ಶನಿವಾರ, ಏಪ್ರಿಲ್ 25, 2015

ನನ್ನ ಮದುವೆ



ನನಗೆ ಹೆಣ್ಣು ಗಂಡಿನ ಸಂಬಂಧದ ಪ್ರೀತಿ ಗೊತ್ತಾಗಿದ್ದು 6ನೇ ತರಗತಿಯಲ್ಲಿ. ಅಲ್ಲಿಯವರೆಗೂ ಸಹಪಾಠಿಗಳು ಲವ್ ಚಿನ್ಹೆ, ಲೈಂಗಿಕತೆ ಕುರಿತು ಮಾತನಾಡುವಾಗ ಅದೆಂತದ್ದು ಎಂದು ತಿಳಿದುಕೊಳ್ಳಲು ಕಂಡ ಕಂಡ ಪುಸ್ತಕ, ಧಾರವಾಹಿಗಳು, ಸಿನೇಮಾಗಳನ್ನೆಲ್ಲ ಗಲಬರಿಸಿದ್ದೆ. ಸುಟ್ಟುಕೊಂಡು ತಿನ್ನುತ್ತೇನೆಂದರೂ ಅರ್ಥವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ 15 ದಿನ ಹೋಗುವ ಸಂದರ್ಭ ಬಂತು. ಅಲ್ಲಿಗೆ ಹೋದಾಗ ಸಂಬಂಧಿಕರ ಸ್ನೇಹಿತರ ಮಗಳೊಬ್ಬಳು ಕೇಳಿದಳು. ನಿನಗೆ ಬಾಯ್ ಫ್ರೆಂಡ್ ಇಲ್ಲವಾ? ಅದೇನದು ಬಾಯ್ಫ್ರೆಂಡು? ಎಂದು ವಿವರ ಕೇಳಿ ತಿಳಿದುಕೊಂಡೆ. ಅದು ನನಗೆ ಚಿಕ್ಕಂದಿನಿಂದಲೂ ಕಂಡರಾಗದ `ಮದುವೆ’ ಎನ್ನುವ ಶಬ್ಧದ ಆರಂಭ ಎನ್ನುವುದು ಗೊತ್ತಾದಾಗ ಸಿಕ್ಕಾಪಟ್ಟೆ ಬೇಜಾರಾಗಿಹೋಯಿತು.
ಯಾಕೋ ಏನೋ ನನಗೆ `ಮದುವೆ’ ಎನ್ನುವ ಮಾತು ಕೇಳಿದ್ರೆ ಸಾಕು ಉರಿದುಹೋಗುತ್ತಿತ್ತು. ಬಾಲ್ಯದಲ್ಲಿ ಸುಂದರವಾಗಿದ್ದ ನನ್ನನ್ನು ನೋಡಿ ಅಪ್ಪನ ಅಂಗಡಿಗೆ ಬರುವವರೆಲ್ಲ ನಿಮಗೆ ಹೆಣ್ಣುಮಗಳ ಮದುವೆ ಮಾಡಲು ಕಾಸು ಖರ್ಚಿಲ್ವಲ್ಲ ಭಟ್ರೆ, ಯಾರಾದ್ರೂ ಅವರೇ ಖರ್ಚು ಹಾಕ್ಕೊಂಡು ಮದ್ವೆ ಆಕ್ತ ಇಲ್ಲ ಇವಳೆ ರೆಜಿಸ್ಟರ್ ಮದುವೆ ಆಕ್ತ ಎನ್ನುತ್ತಿದ್ದರು. ಆಗ ನನ್ನ ತಂದೆಗೆ ಅದೇನೋ ಹೆಮ್ಮೆ ಎನಿಸುತ್ತಿತ್ತು. ಅಷ್ಟಕ್ಕೂ ನಿಲ್ಲದೆ ದಾರಿಯಲ್ಲಿ ಹೋಗುವವರು, ಸಂಬಂಧಿಕರು ನಾನಕ್ಕೊ, ಅವ ಅಕ್ಕೋ ಎಂದು ನನ್ನ ಸಂಗಾತಿಯಾಗಲು/ಆಗಿಸಲು ರೇಗಿಸುತ್ತಿದ್ದರು. ನನಗೆ ಎಲ್ಲ ಸಂದರ್ಭದಲ್ಲಿ ಖುಷಿಯಾಗುವ ಬದಲು ಕೆಂಡಾಮಂಡಲ ಸಿಟ್ಟು ಬರುತ್ತಿತ್ತು. ಈ ಜಗತ್ತಿನಲ್ಲಿ ಮಾಡಲು ಬೇರೆ ಕೆಲಸವೇ ಇಲ್ಲವೆ ಮದುವೆಯಂತೆ, ಮಕ್ಕಳಂತೆ. ಥೂ! ಎನಿಸುತ್ತಿತ್ತು. ಇನ್ನೂ ನೆನಪಿದೆ. ಅಜ್ಜನ ಮನೆಯಲ್ಲಿರುವಾಗ ಹೆಚ್ಚಿನ ದಿನ ದೇವರ ಪೂಜೆ ನನ್ನ ಪಾಲಿಗೇ ಬರುತ್ತಿತ್ತು. ನಾನು ಗಂಡಸರಂತೆ ಕಚ್ಚೆ ಹಾಕಿ ಮಡಿ ಉಡುವುದನ್ನು ಕಲಿತಿದ್ದೆ. ಅದೊಂದು ದಿನ ಯಾವುದೋ ದೇವಕಾರ್ಯದಲ್ಲಿ ನನ್ನ ದೊಡ್ಡಮ್ಮ ಮದುವೆಯ ಸುದ್ದಿ ಎತ್ತಿದಳು, ನನ್ನಮ್ಮ ನನ್ನ ಮದುವೆ ಮಾಡುವ ಬಗ್ಗೆ ಏನೋ ಹೇಳಿದಳು. ನನಗೆ ಎಷ್ಟು ಸಿಟ್ಟು ಬಂತೆಂದರೆ ಅಮ್ಮನಿಗೇ ಕೈಯೆತ್ತಿ ಹೊಡೆದುಬಿಟ್ಟೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ನನಗೆ ಮದುವೆ ಅಂದರೆ ಯಾಕೆ ಅಷ್ಟು ಸಿಟ್ಟು ಬರುತ್ತಿತ್ತೋ ಗೊತ್ತಿಲ್ಲ. ನನಗೆ ದೇವರು, ದೇವರು, ದೇವರು ಬಿಟ್ಟರೆ ಮತ್ತೊಂದು ಗೊತ್ತಿಲ್ಲ. ಅಡುಗೆ ಆಟ ಆಡುತ್ತಿದ್ದೆ, ದೇವರ ಆಟ ಆಡುತ್ತಿದ್ದೆ , ಆದರೆ ಗಂಡ, ಹೆಂಡತಿ ಆಟಕ್ಕೆ ಮಾತ್ರ ಒಲ್ಲೆ ಎನ್ನುತ್ತಿದ್ದೆ. ಒಮ್ಮೆ ಅಮ್ಮ ತನಗೆ ಬೇಜಾರಾದಾಗ ನಿನಗೆ ಮದುವೆ ಗೋಜು ಬೇಡ, ಬ್ರಹ್ಮಕುಮಾರಿ ಮಾಡಿಬಿಡುತ್ತೇನೆ ಎಂದು ಹೇಳಿದಾಗ ಅದೇಕೋ ಅಷ್ಟು ಸಂತೋಷವಾಗಿತ್ತು.
