ಬುಧವಾರ, ಸೆಪ್ಟೆಂಬರ್ 18, 2013

ನಾನೂ...ನನ್ನ ಇಂಗ್ಲಿಷ್...

ನಾನೂ...ನನ್ನ  ಇಂಗ್ಲಿಷ್...

ಬಹುಷಃ ಇಂಗ್ಲಿಷ್ ಭಾಷೆಗೆ ಮೊದಲು ನಾನು ಪರಿಚಿತಳಾಗಿದ್ದು 5ನೇ ತರಗತಿಯಲ್ಲಿ. ಎ, ಬಿ, ಸಿ. ಡಿ ಕಲಿಯುವ ಹೊತ್ತಿಗೆ ನನಗೆ ಭಾಷೆಯನ್ನು ಮೀರಿದ ಯಾವುದೋ ವಿಷಯದ ಹಪಹಪಿಕೆ ಶುರುವಾಗಿತ್ತು. ನಾನು ಯಾರು? ಏಕೆ ಬಂದಿದ್ದೇನೆ? ಮನೆಯಲ್ಲಿ ಗೌರಜ್ಜಿಯ ಮಡಿ-ಹುಡಿಗಳಿಗೆ ಏನರ್ಥ? ಯಾಕೆ ಯಾಕೆ ಯಾಕೆ ಎನ್ನುವ ಪ್ರಶ್ನೆಗಳ ಗೂಡಾಗಿದ್ದ ನನ್ನ ತಲೆಗೆ ಒಂದು ಚೂರು ಪೇಪರ್ ಹಾಳೆಯೂ ಭಾರೀ ಆಸೆಯನ್ನು ಹುಟ್ಟಿಸುತ್ತಿತ್ತು. ಅದೇ ಕಾರಣಕ್ಕೆ ಹಣ್ಣು ಸುತ್ತಿಕೊಟ್ಟ ನ್ಯೂಸ್ ಪೇಪರ್ ಹಾಳೆಯಿಂದ ಹಿಡಿದು ಅಮ್ಮ ಕೊಡಿಸುವ  ಒಂದು ಪುಸ್ತಕ ಮುಗಿದು ದತ್ತಾತ್ರೆಯ ಬುಕ್ ಸ್ಟಾಲ್ ನಲ್ಲಿ ಕಾಣುವ ಚಂದಮಾಮ, ಬಾಲಮಿತ್ರಗಳನ್ನೂ ಮುಗಿಸಿ ದೊಡ್ಡವರ ಪುಸ್ತಕಗಳಾಗಿದ್ದ ಸುಧಾ, ತರಂಗಗಳೂ ಮುಗಿದಿರುತ್ತಿದ್ದವು. 

ಅದೇ ಹೊತ್ತಿಗೆ ಅಜ್ಜಿಯ  ಊರಿಗೆ ಶಿಫ್ಟಾಗಿದ್ದು ಇನ್ನೊಂದು ರೀತಿಯಲ್ಲಿ ವರವಾಗಿತ್ತು. ಅಲ್ಲಿ ಅತ್ಯಂತ ಧಾರ್ಮಿಕ ವಾತಾವರಣವಿತ್ತು. ಹಗಲಲ್ಲಿ ಆಟ-ಪಾಠ, ಓದಿನ ಜೊತೆಗೆ ಪೂಜೆ, ಪುನಸ್ಕಾರಗಳು, ಭಜನೆಯಂತಹ ಧಾರ್ಮಿಕ ಚಟುವಟಿಕೆಗಳು, ಮನೆಕೆಲಸದಲ್ಲಿ ಸಹಭಾಗಿತ್ವ ಹೀಗೆ ನನ್ನೊಳಗೆ ನಾನು ಕಾಣುತ್ತ ಹೋಗತೊಡಗಲು ಸಾಕಷ್ಟು ಸಾಧ್ಯತೆಗಳು ಒದಗಿದವು. ರಾತ್ರಿಯಾದರೆ ಪಕ್ಕದ ಮನೆಯ ಶಾರದಜ್ಜಿಯ ಮಹಾಭಾರತದ 52 ಸಂಪುಟಗಳ ಪುಸ್ತಕ ನನ್ನದಾಗಿತ್ತು. ಹಗಲಲ್ಲಿ ಆಕೆ ಓದಿದರೆ ರಾತ್ರಿ ನಾನು ಓದುತ್ತಿದ್ದೆ. ಕದ್ದು ಓದುತ್ತಿದ್ದವಳನ್ನು ಶಾರದಜ್ಜಿ ಹಿಡಿದು ರಾಜಾರೋಷವಾಗಿ ಓದಲು ಅನುಕೂಲ ಮಾಡಿಕೊಟ್ಟಿದ್ದು ನನ್ನ ಸೌಭಾಗ್ಯಗಳಲ್ಲೊಂದಾಗಿತ್ತು. ಬಹುಷಃ ಆಗ ನನಗೆ 11 ವರ್ಷ ವಯಸ್ಸು. 

ಈ ರೀತಿ ಮಹಾಭಾರತದ  ಒಳಗಿನ ಆಳ, ಅರಿವು ಅರ್ಧ ಅರ್ಥವಾಗುತ್ತಿದ್ದ ಕಾಲದಲ್ಲಿ ತಲೆಗೆ ಹೊಕ್ಕ  ಇನ್ನೊಂದು ವಿಷಯ `ಪ್ರೇಮ'. ಅದಕ್ಕಾಗಿ ನಾನು ತಡಕಾಡಿದ ಪುಸ್ತಕಗಳೇ ಇಲ್ಲವೆನ್ನಬಹುದು. ಮಹಾಭಾರತ, ರಾಮಾಯಣ, ಭಾಗವತ, ತರಂಗದಲ್ಲಿ, ಕರ್ಮವೀರದಲ್ಲಿ ಬರುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರುಗಳ ಲೇಖನಗಳು, ಆ ಕುರಿತು ದೊಡ್ಡವರು ನಡೆಸುತ್ತಿದ್ದ ಚರ್ಚೆಗಳು, ಸಾಮಾಜಿಕ ಧಾರಾವಾಹಿಗಳು ಹಾಗೂ ನನ್ನದೇ ರೀತಿಯಲ್ಲಿ ಆರಂಭಿಸಿದ್ದ ಪ್ರೇಮ ಮತ್ತು ಅಧ್ಯಾತ್ಮದ ಬಗೆಗಿನ ಪ್ರಯೋಗಗಳು ನನಗೆ ಭಾಷೆಯ ಬಗ್ಗೆ ಒಲವನ್ನು ಮೂಡಿಸಲೇ ಇಲ್ಲ. ನನಗೆ ಭಾಷೆ, ಲಿಂಗ, ಜಾತಿ, ಧಾರ್ಮಿಕ  ಆಚರಣೆಗಳು, ಹಣ, ರ್ಯಾಂಕು, ಡಿಗ್ರಿ, ಹುದ್ದೆ ಇವೆಲ್ಲವಕ್ಕಿಂತ ಬೇರೆ ಏನೋ ಇದೆ ಮತ್ತು ಅದನ್ನು ನಾನು ಕಾಣಬೇಕಿದೆ ಎಂಬುದೇ ದೊಡ್ಡ ತಪನೆಯಾಗಿತ್ತು. ಇಂದಿಗೂ  ಈ ಕ್ಷಣಕ್ಕೂ ನನಗೆ ಈ ಸತ್ಯದ ಅನ್ವೇಷಣೆಯೇ ಮುಖ್ಯವಾಗಿದ್ದು, ಭಾಷೆ ಮುಖ್ಯವಾಗಿಯೇ ಇಲ್ಲ.

