ಬುಧವಾರ, ಮಾರ್ಚ್ 25, 2015

ಮಾನಸಿಕ ಆರೋಗ್ಯ, ಆತ್ಮಹತ್ಯೆ ಮತ್ತು ಅಧ್ಯಾತ್ಮಿಕ ಪರಿಹಾರ

           ಬಹುಷಃ ಈ ವಿಷಯದಲ್ಲಿ ನನ್ನಷ್ಟು ಅಥೆಂಟಿಕ್ ಆಗಿ ಹೇಳಬಲ್ಲವರು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡುತ್ತ, ಅಧ್ಯಾತ್ಮಿಕ ಸಾಧನೆ ಮಾಡುತ್ತಿದ್ದ ನನಗೆ ಆತ್ಮಹತ್ಯೆಯ ಒಳ ಸುಳಿವು ಅರ್ಥವಾಗಿದ್ದು ಆಕಸ್ಮಿಕವೇ ಸರಿ. ಆದಾಗ್ಯೂ ನನ್ನದೇ ಅನುಭವ ಮತ್ತು ನಾನು ಕಂಡು ಕೊಂಡ ಕೆಲವು ಸತ್ಯಗಳು (ಅದು ನನ್ನ ಮಟ್ಟಿಗೆ ಮಾತ್ರ ನಿಜವೂ ಆಗಿರಬಹುದು, ಗೊತ್ತಿಲ್ಲ) ಸದ್ಯದಲ್ಲೇ ಪುಸ್ತಕ ರೂಪದಲ್ಲಿ ಬರಲಿವೆ.
ದಕ್ಷ ಅಧಿಕಾರಿ ಡಿ.ಕೆ.ರವಿ ಸಾವಿನ ಸುತ್ತ ಸುತ್ತುತ್ತಿದ್ದ ಮನಸ್ಸು 2009ಕ್ಕೆ ಹೋಗಿ ನಿಂತಿತು. ಅಂದಿಗೆ ನಾನು ನನ್ನದೇ ರೀತಿಯಲ್ಲಿ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡಲು ಆರಂಭಿಸಿ 7 ವರ್ಷ, ಅಧ್ಯಾತ್ಮಿಕ ಜೀವನದಲ್ಲಿ ಪ್ರಯೋಗಗಳನ್ನು ಮಾಡಲು ತೊಡಗಿ 15+ ವರ್ಷಗಳೇ ಆಗಿತ್ತು. ಆದರೆ ಅದೊಂದು ದಿನ ನಾನೂ ವಿಷ ಕುಡಿದೆ. ನನಗೆ ಸಾಯಲು ಬಲವಾದ ಕಾರಣ ನನ್ನ ಮಟ್ಟಿಗೆ ಇತ್ತು. ನನಗೆ ನನ್ನ ಸುತ್ತಲಿನವರ ಒತ್ತಡದಿಂದ ಬಿಡುಗಡೆ ಬೇಕಿತ್ತು. ನನ್ನ ಆತ್ಮಸಾಕ್ಷಿಯಂತೆ, ಕೊಟ್ಟ ಮಾತಿಗೆ ತಪ್ಪದೇ ಇರಬೇಕಾಗಿತ್ತು. ಅದು ಸಾಧ್ಯವಿಲ್ಲದೇ ಹೋದರೆ ಸಾವೇ ಮೇಲೆಂದು ನಂಬಿದವಳು ನಾನು. ಅತ್ಯಂತ ಸ್ವಚ್ಛಂದವಾಗಿ ಹಾರಾಡುತ್ತಿರುವ ಹಕ್ಕಿಗೆ ಇದ್ದಕ್ಕಿದ್ದಂತೆ ಉರುಳು ಹಾಕಿ ಎಳೆದರೆ ಯಾವ ಸ್ಥಿತಿಯೋ ಅದೇ ನನ್ನ ಸ್ಥಿತಿಯಾಗಿತ್ತು. ಆದರೆ ಆ ಹೊತ್ತಿಗೆ ನನ್ನ ಆಧ್ಯಾತ್ಮಿಕ ಅನುಭವವೊಂದು ನನ್ನ ಸಾವಿನ ಕಾಲ ಬಂದಿಲ್ಲವೆಂಬುದನ್ನು ತಿಳಿಸಿತು. ಹಾಗಾಗಿ ಒಂದು ದೃಢವಾದ ನಿರ್ಧಾರದೊಂದಿಗೆ ನಾನೇ ಆಸ್ಪತ್ರೆಗೆ ತಲುಪಿ ಕಚೇರಿಗೆ ವಿಷಯ ತಿಳಿಸಿ ಅಡ್ಮಿಟ್ ಆದೆ. ಅಂದು ನನಗೆ ಗೊತ್ತಾಯಿತು, ಜೀವನದ ಮೌಲ್ಯವೆಷ್ಟು, ಒಂದು ಯಕಶ್ಚಿತ್ ಉಸಿರಿಗಾಗಿ ನಾವು ಎಷ್ಟು ಹೋರಾಡುತ್ತೇವೆ, ಅದು ಹೊರಟುಹೋದರೆ ಏನಿದೆ? ಸುಮ್ಮನೆ ಈ ಯುದ್ಧ, ಸಂಘರ್ಷ, ಸ್ಪರ್ಧೆ ಎಲ್ಲ ಎನ್ನುವುದು ನನ್ನೊಳಗೆ ಮತ್ತಷ್ಟು ದೃಢವಾಯಿತು.

            ಈ ಹೊತ್ತಿನಲ್ಲಿ ಮಾನಸಿಕ ಆರೋಗ್ಯಕ್ಕೆ ನಾನು ವೈದ್ಯಕೀಯ ಚಿಕಿತ್ಸೆಯೊಂದೇ ಎಂದು ನಂಬಿಕೊಂಡ ಕಾಲವದು. ಯಾಕೆಂದರೆ ವಯಸ್ಸು ಸಣ್ಣದು, ಅನುಭವ ಸಣ್ಣದು, ಬಿರುಗಾಳಿಗೆ ಎದೆಯೊಡ್ಡಬಲ್ಲೆ, ಇವರೆಲ್ಲ ಎಷ್ಟು ದುರ್ಬಲರು ಎಂದು ತಿಳಿದು ಮೆರೆಯುವ ಉಡಾಪೆ ಕಾಲವದು. ಹಾಗಾಗಿಯೇ ಭಾನಾಮತಿಯ ಶೂಟಿಂಗ್ ಗೆ ಗಾಣಗಾಪುರಕ್ಕೆ ಹೋದಾಗ ಅಲ್ಲಿಯ ಹೆಂಗಸರನ್ನು, ಜೋತಾಡುವ ದೆವ್ವಗಳನ್ನು ನೋಡಿ ಶರಪಂಜರದ ಉದಾಹರಣೆ ಕೊಟ್ಟು ದೊಡ್ಡ ಭಾಷಣವನ್ನೇ ಬಿಗಿದಿದ್ದೆ. ಮನೆಯ ಕಷ್ಟಗಳನ್ನು ಇಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ನಕ್ಕಿದ್ದೆ. ಇನ್ನು ಗಾಳಿ ಬಂದಿದೆ ಅದು ಇದು ಎಂದು ಬೆಟ್ಟ, ಗುಡ್ಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತಲೆ ಕುಣಿಸುತ್ತ ಕೂಗುವವರನ್ನು ನೋಡಿಯಂತೂ ನಕ್ಕೂ ನಕ್ಕೂ ಸುಸ್ತಾಗಿದ್ದೆ. ಇನ್ನೂ ನೆನಪಿದೆ, ಅದು ಭಾನಾಮತಿಯ ಶೂಟಿಂಗ್. ಗದಗ ಹತ್ತಿರದ ಯಾವುದೋ ಆಂಜನೇಯ ಹಾಗೂ ನರಸಿಂಹ ದೇವಸ್ಥಾನಗಳಲ್ಲಿದ್ದೆವು. ಅಂದು ಅಲ್ಲಿ ಜನರು ತಮ್ಮ ತಲೆ ಆಡಿಸುವ ರೀತಿಯನ್ನು ನೋಡಿ ನಗಲು ಆರಂಭಿಸಿದವಳು ಬಹುಷಃ ಪ್ಯಾಕಪ್ ಅಂದಾಗ ಸುಮ್ಮನಾಗಿದ್ದೆ. ನನಗೆ ಅದೊಂದು ಸಮೂಹ ಸನ್ನಿಯಂತೆ, ದುರ್ಬಲ ಮನಸ್ಸಿನಂತೆ ಅನ್ನಿಸಿತ್ತು.