ಇದೇ ವೇಳೆ ಜಗನ್ನಾಟಕ ಸೂತ್ರದಾರಿಯ ಲೀಲೆ ಆರಂಭವಾಗಿತ್ತು. ವಯಸ್ಸು ಹದಿಹರೆಯಕ್ಕೆ ಕಾಲಿಟ್ಟಿತ್ತು. ಮನೆಯಲ್ಲಿ ಹಿಂಸೆ ಮುಗಿಲು ಮುಟ್ಟಿತ್ತು. ಆಗ ನಿಜವಾಗಿಯೂ ಮದುವೆ ಬೇಕಾಗಿತ್ತು! ಈ ಎಲ್ಲ ಹಿಂಸೆಗಳಿಂದ ತಪ್ಪಿಸಿಕೊಂಡು ಹೋಗಲು ನನಗೊಂದು ಅಲ್ಟಿಮೇಟ್ ಆಸರೆ ಬೇಕಿತ್ತು. ಅದಕ್ಕಾಗಿ ನಾನು ನನ್ನ ಶಾಲೆಯ ಹೀರೋ (!?) ಒಬ್ಬನನ್ನು ಆಯ್ಕೆ ಮಾಡಿಕೊಂಡೆ. ಆತನ ಹೆಸರಲ್ಲಿ ನನ್ನ ಕಷ್ಟ ತೋಡಿಕೊಳ್ಳುವ ಒಂದು ಉದ್ದನೆಯ ಪತ್ರ ಬರೆದೆ. ಆ ನಂತರ ನನ್ನ ಮನೆಗೆ ಬಂದು ಹೈಸ್ಕೂಲಿಗೆ ಸೇರುವ ಹೊತ್ತಿಗೆ ಆತ ಮರೆತೂ ಹೋದ, ಆ ಪತ್ರವೂ ಮರೆತು ಹೋಯ್ತು. ಆ ಪತ್ರ ಮಾತ್ರ ಶಾಲೆಯ ಶಿಕ್ಷಕರಿಗೆ ಸಿಕ್ಕು ದೊಡ್ಡ ಗೌಜೆಬ್ಬಿಸಿತು. ಅಷ್ಟೊತ್ತಿಗಾಗಲೆ ನನ್ನ ಸಾಚಾತನದ ಅರಿವಾಗಿದ್ದ ಶಿಕ್ಷಕರು ಪತ್ರದ ವಿಷಯ ಬಿಟ್ಟು ಮುಂದೆ ವೈವಾಹಿಕ ಬದುಕಿನ ಸ್ವಾರಸ್ಯವನ್ನು ಉಪ್ಪು, ಕಾರ ಹಚ್ಚಿ ಆಸೆ ಹುಟ್ಟಿಸಲು ಸಾಕಷ್ಟು ಯತ್ನ ಮಾಡಿದರು. ಕೊನೆಗೂ ಆಗದೆ ನೀನು ಯಾರನ್ನು, ಹೇಗೆ ಮದುವೆಯಾಗುತ್ತೀ ಎಂದು ನೋಡುವ , ಮದುವೆಗೆ ಮುದ್ದಾಂ ಕರಿ ಎಂದು ಬೀಳ್ಕೊಟ್ಟರು.
ಅಯ್ಯಬ್ಬ ಈ ಮದುವೆಯೆ! ಆ ಭಗವಂತ ನನ್ನನ್ನು ಪರೀಕ್ಷೆ ಮಾಡಲೆಂದೇ ಈ ಜಗತ್ತಿಗೆ ತಂದು ಬಿಸಾಕಿದ್ದಾನೆಂದು ಅನಿಸುವುದು ಮಾತ್ರ ಈ ಮದುವೆಯ ವಿಷಯದಲ್ಲೇ.