ಆದರೆ ಈ ಮಧ್ಯೆ ಒಂದೆರಡು ಘಟನೆಗಳನ್ನು ಹೇಳಬೇಕು. ಅವು ನನಗೆ ನನ್ನ ದೇಶ, ನನ್ನ ಹಿಂದೂವಾದ, ಸಂಸ್ಕೃತಿಯ ಕುರಿತಾದದ್ದು. ನಮ್ಮ ಮನೆಯಲ್ಲಿ ಇಂದಿಗೂ ಇಂಗ್ಲಿಷ್ ಭಾಷೆ ಬಲ್ಲವರೆಂದರೆ ಏನೋ ಗೌರವ. ಆ ಸಂಸ್ಕೃತಿ ಎಂದರೆ ಏನೋ ಮೋಹ. ಅದನ್ನು ಅನುಸರಿಸಲು ನನಗೆ ಸಾಕಷ್ಟು ಅವಕಾಶಗಳು, ಪ್ರೋತ್ಸಾಹ  ಎರಡೂ ಹೇರಳವಾಗಿದ್ದವು. ಶಾಲೆಯಲ್ಲಿ ಇಂಗ್ಲಿಷ್ನಲ್ಲಿ ಎಷ್ಟು ಅಂಕ ಪಡೆದಿದ್ದಾಳೆ ಎನ್ನುವುದು ಗಣಿತ, ವಿಜ್ಞಾನಗಳಲ್ಲಿ ಎಷ್ಟು ಅಂಕ ಪಡೆದಿದ್ದೀನಿ ಎನ್ನುವುದಕ್ಕಿಂತ ಹೆಚ್ಚು ಮಹತ್ವ ಪಡೆಯುತ್ತಿತ್ತು. ಆದರೆ ಆ ವೇಳೆಗಾಗಲೇ ಭಾರತೀಯ ಪುರಾಣಗಳು, ತತ್ತ್ವಶಾಸ್ತ್ರಗಳ ಮೋಹಕ್ಕೆ ಬಿದ್ದಿದ್ದ ನನ್ನ ಮನಸ್ಸು ಅವರನ್ನು ದ್ವೇಷಿಸತೊಡಗಿತ್ತು. ಆಂಗ್ಲಭಾಷೆಗಿಂತ ಅದರೊಳಗೆ ಬೇರೇನಾದರೂ ತಿರುಳು ಇರಬಹುದೆಂಬ ಹುಡುಕಾಟ ನನಗೆ ಮುಖ್ಯವಾಗತೊಡಗಿತ್ತು. ಹೈಸ್ಕೂಲ್ಗೆ ಬಂದಾಗಲೂ ನನ್ನ ಗಮನ  ಆಂಗ್ಲಭಾಷೆಯ ಕಲಿಕೆಗಿಂತ ಅದರ ಮೂಲಕ ಪಾಶ್ಚಾತ್ಯ ಸಂಸ್ಕೃತಿ, ಆಚಾರ, ವಿಚಾರಗಳು ಏನು? ಅಧ್ಯಾತ್ಮದ ಬಗ್ಗೆ ಅವರ ಕಲ್ಪನೆ ಏನು? ಪ್ರೇಮದ ಬಗ್ಗೆ ಅವರು ಏನು ಹೇಳುತ್ಥಾರೆ ಎನ್ನುವುದೇ ಮುಖ್ಯವಾಗಿತ್ತು. 

ಆ ವೇಳೆಗೆ ಶೇಕ್ಸ್ಪಿಯರ್ ಎನ್ನುವ  ಒಬ್ಬ ಮಹಾನ್ ಕವಿ ಆಂಗ್ಲಭಾಷೆಯಲ್ಲಿದ್ದಾನೆ,  ನಮ್ಮಲ್ಲಿಯ ಕಾಳಿದಾಸನನ್ನು ಅಭಿನವ ಶೇಕ್ಸ್ ಪಿಯರ್ನೆಂದು ಕರೆಯುತ್ತಾರೆ ಎಂದು ತಿಳಿಯಿತು. ಪ್ರಥಮ ಭಾಷೆ ಸಂಸ್ಕೃತವಾಗಿದ್ದ ಕಾರಣ ಕಾಳಿದಾಸನ ಕುಮಾರಸಂಭವ, ಮೇಘದೂತದಂತಹ ಕಾವ್ಯಗಳ ಕೆಲವು ಸಂದರ್ಭಗಳು ಪಾಠದ ಮೂಲಕ ಅರ್ಥವಾದವು. ಪರಿಚಯವಾದವು.  ಮುಂದೆ ಶೇಕ್ಸ್ಪಿಯರ್ ನ ಕಾಲಾವಧಿ (ಕ್ರಿ.ಶ1518) ಮತ್ತು ಕಾಳಿದಾಸನ ಕಾಲಾವಧಿ (5ನೇ ಶತಮಾನ)ಗಳ ತಿಳುವಳಿಕೆ ಬಂದಾಗ ಈ ಆಂಗ್ಲ ಭಾಷೆಯ  ವ್ಯಾಮೋಹ ವೈಚಾರಿಕ ದಾರಿದ್ರ್ಯದ ಒಂದು ಮುಖವೆಂದು ಅರಿವಾಗಿತ್ತು. ಅಲ್ಲಿಂದ ನನಗೆ ಇಂಗ್ಲಿಷ್ ಭಾಷೆಯನ್ನು ಕಲಿಯುವ  ಎನ್ನುವುದಕ್ಕಿಂತಲೂ ಅನುಸರಿಸುವ, ಬಳಸುವ ಅಲ್ಪಸ್ವಲ್ಪ  ಇರಾದೆಯೂ ಹೊರಟುಹೋಗಿದೆ. 

