ಗುರುವಾರ, ಡಿಸೆಂಬರ್ 10, 2009

ನಾನು ನಾನೆಂಬ ಹಠ ಯಾಕೆ?

ಇತ್ತೀಚೆಗೆ ನನ್ನ ಗೆಳತಿಯೊಬ್ಬಳಿಗೆ ಮದ್ವೆಯಾಗಿದೆ. ಆಕೆಗೆ ಮಾಡರ್ನ್ ಡ್ರೆಸ್ ಗಳೆಂದರೆ ಮೊದಲಿನಿಂದಲೂ ಇಷ್ಟ. ಆದರೆ ಮದ್ವೆಯಾದ ಮೇಲೆ ಆಕೆಯ ಆತ್ತೆ ಈಕೆ ಸೀರೆಯನ್ನೇ ಉಡಬೇಕೆಂಬ ಆಜ್ಞೆ ವಿಧಿಸಿದ್ದಾರೆ. ಅದಕ್ಕೆ ತಿರುಗಿ ಮಾತಾಡಿದ ಸೊಸೆಯನ್ನು ಕಂಡರೆ ಈಗ ಅತ್ತೆಗೆ ಅಷ್ಟಕ್ಕಷ್ಟೆ. ಗಂಡನೂ ತಾಯಿಯೊಂದಿಗೆ ಹೊಂದಿಕೊಂಡು ಹೋಗೆಂದು ಹೇಳುತ್ತಾನೆಯೇ ಹೊರತು ಹೆಂಡತಿಯನ್ನು ಸಪೋರ್ಟ್ ಮಾಡಲ್ಲ.ಇಲ್ಲಿ ತಪ್ಪು ಯಾರದ್ದು?

ಇನ್ನೊಬ್ಬ ಗೆಳತಿ. ನನ್ನ ಅಮ್ಮನ ಓರಿಗೆಯವಳು. ಆಕೆ ಅಂತರ್ಜಾತಿ ವಿವಾಹವಾಗಿದ್ದಾರೆ. ಆದರೆ ಆಕೆಗೆ ಯಾವ ನಿರ್ಬಂಧವೂ ಇಲ್ಲ. ಸೀರೆಯೆಂದರೆ ಇಷ್ಟ. ಗಂಡನಿಗೆ ಸೀರೆಯಿಷ್ಟವಿಲ್ಲವೆಂದು ಆಕೆ ಚೂಡಿದಾರನ್ನೇ ಹಾಕುತ್ತಾರೆ. ಗಂಡನಿಗೆ ಇಷ್ಟವೆಂದು ನಾನ್ ವೆಜಿಟೇರಿಯನ್ ಆದ ಆಕೆ ವೆಜಿಟೇರಿಯನ್ ಆಗಿದ್ದಾರೆ. ಉಳಿದಂತೆ ಗಂಡನ ಮನೆಯ ಪೂಜೆ , ಹಬ್ಬಗಳಲ್ಲಿ ಭಾಗವಹಿಸುವುದಿಲ್ಲ. ಗಂಡನ ಮನೆಯ ರೀತಿ ರಿವಾಜುಗಳನ್ನು ಕಲಿತಿಲ್ಲ. ಅಥವಾ ಕಲಿಯುವುದೂ ಬೇಕಾಗಿಲ್ಲ. ಯಾಕೆಂದರೆ ಮಾವ , ಅತ್ತೆ ಅನ್ನಿಸಿಕೊಂಡವರು ಜನಿವಾರವನ್ನೂ ತೆಗೆದಿಟ್ಟು ಹೆಣ್ಣು ತಂದುಕೊಂಡ ದೊಡ್ಡ ಮನುಷ್ಯರು. ಗಂಡ ನಾನ್ ವೆಜ್ ತಿನ್ನಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಸಂಸ್ಕಾರ ಬಿಟ್ಟಿಲ್ಲ. ಹಾಗಂತ ನೀವು ತಿನ್ನ ಬೇಡಿ ಎಂದು ಹೆಂಡತಿ ಮಕ್ಕಳಿಗೆ ಹೇಳಿಲ್ಲ. ಪೂಜೆ ಮಾಡು, ಮಡಿ ಮಾಡು, ತಮ್ಮ ಮನೆಯ ರೀತಿ ರಿವಾಜು ಕಲಿ ಎಂದೂ ಹೇಳಿಲ್ಲ. ಆದರೆ ಈಗ ಮದ್ವೆ ಡೈವೋರ್ಸ್ಗೆ ಬಂದು ನಿಂತಿದೆ. ಅಂತರ್ಜಾತೀಯ ವಿವಾಹವಾದ್ದರಿಂದ ಗಂಡ ಹೆಂಡತಿ ಇಬ್ಬರೂ ತಮ್ಮ ತಂದೆ ತಾಯಂದಿರ ಆಸರೆ ಬಯಸುವುದು ಸ್ವಲ್ಪ ಕಷ್ಟವೇ ಆಗಿದೆ. ಇಲ್ಲಿ ಯಾರದ್ದು ತಪ್ಪು?

