ಬುಧವಾರ, ಆಗಸ್ಟ್ 7, 2019

ಸೋರುತಿಹುದು ಮನೆಯ ಮಾಳಿಗೆ


ಸೋರುತಿಹುದು ಮನೆಯ ಮಾಳಿಗೆ
ಸಂತ ಶಿಶುನಾಳ ಶರೀಫರ ಈ ಹಾಡಿನ ಅನುಭಾವ ಏನೇ ಇರಲಿ. ನನಗೆ ಮಾತ್ರ ಈ ಹಾಡು ಕೇಳಿದಾಗ ಕಾಣಿಸುವುದೇ ಸೋರುತ್ತಿದ್ದ ನಮ್ಮ ಊರಿನ ಮನೆ. ಅಲ್ಲಿಯ ನಮ್ಮ ಮನೆ ಹೆಂಚಿನದು. ಮೊದಲೆರಡು ವರ್ಷಗಳು ಹುಲ್ಲಿನ ಮಾಡು. ಆಗ ಅಷ್ಟೊಂದು ಸೋರುತ್ತಿರಲಿಲ್ಲ. ಹುಲ್ಲು ಗೌರವ ತರುವುದಿಲ್ಲ. ಹೆಂಚು ಹಾಕಬೇಕು ಎಂದುಕೊಂಡರು ಅಪ್ಪ. ಹೇಗೋ ಹೆಂಚು ಹೊಂದಿಸಿ, ಬಿದಿರಿನ ರೀಪು, ಗಳ ಹಾಕಿ ಮಾಡು ಮಾಡಿದರು. ಅದು ಮಳೆ ಬಂತೆಂದರೆ ಸಾಕು ಸೋರಿದ್ದೇ ಸೋರಿದ್ದು. ಅಮ್ಮ, ನಾನು ನೀರು ಬೀಳುವಲ್ಲೆಲ್ಲ ಪಾತ್ರೆಗಳನ್ನು ಇಡುತ್ತಿದ್ದೆವು. ಬೇಸಿಗೆಯಲ್ಲೇ ಕಟ್ಟಿಗೆಗೆ ಪರದಾಡುತ್ತಿದ್ದ ನಾವು ಮಳೆಗಾಲದಲ್ಲಿ ಒದ್ದೆ ಚಕ್ಕೆಯ ಹೊಗೆಯಲ್ಲಿ ಉಸಿರುಗಟ್ಟಿಕೊಳ್ಳುತ್ತಿದ್ದೆವು. ಮನೆಯಲ್ಲಿ ರೇಷ್ಮೆ ಬೆಳೆ ಮಾಡುತ್ತಿದ್ದರಿಂದ ಅದರ ಕಟ್ಟಿಗೆಯನ್ನು ಅಮ್ಮ ಕಾಯ್ದುಕೊಂಡಿರುತ್ತಿದ್ದಳು. ಮಳೆಗಾಲಕ್ಕಾಗಿ ಚಾಲಿ ಸಿಪ್ಪೆ, ರೇಷ್ಮೆ ಕಟ್ಟಿಗೆ, ತೆಂಗಿನ ಚಿಪ್ಪು ಮತ್ತು ಸೀಮೆಎಣ್ಣೆ ಒಟ್ಟುಮಾಡಿಟ್ಟುಕೊಳ್ಳುವುದು ನಮ್ಮ ಬೇಸಿಗೆಯ ಆದ್ಯ ಕೆಲಸವಾಗಿತ್ತು. ಆದಾಗ್ಯೂ ಅದೆಷ್ಟು ಮಳೆ ಬರುತ್ತಿತ್ತೆಂದರೆ ಇವತ್ತಿನ ಪ್ರವಾಹ ಬರಿಸುತ್ತಿರುವ 15-20 ಸೆಂ.ಮೀ ಮಳೆ ಅಂದಿನ ನಿತ್ಯದ ಸಂಗತಿಯಾಗಿತ್ತು. ಮಧ್ಯಾಹ್ನ ಪ್ರದೇಶ ಸಮಾಚಾರದ ಕೊನೆಯಲ್ಲಿ ಹೇಳುವ ಹವಾಮಾನ ವರದಿ ನಮಗೆ ಮಾರ್ಗದರ್ಶಿಯಾಗಿತ್ತು.