ಮುಂದೆ ಡಿಪ್ಲೊಮಾ ಓದಲು ಬೆಂಗಳೂರಿಗೆ ಬಂದಾಗ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಆಂಗ್ಲ ಮಾಧ್ಯಮದಲ್ಲಿ ಓದಿದ ನನ್ನ ಕೆಲವು ಸಹಪಾಠಿಗಳಿಗೆ  ಇಂಗ್ಲಿಷ್ ವ್ಯಾಕರಣ ಹೇಳಿಕೊಟ್ಟಾಗಲೇ ಗೊತ್ತಾಗಿದ್ದು ಓಹೋ ಓದಿನಿಂದ ವ್ಯಾಕರಣವೂ ಬೆಳೆಯುತ್ತದೆ, (ಅದು ನನಗೆ ಇದೆ), ಜೊತೆಗೆ ಇಂಗ್ಲಿಷ್ ಸಾಹಿತ್ಯ  ಓದಿನ ಕೊರತೆಯಿಂದಾಗಿ ಶಬ್ಧ ಭಂಡಾರ ಶಕ್ತಿಹೀನವಾಗಿದೆ ಎಂದು. ಆದರೆ ನನ್ನ ಹಾಸ್ಟೆಲ್ ಅಕ್ಕಂದಿರು ಓದುತ್ತಿದ್ದ ಶಿಡ್ನಿ ಶೆಲ್ಡನ್, ಶೆರ್ಲಾಕ್ ಹೋಂ ಕಾದಂಬರಿಗಳಾಗಲಿ, ಮಿಲ್ಸ್ ಎಂಡ್ ಬೂನ್ಸ್ ಎಂಬ ಪ್ರಣಯಭರಿತ ಕಾದಂಬರಿ ವಾಹಿನಿಗಳಾಗಲೀ ನನ್ನ ಹೃದಯ ಗೆಲ್ಲಲು ಸಂಪೂರ್ಣ ವಿಫಲವಾದವು. ಆಂಗ್ಲರ ನಡೆನುಡಿಗಳಲ್ಲಿ ಅತ್ಯಂತ ಐಹಿಕ ಬದುಕನ್ನು ಕಂಡ ನನಗೆ ಅವುಗಳ ಬಗ್ಗೆ ಸಣ್ಣದಾಗಿ ತಿರಸ್ಕಾರವೂ ಮೂಡತೊಡಗಿತು. 

ಮುಂದೆ ಎಡ್ಗರ್ ಕೈಸಿಯ ಮೆನಿ ಮ್ಯಾನ್ಷನ್ ಓದಿದಾಗ ಕೈಸಿ ತಾನೊಬ್ಬ ಕ್ರಿಸ್ತನ ಪಕ್ಕಾ ಅನುಯಾಯಿಯಾಗಿದ್ದೂ, ಹಿಂದೂ ಧರ್ಮದ ಕರ್ಮ ಸಿದ್ಧಾಂತವನ್ನು (ಸುಪ್ತಾವಸ್ಥೆಯಲ್ಲಿ) ಒಪ್ಪಿಕೊಂಡಿದ್ದು ನನಗೆ ಇಷ್ಟವಾಯಿತು. ಮನಃಶಾಸ್ತ್ರ ಮತ್ತು ಅದರ ವೈದ್ಯಕೀಯ ಆಧ್ಯಯನಕ್ಕೆ ತೊಡಗಿದಾಗ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಆಧುನಿಕರ ಮನಸ್ಸನ್ನು ಗೆಲ್ಲುವ ಸಾಕಷ್ಟು ಪುಸ್ತಕಗಳು ಆಂಗ್ಲಭಾಷೆಯಲ್ಲಿವೆ. ಅವುಗಳೂ ಸಹ ನನ್ನ ಸತ್ಯಾನ್ವೇಷಣೆಗೆ ಸಹಕಾರಿಯೇ ಹೊರತು ಅತ್ಯಗತ್ಯವಲ್ಲ ಎಂದು ಮನಗಂಡೆನು. ವಿಪರ್ಯಾಸವೆಂದರೆ ನನ್ನ ಅಧ್ಯಾತ್ಮಿಕ ಗುರುಗಳ ಕುರಿತು ಅವರ ಶಿಷ್ಯಂದಿರು ಬಂಗಾಳಿ ಅಥವಾ ಆಂಗ್ಲ ಭಾಷೆಯಲ್ಲಿಯೇ  ಬರೆದಿದ್ದು, ಅದನ್ನು ಮತ್ತೆ ಇಂಗ್ಲಿಷ್ನಲ್ಲಿಯೇ ಓದುವ ಕರ್ಮ ನನ್ನದಾಗಿದೆ. ಮಾಡುವ ವೃತ್ತಿಯಲ್ಲಿಯೂ ಸಹ ಸಾಕಷ್ಟು ವಿಷಯವನ್ನು ಭಾಷಾಂತರ, ಅನುವಾದ ಮಾಡುವ ಅನಿವಾರ್ಯತೆ ತಂದಿಡಲಾಗುತ್ತದೆ. ಹೀಗೆ ಜನಮಾನಸವನ್ನು ಶತಶತಮಾನಗಳ ಕಾಲ  ಆವರಿಸಿಕೊಂಡಿರುವ  ಇಂಗ್ಲಿಷ್ನ್ನು ಒಂದು ಸಂಪರ್ಕ ಮಾಧ್ಯಮವಾಗಿ ಗೌರವಿಸುತ್ತೇನೇ ಹೊರತು, ನನ್ನ ದೇಶ, ಭಾಷೆಗಿಂತ ದೊಡ್ಡದೆಂದು ಎಂದೂ ಪರಿಗಣಿಸಲಾರೆ. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿದರೆ ಬೇರೆ ಸಂದರ್ಭಗಳಲ್ಲಿ ಅದನ್ನು ಬಳಸಲು ನನಗೆ ಸಾಧ್ಯವಿಲ್ಲ. ಜೊತೆಗೆ ನಮ್ಮ ಪಕ್ಕದ ಮನೆಯ ಭಾಷೆ ಅದು ತಮಿಳು, ತೆಲುಗು, ಹಿಂದಿ ಯಾವುದೇ ಇರಲಿ ಅವುಗಳನ್ನು ಇಂಗ್ಲಿಷ್ಗಿಂತ ಹೆಚ್ಚು ಗೌರವಿಸುತ್ತೇನೆ. ವಿಶ್ವ ಸಾರ್ವಜನಿಕ ಸಂಪರ್ಕ ಭಾಷೆಯಾದ  ಇಂಗ್ಲಿಷ್ ನ್ನು ಭಾರತದ ರಾಷ್ಟ್ರಭಾಷೆ ಎಂದು ಘೋಷಿಸಿದರೆ ಇಲ್ಲಿಯ ಭಾಷೆಗಳಿಗೆ ಯಾವ ಬೆಲೆ ಇದೆ? ಒಂದು ಭಾಷೆ ಸಂಸ್ಕೃತಿಯ ಪ್ರತಿಬಿಂಬವೂ ಹೌದು ಎನ್ನುವುದು ನನ್ನ ಭಾವನೆ. ಹಿಂದೀ ಸಂಸ್ಕೃತದ ಹತ್ತಿರ ಭಾಷೆ (ಲಿಪಿ, ಶಬ್ಧ). ಜೊತೆಗೆ ಸಾರ್ವತ್ರಿಕತೆ ತೆಗೆದುಕೊಂಡರೆ ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಮಾತನಾಡುತ್ತಾರೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆ ಕಾರಣಕ್ಕೆ ಹಿಂದೀ ರಾಷ್ಟ್ರಭಾಷೆಯಾಗಿರಲಿ ಎನ್ನುವುದು ನನ್ನ ವಾದ. 