ಹಾಗೇ ನಿನ್ನೆ ವಾಹಿನಿಯೊಂದರಲ್ಲಿ ಕಥೆ ನೋಡಿದೆ. ಅದರಲ್ಲಿ ಗಂಡ ಮೊದಲಿನ ಹೆಂಡತಿಯನ್ನು ಅಪ್ರಾಪ್ತ ವಯಸ್ಸಿನಲ್ಲಿ ಬಲವಂತಕ್ಕೆ ಮದ್ವೆಯಾಗಿದ್ದಾನೆ. ಹೆಂಡತಿಗೆ ತನ್ನ ಗಂಡನಿಂದಲೇ ಮಗುವೊಂದು ಬೇಕಾಗಿದೆ. ಆತನೊಂದಿಗೇ ಸಂಸಾರ ಮಾಡಬೇಕಾಗಿದೆ. ಹೆಂಡತಿಯನ್ನು ಬಿಟ್ಟು ಇನ್ನಾರನ್ನೋ ಮದ್ವೆಯಾಗಿ ತವರು ಸೇರಿದ ಹುಡುಗಿಯನ್ನು ಓಡಿಸಿಕೊಂಡು ಹೋಗಿ ತಾಳಿ ಕಟ್ಟಿದ್ದಾನೆ. ಸಾಲದೆಂಬಂತೆ ಮೂರು ಮಕ್ಕಳನ್ನೂ ನೀಡಿದ್ದಾನೆ. ಆದರೆ ಹೆಂಡತಿಯನ್ನು ಇಲ್ಲಿಯ ತನಕ ಮುಟ್ಟಿಯೂ ಇಲ್ಲ. ಇನ್ನು ಮುಂದೆಯೂ ಮುಟ್ಟುವುದಿಲ್ಲವೆನ್ನುತ್ತಾನೆ. ಇದಕ್ಕೆ ಕಾನೂನಿನ ಪ್ರಕಾರ ಬೈಗಾಮಿ ಕೇಸ್ ಆದರೆ ಆತ ಮತ್ತು ಎರಡನೆಯ ಹೆಂಡತಿ ಜೈಲಿಗೆ ಹೋಗುತ್ತಾರೆ. ಇಲ್ಲವೆಂದರೆ ಹೆಂಡತಿ ಎನಿಸಿಕೊಂಡವಳೊಂದಿಗೆ ಮೂರು ದಿನ, ಇಟ್ಟುಕೊಂಡವಳು ಎನಿಸಿದವಳೊಂದಿಗೆ ಮೂರು ದಿನ ಇರಬೇಕಂತೆ. ಇದು ನ್ಯಾಯ ಪಂಚಾಯತಿ. ಇದು ಸರಿಯಾ?

