ಪ್ರಾಣಿಪ್ರಪಂಚದ
ನೆನಪುಗಳು
ಇವತ್ತು
ಮಧ್ಯಾಹ್ನದ ಗಾಢನಿದ್ದೆಯ ನಂತರ ಎದ್ದಾಗ ಏನೂ ಸದ್ದಿರಲಿಲ್ಲ. ಮುಖ ತೊಳೆದು ಕೂದಲು ಬಾಚಿ ಹಾಗೆ ಮತ್ತೊಂದು
ರೂಮಿಗೆ ಕಾಲಿಡುತ್ತೇನೆ, ಬೆಕ್ಕಿನ ಮರಿಯೊಂದು ಬೆವರು ಆರಲೆಂದು ಮಂಚದ ಮೇಲೆ ಹರವಿಟ್ಟ ನನ್ನ ಚೂಡಿದಾರದ
ಮೇಲೆ ಹಾಯಾಗಿ ಮಲಗಿದೆ. ಅದರಮ್ಮ ಮಂಚದ ಕೆಳಗೆ. ಬಹುಷಃ ಹೊರಗೆ ಮಳೆ. ಚಳಿಯಾಗಿರಬೇಕು. ಯಾರೂ ಹೇಳಿ
ಕೇಳಿ ಮಾಡುವುದಿಲ್ಲ ಎಂತಲೋ ಬಂದು ಹಾಯಾಗಿ ಕುಳಿತಿವೆ. ಇವತ್ತು ಮಾತ್ರವಲ್ಲ, ಈ ಮರಿ ಹಾಕಿದ್ದೂ ನಮ್ಮ
ಮನೆಯ ಕಿಟಕಿ ಸಜ್ಜಾದ ಮೇಲೆಯೆ. ನಾವು ಮಲಗುವುದನ್ನೇ ಕಾದು ಮನೆಯೊಳಗೆ ದಾಳಿ ಇಡುತ್ತವೆ. ಮರಿಗೆ ಹಾಲು
ಹಾಕಿದರೆ ಕುಡಿಯಲು ತಿಳಿಯದು, ಅದರಮ್ಮ ಕುಡಿದು ಓಡಿಹೋಗುತ್ತದೆ. ಬೆಚ್ಚಗೆ ಮಲಗಿ ಅಂತ ನನ್ನ ಹಳೆಯ
ಕಾಟನ್ ಬಟ್ಟೆಯೊಂದನ್ನು ಹಾಸಿಕೊಟ್ಟರೆ ಮಲಗಲು ಅವಕ್ಕೆ ಭಯ. ಮಂಚದ ಮೇಲೆ ಸಾಕಷ್ಟು ಬಟ್ಟೆಗಳು ಬಿದ್ದು
ಹೊರಳಾಡುತ್ತಿದ್ದರೂ ನನ್ನ ಹೊಸ ಬಟ್ಟೆಯೇ ಆಗಬೇಕು ಮರಿಬೆಕ್ಕಿಗೆ.
ಇವಕ್ಕೆ
ಮಾತ್ರವಲ್ಲ. ನನ್ನ ಜೊತೆಗೆ ಮನೆ ಕಾಯಲು ನಾಯಿಯೊಂದಿತ್ತು. ಅದರ ಹೆಸರು ಟಿಪ್ಪು. ಹೈಸ್ಕೂಲಿಗೆ ಹೋಗುವಾಗ
ಅದು ಬೆಳಿಗ್ಗೆ ಮೊದಲು ತಿಂಡಿ ತಿನ್ನುತ್ತಿರಲಿಲ್ಲ. ನನ್ನನ್ನು 2 ಕಿ.ಮೀ ದೂರದಲ್ಲಿನ ಹೈಸ್ಕೂಲ್ ವರೆಗೆ
ಗದ್ದೆ, ಕಾಡು, ರಸ್ತೆ ಹೀಗೆ ಯಾವ ದಾರಿಯಲ್ಲಿ ಹೋದರೂ ಜೊತೆಗೆ ಬರುತ್ತಿತ್ತು. ಒಂದೊಮ್ಮೆ ನನಗಿಂತ
ಸ್ವಭಾವ ಸಹಜ ಮುಂದೆ ಓಡಿ ಹೋಗಿಬಿಟ್ಟಿದ್ದರೆ ನಾನು ಬರುವವರೆಗೆ ನಿಂತು ಕರೆದುಕೊಂಡು ಹೋಗುತ್ತಿತ್ತು.
