ಬುಧವಾರ, ಸೆಪ್ಟೆಂಬರ್ 18, 2013

ನಾನೂ...ನನ್ನ ಇಂಗ್ಲಿಷ್...

ನಾನೂ...ನನ್ನ  ಇಂಗ್ಲಿಷ್...

ಬಹುಷಃ ಇಂಗ್ಲಿಷ್ ಭಾಷೆಗೆ ಮೊದಲು ನಾನು ಪರಿಚಿತಳಾಗಿದ್ದು 5ನೇ ತರಗತಿಯಲ್ಲಿ. ಎ, ಬಿ, ಸಿ. ಡಿ ಕಲಿಯುವ ಹೊತ್ತಿಗೆ ನನಗೆ ಭಾಷೆಯನ್ನು ಮೀರಿದ ಯಾವುದೋ ವಿಷಯದ ಹಪಹಪಿಕೆ ಶುರುವಾಗಿತ್ತು. ನಾನು ಯಾರು? ಏಕೆ ಬಂದಿದ್ದೇನೆ? ಮನೆಯಲ್ಲಿ ಗೌರಜ್ಜಿಯ ಮಡಿ-ಹುಡಿಗಳಿಗೆ ಏನರ್ಥ? ಯಾಕೆ ಯಾಕೆ ಯಾಕೆ ಎನ್ನುವ ಪ್ರಶ್ನೆಗಳ ಗೂಡಾಗಿದ್ದ ನನ್ನ ತಲೆಗೆ ಒಂದು ಚೂರು ಪೇಪರ್ ಹಾಳೆಯೂ ಭಾರೀ ಆಸೆಯನ್ನು ಹುಟ್ಟಿಸುತ್ತಿತ್ತು. ಅದೇ ಕಾರಣಕ್ಕೆ ಹಣ್ಣು ಸುತ್ತಿಕೊಟ್ಟ ನ್ಯೂಸ್ ಪೇಪರ್ ಹಾಳೆಯಿಂದ ಹಿಡಿದು ಅಮ್ಮ ಕೊಡಿಸುವ  ಒಂದು ಪುಸ್ತಕ ಮುಗಿದು ದತ್ತಾತ್ರೆಯ ಬುಕ್ ಸ್ಟಾಲ್ ನಲ್ಲಿ ಕಾಣುವ ಚಂದಮಾಮ, ಬಾಲಮಿತ್ರಗಳನ್ನೂ ಮುಗಿಸಿ ದೊಡ್ಡವರ ಪುಸ್ತಕಗಳಾಗಿದ್ದ ಸುಧಾ, ತರಂಗಗಳೂ ಮುಗಿದಿರುತ್ತಿದ್ದವು. 

ಅದೇ ಹೊತ್ತಿಗೆ ಅಜ್ಜಿಯ  ಊರಿಗೆ ಶಿಫ್ಟಾಗಿದ್ದು ಇನ್ನೊಂದು ರೀತಿಯಲ್ಲಿ ವರವಾಗಿತ್ತು. ಅಲ್ಲಿ ಅತ್ಯಂತ ಧಾರ್ಮಿಕ ವಾತಾವರಣವಿತ್ತು. ಹಗಲಲ್ಲಿ ಆಟ-ಪಾಠ, ಓದಿನ ಜೊತೆಗೆ ಪೂಜೆ, ಪುನಸ್ಕಾರಗಳು, ಭಜನೆಯಂತಹ ಧಾರ್ಮಿಕ ಚಟುವಟಿಕೆಗಳು, ಮನೆಕೆಲಸದಲ್ಲಿ ಸಹಭಾಗಿತ್ವ ಹೀಗೆ ನನ್ನೊಳಗೆ ನಾನು ಕಾಣುತ್ತ ಹೋಗತೊಡಗಲು ಸಾಕಷ್ಟು ಸಾಧ್ಯತೆಗಳು ಒದಗಿದವು. ರಾತ್ರಿಯಾದರೆ ಪಕ್ಕದ ಮನೆಯ ಶಾರದಜ್ಜಿಯ ಮಹಾಭಾರತದ 52 ಸಂಪುಟಗಳ ಪುಸ್ತಕ ನನ್ನದಾಗಿತ್ತು. ಹಗಲಲ್ಲಿ ಆಕೆ ಓದಿದರೆ ರಾತ್ರಿ ನಾನು ಓದುತ್ತಿದ್ದೆ. ಕದ್ದು ಓದುತ್ತಿದ್ದವಳನ್ನು ಶಾರದಜ್ಜಿ ಹಿಡಿದು ರಾಜಾರೋಷವಾಗಿ ಓದಲು ಅನುಕೂಲ ಮಾಡಿಕೊಟ್ಟಿದ್ದು ನನ್ನ ಸೌಭಾಗ್ಯಗಳಲ್ಲೊಂದಾಗಿತ್ತು. ಬಹುಷಃ ಆಗ ನನಗೆ 11 ವರ್ಷ ವಯಸ್ಸು. 