              ಈ ಮಧ್ಯೆ ದೇವರ ಮೇಲಿನ ಪ್ರೀತಿ, ನನ್ನ ಅಧ್ಯಾತ್ಮಿಕ ಸಾಧನೆ  ದಿನಗಳೆದಂತೆ ಹೆಚ್ಚಾಗುತ್ತ ಹೋಯಿತು. ನನಗೆ ವಿಚಿತ್ರ ಅನುಭವಗಳೂ ಆಗತೊಡಗಿದವು. ಅಷ್ಟೇ ಅಲ್ಲ, ಯಾವು ಯಾವುದನ್ನು ನಾನು ಅಲ್ಲಗಳೆದಿದ್ದೆನೋ ಮತ್ತು ನನಗೆ ಸತ್ಯ ಗೊತ್ತಾಗಬೇಕು ಎಂದು ಪ್ರಾರ್ಥಿಸುತ್ತಿದ್ದೆನೋ ಅವೆಲ್ಲ ನನಗೆ ಸತ್ಯವಾಗಿ ತೋರತೊಡಗಿದವು. ಒಂದು ಸಮಸ್ಯೆ ಬಿಡಿಸಲು ವರ್ಷಗಟ್ಟಲೆ ಹೆಣಗಾಡಿದ್ದ ನನಗೆ ಪರಿಹಾರಗಳು ನಿಮಿಷಗಳಲ್ಲಿ ದೊರಕತೊಡಗಿದವು. ಒಬ್ಬ ವ್ಯಕ್ತಿಯ ಸಾಮರ್ಥ್ಯದ ಬದಲು ಹತ್ತಿಪ್ಪತ್ತು ಜನರಿಗಾಗುವಷ್ಟು ಶಕ್ತಿ ನನ್ನಲ್ಲಿ ಪ್ರವಹಿಸತೊಡಗಿತು. ಈ ಶಕ್ತಿಯನ್ನು ಭರಿಸಲಾಗದೇ ನನ್ನ ದೇಹ ದಿನದಿಂದ ದಿನಕ್ಕೆ ದುರ್ಬಲವಾಗತೊಡಗಿತು. ಆದರೂ ನನ್ನೊಳಗಿನ ಸಂಶಯ, ವಿಮರ್ಶಾತ್ಮಕ ಬುದ್ದಿ ಕಡಿಮೆಯಾಗಲಿಲ್ಲ. ಸತ್ಯವೆಂದು ಹೃದಯ ಹೇಳಿದರೂ ಬುದ್ಧಿಯ ಮೂಲೆಯಲ್ಲಿದ್ದ ಸಂಶಯ ಒಪ್ಪಲು ಸಿದ್ಧವಿರಲಿಲ್ಲ. ಈ ಶಕ್ತಿಯ ಸಂಚಲನಕ್ಕೆ ಹಗಲು, ರಾತ್ರಿ ಕೆಲಸ ಮಾಡಬಲ್ಲವಳಾದೆ. ಕೊನೆ ಕೊನೆಗೆ ನನಗೆ ಏನಾಗಿದೆ ಎಂದು ಚಿವುಟಿ ನೋಡಿಕೊಳ್ಳುವಷ್ಟು ಆನಂದ. ಈ ಜಗತ್ತಿನಲ್ಲಿ ಯಾರೂ ನನಗಿಂತ ಮೇಲಿಲ್ಲ, ಇದ್ದರೆ ದೇವರೊಬ್ಬನೆ. ಅವನಿಗೆ ಕೇರ್ ಮಾಡಿದರೆ ಸಾಕು, ಇವರಿಗೆಲ್ಲ ಅಲ್ಲ ಎನ್ನುವ ಮನಃಸ್ಥಿತಿ. ಯಾರನ್ನು ನೋಡಿದರೂ ಕಣ್ಣೀರು ಉಕ್ಕಿ ಹರಿಯುತ್ತಿತ್ತು. ತಡೆಯಲಾಗದ ಕಣ್ಣೀರು. ಯಾಕೆ, ಏನು ಗೊತ್ತಿಲ್ಲ. ದುಃಖದ್ದೂ ಅಲ್ಲ, ಖುಷಿದೂ ಅಲ್ಲ. ದೇವರ ಹೆಸರು ಹೇಳಿದರೇ ಸಾಕು ಆನಂದದ ಮೈಮರೆತ. ಹೀಗೆ ತಿಂಗಳಾನುಗಟ್ಟಲೆ ಕಳೆದವು. ಇವುಗಳ ಮಧ್ಯದಲ್ಲೇ ನನ್ನ ಕೆಲಸ, ಮನೆಯ ಜವಾಬ್ದಾರಿ, ಒತ್ತಡಗಳನ್ನು ನಿಭಾಯಿಸುತ್ತಿದ್ದೆ. ಹೀಗೆ ಕೊನೆಗೊಮ್ಮೆ ಮನೋವೈದ್ಯರನ್ನು ಸಂಪರ್ಕಿಸಿ ಅಲೋಪತಿ ಮಾತ್ರೆಗಳನ್ನು ನುಂಗತೊಡಗಿದೆ. ಪರಿಣಾಮವಾಗಿ ಅತಿನಿದ್ದೆ, ಜಡತ್ವ, ತೂಕ ಹೆಚ್ಚಳದಂತಹ ಅಡ್ಡಪರಿಣಾಮಗಳು ಕಾಣಿಸಿಕೊಂಡವು. ಈ ಮಾತ್ರೆಗಳನ್ನು ನುಂಗದೇ ಇದ್ದರೆ ಚೆನ್ನಾಗಿತ್ತೇನೋ ಎಂದು ಈಗ ಅನ್ನಿಸುವುದಿದೆ. ಯಾಕೆಂದರೆ ನನಗೆ ನಿಜವಾಗಿಯೂ ಖಿನ್ನತೆಯಾಗಿರಲಿಲ್ಲ. ಬದಲಿಗೆ ನಾನು ನನ್ನ ಅಧ್ಯಾತ್ಮಿಕ ಸಾಧನೆಯ ಫಲಶೃತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿತ್ತು. ಅಧ್ಯಾತ್ಮಿಕ ಗುರುವಿನ ಪ್ರತ್ಯಕ್ಷ ಪ್ರಮಾಣ ಬೇಕಿತ್ತು. ಯಾಕೆಂದರೆ ಇಲ್ಲದ್ದನ್ನು ನಂಬುವವಳಲ್ಲ ನಾನು ಎನ್ನುವ ಹಟ! ಈ ಆಧುನಿಕ ಮನಸ್ಥಿತಿ, ವಿಮರ್ಶಾತ್ಮಕ ಬುದ್ಧಿ ಎಷ್ಟೊಂದು ಆಳವಾಗಿದೆಯೆಂದರೆ ನನ್ನನ್ನೆ ಅಲ್ಲಗಳೆಯಲೂ ಅವು ಹಿಂದು ಮುಂದು ನೋಡುವುದಿಲ್ಲ!
                ಸರಿ; ಮಾತ್ರೆ ತೆಗೆದುಕೊಂಡ ತಿಂಗಳಿಗೆ ನಿದ್ದೆ ಸರಿಯಾಯಿತು ಓಕೆ ಎಂದು ಖುಷಿ ಪಟ್ಟೆ. ಆದರೆ ಮುಂದಿನ ಒಂದು ವಾರದಲ್ಲಿ ನಿದ್ದೆ ಮತ್ತೆ ಹದಗೆಟ್ಟು ಈಗ ನಿಜವಾಗಿಯೂ ಖಿನ್ನತೆ ಆವರಿಸಿತು. ಪರಿಣಾಮ ಆತ್ಮಹತ್ಯೆಯ ಪ್ರಯತ್ನ.
ಇಷ್ಟಾದರೂ ನನ್ನ ಅಜ್ಞಾನ ಕಡಿಮಯಾಗಲಿಲ್ಲ. ಬದಲಿಗೆ ಇನ್ನೂ ಹೆಚ್ಚೇ ಆಯಿತು. ಮತ್ತೆ ಮಾತ್ರೆಗಳ ಮೊರೆಹೋದೆ.