ಹೈಸ್ಕೂಲಿಗೆ ಹೋಗಿ ಪ್ರಾರ್ಥನೆ ಮುಗಿಯುವವರೆಗೆ ಕಾದು, ಕ್ಲಾಸಿಗೆ ಹೋಗಿ ಕುಳಿತೆನೋ ಎಂದು ನೋಡಿಕೊಂಡು
ಮನೆಗೆ ಹೋಗಿ ತಿಂಡಿ ತಿನ್ನುತ್ತಿತ್ತು. ಅಮ್ಮನಿಲ್ಲದಾಗ ನಾನು ಹೈಸ್ಕೂಲಿಗೆ ಹೊರಡುವ ಮೊದಲು ಹಾಕುತ್ತಿದ್ದೆ.
ಆಗೆಲ್ಲ ತನ್ನ ಊಟವನ್ನು ಹಾಗೆಯೇ ಬಿಟ್ಟು ನನ್ನನ್ನು ಬಿಟ್ಟೇ ಅದು ಮರಳಿ ಹೋಗಿ ತಿನ್ನುತ್ತಿತ್ತು.
ನಾನು ಮನೆಯಲ್ಲಿರುವಾಗ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ನಮ್ಮ ಮನೆಯ ಅಂಗಳಕ್ಕೆ ನಾಗರಹಾವು ಬರುತ್ತಿತ್ತು.
ಅದು ಮತ್ತು ಈ ಟಿಪ್ಪು ಆಡುತ್ತಿದ್ದವೋ, ಜಗಳ ಮಾಡುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ. ಇದು ಬೌಬೌ
ಎಂದು ಕೂಗುತ್ತ ಅತ್ತ ಇತ್ತ ಓಡುತ್ತಿದ್ದರೆ, ಹಾವು ತಲೆ ತೂಗುತ್ತ ಬುಸ್ ಬುಸ್ ಗುಡುತ್ತ ಅಂಗಳ ತುಂಬ
ಗದ್ದಲವೆಬ್ಬಿಸುತ್ತಿದ್ದವು. ಟಿಪ್ಪುವಿಗೂ ನನ್ನ ಚಪ್ಪಲಿಗಳೆಂದರೆ ಬಹಳ ಇಷ್ಟ. ನನ್ನ ಚಪ್ಪಲಿ ಹುಡುಕಿಕೊಂಡು
ಕತ್ತರಿಸಿಹಾಕುತ್ತಿತ್ತು. ಅದು ಬಿಟ್ಟರೆ ಒಂದೆರಡು ಸಲ ಅಪ್ಪನ ಚಪ್ಪಲಿ ಕತ್ತರಿಸಿತ್ತು. ಅಪ್ಪ ಸರಿಯಾಗಿ
ಬಾರಿಸಿದ ಮೇಲೆ ಅಪ್ಪನ ಚಪ್ಪಲಿ ಬಿಟ್ಟು ಸದಾ ನನ್ನ ಚಪ್ಪಲಿಯನ್ನೇ ತಿನ್ನುತ್ತಿತ್ತು. ಅಪ್ಪ ನನ್ನ
ಚಪ್ಪಲಿಯಲ್ಲೂ ಅದಕ್ಕೆ ಒಮ್ಮೆ ಹೊಡೆದು ನೋಡಿದ. ಆದರೆ ಅದು ಮಾತ್ರ ನನ್ನ ಚಪ್ಪಲಿ ಕತ್ತರಿಸಿದರೇ ಸಮಾಧಾನ
ಎನ್ನುವಂತಿತ್ತು. ನನಗಾದರೋ ಬರಗಾಲದಲ್ಲಿ ಮಗ ಉಣ್ಣುವುದನ್ನು ಕಲಿತಂತೆ, ಬರಿಗಾಲಿನಲ್ಲಿ ಗದ್ದೆ, ಕಾಡು
ದಾಟಿ ಶಾಲೆಗೆ ಹೋಗುವುದ ಹೇಗೆ? ಒಂದು ಹಳೆ ಚಪ್ಪಲಿ, ಮತ್ತೊಂದು ಕಾಲಿಗೆ ಇನ್ನೊಂದು ಚಪ್ಪಲಿ ಇಜ್ಜೋಡಿ
ಹಾಕಿಕೊಂಡು ಶಾಲೆಗೆ ಹೋದ ದಿನಗಳು ಇನ್ನೂ ಮರೆತಿಲ್ಲ.
