕತ್ವವೂ ಸಹ ಬಲಪಂಥೀಯವಾದ ಮೇಲೆ ಇಡೀ ಬಲಪಂಥೀಯ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದು ಸಹಜ.
ನಾಯಕತ್ವ ಮಧ್ಯಮದಲ್ಲಿದ್ದಾಗ ಅಷ್ಟೇನೂ ಸಮಸ್ಯೆಯಾಗದು. ಆದರೆ ಬಹುಪಾಲು ಸಮಯ ಬಲಪಂಥೀಯ ವಿಚಾರಧಾರೆಯ ನಾಯಕತ್ವವೇ ವಿಶ್ವದಲ್ಲಿ ಕಾಣುವುದು ಹೇಗೆ? ಹೇಗೆಂದರೆ ಬಹುತೇಕ ಎಲ್ಲ ಸಾಮಾನ್ಯ ಜನರೂ  ಬಲಪಂಥೀಯ ವಿಚಾರಧಾರೆಯ ಪ್ರವಾಹದಲ್ಲಿ ತೇಲಿಹೋಗುವುದು. ಹೀಗೆ ಒಮ್ಮೆ ಈ ವಿಚಾರಧಾರೆಯ ಪ್ರವಾಹದಲ್ಲಿ ಬಿದ್ದೆವೆಂದರೆ ಅದರಿಂದ ಹೊರಗೆ ಬರುವುದು ಬಹಳ ಕಷ್ಟ. ಇಂತಹ ವಿಚಾರಧಾರೆಯ ಪ್ರವಾಹವನ್ನು ನಮ್ಮ ದೇಶದಲ್ಲಿ ವ್ಯವಸ್ಥಿತವಾಗಿ ಮಾಡುತ್ತಿರುವುದು ಮಾಧ್ಯಮಗಳು, ಜ್ಯೋತಿಷಿಗಳು ಮತ್ತು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯ ಮುಸುಕಲ್ಲಿ  ಯುವಜನರನ್ನು ಮರಳು ಮಾಡುತ್ತಿರುವ ಸಂಘಟನೆಗಳು.
ಈ ವಿಚಾರಧಾರೆಯ ಪ್ರವಾಹಕ್ಕೆ ಸಿಕ್ಕಾಗ ನೈಸರ್ಗಿಕ ಪ್ರವಾಹ ಬಂದು ದೇಹ ಕೊಚ್ಚಿ ಹೋದರೂ ಆತ್ಮಕ್ಕೆ, ಮನಸ್ಸಿಗೆ ಅಂಟಿರುವ ಬಲಪಂಥ ಅಥವಾ ಆಸ್ತಿಕತೆ ನಾಶವಾಗುವುದಿಲ್ಲ. ದೇವರನ್ನು ನಂಬದಿದ್ದರೂ, ವ್ಯಕ್ತಿಯೊಬ್ಬನನ್ನಾದರೂ ಆರಾಧಿಸಲೇಬೇಕೆಂಬ ಈ ಮನಸ್ಥಿತಿ ಸಾಮಾನ್ಯ ಜನರಿಗೆ ಬದುಕುವ ಭರವಸೆ ಕೊಡುತ್ತದೆ. ಈ ಭರವಸೆ ಎಷ್ಟರಮಟ್ಟಿಗೆ ಎಂದರೆ ಪ್ರವಾಹ ಬಂದು ಕೊಚ್ಚಿ ಹೋಗುತ್ತಿದ್ದರೂ ಎಲ್ಲೋ ಇರುವ ಇವರ ಆರಾಧ್ಯ ಇವರಲ್ಲಿಗೆ ಬಂದು ಕಾಪಾಡುತ್ತಾನೆ ಎನ್ನುವ ಮಟ್ಟಿಗೆ.
ಹಾಗೆ ಒಂದು ವ್ಯಕ್ತಿಯ ವೈಯಕ್ತಿಕ ಮಟ್ಟದಲ್ಲಿರುವ ಭರವಸೆ, ನಂಬಿಕೆ ಅತಿಯಾಗಿ ಸಾಮುದಾಯಕವಾಗಿ ನಾಯಕತ್ವದೆಡೆಗೂ ವಿಸ್ತರಿಸಿದಾಗ ಅದು ಅಪಾಯಕಾರಿ. ಅಲ್ಲಿ ಪ್ರಜಾಪ್ರಭುತ್ವ ಸಾಯುತ್ತದೆ. ಜನರು ಒಪ್ಪಿತ ಗುಲಾಮರಾಗುತ್ತಾರೆ. ಪ್ರಶ್ನೆ ಕೇಳುವ , ಅಭಿಪ್ರಾಯ ವ್ಯಕ್ತಪಡಿಸುವ ಯಾವ ಅವಕಾಶವೂ ಇರುವುದಿಲ್ಲ. ಕೇಳುವವರೇ ಇಲ್ಲವೆಂದ ಮೇಲೆ ಹೇಳುವವರಿಗೆ ಏನು ಬೆಲೆ? ನಾಯಕತ್ವ ಕೊಟ್ಟಾಗ ಉಂಡು, ಹಾಸಿದಾಗ ಮಲಗಿ ಅವಕಾಶ ಸಿಕ್ಕರೆ ಯಾರಿಗಾದರೂ ಮೈಥುನ ಮಾಡಿ ಬಂದರೆ ಸಾಕೆಂಬ ಮನಸ್ಥಿತಿಗೆ ಜನಸಮುದಾಯ ಬಂದು ತಲುಪುತ್ತದೆ. ಯಾರು ಎಷ್ಟರ ಮಟ್ಟಿಗೆ ನಾಯಕತ್ವಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ, ಬಹುಪರಾಕು ಹಾಕುತ್ತಿದ್ದಾರೆ ಎಂಬುದರ ಮೇಲೆ ಎಲ್ಲ ಅಪರಾಧಗಳ ಶಿಕ್ಷೆಗಳು ನಿರ್ಧಾರವಾಗುತ್ತವೆ.