ಈ ರೀತಿ ಮಹಾಭಾರತದ  ಒಳಗಿನ ಆಳ, ಅರಿವು ಅರ್ಧ ಅರ್ಥವಾಗುತ್ತಿದ್ದ ಕಾಲದಲ್ಲಿ ತಲೆಗೆ ಹೊಕ್ಕ  ಇನ್ನೊಂದು ವಿಷಯ `ಪ್ರೇಮ'. ಅದಕ್ಕಾಗಿ ನಾನು ತಡಕಾಡಿದ ಪುಸ್ತಕಗಳೇ ಇಲ್ಲವೆನ್ನಬಹುದು. ಮಹಾಭಾರತ, ರಾಮಾಯಣ, ಭಾಗವತ, ತರಂಗದಲ್ಲಿ, ಕರ್ಮವೀರದಲ್ಲಿ ಬರುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರುಗಳ ಲೇಖನಗಳು, ಆ ಕುರಿತು ದೊಡ್ಡವರು ನಡೆಸುತ್ತಿದ್ದ ಚರ್ಚೆಗಳು, ಸಾಮಾಜಿಕ ಧಾರಾವಾಹಿಗಳು ಹಾಗೂ ನನ್ನದೇ ರೀತಿಯಲ್ಲಿ ಆರಂಭಿಸಿದ್ದ ಪ್ರೇಮ ಮತ್ತು ಅಧ್ಯಾತ್ಮದ ಬಗೆಗಿನ ಪ್ರಯೋಗಗಳು ನನಗೆ ಭಾಷೆಯ ಬಗ್ಗೆ ಒಲವನ್ನು ಮೂಡಿಸಲೇ ಇಲ್ಲ. ನನಗೆ ಭಾಷೆ, ಲಿಂಗ, ಜಾತಿ, ಧಾರ್ಮಿಕ  ಆಚರಣೆಗಳು, ಹಣ, ರ್ಯಾಂಕು, ಡಿಗ್ರಿ, ಹುದ್ದೆ ಇವೆಲ್ಲವಕ್ಕಿಂತ ಬೇರೆ ಏನೋ ಇದೆ ಮತ್ತು ಅದನ್ನು ನಾನು ಕಾಣಬೇಕಿದೆ ಎಂಬುದೇ ದೊಡ್ಡ ತಪನೆಯಾಗಿತ್ತು. ಇಂದಿಗೂ  ಈ ಕ್ಷಣಕ್ಕೂ ನನಗೆ ಈ ಸತ್ಯದ ಅನ್ವೇಷಣೆಯೇ ಮುಖ್ಯವಾಗಿದ್ದು, ಭಾಷೆ ಮುಖ್ಯವಾಗಿಯೇ ಇಲ್ಲ.