ಆದರೆ ಈ ನಡುವೆ ನಾನು ದೇವರನ್ನು, ಅವನಿಗೆ ಶರಣಾಗುವುದನ್ನು ಮಾತ್ರ ಬಿಡಲಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚು ಭಕ್ತಿಯ ದಾರಿ ಹಿಡಿದೆ. ಜ್ಞಾನ, ಕರ್ಮ, ಯೋಗ ಎಲ್ಲವೂ ನನ್ನ ಪಾಲಿಗೆ ಎಟುಕದ ಕುಸುಮವಾದಾಗ ಭಕ್ತಿಯೊಂದೇ ಉಳಿದಿತ್ತು ಪುಣ್ಯಕ್ಕೆ. ಅದರ ಫಲವಾಗಿ ಯಾರೋ ಹೇಳಿದ ದೇವಸ್ಥಾನಗಳಿಗೆ ಹೋದೆ. ಜಾಗೃತವಾಗಿವೆಯೆಂಬ ದೇವಸ್ಥಾನಗಳು ನಿಜವಾಗಿಯೂ ನನ್ನ ಮಟ್ಟಿಗೆ ಆಸ್ಪತ್ರೆಯಂತೆ ಕೆಲಸ ಮಾಡತೊಡಗಿದವು. ದಿನದಿಂದ ದಿನಕ್ಕೆ ನನ್ನ ಖಿನ್ನತೆ ನೀಗುತ್ತ ಬಂತು. ನಿದ್ದೆಯೂ ಸರಿಯಾಗುತ್ತ ಬಂತು. ಜೊತೆಗೆ ಹಿಂದೆ ನನಗೆ ಒತ್ತಡ ನೀಡುತ್ತಿದ್ದ ವಾಸ್ತವ ಜಡಕುಗಳೆಲ್ಲ ಬಿಡುಗಡೆಯಾಗುತ್ತ ಬಂದವು. ಆದರೆ ಆತ್ಮಹತ್ಯೆಯ ಯೋಚನೆ ಮಾತ್ರ 2012ರ ಕೊನೆಯ ತನಕ ಮನದಾಳದಲ್ಲಿ ಎಲ್ಲೋ ಇತ್ತು. ಬಹುಷಃ ನಾನು ದೇವರ ದಾರಿಯನ್ನು ಬಿಟ್ಟು ಪ್ರಾಪಂಚಿಕಳಾಗಿ ಮಾತ್ರೆಗಳನ್ನೇ ಅವಲಂಬಿಸಿದ್ದರೆ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿ ಸಫಲಳಾಗುತ್ತಿದ್ದೆನೋ ಏನೊ! ಆದರೆ ಸುದೈವವಶಾತ್ ಭಕ್ತಿಯ ಮಾರ್ಗ ನನ್ನನ್ನು ಕೈಬಿಡಲಿಲ್ಲ. ಬದಲಿಗೆ ಒಬ್ಬ ಖ್ಯಾತ ಆಯುರ್ವೇದ ವೈದ್ಯರ ಬಳಿಗೆ ಕೊಂಡೊಯ್ಯಿತು. ಅವರು ಅಲೊಪತಿಯ ಜೊತೆಗೆ ತಮ್ಮ ಮಾತ್ರೆಯನ್ನೂ ತೆಗೆದುಕೊಳ್ಳಿ ಎಂದರು. ಆದರೆ ನನಗೆ ಅಲೊಪತಿ ಬಿಟ್ಟರೆ ಸಾಕಾಗಿತ್ತು. ಆಗಲೆ 3 ವರ್ಷ ಮಾತ್ರೆ ನುಂಗಿ ಮಾತ್ರೆಗಳನ್ನು ಕಂಡರೆ ಸಿಟ್ಟು ಬರುವ ಹಂತಕ್ಕೆ ಹೋಗಿದ್ದೆ. ಇರಲಿ ಇದೊಂದು ನೋಡೋಣ ಎನ್ನುತ್ತಲೇ ದೇವರು ತೋರಿಸಿದ ದಾರಿ ಎಂದು ನಂಬಿಕೊಂಡು ಆ ಮಾತ್ರೆಗಳನ್ನು ನುಂಗುತ್ತ ಬಂದೆ. ನಂಬಿ, ಬಿಡಿ ಕೇವಲ 1-2 ವಾರಗಳಲ್ಲಿ ನನ್ನ ಆಂತರ್ಯದಲ್ಲಿದ್ದ ಸಾಯುವ ಭಾವನೆ ಹೊರಟುಹೋಯಿತು!