ಹೀಗೆ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಹೋಗುತ್ತಿರುವ ನಮ್ಮ ವಿಶ್ವ ಸಮುದಾಯದಲ್ಲಿ ನಿಜ ಆಧ್ಯಾತ್ಮ, ನಿಜ ಭಕ್ತಿ, ನಿಜ ಪ್ರೇಮ ಎಲ್ಲವೂ ಇನ್ನು ಇತಿಹಾಸ. ಇನ್ನು ಕೇವಲ ಎಡಪಂಥದ ಮುಖವಾಡದಡಿ, ಬಲಪಂಥದ ಗುರಾಣಿಯಡಿ ನಾಯಕತ್ವದ ಓಲೈಕೆ ಮಾತ್ರ. ಇದು ಇಡೀ ಮಾನವ ಸಮುದಾಯದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ, ಸೈದ್ಧಾಂತಿಕ ಸೇರಿದಂತೆ ಎಲ್ಲಾ ಆಯಾಮಗಳ ಬೆಳವಣಿಗೆಗೆ ಮಾರಕ.
ಇದೊಂದು ಪರ್ವ ಕಾಲವೂ ಹೌದು. ಮಾಡಬೇಡ ಎಂದರೂ ಮಾಡುವ ಹಠಮಾರಿ ಮಗುವಿನಂತೆ ಮನುಜ ತನಗಲ್ಲದುದನ್ನು ಮಾಡಿದಾಗ ತನಗೆ ತಾನೇ ಪಾಠ ಕಲಿಯುತ್ತಾನೆ. ಇಂತಹದೊಂದು ಪರಿಸ್ಥಿತಿ ಸೃಷ್ಟಿಸಿದ ತಾನೇ ತನ್ನ ಕಾಲು ಎಡವಿದ್ದು ಅರಿವಾದಾಗ ಎದ್ದು ಬರುವ ಉಪಾಯವನ್ನು ಕಂಡುಹಿಡಿಯುತ್ತಾನೆ. ಈ ಅಮಲಿನಿಂದ ಮನುಜ ಹೊರಬರಲು ಎಷ್ಟು ಅವಧಿ ತೆಗೆದುಕೊಳ್ಳುತ್ತಾನೆ ಎಂಬುದು ಮಾತ್ರ ಆತನ ಸೋಲೊಪ್ಪಿಕೊಳ್ಳುವ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ನಾನೆಂತೂ ನನ್ನ ನಿರ್ಲಿಪ್ತ ಕಣ್ಣಿನಿಂದ ವಾರ್ತಾ ವಾಹಿನಿಗಳನ್ನು ನೋಡುತ್ತಿದ್ದೇನೆ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಕೇಳುತ್ತಿದ್ದೇನೆ. ಒಂದಲ್ಲ ಒಂದು ದಿನ ಭಾರತವೂ ಸೇರಿದಂತೆ ಎಲ್ಲ ದೇಶಗಳ ಜನಸಮುದಾಯ ಆವರಿಸಿರುವ ನಾಯಕತ್ವದ ಬಗೆಗಿನ ಬಲಪಂಥೀಯ ವಾದವು ವಸ್ತುಸ್ಥಿತಿಗೆ ಮರಳುತ್ತದೆ ಎಂಬ ಆಶಾವಾದದಲ್ಲಿ ನಿಟ್ಟುಸಿರುಬಿಡುತ್ತೇನೆ. ಎಲ್ಲ ವಿಚಾರಧಾರೆಗಳೂ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿ, ಸಾಮುದಾಯಿಕ ಮಟ್ಟದಲ್ಲಿ ಕೇವಲ ಮಾನವೀಯತೆ ಮತ್ತು ಸೌರ್ಹಾರ್ದತೆ ನೆಲೆಸಿದ, ಎಲ್ಲರಿಗೂ ಸಮನಾದ ನ್ಯಾಯವಿರುವ ಭವ್ಯಭಾರತದ ಕನಸೊಂದನ್ನು ಸೃಷ್ಟಿಸಿಕೊಳ್ಳುತ್ತ ಸುಮ್ಮನೆ ಕಣ್ಣುಮುಚ್ಚಿ ಬದುಕನ್ನು ಸಹನೀಯಗೊಳಿಸುತ್ತೇನೆ.


ಬುಧವಾರ, ಆಗಸ್ಟ್ 7, 2019

ಸೋರುತಿಹುದು ಮನೆಯ ಮಾಳಿಗೆ


ಸೋರುತಿಹುದು ಮನೆಯ ಮಾಳಿಗೆ
ಸಂತ ಶಿಶುನಾಳ ಶರೀಫರ ಈ ಹಾಡಿನ ಅನುಭಾವ ಏನೇ ಇರಲಿ. ನನಗೆ ಮಾತ್ರ ಈ ಹಾಡು ಕೇಳಿದಾಗ ಕಾಣಿಸುವುದೇ ಸೋರುತ್ತಿದ್ದ ನಮ್ಮ ಊರಿನ ಮನೆ. ಅಲ್ಲಿಯ ನಮ್ಮ ಮನೆ ಹೆಂಚಿನದು. ಮೊದಲೆರಡು ವರ್ಷಗಳು ಹುಲ್ಲಿನ ಮಾಡು. ಆಗ ಅಷ್ಟೊಂದು ಸೋರುತ್ತಿರಲಿಲ್ಲ. ಹುಲ್ಲು ಗೌರವ ತರುವುದಿಲ್ಲ. ಹೆಂಚು ಹಾಕಬೇಕು ಎಂದುಕೊಂಡರು ಅಪ್ಪ. ಹೇಗೋ ಹೆಂಚು ಹೊಂದಿಸಿ, ಬಿದಿರಿನ ರೀಪು, ಗಳ ಹಾಕಿ ಮಾಡು ಮಾಡಿದರು. ಅದು ಮಳೆ ಬಂತೆಂದರೆ ಸಾಕು ಸೋರಿದ್ದೇ ಸೋರಿದ್ದು. ಅಮ್ಮ, ನಾನು ನೀರು ಬೀಳುವಲ್ಲೆಲ್ಲ ಪಾತ್ರೆಗಳನ್ನು ಇಡುತ್ತಿದ್ದೆವು. ಬೇಸಿಗೆಯಲ್ಲೇ ಕಟ್ಟಿಗೆಗೆ ಪರದಾಡುತ್ತಿದ್ದ ನಾವು ಮಳೆಗಾಲದಲ್ಲಿ ಒದ್ದೆ ಚಕ್ಕೆಯ ಹೊಗೆಯಲ್ಲಿ ಉಸಿರುಗಟ್ಟಿಕೊಳ್ಳುತ್ತಿದ್ದೆವು. ಮನೆಯಲ್ಲಿ ರೇಷ್ಮೆ ಬೆಳೆ ಮಾಡುತ್ತಿದ್ದರಿಂದ ಅದರ ಕಟ್ಟಿಗೆಯನ್ನು ಅಮ್ಮ ಕಾಯ್ದುಕೊಂಡಿರುತ್ತಿದ್ದಳು. ಮಳೆಗಾಲಕ್ಕಾಗಿ ಚಾಲಿ ಸಿಪ್ಪೆ, ರೇಷ್ಮೆ ಕಟ್ಟಿಗೆ, ತೆಂಗಿನ ಚಿಪ್ಪು ಮತ್ತು ಸೀಮೆಎಣ್ಣೆ ಒಟ್ಟುಮಾಡಿಟ್ಟುಕೊಳ್ಳುವುದು ನಮ್ಮ ಬೇಸಿಗೆಯ ಆದ್ಯ ಕೆಲಸವಾಗಿತ್ತು. ಆದಾಗ್ಯೂ ಅದೆಷ್ಟು ಮಳೆ ಬರುತ್ತಿತ್ತೆಂದರೆ ಇವತ್ತಿನ ಪ್ರವಾಹ ಬರಿಸುತ್ತಿರುವ 15-20 ಸೆಂ.ಮೀ ಮಳೆ ಅಂದಿನ ನಿತ್ಯದ ಸಂಗತಿಯಾಗಿತ್ತು. ಮಧ್ಯಾಹ್ನ ಪ್ರದೇಶ ಸಮಾಚಾರದ ಕೊನೆಯಲ್ಲಿ ಹೇಳುವ ಹವಾಮಾನ ವರದಿ ನಮಗೆ ಮಾರ್ಗದರ್ಶಿಯಾಗಿತ್ತು.