ಆದರೆ ಈ ಮಧ್ಯೆ ಒಂದೆರಡು ಘಟನೆಗಳನ್ನು ಹೇಳಬೇಕು. ಅವು ನನಗೆ ನನ್ನ ದೇಶ, ನನ್ನ ಹಿಂದೂವಾದ, ಸಂಸ್ಕೃತಿಯ ಕುರಿತಾದದ್ದು. ನಮ್ಮ ಮನೆಯಲ್ಲಿ ಇಂದಿಗೂ ಇಂಗ್ಲಿಷ್ ಭಾಷೆ ಬಲ್ಲವರೆಂದರೆ ಏನೋ ಗೌರವ. ಆ ಸಂಸ್ಕೃತಿ ಎಂದರೆ ಏನೋ ಮೋಹ. ಅದನ್ನು ಅನುಸರಿಸಲು ನನಗೆ ಸಾಕಷ್ಟು ಅವಕಾಶಗಳು, ಪ್ರೋತ್ಸಾಹ  ಎರಡೂ ಹೇರಳವಾಗಿದ್ದವು. ಶಾಲೆಯಲ್ಲಿ ಇಂಗ್ಲಿಷ್ನಲ್ಲಿ ಎಷ್ಟು ಅಂಕ ಪಡೆದಿದ್ದಾಳೆ ಎನ್ನುವುದು ಗಣಿತ, ವಿಜ್ಞಾನಗಳಲ್ಲಿ ಎಷ್ಟು ಅಂಕ ಪಡೆದಿದ್ದೀನಿ ಎನ್ನುವುದಕ್ಕಿಂತ ಹೆಚ್ಚು ಮಹತ್ವ ಪಡೆಯುತ್ತಿತ್ತು. ಆದರೆ ಆ ವೇಳೆಗಾಗಲೇ ಭಾರತೀಯ ಪುರಾಣಗಳು, ತತ್ತ್ವಶಾಸ್ತ್ರಗಳ ಮೋಹಕ್ಕೆ ಬಿದ್ದಿದ್ದ ನನ್ನ ಮನಸ್ಸು ಅವರನ್ನು ದ್ವೇಷಿಸತೊಡಗಿತ್ತು. ಆಂಗ್ಲಭಾಷೆಗಿಂತ ಅದರೊಳಗೆ ಬೇರೇನಾದರೂ ತಿರುಳು ಇರಬಹುದೆಂಬ ಹುಡುಕಾಟ ನನಗೆ ಮುಖ್ಯವಾಗತೊಡಗಿತ್ತು. ಹೈಸ್ಕೂಲ್ಗೆ ಬಂದಾಗಲೂ ನನ್ನ ಗಮನ  ಆಂಗ್ಲಭಾಷೆಯ ಕಲಿಕೆಗಿಂತ ಅದರ ಮೂಲಕ ಪಾಶ್ಚಾತ್ಯ ಸಂಸ್ಕೃತಿ, ಆಚಾರ, ವಿಚಾರಗಳು ಏನು? ಅಧ್ಯಾತ್ಮದ ಬಗ್ಗೆ ಅವರ ಕಲ್ಪನೆ ಏನು? ಪ್ರೇಮದ ಬಗ್ಗೆ ಅವರು ಏನು ಹೇಳುತ್ಥಾರೆ ಎನ್ನುವುದೇ ಮುಖ್ಯವಾಗಿತ್ತು. 

ಆ ವೇಳೆಗೆ ಶೇಕ್ಸ್ಪಿಯರ್ ಎನ್ನುವ  ಒಬ್ಬ ಮಹಾನ್ ಕವಿ ಆಂಗ್ಲಭಾಷೆಯಲ್ಲಿದ್ದಾನೆ,  ನಮ್ಮಲ್ಲಿಯ ಕಾಳಿದಾಸನನ್ನು ಅಭಿನವ ಶೇಕ್ಸ್ ಪಿಯರ್ನೆಂದು ಕರೆಯುತ್ತಾರೆ ಎಂದು ತಿಳಿಯಿತು. ಪ್ರಥಮ ಭಾಷೆ ಸಂಸ್ಕೃತವಾಗಿದ್ದ ಕಾರಣ ಕಾಳಿದಾಸನ ಕುಮಾರಸಂಭವ, ಮೇಘದೂತದಂತಹ ಕಾವ್ಯಗಳ ಕೆಲವು ಸಂದರ್ಭಗಳು ಪಾಠದ ಮೂಲಕ ಅರ್ಥವಾದವು. ಪರಿಚಯವಾದವು.  ಮುಂದೆ ಶೇಕ್ಸ್ಪಿಯರ್ ನ ಕಾಲಾವಧಿ (ಕ್ರಿ.ಶ1518) ಮತ್ತು ಕಾಳಿದಾಸನ ಕಾಲಾವಧಿ (5ನೇ ಶತಮಾನ)ಗಳ ತಿಳುವಳಿಕೆ ಬಂದಾಗ ಈ ಆಂಗ್ಲ ಭಾಷೆಯ  ವ್ಯಾಮೋಹ ವೈಚಾರಿಕ ದಾರಿದ್ರ್ಯದ ಒಂದು ಮುಖವೆಂದು ಅರಿವಾಗಿತ್ತು. ಅಲ್ಲಿಂದ ನನಗೆ ಇಂಗ್ಲಿಷ್ ಭಾಷೆಯನ್ನು ಕಲಿಯುವ  ಎನ್ನುವುದಕ್ಕಿಂತಲೂ ಅನುಸರಿಸುವ, ಬಳಸುವ ಅಲ್ಪಸ್ವಲ್ಪ  ಇರಾದೆಯೂ ಹೊರಟುಹೋಗಿದೆ. 