ನನಗನ್ನಿಸುತ್ತೆ :ಈ ಎಲ್ಲ ಸಮಸ್ಯೆಗಳಿಗೂ ಒಂದು ಮುಖ್ಯ ಕಾರಣ ಹಠ. ಮೊದನೆಯ ಕೇಸ್ ನಲ್ಲಿ ಅತ್ತೆ ಮತ್ತು ಸೊಸೆ ಇಬ್ಬರೂ ಹಠಬಿಟ್ಟು ಯಾರಾದರೂ ಒಬ್ಬರು ಜನರೇಶನ್ ಗ್ಯಾಪ್ ನ ಒಪ್ಪಿಕೊಂಡರೆ ಬದುಕು ಎಷ್ಟು ಸುಂದರವಾಗಬಹುದಿತ್ತು! ಎರಡನೇ ಕೇಸ್ ನಲ್ಲೂ ಅದೇ ಹಠ , ನಾನು ಗಂಡನ ಜಾತಿ ಯಾಕೆ ಅನುಸರಿಸಬೇಕೆಂದು ಹೆಂಡತಿ ಹಠ ಬಿಟ್ಟರೆ ಎಲ್ಲವೂ ಸರಿಯಾಗುತ್ತಿತ್ತೇನೋ! ಮೂರನೇ ಕೇಸ್ ನಲ್ಲೂ ಅದೇ ಹಠ! ಮದ್ವೆಯಾಗಿ ಹನ್ನೊಂದೂವರೆ ವರ್ಷದ ವರೆಗೂ ಗಂಡನಾಗದವನಿಂದ ಮಗುವನ್ನು ಪಡೆಯುವ ಹಠ, ಹೆಂಡತಿಯನ್ನು ಮುಟ್ಟುವುದೇ ಇಲ್ಲ ಎಂಬ ಗಂಡನ ಹಠ. ಎಲ್ಲಕ್ಕಿಂತ ವಿಚಿತ್ರವೆಂದರೆ ಕಾನೂನಿನ ಹಠ. ಮನುಷ್ಯ ಬದುಕಿಗೆ ಶಿಸ್ತು ನೀಡುವ ಕಂಕಣ ತೊಟ್ಟಿದ್ದೇನೆ, ಅದರಂತೆ ನಾನು ಹೇಳಿದಂತೆ ಕೇಳಿಯೇ ತೀರಬೇಕು ಇತರರು ಎಂಬ ಕಾನೂನಿನ ಹಠ. ಎಷ್ಟು ಮಜವಾಗಿದೆಯಲ್ಲವಾ?
ನನ್ನನ್ನು ಇತ್ತೀಚೆಗೆ ಕಾಡುತ್ತಿರುವುದು ಪತ್ರಿಕೋದ್ಯಮ ಮತ್ತು ಸಂಬಂಧಗಳು. ಸಂಬಂಧಗಳ ಬಗ್ಗೆ ಬೇರೆಯೇ ಬರೆಯುತ್ತೇನೆ. ಈಗ ಪತ್ರಿಕೋದ್ಯಮ ಅದರಲ್ಲೂ ಯೆಲ್ಲೋ ಜರ್ನಲಿಸಂ ಬಗ್ಗೆ ಸ್ವಲ್ಪ ಭಾವನೆಗಳನ್ನು ಹಂಚಿಕೊಳ್ಳಬೇಕು ಅನ್ನಿಸುತ್ತಿದೆ.
ಪತ್ರಿಕೆ ಎಂದರೆ ನನ್ನ ಮಟ್ಟಿಗೆ 2000ನೇ ಇಸ್ವಿಯವರೆಗೂ ಜನರ ಧ್ವನಿಯೆಂದು ಭಾವಿಸಿದ್ದೆ. ಅದರಲ್ಲೂ ಟ್ಯಾಬ್ಲಾಯ್ಡ್ ಗಳು ಮೋಸ ಹೋದವರಿಗೆ, ವಂಚನೆ ಮಾಡುವವರಿಗೆ ಸಿಂಹ ಸ್ವಪ್ನವೆಂದು ತಿಳಿದಿದ್ದೆ. ಹಾಗಾಗಿ ಅದೊಂದು ದಿನ ಸಾಯಂಕಾಲ ಸಾಕಷ್ಟು ಫೋನುಗಳ ಪ್ರಯತ್ನ ಹಾಗೂ ಕಾಯುವಿಕೆಯ ನಂತರ ಟ್ಯಾಬ್ಲಾಯ್ಡ್ ಒಂದರ ಸಂಪಾದಕರನ್ನು ಭೇಟಿಯಾಗಿದ್ದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಕೊನೆಯ ವರ್ಷದ ಪ್ರಾಜೆಕ್ಟ್ ಗೋಸ್ಕರ ಖಾಸಗಿ ಕಂಪೆನಿಗೆ ಕೊಟ್ಟ ಹಣ ಪ್ರಾಜೆಕ್ಟೂ ಕೊಡದೆ ಕಳೆದುಕೊಂಡ ದುಃಖ ನನ್ನನ್ನು ಕಾಡುತ್ತಿತ್ತು. ಆ ಮೊತ್ತದ ಹಣ ಅಂದಿಗೆ ನನ್ನ ಪರಿಸ್ಥಿತಿಗೆ ಅತ್ಯಂತ ಅಗತ್ಯದ್ದಾಗಿತ್ತು.