ಮಲೆನಾಡಿನ ಮಳೆಗಾಲದ ಒಡನಾಟ ಒಮ್ಮೆ ಆದರೆ ಜೀವನದಲ್ಲಿ ಯಾವ ರೀತಿಯ ಮಳೆಗೂ ಜೀವ ಹೆದರುವುದಿಲ್ಲ. ಒಣಗದ ಕಂಬಳಿ ಕೊಪ್ಪೆ, ಒಳ ಉಡುಪುಗಳು, ಮೇಲ್ಹೊದಿಕೆಗಳು, ಉಂಬಳ ಕಚ್ಚಿ ಕೆರೆತ ತರುವ ಕಾಲುಗಳು, ಏಡಿ ಹಿಡಿದು ಸಂತಸಗೊಂಡ ಮನದಲ್ಲೇ ಅವುಗಳಿಂದ ಕಚ್ಚಿಸಿಕೊಂಡ ಉರಿಯುವ ಕೈಗಳು…..ಇವೆಲ್ಲ ಎಂದಿಗೂ ನೆನಪಿನಲ್ಲಿರುವ ಮಳೆಗಾಲದ ಅನುಭವಗಳು. ಗದ್ದೆ ಹಾಳೆಯ ಮೇಲೆ, ಕಾಲು ಸಂಕಗಳ ಮೇಲೆ ಸರ್ಕಸ್ ಮಾಡುತ್ತ ಶಾಲಾ ಕಾಲೇಜುಗಳಿಗೆ ಹೋಗಿ ಬಂದ ಮಕ್ಕಳನ್ನು ಬೆಂಗಳೂರಿರಲಿ, ವಿಶ್ವದ ಯಾವ ರಣ ಬಿಸಿಲು, ಜಡಿಮಳೆ, ಕೊರೆಯುವ ಚಳಿ ಏನೂ ಮಾಡುವುದಿಲ್ಲ ಎಂಬುದು ಸತ್ಯ. ಬದುಕು ಗಟ್ಟಿಗೊಳಿಸುವ ಸಮೃದ್ಧ ಬಾಲ್ಯ ಮಲೆನಾಡಿನ ಮಕ್ಕಳದ್ದು. ತಾಯಂದಿರೆಂತೂ ನಿಜಕ್ಕೂ ದೊಡ್ಡವರು. ಗಂಡ ಜವಾಬ್ದಾರಿಯಿಂದ ಬೆಚ್ಚಗಿನ ಮನೆ, ಗೋಬರ್ ಗ್ಯಾಸ್, ಕಟ್ಟಿಗೆ, ಸೀಮೆಎಣ್ಣೆ, ವಿದ್ಯುತ್, ಅಕ್ಕಿ, ದಿನಸಿಗಳ ವ್ಯವಸ್ಥೆ ಮಾಡಿದರೆ ದೊಡ್ಡ ಪುಣ್ಯವಂತರು. ಹೊರಗಡೆ ಡೇರೆ ಹೂ, ನಾಗದಾಳಿ ಹೂ ಬೆಳೆಸಿಕೊಂಡು, ಅಲ್ಪ ಸ್ವಲ್ಪ ತರಕಾರಿ ಮಾಡಿಕೊಂಡು ಮನೆ ಊಟ, ಕೊಟ್ಟಿಗೆ, ಮಕ್ಕಳ ಕೆಲಸ ಮಾಡಿಕೊಂಡರೆ ಸಾಕು.