ಮನೆಯಲ್ಲಿ
ಹಸುವೊಂದಿತ್ತು. ಬಹುಷಃ ಅದಿಲ್ಲದಿದ್ದರೆ ನಾನು ಹಾಲು ಕರೆಯುವುದನ್ನು ಕಲಿಯುತ್ತಿರಲಿಲ್ಲ. ಎಂತಹ ಅಪರೂಪದ
ಹಸುವೆಂದರೆ ಒಮ್ಮೆ ಕರು ಹಾಕಿದ್ದು ಸರಿ ಸುಮಾರು 5 ವರ್ಷ ಹಾಲು ಕೊಡುತ್ತಿತ್ತು. ಅದರ ಕೆಳಗೆ ಮಲಗಿಕೊಂಡು
ಹಾಲು ಕರೆದರೂ ಕೊಡುತ್ತಿತ್ತು. ಹಾಗಾಗಿ ಅಪ್ಪ, ಅಮ್ಮ ಇಲ್ಲದಾಗ ಹಾಲು ಕರೆಯುವುದು ನನ್ನ ಪಾಲಾಗಿತ್ತು.
ನಾನು ಬೆಂಗಳೂರಿಗೆ ಬಂದ ನಂತರವೂ ಮನೆಗೆ ಹೋದಾಗ ಅದು ಅದರ ಮಕ್ಕಳು ತೋರುತ್ತಿದ್ದ ಪ್ರೀತಿಗೆ ಯಾವ ಮನುಷ್ಯರ
ಪ್ರೀತಿಯೂ ಸಾಟಿಯಾಗದು.
ಇನ್ನು
ಬೆಂಗಳೂರಿನ ನಾಯಿಗಳದ್ದು ಒಂದು ಕಥೆ. 2002ರಲ್ಲಿ ಎಂ.ಎನ್.ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಶಿಫ್ಟ್
ಕೆಲಸ. ಬೆಳಗಿನ ಪಾಳಿಯಿತ್ತು. ಚಾಮರಾಜಪೇಟೆಯ ಕೋತಿ ಪಾರ್ಕ್ ನ ಹತ್ತಿರ ನನ್ನ ಮನೆಯಿತ್ತು. ಮೈಸೂರು
ಸರ್ಕಲ್ ಗೆ ಬೆಳಿಗ್ಗೆ 5 ಗಂಟೆಗೆ ನನ್ನ ಕ್ಯಾಬ್ ಬರುತ್ತಿತ್ತು. ನಾನು 4.45ಕ್ಕೆಲ್ಲ ಹೊರಡುತ್ತಿದ್ದೆ.
ಸಾಮಾನ್ಯವಾಗಿ ನಿರ್ಜನವಾಗಿರುತ್ತಿತ್ತು. ಒಮ್ಮೆ ಇಡೀ ರಸ್ತೆಯ ತುಂಬ ನಾಯಿಗಳು. ನಾನು 2ನೇ ಮಹಡಿಯಿಂದ
ಕೆಳಗೆ ಬರುವುದನ್ನೇ ಕಾಯುತ್ತಿದ್ದವೋ ಎನ್ನುವಂತೆ ಒಂದು ಹತ್ತೆನ್ನರಡು ನಾಯಿಗಳು ಬೆನ್ನಟ್ಟಿಬಿಟ್ಟವು.
ನಾನು ಹೆದರದೆ ಸುಮ್ಮನೆ ಹೋಗುವುದೊಂದನ್ನೇ ಮಾಡಿದೆ. ಆಗ ಹಿಂದಿನಿಂದ ಒಂದು ದುಪಟ್ಟಾ ಎಳೆಯಿತು. ಪಕ್ಕಕ್ಕೆ
ಇನ್ನೊಂದು ಬಂದು ಬ್ಯಾಗ ಕಸಿಯಲು ಬಂತು. ವಿಚಿತ್ರವೆಂದರೆ ಒಂದೂ ನನ್ನ ಮೇಲೆ ದಾಳಿ ಮಾಡಲಿಲ್ಲ. ನಾನು
ಆ ಕ್ಷಣಕ್ಕೆ ಏನನ್ನಿಸಿತೋ ಏನೋ. ಇದ್ದಕ್ಕಿದ್ದಂತೆ ದೊಡ್ಡ ದನಿಯಲ್ಲಿ ಏ ಹೋಗ್ರೋ. ಬಿಡಿ ನನ್ನ ಬ್ಯಾಗು,
ದುಪಟ್ಟಾ. ಹೋಗಿ ಅಂದು ಕೂಗು ಹಾಕಿದೆ. ಅದೇನಾಯಿತೋ. ಅಷ್ಟೂ ನಾಯಿಗಳೂ ಹಿಂದಕ್ಕೆ ಸರಿದು ಸುಮ್ಮನೆ
ಹೋಗಿಬಿಟ್ಟವು. ಯೋಚಿಸಿ, ಅವುಗಳ ಜಾಗದಲ್ಲಿ ಮನುಷ್ಯರಿದ್ದರೆ ನನ್ನನ್ನು ಬಿಡುತ್ತಿದ್ದರಾ? ನಿಜವಾಗಿಯೂ
ಈ ಪ್ರಾಣಿಗಳಿಗೆ ನನ್ನ ಮೇಲೆ ಅದೇಕೆ ಅಷ್ಟು ಪ್ರೀತಿ? ಗೊತ್ತಿಲ್ಲ.