ಆದರೆ ಸಂಪಾದಕರು ನನ್ನ ಕಥೆಯನ್ನು ಕೇಳಿದ್ದೇ ಅದೆಲ್ಲಿಂದ ಮರುಕ ಬಂದು ಬಿಡುತ್ತೋ , ಪ್ರೀತಿ ಉಕ್ಕಿ ಹರಿಯಿತೋ ನನ್ನ ಮುಂದಿನ ಶಿಕ್ಷಣವನ್ನು ತಾವೇ ನೋಡಿಕೊಳ್ಳುತ್ತೇವೆ ಎಂದರು. ಕೇವಲ ೧೮ ವರೆ ವರ್ಷದ ನಾನು ಅದನ್ನೆಲ್ಲ ನಂಬಿದೆ. ಅದರಂತೆ ನನ್ನ ಅಡ್ಮಿಷನ್ ಆಯಿತು. ಮುಳುಗುತ್ತಿರುವ ಬಡವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಬಂಡವಾಳ ಬಯಲಾಯಿತು.ನನ್ನನ್ನು ಪ್ರೀತಿಸುತ್ತೇನೆಂದು ಹೇಳುತ್ತಲೇ ಆಫೀಸಿನ ಉಳಿದ ಹುಡುಗಿಯರೊಂದಿಗೆ ಚಕ್ಕಂದವಾಡುತ್ತಿದ್ದ ಸಂಪಾದಕನ ಮೇಲೆ ಸಿಟ್ಟು ಬರುತ್ತಿತ್ತು. ಆದರೆ ನನ್ನ ಪರಿಸ್ಥಿತಿ ನನ್ನನ್ನು ಕಟ್ಟಿಹಾಕಿತ್ತು. ನಾನೂ ಒಳಸುಳಿಗೆ ಸಿಕ್ಕಿಕೊಂಡಾಗಿತ್ತು. ಬೇರೆ ಕಡೆ ಕೆಲಸ ಹುಡುಕಿಕೊಂಡು ಹೋಗಲು ಬೆಂಗಳೂರಿನ (ಎಲ್ಲರೂ ಅಲ್ಲ) ಸೋಗಲಾಡಿಗಳ ಬಗ್ಗೆ ಭಯ. ಇದರ ಮಧ್ಯದಲ್ಲಿ ಪರೀಕ್ಷೆಯ ಹಿಂದಿನ ದಿನ ನನ್ನನ್ನು ಹಾಸ್ಟೆಲಿಂದ ಹೊರಹಾಕಲಾಯಿತು. ನನ್ನ ಶಿಕ್ಷಣ ಅರ್ಧದಲ್ಲಿಯೇ ನಿಂತಿತು. ಅಂದೇ ನಿರ್ಧರಿಸಿದೆ, ನಾನು ಮುಂದೆ ಓದಿಯೇ ಓದುತ್ತೇನೆ. ನನ್ನನ್ನು, ನನ್ನ ಹಣವನ್ನು ಕಾಪಾಡಿಕೊಳ್ಳುತ್ತೇನೆ ಎಂದು. ಅಲ್ಲಿಂದ ಮುಂದೆ ನಾನು ತಿರುಗಿನೋಡಿದ್ದೇ ಇಲ್ಲ. ಯಾವ ಅನುಭವವೂ ಇಲ್ಲದ ನಾನು ಬುದ್ಧಿವಂತಿಕೆಯಿಂದ ಕೆಲಸ ಗಿಟ್ಟಿಸಿದೆ. ಐ.ಎ.ಎಸ್ ಓದಬೇಕೆಂದಿದ್ದವಳಿಗೆ ಪತ್ರಿಕೋದ್ಯಮವೇ ಬಾಗಿಲು ತೆರೆದು ಕೂತಿತ್ತು. ಬದುಕಿನ ಲೀಲೆ ಎಂದರೆ ಇದೇ....