ಏನಾದರೂ ಗಂಡ ಬೇಜವಾಬ್ದಾರಿಯಾದರೆ ಅವರ ಹಾಗೂ ಅವರ ಮಕ್ಕಳ ಪಾಡು ದೇವರಿಗೇ ಪ್ರೀತಿ. ಸುರಿಯುವ ಮಳೆ, ಸೋರುವ ಮನೆ, ಉರಿಯದ ಕಟ್ಟಿಗೆ, ಅಳುವ ಮಕ್ಕಳು, ಜ್ವರದಿಂದ ನಡುಗುವ ಕೈಬಿಡದ ಕೂಸು, ಕೊಟ್ಟಿಗೆಯಿಂದ ಹಸಿಹುಲ್ಲಿಗಾಗಿ ಗೋಗರೆಯುವ ಹಸು, ಉಕ್ಕಿ ಹರಿಯವ ಹೊಳೆ, ಹೊಳೆ ದಾಟಿಯೇ ಹೋಗಬೇಕಾದ ಗದ್ದೆ, ತೋಟ, ಅವೋ ನೀರಿನಿಂದ ತುಂಬಿ ದೊಡ್ಡ ಕೆರೆಯಂತಾಗಿರುತ್ತವೆ, ಒಂದೇ ಎರಡೆ.ಅಂತೂ ಮಳೆ ನಿಲ್ಲುವುದನ್ನೇ ನೋಡಿಕೊಂಡು ಹೊಳೆ ದಾಟಿ ಹೋಗಿ ಹುಲ್ಲು ಕೊಯ್ದರೆ ತರಲು ಕಾಲು ಸಂಕವೂ ಸರಿ ಇರದು. ಹೇಗೋ ತಂದು ಹಾಕಿ, ಹಾಲು ಕರೆದು ಒಳಗೆ ಬಂದರೆ ವಿದ್ಯುತ್ ಇಲ್ಲದ ಬರೀ ಕತ್ತಲು. ಸೀಮೆಎಣ್ಣೆ ಇಲ್ಲದೆ ಒಂದೇ ಚಿಮಣಿ ದೀಪದಲ್ಲಿ ರಾತ್ರಿ ಊಟ ಸಿದ್ಧಪಡಿಸಬೇಕು. ಇವುಗಳ ಜೊತೆಗೆ ಶಾಲೆಗೆ ಹೋಗುವ ಮಕ್ಕಳನ್ನು ಹೊತ್ತಿಗೆ ತಯಾರು ಮಾಡಿ ಕಳಿಸಬೇಕು. ಅವರ ಇರುವ ಒಂದೆರಡು ಯೂನಿಫಾರಂನ್ನು ಒಣಗಿಸಿಡಬೇಕು. ಮಳೆಯಲ್ಲಿ ನೆನದು, ಹಸಿದು ಬರುವ ಮಕ್ಕಳಿಗೆ ತಿಂಡಿ ರೆಡಿ ಮಾಡಬೇಕು. ನಿಜವಾಗಿಯೂ ಮಲೆನಾಡಿನ ತಾಯಿ ಮಳೆಗಾಲದಲ್ಲಿ ಸಾಕ್ಷಾತ್ ಭೂಮಾತೆಯೇ ಆಗಿರುತ್ತಾಳೆ.  ಇಂತಹ 21 ಮಳೆಗಾಲಕ್ಕೆ ಸಾಕ್ಷಿಯಾದ ನನಗೆ ಇವತ್ತು ಪ್ರವಾಹದಿಂದ ನರಳುತ್ತಿರುವ ನೆರೆಪೀಡಿತರ ದುಃಖ ಅರ್ಥವಾಗುತ್ತದೆ.
ಇವತ್ತು ನಾನು ಬೆಂಗಳೂರಿನಲ್ಲಿ ಕುಳಿತು ಕಥೆಯಂತೆ ವಿದ್ಯುತ್ ಹಾಗೂ ಇಂಟರ್ನೆಟ್ ಸೌಲಭ್ಯ ಬಳಸುತ್ತ ಅನುಭವ ದಾಖಲಿಸುತ್ತೇನೆಂದಾದರೆ ಅದರಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ನನ್ನ ಬದುಕು ನನ್ನ ಸುತ್ತಲಿನವರ ಬದುಕು ಇಲ್ಲಿಯವರೆಗೆ ಬಂದಿದೆಯೆಂದರೆ ಅದಕ್ಕೆ 60 ವರ್ಷಗಳ ಕಾಂಗ್ರೆಸ್ ಕೊಡುಗೆಯಿದೆ. ಈಗ ನೆರೆ ಬಂದಿದೆ. ನಿಮ್ಮ ಅಗತ್ಯ ಇದೆ ಎಂದು ಆಳುವ ಬಿಜೆಪಿಯವರಿಗೆ ಹೇಳಿದರೆ ಇದಕ್ಕೂ 60 ವರ್ಷಗಳ ಪಾಲಿಸಿ ಕೊರತೆಯೇ ಕಾರಣ ಎಂದು ಕೈತೊಳೆದುಕೊಂಡರೆ ಆಶ್ಚರ್ಯವಿಲ್ಲ. ಮಳೆಗಾಲ ಶುರುವಾದಾಗಿನಿಂದ ಆಳುವ ಸರ್ಕಾರ ಮತ್ತು ಬೀಳಿಸುವ ಸರ್ಕಾರಗಳ ಗುದ್ದಾಟವೇ ಆಗಿದ್ದು ಬಿಟ್ಟರೆ ಮತ್ತೇನನ್ನೂ ನಾನು ನೋಡಿಲ್ಲ, ಕೇಳಿಲ್ಲ. ಕಳೆದ ವರ್ಷ ಕೊಡಗು ಕಲಿಸಿದ ಪಾಠ ತಲೆಗೆ ಹೋಗಿಲ್ಲ. ಹೇಗೆ ಹೋಗುತ್ತದೆ? ಕೈಯಲ್ಲಿ ದುಡ್ಡಿದೆ, ತಲೆ ಮೇಲೊಂದು ಬೆಚ್ಚನೆಯ ಸೂರಿದೆ, ಉಣ್ಣಲು, ತಿನ್ನಲು, ತಿರುಗಾಡಲು ಕೊರತೆಯಿಲ್ಲ. ಎಲ್ಲೋ ನರಳುವ ಜೀವಗಳ ಪರಿತಾಪ, ಬವಣೆಗಳ ಅರಿವಾಗುವುದು ಎಂತು? ಅರಿವಾದರೂ ದೂರುವುದು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿದೆ ಈ ನರದೌರ್ಬಲ್ಯವಿರುವ ರಾಜಕಾರಣಿಗಳಿಂದ. ಅನುಮಾನವಿದೆ.
ಈಗ ನೋಡಿ, ಪ್ರತಿಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಭೇಟಿಕೊಟ್ಟು ರಕ್ಷಣೆಗೆ, ಪರಿಹಾರಕ್ಕೆ, ಸೌಲಭ್ಯ ಕಲ್ಪಿಸುವುದಕ್ಕೆ ಮುಂದಾದ ಯಾವ ವರದಿಯೂ ಕಾಣುತ್ತಿಲ್ಲ. ಬದಲಿಗೆ ಯಡಿಯೂರಪ್ಪ ಎಲ್ಲಿ ಹೋದ್ಯಪ್ಪ? ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ನಿಂಬಾಳ್ಕರ್ ಒಬ್ಬ ಮಹಿಳೆ ಅದೂ ಅವರಿಗೆ ಸಂಬಂಧಿಸಿದ ಮನೆಯ ಕೆಳಮಹಡಿಯಲ್ಲಿ ನೀರು ತುಂಬಿದ ನಂತರ ಹೇಳಿಕೆ ನೀಡಿದ್ದು ಬಿಟ್ಟರೆ ಯಾವೊಬ್ಬರೂ ಪತ್ತೆ ಇಲ್ಲ. ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರವಾಹ ಪರಿಹಾರ ಧನ ಕೇಳಿದ್ದು ಬಿಟ್ಟರೆ ಮತ್ತೇನೂ ಕಾರ್ಯ ಕಾಣುತ್ತಿಲ್ಲ. ದೆಹಲಿಯ ವರಿಷ್ಠರೊಂದಿಗೆ ಅವರದ್ದೇ ವೈಯಕ್ತಿಕ ಹೋರಾಟದಲ್ಲಿ ಮುಳುಗಿಹೋಗಿದ್ದಾರೆ. ಮಂತ್ರಿಗಳು ಹುಲಿ ಹಿಡೀಲಿ, ಆಡಳಿತವೇ ಕುಸಿದು ಹಕ್ಕಲೆದ್ದು ಹೋಗಿದೆ.
