ಶುಕ್ರವಾರ, ಜುಲೈ 5, 2019

ಪ್ರಾಣಿಪ್ರಪಂಚದ ನೆನಪುಗಳು


ಪ್ರಾಣಿಪ್ರಪಂಚದ ನೆನಪುಗಳು
ಇವತ್ತು ಮಧ್ಯಾಹ್ನದ ಗಾಢನಿದ್ದೆಯ ನಂತರ ಎದ್ದಾಗ ಏನೂ ಸದ್ದಿರಲಿಲ್ಲ. ಮುಖ ತೊಳೆದು ಕೂದಲು ಬಾಚಿ ಹಾಗೆ ಮತ್ತೊಂದು ರೂಮಿಗೆ ಕಾಲಿಡುತ್ತೇನೆ, ಬೆಕ್ಕಿನ ಮರಿಯೊಂದು ಬೆವರು ಆರಲೆಂದು ಮಂಚದ ಮೇಲೆ ಹರವಿಟ್ಟ ನನ್ನ ಚೂಡಿದಾರದ ಮೇಲೆ ಹಾಯಾಗಿ ಮಲಗಿದೆ. ಅದರಮ್ಮ ಮಂಚದ ಕೆಳಗೆ. ಬಹುಷಃ ಹೊರಗೆ ಮಳೆ. ಚಳಿಯಾಗಿರಬೇಕು. ಯಾರೂ ಹೇಳಿ ಕೇಳಿ ಮಾಡುವುದಿಲ್ಲ ಎಂತಲೋ ಬಂದು ಹಾಯಾಗಿ ಕುಳಿತಿವೆ. ಇವತ್ತು ಮಾತ್ರವಲ್ಲ, ಈ ಮರಿ ಹಾಕಿದ್ದೂ ನಮ್ಮ ಮನೆಯ ಕಿಟಕಿ ಸಜ್ಜಾದ ಮೇಲೆಯೆ. ನಾವು ಮಲಗುವುದನ್ನೇ ಕಾದು ಮನೆಯೊಳಗೆ ದಾಳಿ ಇಡುತ್ತವೆ. ಮರಿಗೆ ಹಾಲು ಹಾಕಿದರೆ ಕುಡಿಯಲು ತಿಳಿಯದು, ಅದರಮ್ಮ ಕುಡಿದು ಓಡಿಹೋಗುತ್ತದೆ. ಬೆಚ್ಚಗೆ ಮಲಗಿ ಅಂತ ನನ್ನ ಹಳೆಯ ಕಾಟನ್ ಬಟ್ಟೆಯೊಂದನ್ನು ಹಾಸಿಕೊಟ್ಟರೆ ಮಲಗಲು ಅವಕ್ಕೆ ಭಯ. ಮಂಚದ ಮೇಲೆ ಸಾಕಷ್ಟು ಬಟ್ಟೆಗಳು ಬಿದ್ದು ಹೊರಳಾಡುತ್ತಿದ್ದರೂ ನನ್ನ ಹೊಸ ಬಟ್ಟೆಯೇ ಆಗಬೇಕು ಮರಿಬೆಕ್ಕಿಗೆ.
ಇವಕ್ಕೆ ಮಾತ್ರವಲ್ಲ. ನನ್ನ ಜೊತೆಗೆ ಮನೆ ಕಾಯಲು ನಾಯಿಯೊಂದಿತ್ತು. ಅದರ ಹೆಸರು ಟಿಪ್ಪು. ಹೈಸ್ಕೂಲಿಗೆ ಹೋಗುವಾಗ ಅದು ಬೆಳಿಗ್ಗೆ ಮೊದಲು ತಿಂಡಿ ತಿನ್ನುತ್ತಿರಲಿಲ್ಲ. ನನ್ನನ್ನು 2 ಕಿ.ಮೀ ದೂರದಲ್ಲಿನ ಹೈಸ್ಕೂಲ್ ವರೆಗೆ ಗದ್ದೆ, ಕಾಡು, ರಸ್ತೆ ಹೀಗೆ ಯಾವ ದಾರಿಯಲ್ಲಿ ಹೋದರೂ ಜೊತೆಗೆ ಬರುತ್ತಿತ್ತು. ಒಂದೊಮ್ಮೆ ನನಗಿಂತ ಸ್ವಭಾವ ಸಹಜ ಮುಂದೆ ಓಡಿ ಹೋಗಿಬಿಟ್ಟಿದ್ದರೆ ನಾನು ಬರುವವರೆಗೆ ನಿಂತು ಕರೆದುಕೊಂಡು ಹೋಗುತ್ತಿತ್ತು. ಹೈಸ್ಕೂಲಿಗೆ ಹೋಗಿ ಪ್ರಾರ್ಥನೆ ಮುಗಿಯುವವರೆಗೆ ಕಾದು, ಕ್ಲಾಸಿಗೆ ಹೋಗಿ ಕುಳಿತೆನೋ ಎಂದು ನೋಡಿಕೊಂಡು ಮನೆಗೆ ಹೋಗಿ ತಿಂಡಿ ತಿನ್ನುತ್ತಿತ್ತು. ಅಮ್ಮನಿಲ್ಲದಾಗ ನಾನು ಹೈಸ್ಕೂಲಿಗೆ ಹೊರಡುವ ಮೊದಲು ಹಾಕುತ್ತಿದ್ದೆ. ಆಗೆಲ್ಲ ತನ್ನ ಊಟವನ್ನು ಹಾಗೆಯೇ ಬಿಟ್ಟು ನನ್ನನ್ನು ಬಿಟ್ಟೇ ಅದು ಮರಳಿ ಹೋಗಿ ತಿನ್ನುತ್ತಿತ್ತು. ನಾನು ಮನೆಯಲ್ಲಿರುವಾಗ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ನಮ್ಮ ಮನೆಯ ಅಂಗಳಕ್ಕೆ ನಾಗರಹಾವು ಬರುತ್ತಿತ್ತು. ಅದು ಮತ್ತು ಈ ಟಿಪ್ಪು ಆಡುತ್ತಿದ್ದವೋ, ಜಗಳ ಮಾಡುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ. ಇದು ಬೌಬೌ ಎಂದು ಕೂಗುತ್ತ ಅತ್ತ ಇತ್ತ ಓಡುತ್ತಿದ್ದರೆ, ಹಾವು ತಲೆ ತೂಗುತ್ತ ಬುಸ್ ಬುಸ್ ಗುಡುತ್ತ ಅಂಗಳ ತುಂಬ ಗದ್ದಲವೆಬ್ಬಿಸುತ್ತಿದ್ದವು. ಟಿಪ್ಪುವಿಗೂ ನನ್ನ ಚಪ್ಪಲಿಗಳೆಂದರೆ ಬಹಳ ಇಷ್ಟ. ನನ್ನ ಚಪ್ಪಲಿ ಹುಡುಕಿಕೊಂಡು ಕತ್ತರಿಸಿಹಾಕುತ್ತಿತ್ತು. ಅದು ಬಿಟ್ಟರೆ ಒಂದೆರಡು ಸಲ ಅಪ್ಪನ ಚಪ್ಪಲಿ ಕತ್ತರಿಸಿತ್ತು. ಅಪ್ಪ ಸರಿಯಾಗಿ ಬಾರಿಸಿದ ಮೇಲೆ ಅಪ್ಪನ ಚಪ್ಪಲಿ ಬಿಟ್ಟು ಸದಾ ನನ್ನ ಚಪ್ಪಲಿಯನ್ನೇ ತಿನ್ನುತ್ತಿತ್ತು. ಅಪ್ಪ ನನ್ನ ಚಪ್ಪಲಿಯಲ್ಲೂ ಅದಕ್ಕೆ ಒಮ್ಮೆ ಹೊಡೆದು ನೋಡಿದ. ಆದರೆ ಅದು ಮಾತ್ರ ನನ್ನ ಚಪ್ಪಲಿ ಕತ್ತರಿಸಿದರೇ ಸಮಾಧಾನ ಎನ್ನುವಂತಿತ್ತು. ನನಗಾದರೋ ಬರಗಾಲದಲ್ಲಿ ಮಗ ಉಣ್ಣುವುದನ್ನು ಕಲಿತಂತೆ, ಬರಿಗಾಲಿನಲ್ಲಿ ಗದ್ದೆ, ಕಾಡು ದಾಟಿ ಶಾಲೆಗೆ ಹೋಗುವುದ ಹೇಗೆ? ಒಂದು ಹಳೆ ಚಪ್ಪಲಿ, ಮತ್ತೊಂದು ಕಾಲಿಗೆ ಇನ್ನೊಂದು ಚಪ್ಪಲಿ ಇಜ್ಜೋಡಿ ಹಾಕಿಕೊಂಡು ಶಾಲೆಗೆ ಹೋದ ದಿನಗಳು ಇನ್ನೂ ಮರೆತಿಲ್ಲ.
ಮನೆಯಲ್ಲಿ ಹಸುವೊಂದಿತ್ತು. ಬಹುಷಃ ಅದಿಲ್ಲದಿದ್ದರೆ ನಾನು ಹಾಲು ಕರೆಯುವುದನ್ನು ಕಲಿಯುತ್ತಿರಲಿಲ್ಲ. ಎಂತಹ ಅಪರೂಪದ ಹಸುವೆಂದರೆ ಒಮ್ಮೆ ಕರು ಹಾಕಿದ್ದು ಸರಿ ಸುಮಾರು 5 ವರ್ಷ ಹಾಲು ಕೊಡುತ್ತಿತ್ತು. ಅದರ ಕೆಳಗೆ ಮಲಗಿಕೊಂಡು ಹಾಲು ಕರೆದರೂ ಕೊಡುತ್ತಿತ್ತು. ಹಾಗಾಗಿ ಅಪ್ಪ, ಅಮ್ಮ ಇಲ್ಲದಾಗ ಹಾಲು ಕರೆಯುವುದು ನನ್ನ ಪಾಲಾಗಿತ್ತು. ನಾನು ಬೆಂಗಳೂರಿಗೆ ಬಂದ ನಂತರವೂ ಮನೆಗೆ ಹೋದಾಗ ಅದು ಅದರ ಮಕ್ಕಳು ತೋರುತ್ತಿದ್ದ ಪ್ರೀತಿಗೆ ಯಾವ ಮನುಷ್ಯರ ಪ್ರೀತಿಯೂ ಸಾಟಿಯಾಗದು.
ಇನ್ನು ಬೆಂಗಳೂರಿನ ನಾಯಿಗಳದ್ದು ಒಂದು ಕಥೆ. 2002ರಲ್ಲಿ ಎಂ.ಎನ್.ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಶಿಫ್ಟ್ ಕೆಲಸ. ಬೆಳಗಿನ ಪಾಳಿಯಿತ್ತು. ಚಾಮರಾಜಪೇಟೆಯ ಕೋತಿ ಪಾರ್ಕ್ ನ ಹತ್ತಿರ ನನ್ನ ಮನೆಯಿತ್ತು. ಮೈಸೂರು ಸರ್ಕಲ್ ಗೆ ಬೆಳಿಗ್ಗೆ 5 ಗಂಟೆಗೆ ನನ್ನ ಕ್ಯಾಬ್ ಬರುತ್ತಿತ್ತು. ನಾನು 4.45ಕ್ಕೆಲ್ಲ ಹೊರಡುತ್ತಿದ್ದೆ. ಸಾಮಾನ್ಯವಾಗಿ ನಿರ್ಜನವಾಗಿರುತ್ತಿತ್ತು. ಒಮ್ಮೆ ಇಡೀ ರಸ್ತೆಯ ತುಂಬ ನಾಯಿಗಳು. ನಾನು 2ನೇ ಮಹಡಿಯಿಂದ ಕೆಳಗೆ ಬರುವುದನ್ನೇ ಕಾಯುತ್ತಿದ್ದವೋ ಎನ್ನುವಂತೆ ಒಂದು ಹತ್ತೆನ್ನರಡು ನಾಯಿಗಳು ಬೆನ್ನಟ್ಟಿಬಿಟ್ಟವು. ನಾನು ಹೆದರದೆ ಸುಮ್ಮನೆ ಹೋಗುವುದೊಂದನ್ನೇ ಮಾಡಿದೆ. ಆಗ ಹಿಂದಿನಿಂದ ಒಂದು ದುಪಟ್ಟಾ ಎಳೆಯಿತು. ಪಕ್ಕಕ್ಕೆ ಇನ್ನೊಂದು ಬಂದು ಬ್ಯಾಗ ಕಸಿಯಲು ಬಂತು. ವಿಚಿತ್ರವೆಂದರೆ ಒಂದೂ ನನ್ನ ಮೇಲೆ ದಾಳಿ ಮಾಡಲಿಲ್ಲ. ನಾನು ಆ ಕ್ಷಣಕ್ಕೆ ಏನನ್ನಿಸಿತೋ ಏನೋ. ಇದ್ದಕ್ಕಿದ್ದಂತೆ ದೊಡ್ಡ ದನಿಯಲ್ಲಿ ಏ ಹೋಗ್ರೋ. ಬಿಡಿ ನನ್ನ ಬ್ಯಾಗು, ದುಪಟ್ಟಾ. ಹೋಗಿ ಅಂದು ಕೂಗು ಹಾಕಿದೆ. ಅದೇನಾಯಿತೋ. ಅಷ್ಟೂ ನಾಯಿಗಳೂ ಹಿಂದಕ್ಕೆ ಸರಿದು ಸುಮ್ಮನೆ ಹೋಗಿಬಿಟ್ಟವು. ಯೋಚಿಸಿ, ಅವುಗಳ ಜಾಗದಲ್ಲಿ ಮನುಷ್ಯರಿದ್ದರೆ ನನ್ನನ್ನು ಬಿಡುತ್ತಿದ್ದರಾ? ನಿಜವಾಗಿಯೂ ಈ ಪ್ರಾಣಿಗಳಿಗೆ ನನ್ನ ಮೇಲೆ ಅದೇಕೆ ಅಷ್ಟು ಪ್ರೀತಿ? ಗೊತ್ತಿಲ್ಲ.
ಹಾಗೆ ನಾನು ಮದುವೆಯಾಗಿ ಗೂಡೊಂದು ಆದಾಗ ನಮ್ಮ ಮನೆಯ ಬಾಲ್ಕನಿಯಲ್ಲಿ ಪಾರಿವಾಳಗಳ ಪ್ರೀತಿಯ ಜಾತ್ರೆ. ಮಗು ಮಾಡಿಕೊಂಡು ಬೆಳೆಸಿಯೇ ತೀರುವ ಹಠ. ಕೋತಿಗಳಿಗೆ ನಮ್ಮ ಮನೆಯ ಸೌತೆಕಾಯೇ ಆಗಬೇಕು. ನಾನು ಪಕ್ಕದ ಮನೆಯವರೊಂದಿಗೆ ದೂರು ಹೇಳಿಕೊಳ್ಳುತ್ತಿದ್ದೆ. “ನೋಡಿ ನಿಮ್ಮ ಮನೆಯಲ್ಲಿ ಸ್ವಲ್ಪವೂ ದಾಂಧಲೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ನಿತ್ಯ ಇವುಗಳ ಗಲೀಜು ಸ್ವಚ್ಛ ಮಾಡುವುದೇ ಆಗಿದೆ.” ಅದಕ್ಕೆ ಅವರು ಹೇಳುತ್ತಿದ್ದರು, “ನಮ್ಮ ಮನೆಯಲ್ಲೂ ಬಂದ ಶುರುವಿನಲ್ಲಿ ಮೊಟ್ಟೆ ಇಟ್ಟಿತ್ತು. ನಾನು ಗೂಡಿನ ಸಮೇತ ಎಸೆದು ಬಿಟ್ಟಿದ್ದೆ. ಅಷ್ಟರ ನಂತರ ಬರಲಿಲ್ಲ.” ಇರಬಹುದು. ನಾವು ಆ ಮನೆ ಬಿಟ್ಟು ಮತ್ತೊಂದು ಮನೆಗೆ ಬಂದಾಗ ಒಂದಿಡೀ ಬಾಲ್ಕನಿಯನ್ನು ಪಾರಿವಾಳಗಳ ಸಂಸಾರಕ್ಕೇ ಬಿಟ್ಟುಕೊಟ್ಟಿದ್ದೆವು. ಅವುಗಳ ಗಲೀಜಿನಿಂದ ಹುಳುಗಳು ಮನೆಯೊಳಗೆ ಬರತೊಡಗಿದಾಗ ವರ್ಷದ ಮಗನಿದ್ದಾನೆಂದು ಸ್ವಚ್ಛ ಮಾಡಿಸಿ ಜಾಲರಿ ಹಾಕಿಕೊಂಡೆವು. ಅಲ್ಲಿ ತನಕ 25ಕ್ಕೂ ಹೆಚ್ಚು ಪಾರಿವಾಳಗಳು ಹುಟ್ಟಿ ಬೆಳೆದು ಹಾರಿ ಹೋದವು. ಹುಟ್ಟಿ ಬೆಳೆದ ಮನೆಯನ್ನು ಮರೆಯಲು ಸಾಧ್ಯವಿಲ್ಲವೆಂಬಂತೆ ಬಾಗಿಲು ತೆಗೆದರೆ ಸಾಕು ಮನೆಯೊಳಗೆ ಬಂದು ಹೊರಹೋಗಲು ದಾರಿ ಕಾಣದೆ, ನನ್ನ ಮಗನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಸದರ ಬೆಳೆಯಲು ಕಾರಣವಾದವು. ಈಗ ಅವನಿಗೆ ಪಾರಿವಾಳ, ನಾಯಿ, ಬೆಕ್ಕು, ಹಾವು ಯಾವುದರ ಭಯವೂ ಇದ್ದಂತಿಲ್ಲ.
ನಿನ್ನೆಯಾದರೂ ಅಷ್ಟೆ. ಬೆಕ್ಕು ನನಗೆ ಹೊಸತು. ಅದೂ ಅಮ್ಮ ಬೆಕ್ಕು ಭಾರೀ ಇದೆ. ತನ್ನ ಮಗನೋ, ಮಗಳೋ ಬಗ್ಗೆ ವಿಪರೀತ ರಕ್ಷಣಾತ್ಮಕವಾಗಿದೆ. ಅದನ್ನು ನೋಡಿ ನನಗೆ ಹೆದರಿಕೆ. ನನ್ನ ಮಗ ಅಮ್ಮ ಬೆಕ್ಕು ಜೊತೆ ಆಡಲು ಬಂದಿದೆ ಎಂದು ತೊದಲು ನುಡಿಯುತ್ತಿದ್ದರೆ ನನಗೆ ಸೋಜಿಗ! ಕೊನೆಯಲ್ಲೊಂದು ಭಾರೀ ನೆನಪು.
ಹೈಸ್ಕೂಲಿಗೆ ಹೋಗುವಾಗ ದಿನ ಸಂಜೆ ಹಂಡೆಗೆ, ಎಲ್ಲ ಕಡೆ ಬಾವಿಯಿಂದ ನೀರು ಸೇದಿ ತುಂಬಿಸಬೇಕಿತ್ತು. ಹದ ಮೂರು ಸಂಜೆಯ ಹೊತ್ತು. ನಾನು ಎಂದಿನಂತೆ ಹೇ ಪಾಂಡುರಂಗಾ ಪ್ರಭೋ ವಿಠಲ ಎನ್ನುತ್ತ ಭಾರಿ ಜೋಶ್ ನಲ್ಲಿ ಭಕ್ತಿ ಪರವಶಳಾಗಿ ನೀರು ಸೇದುತ್ತಿದ್ದೆ. ಕೊಡಪಾನ ಮೇಲೆ ಬಂತು. ಹಾಡುತ್ತ ಕೊಡಕ್ಕೆ ಕೈಹಾಕಿದೆ. ತಣ್ಣಗಾಯಿತು. ನೋಡಿದರೆ ಸಣ್ಣ ಹಾವು ಕಂಠಕ್ಕೆ ಸುತ್ತಿಕೊಂಡು ತಲೆಯೆತ್ತಿ ನಿಂತಿದೆ. ಅಮ್ಮಾ ಅಂದಿದ್ದಷ್ಟೆ. ಹಗ್ಗ ಕೈಬಿಟ್ಟಿತ್ತು, ಕೊಡ ಬಾವಿ ತಳ ಸೇರಿತ್ತು. ಅಮ್ಮ ಬಂದು , ಕೊಡ ಎತ್ತಿ, ಕೋಲಲ್ಲಿ ಈಚೆಗೆ ಎಳೆದು ಕಟ್ಟೆಯ ಮೇಲಿಟ್ಟಳು. ಹಾವು ಹರಿಯುತ್ತ ಹೋಯಿತು. ಹೊರಗೆ ಬಂದ ಮೇಲೆ ಅದೊಂದು ವಿಷದ ಹಾವೆಂದು ತೋರಿದಾಗ ಮಕ್ಕಳು , ಮರಿ ಇದಾವೆ ಎಂದು ಅಮ್ಮ ಹೊಡೆದು ಸಾಯಿಸಿದರು. ಹಾಗೆ ನಮ್ಮ ಮನೆಯಲ್ಲಿ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತಿನ ಬದುಕಿನ ಪಾಠ ದೊರೆತಿದ್ದು ಇಂದು ಯಾವುದಕ್ಕೂ , ಯಾರಿಗೂ ಹೆದರದ ಧೈರ್ಯ ಕೊಟ್ಟಿದೆಯಾ?


ಸೋಮವಾರ, ಜನವರಿ 2, 2017

ಭಾರತೀಯ ಪ್ರಜೆ- ಅತ್ತ ದರಿ ಇತ್ತ ಪುಲಿ !?

ಕಳೆದೆರಡು ತಿಂಗಳ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಿತು. ಆಗ ಅಲ್ಲಿಯ ಪ್ರಜೆಗಳ ಮುಂದೆ ಎರಡು ಆಯ್ಕೆ ಇತ್ತು. ಒಂದು ಶಿಷ್ಟಾಚಾರದ ಭಾಷೆ ಗೊತ್ತಿಲ್ಲದ, ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವ, ತೆರಿಗೆ ಬಾಕಿ ಉಳಿಸಿಕೊಂಡ, ಮೂಲಭೂತವಾದಿ ಎನಿಸುವ ಡೊನಾಲ್ಡ್ ಟ್ರಂಪ್ ಒಂದೆಡೆಯಾದರೆ, ಭಯೋತ್ಪಾದನೆಗೆ ಪರೋಕ್ಷ ಸಹಾಯ ಮಾಡಿದ ಆರೋಪ ಹೊತ್ತ ಹಿಲರಿ ಕ್ಲಿಂಟನ್ ಇನ್ನೊಂದೆಡೆ. ಇಬ್ಬರನ್ನು ಆಯ್ಕೆ ಮಾಡಿದ ಪಕ್ಷಗಳಲ್ಲಿ ಸಹ ಇವರಿಬ್ಬರ ಹೊರತಾಗಿ ಬೇರೆ ಉತ್ತಮ ಆಯ್ಕೆಗಳು ಇರಲಿಲ್ಲ ಎಂಬುದು ಮೊದಲನೆ ಅಚ್ಚರಿಯ ವಿಷಯ. ಇವರಿಬ್ಬರಲ್ಲಿ ಒಬ್ಬರನ್ನು ಆರಿಸಲೇಬೇಕಾದ ಅನಿವಾರ್ಯತೆ ಜಗತ್ತಿನ ದೊಡ್ಡಣ್ಣ ಹಾಗೂ ಜಗತ್ತಿಗೆ ಮಾದರಿ ಎನಿಸಿದ ಅಮೆರಿಕನ್ನರದಾಗಿತ್ತು ಎಂಬುದು ಎರಡನೆಯ ಅಚ್ಚರಿಯ ವಿಷಯ.
ಈಗ ನನ್ನನ್ನು ಕಾಡುತ್ತಿರುವುದು ಭಾರತದ ಭವಿಷ್ಯದಲ್ಲಿರುವ ಇಂತಹುದೇ ಪರಿಸ್ಥಿತಿಯ ಕಲ್ಪನೆ. ಕಳೆದ ಲೋಕಸಭಾ ಚುನಾವಣೆ ಇದಕ್ಕಿಂತ ಹೊರತಾಗಿಯೇನೂ ಇರಲಿಲ್ಲ. ಅದು ನೇರವಾಗಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯ ನಡುವಿನ ಸಮರವಾಗಿತ್ತು. ಆದರೆ ನಾವು ದಕ್ಷತೆ, ಜನಪ್ರಿಯತೆ, ಕಾರ್ಯಕ್ಷಮತೆ, ದೇಶಭಕ್ತಿ, ಬ್ರಹ್ಮಚರ್ಯ, ಕುಟುಂಬದ ಹೊರತಾದ ರಾಜಕಾರಣ, ಬಡತನದ ಹಿನ್ನೆಲೆ ಹೀಗೆ ಸಾಕಷ್ಟು ವಿಷಯದಲ್ಲಿ ಸೈ ಎನಿಸಿಕೊಂಡ ಅಭ್ಯರ್ಥಿಯಾಗಿ ಮೋದಿಯವರನ್ನು ಆಯ್ಕೆ ಮಾಡಿದೆವು. ಆ ನಂತರದ್ ಈ ಎರಡು ವರ್ಷಗಳಲ್ಲಿ ಮೋದಿಯವರ ಇನ್ನೊಂದು ಮುಖ ಕೂಡ ಬಹಿರಂಗಗೊಂಡಿದೆ. ಅವೆಂದರೆ ಜನಪ್ರಿಯತೆಯ ದಾಹ, ಸರ್ವಾಧಿಕಾರದ ಮನೋಭಾವ, ದೂರದರ್ಶಿತ್ವ ಇಲ್ಲದ ಅಥವಾ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬೇಕಾದ ಹಲವು ಗೇಮ್ ಪ್ಲಾನ್ ,  ಅದೂ ಸಾಮಾನ್ಯ ಜನರ ಜೀವನದ ಬೆಲೆ ತೆತ್ತು! , ಸ್ವಜನಪಕ್ಷಪಾತ ....ನಿಜವಾಗಿಯೂ ಭ್ರಮನಿರಸನ.
ಇನ್ನು ರಾಹುಲ್ ಗಾಂಧಿ!? ಅಮ್ಮನ ಸೆರಗಿಂದ ಅಪ್ಪ, ಅಜ್ಜಿ, ಮುತ್ತಜ್ಜನ ನೆರಳಿಂದ ಹೊರಬಂದು ಆಗಷ್ಟೆ ಅಂಬೆಗಾಲಿಡುತ್ತಿರುವ ಹಸುಳೆಯಂತಹ ವ್ಯಕ್ತಿತ್ವ. ಒಂದೆಡೆ ಶಿಸ್ತಿನ ಗರಡಿಯಲ್ಲಿ ಪಳಗಿ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಭಾರತೀಯ ಜನತಾ ಪಕ್ಷದ ಧುರೀಣರು, ಇನ್ನೊಂದೆಡೆ ಅಶಿಸ್ತಿನ ಪರಮಾವಧಿ, ಅಸಂಘಟಿತ ಮನೋಭಾವದ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ಎದುರಾಳಿಗಳು. ಸ್ವತಃ ಶಿಸ್ತು, ಯೋಜನೆ, ಮುಂದಾಲೋಚನೆ, ಮಹತ್ವಾಕಾಂಕ್ಷೆ ಯಾವುದೂ ಇಲ್ಲದ ರಾಹುಲ್ ಗಾಂಧಿ ಈ ಅಶಿಸ್ತಿನ ಹಿಂಬಾಲಕರನ್ನು ತರಬೇತಿ ನೀಡುವ ಆಲೋಚನೆಯನ್ನೂ ಮಾಡಿರಲಿಕ್ಕಿಲ್ಲ. ಆದ್ದರಿಂದ ಇನ್ನು ಕೆಲವು ದಶಕಗಳ ಕಾಲ ಭಾರತೀಯ ಜನತಾ ಪಕ್ಷವೇ ದೇಶದ ಜನತೆಗೆ ಅನಿವಾರ್ಯ ಎನ್ನುವುದು ಅಸಹಾಯಕತೆಯೂ ಹೌದು.
ಈ ಮಧ್ಯೆ ಪ್ರಾದೇಶಿಕ ಪಕ್ಷಗಳು, ಆಮ್ ಆದ್ಮಿ ಪಾರ್ಟಿ ಎಲ್ಲವೂ ಸ್ವಲ್ಪ ನಿರೀಕ್ಷೆ ಹುಟ್ಟಿಸಿದ್ದು ನಿಜ. ಆದರೆ ಅವೂ ಕೂಡ ಯಾವುದೇ ಶಿಸ್ತು, ಯೋಜನೆ ಇಲ್ಲದೆ, ನಾಯಕರನ್ನು, ನಾಯಕತ್ವವನ್ನು ಬೆಳೆಸದೆ ಬರೀ ಹಗಲುಗನಸು ಕಾಣುವ ಪಕ್ಷಗಳಾಗಿವೆ. ಇದೂ ಸಹ ಮುಂದೆ ಭಾರತೀಯ ಜನತಾ ಪಕ್ಷದ ಸರ್ವಾಧಿಕಾರದ ಮುನ್ಸೂಚನೆಯಾಗಿದೆ.
ಸರ್ವಾಧಿಕಾರವೆಂದು ಯಾಕೆ ಹೇಳುತ್ತಿದ್ದೇನೆಂದರೆ, ಈ ಪಕ್ಷದ ಮುಖ್ಯ ಭೂಮಿಕೆಯಲ್ಲಿರುವವರು ಮೇಲ್ಜಾತಿಯ ಜನ. ಈಗ ಮೋದಿಯವರಲ್ಲಿ ಕಾಣುತ್ತಿರುವ ದೌರ್ಬಲ್ಯಗಳು ಈ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಉಳಿದ ನಾಯಕರಲ್ಲೂ ಇರುವ ಸಾಮಾನ್ಯ ಮನೋಭಾವ. ಇದರಿಂದ ದೇಶಭಕ್ತಿ ಎಂಬುದು ಚುನಾವಣೆಯ ಸರಕಷ್ಟೆ. ಬದಲಾಗಿ ಬರೆದಿಟ್ಟುಕೊಳ್ಳಿ, ಇನ್ನು ಮುಂದೆ ನಾವೆಲ್ಲ ಎಲ್ಲೆಲ್ಲೂ ಸ್ವಜನಪಕ್ಷಪಾತ, ದುರ್ಬಲರ ಮೇಲೆ ಮಿತಿಯಿಲ್ಲದ ದೌರ್ಜನ್ಯ, ಅಧಿಕಾರದ ಆಟಾಟೋಪವನ್ನು ಕಾಣಬಹುದು.
ನೋಟು ಅಮಾನ್ಯೀಕರಣದ ವಿಷಯವನ್ನೇ ತೆಗೆದುಕೊಂಡಾಗ ಈಗಾಗಲೇ ಜನರ ದಿಕ್ಕು ತಪ್ಪಿಸುವ ರೀತಿ ನೋಡಿ ದಂಗಾಗಿದ್ದೇವೆ. ಜನಸಾಮಾನ್ಯರ, ದುರ್ಬಲರ ತುಳಿತ ಆರಂಭವಾಗಿದೆ. ಜಿಎಸ್ ಟಿ, ಕ್ಯಾಶ್ ಲೆಸ್ ಎಕಾನಮಿ ತಂದು ಇಡೀ ದೇಶದ ಆರ್ಥಿಕತೆಯನ್ನು ದೂರದಲ್ಲಿರುವ ಉಪಗ್ರಹಗಳ ನಿಯಂತ್ರಣಕ್ಕೆ ಒಪ್ಪಿಸುತ್ತಿದ್ದೇವೆ. ಒಂದು ದಿನ ಜಿಹಾದಿಗಳು, ಐ ಎಸ್ ಉಗ್ರಗಾಮಿಗಳಂತಹವರು ಒಂದು ಸಣ್ಣ ಹೊಡೆತದಲ್ಲಿ ಇಡೀ ದೇಶದ ಆರ್ಥಿಕತೆಯ ನಿಯಂತ್ರಣ ಪಡೆಯಬಹುದಾಗಿದೆ. ಇವತ್ತಿನ ಸುದ್ದಿಯಂತೆ ಭಾರತದ ಸೈನ್ಯಕ್ಕೆ ಸಂಬಂಧಿಸಿದ ವೆಬ್ ಸೈಟ್ ಹ್ಯಾಕ್ ಆಗಿದ್ದು, ಅದರಲ್ಲಿ ಪ್ರಧಾನಿ ವಿರುದ್ಧ ಕೀಳಾಗಿ ಬರೆಯಲಾಗಿದೆ ಎಂಬುದನ್ನು ಎಷ್ಟು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಗೊತ್ತಿಲ್ಲ. ಆದಾಗ್ಯೂ ನೋಟ್ ಪ್ರಿಂಟ್ ಮಾಡಲಾಗದ ಅಸಹಾಯಕತೆ ಮುಚ್ಚಿಕೊಳ್ಳಲು ಸಾಮಾನ್ಯ ಜನರನ್ನು ಕ್ಯಾಶ್ ಲೆಸ್ ಗೆ ತಂದು ಹಾಕಿ, ಇಡೀ ದೇಶದ ವ್ಯಾಪಾರವನ್ನು ಒಂದೇ ಚಿಟಿಕೆಯಲ್ಲಿ ನಿಯಂತ್ರಿಸಲು ಹೋಗಲಾಗುತ್ತಿದೆ. ಇದು ಭವಿಷ್ಯದಲ್ಲಿ ಇನ್ನೇನು ಗಂಡಾಂತರ ಸೃಷ್ಟಿಸಲಿದೆಯೋ!!
ಏನಾದರೂ ನಾವೀಗ ಭಾರತೀಯ ಪ್ರಾಮಾಣಿಕ, ಸಹನಾಶೀಲ, ತ್ಯಾಗಿ ಪ್ರಜೆಗಳು. ಆ ಬಿರುದನ್ನು ಉಳಿಸಿಕೊಳ್ಳಲಾದರೂ ಮುಂದಿನ ಚುನಾವಣೆಗಳಲ್ಲಿ ಓಟು ಹಾಕಬೇಕು. ಅದೂ ಅನಿವಾರ್ಯವಾಗಿ ಯಾರಿಗೆ?

ಮಂಗಳವಾರ, ಜನವರಿ 19, 2016

ಮುರಿದ ಎದೆಯಲ್ಲಿ ಕಟ್ಟಬಹುದೆ ಗೂಡು?