ಮುಂದೆ ಡಿಪ್ಲೊಮಾ ಓದಲು ಬೆಂಗಳೂರಿಗೆ ಬಂದಾಗ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಆಂಗ್ಲ ಮಾಧ್ಯಮದಲ್ಲಿ ಓದಿದ ನನ್ನ ಕೆಲವು ಸಹಪಾಠಿಗಳಿಗೆ  ಇಂಗ್ಲಿಷ್ ವ್ಯಾಕರಣ ಹೇಳಿಕೊಟ್ಟಾಗಲೇ ಗೊತ್ತಾಗಿದ್ದು ಓಹೋ ಓದಿನಿಂದ ವ್ಯಾಕರಣವೂ ಬೆಳೆಯುತ್ತದೆ, (ಅದು ನನಗೆ ಇದೆ), ಜೊತೆಗೆ ಇಂಗ್ಲಿಷ್ ಸಾಹಿತ್ಯ  ಓದಿನ ಕೊರತೆಯಿಂದಾಗಿ ಶಬ್ಧ ಭಂಡಾರ ಶಕ್ತಿಹೀನವಾಗಿದೆ ಎಂದು. ಆದರೆ ನನ್ನ ಹಾಸ್ಟೆಲ್ ಅಕ್ಕಂದಿರು ಓದುತ್ತಿದ್ದ ಶಿಡ್ನಿ ಶೆಲ್ಡನ್, ಶೆರ್ಲಾಕ್ ಹೋಂ ಕಾದಂಬರಿಗಳಾಗಲಿ, ಮಿಲ್ಸ್ ಎಂಡ್ ಬೂನ್ಸ್ ಎಂಬ ಪ್ರಣಯಭರಿತ ಕಾದಂಬರಿ ವಾಹಿನಿಗಳಾಗಲೀ ನನ್ನ ಹೃದಯ ಗೆಲ್ಲಲು ಸಂಪೂರ್ಣ ವಿಫಲವಾದವು. ಆಂಗ್ಲರ ನಡೆನುಡಿಗಳಲ್ಲಿ ಅತ್ಯಂತ ಐಹಿಕ ಬದುಕನ್ನು ಕಂಡ ನನಗೆ ಅವುಗಳ ಬಗ್ಗೆ ಸಣ್ಣದಾಗಿ ತಿರಸ್ಕಾರವೂ ಮೂಡತೊಡಗಿತು. 