ಮಲೆನಾಡಿನ ಮಳೆಗಾಲದ ಒಡನಾಟ ಒಮ್ಮೆ ಆದರೆ ಜೀವನದಲ್ಲಿ ಯಾವ ರೀತಿಯ ಮಳೆಗೂ ಜೀವ ಹೆದರುವುದಿಲ್ಲ. ಒಣಗದ ಕಂಬಳಿ ಕೊಪ್ಪೆ, ಒಳ ಉಡುಪುಗಳು, ಮೇಲ್ಹೊದಿಕೆಗಳು, ಉಂಬಳ ಕಚ್ಚಿ ಕೆರೆತ ತರುವ ಕಾಲುಗಳು, ಏಡಿ ಹಿಡಿದು ಸಂತಸಗೊಂಡ ಮನದಲ್ಲೇ ಅವುಗಳಿಂದ ಕಚ್ಚಿಸಿಕೊಂಡ ಉರಿಯುವ ಕೈಗಳು…..ಇವೆಲ್ಲ ಎಂದಿಗೂ ನೆನಪಿನಲ್ಲಿರುವ ಮಳೆಗಾಲದ ಅನುಭವಗಳು. ಗದ್ದೆ ಹಾಳೆಯ ಮೇಲೆ, ಕಾಲು ಸಂಕಗಳ ಮೇಲೆ ಸರ್ಕಸ್ ಮಾಡುತ್ತ ಶಾಲಾ ಕಾಲೇಜುಗಳಿಗೆ ಹೋಗಿ ಬಂದ ಮಕ್ಕಳನ್ನು ಬೆಂಗಳೂರಿರಲಿ, ವಿಶ್ವದ ಯಾವ ರಣ ಬಿಸಿಲು, ಜಡಿಮಳೆ, ಕೊರೆಯುವ ಚಳಿ ಏನೂ ಮಾಡುವುದಿಲ್ಲ ಎಂಬುದು ಸತ್ಯ. ಬದುಕು ಗಟ್ಟಿಗೊಳಿಸುವ ಸಮೃದ್ಧ ಬಾಲ್ಯ ಮಲೆನಾಡಿನ ಮಕ್ಕಳದ್ದು. ತಾಯಂದಿರೆಂತೂ ನಿಜಕ್ಕೂ ದೊಡ್ಡವರು. ಗಂಡ ಜವಾಬ್ದಾರಿಯಿಂದ ಬೆಚ್ಚಗಿನ ಮನೆ, ಗೋಬರ್ ಗ್ಯಾಸ್, ಕಟ್ಟಿಗೆ, ಸೀಮೆಎಣ್ಣೆ, ವಿದ್ಯುತ್, ಅಕ್ಕಿ, ದಿನಸಿಗಳ ವ್ಯವಸ್ಥೆ ಮಾಡಿದರೆ ದೊಡ್ಡ ಪುಣ್ಯವಂತರು. ಹೊರಗಡೆ ಡೇರೆ ಹೂ, ನಾಗದಾಳಿ ಹೂ ಬೆಳೆಸಿಕೊಂಡು, ಅಲ್ಪ ಸ್ವಲ್ಪ ತರಕಾರಿ ಮಾಡಿಕೊಂಡು ಮನೆ ಊಟ, ಕೊಟ್ಟಿಗೆ, ಮಕ್ಕಳ ಕೆಲಸ ಮಾಡಿಕೊಂಡರೆ ಸಾಕು.