ಯಾಕೆಂದರೆ ನನ್ನ ಮನಸ್ಸು ದೇವರ ದಯದಿಂದ ಸದಾ ಅವನ ಸ್ಮರಣೆಯಲ್ಲೇ ಇರುತ್ತದೆ. ಚಿಕ್ಕಂದಿನಿಂದ ನನ್ನ ಗೆಳೆಯ, ಮಗು, ತಂದೆ, ತಾಯಿ ಪ್ರತಿಯೊಂದೂ ಅದೆ. ನನಗೆ ಮದುವೆ ವಿಷಯ ಬಂದಾಗ ನನಗೆ ನಾನು, ನನ್ನ ಪತಿ ಪ್ರೀತಿಯ ಉತ್ಕಟತೆಯಲ್ಲೂ ಒಂದೇ ಹಾಸಿಗೆಯಲ್ಲಿದ್ದರೂ ದೈಹಿಕ ಕಾಮನೆಗಳು ಕೆರಳದಿರುವ ಉನ್ನತ ಮಟ್ಟದ ದಾಂಪತ್ಯದ ಕನಸು. ಮುಂದೆ ಹದಿಹರೆಯದ ವಯೋಸಹಜ ಕಾಮನೆಗಳು ಬಂದಾಗ ನಾನು ದೇವರಲ್ಲಿ ಮೊರೆಯಿಡುತ್ತಿದ್ದೆ, ಹೇ ಭಗವಂತ ನನ್ನ ಈ ಕಾಮನೆಗಳು ನಿನ್ನ ಕಾಮನೆಗಳಾಗಲಿ ಎಂದು. 9ನೇ ತರಗತಿಯಲ್ಲಿ ಅಮ್ಮನಿಗಾಗಿ ತಂದ ಮಹಾಭಾರತದ ಸಂಪುಟವೊಂದರಲ್ಲಿ ಧರ್ಮರಾಯನನ್ನು ಯಾರೋ ಪ್ರಶ್ನೆ ಕೇಳುವ ಸಂದರ್ಭ. ಬಹುಷಃ ಯಕ್ಷಪ್ರಶ್ನೆ ಇರಬೇಕು. ಅದರಲ್ಲಿ ಆತನನ್ನು ಕೇಳುತ್ತಾರೆ, ಜೀವನ ಪರ್ಯಂತ ಇರುವ ಗೆಳೆತನ ಯಾವುದು ಎಂದು. ಅದಕ್ಕೆ ಧರ್ಮರಾಯ ಉತ್ತರಿಸುತ್ತಾನೆ `` ಅದು ಪತ್ನಿ ಅಥವಾ ಪತಿಯೊಂದಿಗಿನ ಸಂಬಂಧ’’. ಅಂದಿಗೆ ನನ್ನ ಮುಂದೊಂದು ಹೊಸ ಸಾಧ್ಯತೆಯ ಬಾಗಿಲು ತೆರೆದುಕೊಂಡಿತು. ಈಗ ಅಪ್ಪ, ಅಮ್ಮನ ಕೆಲಸವನ್ನು ಹೇಗೆ ದೇವರ ಸೇವೆ ಎಂದು ಮಾಡುತ್ತೇನೋ ಹಾಗೇ ಮದುವೆಯಾದರೆ ಅತ್ತೆ,ಮಾವ, ಪತಿ ದೇವರ ಸೇವೆ ಮಾಡಿಕೊಂಡು ಜನ್ಮ ಸಾರ್ಥಕ ಮಾಡಿಕೊಳ್ಳುತ್ತೇನೆ!
ಇಂತಹ ನನಗೆ ಮದುವೆಯ, ಒಂದು ಸಾಂಗತ್ಯದ ಅವಶ್ಯಕತೆ ಬೆಂಗಳೂರಿಗೆ ಹದಿನೈದು ಚಿಲ್ಲರೆ ವರ್ಷಕ್ಕೆ ಒಬ್ಬಂಟಿಯಾಗಿ ಬಂದಾಗ ಕಂಡುಬಂತು. ಧರ್ಮರಾಯ ಹೇಳಿದ್ದನಲ್ಲ ಜೀವನ ಪರ್ಯಂತದ ಗೆಳೆತನ! ಹಾಗಾಗಿ ಮದುವೆಯ ಯೋಚನೆ ಬಂತು. ಆಗ ಕಳೆದುಹೋದ ಹೀರೋನನ್ನು ಪತ್ತೆ ಹಚ್ಚಿದೆ. ಅಷ್ಟರಲ್ಲಾಗಲೇ ಆತ ಬೇರೊಂದು ಕಡೆ ನಿಲುಕಿಯಾಗಿತ್ತು. ಸರಿ ಎಂದು ನಾಲ್ಕು ಕಣ್ಣೀರು ಹಾಕಿ ಮಾಡಬೇಕಾದ ಕರ್ತವ್ಯಗಳ ಕಡೆ ಗಮನ ಹರಿಸಿದೆ. ಈ ಸಂದರ್ಭದಲ್ಲಿ ನನ್ನ ಆನಂದಮಯ ಜೀವನ ವಿಸ್ತಾರಗೊಂಡು ಎಲ್ಲೆಡೆ ವ್ಯಾಪಿಸಿತ್ತು. ಹಾಸ್ಟೆಲ್ಲಿನ ಏಕಾಂತ, ನಿತ್ಯ ಯೋಗಾಸನ, ವಿಷ್ಣುಸಹಸ್ರನಾಮ ಪಠನೆ, ಕೃಷ್ಣನೊಂದಿಗೆ ಸಖ್ಯ, ಸುಂದರ ವಾತಾವರಣದಲ್ಲಿ ನನ್ನನ್ನೆ ನಾನು ಮರೆತು ಎಲ್ಲೋ ಹೋಗುವ ಆ ಆನಂದ ಯಾವ ಮಟ್ಟಕ್ಕೆ ಹೋಗಿಬಿಟ್ಟಿತು ಎಂದರೆ ರಸ್ತೆ ಯಾವುದು, ಚರಂಡಿ ಯಾವುದು ಎಂದು ಗೊತ್ತಾಗದ ಸ್ಥಿತಿ. ಎಲ್ಲವೂ, ಎಲ್ಲರೂ ಆನಂದಮಯರು. ನನಗೆ ಈ ಸಾಂಸಾರಿಕ ಜವಾಬ್ದಾರಿಯೊಂದು ಇಲ್ಲದಿದ್ದರೆ ಬಹುಷಃ ಅಂದೇ ಎಲ್ಲ ಬಿಟ್ಟು ಹೊರಟುಹೋಗುತ್ತಿದ್ದೆ. ಇಂದಿಗೂ ಅಷ್ಟೆ, (ನನ್ನ ಮನಸ್ಸು ಆನಂದವಾಗಿ ತೇಲಿ ಹೊರಟುಹೋದಾಗ ನಾನು ಹೆಚ್ಚು ಹೆಚ್ಚು ಲೌಕಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಮತ್ತೆ ಅದು ಸಣ್ಣ ಸಣ್ಣ ವಿಷಯಕ್ಕೂ ಮುನಿಸಿಕೊಂಡು ತನ್ನ ಮೂಲಸ್ಥಿತಿಗೇ ಹೊರಟುಹೋಗುತ್ತದೆ, ಆ ವಿಷಯ ಬೇರೆ.)