ಇದೆಲ್ಲ ಯಾಕೆ ನೆನಪಾಯಿತೆಂದರೆ , ಮೊನ್ನೆ ಕನ್ನಡವಾಹಿನಿಯೊಂದಕ್ಕೆ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಒಬ್ಬ ಕ್ರೈ ರಿಪೋರ್ಟರ್ ಅಗತ್ಯವಿತ್ತು. ಅಂತಹ ಕಾರ್ಯಕ್ರಮಕ್ಕೆ ಕೇವಲ ಯೆಲ್ಲೋ ಜರ್ನಲಿಸ್ಟ್ ಒಬ್ಬನೇ ಪ್ರಕರಣ ತರಬಲ್ಲ ಎಂಬುದನ್ನು ನಾನು ಕಂಡುಕೊಂಡೆ. ಹಾಗೆ ಹುಡುಕಾಟದಲ್ಲಿದ್ದಾಗ ನಾನು ಸುವರ್ಣಕ್ಕೆ ಕೆಲಸ ಮಾಡುತ್ತೇನೆ , ನಿಮಗೂ ಕೇಸು ತರುತ್ತೇನೆ ಎಂಬ ಬೇಡಿಕೆಯೊಂದು ಅದೊಂದು ಭಾನುವಾರ ಬಂತು. ಆ ಯೆಲ್ಲೋ ಜರ್ನಲಿಸ್ಟ್ ನ್ನು ಕರೆತಂದಾಯಿತು. ಕಾರ್ಯಕ್ರಮವೂ ಚೆನ್ನಾಗಿ ಆಯಿತು. ಆದರೆ ಮತ್ತೆ ನನ್ನ ಮುಗ್ದತನ ಕೈಕೊಟ್ಟಿತು.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಬಾರ್ ಆದ ಆ ಪತ್ರಿಕೆ ಮತ್ತೆ ಹೊಸ ಹೆಸರಿನೊಂದಿಗೆ ಆರಂಭವಾಯಿತು. ಅದರಲ್ಲಿ ನೋಡಿದರೆ ನನಗೆ ಬೇಕಾದವರ ಬಗ್ಗೆ ಬೇಕಾಬಿಟ್ಟಿಯಾಗಿ ಬರೆಯಲಾಯಿತು. ಯೆಲ್ಲೋ ಪತ್ರಿಕೆ ಸಂಪಾದಕ ಕೈಯಲ್ಲಿ ಕಾಸಿಲ್ಲದೇ ದಿಕ್ಕಿಲ್ಲದೇ ಇದ್ದವ, ನೀರಿನಿಂದೆದ್ದ ಮೇಲೆ ಹೇಗೆ ನನ್ನದೇ ಒಂದು ಮಾಹಿತಿಯನ್ನು ಹೇಗೆಲ್ಲ ಬಳಸಿಕೊಳ್ಳಬಲ್ಲ ಎಂದು ಖೇದವಾಯಿತು. ಆದರೆ ಈ ಎರಡೂ ಘಟನೆಗಳಿಂದ ಹೊಸದೊಂದು ಪಾಠ ಕಲಿತೆ. ಇಂದು ಪತ್ರಿಕೋದ್ಯಮ ತನ್ನ ಅರ್ಥವನ್ನು ಕಳೆದುಕೊಂಡಿದೆ. ಒಂದು ಸಾಮಾನ್ಯ ವ್ಯಾಪಾರದಲ್ಲಿ ಇರಬಹುದಾದ ಆದರ್ಶವೂ ಕೂಡ ಈ ಉದ್ಯಮದಲ್ಲಿ ಮಾಯವಾಗುತ್ತಿದೆ.

ಈ ಬಗ್ಗೆ ನನ್ನಂತಹ ಯುವ ಪೀಳಿಗೆಯ ಪತ್ರಕರ್ತರು ಯೋಚಿಸಿ, ಹೊಸದೊಂದು ಸುಂದರ ಆಯಾಮವನ್ನು ಆರಂಭಿಸಬೇಕಾಗಿದೆ.

ಸೋಮವಾರ, ಜೂನ್ 15, 2009

ಇಂದು ಬಾಲಿವುಡ್ ನಟನೊಬ್ಬನ ಮನೆಯ ಕೆಲಸದಾಕೆ ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಪೋಲಿಸು ಕೇಸು ದಾಖಲಿಸಿದ್ದಾಳೆ. ಅದಕ್ಕೆ ಸರಿಯಾಗಿ ಮಾಧ್ಯಮಗಳು , ಪೋಲಿಸರೆಲ್ಲ ಅಗತ್ಯ ಕ್ರಮಗಳನ್ನು ಮಾಡುತ್ತಿದ್ದಾರೆ. ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಕರ್ನಾಟಕದಲ್ಲೆನಾದರು ಈ ರೀತಿಯಾದರೆ ಎಷ್ಟು ಜನ ಹೆಣ್ಣುಮಕ್ಕಳು ಹೊರಗೆ ಬಂದು ದೂರು ದಾಖಲಿಸುತ್ತಾರೆ? ಒಂದುವೇಳೆ ದೂರು ದಾಖಲಿಸಿದರೂ ಅದನ್ನು ಗಂಭಿರವಾಗಿ ಪರಿಗಣಿಸುವವರು ಯಾರು? ಬದಲಿಗೆ ಆಕೆಯ ಚಾರಿತ್ರ್ಯವನ್ನೇ ಅನುಮಾನಿಸುವ ಟ್ಯಾಬೊಲಾಯ್ಡ್ ಸಂಸ್ಕೃತಿ ಸರಿಯಾದ ನ್ಯಾಯ ಕೊಡಿಸಬಲ್ಲುದ ಎಂದು ಇವತ್ತು ಹೆಣ್ಣು ಮಕ್ಕಳು ಮತ್ತವರ ಸಂಬಂಧ ಪಟ್ಟವರು ಯೋಚಿಸಬೇಕಾಗಿದೆ. ಕರ್ನಾಟಕವು ಸೇರಿದಂತೆ ಭಾರತದ ಬಹುತೇಕ ಪುರುಷಪ್ರಧಾನ ರಾಜ್ಯಗಳಲ್ಲಿ ಹೆಣ್ಣು ಮಕ್ಕಲಿಗೆನೆ ಆದರು ಮಧ್ಯಮವರ್ಗದ ಮಂದಿ ಪ್ರಕರಣ ಮುಚ್ಚಿ ಹಾಕಲು ನೋಡುತ್ತಾರೆ. ಯಾಕೆಂದರೆ ಮಾನ ಮರ್ಯಾದೆಗಳು ಕೇವಲ ಪುರುಷನಿಗೆ ಮಾತ್ರ. ಹೆಣ್ಣು ಮಗುವಿನ ಸಂರಕ್ಷಣೆಯ ಜವಾಬ್ದಾರಿ ಹೊರಲಾರದ, ಆಕೆಗೆ ಭಾವನಾತ್ಮಕ ಬೆಂಬಲ ನೀಡಿ ಅನ್ಯಾಯದ ವಿರುದ್ಧ ಹೋರಾಡುವ ಮನಸತ್ವವನ್ನು ತುಂಬುವ ಪರಿಸ್ಥಿತಿಯನ್ನು ನಮ್ಮಲ್ಲೂ ಕಲ್ಪಿಸಬೇಕಾಗಿದೆ. ಇದು ನಮ್ಮಲ್ಲೇ ಇರುವ ತಾಯಂದಿರು, ಅಕ್ಕ-ತಂಗಿಯರಿಂದ ಮಾತ್ರ ಸಾಧ್ಯ. ಹೆಣ್ಣೊಬ್ಬಳು ನೊಂದು ರೋಧಿಸುತ್ತಿದ್ದರೆ ಆಳಿಗೊಂದು ಕಲ್ಲು ಹಾಕದೆ, ಆಕೆಯ ನೋವಿಗೆ ಮಿಡಿಯುವ ಮಾನವೀಯತೆ ಬೆಳೆಸಿಕೊಳ್ಳಬೇಕಿದೆ. ಅಂದಾಗ ಮಾತ್ರ ಮಾತೃದೇವೋ bhava , ಹೆಣ್ಣು ಹೀಗೆ ಇರಬೇಕು ಎಂದು ಭಾಷಣ ಮಾಡುವವರಿಗೂ ಒಂದು ಆತ್ಮಬಲ ಬರುತ್ತದೆ. ಅದು ಬಿಟ್ಟು ಎಲ್ಲೋ ಬಾರುಗಳಲ್ಲಿ ಕುಡಿಯುತ್ತಿದ್ದರೆ ಎಂದು ಹೆಣ್ಣು ಮಕ್ಕಳಿಗೆ ಹೊಡೆದರೆ ಸಂಸ್ಕೃತಿಯ ಪುನರುತ್ಥಾನ ಆಗುವುದಿಲ್ಲ..