ಮುಂದೆ ಎಡ್ಗರ್ ಕೈಸಿಯ ಮೆನಿ ಮ್ಯಾನ್ಷನ್ ಓದಿದಾಗ ಕೈಸಿ ತಾನೊಬ್ಬ ಕ್ರಿಸ್ತನ ಪಕ್ಕಾ ಅನುಯಾಯಿಯಾಗಿದ್ದೂ, ಹಿಂದೂ ಧರ್ಮದ ಕರ್ಮ ಸಿದ್ಧಾಂತವನ್ನು (ಸುಪ್ತಾವಸ್ಥೆಯಲ್ಲಿ) ಒಪ್ಪಿಕೊಂಡಿದ್ದು ನನಗೆ ಇಷ್ಟವಾಯಿತು. ಮನಃಶಾಸ್ತ್ರ ಮತ್ತು ಅದರ ವೈದ್ಯಕೀಯ ಆಧ್ಯಯನಕ್ಕೆ ತೊಡಗಿದಾಗ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಆಧುನಿಕರ ಮನಸ್ಸನ್ನು ಗೆಲ್ಲುವ ಸಾಕಷ್ಟು ಪುಸ್ತಕಗಳು ಆಂಗ್ಲಭಾಷೆಯಲ್ಲಿವೆ. ಅವುಗಳೂ ಸಹ ನನ್ನ ಸತ್ಯಾನ್ವೇಷಣೆಗೆ ಸಹಕಾರಿಯೇ ಹೊರತು ಅತ್ಯಗತ್ಯವಲ್ಲ ಎಂದು ಮನಗಂಡೆನು. ವಿಪರ್ಯಾಸವೆಂದರೆ ನನ್ನ ಅಧ್ಯಾತ್ಮಿಕ ಗುರುಗಳ ಕುರಿತು ಅವರ ಶಿಷ್ಯಂದಿರು ಬಂಗಾಳಿ ಅಥವಾ ಆಂಗ್ಲ ಭಾಷೆಯಲ್ಲಿಯೇ  ಬರೆದಿದ್ದು, ಅದನ್ನು ಮತ್ತೆ ಇಂಗ್ಲಿಷ್ನಲ್ಲಿಯೇ ಓದುವ ಕರ್ಮ ನನ್ನದಾಗಿದೆ. ಮಾಡುವ ವೃತ್ತಿಯಲ್ಲಿಯೂ ಸಹ ಸಾಕಷ್ಟು ವಿಷಯವನ್ನು ಭಾಷಾಂತರ, ಅನುವಾದ ಮಾಡುವ ಅನಿವಾರ್ಯತೆ ತಂದಿಡಲಾಗುತ್ತದೆ. ಹೀಗೆ ಜನಮಾನಸವನ್ನು ಶತಶತಮಾನಗಳ ಕಾಲ  ಆವರಿಸಿಕೊಂಡಿರುವ  ಇಂಗ್ಲಿಷ್ನ್ನು ಒಂದು ಸಂಪರ್ಕ ಮಾಧ್ಯಮವಾಗಿ ಗೌರವಿಸುತ್ತೇನೇ ಹೊರತು, ನನ್ನ ದೇಶ, ಭಾಷೆಗಿಂತ ದೊಡ್ಡದೆಂದು ಎಂದೂ ಪರಿಗಣಿಸಲಾರೆ. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿದರೆ ಬೇರೆ ಸಂದರ್ಭಗಳಲ್ಲಿ ಅದನ್ನು ಬಳಸಲು ನನಗೆ ಸಾಧ್ಯವಿಲ್ಲ. ಜೊತೆಗೆ ನಮ್ಮ ಪಕ್ಕದ ಮನೆಯ ಭಾಷೆ ಅದು ತಮಿಳು, ತೆಲುಗು, ಹಿಂದಿ ಯಾವುದೇ ಇರಲಿ ಅವುಗಳನ್ನು ಇಂಗ್ಲಿಷ್ಗಿಂತ ಹೆಚ್ಚು ಗೌರವಿಸುತ್ತೇನೆ. ವಿಶ್ವ ಸಾರ್ವಜನಿಕ ಸಂಪರ್ಕ ಭಾಷೆಯಾದ  ಇಂಗ್ಲಿಷ್ ನ್ನು ಭಾರತದ ರಾಷ್ಟ್ರಭಾಷೆ ಎಂದು ಘೋಷಿಸಿದರೆ ಇಲ್ಲಿಯ ಭಾಷೆಗಳಿಗೆ ಯಾವ ಬೆಲೆ ಇದೆ? ಒಂದು ಭಾಷೆ ಸಂಸ್ಕೃತಿಯ ಪ್ರತಿಬಿಂಬವೂ ಹೌದು ಎನ್ನುವುದು ನನ್ನ ಭಾವನೆ. ಹಿಂದೀ ಸಂಸ್ಕೃತದ ಹತ್ತಿರ ಭಾಷೆ (ಲಿಪಿ, ಶಬ್ಧ). ಜೊತೆಗೆ ಸಾರ್ವತ್ರಿಕತೆ ತೆಗೆದುಕೊಂಡರೆ ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಮಾತನಾಡುತ್ತಾರೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆ ಕಾರಣಕ್ಕೆ ಹಿಂದೀ ರಾಷ್ಟ್ರಭಾಷೆಯಾಗಿರಲಿ ಎನ್ನುವುದು ನನ್ನ ವಾದ. 