ವಿಪರ್ಯಾಸವೆಂದರೆ ನಮ್ಮ ದೇಶದ ವೈಚಾರಿಕ ದಾರಿದ್ರ್ಯವುಳ್ಳ, ಸ್ವಾಭಿಮಾನ ಹೀನ ಹಿರಿಯರು (ಕ್ಷಮಿಸಿ, ಹಿರಿಯರನ್ನೂ ತಪ್ಪು ಮಾಡಿದಾಗ ಗೌರವಿಸಲಾಗುವುದಿಲ್ಲ) ಹಾಕಿಕೊಟ್ಟ ಇಂಗ್ಲಿಷ್ ವ್ಯಾಮೋಹ ಇಂದು ಜನಮಾನಸದಿಂದ ಭಾರತೀಯ ಭಾಷೆಗಳನ್ನು ಅಳಿಸಿಹಾಕಿವೆ. ಬರೀ ಇಂಗ್ಲಿಷ್ ಇಂಗ್ಲಿಷ್ ... ಇವರು ಭಾಷೆ ಮಾತ್ರ ಕಲಿಯಲಿ, ಸಂಸ್ಕೃತಿ, ಹಾಳು ಲೌಕಿಕ ವ್ಯಾಮೋಹಗಳನ್ನು ಭಾರತೀಯ ಅಧ್ಯಾತ್ಮ, ಸುಸಂಸ್ಕೃತ ಮನಸ್ಸಿನಲ್ಲಿ `ದುಡ್ಡು' `ದುಡ್ಡು' ಲೌಕಿಕ ಆಡಂಬರ, ಅಭಿಲಾಷೆಗಳನ್ನು ತುಂಬಿಕೊಳ್ಳದಿರಲಿ ಎಂಬುದಷ್ಟೇ ನನ್ನ ಕಳಕಳಿ.  


ಶನಿವಾರ, ಸೆಪ್ಟೆಂಬರ್ 14, 2013

ಮೋದಿಯನ್ನೇ ಆಯ್ದುಕೊಳ್ಳಲು ಏನಿರಬಹುದು ಕಾರಣ?

ಮೋದಿಯನ್ನೇ ಆಯ್ದುಕೊಳ್ಳಲು ಏನಿರಬಹುದು ಕಾರಣ?

ನಿನ್ನೆ ಮೋದಿ ರಾಷ್ಟ್ರೀಯ ಪಕ್ಷವೊಂದರ ಭಾವೀ ಪ್ರಧಾನಿ ಅಭ್ಯರ್ಥಿ ಎಂಬ ಘೋಷಣೆಯೊಂದಿಗೆ ಎಲ್.ಕೆ.ಅಡ್ವಾಣಿಯೆಂಬ ಹಿರಿಯ ಆಕಾಂಕ್ಷಿಗೆ ಅಂತಿಮ ಅವಕಾಶದ ಬಾಗಲು ಮುಚ್ಚಿಬಿಟ್ಟಿತು. ಯಾವುದೇ ಒಂದು ವ್ಯವಸ್ಥೆಯಲ್ಲಿ ಕೇವಲ ಹಿರಿಯತನ ಮಾತ್ರ ಚುಕ್ಕಾಣಿ ಹಿಡಿಯಲು ಮಾನದಂಡವಾಗುವುದಿಲ್ಲ. ಅದರೊಂದಿಗೆ ನಾಯಕತ್ವದ ಗುಣ, ನಿರ್ಧಾರಗಳನ್ನು ತೆಗೆದುಕೊಳ್ಳುವ, ತನ್ನನ್ನು ತಾನು ನಂಬುತ್ತಲೇ ಉಳಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಹಾಗೆಯೇ ಒಂದು ವೇಳೆ ಅನಿವಾರ್ಯವಿದ್ದರೆ ಎಲ್ಲವನ್ನೂ ಪಕ್ಕಕ್ಕಿಟ್ಟು, ಎಲ್ಲರನ್ನೂ ಪಕ್ಕಕ್ಕಿಟ್ಟು ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಚಾಕಚಕ್ಯತೆ ಬೇಕು. ಹೀಗೆ ಹಲವು ಗುಣಗಳನ್ನು ನೋಡಿದಾಗ  ಈ ಇಬ್ಬರೂ ನಾಯಕರಿಗೆ ಈ ಎಲ್ಲ ಗುಣಗಳಿವೆ. ಹಾಗಿದ್ದರೆ ತಪ್ಪಾಗಿದ್ದು ಎಲ್ಲಿ?