ಗುರುವಾರ, ಜನವರಿ 29, 2009

ಭೃಷ್ಟತೆ ಹುಟ್ಟುವುದು ಹೇಗೆ?

ನಾನು ಆಗಷ್ಟೇ ಶೂಟಿಂಗ್ ಮುಗ್ಸಿ ಆಸ್ಪತ್ರೆಯಿಂದ ಹೊರಗೆ ಬಂದೆ.... ಜೊತೆಗೆ ಆ ಆಸ್ಪತ್ರೆಯ ಪಿ.ಅರ್. ಓ.ಕೂಡ ಇದ್ರು.ಕ್ಯಾಮರ ಮ್ಯಾನ್ ಮತ್ತುಳಿದವರು ಗಾಡಿಯಲ್ಲಿ ಕುಳಿತಿದ್ರು. ಪಿ.ಅರ್. ಕೈಲಿ ನಾಲ್ಕು ಕವರುಗಳಿದ್ದವು. ಆಕೆ ನನ್ಕೈಲಿ ಅದನ್ನು ಕೊಡಲು ಬಂದರು. ನಾನು ಅದೇನೆಂದು ಕೇಳಿದೆ. ತೊಗೊಳ್ಳಿ ಗೊತ್ತಾಗತ್ತೆ ಅಂದ್ರು. ಆದರು ನಾನು ಒತ್ತಾಯ ಪೂರ್ವಕವಾಗಿ ಕೇಳಿದಾಗ ಅದ್ರಲ್ಲಿ ಗಿಫ್ಟ್ ವೋಚರ್ ಇದೆ. ತಗಳ್ಳಿ ಅಂದ್ರು. ಬೇಡವೆಂದರು ಕೈಗೆ ತುರುಕಿದರು. ನಾನು ಹೇಳಿದೆ , ಇದೆಲ್ಲ ನಂಗೆ ಅಭ್ಯಾಸವಿಲ್ಲ ಎಂದು. ಅಭ್ಯಾಸವಾಗುತ್ತೆ ತಗಳ್ಳಿ ಅವ್ರು ಒತ್ತಾಯ ಮಾಡತೊಡಗಿದರು.... ನಾನು ಗಾಬರಿಯಾಗಿ ಹೇಳಿದೆ, ನಾವು ಮಾಧ್ಯಮದವರು ಜನರಿಗೆ ಮಾಡಬಾರದು ಎನ್ನುತ್ತೇವೆ, ಅಂತಹುದರಲ್ಲಿ ನಾವೇ ಈ ತರ ತಗೊಳ್ಳೋದು ಸರಿ ಅಲ್ಲ. ಬೇಡವೇ ಬೇಡ ಎಂದು ಮತ್ತೆ ನಾನವರ ಕೈಗೆ ತುರುಕಿದೆ. ಹಾಗಾದರೆ ನಿಮ್ಮ ತೀಮಿಗೂ ಬೇಡ್ವ ಅಂದ್ರು... ನಾನು ಬೇಡ ಅಂದೇ... ಹಾಗೆ ಒಂದು ಥ್ಯಾಂಕ್ಸ್ ಹೇಳಿ ಬಂದು ಗಾಡಿ ಹತ್ತಿದೆ. ಉಳಿದವರಿಗೆ ವಿಷ್ಯ ಹೇಳಿದೆ... ನಮ್ಮ ಕ್ಯಾಮರಾಮ್ಯಾನ್ ಬಯ್ಯತೊಡಗಿದ...