               ೫ ವರ್ಷಗಳ ಹಿಂದಿನ ಮಾತು. ನನ್ನಲ್ಲೊಂದು ಪ್ರಕರಣ ಬಂದಿತ್ತು. ಮಧ್ಯವಯಸ್ಸಿನ ಗಂಡಸು ಆತ. ಮೂರು ಮಕ್ಕಳ ತಂದೆ. ಹೀಗಿದ್ದೂ ಯಾವುದೋ ಘಳಿಗೆಯಲ್ಲಿ ಹೊಸ ಸಂಬಂಧವೊಂದು ಬೆಳೆದಿತ್ತು. ವಾರಕ್ಕೊಮ್ಮೆ ಕೆಲಸ ಎಂದು ಹೋಗಿ ರಾತ್ರಿ ಉಳಿದು ಬೆಳಿಗ್ಗೆ ಬಂದು ಹೆಂಡತಿಯೊಂದಿಗೆ ಖುಷಿಯಿಂದ ಇರುವ ಜೀವನ!  ದೊಡ್ಡ ಮಗನಿಗೆ ಇದೆಲ್ಲ ಗೊತ್ತಾಗಿ ಖುದ್ದು ತಂದೆಯನ್ನು ಆಕೆಯೊಂದಿಗೆ ಮದುವೆ ಮಾಡಿಸಲು ಹೊರಟಿದ್ದ. ಅದಕ್ಕಾಗಿ ಆಕೆಯೊಂದಿಗೆ ಮಾತು ಕತೆಯೂ ಆಗಿತ್ತು. ಸೋ಼ಷಿಯಲ್ ಆದ ಸ್ಫುರದ್ರೂಪಿ ತಂದೆಗೂ ಆಕೆಗೂ ಹೇಳಿ ಮಾಡಿಸಿದ ಜೋಡಿ, ಗುಗ್ಗು, ಭಾವನಾ ಶೂನ್ಯ ತಾಯಿಯೊಂದಿಗೆ ಎಷ್ಟು ದಿನ ಹೆಣಗ್ಯಾಡ್ಯಾನು ಎಂದುಕೊಂಡು ತಂದೆಯ ಮದುವೆಯ ಮಾತು ಆಡಿದ್ದ. ಅದೊಂದು ದಿನ ವೃತ್ತಿಯ ಸೋಲು ಕಂಗೆಡಿಸಿ ಈ ಮಧ್ಯವಯಸ್ಸಿನ ತಂದೆ ಹಾಸಿಗೆ ಹಿಡಿದ. ದೊಡ್ಡ ಮಗ ತಂದೆಯನ್ನು ಹೇಗೋ ಬದುಕಿಸಿಕೊಂಡ. ಆದರೆ ಆಕೆಯ ನಡೆ ಇವನ ಮನಸ್ಸು ನೋಯಿಸಿತ್ತು. ಮದುವೆಗಾಗಿ ಮಾತನಾಡಿದ ಆಕೆ, ತಂದೆ ಮಲಗಿದ್ದಾನೆಂದು ಗೊತ್ತಾದ ಮೇಲೆ ಒಮ್ಮೆಯಾದರೂ ಕೊನೇಪಕ್ಷ ಕರೆ ಮಾಡಿ ಹೇಗಿದ್ದಾನೆ ಎಂದು ವಿಚಾರಿಸಿರಲಿಲ್ಲ. ಹೋಗಲಿ, ನೀವು ಹೇಗೆ ತಂದೆಯನ್ನು ನೋಡಿಕೊಳ್ಳುತ್ತೀರಿ, ನಗರದ ಆಸ್ಪತ್ರೆಯಲ್ಲಿ ಅಲ್ಲಿಯ ಜನಜೀವನ ಗೊತ್ತಿರುವ ನಾನು ಏನಾದರೂ ಸಹಾಯ ಮಾಡಲೆ? ಕೇಳಲಿಲ್ಲ. ಇವ ನನ್ನ ಬಳಿಗೆ ಬಂದ. ನಾನು ಹೇಳಿದೆ. ನೋಡು, ನಿನ್ನ ತಾಯಿ ಹಳ್ಳಿ ಗುಗ್ಗೇ ಇರಬಹುದು. ಆದರೆ ಆಕೆಗೆ ಬದ್ಧತೆ ಇದೆ. ಒಂದು ವೇಳೆ ಆಕೆ ಇಲ್ಲದಿದ್ದರೂ ನೀವು ಮಕ್ಕಳಿರುತ್ತೀರಿ. ಸಮಾಜ ಇರುತ್ತದೆ. ಒಂದು ವೇಳೆ ಆಕೆಯನ್ನು ನಂಬಿ ನೀನು ಅವಳೊಂದಿಗೆ ತಂದೆಯನ್ನು ಕಳಿಸಿಕೊಟ್ಟರೆ ಇಲ್ಲಿ ನಿನ್ನ ತಾಯಿ, ನಿಮ್ಮ ಬದುಕು ಬೀದಿಗೆ ಬರುತ್ತದೆ. ಅಲ್ಲಿ ಆಕೆ ಇವನನ್ನು ಜತನ ಮಾಡುತ್ತಾಳೆಂದು ಯಾವ ನಂಬಿಕೆ ಇದೆ? ಎಂದೆ. ಹೌದೆಂದ ಆತ ತಂದೆಯಿಂದ ಆಕೆಯನ್ನು ದೂರ ಮಾಡಿದ. ಇದಕ್ಕಾಗಿ ತಂದೆ ಈಗಲೂ ಈತನನ್ನು ಕಂಡರೆ ದ್ವೇಷ ಸಾಧಿಸುತ್ತಾನೆಂಬ ವಿಷಯ ಇತ್ತೀಚೆಗೆ ತಿಳಿಯಿತು. ಜೊತೆಗೆ ತಂದೆ ತಾಯಿಯ ಸಂಬಂಧ ಬಲವಂತದ ಮಾಘಸ್ನಾನ ಆಗಿದೆ ಎಂಬ ಸುದ್ದಿಯೂ ಬಂತು....
                ಹಾಗೇ ಸುಮಾರು ೧೩ ವರ್ಷಗಳ ಹಿಂದಿನ ಮಾತು. ಆತ ಬೆಳಿಗ್ಗೆ ಹೋದರೆ ರಾತ್ರಿ ಬರುವ ಕೆಲಸದಲ್ಲಿದ್ದ. ಬಹಳ ಜವಾಬ್ದಾರಿಯ ಕೆಲಸ. ಆತ ಹೆಚ್ಚೂ ಕಡಿಮೆ ವರ್ಕೊ ಹಾಲಿಕ್. ಮನೆಗೊಬ್ಬ ಕೈಯಲ್ಲಿ ಕೆಲಸವಿಲ್ಲದ ಗೆಳೆಯ ಬಂದ. ಆತ ಈತನ ಹೆಂಡತಿಯನ್ನು ಅಕ್ಕ ಅಕ್ಕ ಎಂದು ಸುತ್ತಿ ಕೆಲಸ ಮಾಡಿಕೊಟ್ಟು ಮನಗೆದ್ದು ಬಿಟ್ಟ. ಹೆಂಡತಿ ಸದಾ ಆತನ ಜಪ ಮಾಡತೊಡಗಿದಳು. ವಿಚಾರಿಸಿದರೆ ನಮ್ಮದು ತಾಯಿ, ಮಗನಂತ ಸಂಬಂಧ, ನನ್ನ ಮೇಲೇ ಅನುಮಾನ ಪಡುತ್ತೀಯಾ? ಎಂದಳು. ಈತನಿಗೆ ನುಂಗಲಾರದ ತುತ್ತಾದಾಗ ಬಾರುಗಳಿಗೆ ಅಲೆದಾಡತೊಡಗಿದ. ಕೊನೆಗೊಂದು ದಿನ ಗೆಳೆಯ ಬೇರೆ ಮದುವೆಯಾಗಿ ಹೋದ. ಈತ ಖುಷಿಯಾಗಿ ಹೆಂಡತಿಯ ಬಳಿಗೆ ಹೋದ. ಕತ್ತೆಯಂತಹ ನಿನಗೆ ಮೂರು ಹೊತ್ತು ಅದೇ ಧ್ಯಾನ ಎಂದು ದೂರವಿಡುವ ಪ್ರಯತ್ನ ಮೊದಲಾಯಿತು. ಆ ನಂತರ ಈತನೂ ಹೊರಗೆ ಕಾಲಿಟ್ಟ. ಆದರೂ ಇಬ್ಬರಲ್ಲಿ ಯಾರೂ ಎದ್ದು ಹೋಗಲಿಲ್ಲ. ಒಂದೇ ಸೂರಿನಡಿ ಸಾರವಿಲ್ಲದ ಸಂಸಾರ! ಇಬ್ಬರಲ್ಲಿ ಯಾರೂ ಎದ್ದು ಹೋಗದೇ ಒಬ್ಬರಿಗೊಬ್ಬರ ಖುಷಿಗೆ ಸ್ಪರ್ಧಿಗಳಂತೆ ವಿಘ್ನ ಸಂತೋಷಿಗಳಾಗಿ ಬದುಕುವುದು ನೋಡಿದಾಗ ನನಗೆ ‘ಅಯ್ಯೊ ಪಾಪ’ ಎನಿಸುತ್ತದೆ.
                 ಇವೆರಡು ಉದಾಹರಣೆಗಳು ಮಾತ್ರ. ಕಸ್ತೂರಿ ವಾಹಿನಿಯಲ್ಲಿ  ‘ಇದು ಯಾರು ಬರೆದ ಕಥೆಯೋ’ ಮಾಡುವಾಗ ಇಂಥ ಸಾಕಷ್ಟು ಪ್ರಕರಣಗಳನ್ನು ನೋಡಿದ್ದ ನನಗೆ ಅರ್ಥವಾಗಿದ್ದಿಷ್ಟು. ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್, ಅಧಿಕೃತ, ಅನಧಿಕೃತ  ಯಾವುದೇ ಇರಲಿ, ಪ್ರೀತಿ ಇಲ್ಲದ ಮೇಲೆ ಯಾವ ಕಾನೂನು, ಸಮಾಜ, ಚಾನೆಲ್ಲು ಸಹ ಹೃದಯಗಳನ್ನು ಬೆಸೆಯಲಾರವು. ಬದಲಿಗೆ ವ್ಯಕ್ತಿಗೆ, ಆ ಮೂಲಕ ಸಮಾಜಕ್ಕೆ ಹೊಸ ಭಾರವನ್ನು ಮಾತ್ರ ಹುಟ್ಟುಹಾಕಬಲ್ಲವು.
                ಇಂತಹ ಸಮಸ್ಯೆ ಹುಟ್ಟಲು ಮೊದಲನೆಯ ಕಾರಣ ಸಂಗಾತಿಯ ತಪ್ಪು ಆಯ್ಕೆ. ತಾವೇನು, ತಮ್ಮ ಅಗತ್ಯತೆ ಏನು ಎಂಬ ಸ್ಪಷ್ಟ ಕಲ್ಪನೆ ಇಲ್ಲದೆ, ಎದುರಿನ ವ್ಯಕ್ತಿಯ ಸೌಂದರ್ಯ, ಸ್ಟೇಟಸ್, ತನ್ನಂತೆಯೇ ಆತ/ಆಕೆ ಎಂಬ ಸೆಲ್ಫ್ ಅಸ್ಯೂಮ್ಡ್ ಸಾಮ್ಯತೆ, ದೌರ್ಬಲ್ಯಗಳನ್ನು ಪರಿಗಣಿಸದೆ ಕೇವಲ ಗುಣಗಳನ್ನು ನೋಡಿ ತೆಗೆದುಕೊಳ್ಳುವ ತೀರ್ಮಾನಗಳು ಮುಂದೆ ಎರಡನೆಯ ಆಯ್ಕೆಗೆ ಮೊದಲ ಅಡಿಗಲ್ಲಾಗುತ್ತವೆ. ಮದುವೆಯಾದ ನಂತರ ಈ ಎಲ್ಲ ಭ್ರಮೆಗಳು ಕಳಚಿ ಬಿದ್ದರೆ ದೌರ್ಬಲ್ಯಗಳು ದೊಡ್ಡದಾಗಿ ಕಾಣಿಸುತ್ತವೆ. ಜೊತೆಗೆ ಬದುಕುವುದು ಅಸಾಧ್ಯವಾದಾಗ ಮನಸ್ಸು ಹೊಸ ಕನಸೊಂದನ್ನು ಕಾಣುವ ಆಸೆ ವ್ಯಕ್ತಪಡಿಸುತ್ತದೆ. ಈ ಹುಡುಕಾಟದಲ್ಲಿ ದೊಡ್ಡ ಸಮಸ್ಯೆಯೆಂದರೆ ಅದಾಗಲೆ ಸೆಕೆಂಡ್ ಹ್ಯಾಂಡ್ (ಈ ಶಬ್ದ ಯಾಕೆ ಬಳಸುತ್ತೇನೆ ಎಂದರೆ ನಮಗೆಲ್ಲ ನಾವು ಹೇಗೇ ಇರಲಿ, ಮೊದಲನೆಯ ಮದುವೆಯಾಗಬೇಕು, ಹುಡುಗ/ಹುಡುಗಿಗೆ ಮಕ್ಕಳಿರಬಾರದು, ನಮ್ಮ ವಯಸ್ಸಿನ ಆಸುಪಾಸು ಇರಬೇಕು, ಸುಂದರವಾಗಿರಬೇಕು, ವಿದ್ಯೆ, ರೂಪ, ಐಶ್ವರ್ಯಗಳಲ್ಲಿ ನಮಗಿಂತ ಮೇಲ್ಮಟ್ಟದಲ್ಲಿರಬೇಕು ಹೀಗೆ ಹತ್ತಾರು ಮನುಷ್ಯ ಸಹಜ ನಿರೀಕ್ಷೆಗಳು ಹಾಗೂ ಅದಕ್ಕೆ ನಾನು ತಕ್ಕವ ಎಂಬ ಸುಳ್ಳು ಅಹಮಿಕೆಯೂ ಇರುತ್ತದೆ.)