ಅಲ್ಲೆಲ್ಲೋ ಋತುಮತಿಯಾದ ಮಹಿಳೆ ಪ್ಯಾಡ್ ಇಲ್ಲದೆ ಒದ್ದಾಡುತ್ತಿರಬಹುದು. ನೀರಿನಲ್ಲಿ ಮುಳುಗಿ ಹೋಗುತ್ತಿರುವವರಿಗೆ ರಕ್ಷಣೆ ಮಾಡುವವರು ಬೇಕು. ಹಸಿದ ಮಕ್ಕಳಿಗೆ ಹೊಟ್ಟೆಗೆ ಬೇಕು. ಬಾಣಂತಿಯರಿಗೆ ಸಾವು ಬದುಕಿಗಿಂತಲೂ ಅಪ್ಯಾಯಮಾನವಾಗಿ ಕಂಡರೆ ಆಶ್ಚರ್ಯವಿಲ್ಲ. ದವಸ, ಧಾನ್ಯಗಳೆಲ್ಲ ಒದ್ದೆಯಾಗಿ ನೀರುಪಾಲಾಗಿವೆ, ಮನೆ ಇಲ್ಲ, ಮಠವೂ ನೀರಿನಲ್ಲಿ ಮುಳುಗಿದೆ. ಸಾಲ, ಸೋಲ ಮಾಡಿ ಗದ್ದೆ ನಾಟಿಗೆ ತಯಾರು ಮಾಡಿದ್ದರೆ, ಮನೆ ಕಟ್ಟಿಸಿದ್ದರೆ ಆ ಯಜಮಾನನ ಕತೆ ಏನು? ಏಲ್ಲಿಗೆ ಹೋಗಲಿ ಎನ್ನುವ ಅಂತರಂಗದ ಆರ್ತನಾದ ಕೇಳುವವರಿಲ್ಲ. ಇಂತಹ ಸೌಭಾಗ್ಯಕ್ಕೆ ನಮಗೆ ಸರ್ಕಾರಗಳು ಬೇಕು. ಜನಪ್ರತಿನಿಧಿಗಳು ಬೇಕು, ಉಳ್ಳವರು ಕೈಲಾಗುವ ಜನರು ಬೇಕು. ಒಮ್ಮೊಮ್ಮೆ ನನಗೆ ನನ್ನ ಮೇಲೂ ಸಿಟ್ಟು ಬರುತ್ತದೆ. ಇಂತಹ ಪರಿಸ್ಥಿತಿಗೆ ಯಾರೂ ಹೊಣೆಯಲ್ಲ. ಬದುಕಿನಲ್ಲಿ ಇವೆಲ್ಲ ಅನಿವಾರ್ಯ. ಇಂತಹ ಅನಿವಾರ್ಯತೆಗಳು ಯಾರಿಗೂ ಬರಬಹುದು. ಆಗೆಲ್ಲ ಉಳಿದುಕೊಳ್ಳುವ ಪ್ರಶ್ನೆ ``ಮಾನವೀಯತೆ ಉಳಿದಿದೆಯಾ? ‘’ಎಂಬುದು ಮಾತ್ರ.



ಶುಕ್ರವಾರ, ಜುಲೈ 5, 2019

ಪ್ರಾಣಿಪ್ರಪಂಚದ ನೆನಪುಗಳು


ಪ್ರಾಣಿಪ್ರಪಂಚದ ನೆನಪುಗಳು
ಇವತ್ತು ಮಧ್ಯಾಹ್ನದ ಗಾಢನಿದ್ದೆಯ ನಂತರ ಎದ್ದಾಗ ಏನೂ ಸದ್ದಿರಲಿಲ್ಲ. ಮುಖ ತೊಳೆದು ಕೂದಲು ಬಾಚಿ ಹಾಗೆ ಮತ್ತೊಂದು ರೂಮಿಗೆ ಕಾಲಿಡುತ್ತೇನೆ, ಬೆಕ್ಕಿನ ಮರಿಯೊಂದು ಬೆವರು ಆರಲೆಂದು ಮಂಚದ ಮೇಲೆ ಹರವಿಟ್ಟ ನನ್ನ ಚೂಡಿದಾರದ ಮೇಲೆ ಹಾಯಾಗಿ ಮಲಗಿದೆ. ಅದರಮ್ಮ ಮಂಚದ ಕೆಳಗೆ. ಬಹುಷಃ ಹೊರಗೆ ಮಳೆ. ಚಳಿಯಾಗಿರಬೇಕು. ಯಾರೂ ಹೇಳಿ ಕೇಳಿ ಮಾಡುವುದಿಲ್ಲ ಎಂತಲೋ ಬಂದು ಹಾಯಾಗಿ ಕುಳಿತಿವೆ. ಇವತ್ತು ಮಾತ್ರವಲ್ಲ, ಈ ಮರಿ ಹಾಕಿದ್ದೂ ನಮ್ಮ ಮನೆಯ ಕಿಟಕಿ ಸಜ್ಜಾದ ಮೇಲೆಯೆ. ನಾವು ಮಲಗುವುದನ್ನೇ ಕಾದು ಮನೆಯೊಳಗೆ ದಾಳಿ ಇಡುತ್ತವೆ. ಮರಿಗೆ ಹಾಲು ಹಾಕಿದರೆ ಕುಡಿಯಲು ತಿಳಿಯದು, ಅದರಮ್ಮ ಕುಡಿದು ಓಡಿಹೋಗುತ್ತದೆ. ಬೆಚ್ಚಗೆ ಮಲಗಿ ಅಂತ ನನ್ನ ಹಳೆಯ ಕಾಟನ್ ಬಟ್ಟೆಯೊಂದನ್ನು ಹಾಸಿಕೊಟ್ಟರೆ ಮಲಗಲು ಅವಕ್ಕೆ ಭಯ. ಮಂಚದ ಮೇಲೆ ಸಾಕಷ್ಟು ಬಟ್ಟೆಗಳು ಬಿದ್ದು ಹೊರಳಾಡುತ್ತಿದ್ದರೂ ನನ್ನ ಹೊಸ ಬಟ್ಟೆಯೇ ಆಗಬೇಕು ಮರಿಬೆಕ್ಕಿಗೆ.