ವಿಪರ್ಯಾಸವೆಂದರೆ ನಮ್ಮ ದೇಶದ ವೈಚಾರಿಕ ದಾರಿದ್ರ್ಯವುಳ್ಳ, ಸ್ವಾಭಿಮಾನ ಹೀನ ಹಿರಿಯರು (ಕ್ಷಮಿಸಿ, ಹಿರಿಯರನ್ನೂ ತಪ್ಪು ಮಾಡಿದಾಗ ಗೌರವಿಸಲಾಗುವುದಿಲ್ಲ) ಹಾಕಿಕೊಟ್ಟ ಇಂಗ್ಲಿಷ್ ವ್ಯಾಮೋಹ ಇಂದು ಜನಮಾನಸದಿಂದ ಭಾರತೀಯ ಭಾಷೆಗಳನ್ನು ಅಳಿಸಿಹಾಕಿವೆ. ಬರೀ ಇಂಗ್ಲಿಷ್ ಇಂಗ್ಲಿಷ್ ... ಇವರು ಭಾಷೆ ಮಾತ್ರ ಕಲಿಯಲಿ, ಸಂಸ್ಕೃತಿ, ಹಾಳು ಲೌಕಿಕ ವ್ಯಾಮೋಹಗಳನ್ನು ಭಾರತೀಯ ಅಧ್ಯಾತ್ಮ, ಸುಸಂಸ್ಕೃತ ಮನಸ್ಸಿನಲ್ಲಿ `ದುಡ್ಡು' `ದುಡ್ಡು' ಲೌಕಿಕ ಆಡಂಬರ, ಅಭಿಲಾಷೆಗಳನ್ನು ತುಂಬಿಕೊಳ್ಳದಿರಲಿ ಎಂಬುದಷ್ಟೇ ನನ್ನ ಕಳಕಳಿ.  


3 ಕಾಮೆಂಟ್‌ಗಳು:

JBRSWAMY JEBAR ಹೇಳಿದರು...

ಇಂಗ್ಲೀಷಿನ ಬಗ್ಗೆ ವೃಥಾ ಮುನಿಸನ್ನು ನಿಷ್ಕಾರಣವಾಗಿ ಮುಂದುವರೆಸುವಂತೆ ಭಾಸ ವಾಗುತ್ತದೆ. ನೀವೇ ಅಂದಂತೆ ಅದು ಕೇವಲ ಸಂಪರ್ಕ ಭಾಷೆ. ಮಾಹಿತಿಯನ್ನು ಕಲೆಹಾಕೋದಿಕ್ಕೆ ಸಾಕು. ಅದರ ವ್ಯಾಪ್ತಿ ಅಷ್ಟೇ. ಅದು ಎಂದೂ ನಮ್ಮದು ಅನ್ನಿಸದು. ಪಿಟ್ಜ಼ಾ, ಪಾಸ್ತಾ ಇವೆಲ್ಲವನ್ನೂ ಇಷ್ಟಪಟ್ಟೇ ತಿನ್ನುತ್ತೇನೆ. ಆದರೆ ಆಯ್ಕೆ ಪ್ರಶ್ನೆ ಬಂದಾಗ ಮಸಾಲೆ ದೋಸೆ, ಪುಳಿಯೋಗರೆ " ಇದು ನಮ್ಮದೂ" ಅನ್ನಿಸುತ್ತೆ. ನಮ್ಮದಲ್ಲ ಅಂತ ತಿರಸ್ಕರಿಸಬೇಕಿಲ್ಲ . ರುಚಿ ನೋಡ್ತಾ ಇರೋಣ!! . ಆಮೇಲೆ ಇನ್ನೊಂದು ಮಾತೂ; ಸಿಡ್ನೀ ಶೆಲ್ಡನ್ ಬಿಟ್ಟರೆ ನೀವು ಓದಿರೋ ಇಂಗ್ಲೀಷ್ ಪುಸ್ತಕಗಳು ಅನಾಕರ್ಷಕವಾದವುಗಳು. ಅವನ್ನು ಓದಿದರೆ ಇಂಗ್ಲೀಷ್ ನಿಮ್ಮನ್ನು ಆಪ್ತವಾಗಿ ಆವರಿಸದು.jeffrey archer, mario puzo, irving wallace, ಇವರುಗಳನ್ನೊಮ್ಮೆ ತಿರುವಿಹಾಕಿ

ವಿ.ರಾ.ಹೆ. ಹೇಳಿದರು...