ಅಡ್ವಾನಿ ಮಧ್ಯಮವರ್ಗದ (ಬಹುತೇಕ ಶ್ರೀಮಂತ) ಹಿನ್ನೆಲೆಯಿಂದ ಬಂದವರು. ಆದರೆ ಮೋದಿ ಸಮಾಜದ ಕೆಳವರ್ಗದಿಂದ ಪ್ರತಿ ಕಷ್ಟಗಳನ್ನು ಕಂಡು, ಉಂಡು ಕಷ್ಟಗಳಿಗೆ ಪಕ್ವವಾದವರು. ಯಾರು ಹೆಚ್ಚು ಕಷ್ಟಗಳನ್ನು ಕಂಡಿರುತ್ತಾರೋ ಅವರಿಗೆ ಎಂತಹ ಅಡೆತಡೆಗಳನ್ನೂ ದಾಟಿ ಓಡುವ ಸಾಮರ್ಥ್ಯ  ಬರುತ್ತದೆ. ಇದು ಒಂದು. ಇನ್ನೊಂದು ಡಾರ್ಕ್ ನೈಟ್ ರೈಡರ್ಸ್ ನಲ್ಲಿ ತೋರಿಸುವಂತೆ ಬಡತನದಲ್ಲಿ ಬೆಳೆದ ಮೋದಿ ಹಗ್ಗವಿಲ್ಲದೇ ಬಾವಿಯನ್ನು ಹತ್ತಬಲ್ಲವರು. ಅಂದರೆ ಕಂಫರ್ಟ್ ಜೋನ್ನಿಂದ ಹೊರಗೆ ಬಂದು ಎದ್ದು ನಿಲ್ಲುವವರು. ಇದಕ್ಕೆ ಸರಿಯಾಗಿ ಅವರನ್ನು ಹೆದರಿಸಲು ಹೆಂಡತಿ, ಮಕ್ಕಳು ಎಂಬ ಮೋಹವೂ ಇಲ್ಲ. ಇದರ ಜೊತೆಗೆ ಮೋದಿಗೊಂದು ಆಧ್ಯಾತ್ಮಿಕ ಮುಖವಿದೆ. ಅಡ್ವಾನಿಯವರಿಗೆ ಸಿಟ್ಟು ಬಂದರೆ ಅದನ್ನು ನೇರವಾಗಿ ಹೇಳಿ ವಿರೋಧ ಕಟ್ಟಿಕೊಳ್ಳುವ ಮನಸ್ಥಿತಿ ಇದೆ. ಮೋದಿ ತಮ್ಮ ಹೊರಗಿನ ಜಗತ್ತಿನಲ್ಲಿ ಇದ್ದೂ ಇಲ್ಲದಂತೆ ಇದ್ದು ತಂತ್ರವನ್ನು ಹೆಣೆಯುತ್ತಾರೆ. ಆದ್ದರಿಂದಲೇ ಅವರು ಸದ್ದಿಲ್ಲದೇ ಕೆಲಸದಲ್ಲಿ ನಿರತರಾಗುತ್ತಾರೆ. ಅಡ್ವಾಣಿ ವಿರೋಧವಿದೆ, ಅಸಹನೆ ಇದೆ. ಆದಾಗ್ಯೂ ಅವರೊಂದಿಗೆ ಮಾತನಾಡಿ ಆಶೀರ್ವಾದ ಪಡೆಯುತ್ತಾರೆ. ಒಂದೆಡೆಗೆ ತನ್ನನ್ನು ಬೆಳೆಸಿದ ಅಡ್ವಾನಿಯವರನ್ನೇ ಹಿಂದಿಕ್ಕಿ ಬೆಳೆದ ತಾನು ಮತ್ತು ಅಡ್ವಾನಿ ಇವರಿಬ್ಬರ ನಡುವಿನ ಅಂತರವನ್ನು ಮೋದಿ ಕಾಣಬಲ್ಲವರಾಗಿದ್ದಾರೆ.

ಮೋದಿ ಕೇವಲ  ಆರ್.ಎಸ್. ಎಸ್ ಕಾರ್ಯಕರ್ತರಾಗಲಿಲ್ಲ. ತಾನು ಕಾರ್ಯಕರ್ತನಾಗುವುದಕ್ಕಿಂತ ಜನಸೇವೆ ಮಾಡಬೇಕೆಂದು ತಪಿಸಿದರು. ಫಲವಾಗಿ ರಾಜಕಾರಣ  ಆರಂಭವಾಯಿತು. ಕೇವಲ ರಾಜಕಾರಣಿಯಾದರೆ ಸಾಲದು. ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂದರು. ಆದರು. ಅಲ್ಲಿ ಹಿಂದೂವಾದಿ ಎಂಬ ಹಣೆಪಟ್ಟಿ ತಗುಲಿಕೊಂಡಾಗ ಮುಸ್ಲಿಂರನ್ನೂ ಗೌರವಿಸುತ್ತೇನೆ ಎಂದರು. ಹಾಗೆಯೇ ನಡೆದುಕೊಂಡು ಎಲ್ಲರ ವಿಶ್ವಾಸ ಗಳಿಸಿದರು. ಇಷ್ಟೇ ಆಗಿದ್ದರೆ ಅವರೂ ಎಲ್ಲ ಮಹತ್ವಾಕಾಂಕ್ಷಿ ರಾಜಕಾರಣಿಯಂತೆ ಆಗುತ್ತಿದ್ದರು. ಆದರೆ ಮೋದಿ ಎಂದೂ ತಾವು ಬಂದ ಹಿನ್ನೆಲೆಯನ್ನು ಮರೆಯಲಿಲ್ಲ. ತಾವು ಒಬ್ಬ ಆಡಳಿತಗಾರ ಮತ್ತು ಜನಪರ ಎಂಬುದನ್ನು ಪ್ರತಿಹಂತದಲ್ಲಿ ನಿರೂಪಿಸಿದರು. ತಮ್ಮ ತಪ್ಪುಗಳನ್ನು ಮನಗಂಡು ತಿದ್ದಿಕೊಂಡರು. ತಮ್ಮದೇ ಸರಿ ಎಂದೋ, ಅಥವಾ ಇನ್ಯಾರನ್ನೋ ಬೈದೋ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸಲಿಲ್ಲ. ಬದಲಿಗೆ ತಿದ್ದಿಕೊಳ್ಳುತ್ತ ನಡೆದರು.  ಗೋದ್ರಾ ಹತ್ಯಾಕಾಂಡದಲ್ಲಿ ಮುಸ್ಲಿಂರನ್ನು ಹತ್ಯೆ ಮಾಡಿದ ಬಲವಾದ ಆರೋಪಕ್ಕೆ ಮಣೆ ಹಾಕಲಿಲ್ಲ. ಬದಲಿಗೆ ರೈಲಿನಲ್ಲಿ ಬರುತ್ತಿದ್ದ ಹಿಂದೂ ಯಾತ್ರಿಕರನ್ನು ಕೊಂದಿದ್ದಕ್ಕೆ ನಿಮಗೆ ಈ ಶಿಕ್ಷೆ ಎಂದರು (ಪರೋಕ್ಷವಾಗಿ).  ಇಡೀ ಅಧಿಕಾರಾವಧಿಯಲ್ಲಿ ತಾವು ಯಾರೊಂದಿಗೂ ರಾಜಿಯಾಗುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ನೀಡುತ್ತ ಹೋದರು.