ಆಗಿರುವ, ಸಮಾಜದ ಭದ್ರಕೋಟೆಯಿಂದ ಎದ್ದು ಬರುತ್ತಾನೋ/ ಇಲ್ಲವೋ ಎಂಬ ಅನುಮಾನದಿಂದಾಗಿ ಮೂರನೆಯ ವ್ಯಕ್ತಿಯ ಪ್ರೀತಿಯೂ ಅರ್ಧಸತ್ಯವೇ ಆಗಿಬಿಡುತ್ತದೆ. ಈ ಅರ್ಧಸತ್ಯದ ಬದುಕು ಕೊನೆಯಾದಾಗ ವ್ಯಕ್ತಿ ಮೊದಲ ಸಂಗಾತಿಯ ಹತ್ತಿರವೇ ಹೋಗುವುದು ಅನಿವಾರ್ಯವಾಗುತ್ತದೆ. ಹಾಗೆ ಹೋದಾಗ ಬಹುತೇಕ ಸಂದರ್ಭಗಳಲ್ಲಿ ಈ ವ್ಯಕ್ತಿಗೆ ಪ್ರೀತಿಯಲ್ಲಿ ಕಳೆದ ನೆನಪುಗಳು ಪ್ಯಾಚ್ ಅಪ್ ಮಾಡಿಕೊಳ್ಳಲು ಬಿಡಲಾರವು. ಅದೇ ವೇಳೆ ಬೇರೆ ಎದೆ ಗೂಡಿನಿಂದ ಹಾರಿ ಬಂದ ಹಕ್ಕಿಯನ್ನು ಒಳಸೇರಿಸಲು ಅದಾಗಲೇ ಇರುವ ಹಕ್ಕಿಯ ಮನಸ್ಸೊಪ್ಪದು.
             ಪ್ರಾಮಾಣಿಕ, ಉತ್ಕಟ, ನಿರಪೇಕ್ಷ ಪ್ರೀತಿ ಇಲ್ಲದಿದ್ದರೆ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವ ಶಕ್ತಿ ಇರುವುದಿಲ್ಲ. ಯಾಕೆಂದರೆ ಅಲ್ಲೊಂದು ಲೆಕ್ಕಾಚಾರ ಇರುತ್ತದೆ. ಇಬ್ಬರಿಗೂ ಸ್ವ ರಕ್ಷಣೆಯ ಪ್ರಜ್ಞೆ ಇರುತ್ತದೆ.  ತಪ್ಪಿಲ್ಲದ ನಾನು ಏಕೆ ಎದ್ದು ಬರಬೇಕು? ಮದುವೆ ಕೊಟ್ಟ ನನ್ನ ಹಕ್ಕನ್ನು ನಾನು ಚಲಾಯಿಸಿಯಾದರೂ ಆತ/ಆಕೆಯನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳುತ್ತೇನೆ, ಸಂಸಾರ ಉಳಿಸಿಕೊಳ್ಳುತ್ತೇನೆ ಎಂದು ಒಬ್ಬರು ಒದ್ದಾಡುತ್ತಾರೆ. ಇನ್ನೊಬ್ಬರು ಮೂರನೆಯ ವ್ಯಕ್ತಿ ಕೈಕೊಟ್ಟರೆ ಇದೆಂತೂ ಇದ್ದೇ ಇರುತ್ತದೆಯಲ್ಲ ಎಂಬುದು, ತನಗೇ ಸರಿಯಾಗಿ ಗೊತ್ತಿಲ್ಲ, ತಾನು ಮೂರನೆಯ ವ್ಯಕ್ತಿಯನ್ನು ಪ್ರೀತಿಸುತ್ತೇನೋ/ಆಕರ್ಷಣೆಯಲ್ಲಿದ್ದೇನೋ ಎಂಬುದು, ಸಮಾಜ, ಮಕ್ಕಳು, ದೊಡ್ಡವರು ಏನಂತಾರೆ ಗೊತ್ತಾದರೆ?,  ತಾವೇ ಕಟ್ಟಿಕೊಂಡ ಪ್ರತಿಷ್ಠೆ ಹಾಳಾಗುತ್ತದೆ ಎಂಬ ಮನೋಭಾವ ಹೀಗೆ ಸಾಕಷ್ಟು ಕಾರಣಗಳಿಂದ ಬೇಡದ ಮದುವೆಯಿಂದ ಎದ್ದು ಬರಲಾರರು. ಇಂತಹ ಹೇತಲಾಂಡಿಗಳು ಗಂಡ/ಹೆಂಡತಿಯನ್ನು ಟ್ರಂಪ್ ಕಾರ್ಡ್ ನಂತೆ ಉಪಯೋಗಿಸುವುದು ಹೊಸ ಟ್ರೆಂಡೇನಲ್ಲ. ನನ್ನ ಹೆಂಡತಿಗೆ ಹುಷಾರಿಲ್ಲ, ಅವಳೇನೋ ಒಳ್ಳೆಯವಳೇ, ಆದರೆ ಪಾಪ ಹಳ್ಳಿ ಗುಗ್ಗು, ಅವಳು ಸರಿಯಿಲ್ಲ, ನನಗೆ ಸ್ಪಂದಿಸುವುದಿಲ್ಲ ಹೀಗೆ ಹತ್ತಾರು ಕತೆಗಳನ್ನು ಪುರುಷರು, ಅವನು ನನಗೆ ತಕ್ಕವನಲ್ಲ, ಬೇಜವಾಬ್ದಾರಿ, ಸಮಯ ಕೊಡುವುದಿಲ್ಲ, ಅರಸಿಕ, ವಯಸ್ಸಾದವ, ನೋಡಲು ಚೆನ್ನಾಗಿಲ್ಲ ಎಂಬಿತ್ಯಾದಿಗಳಿಂದ ಮಹಿಳೆಯರು ಕಥೆ ಕಟ್ಟುತ್ತಲೇ ಮೂರನೆಯವರಿಗೆ ಗಾಳ ಹಾಕುತ್ತಾರೆ. ಬಿದ್ದರೆ ಅರ್ಧಸತ್ಯದ ಬದುಕು ಸತ್ಯವೆಂಬಂತೆ ಬದುಕುತ್ತಾರೆ. ಅರ್ಧಸತ್ಯ ಪೂರ್ತಿಯಾಗುವುದಿಲ್ಲ ಎಂಬ ಅರಿವಾದಾಗ ಟ್ರಂಪ್ ಕಾರ್ಡ್ ಬಳಸಿ ಸ್ವಲ್ಪ ವಿಶ್ರಾಂತಿ....ಹಾಗೆ ಮತ್ತೆ ಗಾಳ ಹಾಕುವುದು ಶುರು.
              ನಿಯತ್ತಿಲ್ಲದ, ವಿಶ್ವಾಸವಿಲ್ಲದ, ದೃಢನಿರ್ಧಾರ, ಯಾತರ ಮೇಲೂ ನಂಬಿಕೆಯಿಲ್ಲದ ಇಂತಹ ಮಂದಿ ಹೆಚ್ಚಾಗುತ್ತಿರುವುದು ಇಂದಿನ ಸಾಮಾಜಿಕ ದುರಂತವೆಂದು ನಾನು ಭಾವಿಸುತ್ತೇನೆ. ೧೪ ವರ್ಷಗಳ ಹಿಂದೆ ಇಂತಹ ಸುಳಿಯೊಳಗೆ ನಾನು ಸಿಕ್ಕಿಕೊಂಡಾಗ ನನ್ನನ್ನು ಉಳಿಸಿದ್ದು ನನ್ನ ಉತ್ಕಟ ಮತ್ತು ಪ್ರಾಮಾಣಿಕ, ನಿಸ್ವಾರ್ಥ ಪ್ರೀತಿ. ಇಂದೂ ಸಹ ಸತ್ಯದ ಮೇಲೆ ಕಟ್ಟಿಕೊಂಡ ನನ್ನ ಖಾಸಗಿ ಬದುಕು ಅದರ ಆಧಾರದ ಮೇಲೇ ನಿಂತಿದೆ. ನನ್ನವನ ಮತ್ತೆ, ನನ್ನ ನಡುವಿನ ಅಲಿಖಿತ ಒಪ್ಪಂದಗಳಲ್ಲಿ ಪ್ರೀತಿಯ ಪ್ರಾಮಾಣಿಕತೆಯೂ ಒಂದು. ಅವನಿಗಾಗಲಿ, ನನಗಾಗಲಿ ಪರಸ್ಪರರಿಗಿಂತ ಬೇರೆಯವರ ಮೇಲೆ ಹೆಚ್ಚು ಪ್ರೀತಿ ಉಂಟಾದರೆ ಪ್ರಾಮಾಣಿಕವಾಗಿ ಹೇಳುವ ಸ್ವಾತಂತ್ರ್ಯ ಮತ್ತು ಬಿಡುಗಡೆಗೆ ಮುಕ್ತ ಅವಕಾಶವಿದೆ. ಅಂತಹದೊಂದು ಸಂದರ್ಭ ಬಂದು ಆತನ ಕಣ್ಣಿನಲ್ಲಿ ನನ್ನ ಬಿಂಬ ಕಾಣಿಸದಿದ್ದರೆ ನಾನು ಸದ್ದಿಲ್ಲದೆ ಎದ್ದು ಹೋಗುವವಳು ಎಂಬುದೂ ಆತನಿಗೆ ಅರಿವಿದೆ. ನನ್ನ ಹೊರತು ಇನ್ಯಾವ ಹೆಣ್ಣೂ ನನ್ನವನ ಪ್ರೀತಿ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬ ವಿಶ್ವಾಸ ನನ್ನ ದೇವರು ನನಗಾಗಿ ಮಾಡಿದ ಆಯ್ಕೆಯ ಮೇಲಿದೆ. ಅದೊಂದು ಆತ್ಮಬಲದಿಂದ ನಾನು ವಿನಂತಿಸುತ್ತೇನೆ, ಸುಂದರ ಬದುಕಿಗಾಗಿ ನೀವು ಹಂಬಲಿಸುತ್ತಿದ್ದರೆ ಪ್ರಾಮಾಣಿಕರಾಗಿರಿ, ಕೊನೇಪಕ್ಷ ನಿಮ್ಮ ಹೃದಯಕ್ಕಾದರೂ. ಏನನ್ನೋ ಕಳೆದುಕೊಳ್ಳುವ ಭೀತಿಯಿಂದ ಅಪ್ರಮಾಣಿಕರಾಗುತ್ತ ಹೋದಂತೆ ನಿಮ್ಮ ಬದುಕು, ಮನಃಶಾಂತಿಯೊಂದೇ ಅಲ್ಲ, ಉಳಿದ ಎರಡು ಜೀವಗಳ ಬದುಕು, ಮನಃಶಾಂತಿಯನ್ನು ಸಹ ನಾಶ ಮಾಡುತ್ತೀರಿ. ನೆನಪಿರಲಿ.

ಭಾನುವಾರ, ನವೆಂಬರ್ 1, 2015

ಜಾತ್ಯಾತೀತ ರಾಷ್ಟ್ರದಲ್ಲಿ ‘ನಾನು’