ಇವಕ್ಕೆ ಮಾತ್ರವಲ್ಲ. ನನ್ನ ಜೊತೆಗೆ ಮನೆ ಕಾಯಲು ನಾಯಿಯೊಂದಿತ್ತು. ಅದರ ಹೆಸರು ಟಿಪ್ಪು. ಹೈಸ್ಕೂಲಿಗೆ ಹೋಗುವಾಗ ಅದು ಬೆಳಿಗ್ಗೆ ಮೊದಲು ತಿಂಡಿ ತಿನ್ನುತ್ತಿರಲಿಲ್ಲ. ನನ್ನನ್ನು 2 ಕಿ.ಮೀ ದೂರದಲ್ಲಿನ ಹೈಸ್ಕೂಲ್ ವರೆಗೆ ಗದ್ದೆ, ಕಾಡು, ರಸ್ತೆ ಹೀಗೆ ಯಾವ ದಾರಿಯಲ್ಲಿ ಹೋದರೂ ಜೊತೆಗೆ ಬರುತ್ತಿತ್ತು. ಒಂದೊಮ್ಮೆ ನನಗಿಂತ ಸ್ವಭಾವ ಸಹಜ ಮುಂದೆ ಓಡಿ ಹೋಗಿಬಿಟ್ಟಿದ್ದರೆ ನಾನು ಬರುವವರೆಗೆ ನಿಂತು ಕರೆದುಕೊಂಡು ಹೋಗುತ್ತಿತ್ತು. ಹೈಸ್ಕೂಲಿಗೆ ಹೋಗಿ ಪ್ರಾರ್ಥನೆ ಮುಗಿಯುವವರೆಗೆ ಕಾದು, ಕ್ಲಾಸಿಗೆ ಹೋಗಿ ಕುಳಿತೆನೋ ಎಂದು ನೋಡಿಕೊಂಡು ಮನೆಗೆ ಹೋಗಿ ತಿಂಡಿ ತಿನ್ನುತ್ತಿತ್ತು. ಅಮ್ಮನಿಲ್ಲದಾಗ ನಾನು ಹೈಸ್ಕೂಲಿಗೆ ಹೊರಡುವ ಮೊದಲು ಹಾಕುತ್ತಿದ್ದೆ. ಆಗೆಲ್ಲ ತನ್ನ ಊಟವನ್ನು ಹಾಗೆಯೇ ಬಿಟ್ಟು ನನ್ನನ್ನು ಬಿಟ್ಟೇ ಅದು ಮರಳಿ ಹೋಗಿ ತಿನ್ನುತ್ತಿತ್ತು. ನಾನು ಮನೆಯಲ್ಲಿರುವಾಗ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ನಮ್ಮ ಮನೆಯ ಅಂಗಳಕ್ಕೆ ನಾಗರಹಾವು ಬರುತ್ತಿತ್ತು. ಅದು ಮತ್ತು ಈ ಟಿಪ್ಪು ಆಡುತ್ತಿದ್ದವೋ, ಜಗಳ ಮಾಡುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ. ಇದು ಬೌಬೌ ಎಂದು ಕೂಗುತ್ತ ಅತ್ತ ಇತ್ತ ಓಡುತ್ತಿದ್ದರೆ, ಹಾವು ತಲೆ ತೂಗುತ್ತ ಬುಸ್ ಬುಸ್ ಗುಡುತ್ತ ಅಂಗಳ ತುಂಬ ಗದ್ದಲವೆಬ್ಬಿಸುತ್ತಿದ್ದವು. ಟಿಪ್ಪುವಿಗೂ ನನ್ನ ಚಪ್ಪಲಿಗಳೆಂದರೆ ಬಹಳ ಇಷ್ಟ. ನನ್ನ ಚಪ್ಪಲಿ ಹುಡುಕಿಕೊಂಡು ಕತ್ತರಿಸಿಹಾಕುತ್ತಿತ್ತು. ಅದು ಬಿಟ್ಟರೆ ಒಂದೆರಡು ಸಲ ಅಪ್ಪನ ಚಪ್ಪಲಿ ಕತ್ತರಿಸಿತ್ತು. ಅಪ್ಪ ಸರಿಯಾಗಿ ಬಾರಿಸಿದ ಮೇಲೆ ಅಪ್ಪನ ಚಪ್ಪಲಿ ಬಿಟ್ಟು ಸದಾ ನನ್ನ ಚಪ್ಪಲಿಯನ್ನೇ ತಿನ್ನುತ್ತಿತ್ತು. ಅಪ್ಪ ನನ್ನ ಚಪ್ಪಲಿಯಲ್ಲೂ ಅದಕ್ಕೆ ಒಮ್ಮೆ ಹೊಡೆದು ನೋಡಿದ. ಆದರೆ ಅದು ಮಾತ್ರ ನನ್ನ ಚಪ್ಪಲಿ ಕತ್ತರಿಸಿದರೇ ಸಮಾಧಾನ ಎನ್ನುವಂತಿತ್ತು. ನನಗಾದರೋ ಬರಗಾಲದಲ್ಲಿ ಮಗ ಉಣ್ಣುವುದನ್ನು ಕಲಿತಂತೆ, ಬರಿಗಾಲಿನಲ್ಲಿ ಗದ್ದೆ, ಕಾಡು ದಾಟಿ ಶಾಲೆಗೆ ಹೋಗುವುದ ಹೇಗೆ? ಒಂದು ಹಳೆ ಚಪ್ಪಲಿ, ಮತ್ತೊಂದು ಕಾಲಿಗೆ ಇನ್ನೊಂದು ಚಪ್ಪಲಿ ಇಜ್ಜೋಡಿ ಹಾಕಿಕೊಂಡು ಶಾಲೆಗೆ ಹೋದ ದಿನಗಳು ಇನ್ನೂ ಮರೆತಿಲ್ಲ.