ಆದರೆ ಆಂತರ್ಯದಲ್ಲಿ ಸ್ವಲ್ಪ ಅಹಂ ಪ್ರಜ್ಞೆ ಉಳಿದಿತ್ತು. ಅದು ಸಂಸಾರವೆಂಬುದು ಲೀಲಾನಾಟಕವೇ ಹೊರತು ಮತ್ತೇನಲ್ಲ, ಇಲ್ಲೇ ನಿನ್ನ ಕೆಲಸ ಸರಿಯಾಗಿ ಮಾಡದವಳು ಎಲ್ಲೋ ಹೊರಟುಹೋಗಿ ಏನು ಮಾಡುತ್ತೀಯ, ಇಲ್ಲೇ ಭಗವಂತನನ್ನು ಕಾಣು ಎಂದು ಆದೇಶ ನೀಡಿತ್ತು. ಅದಕ್ಕಾಗಿ ಮತ್ತೆ ಪಯಣ ಶುರುವಿಟ್ಟುಕೊಂಡಿತು. ಉಹೂಂ, ಆದರೂ ನನ್ನ ಬುದ್ಧಿ, ಹೃದಯ, ಮನಸ್ಸು ಯಾವುದೂ ಕೈಗೆ ಸಿಗುತ್ತಿಲ್ಲ. ಎಲ್ಲವೂ ಆನಂದಮಯ. ಎಲ್ಲರೂ ಚೈತನ್ಯ ಸ್ವರೂಪಿಗಳು. ಈ ಹಂತದಲ್ಲೇ ನನ್ನ ದೇವರು ಜೀವನದಲ್ಲಿ ಮರೆಯದ ಪಾಠವೊಂದನ್ನು ಹೃದಯದಲ್ಲಿ ಜಾಗೃತಗೊಳಿಸಿದ. ರಸ್ತೆ ಯಾವುದು, ಚರಂಡಿ ಯಾವುದು ಎಂದು ಗೊತ್ತಾಗದ ಸ್ಥಿತಿಯಲ್ಲಿ ಅನಿವಾರ್ಯವಾಗಿ ಚರಂಡಿಗೆ ಬೀಳುವಂತಾಯಿತು. ನನಗೆ ನನ್ನ ಪ್ರೇಮದಿಂದ, ಪಾವಿತ್ರ್ಯದಿಂದ ಚರಂಡಿಯನ್ನೂ ಶುದ್ಧ ಮಾಡುವ ಹುಕಿ ಶುರುವಿಟ್ಟುಕೊಂಡಿತು. ಅದು ಅಹಂಕಾರವಲ್ಲದೆ ಮತ್ತೇನಲ್ಲ, ನನ್ನ ಮಟ್ಟಿಗೆ ಆನಂದ ಮಯವಾಗಿರುವ ಈ ಜಗತ್ತು ನಿಜವಾಗಿ ಆನಂದಮಯವಲ್ಲ. ಇಲ್ಲಿ ಆತ್ಮ, ಪರಮಾತ್ಮಗಳ ನಡುವೆ ಜೀವಾತ್ಮನೊಬ್ಬನಿದ್ದಾನೆ ಎಂಬ ಸತ್ಯದ ಅರಿವಾಯಿತು. ಅಂದಿನಿಂದ ನಾನು ಆತ್ಮದಲ್ಲಿ ಆನಂದದಿಂದಲೂ ಅಂದರೆ ಯಾವ ನಿರೀಕ್ಷೆ, ಭಯ, ಭ್ರಮೆ, ಸಿಟ್ಟು, ನೋವುಗಳಿಲ್ಲದೆ ಖುಷಿಯಿಂದ ಇದ್ದೇನೆ. ನಿತ್ಯವೂ ಪ್ರತಿಕ್ಷಣವೂ ಪರಮಾತ್ಮನೊಂದಿಗೆ ಜೀವಿಸುತ್ತೇನೆ. ಜೀವಾತ್ಮಗಳನ್ನು ಈ ಲೀಲಾನಾಟಕದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಹತ್ತಿರ ಬಿಟ್ಟುಕೊಡು ಎಂದು ಅವನಲ್ಲೇ ಪ್ರಾರ್ಥಿಸುತ್ತೇನೆ.