ಆದರೆ ಅಡ್ವಾಣಿ ಬಾಬ್ರಿಮಸೀದಿ ವಿವಾದದ ನಂತರ ತಮ್ಮೆಲ್ಲ  ಉತ್ಸಾಹ ಕಳೆದುಕೊಂಡವರಂತೆ ಹಿಂದಕ್ಕೆ ಸರಿಯತೊಡಗಿದರು. ಅಂಗಳ ಹಾರಿ ಗಗನ ಹಾರುವ ಜಾಣ್ಮೆ ತೋರಲಿಲ್ಲ. ಯಾವ ಕ್ಷೇತ್ರದಲ್ಲಿಯೂ ನಿಂತು ಜನರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಒಂದು ರಾಜ್ಯದ ಮಂತ್ರಿಯೋ, ಮುಖ್ಯಮಂತ್ರಿಯೋ ಆಗಲಿಲ್ಲ. ಕೇವಲ ಪಕ್ಷದ ಅತ್ಯುನ್ನತ ಮಟ್ಟದ ಕಾರ್ಯಕರ್ತರಾಗಿಯೇ ಉಳಿದುಬಿಟ್ಟರು. ಕಿಂಗ್ ಮೇಕರ್ ಆಗುತ್ತ ಬಂದರೇ ವಿನಃ, ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದ ತಮ್ಮ ರಾಜಕಾರಣವನ್ನು ಇದಕ್ಕಿಂತ ಹೆಚ್ಚಿನ ವ್ಯಾಪ್ತಿಗೆ ತರಲೇ ಇಲ್ಲ. ಈಗ ಅವರ ಹಿರಿತನಕ್ಕೆ ಮಣೆಹಾಕಿದರೆ ಅವರ ಪಕ್ಷ ಲೋಕಸಭೆಯಲ್ಲಿ ಗೆಲ್ಲುವುದು ಅಷ್ಟರಲ್ಲೇ ಇದೆ. ವ್ಯಕ್ತಿಗಿಂತ ವ್ಯವಸ್ಥೆ ದೊಡ್ಡದು ಎಂದೇ ಉಳಿದ ಹಿರಿಯರು ಮೋದಿಯನ್ನು ಆಯ್ಕೆ ಮಾಡಿದ್ದಾರೆ.

ಬಹುಷಃ ಈ ಇಬ್ಬರ  ಈ ಘಟನೆಯಿಂದ ನಾನೂ ಒಂದು ಹೊಸ ಪಾಠವನ್ನು ಕಲಿತೆ. ಕಂಡು ಕಲಿ ಎನ್ನುವ ಮಾತಿದೆಯಲ್ಲವೇ?

ಮಂಗಳವಾರ, ಜುಲೈ 16, 2013

ಆಲ್ವೇಸ್ ಐ ಆಮ್ ಫೈನ್...