ಮನೆಯಲ್ಲಿ ಹಸುವೊಂದಿತ್ತು. ಬಹುಷಃ ಅದಿಲ್ಲದಿದ್ದರೆ ನಾನು ಹಾಲು ಕರೆಯುವುದನ್ನು ಕಲಿಯುತ್ತಿರಲಿಲ್ಲ. ಎಂತಹ ಅಪರೂಪದ ಹಸುವೆಂದರೆ ಒಮ್ಮೆ ಕರು ಹಾಕಿದ್ದು ಸರಿ ಸುಮಾರು 5 ವರ್ಷ ಹಾಲು ಕೊಡುತ್ತಿತ್ತು. ಅದರ ಕೆಳಗೆ ಮಲಗಿಕೊಂಡು ಹಾಲು ಕರೆದರೂ ಕೊಡುತ್ತಿತ್ತು. ಹಾಗಾಗಿ ಅಪ್ಪ, ಅಮ್ಮ ಇಲ್ಲದಾಗ ಹಾಲು ಕರೆಯುವುದು ನನ್ನ ಪಾಲಾಗಿತ್ತು. ನಾನು ಬೆಂಗಳೂರಿಗೆ ಬಂದ ನಂತರವೂ ಮನೆಗೆ ಹೋದಾಗ ಅದು ಅದರ ಮಕ್ಕಳು ತೋರುತ್ತಿದ್ದ ಪ್ರೀತಿಗೆ ಯಾವ ಮನುಷ್ಯರ ಪ್ರೀತಿಯೂ ಸಾಟಿಯಾಗದು.
ಇನ್ನು ಬೆಂಗಳೂರಿನ ನಾಯಿಗಳದ್ದು ಒಂದು ಕಥೆ. 2002ರಲ್ಲಿ ಎಂ.ಎನ್.ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಶಿಫ್ಟ್ ಕೆಲಸ. ಬೆಳಗಿನ ಪಾಳಿಯಿತ್ತು. ಚಾಮರಾಜಪೇಟೆಯ ಕೋತಿ ಪಾರ್ಕ್ ನ ಹತ್ತಿರ ನನ್ನ ಮನೆಯಿತ್ತು. ಮೈಸೂರು ಸರ್ಕಲ್ ಗೆ ಬೆಳಿಗ್ಗೆ 5 ಗಂಟೆಗೆ ನನ್ನ ಕ್ಯಾಬ್ ಬರುತ್ತಿತ್ತು. ನಾನು 4.45ಕ್ಕೆಲ್ಲ ಹೊರಡುತ್ತಿದ್ದೆ. ಸಾಮಾನ್ಯವಾಗಿ ನಿರ್ಜನವಾಗಿರುತ್ತಿತ್ತು. ಒಮ್ಮೆ ಇಡೀ ರಸ್ತೆಯ ತುಂಬ ನಾಯಿಗಳು. ನಾನು 2ನೇ ಮಹಡಿಯಿಂದ ಕೆಳಗೆ ಬರುವುದನ್ನೇ ಕಾಯುತ್ತಿದ್ದವೋ ಎನ್ನುವಂತೆ ಒಂದು ಹತ್ತೆನ್ನರಡು ನಾಯಿಗಳು ಬೆನ್ನಟ್ಟಿಬಿಟ್ಟವು. ನಾನು ಹೆದರದೆ ಸುಮ್ಮನೆ ಹೋಗುವುದೊಂದನ್ನೇ ಮಾಡಿದೆ. ಆಗ ಹಿಂದಿನಿಂದ ಒಂದು ದುಪಟ್ಟಾ ಎಳೆಯಿತು. ಪಕ್ಕಕ್ಕೆ ಇನ್ನೊಂದು ಬಂದು ಬ್ಯಾಗ ಕಸಿಯಲು ಬಂತು. ವಿಚಿತ್ರವೆಂದರೆ ಒಂದೂ ನನ್ನ ಮೇಲೆ ದಾಳಿ ಮಾಡಲಿಲ್ಲ. ನಾನು ಆ ಕ್ಷಣಕ್ಕೆ ಏನನ್ನಿಸಿತೋ ಏನೋ. ಇದ್ದಕ್ಕಿದ್ದಂತೆ ದೊಡ್ಡ ದನಿಯಲ್ಲಿ ಏ ಹೋಗ್ರೋ. ಬಿಡಿ ನನ್ನ ಬ್ಯಾಗು, ದುಪಟ್ಟಾ. ಹೋಗಿ ಅಂದು ಕೂಗು ಹಾಕಿದೆ. ಅದೇನಾಯಿತೋ. ಅಷ್ಟೂ ನಾಯಿಗಳೂ ಹಿಂದಕ್ಕೆ ಸರಿದು ಸುಮ್ಮನೆ ಹೋಗಿಬಿಟ್ಟವು. ಯೋಚಿಸಿ, ಅವುಗಳ ಜಾಗದಲ್ಲಿ ಮನುಷ್ಯರಿದ್ದರೆ ನನ್ನನ್ನು ಬಿಡುತ್ತಿದ್ದರಾ? ನಿಜವಾಗಿಯೂ ಈ ಪ್ರಾಣಿಗಳಿಗೆ ನನ್ನ ಮೇಲೆ ಅದೇಕೆ ಅಷ್ಟು ಪ್ರೀತಿ? ಗೊತ್ತಿಲ್ಲ.