ಮೇಡಂ, ನಿಮಗೆ ಬೇಡವೆಂದರೆ ನಮಗಾದ್ರೂ ತಂದು ಕೊಡೋದು... ಫಿಲ್ದಲ್ಲಿ ಎಲ್ಲ ತಗೋತಾರೆ... ಅವ್ರ ನಂಬರ್ ಕೊಡಿ , ಇಸ್ಕೊಂಡು ಬರ್ತೀನಿ ಅಂದ... ಹಾಗೆ ಫೋನ್ ನಂಬರ್ ತಗೊಂಡು ಪಿ.ಅರ್. ಬೆನ್ನ ಹಿಂದೆ ಓಡಿದ... ಆದ್ರೆ ಅವ್ರು ಸಿಗಲಿಲ್ಲ...ನಂಗೆ ನಾನು ಮಾಡಿದ್ದು ತಪ್ಪೇನೋ ಅನ್ನಿಸತೊಡಗಿತು... ನನ್ನ ವೃತ್ತಿ ಗುರುಗಳ ಹತ್ರ ವಿಷ್ಯ ಹೇಳಿ , ನಾನು ಮಾಡಿದ್ದೂ ತಪ್ಪ ಎಂದು ಕೇಳಿದೆ.. ತಪ್ಪಲ್ಲ ಅಂದ್ರು.. ಅಲ್ಲಿಗೆ ವಿಷ್ಯ ನಿಂತಿತು... ಇದೆಲ್ಲ ಆಗಿ ಸುಮಾರು ೬ ತಿಂಗಳಾಯ್ತು...

ಆ ನಂತರ ಅದೇ ಆಸ್ಪತ್ರೆ ಯಿಂದ ಗಿಫ್ಟುಗಳು ಬಂದವು..

ಕೊನೆಗೆ ಮೊನ್ನೆ ಗೊತ್ತಾಯ್ತು...ನಮ್ಮ ಕಂಪೆನಿಗೆ ಕೊಡಬೇಕಾದ ಹಣ ಇನ್ನು ಬಂದಿಲ್ಲ ಅಂತ...

ಈಗಲೂ ನಂಗೆ ಕಾಡುತ್ತಿರುವ ಪ್ರಶ್ನೆಗಳು...೧. ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ಕೊಡುವ ಬದಲು , ಕೆಲಸಗಾರರನ್ನೇ ಕೊಂಡರೆ ಹೇಗೆ ಎಂದು ವ್ಯವಸ್ಥೆ ಯೋಚಿಸುತ್ತಾ? ೨. ಬರುತ್ತಿರುವ ಸಂಬಳ ಸಾಲದೇ ಹೋದಾಗ ವ್ಯಕ್ತಿ ಆಸೆಗೆ ಬಿಳುತ್ತಾನ?
೩. ಇಂದು ಪ್ರತಿವ್ಯವಸ್ಥೆಯಲ್ಲೂ ನೈತಿಕತೆಗಿಂತ ಹಣವೇ ಹೆಚ್ಚು ಪ್ರಾಧಾನ್ಯತೆ ಗಳಿಸುತ್ತ ?

ಗೊತ್ತಿಲ್ಲ.....