                 ಆ ನಂತರ ಸಣ್ಣಪುಟ್ಟ ಕಾಯಿಲೆಗಳು ಬಂದವು. ಅವುಗಳಿಗೆ ಚಿಕಿತ್ಸೆ ಮಾಡುವಾಗ ರಕ್ತಹೀನತೆ ಇರುವುದು ಕಂಡುಬಂತು. ಅದಕ್ಕೂ ಔಷಧಿ ಮಾಡಿದಾಗ ನನಗೆ ಅಕ್ಷರಶಃ ಮಾತ್ರೆಗಳಿಂದ ಮುಕ್ತಿ ಸಿಕ್ಕಿತು. ಯಾವ ಅಲೋಪತಿಯ ವೈದ್ಯರು ಸಾವಿರ ಸಾವಿರ ಬುದ್ಧಿ ಹೇಳಿ, ಕ್ವಿಂಟಾಲ್ ಗಟ್ಟಲೆ ಮಾತ್ರೆ ಕೊಟ್ಟು ಏನಿಲ್ಲ ಅಂದ್ರೂ 4-6 ವರ್ಷ ಬಿಡದೇ ಮಾತ್ರೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರೋ, ಅಂತಹ ಕಾಯಿಲೆಯೊಂದು ಆಧ್ಯಾತ್ಮಿಕ ಪರಿಹಾರಗಳು, ಆಯುರ್ವೇದದಿಂದ ಕೇವಲ 1-2 ವರ್ಷಗಳಲ್ಲಿ ಸಂಪೂರ್ಣ ಗುಣವಾಯಿತು. ಇಂದು ಒಂದೇ ಒಂದು ಮಾತ್ರೆ ಸಹ ತೆಗೆದುಕೊಳ್ಳುವುದಿಲ್ಲ ಎಂದರೆ ನಂಬುತ್ತೀರಾ?
                ಅಲ್ಲದೇ ನನಗೆ ಅಂಟಿಕೊಂಡಿತ್ತಲ್ಲ ದೊಡ್ಡ ರೋಗ - ಅದೇ ಸಂಶಯ ಪ್ರವೃತ್ತಿ ಅದೂ ನಿವಾರಣೆಯಾಯಿತು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನು ಮಾಡಿದ್ದ ಟ್ರಸ್ಟ್ ರೋಗಿಗಳಿಗೆ ಉಚಿತ ಔಷಧಿ ನೀಡುವ ಹುಚ್ಚು ಗುರಿಯನ್ನು ಹೊಂದಿತ್ತು. ಯಾಕೆಂದರೆ ಅಲೋಪತಿಯ ಔಷಧಿಗಾಗಿ ಪ್ರತಿ ತಿಂಗಳು ಏನಿಲ್ಲವೆಂದರೂ ಸಾವಿರ ರೂ. ಇಡಬೇಕಾಗಿತ್ತು. ನನ್ನಂತೆ ಬೇರೆಯವರಿಗೆ ಆಗದಿರಲಿ ಎಂದೇ ಈ ಟ್ರಸ್ಟ್ ಮೂಲಕ ಸಹಾಯ ಮಾಡುವ ಇರಾದೆ ನನ್ನದಾಗಿತ್ತು.