ಏನಾದರೂ ಗಂಡ ಬೇಜವಾಬ್ದಾರಿಯಾದರೆ ಅವರ ಹಾಗೂ ಅವರ ಮಕ್ಕಳ ಪಾಡು ದೇವರಿಗೇ ಪ್ರೀತಿ. ಸುರಿಯುವ ಮಳೆ, ಸೋರುವ ಮನೆ, ಉರಿಯದ ಕಟ್ಟಿಗೆ, ಅಳುವ ಮಕ್ಕಳು, ಜ್ವರದಿಂದ ನಡುಗುವ ಕೈಬಿಡದ ಕೂಸು, ಕೊಟ್ಟಿಗೆಯಿಂದ ಹಸಿಹುಲ್ಲಿಗಾಗಿ ಗೋಗರೆಯುವ ಹಸು, ಉಕ್ಕಿ ಹರಿಯವ ಹೊಳೆ, ಹೊಳೆ ದಾಟಿಯೇ ಹೋಗಬೇಕಾದ ಗದ್ದೆ, ತೋಟ, ಅವೋ ನೀರಿನಿಂದ ತುಂಬಿ ದೊಡ್ಡ ಕೆರೆಯಂತಾಗಿರುತ್ತವೆ, ಒಂದೇ ಎರಡೆ.ಅಂತೂ ಮಳೆ ನಿಲ್ಲುವುದನ್ನೇ ನೋಡಿಕೊಂಡು ಹೊಳೆ ದಾಟಿ ಹೋಗಿ ಹುಲ್ಲು ಕೊಯ್ದರೆ ತರಲು ಕಾಲು ಸಂಕವೂ ಸರಿ ಇರದು. ಹೇಗೋ ತಂದು ಹಾಕಿ, ಹಾಲು ಕರೆದು ಒಳಗೆ ಬಂದರೆ ವಿದ್ಯುತ್ ಇಲ್ಲದ ಬರೀ ಕತ್ತಲು. ಸೀಮೆಎಣ್ಣೆ ಇಲ್ಲದೆ ಒಂದೇ ಚಿಮಣಿ ದೀಪದಲ್ಲಿ ರಾತ್ರಿ ಊಟ ಸಿದ್ಧಪಡಿಸಬೇಕು. ಇವುಗಳ ಜೊತೆಗೆ ಶಾಲೆಗೆ ಹೋಗುವ ಮಕ್ಕಳನ್ನು ಹೊತ್ತಿಗೆ ತಯಾರು ಮಾಡಿ ಕಳಿಸಬೇಕು. ಅವರ ಇರುವ ಒಂದೆರಡು ಯೂನಿಫಾರಂನ್ನು ಒಣಗಿಸಿಡಬೇಕು. ಮಳೆಯಲ್ಲಿ ನೆನದು, ಹಸಿದು ಬರುವ ಮಕ್ಕಳಿಗೆ ತಿಂಡಿ ರೆಡಿ ಮಾಡಬೇಕು. ನಿಜವಾಗಿಯೂ ಮಲೆನಾಡಿನ ತಾಯಿ ಮಳೆಗಾಲದಲ್ಲಿ ಸಾಕ್ಷಾತ್ ಭೂಮಾತೆಯೇ ಆಗಿರುತ್ತಾಳೆ.  ಇಂತಹ 21 ಮಳೆಗಾಲಕ್ಕೆ ಸಾಕ್ಷಿಯಾದ ನನಗೆ ಇವತ್ತು ಪ್ರವಾಹದಿಂದ ನರಳುತ್ತಿರುವ ನೆರೆಪೀಡಿತರ ದುಃಖ ಅರ್ಥವಾಗುತ್ತದೆ.