          ಅಂತೂ ಇವತ್ತಿಗೆ ನನ್ನ ದುಃಖದ ದಿನಗಳು ಮುಗಿದವು. ಇನ್ನು ಏನಾದರೂ ನಾನು ನಾನಾಗಿಯೇ ಇರಬೇಕು. ಹೀಗೆಂದು ನಿರ್ಧಾರ ಮಾಡಿದ್ದೇನೆ. ಮೊನ್ನೆ ಒಬ್ಬ ಹಳೆಯ ಸಹೋದ್ಯೋಗಿ ಕೇಳಿದರು, ನೆಗಡಿಯಾದರೂ ಐ ಆಮ್ ಫೈನ್ ಎನ್ನುತ್ತೀಯಲ್ಲ? ಎಂದು. ಅದಕ್ಕೆ ಹೇಳಿದ್ದೆ, ನಾನು ಯಾವಾಗಲೂ ಹೀಗೆಯೇ ಅಲ್ವಾ, ಛಳಿ, ಬಿಸಿಲು ಏನಿದ್ದರೂ ನಗುನಗುತ್ತ ಸಂತೋಷವಾಗಿರುವುದು ನನ್ನ ಅಭ್ಯಾಸ.
          ಸುಮ್ಮನೆ ಕುಳಿತು ಯೋಚಿಸಿದರೆ ಕಳೆದ ಮೂವತ್ತೆರಡು ವರ್ಷಗಳಲ್ಲಿ ಎಲ್ಲರೂ ಹೇಳುವ ಹಾಗೆ ಕಷ್ಟಗಳು ಎಂದಿದ್ದರೆ ಅವೆಲ್ಲವೂ ನನ್ನನ್ನು ಭರಪೂರ ಕಿತ್ತು ತಿನ್ನಬೇಕಿತ್ತು. ಆದರೆ ಅವುಗಳ ದುರದೃಷ್ಟವೆಂದರೆ ಅವು ದಾಳಿ ಮಾಡಲು ಶಕ್ಯವಾದವೇ ಹೊರತು, ನನ್ನ ನಗುವನ್ನು ಕಿತ್ತು ತಿನ್ನಲು ಆಗಲಿಲ್ಲ. ಕಳೆದ ನಾಲ್ಕು ವರ್ಷಗಳೆಂತೂ ನನ್ನ ಪಾಲಿಗೆ ದೊಡ್ಡ ಸವಾಲೇ ಆಗಿದ್ದವು. ಮೊದಲು ಟೈಫಾಯಿಡ್, ಆಮೇಲೆ ಡಿಪ್ರೆಷನ್, ಡಿಪ್ರೆಷನ್ ಮಧ್ಯೆ ಸ್ಯೂಸೈಡ್ ಅಟೆಂಪ್ಟ್, ಡಿಪ್ರೆಷನ್ ನಿಂದ ಹೊರಬರುತ್ತಿದ್ದಂತೆಯೇ ಡೆಂಗ್ಯೂ, ಡೆಂಗ್ಯೂ ಮುಗಿದ ಮೇಲೆ ತೀವ್ರ ರಕ್ತಹೀನತೆ ಹೀಗೆ ಒಂದೆರಡೇ ಅಲ್ಲ. ಬುದ್ದಿ ಬಲ್ಲಾದಾಗಿನಿಂದ ನನ್ನ ಅನ್ನ ನಾನೇ ದುಡಿದು ತಿನ್ನುತ್ತಿದ್ದವಳಿಗೆ ಒಮ್ಮೆಲೇ ಪರಾವಲಂಬಿತನ. ಕೆಲಸಕ್ಕೆ ಹೋದರೂ ಕೆಲಸ ಮಾಡಲಾಗದ ಸ್ಥಿತಿ. ಸಹಜವಾಗೇ ಉಳಿದವರಿಗೆ ಭಾರವಾಗತೊಡಗಿದೆ.
          ಅಂತೂ ಇಂತು ಸುಧಾರಿಸಿಕೊಂಡು ಹೋದರೆ, ಈ ಮಾಧ್ಯಮ ಕ್ಷೇತ್ರದಲ್ಲಿ ಸ್ವಕೀಯರು, ಪರಕೀಯರು ಎಂಬ  ಎರಡು ಗುಂಪುಗಳಿವೆ ಮತ್ತು ನಾನು ಬಹುತೇಕ ಕಡೆಗಳಲ್ಲಿ ಪರಕೀಯಳಾಗಿದ್ದೇನೆ ಎಂಬ ವಾಸ್ತವದ ಅರಿವಾಯಿತು. ಮಾಧ್ಯಮಗಳಲ್ಲಿ ಉನ್ನತ ಹುದ್ದೆಯಲ್ಲಿ ಕುಳಿತ ಸಂಬಂಧಿಕರು ಚೆಂದ ನೋಡುತ್ತ ದೂರ ನಿಂತವರೇ ಹೊರತು ಎಂದೂ ನಾನಿದ್ದೇನೆ ಎಂದವರಲ್ಲ. ಇನ್ನೂ ಸ್ವಾಭಿಮಾನ ಬಿಟ್ಟು, ಜವಾಬ್ದಾರಿ ನೆನೆದು ಕೆಲಸಕ್ಕಾಗಿ ಕೇಳಿಕೊಂಡು ಹೋದರೆ, ಅವರ ವಿರೋಧಿಗಳ ಸ್ನೇಹಿತೆ, ಕೆಲಸ ಗೊತ್ತೆಂಬ ಸೊಕ್ಕು, ಕೈಗೆಟುಕದವಳು ಹೀಗೆ ಹಲವು ಕಾರಣಗಳಿಗೆ ನಿರಾಕರಣೆ...
          ಈ ಮಧ್ಯೆ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ. ಮದ್ವೆಯ ಬಗ್ಗೆ ನನಗೆ ಇರುವ ಸ್ಪಷ್ಟತೆ ಮತ್ತು ಆಸೆಗಳು ಹೆತ್ತವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಅರ್ಥವಾಗುತ್ತಲೇ ಇರಲಿಲ್ಲ. ಹುಡುಗರ ಮೇಲೆ ಹುಡುಗರನ್ನು ತೋರಿಸುವ, ಮದುವೆಗೆ ಒತ್ತಾಯ ಹೇರುವ ಭಾರ ಸಹಿಸಲಾಗುತ್ತಿರಲಿಲ್ಲ. ಎಲ್ಲರಂತೆ ಮದುವೆ, ಮನೆ, ನಿನ್ನದೂಂತ ಒಂದು ಸಂಸಾರ  ಬೇಡವೇ ಎಂದು ಆಯಿ, ಅಮ್ಮನ  ಆಸೆಯ ಹೊರೆ. ಸ್ನೇಹಿತರ ಹಾರೈಕೆಯ ಜವಾಬ್ದಾರಿ..ಅಬ್ಬಬ್ಬಾ! ಖಿನ್ನತೆಯ ಮಧ್ಯೆ ಇವುಗಳನ್ನು ನಿಭಾಯಿಸಬೇಕಾದರೆ ಅದಕ್ಕೆ ನಾನೇ ಸೈ ಅನ್ನಿಸಿರಬೇಕು!
        ಆರ್ಥಿಕ ಸಮಸ್ಯೆ ನನಗೆ ಒಂದು ಸಮಸ್ಯೆ ಎನಿಸಲೇ ಇಲ್ಲ. ಯಾಕೆಂದರೆ ಹಿಂದೆ ನಾನು ಮಾಡಿದ ಒಳ್ಳೆಯ ಕರ್ಮ  ಈಗ ಕೈಹಿಡಿದಿತ್ತು. ಅಪ್ಪ ನನ್ನ ಸಹಾಯಕ್ಕೆ ಬಂದರು. ಇಂಜನಿಯರಿಂಗ್ ಮುಗಿಸಿದ ತಮ್ಮ ಮನೆಯ ಜವಾಬ್ದಾರಿ ತನ್ನದು ಎಂದ. ತಂಗಿ ಅಕ್ಕನಿಗೆ ತೊಂದರೆಯಾಗಬಾರದೆಂದು ಮದುವೆ ಮಾಡಿಕೊಂಡಳು. ಹೀಗೆ ಒಂದೆಡೆ ಹೊಸ ಕಷ್ಟಗಳು ಕಿತ್ತು ತಿನ್ನುತ್ತಿದ್ದರೆ, ಹಳೆಯ ಪರಿಹಾರಗಳು ಕೈಹಿಡಿದಿದ್ದವು.
        ಈ ಎಲ್ಲ ಸಂದರ್ಭಗಳಲ್ಲೂ ನನ್ನ ಕೈಹಿಡಿದವ ನನ್ನ ಗೆಳೆಯ, ನನ್ನ ದೇವರು. ಆತ  ಇಲ್ಲದಿದ್ದರೆ ಬಹುಷಃ ನಾನಿವತ್ತು ಇರುತ್ತಿರಲಿಲ್ಲ. ಆತ ನೀಡಿದ ಬೆಂಬಲ ಕಳೆದ 9 ವರ್ಷಗಳಿಂದ ನನ್ನನ್ನು ಉಳಿಸಿತು, ಬೆಳೆಸಿತು. 
        ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಗೆ ಮದುವೆಯಾಗುವ ಯಾವ  ಇರಾದೆಯೂ ನನಗಿಲ್ಲ. ಮದುವೆ, ಪ್ರೀತಿ ನನ್ನ ವೈಯಕ್ತಿಕ ವಿಚಾರ. ಇದರಲ್ಲಿ ಯಾರೂ ತಲೆಹಾಕಬಾರದು ಎಂಬ ಸಾಮಾನ್ಯ ಪ್ರಜ್ಞೆ ಕೂಡ ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಇರಲಿಲ್ಲ. ಎಲ್ಲರನ್ನೂ ಪ್ರೀತಿಸಿದರೂ, ಯಾರಿಂದಲೂ ಬೈಗುಳ ತಪ್ಪಲಿಲ್ಲ. ಇನ್ನು ಗಂಡ, ಮಕ್ಕಳ ಕೈಲಿ ಕೂಡ ಮಾಡುವ ಸೇವೆಯೆಲ್ಲ ಮಾಡಿ ಬೈಸಿಕೊಳ್ಳುವ ಹಣೆಬರಹ ಬೇಡ ಎಂದರೆ ಕೇಳುತ್ತಲೇ ಇರಲಿಲ್ಲ. ಒಂದೇ ಸಮನೆ ಮದುವೆಯ ಹಠ. ಭಾರವಾಗತೊಡಗಿದ್ದ ಮಗಳೆಂಬ ಜವಾಬ್ದಾರಿಯನ್ನು ಕಳಚಿಕೊಳ್ಳುವ ತುಡಿತ. ಸ್ನೇಹಿತರಿಗೆ ತಾವು ಬಿದ್ದ ಹಳ್ಳಕ್ಕೆ ನನ್ನನ್ನೂ ನೂಕಿ ಚೆಂದ ನೋಡುವ ತವಕ. ನಿಮ್ಮ ಸಮಸ್ಯೆ ಇದು ಎಂದು ಅವರಿಗೆ ಅವರ ಸಮಸ್ಯೆಯನ್ನು ತೋರಿಸಿ, ಸುಮ್ಮನೆ ಸಾಂತ್ವನ ಹೇಳಿದರೆ, ಏನೋ ಕಳಕಳಿಯಿಂದ ಮಾತಾಡಿದರೆ ಅದೂ ತಪ್ಪಾಗತೊಡಗಿದ್ದವು. ಹಗ್ಗವೂ ಹಾವಾಗತೊಡಗಿತ್ತು. 
      ಆಗಲೇ ನಾನು ನನ್ನ ಹಳೆಯ ಜೈಲುವಾಸದ ಬಯಕೆಯನ್ನು ಈಡೇರಿಸಿಕೊಂಡಿದ್ದು.  ಈ ಸಂದರ್ಭವನ್ನು ನಾನು ನನ್ನ ಜೈಲಿನಲ್ಲಿರುವಂತೆ ಭಾವಿಸಿ ಬದುಕಲು ಉಪಯೋಗಿಸಿದೆ. ಯಾಕೆಂದರೆ ಗರ್ಭಧಾರಣೆ, ಹೆರಿಗೆ ಮತ್ತು ಮಾರಣಾಂತಿಕ ಕಾಯಿಲೆಗಳ ಅನುಭವವೊಂದು ಬಿಟ್ಟು ಉಳಿದೆಲ್ಲವನ್ನೂ ನಾನು ಅನುಭವಿಸಿಯಾಗಿತ್ತು.  ರಾಜಮರ್ಯಾದೆ, ಕೀರ್ತಿ, ಅಪಕೀರ್ತಿ, ಹಣ, ನಷ್ಟ, ಸೋಲು, ಗೆಲವು ಎಲ್ಲವನ್ನೂ ಅನುಭವಿಸಿಯಾಗಿತ್ತು. ನನ್ನ ಗೆಳೆಯನ ಪ್ರೀತಿ ಜನ್ಮಕ್ಕಾಗುವಷ್ಟು ಜೊತೆಗಿತ್ತು. ಹಾಗಾಗಿ ಜೈಲುವಾಸ ಹೇಗಿರಬಹುದೆಂಬ ಕಲ್ಪನೆಯಂತೆಯೇ ಅಕ್ಷರಶಃ ಎಲ್ಲರ ಸಂಪರ್ಕ ಬಿಟ್ಟೆ, ಸದಾ ಚಟುವಟಿಕೆ, ಕೆಲಸದಲ್ಲಿ ತೊಡಗಿಕೊಳ್ಳುವ ನಾನು ಜಡಭರತನಂತೆ ಬದುಕಿದೆ. ನಿಜವಾಗಿ ನನಗೆ ಜೈಲು ಇಷ್ಟವಾಗತೊಡಗಿತು. ಅಂತರ್ಮುಖಿಯಾಗಿ ನನ್ನೊಳಗೆ ನಾನು ಪಯಣಿಸುವ  ಆನಂದ ನನ್ನದಾಯಿತು. ಒಂದು ದಿನ ಇಡೀ ಬದುಕು ಕೈಕೊಟ್ಟರೂ ನಾನು ಇನ್ನೂ ಹೆಚ್ಚು ಆನಂದವಾಗಿರುತ್ತೇನೆ ಎಂಬ ಆತ್ಮವಿಶ್ವಾಸ ಮೂಡಿತು. ಮಾನ, ಅವಮಾನಗಳ ಭಯವಿಲ್ಲದ ನನಗೆ ಕೀರ್ತಿಯ ವ್ಯಾಮೋಹ ಹೊರಟುಹೋಯಿತು. ದಿನಕಳೆದಂತೆ ಆನಂದವಾಗಿ ಬದುಕುವುದು ಅಭ್ಯಾಸವಾಗಿಹೋಯಿತು. 
       ಿಇದರಿಂದಾಗಿ ನನಗೆ ಕಾಯಿಲೆಗಳು ಹೆದರಿ ಓಡತೊಡಗಿದವು. ಮನೆಯಲ್ಲಿ ಕೆಲಸ ಮಾಡಿದರೆ ಕಚೇರಿಯಲ್ಲಿ, ಕಚೇರಿಯಲ್ಲಿ ಕೆಲಸ ಮಾಡಿದರೆ ಮನೆಯಲ್ಲಿ ಕೆಲಸ ಮಾಡಲು ಆಗದಿದ್ದ ನಾನು, ನಿಧಾನವಾಗಿ ಹಿಂದಿನಂತೆಯೇ ಎಲ್ಲ ಕಡೆ ಕೆಲಸ ನಿಭಾಯಿಸುವ ಸಾಮರ್ಥ್ಯವನ್ನು ಒಗ್ಗೂಡಿಸಿಕೊಂಡೆ. ನನಗೆ ನಾನೇ ವಿಧಿಸಿಕೊಂಡಿದ್ದ ಜೈಲುವಾಸಕ್ಕೆ ಅಂತ್ಯ ಹಾಡಿದೆ. ಸ್ವಚ್ಛಂದ  ಆಕಾಶದಲ್ಲಿ ಹಕ್ಕಿಯಂತೆ ಹಾರತೊಡಗಿದೆ. ಮನಸ್ಸು ಬಿಡುಗಡೆಯಾದಾಗ ಬದುಕಿನ ಬಂಧನದ ಭಯ ಅದಕ್ಕಿರಲಿಲ್ಲವಷ್ಟೆ! 