ಜೀವನ ಎಷ್ಟು ಸುಂದರ ಎಂದರೆ ನನಗೆ ಏನೇನು ಬೇಕೊ ಎಲ್ಲವೂ ಸಿದ್ದವಾಗಿರುತ್ತದೆ. ನನಗೆ ಯಾರೂ ಮದುವೆ ಮಾಡುತ್ತಿಲ್ಲ, ಈ ಗಂಡಸರ ಕಾಟದಿಂದ ಬಿಡುಗಡೆ ಹೊಂದಲು ಅದೊಂದೇ ದಾರಿ ಎನಿಸಿದಾಗ ನನಗೆ ಹುಡುಕಿದರೂ ಸಿಗದ ಸಂಗಾತಿಯನ್ನು ದೊರಕಿಸಿಕೊಟ್ಟ. ಆತ ಸಿಕ್ಕಿದ ಮೇಲೆ ನಾನು ತತ್ತ್ವಜ್ಞಾನದಲ್ಲಿ ಪದವಿ ಓದಿದೆ. ಆಗಲೇ ಶಂಕರ, ಮಧ್ವ ಹಾಗೂ ರಾಮಾನುಜರ ತತ್ತ್ವಗಳನ್ನು ಆಚರಣೆಯಲ್ಲಿ ತರುವಂತೆ ಭಗವಂತ ನನ್ನನ್ನು ತಿದ್ದಿ ತೀಡಿದ ಎಂದು ತಿಳಿಯಲ್ಪಟ್ಟೆ. ಆ ಖುಷಿಗೆ ನನ್ನ ಅಧ್ಯಾತ್ಮ ಸಾಧನೆ ಇನ್ನೂ ಹೆಚ್ಚಾಯಿತು. ಜೊತೆಗೆ ನನ್ನ ಭವ ಬಂಧನಗಳನ್ನು ಬಿಡಿಸಿಕೊಳ್ಳಲು ದೇವತಾರಾಧನೆಯೂ ಹೆಚ್ಚಾಯಿತು. ಆ ನಂತರದ ಹತ್ತು ವರ್ಷಗಳು ಬರೆದರೆ 10 -20 ಕಾದಂಬರಿಯಾಗುವಷ್ಟು ಅನುಭವ ನೀಡಿದವು.
ಪತಿಯ ಬಗ್ಗೆ ಇರುವ ನನ್ನ ಅಷ್ಟೂ ಕನಸುಗಳೂ ಈಡೇರಿದವು, ಒಂದನ್ನು ಬಿಟ್ಟು. ಆತ ನನಗೆ ತಂದೆಯಾಗಿ ಕಾಲೇಜು ಫೀಸು ಕಟ್ಟುವುದರಿಂದ ಪರೀಕ್ಷೆಗೆ ದಿನಾಲೂ ಕರೆದುಕೊಂಡು ಹೋಗಿಬಂದ. ಗೆಳೆಯನಾಗಿ ನನ್ನ ಪ್ರತಿ ಜರೂರತ್ತುಗಳಿಗೆ ನನ್ನೊಂದಿಗಿದ್ದ, ಇದ್ದಾನೆ. ನನ್ನ ಮೊದಲ ಮಗುವೂ ಆತನೇ ಆಗಿದ್ದಾನೆ. ನನ್ನ ಭಯಂಕರ ಸಿಟ್ಟು, ಅಹಂಕಾರಗಳನ್ನು ಭರಿಸುವ ಶಕ್ತಿ ಅವನಿಗಿದೆ. ನಾನು ಯಾವ ದೈವಿಕ ವ್ಯಕ್ತಿತ್ವವನ್ನು ಅಪೇಕ್ಷಿಸಿದ್ದೆನೋ ಅದಕ್ಕಿಂತ ಹೆಚ್ಚು ದೈವೀಗುಣಗಳು ನನ್ನ ಸಂಗಾತಿಯಲ್ಲಿವೆ. ನಾನು ತಾಯಿಯಾದರೆ ಯಶೋದೆ, ದೇವಕಿ, ಕೌಸಲ್ಯೆ, ಅನಸೂಯೆ, ಸುಮತಿ, ಕಯಾದುವಿನಂತೆ ಆಗಬೇಕು. ಬರುವುದಾದರೆ ದೇವಶಿಶುವೇ ನನ್ನ ಮಡಿಲು ತುಂಬಬೇಕು ಎಂಬುದು ನನ್ನ ಕನಸು, ಆಸೆ. ಅದನ್ನು ಈಡೇರಿಸುವ ಸಾಮರ್ಥ್ಯ ನನ್ನ ಪತಿಯಲ್ಲಿದೆ. ಇದಕ್ಕಿಂತ ಹೆಚ್ಚಿಗೆ ಹೇಳಲಾರೆ. (ಈ ವಿಷಯಗಳ ಮುಂದೆ ಅವ ಯಾವ ಕೆಲಸದಲ್ಲಿದ್ದಾನೆ, ಎಷ್ಟು ಸಂಬಳ ಬರುತ್ತದೆ, ಅವನ ಹೆಸರೇನು, ಎಲ್ಲಿಯವ, ಯಾವ ಜಾತಿಯವ, ಅಪ್ಪ, ಅಮ್ಮ ಏನು ಮಾಡುತ್ತಾರೆ ಇದೆಲ್ಲ ನನಗೆ ನಗಣ್ಯ. ನನ್ನ ಮಗು ಡಾಕ್ಟರೋ ಇಂಜಿನಿಯರೋ ಆಗಿ ಸಿಕ್ಕಾಪಟ್ಟೆ ದುಡ್ಡು ಸಂಪಾದಿಸಿ, ನನ್ನ ಕೊನೆಕಾಲದಲ್ಲಿ ನೋಡಿಕೊಳ್ಳಲಿ ಎಂಬ ಆಸೆಗಳೂ ಇಲ್ಲ. ಹಾಗಾಗಿ ಈ ವಿಷಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವ ಇಚ್ಚೆ ಇಲ್ಲ. ಕುತೂಹಲಿಗಳು ಪತ್ತೆ ಹಚ್ಚಿ ತಿಳಿದುಕೊಳ್ಳಬಹುದು, ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ)