ಅಕ್ಷರಶಃ ಕಂಗಾಲಾಗಿದ್ದೇನೆ. ಹಿಂದಿನ ನನ್ನ ಫೇಸ್ಬುಕ್ ಸ್ಟೇಟಸ್ ನಲ್ಲಿ ಹೇಳಿದಂತೆ ನನ್ನ ಬಾಲ್ಯದಲ್ಲಿ ಜಾತಿ ಪದ್ದತಿಯ ಗಂಧಗಾಳಿಯೇ ಇರಲಿಲ್ಲ. ಅಲ್ಲಿ ಹೋಗಬೇಡ, ಇವರನ್ನು ಮುಟ್ಟಿಸಿಕೊಳ್ಳಬೇಡ, ಅವರನ್ನು ಮುಟ್ಟಿಬಂದರೆ ಬಟ್ಟೆ ಬದಲಾಯಿಸು ಇಂತವನ್ನೆಲ್ಲ ಕೇಳಿಯೇ ಗೊತ್ತಿರಲಿಲ್ಲ. ಆ ನಂತರದ ಕೆಲವು ವರ್ಷ ಹವ್ಯಕ ಬ್ರಾಹ್ಮಣ ಸಮುದಾಯದ ಆಚಾರ, ವಿಚಾರಗಳು, ಪದ್ದತಿಗಳು, ಪುರಾಣ, ಶಾಸ್ತ್ರಗಳು, ಮಂತ್ರ, ಪೂಜೆಗಳು, ಅವುಗಳ ಹಿಂದಿನ ತತ್ವಗಳ ಅನ್ವೇಷಣೆ, ದೇವರು, ಭಕ್ತಿ, ಪ್ರೀತಿ ಇವುಗಳನ್ನು ಅರ್ಥ ಮಾಡಿಕೊಳ್ಳಲೇ ಕಳೆದವು. ಅಲ್ಲಿ ಹೊಲೆಯರ ಮನೆ, ನಾಯಕರ ಕೇರಿ, ಭಟ್ಟರ ಕೇರಿ, ಹೆಗಡೆ ಕೇರಿ, ಮೇಲಿನ ಕೇರಿ, ಕೆಳಗಿನ ಕೇರಿ, ಘಟ್ಟದ ಕೆಳಗಿನವರು, ಘಟ್ಟದ ಮೇಲಿನವರು, ತೋಟದ ಸೀಮೆಯವರು, ಗದ್ದೆ ಸೀಮೆಯವರು, ಆ ತಾಲೂಕು, ಈ ತಾಲೂಕು ಇಷ್ಟು ವಿಭಾಗಗಳಲ್ಲಿ ಜನರ ಮನಸ್ಸು ಹಂಚಿಹೋಗಿದ್ದು ಕಂಡೆ. ಈ ಪ್ರದೇಶಗಳ ಹಂಚಿಕೆ ಮತ್ತು ಅವುಗಳ ನಡುವಿನ ಮೌನ ಯುದ್ಧ ನನ್ನೊಳಗೆ ಹೊಸ ಯುದ್ಧವನ್ನು ಹುಟ್ಟುಹಾಕಿತ್ತು. ನಂತರ ನಮಸ್ತೆ ಮಾತೃಭೂಮೆಯ ಪರಿಚಯವಾದಾಗ ಓ ನಾವೆಲ್ಲ ಹಿಂದೂಗಳು, ಆ ಸಾಬಿಗಳು ಎಂಬಂತಹ ಮಾತುಗಳು ಕೇಳಿಬಂದವು. ಹುಟ್ಟಾ ಕ್ರಿಶ್ಚಿಯನ್ನರನ್ನು ನೋಡದ ನನಗೆ ಅವರ ಬಗ್ಗೆ ಕುತೂಹಲ. ಜೀವನ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಚರ್ಚುಗಳಲ್ಲಿ ಪ್ರತಿ ಭಾನುವಾರ ನಡೆಯುವ ಪ್ರಾರ್ಥನಾ ಸಭೆಗಳ ಮೂಲಕ ಅವರ ಜನಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆ ನೀಡಿತು. ಮೈಸೂರಿಗೆ ಪ್ರವಾಸಕ್ಕೆ ಹೋದಾಗ ಶ್ರೀರಂಗಪಟ್ಟಣದ ದರ್ಗಾದ ಒಳಗೆ ನಮ್ಮನ್ನು ಬಿಡಲಿಲ್ಲ. ಮುಸ್ಲಿಂ ಅಲ್ಲದವರು, ಮುಸ್ಲಿಂರಾದರೂ ಹೆಣ್ಣುಮಕ್ಕಳಾದರೂ ಒಳಗೆ ಬಿಡುವುದಿಲ್ಲ ಎಂದು ಅಲ್ಲಿ ಗೊತ್ತಾಯಿತು. ಕಾರಣ ಕೇಳಿದ್ದಕ್ಕೆ ಅದೇ ಹಿಂದೂಗಳ ಮಾತು ‘ನಾಲ್ಕು ದಿನದ ಬಹಿಷ್ಕಾರ’. ಅದಾಗಲೇ ಅಪ್ಪನ ದೋಸ್ತಿ ಸಾಲೇ ಸಾಹೇಬರ ಮಗಳು ೧೬ ವರ್ಷಕ್ಕೆ ಮದುವೆಯಾದದ್ದೂ, ವರ್ಷ ತುಂಬುವುದರ ಒಳಗೆ ಅವಳ ಪುಟ್ಟ ಮಗುವನ್ನು ನೋಡಲು ನಾನು, ಅಮ್ಮ ಹೋಗಿದ್ದೂ ನೆನಪಿತ್ತು. ಈ ಪ್ರವಾಸದ ಹೊತ್ತಿಗೆ ಆಕೆಯ ಗಂಡ ಯಾವುದೋ ಅಪಘಾತದಲ್ಲಿ ತೀರಿಹೋದನೆಂದೂ ಆಕೆಗೆ ಮತ್ತೊಂದು ನಿಖಾ ಮಾಡುವ ತಯಾರಿ ನಡೆಯುತ್ತಿದೆಯೆಂದೂ ಕೇಳಲ್ಪಟ್ಟಿದ್ದೆ. ಜೀವನದಲ್ಲಿ ನಾನು ನೋಡಿದ ಮೊದಲ ಮದುವೆ, ಮೊದಲ ಹುಟ್ಟಿನ ಸಂಭ್ರಮ ಬಹುಶಃ ಆಶಾಬಿಯದ್ದೆ ಎಂದು ನೆನಪು. ನನಗೆ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮಗಳ ಆಶಯ, ದೌರ್ಬಲ್ಯಗಳ ನಡುವೆ ಅಂತಹ ವ್ಯತ್ಯಾಸ ಕಾಣಲಿಲ್ಲ. ವಯಸ್ಸಾದರೂ ತುಂಡುಲಂಗ ಧರಿಸಿ ಯಾವುದೋ ಮದುವೆ ಮನೆಗೆ ಹೋಗುವ ಸಂಭ್ರಮದಲ್ಲಿ ಪ್ರಾರ್ಥನಾ ಸಭೆಗಳಲ್ಲಿ ಅವರು ಪ್ರಾರ್ಥಿಸುತ್ತಿದ್ದ ರೀತಿ, ನಮ್ಮಲ್ಲಿನ ಪೂಜೆಯ ಕೊನೆಗೆ ಮಂತ್ರಪುಷ್ಪ ಹೇಳುವುದನ್ನು ನೆನಪಿಸಿತ್ತು. ಇವತ್ತಿಗೂ ಮಸೀದಿಯಿಂದ ಕೇಳುವ ಅಲ್ಲಾ ಹೋ ಅಕ್ಬರ್ ನಲ್ಲಿ ನನಗೆ ಓಂಕಾರದ ಧ್ವನಿ ಕೇಳಿಸುತ್ತದೆ. ನನ್ನ ಕಿವಿಯೇ ಸರಿಯಿಲ್ಲವೇನೋ ಅದು ಬೇರೆ ಮಾತು!!
              ಇಂತಿಪ್ಪ ನನಗೆ ಯಾವಾಗ ಸಾಬಿ ಎಂಬ ತಿರಸ್ಕಾರದ ಮಾತುಗಳು, ಹೆಣ್ಣುಮಕ್ಕಳ ನಡತೆ, ವಿಚಾರ, ಧೋರಣೆಯ ಮೇಲೆ ವಿಪರೀತ ನಿಯಂತ್ರಣದ ಅರಿವು ನನಗೆ ಅರ್ಥವಾಗತೊಡಗಿತೋ ಆಗ ಆರ್ ಎಸ್ ಎಸ್ ಎಂಬ ಭೂತ ತಲೆಯಿಂದ ಇಳಿಯಿತು! ಅಯ್ಯೋ ಇದೆಂತ ಧರ್ಮ, ಜಾತಿಯಪ್ಪ ಎಂದು ನಿಜಕ್ಕೂ ಕಂಗಾಲಾದ ನಾನು ನನ್ನದೇ ಅಧ್ಯಯನಕ್ಕೆ ತೊಡಗಿದೆ. ಈ ಸಮಾಜದಲ್ಲಿ ಜಾತಿ ಯಾಕೆ ಬೇಕು? ಯಾಕೆ ಬಂತು? ಇದರ ಹಿನ್ನೆಲೆ ಏನು? ಧರ್ಮ ಎಂದರೇನು? ಅದರ ನಿಜಾರ್ಥ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ನಾನು ಉತ್ತರ ಕಂಡುಕೊಂಡೆ. ಅದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಲು ಹೋದರೆ ದೊಡ್ಡ ಪುಸ್ತಕವೇ ಆದೀತು. ಆದರೆ ಸಂಕ್ಷಿಪ್ತ ರೂಪ ನೀಡಬಲ್ಲೆ.
             ಈ ಸಮಾಜದಲ್ಲಿ ಜಾತಿ, ಲಿಂಗ ಇವೆಲ್ಲದರ ತಾರತಮ್ಯ ಹುಟ್ಟು ಹಾಕಿದ್ದು ಶ್ರಮದ ವಿಂಗಡಣೆ. ಮನೆಕೆಲಸ ಮಾಡುವವಳು ಹೆಂಗಸು, ದುಡಿದು ತರುವವ ಗಂಡಸು, ಹೊಲದಲ್ಲಿ ಬಿಸಿಲಲ್ಲಿ ಕೆಲಸ ಮಾಡುವುದು, ಕಸ ಹೊಡೆಯುವುದು, ದೇವರ ಪೂಜೆ ಮಾಡುವುದು ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಕೆಲಸದ ವಿಂಗಡಣೆ ಮಾಡುತ್ತ ಹೋಗಿದ್ದು ಈ ದರಿದ್ರ ಜಾತಿ ಪದ್ಧತಿಗೆ ಮೂಲ. ಕೆಲಸಗಳನ್ನು ಸುಲಭಗೊಳಿಸಲು ಸಮುದಾಯವನ್ನು ವಿಂಗಡಿಸಿದ್ದು ಎತ್ತೆತ್ತಲೋ ದಾರಿ ಮಾಡಿಕೊಟ್ಟಿತು. ಸಾವಿನ ನಂತರದ ಬದುಕಿನ ಅನ್ವೇಷಣೆಗೆ ಬಿದ್ದ ಮನಸ್ಸು, ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿಯೊಂದಿದೆ, ಅದು ನಮಗಿಂತ ದೊಡ್ಡದಿದೆ ಎಂದು ಅರಿವಾದಾಗ ಬಂದಿದ್ದು ದೇವರ ಕಲ್ಪನೆ. ಈಗ ದೇವರನ್ನು ಮೆಚ್ಚಿಸಲು ಪೂಜೆ, ಬಲಿ, ಆತನೂ ಒಬ್ಬ ವ್ಯಕ್ತಿ ಎಂದು ತಮಗೆ ಏನೇನು ದೌರ್ಬಲ್ಯ, ಶಕ್ತಿಗಳಿವೆಯೋ ಅವುಗಳನ್ನು ಆರೋಪಿಸುತ್ತ ಹೋಗಿದ್ದು ಆ ಕೆಲಸಕ್ಕಾಗಿಯೇ ವ್ಯಕ್ತಿಯೊಬ್ಬನನ್ನು ನಿಯೋಜಿಸುವ ಹಂತ ತಲುಪಿತು. ಇದು ಆ ವ್ಯಕ್ತಿ ತನ್ನೊಳಗೆ ತಾನೇ ಹೊಕ್ಕು ನೋಡುವ ಅವಕಾಶ ಒದಗಿಸಿತು. ಅದರಂತೆ ಆತ ತನ್ನ ಒಳನೋಟದಿಂದ ಸಮುದಾಯದ ಹಿತಕ್ಕೆ ಸಲಹೆಗಳನ್ನು ನೀಡತೊಡಗಿದ. ಜನರು ಅವನನ್ನು ಪವಾಡ ಪುರುಷ, ದೇವಾಂಶ ಸಂಭೂತ ಎಂದು ಗೌರವಿಸತೊಡಗಿದರು. ನಿಧಾನವಾಗಿ ಅಹಂಕಾರ ಬೆಳೆದಂತೆ ದೌರ್ಜನ್ಯದ ಆರಂಭವಾಯಿತು. ಇದನ್ನು ಪ್ರಶ್ನಿಸಿ/ ಎದುರಿಸಲಾಗದೆ ಈ ವಿಭಾಗಿಸಲ್ಪಟ್ಟ ಶ್ರಮಜೀವಿಗಳು ತಮ್ಮದೇ ದೇವರನ್ನು ಸ್ಥಾಪಿಸಿಕೊಂಡರು. ಅದು ಮಾರಮ್ಮ, ಕೆಂಪಮ್ಮನಿಂದ ಮೊದಲ್ಗೊಂಡು, ಮೇರಿ, ಸಂತರು, ಸೂಫಿಗಳು, ಶಿಯಾ, ಸುನ್ನಿಗಳು, ಹೀನಾಯಾನ, ಮಹಾಯಾನ ಹೀಗೆ ಹೊಸ ಹೊಸ ದೇವರುಗಳು, ಅವರಿಗೆ ಆರೋಪಿಸಿದ ಅಗತ್ಯತೆಗಳನ್ನು ಪಾಲಿಸುವ ಹೊಸ ಪಂಥಗಳು, ಆ ಹೊಸ ಪಂಥಗಳಲ್ಲಿನ ದೌರ್ಜನ್ಯ ಪ್ರಶ್ನಿಸಿ ಇನ್ನೊಂದಿಷ್ಟು ಮತ, ಪಂಥಗಳು ಹೀಗೆ ಒಡೆದುಹೋಗುತ್ತ ಬಂತು. ಯಾವ ಧರ್ಮ ಜನರನ್ನು ಒಂದುಗೂಡಿಸಬೇಕಿತ್ತೋ ಯಾವ ದೇವರು, ಅವನ ಕಲ್ಪನೆ, ಆಚರಣೆಗಳು ಆತ್ಮಗಳನ್ನು ಯೋನಿ, ಮೊಲೆ, ಶಿಶ್ನಗಳ ಪ್ರಜ್ನೆಯಿಂದ ಮೇಲೆತ್ತಬೇಕಿತ್ತೋ ಅದೇ ಇವತ್ತು ಜನರನ್ನು ಅವನತಿಗೆ ಒಯ್ಯುತ್ತಿರುವುದು ದುರಂತ!
             ಇಲ್ಲಿ ಧರ್ಮ, ಕೆಲಸದ ವಿಂಗಡಣೆಯಂಥ ಕಲ್ಪನೆಗಳನ್ನೆಲ್ಲ ತಂದವರ ತಪ್ಪು ನನಗೆ ಕಾಣುತ್ತಿಲ್ಲ. ಆದರೆ ಮನುಷ್ಯನ ಗ್ರಹಿಕೆಯ ದೋಷ ಇದಕ್ಕೆಲ್ಲ ಮೂಲ ಕಾರಣ ಎಂದು ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳಬಲ್ಲೆ. ಉದಾಹರಣೆಗೆ ನಮ್ಮ ಸುತ್ತಲಿನವರನ್ನೆ ತೆಗೆದುಕೊಳ್ಳಿ. ಪುರುಷರಾದರೆ ನಾನು ನನ್ನ ಅಪ್ಪನನ್ನು ಅನುಸರಿಸುತ್ತೇನೆ. ನಮ್ಮಪ್ಪ ಹಾಗಿದ್ದ, ಹೀಗಿದ್ದ ಅವನೇ ನನ್ನ ಪಾಲಿನ ಗುರು! ಯಾವುದಕ್ಕೆ? ಕುಡಿಯುವುದಕ್ಕೆ, ಹೆಂಡತಿಗೆ ಹೊಡೆಯುವುದಕ್ಕೆ, ಅವಳನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಹೀಗೆ ಅಪ್ಪನಿಗೆ ಯಾವ ಯಾವ ದೌರ್ಬಲ್ಯಗಳಿದ್ದವೋ ಅವು ಮಗನ ಗ್ರಹಿಕೆಯಲ್ಲಿ ಅನುಸರಿಸಲೇಬೇಕಾದ ಗುಣಗಳು. ಇನ್ನು ಹೆಣ್ಣಾದರೆ ಅವಳಿಗೆ ಅತ್ತೆ, ತಾಯಿ, ಸ್ವಂತ ತಂಗಿ, ಓರಗಿತ್ತಿಯರೇ ಅನುಕರಣೆ ಮಾಡಲು ಯೋಗ್ಯರು. ನನ್ನ ಅತ್ತೆ ನನಗೆ ಅಷ್ಟಿಷ್ಟು ಕಾಟ ಕೊಡಲಿಲ್ಲ, ನಾನು ಅನುಭವಿಸಿದ್ದನ್ನು ಸೊಸೆಯೂ ಅನುಭವಿಸಲಿ ಎಂಬಲ್ಲಿಂದ ಪಕ್ಕದ ಮನೆಯವಳೋ, ಗೆಳತಿಯೋ ಏನು ಮಾಡುತ್ತಾಳೆ ಅದನ್ನು ಇವರೂ ಮಾಡಬೇಕು. ಅವರಿಗೆ ಯಾವುದು ಶ್ರೇಷ್ಠವೆನಿಸುತ್ತದೆ? ಅವಳು ಬ್ಯೂಟಿಪಾರ್ಲರಿಗೆ ಹೋಗುವುದು, ಅವಳು ಗಂಡನ ಹಣವನ್ನು ಖುಷಿಯಾಗಿ ಖರ್ಚು ಮಾಡುವುದು, ಮಕ್ಕಳನ್ನು ಬಳಸಿಕೊಂಡು ಒಲ್ಲದ ಗಂಡನನ್ನು ಹಿಡಿತದಲ್ಲಿಡುವುದು/ ದೂರವಿಡುವುದು ಹೀಗೆ ಬೇಡದ್ದು, ಅದರ ಹಿನ್ನೆಲೆಯನ್ನು ಅರಿಯದೇ ಪಟ್ಟಿಯಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ಪುರುಷ / ಸ್ತ್ರೀ ತಮ್ಮ ದೌರ್ಬಲ್ಯಗಳಿಗೆ , ಅಹಂನ ಮಟ್ಟಕ್ಕೆ ಅನುಸಾರವಾಗಿ ಈ ಬೇಡದ ಪಟ್ಟಿಯನ್ನು ಬೆಳೆಸಿಕೊಳ್ಳುತ್ತ ಹೋಗುತ್ತಾರೆ. ಇದರಲ್ಲಿ ಬಾಲ್ಯ ಹಾಗೂ ಹದಿಹರೆಯದ ಬದುಕು ಬಹಳ ಮುಖ್ಯ ಪಾತ್ರವಹಿಸುತ್ತದೆ. ಸರಿಯಾದ ಪ್ರೀತಿ, ಸೂಕ್ತ ಮಾರ್ಗದರ್ಶನ, ಸಾಂತ್ವನ ಎಲ್ಲಕ್ಕಿಂತ ಹೆಚ್ಚು ದೊಡ್ಡವರೆಂದು ಅನಿಸಿಕೊಂಡವರ ದೊಡ್ಡತನದ ನಡವಳಿಕೆ ಸಮಾಜದ ಒಳಿತಿಗೆ ಅತ್ಯವಶ್ಯಕ. ಇವೆಲ್ಲ ಇವತ್ತಿನ ಬದುಕಿನಲ್ಲಿ ಎಷ್ಟರಮಟ್ಟಿಗೆ ಇವೆ ಎಂಬುದನ್ನು ನೋಡಿದರೆ ಯಾರಿಗಾದರೂ ನಾವೆತ್ತ ನಡೆಯುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.
               ಗೋ ಮಾಂಸ ತಿನ್ನಬಾರದು ಎಂದು ಅದರ ವೈಜ್ಞಾನಿಕ ಕಾರಣ ಕೊಟ್ಟು ಅರ್ಥ ಮಾಡಿಸುವುದು ಬೇರೆ, ಅದನ್ನು ತಿನ್ನಲೇಬಾರದು ಎಂದು ಕಾನೂನು ಮಾಡುವುದು ಬೇರೆ. ಹೆಣ್ಣುಮಕ್ಕಳು ಗಂಡಿಗೆ ಸಮಾನ ಎಂದು ಕುಡಿಯಬಾರದು, ಸಿಗರೇಟು ಸೇದಬಾರದು ಎಂದು ನೈತಿಕತೆಯ ಪಾಠ ಹೇಳುವುದು ಬೇರೆ, ಅವಳಿಗೆ ನೋಡಮ್ಮ ನಿನ್ನ ಅಸ್ತಿತ್ವ ನನ್ನ ದೃಷ್ಟಿಯಿಂದ ಎರಡು ಮೊಲೆ, ಯೋನಿ (ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು, ಇದು ಶೇ.೮೦ರಷ್ಟು ಜನರ ಸಮಸ್ಯೆ) ಗಿಂತಲೂ ದೊಡ್ಡದು. ನೀನು ನನ್ನ ಬದುಕಿಗೆ ಸ್ಪೂರ್ತಿ. ನಿನ್ನ ರಕ್ಷಣೆ, ನಿನ್ನ ಗೌರವ, ನಿನ್ನ ಭಾವನೆ ನನಗೆ ದೊಡ್ಡದು. ನೀನು ಅಧ್ಯಾತ್ಮ ಬದುಕಿಗೆ ತೆರೆದುಕೊಳ್ಳು. ಅದು ನಿನ್ನ ಆತ್ಮೋನ್ನತಿಗೂ, ನನ್ನ ಆತ್ಮೋನ್ನತಿಗೂ ಒಳ್ಳೆಯದು. ಈ ಸಮಾಜಕ್ಕೆ ಒಳ್ಳೆಯದು ಎಂದು ಪುರುಷರು ಹೇಳಲಿ ನೋಡೋಣ. ಬೆಟ್ಟು ಕಟ್ಟುತ್ತೇನೆ ೨೦ ವರ್ಷಗಳ ನಂತರ ಇಡೀ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಮತ್ತು ಪ್ರೀತಿ ತುಂಬುತ್ತದೆ.
              ಆದರೆ ನಾವು ಹೆದರುತ್ತೇವೆ. ಆಕೆಯನ್ನು ಸಂಸಾರಕ್ಕೆ ಕಟ್ಟಿಹಾಕಲು, ಮಕ್ಕಳು, ಮರಿ ಮಾಡಿ ನಮ್ಮ ಸುತ್ತಲೇ ಆಕೆ ಸುತ್ತುತ್ತಿರಬೇಕು ಎಂದು ಬಯಸುತ್ತೇವೆ. ಆಕೆ ಪೂಜೆ, ಪುನಸ್ಕಾರ, ಯೋಗ, ಧ್ಯಾನ ಎಂದು ಮಾತನಾಡತೊಡಗಿದರೆ ಬೆಚ್ಚಿ ಬೀಳುತ್ತೇವೆ. ಅವಳು ಸಂಸಾರ ಬಿಟ್ಟು ಸನ್ಯಾಸಿಯಾಗಿಬಿಟ್ಟರೆ ಎಂದು ಆತಂಕಕ್ಕೀಡಾಗುತ್ತೇವೆ. ಆಕೆಯ ಅಭಿಪ್ರಾಯ, ಭಾವನೆಗಳಿಗೆ ಬೇಲಿಹಾಕತೊಡಗುತ್ತೇವೆ. ಅದೇ ಸಮಯಕ್ಕೆ ಆಕೆಯ ಹಾರ್ಮೋನುಗಳು ವ್ಯತ್ಯಾಸಗೊಂಡು ತಾಯಿಯಂತೆ ಅರ್ಥ ಮಾಡಿಕೊಳ್ಳದೆ, ರಚ್ಚೆ ಹಿಡಿದು ಮಗುವಿನಂತಾದರೆ ಅಡಗಿಕೊಳ್ಳುವ ಮತ್ತೊಂದು ತಾಯ ಮಡಿಲು ಅರಸುತ್ತೇವೆ. ಆಕೆ ಕೂಡ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾರದೆ, ಮುಚ್ಚಿಡಲಾಗದೆ ಪಲಾಯನವಾದವನ್ನು ರೂಢಿಸಿಕೊಳ್ಳುತ್ತಾಳೆ. ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕಿ ಕಣ್ಣೊರೆಸುವ ತಂತ್ರ ಮಾಡುತ್ತಾಳೆ. ಒಳಗಿನ ಸಿಟ್ಟಿಗೆ ಹೊರಪ್ರಜ್ಞೆಗೆ ಅರಿವಿಲ್ಲದೆ
ಬೇಲಿ ಮುರಿಯಲು ಬೇಜವಾಬ್ದಾರಿತನ, ಅನೈತಿಕ ವ್ಯವಹಾರ, ಪುರುಷರು ಮಾಡುವ ಎಲ್ಲ ಮಾಡಬಾರದ ಕೆಲಸಗಳನ್ನು ಮಾಡಲು ಹವಣಿಸುತ್ತಾಳೆ. ಇಂಥ ತಾಯಿ, ತಂದೆಗೆ ಹುಟ್ಟುವ ಮಕ್ಕಳು ಮತ್ತೆ ಯಥಾಪ್ರಕಾರ ಕಲಿಯಬೇಕಾದ್ದನ್ನು ಬಿಟ್ಟು ಉಳಿದವನ್ನೆ ಕಲಿಯುತ್ತವೆ.

              ಇದು ಮೇಲ್ವರ್ಗದ ಬ್ರಾಹ್ಮಣರಿರಬಹುದು, ಕೆಳವರ್ಗದ ಶೂದ್ರರಿರಬಹುದು. ಎಲ್ಲಿಯವರೆಗೆ ಮಗುವಿಗಾಗಲೀ, ಹೆಣ್ಣಿಗಾಗಲೀ ಅಧ್ಯಾತ್ಮ ಜೀವನದ ಪರಿಕಲ್ಪನೆ ನೀಡದೆ ಕೇವಲ ಆಚಾರ, ವಿಚಾರಗಳನ್ನು ಹೇರುತ್ತ ಹೋಗುತ್ತೇವೋ ಅಲ್ಲಿಯವರೆಗೆ ಸಮಾಜಕ್ಕೆ ಜಾತಿ, ಅದರ ಪ್ರತಿಷ್ಠೆ, ಏಕಪಕ್ಷೀಯ ನೈತಿಕತೆ ಎಲ್ಲ ಬಹುಮುಖ್ಯವಾಗುತ್ತವೆ. ಅದನ್ನು ಪ್ರಶ್ನೆ ಮಾಡುವವರು ಧರ್ಮದ ಮೂಲ ಆಶಯವನ್ನು ಮರೆತು ಅದನ್ನು ತಾವು ಗ್ರಹಿಸಿದ ಪ್ರಜ್ಞೆಯ ಮಟ್ಟದಲ್ಲಿ ವಿಶ್ಲೇಷಿಸುತ್ತಾರೆ. ಧರ್ಮದ, ದೇವರುಗಳ ದೌರ್ಬಲ್ಯಗಳ ಪಟ್ಟಿ ಮಾಡುವ ಜನರು, ಪುಸ್ತಕಗಳು ಲೆಕ್ಕವಿಲ್ಲದಷ್ಟು ಬರುತ್ತವೆ. ಅದರ ಪರ ವಿರೋಧಿ ಬಣಗಳು ಮತ್ತಷ್ಟು ಕಿತ್ತಾಡುತ್ತವೆ.
                 ಎಲ್ಲಿಯವರೆಗೆ ಆಧ್ಯಾತ್ಮಿಕ ಕ್ರಾಂತಿ ಸಾಮಾಜಿಕವಾಗಿ ನಡೆಯುವುದಿಲ್ಲವೋ ಅಲ್ಲಿಯವರೆಗೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತಿತರ ಎಲ್ಲ ಧರ್ಮಗಳ ಮೂಲ ಆಶಯ ಸತ್ತು ಪ್ರಶ್ನಿಸುವ ಹೊಸ ಪಂಥ, ಪಂಗಡಗಳು ಹುಟ್ಟಿಕೊಳ್ಳುತ್ತವೆ. ಅವುಗಳ ತಾರತಮ್ಯ, ಒಳಹುಳುಕು, ಪ್ರತಿಷ್ಠೆಗಳಿಂದಾಗಿ ಅವೂ ಇಬ್ಬಾಗವಾಗುತ್ತವೆ. ಈ ಜಾತ್ಯಾತೀತ ರಾಷ್ಟ್ರ, ವಿಶ್ವದ ಪರಿಕಲ್ಪನೆ ವ್ಯಕ್ತಿಯ ಹೃದಯದಲ್ಲಿ ಆರಂಭವಾಗುತ್ತದೆ. ಈ ಹೃದಯ ಪರಿವರ್ತನೆ ಆಚರಣೆಗಳ ಮೂಲಕ  ಅದರ        ಹೊರತಾದ ವಿಧಾನಗಳಿಂದ ಆತ್ಮಾನ್ವೇಷಣೆಯಾದಾಗ ಮಾತ್ರ ಸಾಧ್ಯವಾಗುತ್ತದೆ. ಇದನ್ನು ನಮ್ಮನ್ನಾಳುವವರು, ಮಠಾಧಿಪತಿಗಳು, ಸಮಾಜದ ಮುಖಂಡರು ಅರ್ಥ ಮಾಡಿಕೊಂಡು ಅದಕ್ಕೇನಾದರೂ ವ್ಯವಸ್ಥೆ ತರಲು ಸಾಧ್ಯವಾದರೆ ನನ್ನ ಕಂಗಾಲು ಪರಿಸ್ಥಿತಿ ಸುಧಾರಿಸೀತು. ಇಲ್ಲದಿದ್ದರೆ ಇಬ್ಬಗೆಯ ನೀತಿ, ಸಂಘರ್ಷಗಳ ನಡುವೆ ‘ನಾನು’ ಸತ್ತೇ ಹೋಗುತ್ತೇನೇನೋ!

ಮಂಗಳವಾರ, ಅಕ್ಟೋಬರ್ 13, 2015

ಶರನ್ನವರಾತ್ರಿಯೆಂದರೆ ಕೇವಲ ಆಚರಣೆಯಲ್ಲ

ಆದ್ಯಾಶಕ್ತಿಯ ನವರೂಪಗಳನ್ನು ಆರಾಧಿಸುವ ಶರನ್‘ನವರಾತ್ರಿ’ . ಲೌಕಿಕರ ಕಣ್ಣಲ್ಲಿ ಪತ್ನಿಯೊಬ್ಬಳು ಪತಿಯನ್ನು ಹೊಂದುವ ಸಾಮಾನ್ಯ ಕಥೆ ಪಾರ್ವತಿ ಪರಮೇಶ್ವರರ ಮಿಲನ. ಅಧ್ಯಾತ್ಮ ಭಾವದಲ್ಲಿ ನೋಡಿದಾಗ ಶೈಲಪುತ್ರಿಯು ಸಿದ್ಧಿದಾತ್ರಿಯಾಗುವ ವರೆಗಿನ ಪ್ರಕ್ರಿಯೆ ಆತ್ಮ ಪರಮಾತ್ಮನನ್ನು ಸೇರುವ ಬಗೆಯ ನಿರೂಪಣೆ. ಸಕಲ ಚರಾಚರ ವಸ್ತುವಿನ ಅಸ್ತಿತ್ವ, ಅಸ್ಮಿತೆಗೆ ಕಾರಣವಾಗಿರುವ ಸರ್ವಶಕ್ತಿಗೆ ಶಿವನ ಪತ್ನಿಯಾಗಿ ಬಂದು ಅಷ್ಟೆಲ್ಲ ಕಷ್ಟ ಪಡುವ ಯಾವ ಅಗತ್ಯವೂ ಇಲ್ಲ. ಆದಾಗ್ಯೂ ನಮ್ಮ ಪುರಾಣಗಳು ಆಕೆಯನ್ನು ಮನುಷ್ಯ ಯೋನಿಯಲ್ಲಿ ಜನ್ಮ ತಾಳಿದ ಸಾಮಾನ್ಯ ಸ್ತ್ರೀಯಂತೆ ಚಿತ್ರಿಸಿ ಆಕೆಯ ಬದುಕು ಬರೆದಿವೆ. ಇದು ಆಕೆಯ ಬದುಕ ಬರಹವಲ್ಲ. ಬದಲಿಗೆ ಲಕ್ಷಾಂತರ ಜನ್ಮಗಳ ವಿಕಾಸದ ನಂತರ ಬಂದ ಮಾನವ ಜನ್ಮವನ್ನು ಮುಂದೆ ಹೇಗೆ ಒಯ್ಯಬೇಕು ಎನ್ನುವುದಕ್ಕೆ ಮಾರ್ಗದರ್ಶಿ. ಈ ಪ್ರಕ್ರಿಯೆಯನ್ನು ಮೆಲುಕು ಹಾಕಲೆಂದೇ ಪ್ರತಿವರ್ಷ ಮಳೆ, ಬೆಳೆ ಯಾವುದು ಬರಲಿ, ಬರದಿರಲಿ ಶರನ್ನವರಾತ್ರಿ ಬಂದೇ ಬರುತ್ತದೆ. ದೇವಿಯ ಒಂಭತ್ತು ರೂಪಗಳ ಆರಾಧನೆ ನಡೆಯುತ್ತದೆ.

          ಶಿವನನ್ನು ಹೊಂದಲು ದೇವಿ ಮೊದಲು ಸತಿಯಾಗಿ ಜನ್ಮಿಸುತ್ತಾಳೆ. ತೀರ ಬಾಲಿಷವಾದ, ಅಹಂಕಾರ, ಅಜ್ಞಾನ, ಸ್ವಕೇಂದ್ರಿತ ಸತಿ ತನ್ನ ಮಿತಿಯ ಅರಿವಾದಾಗ ತನ್ನನ್ನು ತಾನೇ ದಹಿಸಿಕೊಳ್ಳುತ್ತಾಳೆ. ಇದೂ ಸಹ ಸಾಂಕೇತಿಕ. ನಾವೆಲ್ಲ ಯಾವಾಗಲೂ ಸ್ವಕೇಂದ್ರಿತವಾಗಿರುತ್ತೇವೆ. ನಮ್ಮ ಅಹಂಮಿನ ಕೋಟೆಯೊಳಗೆ ಭದ್ರವಾಗಿದ್ದುಕೊಂಡು ಆನಂದ (ಶಿವ) ಸಿಗಬೇಕೆಂದು ಹಪಹಪಿಸುತ್ತೇವೆ. ನಮ್ಮ ಈ ಮಿತಿಯೇ ಆತ್ಮದ ಮಿತಿ. ಯಾವಾಗ ನಮ್ಮ ಅಹಂಮಿನ ಕೋಟೆಯೊಡೆದು ಸ್ವಕೇಂದ್ರಿತ ಮನಸ್ಸಿನಿಂದ ವಿಶ್ವದ ಬಟಾಬಯಲಿನಲ್ಲಿ ನಿಲ್ಲುತ್ತೇವೆಯೋ ಆಗ ಆನಂದದ ಅನುಭೂತಿ ನಮ್ಮದಾಗುತ್ತದೆ. ಇದನ್ನು ಪಾರ್ವತಿಯಾಗಿ, ಶೈಲಪುತ್ರಿಯಾಗಿ ಜನಿಸಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರೀ, ಮಹಾಗೌರಿಯ ಹಂತವನ್ನು ದಾಟಿ ಸಿದ್ಧಿದಾತ್ರಿಯಾಗುವ ಮೂಲಕ ಜನಸಾಮಾನ್ಯರಿಗೆ ಆಧ್ಯಾತ್ಮಿಕ ಪ್ರಗತಿಯ ಹಂತವನ್ನು ತೋರಿಸಿಕೊಡುತ್ತಾಳೆ. ಯಾವತ್ತು ಅಹಂಮಿನ ಕೋಟೆಯೊಳಗಿಂದ ಹೊರಬರುತ್ತಾಳೋ ಆಗ ಶಿವನಿಗೆ ಮತ್ತಷ್ಟು ಸಮೀಪದಲ್ಲಿ ಕೈಲಾಸಕ್ಕಿನ್ನು ಒಂದೇ ಮೆಟ್ಟಿಲಾಗಿ ಹಿಮಾಲಯದಲ್ಲಿ ಜನಿಸುತ್ತಾಳೆ. ತನ್ನ ಹಿಂದಿನ ದೈಹಿಕ, ಮಾನಸಿಕ ಎಲ್ಲ ಮಿತಿಗಳನ್ನು ಮೀರಿ ಶಿವನನ್ನು ಪಡೆಯುವ ಏಕೈಕ ಉದ್ದೇಶವನ್ನು ಹೊಂದುತ್ತಾಳೆ.
         ನಾವುಗಳೂ ಅಷ್ಟೆ. ನಮ್ಮ ಕನಸು, ನಮ್ಮ ಆಸೆ, ನಮ್ಮ ಭಾವನೆಗಳನ್ನು ಮೀರಿ ಪರಮಾತ್ಮನೆಡೆಗೆ ಅವನ ಆವಿರ್ಭಾವದ ಎಲ್ಲ ಚರಾಚರ ವಸ್ತುಗಳ ಹಿತದಲ್ಲಿ ತೊಡಗುತ್ತೇವೆಯೋ ಅಂದೇ ನಾವು ಹಿಮಾಲಯದಲ್ಲಿ ಹುಟ್ಟಿಬಿಡುತ್ತೇವೆ. ಆಗಾಗ ಶಿವನ ದರ್ಶನವಾದರೂ ಆತ್ಮದ ಮಿತಿ ಅಷ್ಟು ಸುಲಭವಾಗಿ ತೊಲಗುವಂತದ್ದಲ್ಲ. ಅದಕ್ಕೆ ಸಾಕ್ಷಾತ್ ಶಿವನ/ಪರಮಾತ್ಮನ ಅನುಗ್ರಹ ಮತ್ತು ಮಾರ್ಗದರ್ಶನ ಅತ್ಯಗತ್ಯ. ನಮ್ಮ ಲಕ್ಷ್ಯದಲ್ಲಿ ಸ್ವಲ್ಪ ಚಂಚಲತೆ ಇದ್ದರೂ ಪರಮಾತ್ಮನ ಅನುಗ್ರಹ ದೊರೆಯದು. ಯಾವ ಆಸೆ, ಆಮಿಷಗಳ ತೊಂದರೆ ಇದ್ದರೂ ಹಿಮಾಲಯದಿಂದ ಕನ್ಯಾಕುಮಾರಿಗೆ ಪತನ ನಿಶ್ಚಿತ!
       ಆತ್ಮ ಪರಮಾತ್ಮವನ್ನು ಸೇರಿದರೂ ಎಷ್ಟೋ ಸಲ ತನ್ನ ಮಿತಿಯನ್ನು ಮೀರದು. ಆಗಾಗ ತಾನು ಪರಮಾತ್ಮನಿಂದ ಭಿನ್ನ ಎನ್ನುವ ಭಾವನೆ ತಳೆಯಬಹುದು. ಹಾಗೆ ಭಿನ್ನತೆಯ ಅನುಭವ ಹೊಂದಿದಾಗಲೆಲ್ಲ ಅದು ಅಹಂಮಿನ ಭಾರಕ್ಕೆ ಪರಮಾತ್ಮನಿಂದ ಮತ್ತೆ ಬೇರ್ಪಟ್ಟು ಜನ್ಮ, ಮರಣದ ಚಕ್ರಕ್ಕೆ ಸಿಲುಕುತ್ತದೆ. ಇವೆಲ್ಲದರ ಸಾಂಕೇತಿಕ ಪುರಾಣವೇ ಶಿವ-ಶಕ್ತಿಯ ಮಿಲನ ಕಥೆ.
           ನವರಾತ್ರಿ ಕೇವಲ ಕಳಶ, ಘಟ ಸ್ಥಾಪನೆಯ , ಕುಮಾರಿ ಪೂಜೆಯ ಆಚರಣೆಯಲ್ಲ, ಜೀವನದಲ್ಲಿ ಆಧ್ಯಾತ್ಮಿಕ ಬದುಕಿನ ಮಹತ್ವವನ್ನು ಮುಂಬರುವ ಪೀಳಿಗೆಗೆ ದಾಟಿಸುವ ಸಂಪ್ರದಾಯ. ಈ ಸಮಯದಲ್ಲಿ ನಡೆಯುವ ಮಂತ್ರೋಚ್ಚಾರಣೆ, ಮುದ್ರೆ, ವಿಧಿ, ವಿಧಾನಗಳು ಮೂಲಾಧಾರದಿಂದ ಮಣಿಪೂರದವರೆಗಿನ ಚಕ್ರಗಳನ್ನು ಶುದ್ಧ ಮಾಡಿ, ಶಕ್ತಿಯುತಗೊಳಿಸುತ್ತವೆ. ತಮಗಿಂತ ಕಿರಿಯರಾದ ಹೆಣ್ಣುಮಕ್ಕಳ ಕುಮಾರಿ ಪೂಜೆ, ಬಂಧುಗಳಿಗೆಲ್ಲ ಊಟ ತಯಾರಿಸಿ ಬಡಿಸಿ, ಸುತ್ತಲಿನವರಿಗೆಲ್ಲ ಬನ್ನಿ ಕೊಟ್ಟು ಶತ್ರುತ್ವವನ್ನೂ ಮರೆತು ಆಲಂಗಿಸುವ ಪ್ರಕ್ರಿಯೆಯಂತಹ ಆಚರಣೆಗಳು ಅಹಂಮಿನ ಕೋಟೆಯೊಡೆದು ಪ್ರಜ್ಞೆ  ಅನಾಹತವನ್ನು ಮುಟ್ಟಲು ನೆರವಾಗುತ್ತವೆ. ಆನಂದದ ಸಣ್ಣ ಝಲಕ್ ಅನುಭವಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಎಲ್ಲೆಡೆ ನಡೆಯುವ ಕಲಾರಾಧನೆ ಅನಾಹತದಿಂದ ವಿಶುದ್ಧವನ್ನು ದಾಟಿ ಪ್ರಜ್ಞೆ ಆಜ್ಞಾಚಕ್ರವನ್ನು ತಲುಪಲು ಸಹಾಯ ಮಾಡುತ್ತದೆ. ಹೀಗೆ ಒಂದು ಆಚರಣೆಯ ಮೂಲಕ ಇಡೀ ಆಧ್ಯಾತ್ಮಿಕ ಜಾಗೃತಿಯ ಪ್ರಕ್ರಿಯೆಯನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತ ಬಂದಿರುವ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು. ಒಬ್ಬ ಸಾಮಾನ್ಯ ಸ್ತ್ರೀ/ ಪುರುಷ ಮಾನವ ಕುಲದ, ಜಗತ್ತಿನ ಒಳಿತಿಗಾಗಿ ಅಸಾಧಾರಣ. ಅಸಾಮಾನ್ಯ ತ್ಯಾಗ ಮಾಡಿದಾಗಲೆಲ್ಲ ದೇವಿ/ದೇವ ಸ್ಥಾನವನ್ನು ಕೊಟ್ಟು, ದೇವಾಲಯಗಳನ್ನು ಕಟ್ಟಿರುವ ಹಿನ್ನೆಲೆಯೂ ಇದೇ ಆಗಿದೆ. ವಿಪರ್ಯಾಸವೆಂದರೆ ಇಂದು  ಕೆಲವರಿಗೆ ಆಚರಣೆಗಳು, ಸಂಪ್ರದಾಯಗಳು ಅರಿವಿಲ್ಲದ ಸಂಭ್ರಮವಷ್ಟೇ. ಇನ್ನು ಕೆಲವರಿಗೆ ಇವೆಲ್ಲ ಬೂಟಾಟಿಕೆ/ಆಚರಣೆಗಳ ಹೆಸರಿನಲ್ಲ್ಲಿ ಶೋಷಣೆ ಎನಿಸುತ್ತಿದೆ.
ಯಾರಿಗೆ ಗೊತ್ತು? ಇದೂ ಆದ್ಯಾಶಕ್ತಿಯ ನಾಟಕದ ಒಂದು ಭಾಗವೇ ಇರಬಹುದೆನಿಸುತ್ತದೆ. ಯಾವುದು ಚರಮಸೀಮೆ ದಾಟುತ್ತದೆಯೋ ಆಗ ಬದಲಾವಣೆಯ ಪರ್ವ ಆರಂಭವಾಗುತ್ತದೆ. ಅಂತಹದೊಂದು ಹೊಸಪರ್ವದ ಮುನ್ನುಡಿಯೂ ನವರಾತ್ರಿಯಾಗಲಿ ಎಂದು ಆಶಿಸುತ್ತೇನೆ. 

ಮಂಗಳವಾರ, ಸೆಪ್ಟೆಂಬರ್ 1, 2015

ಪಡೆದುಕೊಂಡ ಅಹಮಿಕೆಯೂ, ಕಳೆದುಕೊಳ್ಳುವ ಭಯವೂ

             ಕಳೆದ ವಾರ ಪೂರ್ತಿ ಬೇಡದ ವಿಚಾರಗಳಾದರೂ ತಲೆಯಲ್ಲಿ ಹೊಕ್ಕು ಸಮಯ ಹಾಳುಮಾಡಿದ್ದು ಎರಡು ವಿಷಯಗಳು. ರಾಮಚಂದ್ರಾಪುರ ಮಠದ ಪ್ರಕರಣ-೨ ಮತ್ತು ಶೀನಾ ಬೋರಾ ಪ್ರಕರಣ. ಇವೆರಡೂ ಸಹ ನಮ್ಮ ಪರಂಪರಾಗತ ನಂಬಿಕೆಗಳನ್ನು ಪ್ರಶ್ನೆ ಮಾಡುತ್ತ, ನನ್ನಂತಹ ಸಾಮಾನ್ಯರನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಆದರೆ ಇವೆರಡೂ ಪ್ರಕರಣಗಳಲ್ಲಿ ನನಗೆ ಬಂದ ಪ್ರಶ್ನೆಗಳು ಬೇರೆ ಯಾರಿಗೂ ಬಂದಿಲ್ವಾ? ಎಂದು ಯೋಚಿಸುತ್ತಿರುವಾಗಲೇ ಇವತ್ತಿನ ಹಿಂದೂ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಹಸನ್ ಸುರೂರ್ ಮತ್ತು ಮೈಥಿಲಿ ಸುಂದರ್ ಬರೆದಿದ್ದಾರೆ. ಹಸನ್ ಸುರೂರ್ ಹೇಳುತ್ತಾರೆ, ಅಪರಾಧ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಕಾರಣಗಳಿಂದ ಮಾಡುವಂಥದು. ಅದಕ್ಕೆ ಶ್ರೀಮಂತ, ಬಡವ, ಜಾತಿಯಂತಹ ಮಿತಿಯಿಲ್ಲ. ಆದಾಗ್ಯೂ ರಾಷ್ಟ್ರೀಯ ಸುದ್ದಿವಾಹಿನಿಗಳು ಶ್ರೀಮಂತರು, ಮುಂದುವರಿದವರು, ನಾಗರಿಕರು, ಜನಪ್ರಿಯರಾದವರು, ವೈಚಾರಿಕ ದೃಷ್ಟಿಕೋನವುಳ್ಳವರು ಹೀಗೆ ಮಾಡುವುದೆ? ಎಂದು ದಿನಗಟ್ಟಲೆ ಚರ್ಚೆ ಮಾಡುತ್ತಾರೆ. ಇದೊಂಥರ ಸಾಂಸ್ಕೃತಿಕ ತಾರತಮ್ಯ ಎಂದು. ಹಾಗೆಯೇ ಮೈಥಿಲಿ ಸುಂದರ್ ಕೇಳುತ್ತಾರೆ, ಇಂದ್ರಾಣಿ ಮುಖರ್ಜಿಗೆ ನಿಜವಾಗಿಯೂ ಮಕ್ಕಳು ಬೇಡವಾಗಿದ್ದರೆ ಹೊಟ್ಟೆಯಲ್ಲಿರುವಾಗಲೇ ಸಾಯಿಸಬಹುದಿತ್ತು. ಅವರನ್ನು ಹೊತ್ತು, ಹೆತ್ತು ಹೆಸರು ನೀಡಲಾಗದ ಪರಿಸ್ಥಿತಿಯಲ್ಲೂ ತನ್ನ ತಂದೆ-ತಾಯಿಗೇ ದತ್ತು ನೀಡಿದ್ದು ಯಾಕೆ? ವಯಸ್ಸಾದ ತಂದೆ-ತಾಯಿಗೆ ಕೋಟ್ಯಾಂತರ ರೂ. ಹಣವನ್ನು ಜೀವನ ನಿರ್ವಹಿಸಲು ವ್ಯಯಸಿದ್ದು ಯಾಕೆ? ಬೆಳೆದ ಮಗಳನ್ನು ಮುಂಬೈಗೆ ಕರೆತಂದು ಓದಿಸಿ, ಕೆಲಸ ಗಿಟ್ಟಿಸಿ ಕಾಲೂರುವಂತೆ ಮಾಡಿದ್ದು ಯಾಕೆ? ಆಕೆಗೆ ನಿಜವಾಗಿಯೂ ಮಕ್ಕಳನ್ನು ಕೊಲ್ಲುವ ಉದ್ದೇಶವಿದ್ದರೆ ಇದನ್ನೆಲ್ಲ ಯಾಕೆ ಮಾಡಬೇಕಿತ್ತು? ಇಂತಹ ಸಹಜ ಪ್ರಶ್ನೆಗಳು ನನಗೆ ಅಂದು ಮೂಡಿದ್ದನ್ನು ಇಂದು ಮೈಥಿಲಿ ತುಂಬ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಒಬ್ಬ ಹೆಣ್ಣಿನ ವೈಯಕ್ತಿಕ ಬದುಕನ್ನು ಇಷ್ಟು ಅಪಸವ್ಯಗಳಿಂದ, ತಮ್ಮ ಘನತೆಯನ್ನೂ ಪಕ್ಕಕ್ಕಿಟ್ಟು ಪ್ರತ್ಯೇಕ ತನಿಖೆಯನ್ನೇ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ನಾನು ಸಂಪೂರ್ಣ ಸಹಮತವನ್ನು ಹೊಂದಿದ್ದೇನೆ.
               ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು. ಆದರೆ ಪಡೆದ ನಂತರ ಅದನ್ನು ಕಳೆದುಕೊಳ್ಳುವ ಭಯ ಇದೆಯಲ್ಲ, ಅದನ್ನು ಯಾವ ಹುಲು ಮಾನವನೂ ಮೀರಿಲ್ಲ. ಅದು ಹಣ, ರೂಪ, ವಿದ್ಯೆ, ಯೌವನ, ಅಸ್ತಿತ್ವ, ಅಧಿಕಾರ ಹೀಗೇ ಏನು ಬೇಕಾದರೂ ಆಗಬಹುದು, ಅದು ನಮ್ಮ ನಮ್ಮ ಪಟ್ಟಿಯಲ್ಲಿ ನಾವು ಯಾವುದಕ್ಕೆ ಪ್ರಾಶಸ್ತ್ಯ ನೀಡುತ್ತೇವೆ ಎಂಬುದನ್ನು ಅವಲಂಬಿಸಿದೆ. ವ್ಯತ್ಯಾಸವೆಂದರೆ ಹಿಂದೆಲ್ಲ ತಮ್ಮ ತಪಸ್ಸಿನ ದಾರಿ, ಧರ್ಮ, ಸತ್ಯ, ಪ್ರತಿಜ್ಞೆ ಇಂತಹವುಗಳನ್ನು ತಾವು ಪಡೆದ ಹಮ್ಮಿಕೆಯನ್ನು ಹೊಂದಿದ್ದರು. ಈಗ ಅದೇ ಹಣ, ಅಧಿಕಾರ, ಪ್ರಭಾವ ಇತ್ಯಾದಿಗಳನ್ನು ಪಡೆದ ಹಮ್ಮಿಕೆ ಹೆಚ್ಚಾಗಿದೆ. ಮೊದಲೆಲ್ಲ ತಾವು ನಂಬಿದ ಮೌಲ್ಯಗಳಿಗೆ ಹಾನಿಯಾಗುತ್ತದೆ ಎಂದರೆ ತಮ್ಮದೇ ಜೀವ ಬಲಿ ಕೊಡುತ್ತಿದ್ದರು. ಈಗ ಪಡೆದುಕೊಂಡದ್ದನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಮಂದಿಯ ಜೀವ ತೆಗೆಯುತ್ತಿದ್ದಾರೆ.
              ಪಡೆದುಕೊಂಡ ಅಹಂ ಇದೆಯಲ್ಲ, ಅದು ಹಣ, ರೂಪ, ವಿದ್ಯೆ, ಯೌವನ, ಅಧಿಕಾರ, ಮನುಷ್ಯ ಪ್ರೀತಿ ಇವೆಲ್ಲವುಗಳಿಗಿಂತ ದೊಡ್ಡ ನಿಯಂತ್ರಕ. ಹೆಚ್ಚಿನಸಲ ನಾವು ಪಡೆದುಕೊಂಡಿದ್ದಕ್ಕೆ ನಾವು ಅರ್ಹರೇ ಆಗಿರುವುದಿಲ್ಲ. ಆದರೂ ನಮ್ಮ ಅಹಂ ನಮಗೇ ಸಮಜಾಯಿಷಿ ನೀಡುತ್ತದೆ, ನಿನಗಲ್ಲದೇ ಬೇರೆ ಯಾರಿಗೆ ಸಿಗಬೇಕಿತ್ತು? ಆಗೆಲ್ಲ ನಮ್ಮನ್ನು ನಾವು ಅವಲೋಕನ ಮಾಡಿಕೊಂಡು ಯಾವ ಹೊತ್ತಿನಲ್ಲೂ ಕಳೆದುಕೊಳ್ಳಲು ಸಿದ್ಧರಾಗಿದ್ದರೆ ಸಮಸ್ಯೆ ಇರುವುದಿಲ್ಲ. ಆದರೆ ನಮ್ಮ ಅಹಂ ಇಷ್ಟು ದೊಡ್ಡ, ಬಲವಾದ ಕೋಟೆಯೊಳಗೆ ಬಂಧಿಸಿ ಬಿಟ್ಟಿರುತ್ತದೆ. ನಮಗೆ ಪಡೆದುಕೊಂಡಿದ್ದು ಕಳೆದುಹೋಗುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ. ಹಾಗಿದ್ದಾಗ ನಿಜವಾಗಿಯೂ ಕಳೆದುಕೊಳ್ಳುವ ಸಂದರ್ಭ ಬಂದರೆ? ಇಂದ್ರಾಣಿ ಮುಖರ್ಜಿ ಒಂದು ಉದಾಹರಣೆಯಾಗುತ್ತಾಳೆ.
               ಹಣ, ಅಧಿಕಾರ, ಎಲ್ಲಕ್ಕಿಂತ ಹೆಚ್ಚು ಪ್ರೀತಿಸುವ ಪೀಟರ್ ಮುಖರ್ಜಿಗೆ ತನ್ನ ಹುಳುಕುಗಳೆಲ್ಲ ಗೊತ್ತಾಗಿಬಿಟ್ಟರೆ ಎಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇನೋ ಎಂಬ ಭಯ ಒಂದೆಡೆ. ಇನ್ನೊಂದೆಡೆ ತನ್ನ ಹರೆಯದಲ್ಲಿ ಕಳೆದುಕೊಂಡ ಆತ್ಮಗೌರವವನ್ನು ತಾನು ಮರಳಿ ಪಡೆಯಲು ಪಟ್ಟ ಹೋರಾಟದ ನೆನಪೂ ಇರಬಹುದು.  ಒಬ್ಬ ತಾಯಿಯಾಗಿ ತಾನು ಮಾಡಿದ್ದನ್ನು ತನ್ನ ಮಗಳು ಮುಂದುವರಿಸಬಾರದು ಎಂಬ ಪ್ರಜ್ಞೆಯೂ ಇರಬಹುದು. ಯಾವೊಬ್ಬ ವೇಶ್ಯೆ ಕೂಡ ತನ್ನ ಮಗಳು ತನ್ನ ದಾರಿ ತುಳಿಯಲಿ ಎಂದು ಆಶಿಸುವುದಿಲ್ಲ. ಈ ಕಾರಣಗಳು, ಅಸಹಾಯಕತೆಯೇ ಈ ಪ್ರಕರಣದಲ್ಲಿ ನನಗೆ ಕಾಣುವಂತದ್ದು. ಇನ್ನು ತನ್ನ ಕಾರ್ಯಸಾಧನೆಗೆ ಏನು ಬೇಕಾದರೂ ಮಾಡಬಲ್ಲವಳು, ಸುತ್ತಲಿನವರ ಎಲ್ಲ ದೌರ್ಬಲ್ಯಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತ ಹೋಗಿದ್ದರೆ ಆಶ್ಚರ್ಯವೇನಿಲ್ಲ.
             ಬಡವನಿಗೆ ಅಪರಾಧ ಮಾಡಲೂ ಅದೇ ಕಾರಣ, ಶ್ರೀಮಂತನಿಗೆ ಅಪರಾಧ ಮಾಡಲೂ ಅದೇ ಕಾರಣ. ಪಡೆದುಕೊಂಡ ಅಹಮಿಕೆ ಮತ್ತು ಕಳೆದುಕೊಳ್ಳುವ ಭಯ. ಹಾಗೆ ನೋಡಿದರೆ ಹೆಚ್ಚು ಪಡೆದ ಶ್ರೀಮಂತನಿಗೇ ಈ ಎರಡೂ ದೌರ್ಬಲ್ಯಗಳು ಹೆಚ್ಚು ಎನ್ನುವುದು ವಾಸ್ತವ.
                

ಶನಿವಾರ, ಆಗಸ್ಟ್ 29, 2015

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ?

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ? ಇಂತದೊಂದು ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ಸಿಕ್ಕ ಅಂಶಗಳನ್ನು ಇಲ್ಲಿ ಚರ್ಚಿಸಬಯಸುತ್ತೇನೆ. ಕಳೆದ ವರ್ಷ ರಾಘವೇಶ್ವರ ಶ್ರೀಗಳ ಮೇಲೆ ಮೊದಲ ಪ್ರಕರಣ ದಾಖಲಾದಾಗಲೂ ಈ ಪ್ರಶ್ನೆ ಎದ್ದಿತ್ತು. ಈಗಲೂ ಎದ್ದಿದೆ. ಇಂತಹ ಸಾಕಷ್ಟು ಪ್ರಕರಣಗಳು ಹೊರಗೆ ಬರದೇ ಬೂದಿಮುಚ್ಚಿಕೊಂಡು ಕುಳಿತಿವೆ ಎಂಬುದನ್ನೂ ಕೇಳಿದ್ದೇನೆ. ಆಗೆಲ್ಲ ನನಗೆ ಒಂದೇ ಪ್ರಶ್ನೆ - ಹವ್ಯಕ ಹೆಣ್ಣುಮಕ್ಕಳು ಕುರಿಗಳೆ? ಒಮ್ಮೆ ಏನೋ ದೌರ್ಜನ್ಯ ನಡೆಯಿತು ತಿಳಿದೋ, ತಿಳಿಯದೆಯೋ. ನಂತರವೂ!? ವರ್ಷಾನುಗಟ್ಟಲೆ!?
ಈ ಸಮಾಜದಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ಹ್ಞೂಂ ಎನ್ನುತ್ತಾರೆ ಎಂದು ಅನಿಸಿದರೆ ದೇವಮಾನವನಿರಲಿ, ಈ ಲೋಕವನ್ನೆಲ್ಲ ಉದ್ಧಾರ ಮಾಡುವ ಪತ್ರಕರ್ತರಿರಲಿ ಎಲ್ಲರೂ ಒಂದು ಕೈ ನೋಡಲು ಸಿದ್ಧರೇ. ಇನ್ನು ಹುಲುಮಾನವರನ್ನೆಂತೂ ಕೇಳಲೇಬೇಡಿ. ಇದು ನಮ್ಮ ಹೆಣ್ಣುಮಕ್ಕಳಿಗೆ ಗೊತ್ತಾಗುತ್ತಿಲ್ಲವೆ? ಗೊತ್ತಾದರೂ ಪೋಷಕರ ಹತ್ತಿರ ಹೇಳಿಕೊಳ್ಳಲು ಆಗುತ್ತಿಲ್ಲವೆ? ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ, ನಮ್ಮನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಯದಷ್ಟು ಅಬೋಧತೆಯೆ? ನಾನು ಗಮನಿಸಿರುವ ಹಾಗೆ ಈ ಪ್ರಕರಣಕ್ಕೆ ತೇಪೇ ಹಚ್ಚುತ್ತಿರುವ ಬಹುತೇಕರು ಮಠದಿಂದ ಪ್ರತ್ಯಕ್ಷ/ ಅಪ್ರತ್ಯಕ್ಷ ಸಹಾಯ ಪಡೆದವರು ಹಾಗೂ ಪಡೆಯುತ್ತಿರುವವರು. ಇನ್ನು ಕೆಲವರಲ್ಲಿ ಕುರುಡು ಭಕ್ತರೂ ಇದ್ದಾರೆ, ಅವರ ಸಂಖ್ಯೆ ನಗಣ್ಯ. ಲೆಕ್ಕಾಚಾರವಿಲ್ಲದೆ ಒಪ್ಪಿಕೊಳ್ಳುವವರು ಯಾರಿಗೂ ಅಪಾಯವಲ್ಲ.
                ಕನ್ಯಾಸಂಸ್ಕಾರ ಮಾಡಿಸುವುದು ಎಂಬುದನ್ನೇ ನಾನು ಒಪ್ಪುವುದಿಲ್ಲ. ಅಪ್ಪ, ಅಮ್ಮ ಸಂಸ್ಕಾರವಂತರಾಗಿದ್ದರೆ ಮಗಳಿಗೇನು ವಿಶೇಷ ಸಂಸ್ಕಾರ? ಮಂತ್ರದೀಕ್ಷೆ ಕೊಡಿಸುವ ಆಲೋಚನೆಯಿದ್ದರೆ ಮಂತ್ರದೃಷ್ಟಾರರು, ಕುಲಪುರೋಹಿತರು ಇರುವುದಿಲ್ಲವೆ? ಜಾತಕ ನೋಡಿ, ಸ್ವಭಾವ, ಗುಣಗಳನ್ನು ತಿಳಿದು ಮಂತ್ರ ಕೊಡುತ್ತಾರೆ. ಅದೂ ಸಾಕಾಗದೆ  ಮುಂದುವರಿದು ಏಕಾಂತ ಸೇವೆಗೆ ಕಳಿಸುವ ತಂದೆ ತಾಯಿಗಳೆಂತೂ ನಿಜವಾಗಿಯೂ ಶತದಡ್ಡರೂ, ಮೂರ್ಖರೂ ಆಗಿರುತ್ತಾರೆ ಎಂದು ಹೇಳಲು ನನಗೆ ಹೆದರಿಕೆಯೇನಿಲ್ಲ.
                 ನಮ್ಮಲ್ಲಿ ಎಂತಹ ತಂದೆ ತಾಯಿ ಇರುತ್ತಾರೆ ಎಂದರೆ, ಕೆಲವು ತಿಂಗಳುಗಳ ಹಿಂದೆ ಒಬ್ಬರ ಮನೆಗೆ ಹೋಗುವ ಸಂದರ್ಭ ಬಂತು. ಅವರ ಮಗಳಿನ್ನೂ ೩-೪ ವರ್ಷದವಳು.  ನಾನು ಭೇಟಿ ಮುಗಿಸಿ ಹೊರಗೆ ಬಂದಾಗ ಪಕ್ಕದ ಮನೆಯ ಅಂಕಲ್ ಒಬ್ಬರು ಆ ಮಗುವಿನ ತಲೆಗೂದಲನ್ನು ಎಳೆದು, “ಏನೇ ನನ್ನತ್ರ ಬರೊಲ್ವ, ಮುದ್ದು ಮಾಡಿಸಿಕೊಳಲ್ವಾ? ”ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಅಲ್ಲಿ ಕಂಡ ತಕ್ಷಣ ಹೇಳಿದೆ, “ನೀವು ಈ ರೀತಿ ತಲೆಗೂದಲು ಎಳೆದು ಹಿಂಸೆ ಮಾಡಿದರೆ ಯಾರು ನಿಮ್ಮತ್ರ ಬರುತ್ತಾರೆ, ಅಲ್ವಾ ಮರಿ?” ಎಂದು ಸಮಾಧಾನ ಮಾಡಿದೆ. ಅಲ್ಲೇ ಆಕೆಯ ತಾಯಿಯೂ ನಿಂತಿದ್ದಳು. ಮಗುವಿನ ಕಪ್ಪಿಟ್ಟ ಮುಖ , ಆ ಅಂಕಲ್ ಎಂದರೆ ನನಗೆ ಭಯ ಎಂದು ಹೇಳುತ್ತಿದ್ದರೆ, ಕೂದಲೆಳೆದ ಅಂಕಲ್ ನಡೆ ತನ್ನನ್ನು ಒಪ್ಪಿಕೊಳ್ಳದ, ಮುಂದುವರಿಯಲಾಗದ ಅಸಹಾಯಕತೆಯನ್ನು ಪ್ರದರ್ಶಿಸಿತ್ತು. ನನಗೆ ಒಳಗೊಳಗೇ ಅಪಾಯದ ಗಂಟೆ ಬಾರಿಸಿದ ಹಾಗಾಯಿತಾದರೂ ಅವಳ ತಾಯಿಗೆ ಏನೂ ಹೇಳಹೋಗಿಲ್ಲ. ಯಾಕೆ ಬೇಕು ಉಸಾಬರಿ?
                 ಹಾಗೇ ನನ್ನ ಬಾಲ್ಯದ ಅನುಭವಕ್ಕೆ ಬಂದಾಗ ನನ್ನ ಗೆಳತಿಯೊಬ್ಬಳು ಪಕ್ಕದ ಮನೆಗೆ ದಿನಾಲೂ ಹೋಗಬೇಕಾದ ಸಂದರ್ಭ ಇರುತ್ತಿತ್ತು. ಹಾಗೆ ಹೋದಾಗ ಒಮ್ಮೆ ಅವಳ ಸ್ಕರ್ಟನ್ನು ತನ್ನ ಹೆಂಡತಿಯೆದುರಿಗೇ ಮಾಮಾ ಕೆಳಗೆ ಎಳೆದು ನಕ್ಕಿದ್ದರು. ಅವಳು ಮನೆಗೆ ಬಂದು ಅಮ್ಮ, ಮಾಮಾ ಸರಿಯಿಲ್ಲ, ನಾನು ಅವರ ಮನೆಗೆ ಹೋಗುವುದಿಲ್ಲ, ಅವರು ಹೀಗೆಲ್ಲ ಮಾಡಿದರು ಎಂದು ಘಟನೆಯನ್ನು ವಿವರಿಸಿದರೆ, ಅವಳಮ್ಮ “ಇಲ್ಲ, ಮರಿ. ಮಾಮ ಅಲ್ವ, ಜೋಕು ಮಾಡುತ್ತಾರೆ. ನೀನೇನು ಹಾಗೆಲ್ಲ ಯೋಚಿಸಬೇಡ” ಎಂದು ಬಿಡುವುದೆ? ಕೊನೆಗೊಂದು ದಿನ ಅಮ್ಮನ ಮೇಲೆ ಅವ ನಿದ್ದೆ ಮಾತ್ರೆ ಹಾಕಿ ಅತ್ಯಾಚಾರ ನಡೆಸಿದಾಗ ನನ್ನ ಗೆಳತಿ ಮೂಕವಾಗಿ ಅತ್ತಿದ್ದು ನನ್ನ ಮನಃಪಟಲದ ಮೇಲೆ ಇನ್ನೂ ಹಸಿರಾಗಿದೆ.
                ಇದು ಮಕ್ಕಳಿದ್ದಾಗಿನ ಹೆಣ್ಣುಮಗುವಿನ ಸ್ಥಿತಿಯಾದರೆ, ಅಬೋಧ ವಯಸ್ಸಿಗೆ ಪ್ರೀತಿಯ ಬಲೆ ಹೆಣೆಯಲಾಗುತ್ತದೆ. ಪ್ರೀತಿಸುತ್ತೇನೆ ಎನ್ನುತ್ತಲೇ ಅತ್ಯಾಚಾರ ನಡೆಯುತ್ತಿರುತ್ತದೆ. ಈಗಿನ ಪ್ರಕರಣ ನೋಡಿದರೆ ಈ ಎರಡೂ ಅಸಹಾಯಕತೆಯನ್ನು, ಅಬೋಧತೆಯನ್ನು ಬಳಸಿಕೊಂಡಂತೆ ಕಾಣುತ್ತದೆ.
                ಇಂಥ ಸಮಸ್ಯೆಗೆ ನಾವು ಹೇಗೆ ಸ್ಪಂದಿಸಬೇಕು ಎನ್ನುವುದು ನಮ್ಮ ಸಮಸ್ಯೆ. ಹೆಣ್ಣುಮಗುವೊಂದು ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಾಗ ಮೊದಲು ಸುಮ್ಮನಿರಿಸುವವಳೇ ತಾಯಿ! ಮಗಳನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಬಗ್ಗೆ ಗಂಡ ತನ್ನನ್ನು ಜರಿದರೆ! ಸಮಾಜ ನಾಳೆ ಇವಳಿಗೆ ಮದುವೆಯಾಗದೇ ಹೋಗುವಂತೆ ಮಾಡಿದರೆ!? ಅವರು ಹಾಗೆಲ್ಲ ಅಲ್ಲ, ನಿನ್ನದೇ ತಪ್ಪು ಕಲ್ಪನೆ!? ಇನ್ನೊಮ್ಮೆ ಅಂತಹುದಕ್ಕೆ ಅವಕಾಶ ಕೊಡಬೇಡಾ, ನಾನು ನೋಡು ನಿಮ್ಮ ತಂದೆಗೆ ಎಷ್ಟು ನಿಷ್ಠಳಾಗಿದ್ದೇನೆ!? ಇಂತಹ ಉತ್ತರಗಳನ್ನು ತಾಯಿ ಎನಿಸಿಕೊಂಡವಳಿಂದಲೇ ಪಡೆದಾಗ ಮುಜುಗರ, ದುಃಖ, ಹತಾಶೆ, ನೋವು, ಅವಮಾನ, ಆತ್ಮಗೌರವವನ್ನೇ ಕಳೆದುಕೊಂಡ ಹೀನಭಾವ ಇವುಗಳಿಂದ ಕುಗ್ಗಿಹೋದ ಮಗಳು ಮುಂದೆ ಯಾರಲ್ಲಿ ಏನನ್ನು ಹೇಳಿಕೊಳ್ಳಬೇಕು?
                 ಇನ್ನು ಸಮಾಜ! ಸಮಾಜದಲ್ಲಿ ದೊಡ್ಡವ್ಯಕ್ತಿಗಳು ಎನಿಸಿಕೊಂಡವರ ವಿರುದ್ಧ ದೂರು ಕೊಟ್ಟಾಗ ಮೊದಲು ಬರುವ ಪ್ರಶ್ನೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಈಗ ದುಡ್ಡೆಳೆಯುವ ಹುನ್ನಾರ, ಹೆಸರು ಕೆಡಿಸುವ ಷಡ್ಯಂತ್ರ ಎಂಬ ಮಾತು ಧಾರಾಳವಾಗಿ ಬಂದೇ ಬರುತ್ತದೆ. ಅದರಲ್ಲೂ ಪೋಷಕರು ಅಸಹಾಯಕರಾಗಿ ವ್ಯಕ್ತಿ/ವ್ಯವಸ್ಥೆಯಿಂದ ಹಣಕಾಸು ಅಥವಾ ಇನ್ನಾವುದೇ ಲಾಭವನ್ನು ಪಡೆದುಕೊಂಡರೆ ಅದಕ್ಕಿಂತ ಬಲವಾದ  ಪುರಾವೆ ಪ್ರಕರಣ ಬಿದ್ದು ಹೋಗಲು ಬೇರೆ ಸಿಗದು. ಹಾಗಾದರೆ ಪ್ರತಿಭಟಿಸುವ ದಾರಿ ಯಾವುದು?
                   ಒಂದು ಯಾರ್ಯಾರಿಗೆ ಅನ್ಯಾಯವಾಗಿದೆಯೋ ಅವರೆಲ್ಲ ಒಟ್ಟಾಗಿ/ಒಬ್ಬೊಬ್ಬರಾಗಿ ಬಂದು ದೂರು ದಾಖಲಿಸುವುದು, ಕಾನೂನಾತ್ಮಕ ಹೋರಾಟಕ್ಕೆ ಸೂಕ್ತ ದಾಖಲೆಗಳೊಂದಿಗೆ ಇಳಿಯುವುದು, ಸೂಕ್ತ ಮಾರ್ಗದರ್ಶನ ಹಾಗೂ ಮನಃಸ್ಥಿತಿಯ ಹೇಳಿಕೆಗಾಗಿ ಮನೋವೈದ್ಯರು, ಮನೋಚಿಂತಕರ ಬೆಂಬಲ ಪಡೆಯುವುದು ಆಗಬೇಕು. ಇನ್ನು ಮಾನ, ಮರ್ಯಾದೆಗಾಗಿ ಇಲ್ಲಿಯವರೆಗೆ ಸುಮ್ಮನೆ ಕುಳಿತಿದ್ದರೆ ಮತ್ತೆ ಯಾಕೆ ಅದೇ ಸ್ಥಳಕ್ಕೆ, ಅದೇ ವರ್ತುಲಕ್ಕೆ ಹೋಗಬೇಕು? ಇಂಥ ಒಂದು ಘಟನೆ ಒಮ್ಮೆ ನಡೆದಾಗ ಅಲ್ಲಿಗೆ ಮತ್ತೊಮ್ಮೆ ಹೋಗುವುದೇ ತಪ್ಪು. ಹಾಗಿದ್ದೂ ಪೋಷಕರ ಒತ್ತಾಯ, ಭಾವನಾತ್ಮಕ ಸಂಬಂಧ, ಮಠದ ಮೇಲಿನ ಭಕ್ತಿ, ಬೇರೆ ಯಾರದ್ದೋ ಒತ್ತಾಯ ಅಥವಾ ಬೆದರಿಕೆ ಇವುಗಳಿಂದ ಹೋಗಬೇಕಾಗಿ ಬರಬಹುದು. ಆಗೆಲ್ಲ ಒಂದೇ ದಾರಿ ‘ಉಪಾಯ’.
                  ನಮಗೆ ಒಗ್ಗದ್ದನ್ನು ಅಲ್ಲಗಳೆಯಲು ಸಾವಿರ ದಾರಿಗಳಿರುತ್ತವೆ. ಹಾಗೆ ಬಿಡಿಯಕ್ಕೆ ಬಸಿರಾಗದೆ, ನಯವಾಗಿ ಎದ್ದುಬರುವ ದಾರಿಯನ್ನು ಹೆಣ್ಣುಮಕ್ಕಳು ಕಂಡುಕೊಳ್ಳಬೇಕು. ಯಾವ ಸೂತ್ರ ನಮ್ಮನ್ನು ಕೂಪಕ್ಕೆ ಮತ್ತೆ ಮತ್ತೆ ತಳ್ಳುತ್ತಿದೆಯೋ ಆ ಸೂತ್ರ ಯಾವುದು ಎಂಬುದನ್ನು ಕಂಡುಹಿಡಿದು ಅದರ ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕು. ನಮ್ಮ ದೌರ್ಬಲ್ಯವನ್ನೇ ಶಕ್ತಿಯಾಗಿ ಉಪಯೋಗಿಸಬೇಕು. ಇಂತಹ ಗಟ್ಟಿತನ  ಈ ರೀತಿ ಮಠ, ಮಾನ್ಯರುಗಳ ದೌರ್ಜನ್ಯಕ್ಕೆ ಒಳಗಾದ ಪ್ರತಿ ಹೆಣ್ಣುಮಗಳೂ ರೂಡಿಸಿಕೊಳ್ಳಬೇಕು. ನಾವು ಶಾಂತಗೌರಿಯರು ಹೇಗೋ, ಕಾಳಿಯ ಅವತಾರವೂ ಹೌದಲ್ಲವೆ?
                 ಇನ್ನು ಸಮುದಾಯದ ಭಕ್ತರು! ಇದು ಶಿರಸಿಯ ಪಾದುಕಾಶ್ರಮದಂತೆ ಕೆಲವು ವರ್ಷಗಳ ಬಂಧವಲ್ಲ. ತಲೆತಲಾಂತರದಿಂದ ಬಂದ ಬಂಧ. ಗುರು ಶಿಷ್ಯನ ಬಂಧ ತಾಯಿ, ಮಗುವಿನಷ್ಟೇ ಗಾಢವಾಗಿರುತ್ತದೆ. ಪ್ರಶ್ನಿಸದೇ, ಯೋಚಿಸದೇ ಒಪ್ಪಿಕೊಳ್ಳುವ ಜನರೆಂತೂ ಈ ಬಂಧಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಅಮ್ಮ ಎನ್ನುವ ಶಬ್ಧ ಎಷ್ಟು ಜನಪ್ರಿಯವೋ , ಗುರು ಎನ್ನುವ ಶಬ್ಧವೂ ಅಷ್ಟೇ ಜನಪ್ರಿಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂದು ನಂಬಿದವರು ನಾವು. ಸನಾತನ ಹಿಂದೂ ಸಮುದಾಯದಲ್ಲಿ ಗುರುವಿಗಿರುವ ಸ್ಥಾನ ಕೆಲವೊಮ್ಮೆ ತಾಯಿಗೂ ಇರಲಾರದು. ಹಾಗಾಗಿ ಕೆಟ್ಟ ಶಿಷ್ಯ ಇರಬಹುದು, ಆದರೆ ಕೆಟ್ಟ ಗುರು ಎಂದೂ ಇರಲಾರ ಎಂಬುದು ನಮ್ಮ ನಂಬಿಕೆ. ಇಂತಹ ಸಂದರ್ಭದಲ್ಲಿ ನೆರವಾಗುವುದು ಗುರುವಿನ ಗುರುಗಳೆನಿಸಿಕೊಂಡ ಗುರುಚರಿತ್ರೆ ಮೊದಲಾದ ಶಾಸ್ತ್ರಗ್ರಂಥಗಳು. ಅದರಲ್ಲಿ ಹೇಳುವಂತೆ ಕಲಿಯುಗದಲ್ಲಿ ಸಂನ್ಯಾಸಿಗಳನ್ನು ಜನರು ನಂಬುವುದಿಲ್ಲ. ಸ್ತ್ರೀ ಕಾಮದಿಂದ ಹಾಳಾದರೆ, ಸಂನ್ಯಾಸಿ ಸುಖಭೋಗಗಳಿಂದ ಹಾಳಾಗುತ್ತಾನೆ, ಹೀಗೆ ಹತ್ತು ಹಲವು ಮಾರ್ಗಗಳು ಇಂಥ ಸಂದರ್ಭಗಳಲ್ಲಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ತೋರಿಸುತ್ತವೆ. ಶ್ರೀರಾಮಕೃಷ್ಣರಂತೂ ಪರೀಕ್ಷೆ ಮಾಡದೆ ಒಪ್ಪಿಕೊಳ್ಳಬೇಡ, ದೊಡ್ಡ ಹಾವಾಗಿದ್ದರೆ ನಿನ್ನ ಕಾಮ, ಕಾಮನೆಗಳನ್ನು ನುಂಗಿ ಆತ್ಮವೆತ್ತರಿಸುತ್ತದೆ. ಇಲ್ಲದಿದ್ದರೆ ನಿನ್ನ ಕಾಮ, ಕಾಮನೆಗಳನ್ನು ಹೆಚ್ಚಿಸಿ ನೀನೂ ಸುಖದ ಸಾವು ಸಾಯದಂತೆ, ತಾನೂ ಸುಲಭವಾಗಿ ದಕ್ಕಿಸಿಕೊಳ್ಳಲಾಗದಂತೆ ಒದ್ದಾಟವಾಗುತ್ತದೆ. ಹುಷಾರಿ! ಎಂದಿದ್ದಾರೆ.
ಇದನ್ನೆಲ್ಲ ಪರಿಗಣಿಸಿ ಸಮುದಾಯದ ಭಕ್ತರು ಇನ್ನಾದರೂ ಮೌಢ್ಯದಿಂದ ಹೊರಬರಲಾರರೆ?