ಇವತ್ತು ನಾನು ಬೆಂಗಳೂರಿನಲ್ಲಿ ಕುಳಿತು ಕಥೆಯಂತೆ ವಿದ್ಯುತ್ ಹಾಗೂ ಇಂಟರ್ನೆಟ್ ಸೌಲಭ್ಯ ಬಳಸುತ್ತ ಅನುಭವ ದಾಖಲಿಸುತ್ತೇನೆಂದಾದರೆ ಅದರಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ನನ್ನ ಬದುಕು ನನ್ನ ಸುತ್ತಲಿನವರ ಬದುಕು ಇಲ್ಲಿಯವರೆಗೆ ಬಂದಿದೆಯೆಂದರೆ ಅದಕ್ಕೆ 60 ವರ್ಷಗಳ ಕಾಂಗ್ರೆಸ್ ಕೊಡುಗೆಯಿದೆ. ಈಗ ನೆರೆ ಬಂದಿದೆ. ನಿಮ್ಮ ಅಗತ್ಯ ಇದೆ ಎಂದು ಆಳುವ ಬಿಜೆಪಿಯವರಿಗೆ ಹೇಳಿದರೆ ಇದಕ್ಕೂ 60 ವರ್ಷಗಳ ಪಾಲಿಸಿ ಕೊರತೆಯೇ ಕಾರಣ ಎಂದು ಕೈತೊಳೆದುಕೊಂಡರೆ ಆಶ್ಚರ್ಯವಿಲ್ಲ. ಮಳೆಗಾಲ ಶುರುವಾದಾಗಿನಿಂದ ಆಳುವ ಸರ್ಕಾರ ಮತ್ತು ಬೀಳಿಸುವ ಸರ್ಕಾರಗಳ ಗುದ್ದಾಟವೇ ಆಗಿದ್ದು ಬಿಟ್ಟರೆ ಮತ್ತೇನನ್ನೂ ನಾನು ನೋಡಿಲ್ಲ, ಕೇಳಿಲ್ಲ. ಕಳೆದ ವರ್ಷ ಕೊಡಗು ಕಲಿಸಿದ ಪಾಠ ತಲೆಗೆ ಹೋಗಿಲ್ಲ. ಹೇಗೆ ಹೋಗುತ್ತದೆ? ಕೈಯಲ್ಲಿ ದುಡ್ಡಿದೆ, ತಲೆ ಮೇಲೊಂದು ಬೆಚ್ಚನೆಯ ಸೂರಿದೆ, ಉಣ್ಣಲು, ತಿನ್ನಲು, ತಿರುಗಾಡಲು ಕೊರತೆಯಿಲ್ಲ. ಎಲ್ಲೋ ನರಳುವ ಜೀವಗಳ ಪರಿತಾಪ, ಬವಣೆಗಳ ಅರಿವಾಗುವುದು ಎಂತು? ಅರಿವಾದರೂ ದೂರುವುದು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿದೆ ಈ ನರದೌರ್ಬಲ್ಯವಿರುವ ರಾಜಕಾರಣಿಗಳಿಂದ. ಅನುಮಾನವಿದೆ.
ಈಗ ನೋಡಿ, ಪ್ರತಿಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಭೇಟಿಕೊಟ್ಟು ರಕ್ಷಣೆಗೆ, ಪರಿಹಾರಕ್ಕೆ, ಸೌಲಭ್ಯ ಕಲ್ಪಿಸುವುದಕ್ಕೆ ಮುಂದಾದ ಯಾವ ವರದಿಯೂ ಕಾಣುತ್ತಿಲ್ಲ. ಬದಲಿಗೆ ಯಡಿಯೂರಪ್ಪ ಎಲ್ಲಿ ಹೋದ್ಯಪ್ಪ? ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ನಿಂಬಾಳ್ಕರ್ ಒಬ್ಬ ಮಹಿಳೆ ಅದೂ ಅವರಿಗೆ ಸಂಬಂಧಿಸಿದ ಮನೆಯ ಕೆಳಮಹಡಿಯಲ್ಲಿ ನೀರು ತುಂಬಿದ ನಂತರ ಹೇಳಿಕೆ ನೀಡಿದ್ದು ಬಿಟ್ಟರೆ ಯಾವೊಬ್ಬರೂ ಪತ್ತೆ ಇಲ್ಲ. ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರವಾಹ ಪರಿಹಾರ ಧನ ಕೇಳಿದ್ದು ಬಿಟ್ಟರೆ ಮತ್ತೇನೂ ಕಾರ್ಯ ಕಾಣುತ್ತಿಲ್ಲ. ದೆಹಲಿಯ ವರಿಷ್ಠರೊಂದಿಗೆ ಅವರದ್ದೇ ವೈಯಕ್ತಿಕ ಹೋರಾಟದಲ್ಲಿ ಮುಳುಗಿಹೋಗಿದ್ದಾರೆ. ಮಂತ್ರಿಗಳು ಹುಲಿ ಹಿಡೀಲಿ, ಆಡಳಿತವೇ ಕುಸಿದು ಹಕ್ಕಲೆದ್ದು ಹೋಗಿದೆ.