ಹಾಗೆ
ನಾನು ಮದುವೆಯಾಗಿ ಗೂಡೊಂದು ಆದಾಗ ನಮ್ಮ ಮನೆಯ ಬಾಲ್ಕನಿಯಲ್ಲಿ ಪಾರಿವಾಳಗಳ ಪ್ರೀತಿಯ ಜಾತ್ರೆ. ಮಗು
ಮಾಡಿಕೊಂಡು ಬೆಳೆಸಿಯೇ ತೀರುವ ಹಠ. ಕೋತಿಗಳಿಗೆ ನಮ್ಮ ಮನೆಯ ಸೌತೆಕಾಯೇ ಆಗಬೇಕು. ನಾನು ಪಕ್ಕದ ಮನೆಯವರೊಂದಿಗೆ
ದೂರು ಹೇಳಿಕೊಳ್ಳುತ್ತಿದ್ದೆ. “ನೋಡಿ ನಿಮ್ಮ ಮನೆಯಲ್ಲಿ ಸ್ವಲ್ಪವೂ ದಾಂಧಲೆ ಮಾಡುವುದಿಲ್ಲ. ನಮ್ಮ
ಮನೆಯಲ್ಲಿ ನಿತ್ಯ ಇವುಗಳ ಗಲೀಜು ಸ್ವಚ್ಛ ಮಾಡುವುದೇ ಆಗಿದೆ.” ಅದಕ್ಕೆ ಅವರು ಹೇಳುತ್ತಿದ್ದರು, “ನಮ್ಮ
ಮನೆಯಲ್ಲೂ ಬಂದ ಶುರುವಿನಲ್ಲಿ ಮೊಟ್ಟೆ ಇಟ್ಟಿತ್ತು. ನಾನು ಗೂಡಿನ ಸಮೇತ ಎಸೆದು ಬಿಟ್ಟಿದ್ದೆ. ಅಷ್ಟರ
ನಂತರ ಬರಲಿಲ್ಲ.” ಇರಬಹುದು. ನಾವು ಆ ಮನೆ ಬಿಟ್ಟು ಮತ್ತೊಂದು ಮನೆಗೆ ಬಂದಾಗ ಒಂದಿಡೀ ಬಾಲ್ಕನಿಯನ್ನು
ಪಾರಿವಾಳಗಳ ಸಂಸಾರಕ್ಕೇ ಬಿಟ್ಟುಕೊಟ್ಟಿದ್ದೆವು. ಅವುಗಳ ಗಲೀಜಿನಿಂದ ಹುಳುಗಳು ಮನೆಯೊಳಗೆ ಬರತೊಡಗಿದಾಗ
ವರ್ಷದ ಮಗನಿದ್ದಾನೆಂದು ಸ್ವಚ್ಛ ಮಾಡಿಸಿ ಜಾಲರಿ ಹಾಕಿಕೊಂಡೆವು. ಅಲ್ಲಿ ತನಕ 25ಕ್ಕೂ ಹೆಚ್ಚು ಪಾರಿವಾಳಗಳು
ಹುಟ್ಟಿ ಬೆಳೆದು ಹಾರಿ ಹೋದವು. ಹುಟ್ಟಿ ಬೆಳೆದ ಮನೆಯನ್ನು ಮರೆಯಲು ಸಾಧ್ಯವಿಲ್ಲವೆಂಬಂತೆ ಬಾಗಿಲು
ತೆಗೆದರೆ ಸಾಕು ಮನೆಯೊಳಗೆ ಬಂದು ಹೊರಹೋಗಲು ದಾರಿ ಕಾಣದೆ, ನನ್ನ ಮಗನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ
ಸದರ ಬೆಳೆಯಲು ಕಾರಣವಾದವು. ಈಗ ಅವನಿಗೆ ಪಾರಿವಾಳ, ನಾಯಿ, ಬೆಕ್ಕು, ಹಾವು ಯಾವುದರ ಭಯವೂ ಇದ್ದಂತಿಲ್ಲ.