ನಮಸ್ತೆ,

ಇಂಗ್ಲೀಷಿನ ಬಗ್ಗೆ ನೀವು ಹೇಳುತ್ತಿರುವುದು ನಿಜ. ಆದರೆ ಇದು ಆ ಭಾಷೆಯ ತಪ್ಪಲ್ಲ. ನಮ್ಮ ಜನರ ಮನಃಸ್ಥಿತಿಯ ತಪ್ಪು. ನಮಗೆ ಅದು ಈಗ ಸಂಪರ್ಕ ಭಾಷೆಯಾಗಿ, ಜ್ಞಾನದ ಭಾಷೆಯಾಗಿ, ಉದ್ಯೋಗಕ್ಕಾಗಿ ಅನಿವಾರ್ಯವಾಗಿದೆ (ಮಾಡಿಕೊಂಡಿದ್ದೇವೆ!). ಹಾಗಂತ ಖಂಡಿತ ಇಂಗ್ಲೀಷನ್ನು ನಾವು ತಲೆಮೇಲೆ ಕೂರಿಸಿಕೊಳ್ಳಬೇಕಾಗಿಲ್ಲ. ಆದರೆ ನಮ್ಮಲ್ಲಿ ಅದು ಪ್ರತಿಷ್ಠೆಯ ವಿಷಯವಾಗಿರುವುದು, ಮಾನಸಿಕ ಗುಲಾಮಿತನವಾಗಿರುವುದು ವಿಪರ್ಯಾಸ.

ನೀವು ಇಂಗ್ಲೀಷಿನ ಬಗ್ಗೆ ಹೇಳಿದಿರಿ. ಆದರೆ ಹಿಂದಿಯನ್ನು ಅದನ್ನಾಡುವ ಜನಸಂಖ್ಯೆ ಆಧಾರದ ಮೇಲೆ ರಾಷ್ಟ್ರಭಾಷೆಯಾಗಿ ಘೋಷಿಸಿದರೆ ಅದಕ್ಕಿಂತ ಒಳ್ಳೆಯ ಇತಿಹಾಸವುಳ್ಳ, ಶ್ರೀಮಂತಿಕೆ ಉಳ್ಳ ಇತರ ಭಾರತೀಯ ಭಾಷೆಗಳಿಗೆ ಯಾವ ಬೆಲೆ ಕೊಟ್ಟಂತಾಗುತ್ತದೆ? ಹಿಂದಿ ಪ್ರಾಂತ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಹಿಂದಿ ಮಾತಾಡಬಹುದು. ಆದರೆ ಬೇರೆ ಪ್ರಾಂತ್ಯಗಳಲ್ಲಿ ಹಿಂದಿ ಬಹುಸಂಖ್ಯಾತ ಭಾಷೆ ಅಲ್ಲ. ಹಾಗಿದ್ದ ಮೇಲೆ ಅದು ರಾಷ್ಟ್ರಭಾಷೆಗೆ ಯೋಗ್ಯವಾಗುವುದಿಲ್ಲ. ಭಾರತ ಬಹುಭಾಷೆಗಳ ದೇಶ. ಇಲ್ಲಿ ರಾಷ್ಟ್ರಭಾಷೆ ಅಗತ್ಯವೂ ಇಲ್ಲ, ಸಾಧ್ಯವೂ ಇಲ್ಲ. ಹಾಗೆ ಮಾಡಲು ಹೋದರೆ ಅದು ಹೇರಿಕೆ ಆಗುತ್ತದೆ. ಹಿಂದಿ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಅದು ಸಂಸ್ಕೃತದ ಹತ್ತಿರ ಭಾಷೆ ಅನ್ನುವುದು ಸರ್ವಥಾ ತಪ್ಪು. ಪ್ರತಿಯೊಂದು ಭಾರತೀಯ ಭಾಷೆಯೂ ಆಯಾ ಸಂಸ್ಕೃತಿ ಬಿಂಬಿಸುತ್ತವೆ. ಎಲ್ಲಾ ಭಾಷೆಗಳನ್ನೂ ಗೌರವಿಸುವುದು ಮತ್ತು ಆಯಾ ಪ್ರಾಂತ್ಯಗಳಲ್ಲಿ ಆಯಾ ಭಾಷೆಯ ಸಾರ್ವಭೌಮತೆ ಕಾಪಾಡುವುದು ನಿಜವಾದ ಭಾರತೀಯತೆ. ಇಲ್ಲದಿದ್ದಲ್ಲಿ ಅದು ವೈಚಾರಿಕ ದಾರಿದ್ರ್ಯದ ಮತ್ತೂ ಒಂದು ಮುಖವೇ ಆಗುತ್ತದೆ.

Sheila Bhat ಹೇಳಿದರು...

jbrswamy ನಿಮಗೆ ಎಫ್.ಬಿಯಲ್ಲೇ ಉತ್ತರಿಸಿದ್ದೇನೆ.
ವಿ.ರಾ.ಹೆಯವರೆ ನಿಮ್ಮ ವಾದವನ್ನು ಒಪ್ಪಬಹುದು.