ಅಲ್ಲೆಲ್ಲೋ ಋತುಮತಿಯಾದ ಮಹಿಳೆ ಪ್ಯಾಡ್ ಇಲ್ಲದೆ ಒದ್ದಾಡುತ್ತಿರಬಹುದು. ನೀರಿನಲ್ಲಿ ಮುಳುಗಿ ಹೋಗುತ್ತಿರುವವರಿಗೆ ರಕ್ಷಣೆ ಮಾಡುವವರು ಬೇಕು. ಹಸಿದ ಮಕ್ಕಳಿಗೆ ಹೊಟ್ಟೆಗೆ ಬೇಕು. ಬಾಣಂತಿಯರಿಗೆ ಸಾವು ಬದುಕಿಗಿಂತಲೂ ಅಪ್ಯಾಯಮಾನವಾಗಿ ಕಂಡರೆ ಆಶ್ಚರ್ಯವಿಲ್ಲ. ದವಸ, ಧಾನ್ಯಗಳೆಲ್ಲ ಒದ್ದೆಯಾಗಿ ನೀರುಪಾಲಾಗಿವೆ, ಮನೆ ಇಲ್ಲ, ಮಠವೂ ನೀರಿನಲ್ಲಿ ಮುಳುಗಿದೆ. ಸಾಲ, ಸೋಲ ಮಾಡಿ ಗದ್ದೆ ನಾಟಿಗೆ ತಯಾರು ಮಾಡಿದ್ದರೆ, ಮನೆ ಕಟ್ಟಿಸಿದ್ದರೆ ಆ ಯಜಮಾನನ ಕತೆ ಏನು? ಏಲ್ಲಿಗೆ ಹೋಗಲಿ ಎನ್ನುವ ಅಂತರಂಗದ ಆರ್ತನಾದ ಕೇಳುವವರಿಲ್ಲ. ಇಂತಹ ಸೌಭಾಗ್ಯಕ್ಕೆ ನಮಗೆ ಸರ್ಕಾರಗಳು ಬೇಕು. ಜನಪ್ರತಿನಿಧಿಗಳು ಬೇಕು, ಉಳ್ಳವರು ಕೈಲಾಗುವ ಜನರು ಬೇಕು. ಒಮ್ಮೊಮ್ಮೆ ನನಗೆ ನನ್ನ ಮೇಲೂ ಸಿಟ್ಟು ಬರುತ್ತದೆ. ಇಂತಹ ಪರಿಸ್ಥಿತಿಗೆ ಯಾರೂ ಹೊಣೆಯಲ್ಲ. ಬದುಕಿನಲ್ಲಿ ಇವೆಲ್ಲ ಅನಿವಾರ್ಯ. ಇಂತಹ ಅನಿವಾರ್ಯತೆಗಳು ಯಾರಿಗೂ ಬರಬಹುದು. ಆಗೆಲ್ಲ ಉಳಿದುಕೊಳ್ಳುವ ಪ್ರಶ್ನೆ ``ಮಾನವೀಯತೆ ಉಳಿದಿದೆಯಾ? ‘’ಎಂಬುದು ಮಾತ್ರ.