ಹಾಗೆ ನಾನು ಮದುವೆಯಾಗಿ ಗೂಡೊಂದು ಆದಾಗ ನಮ್ಮ ಮನೆಯ ಬಾಲ್ಕನಿಯಲ್ಲಿ ಪಾರಿವಾಳಗಳ ಪ್ರೀತಿಯ ಜಾತ್ರೆ. ಮಗು ಮಾಡಿಕೊಂಡು ಬೆಳೆಸಿಯೇ ತೀರುವ ಹಠ. ಕೋತಿಗಳಿಗೆ ನಮ್ಮ ಮನೆಯ ಸೌತೆಕಾಯೇ ಆಗಬೇಕು. ನಾನು ಪಕ್ಕದ ಮನೆಯವರೊಂದಿಗೆ ದೂರು ಹೇಳಿಕೊಳ್ಳುತ್ತಿದ್ದೆ. “ನೋಡಿ ನಿಮ್ಮ ಮನೆಯಲ್ಲಿ ಸ್ವಲ್ಪವೂ ದಾಂಧಲೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ನಿತ್ಯ ಇವುಗಳ ಗಲೀಜು ಸ್ವಚ್ಛ ಮಾಡುವುದೇ ಆಗಿದೆ.” ಅದಕ್ಕೆ ಅವರು ಹೇಳುತ್ತಿದ್ದರು, “ನಮ್ಮ ಮನೆಯಲ್ಲೂ ಬಂದ ಶುರುವಿನಲ್ಲಿ ಮೊಟ್ಟೆ ಇಟ್ಟಿತ್ತು. ನಾನು ಗೂಡಿನ ಸಮೇತ ಎಸೆದು ಬಿಟ್ಟಿದ್ದೆ. ಅಷ್ಟರ ನಂತರ ಬರಲಿಲ್ಲ.” ಇರಬಹುದು. ನಾವು ಆ ಮನೆ ಬಿಟ್ಟು ಮತ್ತೊಂದು ಮನೆಗೆ ಬಂದಾಗ ಒಂದಿಡೀ ಬಾಲ್ಕನಿಯನ್ನು ಪಾರಿವಾಳಗಳ ಸಂಸಾರಕ್ಕೇ ಬಿಟ್ಟುಕೊಟ್ಟಿದ್ದೆವು. ಅವುಗಳ ಗಲೀಜಿನಿಂದ ಹುಳುಗಳು ಮನೆಯೊಳಗೆ ಬರತೊಡಗಿದಾಗ ವರ್ಷದ ಮಗನಿದ್ದಾನೆಂದು ಸ್ವಚ್ಛ ಮಾಡಿಸಿ ಜಾಲರಿ ಹಾಕಿಕೊಂಡೆವು. ಅಲ್ಲಿ ತನಕ 25ಕ್ಕೂ ಹೆಚ್ಚು ಪಾರಿವಾಳಗಳು ಹುಟ್ಟಿ ಬೆಳೆದು ಹಾರಿ ಹೋದವು. ಹುಟ್ಟಿ ಬೆಳೆದ ಮನೆಯನ್ನು ಮರೆಯಲು ಸಾಧ್ಯವಿಲ್ಲವೆಂಬಂತೆ ಬಾಗಿಲು ತೆಗೆದರೆ ಸಾಕು ಮನೆಯೊಳಗೆ ಬಂದು ಹೊರಹೋಗಲು ದಾರಿ ಕಾಣದೆ, ನನ್ನ ಮಗನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಸದರ ಬೆಳೆಯಲು ಕಾರಣವಾದವು. ಈಗ ಅವನಿಗೆ ಪಾರಿವಾಳ, ನಾಯಿ, ಬೆಕ್ಕು, ಹಾವು ಯಾವುದರ ಭಯವೂ ಇದ್ದಂತಿಲ್ಲ.
ನಿನ್ನೆಯಾದರೂ ಅಷ್ಟೆ. ಬೆಕ್ಕು ನನಗೆ ಹೊಸತು. ಅದೂ ಅಮ್ಮ ಬೆಕ್ಕು ಭಾರೀ ಇದೆ. ತನ್ನ ಮಗನೋ, ಮಗಳೋ ಬಗ್ಗೆ ವಿಪರೀತ ರಕ್ಷಣಾತ್ಮಕವಾಗಿದೆ. ಅದನ್ನು ನೋಡಿ ನನಗೆ ಹೆದರಿಕೆ. ನನ್ನ ಮಗ ಅಮ್ಮ ಬೆಕ್ಕು ಜೊತೆ ಆಡಲು ಬಂದಿದೆ ಎಂದು ತೊದಲು ನುಡಿಯುತ್ತಿದ್ದರೆ ನನಗೆ ಸೋಜಿಗ! ಕೊನೆಯಲ್ಲೊಂದು ಭಾರೀ ನೆನಪು.
ಹೈಸ್ಕೂಲಿಗೆ ಹೋಗುವಾಗ ದಿನ ಸಂಜೆ ಹಂಡೆಗೆ, ಎಲ್ಲ ಕಡೆ ಬಾವಿಯಿಂದ ನೀರು ಸೇದಿ ತುಂಬಿಸಬೇಕಿತ್ತು. ಹದ ಮೂರು ಸಂಜೆಯ ಹೊತ್ತು. ನಾನು ಎಂದಿನಂತೆ ಹೇ ಪಾಂಡುರಂಗಾ ಪ್ರಭೋ ವಿಠಲ ಎನ್ನುತ್ತ ಭಾರಿ ಜೋಶ್ ನಲ್ಲಿ ಭಕ್ತಿ ಪರವಶಳಾಗಿ ನೀರು ಸೇದುತ್ತಿದ್ದೆ. ಕೊಡಪಾನ ಮೇಲೆ ಬಂತು. ಹಾಡುತ್ತ ಕೊಡಕ್ಕೆ ಕೈಹಾಕಿದೆ. ತಣ್ಣಗಾಯಿತು. ನೋಡಿದರೆ ಸಣ್ಣ ಹಾವು ಕಂಠಕ್ಕೆ ಸುತ್ತಿಕೊಂಡು ತಲೆಯೆತ್ತಿ ನಿಂತಿದೆ. ಅಮ್ಮಾ ಅಂದಿದ್ದಷ್ಟೆ. ಹಗ್ಗ ಕೈಬಿಟ್ಟಿತ್ತು, ಕೊಡ ಬಾವಿ ತಳ ಸೇರಿತ್ತು. ಅಮ್ಮ ಬಂದು , ಕೊಡ ಎತ್ತಿ, ಕೋಲಲ್ಲಿ ಈಚೆಗೆ ಎಳೆದು ಕಟ್ಟೆಯ ಮೇಲಿಟ್ಟಳು. ಹಾವು ಹರಿಯುತ್ತ ಹೋಯಿತು. ಹೊರಗೆ ಬಂದ ಮೇಲೆ ಅದೊಂದು ವಿಷದ ಹಾವೆಂದು ತೋರಿದಾಗ ಮಕ್ಕಳು , ಮರಿ ಇದಾವೆ ಎಂದು ಅಮ್ಮ ಹೊಡೆದು ಸಾಯಿಸಿದರು. ಹಾಗೆ ನಮ್ಮ ಮನೆಯಲ್ಲಿ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತಿನ ಬದುಕಿನ ಪಾಠ ದೊರೆತಿದ್ದು ಇಂದು ಯಾವುದಕ್ಕೂ , ಯಾರಿಗೂ ಹೆದರದ ಧೈರ್ಯ ಕೊಟ್ಟಿದೆಯಾ?