ಮದುವೆಗೆ ಯಾರನ್ನೂ ಕರೆದಿಲ್ಲ ಎಂದು ಸಿಟ್ಟುಮಾಡಿಕೊಳ್ಳಬೇಡಿ. 9ನೇ ತರಗತಿಯಲ್ಲಿದ್ದಾಗ ನನ್ನ ಅಕ್ಕನ ಮದುವೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಂದು ಬಿಸಾಡಿದ ಊಟದ ಎಲೆಯ ಮೇಲಿರುವ ಅನ್ನಕ್ಕೆ ಭಿಕ್ಷುಕ ಮಕ್ಕಳು ನಾಯಿಗಳೊಂದಿಗೆ ಗಲಾಟೆ ಮಾಡಿದ್ದು ನನಗೆ ಮರೆಯುವುದೇ ಇಲ್ಲ. ಅಂದೇ ತೀರ್ಮಾನಿಸಿದ್ದೆ, ನನ್ನ ಮದುವೆಯಾದರೆ ಅತೀ ಸರಳವಾಗಿ ಆಗಿ ಇಂತಹ ಬಡಬಗ್ಗರಿಗೆ ಊಟ ಹಾಕುತ್ತೇನೆ ಎಂದು. ನನ್ನ ತಮ್ಮನ ಉಪನಯನ, ತಂಗಿಯ ಮದುವೆಯನ್ನು ಬಹಳ ಕಷ್ಟದಲ್ಲಿ ಮಾಡಿದೆವು. ಆಗ ತೀರ ಹತ್ತಿರದವರೆಂದು ನಂಬಿದ ನೆಂಟರೇ ಚೆಂದ ನೋಡಿದ್ದು ಮನಸ್ಸಿಗೆ ಇನ್ನಷ್ಟು ಘಾಸಿಯಾಯಿತು. ಬಡವರಾಗಿದ್ದರೂ ಶ್ರೀಮಂತರಂತೆ ಖುಷಿಯಿಂದ, ಹೆಮ್ಮೆಯಿಂದ ಬದುಕುವವರ ಮನೆಯಲ್ಲಿ ಮದುವೆಗೆ ಜನ ಚೆಂದ ನೋಡಲು ಬರುತ್ತಾರೆಯೇ ಹೊರತು ಹರಸಲಲ್ಲ ಎಂಬ ಅರಿವಾಯಿತು. ಹಾಗಾಗಿ ತಂದೆ-ತಾಯಿ ಕೊನೆಗೆ ಯಾರೆಂದರೆ ಯಾರಿಗೂ ತೊಂದರೆಯಾಗದಂತೆ ಎರಡು ವರ್ಷಗಳ ಹಿಂದೆ ನನ್ನ ಮದುವೆ ನನ್ನಿಚ್ಚೆಯಂತೆ ನಡೆಯಿತು. ಇಷ್ಟಕ್ಕೂ ಇವ ನನ್ನ ಗಂಡ, ನಾನು ಫ್ರೀಯಾಗಿಲ್ಲ , ನಾನು ಭದ್ರವಾಗಿದ್ದೇನೆ ಎಂದು ಹೇಳಿಕೊಳ್ಳುವ ಆಸೆ ಮೊದಲಿನಿಂದಲೂ ಇರಲಿಲ್ಲ. ತಾಳಿ, ಕಾಲುಂಗುರದ ಆಸೆ ಇತ್ತು, ಅದು ನೆರವೇರಿದೆ. :) 

ಸೋಮವಾರ, ಏಪ್ರಿಲ್ 6, 2015

ನಾನೇಕೆ ನಟಿಯೋ, ನಿರೂಪಕಿಯೋ ಆಗಲಿಲ್ಲ?

                ಇದು ಫೇಸ್ಬುಕ್ ನ ನನ್ನ ಫೋಟೊ ನೋಡಿ ಕೆಲವರಿಗಾದರೂ ಉದ್ಭವವಾಗಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದು 10 ವರ್ಷಗಳ ಹಿಂದೆ. ಅಂದು ಮಾಧ್ಯಮಕ್ಕೆ ಬರುವಾಗ ಒಂದು ಫೋಟೊ ಹಿಡಿದುಕೊಂಡು ಸುಧಕ್ಕನ ಬಳಿ ಹೋಗಿದ್ದೆ. ಈ ಟಿ.ವಿಯಲ್ಲಿ ಆ್ಯಂಕರ್ ಆಗುವುದಕ್ಕೆ. ಆ ಫೋಟೊ ಇವತ್ತಿಲ್ಲ. ಅದನ್ನು ನೋಡಿ ಬಿಟ್ಟರೆ ಸಾಕು, ಯಾರೂ ನನ್ನನ್ನು ಆ್ಯಂಕರ್ ಮಾಡಲು ಸಾಧ್ಯವಿರಲಿಲ್ಲ. ಅಷ್ಟು ಕೆಟ್ಟದಾದ ಫೋಟೊ. ಯಾಕೆಂದರೆ ಶುದ್ಧ ಹಳ್ಳಿಯಿಂದ, ಅತೀ ಬಡತನ, ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಿನ್ನೆಲೆಯಿಂದ ಬಂದ ನನಗೆ ಆ್ಯಂಕರ್ ಆಗಬೇಕೆಂಬ ಹುಚ್ಚು ಬಂದಿದ್ದಾದರೂ ಹೇಗೆ? ಹುಚ್ಚೇನಲ್ಲ, ಅನಿವಾರ್ಯತೆ. ಆ ಹೊತ್ತಿಗೆ ನನಗೆ ಹೆಚ್ಚು ಸಂಬಳ ತರುವ ಕೆಲಸವೊಂದು ಬೇಕಿತ್ತು. ಬಿ.ಪಿ.ಓನಲ್ಲಿ ಅರ್ಧ ಸಂಬಳ ಕೊಟ್ಟು ಮೋಸ ಮಾಡಿದ್ದರು. ನನ್ನ ಜವಾಬ್ದಾರಿಗೆ ಅದು ಸಾಲುತ್ತಿರಲಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಎಸ್.ಎಸ್.ಎಲ್.