ಆದರೆ ಈಗ ನನ್ನ ಟ್ರಸ್ಟ್ ನ ಬೈಲಾಗೆ ಇನ್ನಷ್ಟು ಸೇರಿಸಿ ಮತ್ತೊಮ್ಮೆ ನೋಂದಾಯಿಸುತ್ತಿದ್ದೇನೆ. ಅದೇನೆಂದರೆ ಮಾನಸಿಕ ರೋಗಿಗಳಿಗೆ, ಆತ್ಮಹತ್ಯೆಯ ಕುರಿತು ಯೋಚಿಸುವವರಿಗೆ ಉಚಿತವಾಗಿ ಆಧ್ಯಾತ್ಮಿಕ ಪರಿಹಾರ ಸೂಚಿಸುವುದು ಮತ್ತು ಮಕ್ಕಳಲ್ಲಿ ಕೆಲಸ, ಭಕ್ತಿ, ಶ್ರದ್ಧೆ, ಪ್ರೀತಿಸುವ ಗುಣವನ್ನು ಬೆಳೆಸುವುದು ಮುಖ್ಯವಾಗಿವೆ. ಯಾಕೆಂದರೆ ಈ ಗುಣಗಳನ್ನು ನಾನು ಹೊಂದಿದ್ದರಿಂದಲೇ ನನಗೆ ಈ ಕೆಟ್ಟ ಕಾಯಿಲೆಯಿಂದ ಹೊರಬರಲು ಸಾಧ್ಯವಾಯಿತು ಮತ್ತು ದೇವರಿದ್ದಾನೆ, ಅವನು ಎಲ್ಲೆಲ್ಲೂ ಇದ್ದಾನೆ, ಎಲ್ಲರಲ್ಲೂ, ಎಲ್ಲದರಲ್ಲೂ ಇದ್ದಾನೆ ಎಂಬ ನನ್ನದು ಕೇವಲ ನಂಬಿಕೆಯಲ್ಲ, ಸತ್ಯವೆಂಬುದು ನನಗೇ ಅರಿವಾಯಿತು.  ಈ ಅರಿವು ಬಂದ ನಂತರ ಕಷ್ಟ, ನೋವು, ದುಃಖಗಳನ್ನೆಲ್ಲ ಈ ಪ್ರಪಂಚಕ್ಕೆ ನಮ್ಮನ್ನು ಹಿಡಿದಿಟ್ಟುಕೊಳ್ಳಲು ನಾವೇ ಸೃಷ್ಟಿಸಿಕೊಳ್ಳಬೇಕಾದ ನಾಟಕಗಳೇ ಹೊರತು, ಅಸಲು ನಮಗೆ ದುಃಖವೇ ಇಲ್ಲ ಎಂಬುದು ಗೊತ್ತಾಗುತ್ತದೆ. ನಾವೆಲ್ಲ ಆನಂದಮಯರೆಂದು ಗೊತ್ತಾಗುತ್ತದೆ.
                 ಆದ್ದರಿಂದ ದಯವಿಟ್ಟು ಯಾರೇ ಆದರೂ ಮಾನಸಿಕ ತೊಂದರೆ, ದುಃಖ, ವಿಷಾದ, ನೋವು, ಜಿಗುಪ್ಸೆ, ಸೋಲು, ಆತ್ಮಹತ್ಯೆಯ ಯೋಚನೆ ನಿಮಗೆ ಕಾಡುತ್ತಿದ್ದರೆ ದಯವಿಟ್ಟು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ ದಯವಿಟ್ಟು ಆಧ್ಯಾತ್ಮಿಕ ಪರಿಹಾರಗಳಿಗೆ ಆದ್ಯತೆ ಕೊಡಿ. ಅಲೋಪತಿಯ ಔಷಧಿಗಳ ಜೊತೆಗೆ ಪರ್ಯಾಯ ಆಧ್ಯಾತ್ಮಿಕ ಚಿಕಿತ್ಸೆಗಳಿಗೂ ಒಳಪಡಿ. ಅದಕ್ಕಿಂತ ಹೆಚ್ಚು ದೇವರಲ್ಲಿ ಹೆಚ್ಚು ಭಕ್ತಿಯನ್ನು ಬೆಳೆಸಿಕೊಳ್ಳಿ, ಪ್ರೀತಿ ಬೆಳೆಸಿಕೊಳ್ಳಿ. ದೇವರೆಂದರೆ ಭಯ ಬೇಡ, ಬದಲಿಗೆ ನಿಮ್ಮ ಅತ್ಯಂತ ಆಪ್ತಸಖ ಅವನೇ ಎಂಬುದನ್ನು ಮರೆಯಬೇಡಿ.