ನಿನ್ನೆಯಾದರೂ
ಅಷ್ಟೆ. ಬೆಕ್ಕು ನನಗೆ ಹೊಸತು. ಅದೂ ಅಮ್ಮ ಬೆಕ್ಕು ಭಾರೀ ಇದೆ. ತನ್ನ ಮಗನೋ, ಮಗಳೋ ಬಗ್ಗೆ ವಿಪರೀತ
ರಕ್ಷಣಾತ್ಮಕವಾಗಿದೆ. ಅದನ್ನು ನೋಡಿ ನನಗೆ ಹೆದರಿಕೆ. ನನ್ನ ಮಗ ಅಮ್ಮ ಬೆಕ್ಕು ಜೊತೆ ಆಡಲು ಬಂದಿದೆ
ಎಂದು ತೊದಲು ನುಡಿಯುತ್ತಿದ್ದರೆ ನನಗೆ ಸೋಜಿಗ! ಕೊನೆಯಲ್ಲೊಂದು ಭಾರೀ ನೆನಪು.
ಹೈಸ್ಕೂಲಿಗೆ
ಹೋಗುವಾಗ ದಿನ ಸಂಜೆ ಹಂಡೆಗೆ, ಎಲ್ಲ ಕಡೆ ಬಾವಿಯಿಂದ ನೀರು ಸೇದಿ ತುಂಬಿಸಬೇಕಿತ್ತು. ಹದ ಮೂರು ಸಂಜೆಯ
ಹೊತ್ತು. ನಾನು ಎಂದಿನಂತೆ ಹೇ ಪಾಂಡುರಂಗಾ ಪ್ರಭೋ ವಿಠಲ ಎನ್ನುತ್ತ ಭಾರಿ ಜೋಶ್ ನಲ್ಲಿ ಭಕ್ತಿ ಪರವಶಳಾಗಿ
ನೀರು ಸೇದುತ್ತಿದ್ದೆ. ಕೊಡಪಾನ ಮೇಲೆ ಬಂತು. ಹಾಡುತ್ತ ಕೊಡಕ್ಕೆ ಕೈಹಾಕಿದೆ. ತಣ್ಣಗಾಯಿತು. ನೋಡಿದರೆ
ಸಣ್ಣ ಹಾವು ಕಂಠಕ್ಕೆ ಸುತ್ತಿಕೊಂಡು ತಲೆಯೆತ್ತಿ ನಿಂತಿದೆ. ಅಮ್ಮಾ ಅಂದಿದ್ದಷ್ಟೆ. ಹಗ್ಗ ಕೈಬಿಟ್ಟಿತ್ತು,
ಕೊಡ ಬಾವಿ ತಳ ಸೇರಿತ್ತು. ಅಮ್ಮ ಬಂದು , ಕೊಡ ಎತ್ತಿ, ಕೋಲಲ್ಲಿ ಈಚೆಗೆ ಎಳೆದು ಕಟ್ಟೆಯ ಮೇಲಿಟ್ಟಳು.
ಹಾವು ಹರಿಯುತ್ತ ಹೋಯಿತು. ಹೊರಗೆ ಬಂದ ಮೇಲೆ ಅದೊಂದು ವಿಷದ ಹಾವೆಂದು ತೋರಿದಾಗ ಮಕ್ಕಳು , ಮರಿ ಇದಾವೆ
ಎಂದು ಅಮ್ಮ ಹೊಡೆದು ಸಾಯಿಸಿದರು. ಹಾಗೆ ನಮ್ಮ ಮನೆಯಲ್ಲಿ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತಿನ ಬದುಕಿನ
ಪಾಠ ದೊರೆತಿದ್ದು ಇಂದು ಯಾವುದಕ್ಕೂ , ಯಾರಿಗೂ ಹೆದರದ ಧೈರ್ಯ ಕೊಟ್ಟಿದೆಯಾ?