ಸಿ ಮೇಲೆ ಪಿಯುಸಿ ಮಾಡಿ, ಆ ನಂತರ ಡಿಪ್ಲೋಮಾ ಓದಿದ್ದರೆ ಮಾತ್ರ ಎಂದು ಕೆಲಸಕ್ಕೆ ಸೇರುವ ದಿನ ಹೇಳಿದ್ದರು. ವಿವಿಧ ಜವಾಬ್ದಾರಿಗಳು, ನಿರೀಕ್ಷೆಗಳ ಭಾರದ ನಡುವೆ ಐಟಿಪಿಎಲ್ ನ ಹೊರ ಅಂಗಳದಲ್ಲಿ ನಿರಾಸೆಯಿಂದ ಬಂದು ನಿಂತಾಗ ಮೊಟ್ಟಮೊದಲ ಬಾರಿಗೆ ಸ್ವಪ್ರಯತ್ನದ ಬದಲು ಒಮ್ಮೆ ದೇವರ ಕೈಯಲ್ಲಿ ಕೆಲಸದ ಜವಾಬ್ದಾರಿ ಕೊಟ್ಟು ನೋಡಬೇಕು ಅನಿಸಿತು. ಹಾಗೆ ನಾನು ಪ್ರತಿ ಸಾಧ್ಯತೆಯೆಡೆ ಯೋಚಿಸಿ ದೇವರ ಮೇಲೆ ಭಾರ ಹಾಕಿ ಕೆಲಸದ ಹುಡುಕಾಟ ಆರಂಭಿಸಿದ್ದೆ. ನಿಜವಾಗಿಯೂ ನಾನು ಎಂದೆಂದಿಗೂ ನೆನೆಯುವ ವ್ಯಕ್ತಿ ಸುಧಕ್ಕ, ಶಬ್ಧಗಳನ್ನು ಮೀರಿದ ಕೃತಜ್ಞತೆ ಸುಧಕ್ಕಂಗೆ. ಅವಳು ಅಂದು ಹೀಗೆ ಈ ಟಿ.ವಿದೇನೋ ನಂಗೊತ್ತಿಲ್ಲ. ಅಲ್ಲಿ ನೀನು ನಿರೀಕ್ಷಿಸುವ ಸಂಬಳ ಇದ್ದಂತಿಲ್ಲ ಎಂದು ಹೇಳಿ, ಯೋಚಿಸಿ, ಹೀಗೊಬ್ಬರು ನನ್ನತ್ರ ಅಸಿಸ್ಟೆಂಟ್ ಬೇಕು ಹೇಳ್ತಿದ್ರು ಎಂದು ಶಶಿಧರ್ ಭಟ್ಟರ ನಂಬರ್ ಕೊಟ್ಟು, ಅವರಿಗೊಂದು ಫೋನ್ ಮಾಡಿ ನೋಡಿ, ಹೀಗೊಬ್ಬರನ್ನು ಕಳಿಸುತ್ತಿದ್ದೇನೆ. ನಿಮಗೆ ಸೂಕ್ತವಾಗಿದ್ದರೆ ಕೆಲಸಕ್ಕೆ ತೆಗೆದುಕೊಳ್ಳಬಹುದೆಂದಿದ್ದರು. ಅದಾದ ಮೇಲೆ ನಾನು ಮಾಧ್ಯಮಕ್ಕೆ ಬಂದೆ. ಅಲ್ಲಿಯೇ ನನಗೆ ಮಾಧ್ಯಮದ ಎ, ಬಿ, ಸಿ, ಡಿ ತಿಳಿಯಿತು. ಮಾಧ್ಯಮ ಕ್ಷೇತ್ರ ನನ್ನದಾಯಿತು.
ನಂತರ ಆ್ಯಂಕರ್ ಆಗುವ ಆಲೋಚನೆ ಇರಲಿಲ್ಲ. ಅದರ ಅವಶ್ಯಕತೆಯೂ ನನಗಿರಲಿಲ್ಲ. ಹಾಗಾಗಿ ಅಲ್ಲಿಗೇ ಬಿಟ್ಟೆ. 2009ರಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವಾಗ ಶ್ರೀ ಹೇಳಿಕೆಯ ಮೇಲೆ ಆ್ಯಂಕರಿಂಗ್ ಮಾಡಿದ್ದೆ. ಅದೂ ಇದೇ ಪ್ರೊಫೈಲ್ ಸೀರೆಯ ಮೇಲೆ, ದಿನವೆಲ್ಲ ಸುತ್ತಾಡಿ ಆ ಸಂಚಿಕೆಯ ಶೂಟಿಂಗ್ ಮಾಡಿದಾಗ ಬಸವಳಿದು, ಬಾಡಿ ಹೋಗಿದ್ದೆ. ಆದ್ರೂ ಕೆಲಸ ಮಾಡುವವನಿಗೆ ಯಾವುದಾದರೇನು ಎಂದು ಇದ್ದ ಬದ್ದ ಶಕ್ತಿ ಹಾಕಿ, ಒಲ್ಲದ ಮನಸ್ಸಿನಿಂದ ಆ್ಯಂಕರಿಂಗ್ ಮಾಡಿದ್ದೆ. ಮುಂದೊಮ್ಮೆ ನಾನೂ ಆ್ಯಂಕರಿಂಗ್ ಮಾಡುತ್ತೇನೆ ಎಂದಾಗ ನಿನಗೆ ಟಿ.ಆರ್.ಪಿ ಇಲ್ಲವೆಂಬ ಮಾತು ಕೇಳಿಬಂದಿತ್ತು.
            ಇದೇ ವೇಳೆ `ಸಮಯ' ವಾಹಿನಿಯಲ್ಲಿ ಸೇರಲು ಸಂದರ್ಶನಕ್ಕೆ ಹೋಗಿದ್ದೆ. ಆಗ ಪ್ರಕಾಶ್ ಬೆಳವಾಡಿ ಇದ್ದರು. ಅವರು ನೀನು ಪ್ರೊಡಕ್ಷನ್ ಗಿಂತಲೂ ಆ್ಯಂಕರಿಂಗ್ ಗೆ ಸೂಟ್ ಆಗುತ್ತಿ. ನಿನ್ನ ಭಾಷೆ, ಆಂಗಿಕ ಭಾಷೆ ಮತ್ತು ಮುಖ ಚಲನೆ ಅದಕ್ಕೆ ಸೂಕ್ತವಾಗಿದೆ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ನನ್ನನ್ನು ಕೆಲಸಕ್ಕೆ ಕರೆಯುವ ಮೊದಲೇ ಅವರು ಕೆಲಸ ಬಿಟ್ಟಾಗಿತ್ತು!