ಸೋಮವಾರ, ಜನವರಿ 28, 2013

ವರದಿಗಾರಿಕೆ - ನನ್ನ ಆಶಯ
ಜನವರಿ 24ರ  ಉದಯವಾಣಿ ದಿನಪತ್ರಿಕೆಯ ಬಹುಮುಖಿ ಪುರವಣಿಯಲ್ಲಿ ಗೌಳಿ ಎಂಬ ಗಾಳಿಗೊಡ್ಡಿದ ದೀಪ  ಎಂಬ ವರದಿ ಪ್ರಕಟವಾಗಿದೆ. ಬಸವರಾಜ್ ಹೊಂಗಲ್ ತುಂಬ ಅದ್ಭುತವಾಗಿ ವರದಿ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡು ತಾಲ್ಲೂಕಿನಲ್ಲಿಯೂ ಗೌಳಿಗಳಿದ್ದಾರೆ. ಅವರ ಹಾಡಿಗಳನ್ನು ನೋಡಿ ವಿಷಾದಪಟ್ಟಿದ್ದು ಇದೆ. ಅವನ್ನೆಲ್ಲ ಯಥಾವತ್ತು ಚಿತ್ರಿಸಿರುವ  ಈ ವರದಿ ಈ ವರ್ಷ ನಾನು ಓದಿದ ಅತ್ಯುತ್ತಮ ಮಾನವೀಯ ವರದಿ.
ಇಂದು ಮಾಧ್ಯಮ ಬದಲಾಗಿದೆ. 20 ವರ್ಷಗಳ ಹಿಂದೆ ನಾನು ಓದುತ್ತಿದ್ದ ಪತ್ರಿಕೆಗಳು ಇಂದಿಗೂ ಇವೆಯಾದರೂ ಅವುಗಳು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತನೆಗೊಂಡಿವೆ.