ಅವಳು ಬಂದಳು ಹೊಸ ಪಾಠದೊಂದಿಗೆ
ಅವಳು ಅದಾಗ್ಲೇ ಬದುಕಿಗೆ ಬರುವವಳಿದ್ದಳು. ನನಗೆ ಆಗ್ಲೇ ಅನಿಸಿತ್ತು. ಆದ್ರೆ ಸಮಯ ಬಂದಿರಲಿಲ್ಲ. ಅಕ್ಕಪಕ್ಕದ ಮನೆಗೆ ಬರುತ್ತಿದ್ದಳು. ನಾನು ಮಗುವಿನೆತ್ತಿಕೊಂಡು ಮನೆಗೆ ಬಂದಾಗ ಹೆರಿಗೆಯಾಗಿ ಒಂದೂವರೆ ತಿಂಗಳು. ತವರುಮನೆ ಬೆಂಗಳೂರಿನಲ್ಲಿ ಚಿಕ್ಕದಾಗಿತ್ತು. ತಂಗಿಯೂ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ನಾನು ಇನ್ನು ತವರುಮನೆಯಲ್ಲೇ ಇದ್ದಾರೆ ಆ ಚಿಕ್ಕ ಕೊನೆಯಲ್ಲಿ ಇಬ್ಬರು ಬಾಣಂತಿಯರು, ಇಬ್ಬರು ಮಕ್ಕಳು ಅಮ್ಮ ಎಲ್ಲ ಮಲಗುವುದು ದುಃಸಾಧ್ಯ ಎನಿಸಿತ್ತು. ಜೊತೆಗೆ ಇವ್ನು ಸರಿಯಾಗಿ ಊಟವಿಲ್ಲದೆ, ಪ್ರತಿದಿನ ನನ್ನ ಭೇಟಿಯಿಲ್ಲದೆ ಸೊರಗಿಹೋಗಿದ್ದ. ಮನೆಯಲ್ಲಿ ಗಲಾಟೆಗೋ ಏನೋ ಮಗುವೂ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ನನಗೆ ದುಃಖವಾಗಿತ್ತು. ಅದಾಗಲೇ ವಯಸ್ಸು ಮೀರಿದ್ದರಿಂದ ಈ ಜನ್ಮದಲ್ಲಿ ಮಕ್ಕಳ ಆಸೆಯನ್ನೇ ಬಿಟ್ಟಿದ್ದೆ. ಆದ್ರೆ ಎಲ್ಲೋ ಒಂದೆಡೆ ಮನಸ್ಸು ಹೇಳುತ್ತಿತ್ತು. ನನಗೂ ಮಗುವಾಗುತ್ತದೆ ಎಂದು. ಹಾಗಾಗಿ ಪ್ರತಿದಿನ ಅಶ್ವತ್ಥ ಪ್ರದಕ್ಷಿಣೆ, ಆಂಜನೇಯನ ಪ್ರದಕ್ಷಿಣೆ ಮಾಡುತ್ತಿದ್ದೆ. ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳುತ್ತಿದ್ದೆ. ಯಾವತ್ತೋ ಒಂದು ದಿನ ಮಗುವಾಗುತ್ತದೆ ಎಂದು ಮನಸ್ಸು ಕೂಗಿ ಕೂಗಿ ಹೇಳುತ್ತಿತ್ತು.
ಹಾಗೆಯೆ ಮಗುವಾಗಿ ಮನೆಗೆ ಬರಬೇಕು ಎಂದು ನಿರ್ಧಾರ ಮಾಡಿದೆ. ಮನೆ ಬಹಳ ಗಲೀಜಾಗಿತ್ತು. ಒಂದೂವರೆ ತಿಂಗಳ ಬಾಣಂತಿ ನಾನು ಮಗುವನ್ನು ಮನೆಯಲ್ಲಿ ಬಿಟ್ಟು ಆಟೋ ಹಿಡಿದು ಮನೆಗೆ ಬಂದೆ. ಅಲ್ಲಿ ಅವಳು ಪಕ್ಕದ ಮನೆಗೆ ತಾಯಿಯೊಂದಿಗೆ ಕೆಲ್ಸಕ್ಕೆ ಬಂದಿದ್ದಳು. ಅವಳ ಹತ್ತಿರ ಮನೆ ಸ್ವಚ್ಛ ಮಾಡಿಸಿಕೊಂಡೆ. ಒಂದೆರೆಡು ದಿನಗಳಲ್ಲಿ ನಾನು ಆಯಿಯೊಂದಿಗೆ ಮನೆಗೆ ಬಂದೆ. ಬಂದವಳೇ ಮನೆಯಲ್ಲಿ ಅಡುಗೆಗೆ ನಿಂತೆ. ಆಯಿ ಮಗುವನ್ನು ಸ್ನಾನ ಮಾಡಿಸಲು, ಅಡುಗೆಗೆ ಸಹಾಯ ಮಾಡುತ್ತಿದ್ದಳು. ಅವಳನ್ನು ಮನೆಕೆಲಸಕ್ಕೆ ಬರಲು ಹೇಳಿದೆ. ಹಾಗೆ ದಿನ ಸಾಗುತ್ತಿತ್ತು. ನಾಲ್ಕು ದಿನ ಕಳೆಯುವಷ್ಟರಲ್ಲಿ ತಂಗಿ ತವರಿಗೆ ಬಂದಿದ್ದಳು. ಅಲ್ಲಿ ಅವಳಿಗೆ ಯಾಕೋ ಉಸಿರುಗಟ್ಟಿಸಿದಂತಿತ್ತು. ಅಮ್ಮ, ತಂಗಿ ಇಬ್ಬರೂ ತಮ್ಮ ದುಃಖ ಹೇಳಿಕೊಂಡರು. ನಾನು ಸರಿ ನನಗೂ ಒಬ್ಬಳೇ ಇಲ್ಲಿ ಬೇಸರ. ಜೊತೆಗೆ ನನಗೂ ಸಹಾಯವಾಗುತ್ತದೆ. ಹೇಗೋ ನೋಡೋಣ , ಬನ್ನಿ ಎಂದೆ. ಅವರೂ ಬಂದರು. ಈಗ ಮನೆಯಲ್ಲಿ ಮಕ್ಕಳ ಕಲರವ. ಆದರೆ ನನಗೆ ನಿದ್ದೆ ಮರೀಚಿಕೆಯಾಗಿತ್ತು. ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರುತ್ತಿರಲಿಲ್ಲ. ಮಗುವಿಗೆ ಡಯಾಪರ್ ಹಾಕಬೇಡಿ ಎಂದಿದ್ದರು ವೈದ್ಯರು. ನಾನೂ ಹೌದೆಂದು ಪ್ರಯತ್ನ ಮಾಡಿದೆ. ಅದರ ಜೊತೆಗೆ ಮನೆಯ ಖರ್ಚು ಜಾಸ್ತಿಯಾಗುತ್ತಿತ್ತಲ್ಲ. ಅದನ್ನು ಉಳಿಸಿದಹಾಗೆಯೂ ಆಯಿತೆಂದುಕೊಂಡೆ. ಆದ್ರೆ ರಾತ್ರಿ ಮಗು ಪದೇ ಪದೇ ಉಚ್ಛೆ ಹೊಯ್ದುಕೊಂಡು ಇಬ್ಬರಿಗೂ ನಿದ್ದೆ ಇಲ್ಲದಾಯಿತು. ಸರಿ ಎಂದು ರಾತ್ರಿ ಮಾತ್ರ ಡಯಾಪರ್ ಹಾಕತೊಡಗಿದೆ.
ಮಕ್ಕಳ ಉಚ್ಛೆಬಟ್ಟೆ, ಬಾತ್ರೂಮ್ ಎಲ್ಲ ಅಮ್ಮ ತೊಳೆಯುತ್ತಿದ್ದಳು. ಆಡುಗೆ ನಾನು ಮಾಡುತ್ತಿದ್ದೆ. ಅಷ್ಟಕ್ಕೇ ಬಹಳ ಸುಸ್ತಾಗುತ್ತಿತ್ತು. ಮಧ್ಯಾಹ್ನ ಮಲಗೋಣವೆಂದರೆ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ತಂಗಿಯ ಪುಟ್ಟಮಗು ರಾತ್ರಿಯೆಲ್ಲಾ ಏಳುತ್ತಿದ್ದರಿಂದ ಅದಕ್ಕೆ ಹಾಲು ಕುಡಿಸಿ ಮಲಗಿಸಲು ಅವರೆಲ್ಲ ಎದ್ದಿರುತ್ತಿದ್ದರು. ಹಾಗಾಗಿ ಅವರು ಮಧ್ಯಾಹ್ನ ವಿಶ್ರಾಮ್ತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ನಾನು ಎಂದಿನಂತೆ ಸುಸ್ತಾಗಿ ಮಗುವಿಗೆ ಹಾಲು ಕುಡಿಸುವುದಕ್ಕೂ ಬಹಳ ಕಷ್ಟಪಡುತ್ತಿದ್ದೆ. ಯಾರಿಗೂ ಹೇಳಿಕೊಳ್ಳಲಿಲ್ಲ. ನನಗೆ ಮೊದಲಿನಿಂದಲೂ ಹಾಗೆಯೇ . ನನ್ನ ಜೊತೆಗೆ ಬದುಕುವವರು ನನ್ನ ಕಷ್ಟಗಳನ್ನೂ ಹೇಳದೆ ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ಅದು ಸಾಧ್ಯವೇ ಇಲ್ಲ ಎಂಬುದು ಈಗ ಅರ್ಥವಾಗಿದೆ.
ಮುಂದುವರಿಯುವುದು