             ಇನ್ನು ಧ್ವನಿ ನೀಡುವ ಅವಕಾಶ `ಭಾನಾಮತಿ'ಯಲ್ಲಿ ಬಂದಿತ್ತು. ಆಗ ನಾನದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನಾನು ಆಸಕ್ತಿ ತೋರಿದಾಗ ಸಂಬಂಧಿಸಿದ ಜನರಿಗೆ ನನ್ನ ಧ್ವನಿ ಇಷ್ಟವಾಗಲಿಲ್ಲ. `ಇದು ಯಾರು ಬರೆದ ಕಥೆಯೋ' ಮುಗಿದ ಮೇಲೆ ಖಿನ್ನತೆಯಿಂದ ಬಳಲುತ್ತಿದ್ದಾಗ ಜನರಲ್ಲಿ ಬೆರೆತು ಸರಿಯಾಗಬಹುದೆಂದು ಸಂಬಂಧಪಟ್ಟವರನ್ನು ರಿಪೋರ್ಟಿಂಗ್ ಗೆ ಕಳಿಸಲು ಕೋರಿಕೊಂಡೆ. ಯಥಾಪ್ರಕಾರ `ಇಲ್ಲ' ಎನ್ನುವ ಉತ್ತರ ಬಂತು. ಹಾಗೇ ಒಂದೆಡೆ ಕೂತು ಕೆಲಸ ಮಾಡಲು ಸಾಧ್ಯವೇ ಇಲ್ಲದಾಗ ಎಲ್ಲಾದರೂ ಧಾರಾವಾಹಿಗೆ ನಟಿಸೋಣ ಎಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ.
             ಹೈಸ್ಕೂಲಿನಲ್ಲಿ ಚಂದ್ರಶೇಖರ್ ಕಂಬಾರರ ನಾಟಕ `ಬೆಪ್ಪು ತಕ್ಕಡಿ ಬೋಳೇ ಶಂಕರ' ಆಡಿದ್ದೆವು. ಅದರಲ್ಲಿ ಅಂತಹ ಮುಖ್ಯ ಸ್ತ್ರೀ ಪಾತ್ರವಿರದಿದ್ದರಿಂದಲೂ, ಹಿನ್ನೆಲೆ ಸಂಗೀತಕ್ಕೆ ಅವಶ್ಯಕತೆ ಇದ್ದಿದ್ದರಿಂದಲೂ ನಾನು ಪಾತ್ರ ವಹಿಸದೆ ಹಿನ್ನೆಲೆ ಹೇಳಿದೆ. ಶಿರಸಿ ತಾಲೂಕು ಗೋಳಿ ನಾಟಕ ಮಂದಿರದ ಉದ್ಘಾಟನೆ ನನ್ನ ನೃತ್ಯದೊಂದಿಗೇ ಆಗಿತ್ತು. ಆದರೆ ಅದರ ಒಂದು ನಾಟಕದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು.
           ಬಹುಷಃ ನನ್ನ ಆಧ್ಯಾತ್ಮಿಕ ಜೀವನಕ್ಕೆ, ನಾನು ಇಟ್ಟುಕೊಂಡ ಮೌಲ್ಯ, ಆದರ್ಶಗಳಿಗೆ ಚ್ಯುತಿ ಬಂದುಬಿಡಬಹುದೆಂಬ ಕಾಳಜಿ ನನ್ನ ತಾಯಿ, ತಂದೆ ಎರಡೂ ಆಗಿರುವ ದೇವರಿಗೆ. ಆದ್ದರಿಂದಲೇ ನನಗೆ ಆ ಬಗ್ಗೆ ಗಂಭೀರ ಆಸಕ್ತಿ ಮೂಡಿಲ್ಲ ಎಂದುಕೊಳ್ಳುತ್ತೇನೆ. ಗಂಭೀರ ಆಸಕ್ತಿ ಇದ್ದರೆ ಮಾತ್ರ ಪ್ರೊಫೈಲ್ ಶೂಟ್ ಮಾಡಿ, ಹೇಗೆ ಅಭಿವ್ಯಕ್ತಿಸಬೇಕೆಂಬ ಎಲ್ಲ ಆಲೋಚನೆ ಬರಲು ಸಾಧ್ಯ. ಇಷ್ಟಕ್ಕೂ ನಾನು ಇಷ್ಟಪಡದ ವೃತ್ತಿಯೇನಾದರೂ ಇದ್ದರೆ ಅದು ನಟನೆ ಮತ್ತು ರಾಜಕೀಯವೇ ಸರಿ. ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತ, ಒಪ್ಪಿಕೊಳ್ಳೂತ್ತ, ನಮ್ಮತನವನ್ನೇ ಕಳಚಿಕೊಳ್ಳುತ್ತ ಹೋಗಬೇಕಾದ ವೃತ್ತಿ ಅವು. ಅವಕ್ಕೂ ನನಗೂ ಎಣ್ಣೆ, ಸೀಗೆಕಾಯಿ ಸಂಬಂಧವಾಗುತ್ತದೆಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಗ ಅವಕಾಶ ಸಿಕ್ಕರೂ ನನ್ನ ಕೆಲಸ ಮುಗಿದ ಹೊರತು ಸಾಧ್ಯವೇ ಇಲ್ಲ. ಇಷ್ಟಕ್ಕೂ ಊಟಕ್ಕಿಲ್ಲದ ಉಪ್ಪಿನಕಾಯಿ ಆಮೇಲೆ ಬಂದರೆ ಏನು ಪ್ರಯೋಜನ?